ಕುಂಕಮ ತೊಗೊಂಡ ಹೋಗ ಬರ್ರಿ….

ಇದ ಅಗದಿ ಎಲ್ಲಾರ ಮನ್ಯಾಗಿನ ಹೆಣ್ಣ ಮಕ್ಕಳದ ಟಿಪಿಕಲ್ ಡೈಲಾಗ, ಯಾರರ ಹೆಣ್ಣಮಕ್ಕಳ ಮನಿಗೆ ಬಂದರ ಅವರಿಗೆ ಹೋಗಬೇಕಾರ ’ಕುಂಕಮ ತೊಗೊಂಡ ಹೋಗ ಬರ್ರಿ’ಅಂತ ಅರಿಷಣ ಕುಂಕಮ ಕೊಟ್ಟ ಕಳಸೋದ ಪದ್ದತಿ ಮತ್ತ ಅದ ನಮ್ಮ ಸಂಸ್ಕೃತಿ. ಹಂಗ ಯಾರರ ಭಾಳ ಅಪರೂಪಕ್ಕ ಬಂದಿದ್ದರ, ’ಅಯ್ಯ, ಇದ ಮೊದ್ಲನೇ ಸಲಾ ಬಂದೀರಿ’ಇಲ್ಲಾ ’ ’ಭಾಳ ಅಪರೂಪಕ್ಕ ಬಂದೀರಿ’ ಅಂತ ಅರಿಷಣ-ಕುಂಕಮದ ಜೊತಿ ಒಂದ ಜಂಪರ್ ಪೀಸ ಉಡಿ ತುಂಬಿ ಕಳಸೋದು ಪದ್ದತಿ.
ಇನ್ನ ಇದು ಎಲ್ಲಾ ಸುಸಂಸ್ಕೃತರ ಮನ್ಯಾಗಿನ ಪದ್ಧತಿ ಅಂದರ ನಮ್ಮ ಮನ್ಯಾಗಿಂದು ಇದ ಪದ್ಧತಿನ ಅಲಾ, ಅದರಾಗ ನಮ್ಮ ಮನ್ಯಾಗ ನಮ್ಮವ್ವಂದ ಒಂದ ಸ್ವಲ್ಪ ಸ್ಪೇಶಲ್ ಪದ್ಧತಿ. ನಮ್ಮವ್ವಗ ಬಂದವರಿಗೆ ಬರೇ ಅರಷಿಣ-ಕುಂಕಮ ಹಚ್ಚಿ ಕಳಸೊ ಪದ್ಧತಿನ ಗೊತ್ತ ಇಲ್ಲರಿಪಾ, ಹಂಗ ಕಳಸಿದರ ಮನಸ್ಸಿಗೆ ಭಣಾ-ಭಣಾ ಅನಸ್ತದ ಖಾಲಿ ಕೈಲೆ ಹೆಂಗ ಕಳಸೋದು ಅಂತ ಅಕಿ ಯಾರ ಬರಲಿ, ವಾರದಾಗ ಎಷ್ಟ ಸರತೇನರ ಬರಲಿ ಒಂದ ಜಂಪರ ಪೀಸ್, ಒಂದ ಮುಷ್ಟಿ ಅಕ್ಕಿ ಉಡಿತುಂಬಿನ ಕಳಸೋಕಿ. ಅದು ಇವತ್ತಿಂದಲ್ಲಾ, ನಲವತ್ತ- ನಲವತ್ತ್ಯಾರಡ ವರ್ಷದಿಂದ ಬಂದ ಪದ್ಧತಿ. ನಮ್ಮಪ್ಪಗಂತೂ ಅಕಿ ಸಂಬಂಧ ತಲಿ ವಡ್ಕೊಂಡ ವಡ್ಕೊಂಡ ಸಾಕಾಗಿ ಬಿಟ್ಟದ.
ಒಂದ ಮುವತ್ತ ವರ್ಷದ ಹಿಂದಿನ ಮಾತ ಆವಾಗ ಹಿಂಗ ಕಾಲಮಾನ ತುಟ್ಟಿ ಆಗೋದಕ್ಕು ನಮ್ಮವ್ವ ವಾರಕ್ಕ ಮೂರ ಮೂರ ಸರತೆ ಉಡಿ ತುಂಬಿ ಓಣ್ಯಾಗಿನ ಮುತ್ತೈದಿಯರಿಗೆ ಅರಿಶಣ-ಕುಂಕಮ ಹಚ್ಚೋದ ಜಾಸ್ತಿ ಆಗಲಿಕತ್ತ. ನಮ್ಮಪ್ಪ ತಲಿ ಕೆಟ್ಟ ರೇಶನ್ ಅಕ್ಕಿ ಜಾಸ್ತಿ ತರಲಿಕತ್ತಾ. ಅಂವಾ ಮೊದ್ಲ ನಮಗೇನ ಫಡ್-ದ್ವಾಸಿ- ಇಡ್ಲಿ ಮಾಡಲಿಕ್ಕೆ ಇಷ್ಟ ಅಂತ ಎರಡ ಕೆ.ಜಿ ರೇಶನ ಅಕ್ಕಿ ತರತಿದ್ದಾ, ಯಾವಾಗ ನಮ್ಮವ್ವಂದ ಉಡಿ ತುಂಬೊದ ಜಾಸ್ತಿ ಆಗಲಿಕತ್ತ ಮತ್ತ ಮೂರ ಕೆ.ಜಿ ಜಾಸ್ತಿ ತರಲಿಕತ್ತಾ. ಒಮ್ಮೊಮ್ಮೆ ಅಂತೂ ನಮ್ಮವ್ವ ತಿಂಗಳ ಅಖೈರಕ್ಕ ರೇಶನ ಅಕ್ಕಿ ಖಾಲಿ ಆದರ ’ಪಾಪ ಮನಿಗೆ ಬಂದ ಮುತೈದಿಗೆ ಬರೇ ಅರಿಷಣ-ಕುಂಕಮ ಹಚ್ಚಿ ಹೆಂಗ ಕಳಸೊದು’ ಅಂತ ಅಕಿ ಛಲೊ ಅಕ್ಕಿ ಉಡಿ ತುಂಬಿ ಕಳಸ್ತಿದ್ಲು ಹಂಗ ಅದು ಖಾಲಿ ಆಗಿತ್ತಂದರ ನಮ್ಮಪ್ಪಗ ಗೊತ್ತ ಆಗಲಾರದ ಬಾಜು ಮನಿಯವರ ಕಡೆ ಎರಡ-ಮೂರ ಚಟಾಕ ಕಡಾ ಇಸ್ಗೊಂಡ ಬಂದ ಉಡಿ ತುಂಬಿ ಕಳಸಲಿಕತ್ಲು. ಕಡಾ ಇಸ್ಗೊಂಡ ಬರೋದ ರೇಶನ್ ಅಕ್ಕಿ ಅಲ್ಲ ಮತ್ತ ಅಗದಿ ತುಪ್ಪ ಅನ್ನಾ ತಿನ್ನೊ ಅಕ್ಕಿ ಇಸ್ಗೊಂಡ ಬಂದ ಉಡಿ ತುಂಬತಿದ್ಲು.
ಇನ್ನ ಜಂಪರ್ ಪೀಸ ಅಂತು ಅವರ-ಇವರ ಕೊಟ್ಟದ್ದ ಇರ್ತಾವ ಅಂತ ನಮ್ಮಪ್ಪ ಅದರ ಬಗ್ಗೆ ಭಾಳ ತಲಿ ಕೆಡಸಿಕೊತಿದ್ದಿಲ್ಲಾ. ಒಟ್ಟ ನೀರಾಗ ಹಾಕಲಾರದ್ದ ಯಾವದರ ಒಂದ ಇದ್ದರ ಸಾಕ ನಮ್ಮವ್ವ ಉಡಿ ತುಂಬಿ ಕಳಸ್ತಾಳ ಅಂತ ಸುಮ್ಮನ ಬಿಟ್ಟಿದ್ದಾ. ಆದರ ಮುಂದ ಬರ ಬರತ ಅಂದರ ಯಾವಾಗ ನಮ್ಮವ್ವ ವಾರಕ್ಕ ಆರ – ಆರ ಮಂದಿಗೆ ಉಡಿ ತುಂಬಲಿಕತ್ಲು ಆವಾಗಿಂದ ಜಂಪರ್ ಪೀಸ ಸಹಿತ ಶಾರ್ಟ್ ಬೀಳಲಿಕತ್ವು. ಅಲ್ಲಾ ಇನ್-ಕಮಿಂಗ ಕಡಿಮಿ ಆಗಿ ಔಟ ಗೋಯಿಂಗ ಜಾಸ್ತಿ ಆದರ ಅದ ಸಹಜನ ಅಲಾ. ಅದರಾಗ ಆವಾಗ ನಮ್ಮ ಮನ್ಯಾಗ ನಮ್ಮವ್ವ ಒಬ್ಬೊಕಿನ ಮುತ್ತೈದಿ ಹಿಂಗಾಗಿ ಇನಕಮಿಂಗ ಕಡಿಮಿ.
ಮ್ಯಾಲೆ ಇಕಿ ತನಗ ಬಂದಿದ್ದ ಒಂದಿಷ್ಟ ಜಂಪರ್ ಪೀಸ ಯಾರಿಗೂ ಕೊಡಲಿಕ್ಕೆ ಬರಲಾರದಂಗ ಅವ ಅಂತ ಅವನ್ನ ಹರದ ಹಚ್ಚಿ..ಹಚ್ಚಿ ದುಬಟಿ ಹೊಲದ ಓಣ್ಯಾಗ ಯಾರ ಹಡದರು ಕೊಡ್ತಿದ್ಲು. ನಮ್ಮ ಓಣ್ಯಾಗ ಒಟ್ಟ ಯಾರ ಹಡಿಲಿ ಇಕಿ ತನ್ನ ಕಡೆಯಿಂದ ಮೂರ ದುಬಟಿ ಐದ ಕುಂಚಗಿ ಗ್ಯಾರಂಟಿ. ಎಲ್ಲಾ ಫ್ರೀನ ಮತ್ತ. ಹಂಗ ನಮ್ಮವ್ವ ದುಬಟಿ ಹೊಲದ ಕೊಟ್ಟ, ಕೊಟ್ಟ ರೊಕ್ಕಾ ತೊಗೊಂಡಿದ್ದರ ನಮ್ಮಪ್ಪ ಇವತ್ತ ದೆವ್ವನಂತ ಮನಿ ಕಟ್ಟಿರತಿದ್ದಾ, ಪಾಪ ಆದರ ಅದ ಎಲ್ಲೆ ಇತ್ತ ಅವನ ಹಣೇಬರಹದಾಗ, ನಮ್ಮವ್ವನ್ನ ಕಟಗೊಂಡ ಒಂದ ಜಂಪರ ಪೀಸನಷ್ಟ ಜಾಗ ಸಹಿತ ಹುಬ್ಬಳ್ಳ್ಯಾಗ ತೊಗೊಳಿಕ್ಕೆ ಆಗಲಿಲ್ಲಾ ಅವಂಗ.
ನಮ್ಮವ್ವ ಯಾ ಪರಿ ಜಂಪರ್ ಪೀಸ ಹಾಕಿ ಉಡಿ ತುಂಬತಿದ್ಲು ಅಂದರ ಯಾವದರ ಮುತ್ತೈದಿ ಮನಿಗೆ ಹೆಪ್ಪಿಗೆ ಮಸರ ಕಡಾ ಕೇಳಲಿಕ್ಕೆ ಬಂದರ ಸಹಿತ ಅವರಿಗೆ ಕುಂಕಮಾ ತೊಗೊಂಡ ಹೋಗ್ರಿ ಅನಾಯಸ ಬಂದೀರಿ..ಶುಕ್ರವಾರ ಬ್ಯಾರೆ, ಮಂಗಳವಾರ ಬ್ಯಾರೆ, ಇವತ್ತ ಏಕಾದಶಿ, ಇವತ್ತ ಚತುರ್ದಶಿ, ಈಗ ಜಸ್ಟ ಪೂಜಾ ಮಾಡೇನಿ, ಮೂರ ಸಂಜಿ ಹೊತ್ತ ಈಗ ದೀಪಾ ಹಚ್ಚೇನಿ ಅಂತೇಲ್ಲಾ ಜಂಪರ್ ಪೀಸ ಉಡಿ ತುಂಬಿ ಕಳಸೋಕಿ. ಅದ ಹಿಂಗ ಆಗಿತ್ತಲಾ ನಮ್ಮ ಓಣ್ಯಾಗಿನ ಮಂದಿ ಅರ್ಧಾ ಜಂಪರ್ ಪೀಸ ಉಡಿತುಂಬಿಸಿಗೊಳ್ಳಿಕ್ಕರ ಏನೇನರ ನೆವಾ ಮಾಡ್ಕೊಂಡ ನಮ್ಮ ಮನಿಗೆ ಮೂರಸಂಜಿ ಹೊತ್ತ ಬರತಿದ್ದರು. ಈ ಪರಂಪರಾ ಹಂಗ ಮುಂದ ವರದಿತ್ತು, ಮುಂದ ನನ್ನ ಲಗ್ನ ಆತ, ನನ್ನ ಹೆಂಡತಿಗೆ ಯಾವಗ ನಮ್ಮವ್ವನ್ನ ಚಟಾ ಗೊತ್ತಾತ ಅಕಿ ತಲಿ ಕೆಡಲಿಕತ್ತ. ಅಕಿ ಒಂದ ದಿವಸ ತಲಿ ಕೆಟ್ಟ ನಮ್ಮವ್ವಗ
“ಅತ್ಯಾ…..ನಿಮ್ಮ ಕಾಲದಾಗ ಐದಾರ ರೂಪಾಯಕ್ಕ ಒಂಬತ್ತವಾರಿ ಜಂಪರ ಪೀಸ ಬರ್ತಿದ್ವು, ಈಗ ನೂರ ರೂಪಾಯಿ ಕೊಟ್ಟರು ಸ್ಲೀವ್ ಲೇಸ್ ಜಂಪರ ಪೀಸ್ ಬರಂಗಿಲ್ಲಾ, ಹಿಂಗ ನೀವ ಮನಿಗೆ ಬಂದ ಮಂದಿಗೆಲ್ಲಾ ಕುಂಕಮ ಜೊತಿ ಜಂಪರ್ ಪೀಸ ಕೊಟಗೋತ ಹೊಂಟರ ಹೆಂಗ, ಅದರಾಗ ನೀವ ಜಂಪರ್ ಪೀಸ ಆರಿಸಿ ಆರಿಸಿ ಸುಮಾರನ್ವು ಬಿಟ್ಟ ಛೊಲೊವ ಕೊಟ್ಟರ ನಾಳೆ ನನಗ ಜಂಪರಗೆ ಸಹಿತ ಗತಿ ಇಲ್ಲದಂಗ ಆಗಿ ಗಿಗಿತ್ತ” ಅಂತ ರಾಗ ತಗದ್ಲು.
“ಅಯ್ಯ ನಮ್ಮವ್ವ ಮನಿಗೆ ಬಂದ ಮುತ್ತೈದಿಗೆ ಒಂದ ಜಂಪರ್ ಪೀಸ ಉಡಿತುಂಬಿದರ ಎಷ್ಟ ಮಾತಡ್ತೀಯ ಮಾರಾಯತಿ” ಅಂತ ನನ್ನ ಹೆಂಡತಿಗೆ ಮಂಗಳಾರತಿ ಮಾಡಿ ಬಾಯಿ ಮುಚ್ಚಸಿದ್ಲು.
ಆದರ ನನ್ನ ಹೆಂಡತಿ ಬಿಡಬೇಕಲಾ ಅಕಿ ಕಡಿಕೆ ನಮ್ಮವ್ವಗ ರಮಿಸಿ ಇದ್ದ ಜಂಪರ್ ಪೀಸ ಒಳಗ ತನಗ ಬ್ಯಾಡಾಗಿದ್ವು, ತನಗ ಸಾಲ ಲಾರದ್ವು ಎಲ್ಲಾ ತಗದ ಅವನ್ನ ಉಡಿ ತುಂಬಲಿಕ್ಕೆ ಅಂತ ಸಪರೇಟ್ ಇಡಲಿಕತ್ಲು. ಇವತ್ತಿಗೂ ನಮ್ಮವ್ವನ ಉಡಿತುಂಬೊ ಪರಂಪರಾ ಹಂಗ ಮುಂದವರದದ. ಈಗ ಒಂದ ಸಂತೋಷದ ವಿಷಯ ಅಂದರ ಮೊದ್ಲ ನಮ್ಮವ್ವ ಮನಿಗೆ ಮುತ್ತೈದರ ಬರೋರಿದ್ದಾರ ಅಂತ ತಾ ಯಾರ ಮನಿಗೂ ಅರಿಷಣ ಕುಂಕಮಕ್ಕ ಹೋಗತಿದ್ದಿಲ್ಲಾ ಹಿಂಗಾಗಿ ಇನ-ಕಮಿಂಗ ಜಂಪರ್ ಪೀಸ ಇರತಿದ್ದಿಲ್ಲಾ, ಆದರ ನಂದ ಮದುವಿ ಆದ ಮ್ಯಾಲೆ ಮನ್ಯಾಗೆ ಇಬ್ಬಿಬ್ಬರ ಮುತೈದರ ಆದರ ನೋಡ್ರಿ ಆವಾಗಿಂದ ನನ್ನ ಹೆಂಡತಿಗೆ ಮಂದಿ ಮನಿಗೆ ಅರಷಿಣ ಕುಂಕಮಕ್ಕ ಕಳಸಿ ತಾ ಮನ್ಯಾಗ ಇದ್ದ ಉಡಿತುಂಬೊ ಉಸಾಬರಿ ಮಾಡ್ತಾಳ.
ಇನ್ನೊಂದ ಮಜಾ ಕೇಳ್ರಿ ಇಲ್ಲೆ, ಅಕಸ್ಮಾತ ನಮ್ಮವ್ವ ಹಂಗ ಯಾರದರ ಮನಿಗೆ ಹೋಗಿರಬೇಕ ಆವಾಗ ಏನರ ಯಾವದರ ಮುತ್ತೈದಿ ಮನಿಗೆ ಅರಿಷಣ ಕುಂಕಮಕ್ಕ ಬಂದರ “ಅಯ್ಯ..ನಿಮ್ಮ ಅತ್ತಿ ಇಲ್ಲೇನ, ಅವರ ಬಂದಮ್ಯಾಲೆ ಬರ್ತೇವಿ ತೊಗೊ” ಅಂತ ಹೋಗೆ ಬಿಡ್ತಾರ. ಯಾಕಂದರ ಅವರಿಗೆ ಗೊತ್ತ ನನ್ನ ಹೆಂಡತಿ ಅರಿಷಣ ಕುಂಕಮಕ್ಕ ಕರದರ ಅರಿಷಣ ಕುಂಕಮಾ ಇಷ್ಟ ಕೊಟ್ಟ ಕಳಸ್ತಾಳ, ಮುಷ್ಟಿ ಅಕ್ಕಿ ಮಾರ ಅಗಲ ಜಂಪರ ಪೀಸ ಕೊಡಂಗಿಲ್ಲಾ ಅಂತ. ಏನ್ಮಾಡ್ತೀರಿ? ನಮ್ಮವ್ವನ್ನ ರೆಪ್ಯುಟೇಶನ್ ಹಂಗ ಅದ.
ಅಲ್ಲಾ ನಾ ಇಷ್ಟೋತ್ತನಕ ಹೇಳಿದ್ದ ಸುಳ್ಳ ಅನಸಿದರ ಬೇಕಾರ ಒಂದ ದಿವಸ ಮೂರ ಸಂಜಿಮುಂದ ನಿಮ್ಮ ಮನೆಯವರನ ಕರಕೊಂಡ ಬರ್ರಿ ನಮ್ಮನಿಗೆ….ನಮ್ಮ ಅವ್ವ ಇದ್ದಾಗ ಬರ್ರೆ ಮತ್ತ.

This entry was posted on Monday, October 27th, 2014 at 4:14 am and is filed under ಅವಧಿ. You can follow any responses to this entry through the RSS 2.0 feed. You can leave a response, or trackback from your own site.

1 Comment

  1. Abhishek R Kulkarni says:

    🙂

    ... on July October 31st, 2014

Post a Comment