ಈಗ ನಮಗ ಇನ್ನೊಂದ ಹಡಿ ಅಂದರ ಹಡಿಲಿಕ್ಕೆ ಆಗ್ತದೇನು?

“ಈಗ ನಮಗ ಇನ್ನೊಂದ ಹಡಿ ಅಂದರ ಹಡಿಲಿಕ್ಕೆ ಆಗ್ತದೇನ್ವಾ, ನೀನ ಹೇಳ? ನೀ ಎಲ್ಲಾ ಕಲತೊಕಿದ್ದಿ, ಏನ ನಿನಗ ತಿಳವಳಕಿಲ್ಲಾ ಅನ್ನೊಂಗಿಲ್ಲಾ ಏನಿಲ್ಲಾ” ಅಂತ ಪ್ರತಿ ಸರತೆ ಹೇಳೊ ಹಂಗ ಭಾಗಿರಥಿ ಮಾಮಿ ತನ್ನ ಸೊಸಿ ಮುಂದ ದಯನಾಸ ಪಡಲಿಕತ್ತಿದ್ಲು, ಆದರ ಅತ್ತಲಾಗ ಅವರ ಸೊಸಿ ಭಾಮಾ ಕಿವ್ಯಾಗ ಒಂದ ಇಯರ್ ಫೊನ ಹಾಕ್ಕೊಂಡ ಸುಮ್ಮನ ಅತ್ತಿ ಹೇಳಿದ್ದಕ್ಕ ’ಇಲ್ಲಾ’ ’ಇಲ್ಲಾ’ಅಂತ ಗೋಣ ಹಾಕಲಿಕತ್ತಿದ್ಲು. ಅಕಿದ ಮೊದ್ಲಿಂದ ಒಂದ ಸಿಂಪಲ್ ಪ್ರಿನ್ಸಿಪಲ್, ಬಹುಶಃ ಅವರವ್ವ ಹೇಳಿ ಕೊಟ್ಟಿದ್ಲೋ ಏನೋ ಒಟ್ಟ ಅವರ ಅತ್ತಿ ಹೇಳಿದ್ದಕ್ಕೆಲ್ಲಾ ಮೊದ್ಲ ’ಇಲ್ಲಾ’ಅಂದ ಬಿಡೋದ, ಆಮ್ಯಾಲೆ ಬೇಕಾರ ಅಕಿ ಹೇಳಿದ್ದರ ಬಗ್ಗೆ ವಿಚಾರ ಮಾಡೊದು ಇಲ್ಲಾಂದ್ರ ಇಲ್ಲಾ.
ಅದರಾಗ ಈ ಟಾಪಿಕ್ ಅಂತೂ ವಾರಕ್ಕೊಂದ ಸರತೆ ಮನ್ಯಾಗ ಚರ್ಚೆ ಆಗೋದ ಆಗೋದ. ಹಂಗ ಭಾಮಾ ಮನ್ಯಾಗ ಇರೋದ ವೀಕೆಂಡನಾಗ ಹಿಂಗಾಗಿ ವಾರಕ್ಕೊಂದ ಸರತೆ ಅತ್ತಿಗೆ ಸೊಸಿ ಜೊತಿ ಮಾತಾಡಲಿಕ್ಕೆ ಸಿಗೋದ. ಉಳದ್ದ ದಿವಸ ಇಬ್ಬರಿಗೂ ಮಾತಾಡಲಿಕ್ಕೆ ಇಷ್ಟ ಏನ ಮಾರಿ ನೋಡಲಿಕ್ಕು ಆಗತಿದ್ದಿಲ್ಲಾ. ಸಾಫ್ಟವೇರ ಸೊಸಿನ ಬೇಕ, ನನ್ನ ಮಗನೂ ಸಾಫ್ಟವೇರ ಅಂತ ಹುಡುಕಿ-ಹುಡುಕಿ ಮಾಡ್ಕೊಂಡಿದ್ದರ ಹಣೇಬರಹ, ಪಾಪಾ ಭಾಗಿರಥಿ ಮಾಮಿಗೆ ಏನ ಗೊತ್ತ ಸಾಫ್ಟವೇರ ಸೊಸೆಂದರ ಮನಸ್ಸ ಎಷ್ಟ ಹಾರ್ಡವೇರ ಇದ್ದಂಗ ಇರತದ ಅಂತ.
ಅದರಾಗ ಭಾಗಿರಥಿ ಮಾಮಿ ಹೇಳಿ ಕೇಳಿ ಬಯಲಸೀಮಿ ಹೆಣ್ಣಮಗಳು ಅಕಿ ಮಾತೋಡದು ನಾಲ್ಕನೇ ಫ್ಲೋರ ನಾಗ ಇರೋ ನಾಲ್ಕು ಮನಿಗೂ ಕೇಳಸ್ತಿತ್ತ.
ಈ ಸರತೆ ಮತ್ತ ಭಾಗಿರಥಿ ಮಾಮಿ ಅದ ಟಾಪಿಕ್ ತಗದ
“ಈಗ ನಮಗ ಇನ್ನೊಂದ ಹಡಿ ಅಂದರ ಹಡಿಲಿಕ್ಕೆ ಆಗ್ತದೇನ? ನೀನ ಹೇಳ, ನಿಂದ ಇನ್ನು ಕಾಲ ಮಿಂಚಿಲ್ವಾ, ಇಲ್ಲಾ ಅನ್ನಬ್ಯಾಡ” ಅಂತ ಅನ್ನೋದಕ್ಕ ಭಾಮಾ ಸಿಟ್ಟಿಗೆದ್ದ
“ಅಯ್ಯ ನಿಮಗ್ಯಾರ ಬ್ಯಾಡ ಅಂದಾರ, ಒಂದ ಯಾಕ ಇನ್ನು ಹತ್ತ ಹಡಿರಿ. ಆದರ ಮುಂಜ ಮುಂಜಾನೆ ಎದ್ದ ನನ್ನ ಜೀವಾ ಮಾತ್ರ ತಿನ್ನ ಬ್ಯಾಡರಿ” ಅಂತ ಮೂಗ ತಿರುವಿದ್ಲು.
“ಹಂಗಲ್ಲ ನಮ್ಮವ್ವಾ, ನಾ ಹೇಳೊದ ಸ್ವಲ್ಪ ತಿಳ್ಕೊ. ಈಗ ನಮ್ಮ ಹಣೇಬರಹಾ ನೋಡ ವಯಸ್ಸಿದ್ದಾಗ ಒಂದ ಹಡದ ಅವನ್ನ ನಿನಗ ಕೊಟ್ಟ ನೀವು ಇಲ್ಲೆ ಬೆಂಗಳೂರಾಗ ನಾವ ಅಲ್ಲೆ ಸಾಧನಕೇರಿ ಒಳಗ, ಒಬ್ಬರಿಗೊಬ್ಬರಿಗೆ ಸಂಬಂಧ ಇಲ್ಲದಂಗ ಇದ್ದರ ಏನ ಛಂದ್ ಹೇಳ? ಅದಕ್ಕ ಹೇಳಿದೆವಾ ನಿಂಗ ಇನ್ನೂ ಚಾನ್ಸ ಅದ ಇನ್ನೊಂದ ಹಡಿ ಅಂತ, ನೀನು ನಾಳೆ ನಮ್ಮಂಗ ವಯಸ್ಸಾದ ಮ್ಯಾಲೆ ’ನೀ ಒಂದ ಕಡೆ ನಿನ್ನ ಮಗಾ ಒಂದ್ಕಡೆ’ ಆದರ ಏನ ಛಂದ ಹೇಳ? ನಮ್ಮ ಕಾಲ ಬ್ಯಾರೆ ಇತ್ತ, ನಾ ಅತ್ತಿ ಮಾವಾನ್ನ ನೋಡ್ಕೋತ ಧಾರವಾಡದಾಗ ಇದ್ದರ ನಿಮ್ಮ ಮಾವ ಸರ್ಕಾರಿ ನೌಕರಿ ಅಂತ ವರ್ಷಾ ವರ್ಷಾ ಟ್ರಾನ್ಸಫರ ತೊಗೊಂಡ ಅಡ್ಡಾಡತಿದ್ದರು ಹಿಂಗಾಗಿ ನಮಗ ಇನ್ನೊಂದ ಹಡಿಲಿಕ್ಕೆ ಆಗಲೇ ಇಲ್ಲಾ. ಈಗ ನಿಮಗೇಲ್ಲಾ ಅನಕೂಲ ಅದ, ಒಂದ ಅಂತ ಹಟಾ ಮಾಡಬ್ಯಾಡರಿ. ನಿಮ್ಮವ್ವ ಬಾಣಂತನ ಮಾಡ್ಲಿಲ್ಲಾಂದ್ರ ಏನಾತು, ನಾ ಮಾಡ್ತೇನಿ, ನೀ ಏನ ಕಾಳಜಿ ಮಾಡಬ್ಯಾಡ, ಬರೇ ನೀ ’ಹೂಂ’ ಅನ್ನ ಬಾಕಿ ಎಲ್ಲಾ ನನ್ನ ಮಗಾ ನೋಡ್ಕೊತಾನ” ಅಂತ ಭಾಗಿರಥಿ ಮಾಮಿದ ಪ್ರವಚನ ಶುರುನ ಆತ.
ಭಾಗಿರಥಿ ಮಾಮಿದ ಒಂದ ಪಾಯಿಂಟ ಅಜೆಂಡಾ ಒಟ್ಟ ಅಕಿಗೆ ಮಗಾ ಇನ್ನೊಂದ ಹಡಿಬೇಕ. ಅದಕ್ಕ ಕಾರಣ ಭಾಳ ವ್ಯಾಲಿಡ್ ಇತ್ತ. ಅಕಿಗೆ ಒಬ್ಬನ ಮಗಾ, ಅಂವಾ ಭಾಳ ಕಲತ ಶಾಣ್ಯಾ ಆಗಿ ಸಾಫ್ಟವೇರ ಇಂಜೀನಿಯರ ನೌಕರಿ ಅಂತ ಬೆಂಗಳೂರಿಗೆ ಬಂದ ಸೆಟ್ಲ್ ಆಗಿಬಿಟ್ಟಾ. ಮುಂದ ಮಾಮಿ ಅವನತಕ್ಕ ಕಲತದ್ದ, ಅವನಂಗ ಸಾಫ್ಟವೇರ ಕೆಲಸಾ ಮಾಡೋ ಕನ್ಯಾ ಹುಡಕಿ ಲಗ್ನಾ ಮಾಡಿದಳು. ಅಂವಾ ಒಂದನೇದ ಹಡಿಲಿಕ್ಕೆ ಮೂರ ವರ್ಷ ತೊಗೊಂಡಾ.
ಹಂಗ ಅಂವಂದ ಒಂದನೇದರದು ದೊಡ್ಡ ಕಥಿ, ಭಾಮಾ ಲಗ್ನ ಆಗಿ ದಣೆಯಿನ ಆರ ತಿಂಗಳ ಆಗಿತ್ತೊ ಇಲ್ಲೊ ಯುಗಾದಿಗೆ ಅಂತ ಅತ್ತಿ ಮನಿಗೆ ಒಂದ ವಾರ ರಜಾ ಹಾಕಿ ಧಾರವಾಡಕ್ಕ ಬಂದಿದ್ಲು, ಬಂದ ಮರದಿವಸನ ಅಕಿಗೆ ವಾಂತಿ ಶುರು ಆಗಿ ಬಿಡ್ತು, ಅಕಿ ವಾಂತಿ ಮಾಡ್ಕೋಳೊದ ತಡಾ ಭಾಗಿರಥಿ ಮಾಮಿ ಖುಶ ಆಗಿ ಅಲ್ಲೇ ಓಣ್ಯಾಗಿದ್ದ ಡಾಕ್ಟರನ ಮನಿಗೆ ಕರಿಸಿ ಸುದ್ದಿ ಕನಫರ್ಮ್ ಮಾಡ್ಕೊಂಡ ಬಿಟ್ಟಳು. ಭಾಗಿರಥಿ ಬಾಯಿಗೆ ಈ ಸಿಹಿ ಸುದ್ದಿ ಕೇಳಿದ ಮ್ಯಾಲೆ ಹಿಡದವರ ಇದ್ದಿದ್ದಿಲ್ಲಾ, ಈಗಾಗಲೇ ಒಂದುವರಿ ತಿಂಗಳ ಅಂತ ಗೊತ್ತಾಗೋದಕ್ಕ ದೇವರಮುಂದ ಇದ್ದ ಹಿಂದಿನ ದಿವಸದ್ದ ಶುಕ್ರವಾರದ್ದ ಪುಟಾಣಿ ಸಕ್ಕರಿ ಬಟ್ಟಲ ತಂದ ಸೊಸಿ ಬಾಯಾಗ, ಮಗನ ಬಾಯಾಗ ಹಾಕಿ ಸಂಜಿಗೆ ನುಗ್ಗಿಕೇರಿ ಹನಮಪ್ಪಗ ಹೋಗಿ ಕಾಯಿ ಒಡಿಸಿಗೊಂಡ ಬಂದ ಬಿಟ್ಟಳು. ಮುಂದ ಎರಡ ದಿವಸಕ್ಕ ಭಡಾ ಭಡಾ ತಮ್ಮ ಮನ್ಯಾಗ ಬಾರಾಕೊಟ್ರಿ ಒಳಗಿನ ದೇಸಾಯರ ವಠಾರದ ಮಂದಿನ್ನೇಲ್ಲಾ ಸೇರಿಸಿ ಸೊಸಿದ ಕಳ್ಳಕುಬಸಾ ಮುಗಿಸಿನ ಸೊಸಿನ್ನ ಬೆಂಗಳೂರಿಗೆ ಅಟ್ಟಿದ್ಲು.
ಆದರ ಮುಂದ ಹತ್ತ ದಿವಸಕ್ಕ ಅಕಿ ಮಗಾ ಬೆಂಗಳೂರಿಂದ ಫೋನ ಮಾಡಿ ಭಾಮಾಂದ ಎರಡರಾಗ ಹೋತು ಅಂತ ಅವರವ್ವಗ ಶಾಕಿಂಗ್ ನ್ಯೂಸ್ ಕೊಟ್ಟ ಬಿಟ್ಟಾ. ಪಾಪಾ ಭಾಗಿರಥಿ ಮಾಮಿ ಇನ್ನೇನ ಬನಶಂಕರಿಗೆ ಹೋಗಿ ಉಡಿತುಂಬಿ ಬರೋಕಿ ಇದ್ದಳು, ಅಕಿಗೆ ಈ ಸುದ್ದಿ ಕೇಳಿ ಭಾಳ ಕೆಟ್ಟ ಅನಸ್ತ.
“ಆತಪಾ, ಆಗಿದ್ದ ಆಗಿ ಹೋತ, ನಾ ಎಷ್ಟ ಬಡ್ಕೊಂಡೆ ಒಂದ ತಿಂಗಳಾ ರಜಾ ತೊಗೊಂಡ ರೆಸ್ಟ ತೊಗೊ ಅಂತ, ನಿನ್ನ ಹೆಂಡತಿ ನಮ್ಮ ಮಾತ ಎಲ್ಲೆ ಕೇಳ್ತಾಳ” ಅಂತ ಗೊಣಗಿ ಸುಮ್ಮನಾಗಿದ್ದಳು.
ಹಿಂಗ ಒಂದನೇದ ಹೋದ ಮ್ಯಾಲೆ ಮುಂದಿಂದ ಆಗಲಿಕ್ಕೆ ಎರಡು ವರ್ಷ ಹಿಡದಿತ್ತ, ಅದು ವಾರಕ್ಕ ಹತ್ತ ಸರತೆ ಭಾಗಿರಥಿ ಮಾಮಿ ಸೊಸಿಗೆ ಮಗಗ ರಿಮೈಂಡ ಮಾಡಿ ಮಾಡಿ ಸಾಕಾದ ಮ್ಯಾಲೆ. ಭಾಮಾ ಏನೋ ಅವರತ್ತಿ ಕಾಟಕ್ಕ ಒಂದ ಅಂತು ಹಡದಿದ್ಲು ಆದರ ಗಂಡನ ಕಡೆ ’ಒಂದನೇದ ಫಸ್ಟ & ಲಾಸ್ಟ’ ಅಂತ ಪ್ರಾಮೀಸ್ ತೊಗೊಂಡಿದ್ಲು.
ಈಗ ಭಾಗಿರಥಿ ಮಾಮಿ ಗಂಡನ್ನ ಜೊತಿ ಧಾರವಾಡದಾಗ ಮಗಾ ಬೆಂಗಳೂರಾಗ ಸೆಟ್ಲ್ ಆಗ್ಯಾರ. ಮಗಾ ವಾಪಸ ಧಾರವಾಡಕ್ಕ ಬರಂಗಿಲ್ಲಾ ಇವರಿಗೆ ಬೆಂಗಳೂರ ಬಗಿಹರಿಯಂಗಿಲ್ಲಾ, ಏನೊ ಈಗ ಮೊಮ್ಮಗಗ ಸಾಲಿ ಸುಟಿ, ಹಿಂಗಾಗಿ ಮನ್ಯಾಗ ಒಬ್ಬರ ಯಾರರ ನೋಡ್ಕೋಳಿಕ್ಕೆ ಬೇಕಾಗ್ತಾರ ಅಂತ ಇಕಿನ್ನ ಮಗಾ ಒಂದ ತಿಂಗಳ ಮಟ್ಟಿಗೆ ಬೆಂಗಳೂರಿಗೆ ಕರಸಿಕೊಂಡಿದ್ದಾ. ಭಾಗಿರಥಿ ಮಾಮಿಗೆ ಮನಸ್ಸಿಲ್ಲದಿದ್ದರು ಮೊಮ್ಮಗನ ಮಾರಿ ನೋಡಿ ಬೆಂಗಳೂರಿಗೆ ಬಂದಿದ್ದಳು. ಅಕಿ ನಾಳೆ ತಮ್ಮಂಗ ತಮ್ಮ ಮಗಾನು ಒಂದ ಹಡದ ವಯಸ್ಸಾದ ಮ್ಯಾಲೆ ಪಶ್ಚಾತಾಪ ಪಡಬಾರದು ಅಂತ ಇನ್ನೊಂದ ಹಡಿ ಅಂತ ಸೊಸಿಗೆ ಗಂಟ ಬಿದ್ದಾಳ, ಆದರ ಸೊಸಿಗೆ ಒಂದ ಹಡದ ರಗಡ ಆಗೇದ, ಅಕಿ ಇವತ್ತೀನ ಜಮಾನಾದೋಕಿ, ಮಾಡರ್ನ ಸೋಸಿಯಲ್ ವುಮೆನ್, ಅಕಿಗೆ ಹಿಂತಾವನ್ನೆಲ್ಲಾ ಕೇಳಲಿಕ್ಕೆ ಟೈಮ್ ಇಲ್ಲಾ ಇನ್ನ ಹಡೇಯೋದ ಅಂತು ದೂರ ಉಳಿತ. ಆದರ ಅವರತ್ತಿ ಈ ವಿಷಯ ಬಿಡೊ ಪೈಕಿ ಅಲ್ಲಾ, ಐದ ವರ್ಷದಿಂದ ವರ್ಷಾ ನವರಾತ್ರಿಗೆ ಬನಶಂಕರಿಗೆ ಹೋದಾಗೊಮ್ಮೆ ಕಾಯಿ ಒಡಿಸಿಗೊಂಡ ’ತಾಯಿ ಬನಶಂಕರಿ, ನಮ್ಮ ಮನ್ಯಾಗು ಒಂದ ಪುಟ್ಟನ ಬನಶಂಕರಿ ಬರೋಹಂಗ ಆಗ್ಲೀವಾ, ಹಂಗ ಆದರ ನಿಂದ ಒಂದ ವರ್ಷದ ದೀಪದ್ದ ಎಣ್ಣಿ ಖರ್ಚ ನೋಡ್ಕೊತೇನಿ’ ಅಂತ ಬೆಡ್ಕೊಂಡ ಬರ್ತಾಳ. ಆದರ ಆ ಶಾಕಾಂಬರಿನೂ ಮನಸ ಮಾಡವಳ್ಳು, ಈ ಸೊಸಿ ಭಾಮಾನು ಮನಸ್ಸ ಮಾಡವಳ್ಳು.
ಇನ್ನ ನಮ್ಮತ್ತಿ ಮಾತ ಮಾತಿಗೆ ’ಈಗ ನಮಗ ಇನ್ನೊಂದ ಹಡಿ ಅಂದರ ಹಡಿಲಿಕ್ಕೆ ಆಗ್ತದೇನ್ಪಾ’ ಅಂತ ಈ ವಿಷಯ ಮಗನತನಕ ಒಯ್ದ ಅವನ ತಲಿತಿಕ್ಕಿ ಇನ್ನೊಂದ ಹಡಸೆ ಕೈಬಿಡ್ತಾಳಂತ ಭಾಮಾ ಸಿಟ್ಟಿಗೆದ್ದ ಅವರತ್ತಿಗೆ
“ಅಯ್ಯ.. ಬರೆ ನಿಮ್ಮ ಮಗಾ ಹೂಂ ಅಂದರ ಮುಗಿತೇನ, ಹಡಿಯೋಕಿ ನಾನ ಅಲಾ, ನಿಮ್ಮ ಮಗಾ ಏನ ದಿವಸಾ ರೇಡಿನ ಇರ್ತಾನ, ಬ್ಯಾರೆ ಕೆಲಸ ಏನ ಅವಂಗ” ಅಂತ ಇಲ್ಲಾ
“ಅಯ್ಯ, ನೀವ ಬಾಣಂತನ ಮಾಡ್ತೇನಿ ಅಂದ್ರ ಏನಾತ, ಬ್ಯಾನಿ ತಿನ್ನೋಕಿ ನಾನs, ಮುಂದ ಅನಭವಸೊಕಿ ನಾನs, ನೀವರ ಇನ್ನ ಎಷ್ಟ ದಿವಸ ಇದ್ದೀರಿ.. ನನ್ನ ಕಡೆ ಇನ್ನೊಂದ ಹಡಿಲಿಕ್ಕೆ ಆಗಂಗಿಲ್ಲಾ” ಅಂತ ಖಡ್ದಿ ಮುರದಂದ ಹೇಳಿ ಕಡಿಕೆ ಒಂದ ತಾಸ ಅತ್ತಿ ಜೊತಿ ಜಗಳಾಡಿ
’ನನ್ನ ಮೂಡ ಆಫ್ ಆತ, ನನ್ನ ವೀಕೆಂಡ ಹಳ್ಳಾ ಹಿಡಿತ’ ಅಂತ ಗಂಡಗ ಇಷ್ಟ ಮಂಗಳಾರತಿ ಮಾಡಿದ ಮ್ಯಾಲೆ ಅವರದ ವೀಕೆಂಡ ಮುಗಿತ.
ಭಾಗಿರಥಿ ಮಾಮಿ ಬೆಂಗಳೂರಿಗೆ ಬಂದಾಗಿಂದ ಪ್ರತಿ ವೀಕೆಂಡಗೂ ಇದ ಕಥಿ. ಅದರಾಗ ಭಾಗಿರಥಿ ಮಾಮಿ ಮಗನ ಹಣೇಬರಹ ಅಂತೂ ಯಾರಿಗೂ ಹೇಳೊಹಂಗಿಲ್ಲಾ, ಇತ್ತಲಾಗ ಅವ್ವ ಹೇಳಿದ್ದಕ್ಕೂ ಗೋಣ ಹಾಕಬೇಕು, ಹೆಂಡ್ತಿ ಹೇಳಿದ್ದಕ್ಕೂ ಗೋಣ ಹಾಕಬೇಕು. ಪಾಪ ಅವಂಗ ಖರೇನ ಇನ್ನೊಂದ ಹಡೇಯೊ ಮನಸ್ಸಿದ್ದರು ಹೆಂಡ್ತಿಗೆ ಹೇಳಲಾರದಂತಾ ಪರಿಸ್ಥಿತಿ. ಅದರಾಗ ಅಕಿ ಮುಂದಿನ ತಿಂಗಳ ಯಾವದೊ ಪ್ರೊಜೆಕ್ಟ ಮ್ಯಾಲೆ ಎರಡ ವರ್ಷ ಒಬ್ಬಕಿನ ಜರ್ಮನಿಗೆ ಬ್ಯಾರೆ ಹೋಗೊಕಿ ಇದ್ದಾಳಂತ. ಆ ವಿಷಯ ಇನ್ನು ಮಾಮಿಗೆ ಗೊತ್ತಿಲ್ಲಾ, ಅದನ್ನ ಹೆಂಗ ಹೇಳ್ಬೇಕು ಅನ್ನೋದ ಪಾಪ ಅವಂಗ ದೊಡ್ಡ ಚಿಂತಿ ಆಗಿ ಬಿಟ್ಟದ.
’ನಿನ್ನ ಹೆಂಡತಿ ಒಬ್ಬೊಕಿನ ಜರ್ಮನಿ ಒಳಗ ಎರಡ ವರ್ಷ ಇರ್ತಾಳಂತ್? ಬ್ಯಾಡ ಬಿಡಪಾ, ಆ ಸುಡಗಾಡ ನೌಕರಿ ಬಿಡ್ಸೇ ಬಿಡ’ಅಂತ ಮಾಮಿ ಗಂಟ ಬಿದ್ದರು ಬಿದ್ದಳ.
ಇದು ಭಾಗಿರಥಿ ಮಾಮಿ ಮನಿದ ಒಂದ ಕಥಿ ಅಲ್ಲಾ, ಇವತ್ತ ಭಾಳ ಮಂದಿ ಮನಿ ಒಳಗ ಇದ ಕಥಿ.
’ನಂದ ಒಂದು, ನಮಗ ಒಂದು’ ಅಂತ ಒಂದೊಂದ ಹಡದ ಇವತ್ತಿನ ಲೈಫ್ ಸ್ಟೈಲ ಒಳಗ ಎಂಜಾಯ್ ಮಾಡಲಿಕತ್ತೊರ ಎಲ್ಲಾರು ಒಂದ್ಸರೆ ವಿಚಾರ ಮಾಡೊ ವಿಷಯ.
ಏನ ವಿಚಾರ ಮಾಡಲಿಕ್ಕತ್ತೀರಿ ಲಗೂನ ಡಿಸಿಜನ್ ಮಾಡರಿ before it becomes too late, ಇನ್ನೊಂದ ಆಗೇ ಬಿಡ್ಲಿ. ಹುಟ್ಟಿಸಿದ್ದ ದೇವರ ಹುಲ್ಲ ಮೇಯಸಲಾರದ ಇರ್ತಾನೇನ? ಬಾಣಂತನಕ್ಕ ಬೇಕಾರ ಭಾಗಿರಥಿ ಮಾಮಿ ಬರ್ತಾಳ, ಗಂಡರ ಆಗಲಿ, ಹೆಣ್ಣರ ಆಗಲಿ ನೀವೇನು ಕಾಳಜಿ ಮಾಡಬ್ಯಾಡರಿ.
ಅನ್ನಂಗ ಇನ್ನೊಂದ ಹೇಳೋದ ಮರತೆ, ನಾ ಮೊದ್ಲ ಹೇಳಿದ್ನೇಲ್ಲಾ ಭಾಮಾಂದ ಒಂದನೇದ ಕಳ್ಳ ಕುಬಸ ಆದಮ್ಯಾಲೆ ಕಳಕೊಂಡತು ಅಂತ ಅದ ತಾನಾಗೆ ಹೋಗಿದ್ದಲ್ಲ, ಅದನ್ನ ಭಾಮಾ ತಾನಾಗೆ ಅತ್ತಿ ಮನ್ಯಾಗ ಕಳ್ಳ ಕುಬಸಾ ಮಾಡಿಸಿಗೊಂಡ ಬೆಂಗಳೂರಿಗೆ ಹೋಗಿ ತಗಿಸಿಗೊಂಡಿದ್ಲು, ಪಾಪ ಅಕಿಗೆ ಆಫೀಸನಾಗ ಆರ ತಿಂಗಳ ಪ್ರೊಜೆಕ್ಟ ಮ್ಯಾಲೆ ಆಸ್ಟ್ರೇಲಿಯಾಕ್ಕಾ ಹೋಗೊ ಆಫರ್ ಬಂದಿತ್ತ ಹಂತಾದರಾಗ ಈ ಗಡಬಡ ಆಗಿತ್ತ. ಅದು ಹೋಗಿ ಹೋಗಿ ಅವರತ್ತಿ ಮನಿಗೆ ಹೋದಾಗ ಗೊತ್ತಾಗಿ ಇಷ್ಟ ಹಣಗಲ ಆಗಿತ್ತ, ಅಕಿ ಭಡಾ ಭಡಾ ಬೆಂಗಳೂರಿಗೆ ಹೋಗಿ ತಗಿಸಿಕೊಂಡೋಕಿನ ಆಸ್ಟ್ರೇಲಿಯಾಕ್ಕ ಜಿಗದ ಬಿಟ್ಟಿದ್ಲು. ಈ ವಿಷಯ ಭಾಗಿರಥಿ ಮಾಮಿಗೆ ಇನ್ನು ಗೊತ್ತಿಲ್ಲಾ. ನೀವು ಯಾರು ಹೇಳಲಿಕ್ಕೆ ಹೋಗಬ್ಯಾಡರಿ..ಪಾಪ ಹೆಣ್ಣ ಜೀವ ಭಾಳ ಮರಗತದ.

This entry was posted on Monday, October 27th, 2014 at 4:17 am and is filed under ಅವಧಿ. You can follow any responses to this entry through the RSS 2.0 feed. You can leave a response, or trackback from your own site.

5 Comments

 1. Name says:

  Super Article. Prashanji. I really wonder how people have changed in decade time. If you dont have atleast 2 children, then how they will understand love & affection of brother & sister.

  The way you convey the message to the society is amazing!!! Hope people are listening to you, rather than laughing by reading the arcticle.

  ... on July November 10th, 2014
 2. Gurunath Mujumdar says:

  Super Article. Prashanji. I really wonder how people have changed in decade time. If you dont have atleast 2 children, then how they will understand love & affection of brother & sister.

  The way you convey the message to the society is amazing!!! Hope people are listening to you, rather than laughing by reading the arcticle.

  ... on July November 10th, 2014
 3. Vijay says:

  Its all about professional choices now. There is no more living exists. They exist because professional life exists. The misuse of modern science reflects in your last paragraph, may are loosing the womanhood just because of these adverse qualities that they are cultivating.

  ... on July November 11th, 2014
 4. Name says:

  Agadi khare heliri Prashant. Eegin kaalad hennmaklige ee foreign assignment, project bagge aden vyamoha ada abababa. Adakka enoo madlikke tayariddara. Bhal kaltiddara phala hinga ulta ageda. Kelsa bidu andru bidangilla eegin henmakklu. Adragoo Bhrambraga bhal aglikattada idu

  ... on July November 17th, 2014
 5. Classic Comic Book Auctions says:

  Classic Comic Book Auctions

  “[…]Prashant Adur » Blog Archive » ?????? ????????? ????????????????????? ????????? ???????????? ??????????????????????????? ?????????????????????????[…]”

  ... on July June 5th, 2016

Post a Comment