ಇಳಗಿ, ಗೀಸರ್ and ಬೆಲ್ಲಾ….

ನನ್ನ ಹೆಂಡತಿ ನನ್ನ ಮದವಿ ಮಾಡ್ಕೊಂಡ ನಮ್ಮ ಮನಿಗೆ ಬಂದ ಸಂಸಾರ ಶುರು ಮಾಡಿ ಒಂದನೇ ವಾರದಾಗಿನ ಕೆಲವು ಸಂದರ್ಭಗಳು…..
ಸಂದರ್ಭ ಒಂದು… ಇಳಗಿಗೆ ಸಂಬಂಧ ಪಟ್ಟದ್ದು
ನನ್ನ ಹೆಂಡತಿ ನಮ್ಮವ್ವಗ
“ನಿಮ್ಮ ಇಳಗಿ ಹರ್ತ ಅದ, ನಂಗ ನಿಮ್ಮನಿ ಇಳಗ್ಯಾಗ ಹೆಚ್ಚಲಿಕ್ಕೆ ಬರಂಗಿಲ್ಲಾ, ಕೊಬ್ಬರಿ ಹೆರಿಲಿಕ್ಕೂ ಬರಂಗಿಲ್ಲಾ, ಸವತಿಕಾಯಿ ಕೊಚ್ಚಲಿಕ್ಕಂತೂ ಸಾಧ್ಯನ ಇಲ್ಲಾ, ನಮ್ಮ ಅವ್ವನ ಮನ್ಯಾಗ ಹಿಂತಾ ಇಳಗಿ ಇಲ್ಲಾ, ಅದರಾಗ ನಿಮ್ಮ ಮನಿ ಇಳಗಿ ಕುಂಟ್ಯಾಡತದ. ಇದರಾಗ ಹೆಚ್ಚಲಿಕ್ಕೆ-ಕೊಚ್ಚಲಿಕ್ಕೆ ಹೋಗಿ ಎಲ್ಲರ ನಂದ ಕೈ ಗೆ ಹತ್ತಿ ಒಂದ ಹೋಗಿ ಇನ್ನೊಂದ ಆದರ ಯಾರ ಜವಾಬ್ದಾರಿ? ಮ್ಯಾಲೆ ನಿಮ್ಮ ಇಳಗಿಗೆ ಜಂಗ ಬ್ಯಾರೆ ಹಿಡದದ ಹಂಗೇನರ ಕೈಗೆ ಹತ್ತಿ ನಂಜ ಆಗಿ ಸೆಪ್ಟಿಕ್ ಆಗಿ ಡಾಕ್ಟರ ಬಟ್ಟ ಕಟ್ಟ ಮಾಡಬೇಕು ಅಂದರ ಮುಂದ ನನ್ನ ಗತಿ ಏನ?” ಅಂತ ಒಂದ ಉಸಿರಿನಾಗ ಇಳಗಿ ಹೆಣಾ ಹೊರಲಿಕತ್ಲು. ಪಾಪ ನಮ್ಮ ಮನಿ ಮಂಡ ಇಳಗಿ ನನ್ನ ಹೆಂಡತಿ ಕಡೆ ’ಹರ್ತ’( ಹರಿತ) ಅಂತ ಬೈಸಿಗೊಂಡ ಸುಮ್ಮನ ಕುಂಟ್ಯಾಡ್ಕೋತ ಕೂತ್ತಿತ್ತ ಆದರ ನಮ್ಮವ್ವ ತಲಿಕೆಟ್ಟ
“ಅಯ್ಯ…ನಮ್ಮವ್ವ ಸಾಕ ಮುಗಸ …ಮದುವಿ ಮಾಡ್ಕೊಕಿಂತ ಮುಂಚೆ ಸುಮ್ಮನ ನಮ್ಮನಿ ಇಳಗಿ ಚೂಪ ಅದನೋ ಮಂಡದನೋ ನೋಡಿ ನನ್ನ ಮಗನ ಮಾಡ್ಕೋಬೇಕಿತ್ತ ನೋಡ ನೀ, ಇಳಗಿ ಚೂಪ ಅದ ಅಂತ ಚೂಪ…ನಾ ಇದ ಇಳಗಿ ಒಳಗ ಮುವತ್ತ ವರ್ಷದಿಂದ ಹೆಚ್ಚಿ-ಕೊಚ್ಚಿ ಸಂಸಾರ ಮಾಡಲಿಕತ್ತೇನಿ. ಸುಮ್ಮ ಸುಮ್ಮನ ಏನರ ಹೇಳ ಬ್ಯಾಡ. ನಾಳೆ ಎಲ್ಲರ ನನ್ನ ಮಗಾ ಮಂಡ ಇದ್ದಾನ ಅಂದ ಗಿಂದಿ ಮತ್ತ…ಅಲ್ಲಾ, ಮನಿಗೆ ಬಂದ ನಾಲ್ಕ ದಿವಸ ಆಗಿಲ್ಲಾ ಇಳಗಿಗೆ ಇಷ್ಟs ಹೆಸರ ಇಡ್ತಿ ಅಂದರ ನಾಳೆ ನಂಗ, ನನ್ನ ಮಗಗ ಸುಮ್ಮನ ಬಿಟ್ಟಿ ಏನ ನೀ?”.
ಅವತ್ತಿನಿಂದ ಇವತ್ತಿನ ತನಕ ದಿವಸಾ ನಮ್ಮ ಮನ್ಯಾಗ ಕಾಯಿಪಲ್ಯಾ ಹೆಚ್ಚೋದು-ಕೊಚ್ಚೋದು ಎಲ್ಲಾ ನಮ್ಮವ್ವಂದ ಕೆಲಸ..ಅಲ್ಲಾ ನಮ್ಮನಿ ಇಳಗಿ ಚೂಪ ಅದ ಅಲಾ. ಮತ್ತೇಲ್ಲರ ನನ್ನ ಹೆಂಡತಿಗೆ ಒಂದ ಹೋಗಿ ಒಂದ ಆದರ ಯಾರ ಜವಾಬ್ದಾರಿ ಹೇಳ್ರಿ? ಅದರಾಗ ನಮ್ಮ ಮನಿ ಇಳಗಿ ಜಂಗ ಬ್ಯಾರೆ ಹಿಡದದ. ಮತ್ತ ಅಕಿಗೆ ಎಲ್ಲರ ನಂಜ ಆಗಿ ಹೊಕ್ಕಳ ಸುತ್ತ ಹದಿನಾಲ್ಕ ಇಂಜೆಕ್ಶನ ಮಾಡಸರಿ ಅಂತ ಅಂದರ ಏನ ಮಾಡೋದು.

ಸಂದರ್ಭ ಎರಡು…ಗೀಸರ್
ನಮ್ಮವ್ವ ನನ್ನ ಹೆಂಡತಿಗೆ
“ಏ, ಇಕಾ. ಇಲ್ಲ ನೋಡಿಲ್ಲೆ..ನಮ್ಮ ಮನ್ಯಾಗ ಗ್ಯಾಸ ಗೀಸರ್ ಅದ.. ನಿಮ್ಮ ಅವ್ವನ ಮನಿ ಗತೆ ನಾವ ತಾಸ ಗಟ್ಟಲೇ ಮುಂಜ ಮುಂಜಾನೆ ಎದ್ದ ಹಿತ್ತಲದಾಗ ಕಟಗಿ, ತೆಂಗಿನ ಗರಿ, ರಟ್ಟ, ರದ್ದಿ ಪೇಪರ, ಪರಟಿ ಹಾಕಿ ಸ್ನಾನಕ್ಕ ನೀರ ಕಾಸಂಗಿಲ್ಲಾ…ನೀ ಬಚ್ಚಲ ಮನಿಗೆ ಹೋದ ಕೂಡ್ಲೆ ಮೊದಲ ಸಿಲೆಂಡರದ್ದ ರೆಗ್ಯೂಲೇಟರ್ ಆನ್ ಮಾಡ್ಕೊ ಹಂಗ ಏನರ ಗ್ಯಾಸ ಸೂಂಯ್ಯssss……ಅನ್ನಲಿಕತ್ತರ ಮೂಗಿಲೇ ವಾಸನಿ ನೋಡಿ ಚೆಕ್ ಮಾಡ..ಮತ್ತೇಲ್ಲರ ನೀ ಗ್ಯಾಸ ಲೀಕ ಆಗಲಿಕತ್ತದ ಇಲ್ಲೊ ಅಂತ ಕಡ್ಡಿ ಕೆರದ ನೋಡಲಿಕ್ಕೆ ಹೋಗಿ ನನ್ನ, ನನ್ನ ಮಗನ್ನ್ ಇಬ್ಬರನೂ ಪೋಲಿಸ್ ಸ್ಟೇಶನ್ ಮೆಟ್ಟಲಾ ಹತ್ತಸಬ್ಯಾಡ. ಹಂಗ ಒಮ್ಮೆ ರೆಗ್ಯೂಲೇಟರ್ ಆನ ಮಾಡಿದ ಮ್ಯಾಲೆ ಗೀಸರದ್ದ ನಳಾ ಚಾಲು ಮಾಡ್ಕೊಂಡ ಆಮ್ಯಾಲೆ ಗೀಸರ್ ಆನ್ ಮಾಡ್ಕೊ..ಸ್ವಲ್ಪs ಬಿಸಿ ಬೇಕಾರ ’’ಸಮ್ಮರ’’ ಮೋಡನಾಗ ಇಟಗೊ, ಇಲ್ಲಾ ಭಾಳ ಬಿಸಿ ಬೇಕನಿಸಿದರ ’’ವಿಂಟರ್’’ ಮೋಡನಾಗ ಇಟಗೊ, ವಿಂಟರ್ ಮೋಡನಾಗ ಇದ್ದಾಗ ಒಮ್ಮಿಕ್ಕಲೇ ಬಕೀಟನಾಗ ಕೈಹಾಕಿ ಕೈ ಸುಟಗೊಂಡ ಗಿಟಕೊಂಡಿ. ಆಮ್ಯಾಲೆ ಓಣಿ ಮಂದಿಗೆಲ್ಲಾ ಜವಾಬ ಕೊಡೊದ ನಂಗ ವಜ್ಜ ಆಗ್ತದ. ಹಂಗ ಸ್ನಾನ ಮುಗಿಲಿಕ್ಕೆ ಬಂದಂಗ ಗೀಸರ್ ‘ಸಮ್ಮರ’ ಮೋಡಿಗೆ ತಂದ ಆಫ್ ಮಾಡಿ ಆಮ್ಯಾಲೆ ನೀರಿಂದ ಬಂದ ಮಾಡ್ಕೊ..ಡೈರೆಕ್ಟ ವಿಂಟರ್ ಮೋಡನಾಗ ಗೀಸರ ಬಂದ ಮಾಡಬ್ಯಾಡ. ಡೈರೆಕ್ಟ ನೀರು ಬಂದ ಮಾಡ ಬ್ಯಾಡ ಮತ್ತ…..ಮತ್ತೇಲ್ಲರ ಒಳಗಿನ ಹೀಟಿಂಗ ಕ್ವೈಲ ಸುಟ್ಟ ಗಿಟ್ಟಿತ..ಮೊದ್ಲ ತುಟ್ಟಿ ಕಾಲ ಬ್ಯಾರೆ, ಅದರಾಗ ಈಗ ನಿಂದೊಂದ ಖರ್ಚ ಜಾಸ್ತಿ ಆಗ್ತದ ಮನ್ಯಾಗ……ಹಂಗೇನರ ಗೀಸರ ಹಾಳ ಆತಂದ್ರ ಮತ್ತ ನಿಮ್ಮವ್ವನ ಮನಿ ಗತೆ ಹಿತ್ತಲದಾಗ ಕೂತ ಕಟಗಿ, ತೆಂಗಿನ ಗರಿ, ರಟ್ಟ, ರದ್ದಿ ಪೇಪರ, ಪರಟಿ ಹಾಕಿ ಸ್ನಾನಕ್ಕ ನೀರ ಕಾಸೋಕಿ ನೀನ ಮತ್ತ…ನೆನಪಿರಲಿ”
ನಮ್ಮವ್ವನ ಭಾಷಣ ಹಂಗ ನಡದಿತ್ತ. ಇನ್ನ ನಮ್ಮವ್ವ ಹಿಂಗ ಶುರು ಮಾಡಿದರ ಬಚ್ಚಲದಾಗಿನ ನೀರ ಕಾಯಿಲಿಲ್ಲಾ ಅಂದರು ನನ್ನ ಹೆಂಡತಿ ತಲಿ ಕಾಯಿತದ ಆಮ್ಯಾಲೆ ನನ್ನ ಮೈ ಎಸರ ಆಗ್ತದ ಅಂತ ನಾ ನಮ್ಮವ್ವನ್ನ ಸುಮ್ಮ ಕೂಡಸಲಿಕ್ಕೆ
” ಏ, ಹೋಗ್ಲಿ ಬಿಡ್ವಾ, ಅಕಿಗೆ ನಾನ ನೀರ ತೊಡಿ ಕೊಡ್ತೇನಿ, ನೀ ಭಾಳ ಟೆನ್ಶನ್ ತೊಗೊಬ್ಯಾಡ” ಅಂತ ಹೇಳಿದ ಮ್ಯಾಲೆ ನಮ್ಮವ್ವಗ ಸಮಾಧಾನ ಆತ.
ನಾ ಅಷ್ಟ ಅಂದ ಮ್ಯಾಲೇನೂ ನಮ್ಮವ್ವ
“ಅಯ್ಯ..ನಮ್ಮಪ್ಪ, ಬರೇ ನೀರ ತೋಡಿ ಕೊಡೋದ ಏನ ಬಂತು, ಮೈ ತಿಕ್ಕಿ ತಿಕ್ಕಿ ಸ್ನಾನನ ಮಾಡಸ ಯಾರ ಬ್ಯಾಡ ಅಂತಾರ. ನಿನ್ನ ಹೆಂಡತಿ ಮೈ ಬಲಾ ನಿನ್ನ ಕೈ ಬಲಾ…ಇಬ್ಬರು ಏನರ ಹಾಳ ಗುಂಡಿ ಬೀಳ್ರಿ” ಅಂತ ಒಂದ ಮಾತ ಅಂದ ಸುಮ್ಮನಾದ್ಲು.ಎಷ್ಟ ಅಂದರು ನಮ್ಮವ್ವಲಾ ಹೆಂಗ ಸುಮ್ಮನ ಹೆಂಗ ಇರ್ತಾಳ.
ಅವತ್ತಿನಿಂದ ಇವತ್ತಿನತನಕಾ ದಿವಸಾ ನಾನ ನನ್ನ ಹೆಂಡ್ತಿಗೆ ಸ್ನಾನಕ್ಕ ನೀರ ತೋಡಿ ಕೊಡೊದು…ಅಲ್ಲಾ ಪಾಪ ಮತ್ತೇಲ್ಲರ ಒಂದ ಹೋಗಿ ಒಂದ ಆದರ ಏನ ಮಾಡೋದು…….ಮುಂದ ಜೇಲನಾಗ ಚಕ್ಕಿ ಬೀಸೋದ ನಾನ ಅಲಾ.
ಇನ್ನ ಸಂಧರ್ಭ ಮೂರು…..ಬೆಲ್ಲ್
ನನ್ನ ಹೆಂಡತಿ ನಮ್ಮವ್ವಗ
“ಅಲ್ಲಾ, ಸಾರಿಗೆ ಯಾರರ ಈ ಪರಿ ಬೆಲ್ಲಾ ಹಾಕ್ತಾರ? ಇದೇನ ಸಾರೊ ಬೆಲ್ಲದ ಪಾಕೊ, ನಾವ ನಮ್ಮ ಮನ್ಯಾಗ ಸಾರಿಗೆ ಬೆಲ್ಲಾ ಶಾಸ್ತ್ರಕ್ಕ ಹಾಕ್ತೇವಿ..ಹಂಗ ಈ ಪರಿ ಸಿಹಿ ಸಿಕ್ಕಟ್ಟಿ ಸಾರ ಮಾಡಿದರ ಹೆಂಗ..ಅದರಾಗ ನೀವ ಮಾಡಿದ್ದ ಹುಳಿ ಅಂತು ತೊಗರಿ ಬ್ಯಾಳಿ ಪಾಯಸದಕಿಂತಾ ಸಿಹಿ ಆಗಿರ್ತದ….ಎಲ್ಲರ ಹಿಂಗ ದಿನಾ ಒಂದಕ್ಕೂ ಹೂಯ್ಯಿ ಅಂತ ಈ ಪರಿ ಬೆಲ್ಲಾ ತಿಂದರ ಡಯಾಬೆಟಿಸಿ ಆಗಿ ಶಟದ ಹೋಗೊ ಆಟ”.
ಅದಕ್ಕ ನಮ್ಮವ್ವ
“ಅಯ್ಯ ನಮ್ಮವ್ವಾ ನಮ್ಮ ಮನಿಗೆ ಬಂದ ಒಂದ ವಾರ ಆಗಿಲ್ಲಾ ಎಷ್ಟ ಹೆಸರ ಇಡ್ತೀಯ….ಹಿಂಗ ನಿಂಗ ಬೆಲ್ಲ ನಡಿಯಂಗಿಲ್ಲಾ ಅಂದರ ನಾಳೆ ನನ್ನ ಮಗನ ಗತಿ ಏನ ಅಂತೇನಿ? ಅವಂದರ ಪಿತ್ತ ಪ್ರಕೃತಿ..ಹಗಲು ರಾತ್ರಿ ಬೆಲ್ಲ ಬೆಲ್ಲ ಅಂತ ಬಡ್ಕೋತಾನ” ಅಂತ ರಾಗ ಹಾಡಿದ್ಲು. ಆದರ ನನ್ನ ಹೆಂಡತಿ ಎಲ್ಲೆ ಕೇಳ್ಬೇಕ ತಂದ ತಾ ನಡಿಸಿ ತೀರಿದ್ಲು. ಅವತ್ತಿನಿಂದ ಇವತ್ತಿನ ತನಕ ನಮ್ಮ ಮನ್ಯಾಗ ಸಾರು – ಹುಳಿ ಮಾಡಿದಾಗೊಮ್ಮೆ ಬೆಲ್ಲಾ ಹಾಕೊಕಿಂತ ಮೊದ್ಲ ನನ್ನ ಹೆಂಡತಿಗೆ ಅರ್ಧಾ ಪಾತೇಲಿ ತಗದ ಇಟ್ಟ ಮುಂದ ಉಳದದ್ದಕ್ಕ ಬೆಲ್ಲಾ ಹಾಕಿ ಮಳ್ಳಸ್ತಾರ.
ಅಲ್ಲಾ, ಇವೇಲ್ಲಾ ಆಗಿ ಇವತ್ತಿಗೆ ಅಂದರ ನವೆಂಬರ್ ೨೮ಕ್ಕ ಹದಿನಾಲ್ಕ ವರ್ಷ ಆತ..ಹಂಗ ಒಂದ ರೌಂಡ ನಂದ ವನವಾಸನೂ ಮುಗಿತ ಅನ್ನರಿ. ಹಂಗ ಇವತ್ತಿಗೂ ನಮ್ಮ ಮನ್ಯಾಗ ಅದ ಇಳಗಿ… ಅದ ಗೀಸರ್…ಅದ ಹೆಂಡತಿ, ಅದ ಅವ್ವಾ..ಆದರು ಸಂಸಾರ ಛಂದ ನಡದಿದ್ದಕ್ಕ ಕಾರಣ ಅಂದರ ನನ್ನ ಹೆಂಡತಿ ನಮ್ಮವ್ವನ ನಡುವ ಬೆಲ್ಲ ಕಡಿಮಿ ಇರೋ ಪ್ರೀತಿ.

This entry was posted on Thursday, December 18th, 2014 at 5:02 am and is filed under ಅವಧಿ. You can follow any responses to this entry through the RSS 2.0 feed. You can leave a response, or trackback from your own site.

Post a Comment