ನಮ್ಮ ಮನೆಯವರಿಗೆ ಮಿಡಲೈಫ್ ಕ್ರೈಸಿಸ್ ಆಗೇದ..

ದಿನಾ ನಡೆಯೊ ಹಂಗ ಮೊನ್ನೆ ಗಂಡಾ ಹೆಂಡತಿದ ಮನ್ಯಾಗ ವಾಸ್ಯಾಟ ನಡದಾಗ ಒಮ್ಮಿಂದೊಮ್ಮಿಲೆ ನನ್ನ ಹೆಂಡತಿ
“ರ್ರಿ, ಹಂಗ್ಯಾಕ ಎಲ್ಲಾದಕ್ಕೂ ಸಿಡಿ-ಸಿಡಿ ಹಾಯ್ತೀರಿ…ಸ್ವಲ್ಪ ಸಮಾಧಾನ ಇಟಗೋರಿ. ನಂಗೊತ್ತ ನಿಮಗ ಮಿಡಲೈಫ ಕ್ರೈಸಿಸ್ ಸ್ಟಾರ್ಟ್ ಆಗೇದ ಅಂತ” ಅಂತ ಅಂದ ಬಿಟ್ಳು.
ನಂಗ ಅಕಿ ಹಂಗ ಅಂದ ಕೂಡಲೇ ಪಿತ್ತ ನೆತ್ತಿಗೇರಿ ಇನ್ನು ಸಿಟ್ಟ ಜಾಸ್ತಿ ಬಂತ.
“ಲೇ, ನಿಂಗ್ಯಾರ ಹೇಳಿದರ ನಂಗ ಮಿಡಲೈಫ ಕ್ರೈಸಿಸ್ ಶುರು ಆಗೇದ ಅಂತ. ನಂಗ ಆಗಿದ್ದ ಮಿಡ್ ಎಜಡ್ ವೈಫ ಕ್ರೈಸಿಸ್” ಅಂತ ನಾ ಅಂದೆ
“ಹುಂ… ಲಗ್ನಾಗಿ ಹದಿನಾಲ್ಕ ವರ್ಷ ಆಗಿ ಎರಡ ಮಕ್ಕಳನ ಹಡದ ಕೊಟ್ಟ ಮ್ಯಾಲೆ ಹೆಂಡ್ತಿ ಮಿಡ್ ಎಜ್ಡ್ ಆಗಲಾರದ ಏನ….ನಿಮಗ ವರ್ಷಾ ವರ್ಷಾ ಯಂಗ್ ಎಜ್ಡ್ ಹೆಂಡತಿ ಬೇಕ ತೊಗೊರಿ….ಹಿಂಗ ಮಾತ ಮಾತಿಗೆ ಹೆಂಡ್ತಿಗೆ ವಯಸ್ಸಾಗೇದ ಅನ್ನೋದು ಒಂದ ಮಿಡಲೈಫ್ ಕ್ರೈಸಿಸ್ಸದ್ದ ಸಿಂಪ್ಟಮ್..ಗೊತ್ತಿರಲಿ?” ಅಂತ ಅಕಿ ವಟಾ ವಟಾ ಶುರು ಮಾಡಿದ್ಲು.
“ಲೇ, ಹುಚ್ಚಿ ಎಲ್ಲಾರ ಮುಂದ ’ ನನ್ನ ಗಂಡಗ ಮಿಡಲೈಫ ಕ್ರೈಸಿಸ್ ಶುರು ಆಗೇದ’ ಅಂತ ಹೇಳಿ ಹೇಳಿ ಎಲ್ಲೇರ ನಂಗ ಖರೇನ ಮಿಡಲೈಫ್ ಕ್ರೈಸಿಸ್ ತಂದ ಗಿಂದಿ, ನಂಗೇನ ಧಾಡಿ ಆಗೇದಲೇ, ಇವತ್ತು ನಾ ಇನ್ನೊಂದ ಲಗ್ನಾ ಮಾಡ್ಕೋಂಡರ ಎರಡ ಹಡಿಬಹುದು” ಅಂತ ನಾ ಅಂದರ
“ಅಯ್ಯ, ಮಾರಿ ನೋಡ್ಕೊರಿ ಮಾರಿ, ಎರಡ ಹಡಿತಾರಂತ ಎರಡ…..ಇದ್ದ ಎರಡ ಖಾಸ ಮಕ್ಕಳನ ಛಂದಾಗಿ ಸಾಕಲಿಕ್ಕೆ ಆಗವಲ್ತ ಇನ್ನೊಂದ ಲಗ್ನಾ ಮಾಡ್ಕೊಂಡ ಎರಡ ಹಡಿತಾರಂತ” ಅಂತ ನಂಗ ಜೋರ ಮಾಡಿದ್ಲು. ಇನ್ನ ಇಕಿ ಜೊತಿ ಹಿಂಗ ಜಗಳಾಡಕೋತ ಕೂತರ ನಂಗ ಖರೇನ ಮಿಡಲೈಫ ಕ್ರೈಸಿಸ್ ಶುರು ಆಗಿಗಿತ್ತ ಬಿಡ ಅಂತ ನಾನ ಸುಮ್ಮನಾದೆ. ಹಂಗ ವೈಫ ಜೊತಿ ಕ್ರೈಸಿಸ್ ಶುರು ಆಗೋದ ಮಿಡಲೈಫ ಕ್ರೈಸಿಸದ್ದ ಬಿಗಿನ್ನಿಂಗ ಆ ಮಾತ ಬ್ಯಾರೆ.
ಅಲ್ಲಾ, ಇಕಿಗೆ ಯಾವಾಗ ಮಿಡಲೈಫ ಕ್ರೈಸಿಸ್ ಬಗ್ಗೆ ಗೊತ್ತಾತೊ ಯಾರ ಹೇಳಿ ಕೊಟ್ಟರೊ ಗೊತ್ತಿಲ್ಲಾ, ಒಟ್ಟ ನಂಗ ಹೋದ ವರ್ಷ ನಲವತ್ತ ದಾಟೋದ ತಡಾ ’ನಿಮಗ ಮಿಡ ಲೈಫ ಕ್ರೈಸಿಸ್ ಶುರು ಆಗೇದ ತೊಗೊರಿ’ ಅಂತ ಮಾತ ಮಾತಿಗೆ ತಿವಿತಾಳ. ಅದು ಹೋಗಲಿ ಮಂದಿ ಮುಂದ ಸಹಿತ ’ನಮ್ಮ ಮನೆಯವರಿಗೆ ಮಿಡಲೈಫ್ ಕ್ರೈಸಿಸ್ ಶುರು ಆಗೇದ, ಸಂಸಾರದ ಕಡೆ ಲಕ್ಷsನ ಇರಂಗಿಲ್ಲ, ಮಾತ ಮಾತಿಗೆ ಸಿಟ್ಟ ಮಾಡ್ಕೋತಾರ, ಅದೇನೋ ಡಿಪ್ರೆಶನ್ ಅಂತಾರಲಾ ಹಂಗ ಆಗಿ ಬಿಟ್ಟದ, ಜಾಸ್ತಿ ಏನರ ಹೇಳಲಿಕ್ಕೆ ಹೋದರ ಸಪರೇಶನ್ ಅಂತಾರ’ ಅಂತ ಹೇಳ್ಕೋತ ಅಡ್ಡ್ಯಾಡತಾಳ. ಏನ್ಮಾಡ್ತೀರಿ?
ಪಾಪ ಮಿಡಲೈಫ್ ಕ್ರೈಸಿಸ್ ಅಂದರ ಏನು ಅಂತ ಗೊತ್ತ ಇರಲಾರದವರು ನಂಗ ಏನೋ ಖರೇನ ದೊಡ್ಡ ಜಡ್ಡ ಆಗೇದ ಅಂತ ತಿಳ್ಕೊಂಡ ’ಪಾಪ ಪ್ರೇರಣಾನ ಗಂಡಗ ಇಷ್ಟ ಲಗೂ ಹಿಂಗ ಆಗಬಾರದಿತ್ತ’ ಅಂತ ಅಂದ ಹೋಗ್ತಾರ. ಅಲ್ಲಾ ಮೊನ್ನೆ ಒಂದಿಬ್ಬರಂತು ನಮ್ಮನಿಗೆ ಒಂದ ಪೌಂಡ ಬ್ರೇಡ್ ತೊಗೊಂಡ ನಂಗ ’ನಿಂಗೇನೋ ಮಿಡಲೈಫ ಕ್ರೈಸಿಸ್ ಆಗೇದ ಅಂತಲಾ, ಈಗ ಹೆಂಗ ಇದ್ದಿ’ ಅಂತ ಮಾತಾಡಸಲಿಕ್ಕೆ ಬಂದಿದ್ದರು. ಏನ ಹೇಳ್ತೇರಿ ಇದಕ್ಕ?
ನಂಗಂತೂ ಖರೇ ಹೇಳ್ತೇನಿ ಲಗ್ನಾ ಮಾಡ್ಕೊಂಡಿದ್ದ ಒಂದ ದೊಡ್ಡ ಕ್ರೈಸಿಸ್ ಅನಿಸಿಬಿಟ್ಟದ. ಖರೇ ಹೇಳ್ಬೇಕಂದರ ವೈಫ್ ಇಜ್ ಕ್ರೈಸಿಸ್. ಅದರಾಗ ಬ್ರಾಹ್ಮರ ಮದುವಿ ಮಾಡ್ಕೋಳೊದ ಮಿಡ್ ಎಜನಾಗ ಹಿಂಗಾಗಿ ಲಗ್ನ ಆಗೋ ಪುರಸತ್ತ ಇಲ್ಲದ ಮಿಡಲೈಫ್ ಕ್ರೈಸಿಸ್ ಶುರು ಆಗೇ ಬಿಡ್ತದ ಬಿಡ್ರಿ.
ಆದರು ಇತ್ತೀಚಿಗೆ ನಮ್ಮ ವಾರ್ಗಿ ದೋಸ್ತರೊಳಗ ಈ ಸುಡಗಾಡ ಮಿಡಲೈಫ ಕ್ರೈಸಿಸ್ ಶುರು ಆಗೇದ ಅಂತ ನಂಗ ಖರೇನ ಯಾಕೊ ಡೌಟ ಬರಲಿಕತ್ತದ. ನಂಗಲ್ಲ ಮತ್ತ..ನಮ್ಮ ವಾರ್ಗಿ ದೋಸ್ತರಿಗೆ.
ಹಂಗ ಈ ಮಿಡಲೈಫ್ ಕ್ರೈಸಿಸ್ ಸ್ಟಾರ್ಟ ಆಗೋದ ೪೦-೪೧ರ ಮ್ಯಾಲೆ, ಯಾವಾಗ ನಮಗ ಅರ್ಧಾದ ಮ್ಯಾಲೆ ಜೀವನ ಮುಗಿತು, ಏನು ಸಾಧಸಲಿಲ್ಲಾ ಸುಡಗಾಡಿಲ್ಲಾ, ಇಷ್ಟ ನಮ್ಮ ಹಣೇಬರಹ..ಇನ್ನ ಒಂದ ನಾಲ್ಕೈದ ವರ್ಷಕ್ಕ ಬಿ.ಪಿ/ಶುಗರ ಸ್ಟಾರ್ಟ ಆಗ್ತದ…ಮುಂದ ಸಕ್ಕರಿ ಇಲ್ಲದ್ದ ಚಹಾ…ಬೆಲ್ಲ ಇಲ್ಲದ್ದ ಪಾಯಸಾ..ಇವನ ಪಾಲಿಸಲಿಲ್ಲಾ ಅಂದರ ಜೀವನ ಅರವತ್ತರೊಳಗ ಗೋವಿಂದ ಅಂತ ಅನಿಸಿ ಜೀವನದಾಗ ಹತಾಷೆ ಬರತದಲಾ ಅದ ಮಿಡಲೈಫ್ ಕ್ರೈಸಿಸ್.
ಹಂಗ ಮಿಡಲೈಫ ಕ್ರೈಸಿಸ್ ಶುಗರ ಇದ್ದೊರಿಗೆ ಇಷ್ಟ ಬರತದ ಅಂತೇನ ಇಲ್ಲ ಮತ್ತ. ನಾ ಹಂಗ ಒಂದ ಉದಾಹರಣೆ ಹೇಳಿದೆ ಇಷ್ಟ. ಮಿಡಲೈಫ್ ಕ್ರೈಸಿಸಗೆ ನಮಗ ಬರೋ ರೊಗಕ್ಕ ಏನ ಸಂಬಂಧ ಇಲ್ಲಾ. ಇದ ಸೈಕಾಲಾಜಿಕಲ್ ಡಿಸಿಜ್, ಮಾನಸಿಕ ರೋಗ. ಹಂಗ ಇದ ವಯಸ್ಸಿಗೆ ಸಂಬಂಧ ಪಟ್ಟಿದ್ದರು ಜಾಸ್ತಿ ಸ್ಪೌಸ್ ರಿಲೇಟೆಡ ಇರತದ ಅಂತ..ಅಂದರ ಹೆಂಡತಿ ಇಂದ ಬರತದ ಅಂತ ಅರ್ಥ..ಇದ ನಾ ಹೇಳಿದ್ದಲ್ಲಾ ಮತ್ತ. ಇದ ವಿಜ್ಞಾನದ ಪ್ರಕಾರ.
ಹಂಗರ ಏನಪಾ ಈ ಮಿಡಲೈಫ ಕ್ರೈಸಿಸದ್ದ ಸಿಂಪ್ಟಮ್ಸ್ ಅಂತ ನಾ ವಿಚಾರ ಮಾಡಿ ಒಂದಿಷ್ಟ ಸಿಂಪ್ಟಮ್ಸ್ ಬರಕೋತ ಹೊಂಟೆ.
ಇತ್ತೀಚಿಗೆ ನಮ್ಮ ವಾರ್ಗಿ ಜನಾ ಮುಂಜಾನೆ ಎದ್ದ ಅಂಗಳದಾಗಿನ ಕಸಾ ಹುಡಗತಾರ. ’ಯಾಕಪಾ ಹೆಂಡ್ತಿ ಇನ್ನೂ ಎದ್ದಿಲ್ಲೇನ’ ಅಂದರ ’ಏ, ಏನಿಲ್ಲಾ ಅಷ್ಟ ವ್ಯಾಯಮ ಆಗ್ತದ ಅಂತ ಕಸಾ ಹುಡಗೋದು’ ಅಂತಾರ. ಮುಂದ ಅಂಗಳಕ್ಕ ಥಳಿ ಹೊಡದ ಹಂಗ ವಾಕಿಂಗ ಹೋಗಿ ಬರತ ಹಾಲ ತೊಗೊಂಡ ಬರತಾರ. ನಂಗ ಅನಸ್ತದ ಇವೇಲ್ಲಾ ಮಿಡಲೈಫ ಕ್ರೈಸಿಸದ್ದ ಸಿಂಪ್ಟಮ್ಸ್ ಅಂತ.
ಹಂಗ ಒಂದ ಸ್ವಲ್ಪ ರೊಕ್ಕ ಇದ್ದೋರು ಎ.ಸಿ ಕಾರನಾಗ ಜಿಮಗೆ ಹೋಗೊದು, ವಾರದಾಗ ಮೂರ ಸರತೆ ಬ್ಯಾಡ್ಮಿಂಟನ್ ಆಡೋದು, ಅವು ಎಲ್ಲಾ ಇದರ ಸಿಂಪ್ಟಮ್ಸ್. ಯಾಕಂದರ ಇವರು ಒಮ್ಮೆನೂ ಜೀವನದಾಗ ಜಿಮ್ ನೋಡಿದವರಲ್ಲಾ ಬ್ಯಾಡ್ಮಿಂಟನ್ ಕಾಕ್ ಕೈಯಾಗ ಹಿಡದವರ ಅಲ್ಲಾ, ಈಗ ಒಮ್ಮಿಂದೊಮ್ಮೆಲೆ ನಲವತ್ತ ದಾಟಿದ ಕೂಡಲೇ ಇವೇಲ್ಲಾ ನೆನಪಾಗತಾವ.
ಇನ್ನ ಕೆಲವೊಬ್ಬರು ದೋಸ್ತರ ಜೊತಿ ಪಿಕ್ಚರ್, ಬಾರ್ ಹೋಗೊದೊ ಬಂದ ಮಾಡಿ ’ಏ, ನಾ ನನ್ನ ಹೆಂಡತಿ ಜೊತಿ ಗಿರಣಿಗೆ, ಸಂತಿಗೆ ಹೋಗೊದ ಅದ’ಅಂತ ಮನಿ ಕಲಸಕ್ಕ ಪ್ರಿಯಾರಿಟಿ ಕೊಡಲಿಕ್ಕೆ ಶುರು ಮಾಡ್ತಾರ.
ಇನ್ನ ಕೆಲವೊಮ್ಮೆ ಸುಳ್ಳ ಸುಳ್ಳ ಹೆಲ್ತ ಬಗ್ಗೆ ಭಾಳ ತಲಿಕೆಡಸಿಗೊಂಡ. ಅಸಿಡಿಟಿ ಆಗಿ ಎದ್ಯಾಗ ಹಿಡದಂಗ ಆದರೂ ಯಾಕ ರಿಸ್ಕ್ ತೊಗೊಬೇಕ ಅಂತ ಇ.ಸಿ.ಜಿ ಮಾಡಿಸ್ಗೊಂಡ ಬರೋದು, ಅವ್ವನ ಶುಗರ ಚೆಕ್ ಮಾಡಿಸಿಗೊಂಡ ಬರಲಿಕ್ಕೆ ಹೋದಾಗ ’ಏ ನಂಬದು ಒಮ್ಮೆ ನೋಡೆ ಬಿಡ್ರಿಪಾ, ಇವತ್ತಿಲ್ಲಾ ನಾಳೆ ನಮಗು ಬರೋದ’ ಅಂತ ತಂಬದು ಶುಗರ್ ಚೆಕ್ ಮಾಡಿಸಿಗೊಂಡ ಬರೋದು. ಇವು ಸಹಿತ ಮಿಡಲೈಫ ಕ್ರೈಸಿಸನ ಸಿಂಪ್ಟಮ್.
ಅದರಾಗ ಮುಂಜಾನೆ ಜಾಗಿಂಗ್ ಹೋದಾಗ ಜರ ಕರತಾ ಅಪ್ಪಿ ತಪ್ಪಿ ಬೆವರ ಬಂತಂದರ ಹಂತಾ ಟೈಮ ಒಳಗ ಎದಿ ನೋಯಿಸ್ತದೇನು, ಬೆನ್ನ ಹಿಡದಂಗ ಆಗ್ತದೇನು, ಎಡಗೈ ಹರಿತದೇನು ಅಂತ ನಮ್ಮಷ್ಟಕ್ಕ ನಾವ observe ಮಾಡ್ಕೋಳೋದು ಎಲ್ಲಾ ಈ ಮಿಡಲೈಫ ಕ್ರೈಸಿಸ್ಸದ್ ಕಾಮನ್ ಸಿಂಪ್ಟಮ್ಸ್.
ಅದ ಅಲ್ಲದ ಎಲ್ಲಾದಕ್ಕೂ ’ಅದ್ಯಾಕ ಹಿಂಗ, ಹಿಂಗ ಯಾಕ ಮಾಡಬೇಕು’ ಅಂತ questioning ಮಾಡ್ಕೋತ ಹೋಗೊದು, ಆಮ್ಯಾಲೆ ಅವರದೇನ ದೊಡ್ಡದ, ಅವರನ್ಯಾಕ ಕೇಳಬೇಕು ಅಂತ ಪ್ರತಿಯೊಂದಕ್ಕು ego ನಡಕ ತೊಗೊಂಡ ಬರೋದು, ನಮ್ಮಷ್ಟಕ್ಕ ನಾವ ಮತ್ತೊಬ್ಬರ ಜೊತಿ ಕಂಪೇರ ಮಾಡ್ಕೋಳೊದು ಇವು ಎಲ್ಲಾ ಮಿಡಲೈಫ ಕ್ರೈಸಿಸದ್ದ ಇಂಡಿಕೇಶನ್ಸ್.
ಇನ್ನೊಂದಿಷ್ಟ (ಈಗಿನ ಟ್ರೆಂಡ್) ಅಂದರ ಫೇಸಬುಕ್ಕಿನಾಗ ಹಳೇ ಪ್ರೈಮರಿ ಫ್ರೆಂಡ್ಸ್ ಹುಡಕೋತ, ನಮ್ಮ ಮಾಜಿಗೊಳ ಎಲ್ಲಿದ್ದಾರ, ಹೆಂಗ ಇದ್ದಾರ, ಅಕಿಗೆ ಎಷ್ಟ ಮಕ್ಕಳು ಅಕಿ ಗಂಡ ಏನ ಮಾಡತಾನ ಅಂತೇಲ್ಲಾ enquiry ಮಾಡಿ ಮತ್ತ ಲಾಸ್ಟಿಗೆ ನಮ್ಮ ಜೊತಿ ಕಂಪೇರ ಮಾಡ್ಕೋಳೋದು. ನಮ್ಮ ಹಳೇ ಬ್ಲ್ಯಾಕ & ವೈಟ ಫೋಟೊ ಹುಡಕಿ – ಹುಡಕಿ ಫೇಸಬುಕ್ಕಿನಾಗ ಹಾಕೋದು. ಇಪ್ಪತ್ತ ವರ್ಷದ ಹಿಂದ ಆಗಿ ಮರತ ಹೋಗಿದ್ದ ಮದುವಿ ಫೋಟೊ ಹಾಕೋದು. ಇವು ಎಲ್ಲಾ ಮಾಡರ್ನ ಮಿಡಲೈಫ ಕ್ರೈಸಿಸದ್ದ ಸಿಂಪ್ಟಮ್ಸ.
ಹಂಗ ನಮಗ ಒಮ್ಮೆ ಈ ಕ್ರೈಸಿಸ್ ಶುರು ಆತ ಅಂದರ ದಿವಸಾ ಬಾಜುಕ ಮಲ್ಕೊಂಡಿದ್ದ ಹೆಂಡ್ತಿದ ವಾರಕ್ಕೊಮ್ಮೆ ಇಷ್ಟ ನೆನಪಾಗತದ ಮತ್ತ. ಅದು ಒಂದ ಮಿಡಲೈಫ ಕ್ರೈಸಿಸನ ಇಂಡಿಕೇಶನ್. ಅಲ್ಲಾ ಹಂಗ ಕೆಲವೊಬ್ಬರಿಗೆ ಈ ಕ್ರೈಸಿಸ್ ಸ್ಟಾರ್ಟ ಆತ ಅಂದರ ಮನಿ ಹೆಂಡ್ತಿ ಬ್ಯಾಸರ ಆಗಿ extramarital affairs ಶುರು ಆಗ್ತಾವ ಅಂತನೂ ಕೇಳೇನಿ.
ಇನ್ನ ಸ್ವಲ್ಪ ವೆಲ್ ಟು ಡು ಇದ್ದೋರಿಗೆ ಪೇಂಟಿಂಗ ಕಲಿಬೇಕು ಇಲ್ಲಾ ಗಿಟಾರ ಕಲಿಬೇಕು ಅಂತ ಅನಸ್ತದ. ಹಂಗ ನೋಡಿದರ ಹುಟ್ಟಾ ಒಂದ ಸುಡಗಾಡ ಹಾಬಿನೂ ಇರಂಗಿಲ್ಲಾ ಆದರ ಈಗ ಒಮ್ಮಿಂದೊಮ್ಮಿಲೇ ಏನೇನರ ಹಾಬಿ ಹುಟ್ಟತಾವ.
ಇನ್ನ ಕೆಲವೊಬ್ಬರು ಗುರವಾರಕ್ಕೊಮ್ಮೆ ಮಠಕ್ಕ, ಶನಿವಾರಕ್ಕೊಮ್ಮೆ ಹನಮಂತ ದೇವರ ಗುಡಿಗೆ ಹೋಗೊದ ಶುರು ಮಾಡ್ತಾರ. ಅಲ್ಲಾ ಒಂದ ದಿವಸ ಮನ್ಯಾಗಿನ ದೇವರಿಗೆ ಕೈಮುಗದಿರಂಗಿಲ್ಲಾ ಡೈರೆಕ್ಟ ಹೊರಗಿನ ಗರ್ಭಗುಡಿಗೆ ಕೈಹಚ್ಚತಾರ. ಏನ್ಮಾಡ್ತೀರಿ? ಇವೇಲ್ಲಾ ಮಿಡಲೈಫ ಕ್ರೈಸಿಸದ್ದ ಸಿಂಪ್ಟಮ್ಸ ಹೌದಲ್ಲ ಮತ್ತ?
ಅಲ್ಲಾ, ನೀವೇಲ್ಲರ ಇದನ್ನೇಲ್ಲಾ ಓದಿ ನಂಗೇನರ ಮಿಡಲೈಫ ಕ್ರೈಸಿಸ ಆಗೇದ ಅಂತ ತಿಳ್ಕೊಂಡ ಗಿಳ್ಕೊಂಡೀರಿ..ನಂಗೇನ ಧಾಡಿನೂ ಆಗಿಲ್ಲಾ. ಆದರ ಇವ್ವತ್ತಿಲ್ಲಾ ನಾಳೆ ನಂಗೂ ಮಿಡಲೈಫ ಕ್ರೈಸಿಸ್ ಆಗತದ ಅದ ಗ್ಯಾರಂಟಿ ಯಾಕಂದರ ಅದ ಸ್ಪೌಸ್ ರಿಲೇಟಡ್ ಅಂತ ಹೇಳಿದ್ನೆಲ್ಲಾ.
ನೋಡ್ರಿ ಇಷ್ಟೇಲ್ಲಾ ಓದಿದ ಮ್ಯಾಲೆ ನಿಮಗು ಯಾವದರ ಈ ಟೈಪ ಸಿಂಪ್ಟಮ್ಸ್ ಅವ ಅಂತ ಅನಿಸಿದರ ನಿಮಗು ಮಿಡಲೈಫ್ ಕ್ರೈಸಿಸ್ ಶುರು ಆಗೇದ ಅಂತ ತಿಳ್ಕೋಬ್ಯಾಡರಿ ಮತ್ತ. ನಾ ಮೊದ್ಲ ಹೇಳಿದ್ನೇಲ್ಲಾ ಇದ ಮಾನಸಿಕ ರೋಗ ಅಂತ. ನೀವು ವಯಸ್ಸಾಗೇದ ಅಂತ ತಿಳ್ಕೊಂಡರ ಆಗೇದ, ವಯಸ್ಸಾಗಿಲ್ಲಾ ಅಂದರ ಆಗಿಲ್ಲ. ಭಾಳ ತಲಿಕೆಡಸ್ಗೋಬ್ಯಾಡರಿ. Think that you are always young, ಬೇಕಾರ ನಮ್ಮ ಹೆಂಡಂದರಿಗೆ ಮಿಡಲೈಫ್ ಕ್ರೈಸಿಸ್ ಶುರು ಆದರ ಆಗವಲ್ತಾಕ, ನಮಗ ಆಗಬಾರದ ಇಷ್ಟ. boys should always remain young by heart and mind. ಮರಿಬ್ಯಾಡರಿ.

This entry was posted on Monday, October 27th, 2014 at 4:13 am and is filed under ಅವಧಿ. You can follow any responses to this entry through the RSS 2.0 feed. You can leave a response, or trackback from your own site.

Post a Comment