ನಮ್ಮ ಸೀರಿ ನಮಗ ವಾಪಸ್ಸ ಬಂತ……

ಇದ ನನ್ನ ಮಗನ ಮುಂಜವಿಗೆ ಸಂಬಂಧ ಪಟ್ಟಿದ್ದ ಮಾತ. ಹಂಗ ನಾ ಮುಂಜವಿಗೆ ಬಂದೊರಿಗೆಲ್ಲಾ ’ನಿಮ್ಮ ಆಶೀರ್ವಾದಕ್ಕೆ ನಮ್ಮ ಉಡುಗೊರೆ’(return gift) ಅಂತ ದೊಡ್ಡಿಸ್ತನಾ ಬಡದ ಬಾಂಬೆದಿಂದ ಮೂರ ನಾಲ್ಕ ನಮನಿವ ಹೋಲಸೇಲನಾಗ ಏರ್ ಟೈಟ ಸ್ಟೇನಲೆಸ್ ಸ್ಟೀಲ್ ಡಬ್ಬಿ ಸೆಟ್ ತರಿಸಿ ಕೊಟ್ಟಿದ್ದ ನಿಮಗೇಲ್ಲಾ ಗೊತ್ತ ಅದ. ಹಂಗ ಮುಂಜವಿಗೆ ಬಂದೊರ ತೊಗೊಂಡು ಹೋಗಿರಿ ಆ ಮಾತ ಬ್ಯಾರೆ.
ಅದ ಏನಾತ ಅಂದರ ನನ್ನ ಮುಗನ ಮುಂಜವಿ ಆಗಿ ಒಂದ ಮೂರ ತಿಂಗಳಾದ ಮ್ಯಾಲೆ ನಮ್ಮ ಸುಮಕ್ಕಾ ಪುಣಾದಿಂದ ಬಂದ
“ಅಯ್ಯ, ನಮಗ ಮುಂಜವಿ ಬರಲಿಕ್ಕೆ ಆಗಲಿಲ್ಲವಾ, ದೂರದ ಊರು, ಅದರಾಗ ಹಗಲಗಲಾ ಎಲ್ಲೆ ಗಾಡಿ ಖರ್ಚ ಮೈಮ್ಯಾಲೆ ಹಾಕ್ಕೊಂಡ ಬರಲಿಕ್ಕೆ ಆಗ್ತದ” ಅಂತ ಹುಬ್ಬಳ್ಳಿಗೆ ಬ್ಯಾರೆ ಕೆಲಸಕ್ಕ ಬಂದಾಗ ನಮ್ಮ ಮನಿ ಹೊಕ್ಕ ನಂಗ ಒಂದ ಶರ್ಟ ಪೀಸ ನನ್ನ ಹೆಂಡತಿಗೊಂದ ನೂರ ನೂರಾ ಐವತ್ತರದ ಪಾಲಿಸ್ಟರ ಪತ್ಲಾ ನನ್ನ ಮಗನ ಕೈಯಾಗ ಒಂದ ನೂರ ರೂಪಾಯಿ ನೋಟ ಕೊಟ್ಟಳು. ಅಲ್ಲಾ ಮುಂಜವಿ ಆಗಿ ಮೂರ ತಿಂಗಳಾದ ಮ್ಯಾಲೆ ಬಂದ ಆಹೇರ (ಉಡುಗೋರೆ) ಕೊಡೊದ ಏನ ಹರಕತ್ತ ಇತ್ತೊ ಏನೊ ಅಕಿಗೆ? ನಮ್ಮ ಮನ್ಯಾಗರ ಮುಂಜವಿ ಫರಾಳ ಸಹಿತ ತಿರಿ ಒಂದ ವಾರ ಆಗಿತ್ತ, ಕಡಿಕೆ ಬರೆ ಚಹಾ ಅವಲಕ್ಕಿ ಮಾಡಿ ಕೊಡಬೇಕಾತ. ಇನ್ನ ಅಕಿ ಪಾಪ ಪೂಣಾದಿಂದ ಬಂದ ನಮಗ ಆಹೇರ ಕೊಟ್ಟಾಳಂದ್ರ ನಮ್ಮವ್ವ ಬಿಡತಾಳ, ನಾವು ಏನರ ಮುಂಜವಿ ಉಡಗೊರೆ ಕೊಡಬೇಕಂತ ನನ್ನ ಹೆಂಡತಿನ್ನ ಒಳಗ ಕರದ ಏನೇನೊ ಇಬ್ಬರು ಗುಸು-ಗುಸು ಮಾತಾಡಿ ಲಾಸ್ಟಿಗೆ ನಮ್ಮ ಸುಮಕ್ಕ ಹೋಗಬೇಕಾರ ಅಕಿಗೆ ನನ್ನ ಹೆಂಡತಿ ಕುಂಕಮಾ ಹಚ್ಚಿ ಒಂದ ಸೀರಿ ಉಡಿತುಂಬಿ ಕಳಿಸಿದಳು.
“ಅಯ್ಯ, ಇದೇಲ್ಲಾ ಇಗ್ಯಾಕ್ವಾ” ಅಂತ ಅನ್ಕೋತನ ನಮ್ಮ ಸುಮಕ್ಕ ಸೆರೆಗ ಅಗಲ ಮಾಡಿ ಉಡಿ ತುಂಬಿಸಿಗೊಂಡ ರೈಟ ಅಂದ್ಲು.
ಅಕಿ ಹೋಗೊದ ತಡಾ ನಾ
“ಯಾಕ ಸ್ಟೀಲಿನ ಡಬ್ಬಿ ಖಾಲಿ ಆಗ್ಯಾವೇನ, ಸೀರಿ ಯಾಕ ಕೊಟ್ರಿ?” ಅಂತ ನನ್ನ ಹೆಂಡತಿಗೆ ಕೇಳಿದರ
“ಅಯ್ಯ, ಆ ಡಬ್ಬಿ ಖಾಲಿ ಯಾಗಿ ಯಾ ಮಾತ ಆತ ಏನ್ತಾನ, ನಿಮ್ಮವ್ವ ಒಂದ ಜಂಪರ್ ಪೀಸ್ ಕೊಟ್ಟ ಕಳಸೋಣು ಅಂದರ ಕೇಳಲಿಲ್ಲಾ, ಸೀರಿನ ಕೊಡ ಅಂತ ಗಂಟ ಬಿದ್ರು, ಹಿಂಗಾಗಿ ಸೀರಿ ಕೊಟ್ಟ ಕಳಸಿದೆ” ಅಂದ್ಲು.
ಈಗ ಈ ಮಾತಿಗೆ ಮತ್ತ ಒಂದ ಏಳ- ಎಂಟ ತಿಂಗಳ ಆಗಲಿಕ್ಕೆ ಬಂತ, ಆದರ ಮಜಾ ಅಂದರ ಮೊನ್ನೆ ನನ್ನ ಹೆಂಡತಿ ತನ್ನ ಮೌಶಿ ಮನಿ ಒಪನಿಂಗಗೇ ನಮ್ಮವ್ವನ್ನ ಕರಕೊಂಡ ಹೋದಾಗ ನಮ್ಮವ್ವಗ
“ಅಯ್ಯ, ಹೀರೇ ಮನಷ್ಯಾರು ಹಂಗ ಹೆಂಗ ಕಳಸಲಿಕ್ಕೆ ಬರತದ” ಅಂತ ಅದ ಸೀರೀನ ಕೊಟ್ಟ ಉಡಿತುಂಬಿ ಕಳಸ್ಯಾರ. ನನ್ನ ಹೆಂಡತಿ ಮನಿಗೆ ಬರೋ ಪುರಸತ್ತ ಇಲ್ಲದ ನಮ್ಮವ್ವನ ಕ್ಯಾರಿ ಬ್ಯಾಗ ಕಸಗೊಂಡೊಕಿನ
“ಅತ್ಯಾ, ನಾ ಈ ಸೀರಿ ಎಲ್ಲೊ ನೋಡೆನಿ ಅಂತ ದಾರಿ ಒಳಗ ಬರಬೇಕಾರ ಹೇಳಲಿಲ್ಲಾ ನಿಮಗ, ಈ ಸೀರಿನ್ನ ನಾವು ಪುಣಾ ಸುಮಕ್ಕಗ ಕೊಟ್ಟಿದ್ವಿ, ನಾ ಗ್ಯಾರಂಟೀ ಹೇಳ್ತೇನಿ ಇದs ಅದ ಸೀರಿ” ಅಂತ ಅಂದ್ಲು. ನಾ
“ಲೇ, ಹುಚ್ಚಿ, ನಾವ ಕೊಟ್ಟದ್ದ ಪೂಣಾದೊಕಿಗೆ, ನಮ್ಮ ಅಕ್ಕಗ ನಿಮ್ಮ ಮೌಶಿಗೆ ಒಬ್ಬರಿಗೊಬ್ಬರಿಗೆ ಪರಿಚಯನೂ ಇಲ್ಲಾ, ಆಮ್ಯಾಲೆ ಹತ್ತರದವರು ಅಲ್ಲಾ, ಅದ ಹೆಂಗ ಇದs ಅದ ಸೀರಿ ಅಂತ ಹೇಳ್ತಿ? ನಿನಗ ಎಲ್ಲಾ ಸೀರಿನೂ ಒಂದ ಥರಾನ ಕಾಣ್ತಾವ ತೊಗೊ” ಅಂತ ಅಂದರ
“ರ್ರಿ, ನಾ ಆ ಸೀರಿ ಕೊಡಬೇಕಾರ ನೋಡಿದ್ದೆ ಅದರ ಮ್ಯಾಲೆ ’ಪರಾಗ ಸಾರಿ ಸೆಂಟರ್’ದ್ದ ಸ್ಟಿಕರ್ ಇತ್ತ, ಈಗ ಈ ಸೀರಿ ಮ್ಯಾಲೇನೂ ಅದ ಸ್ಟಿಕರ್ ಅದ, ಅದರಾಗ ನಾ ಈ ಸೀರಿ ಕಲರ ಮರೆಯೊಹಂಗಿಲ್ಲಾ ಅಗದಿ ’ಉಳ್ಳಾಗಡ್ಡಿ ತಾಳಸ ಬೇಕಾರ ತಳಕ್ಕ ಹತ್ತಿದರ ಯಾ ಬಣ್ಣ ಆಗಿರ್ತದಲಾ, ಆ ಕಲರ್ ಸೀರಿ ಇದು’ ಅಂದ್ಲು.
ಹಂಗ ಅಕಿ ಹೇಳಿದ್ದ ಎಲ್ಲಾ ಕರೆಕ್ಟ ಇತ್ತ. ಹೊತ್ತಿದ್ದ ಉಳ್ಳಾಗಡಿ ಬಣ್ಣದ್ದ ಸೀರಿ ಇತ್ತ ಅದ.
ಈಗ ಪ್ರಶ್ನೆ ಏನಪಾ ಅಂದ್ರ ’ನಾವು ಪುಣಾದ ಸುಮಕ್ಕಗ ಕೊಟ್ಟ ಕಳಸಿದ್ದ ಸೀರಿ ಆರ ತಿಂಗಳದಾಗ ಹುಬ್ಬಳ್ಳಿ ನೇಕಾರ ನಗರದ ನನ್ನ ಹೆಂಡತಿ ಮೌಶಿಗೆ ಹೆಂಗ ಮುಟ್ಟತು?’ ಅನ್ನೋದು. ಅಲ್ಲಾ ಅವರಿಗೆ ಒಬ್ಬರಿಗೊಬ್ಬರಿಗೆ ಪರಿಚಯ ಇಲ್ಲಾ, ನಮ್ಮಕ್ಕ ಅಂತೂ ವರ್ಷಕ್ಕ-ಎರಡ ವರ್ಷಕ್ಕೊಮ್ಮೆ ಹುಬ್ಬಳ್ಳಿ ಧಾರವಾಡದ ಕಡೆ ಯಾರರ ಹೋದಾಗ ಒಮ್ಮೆ ಬರೋಕಿ. ಇನ್ನ ನನ್ನ ಹೆಂಡತಿ ಮೌಶಿ ಅಂತೂ ಧಾರವಾಡ ಜಿಲ್ಲಾ ದಾಟೋದ ವರ್ಷೊಕ್ಕೊಮ್ಮೆ ದೇವರಗುಡ್ಡಕ್ಕ ಹೋಗಬೇಕಾರ ಇಷ್ಟ. ಹಂತಾದ ನಾವ ಕೊಟ್ಟ ಸೀರಿ ತಿರಗಿ ನಮ್ಮನಿಗೆ ಹೆಂಗ ಮುಟ್ಟತು ಅನ್ನೋದ ಒಂದ ದೊಡ್ಡ ಇಶ್ಯು ಆತ.
ನಾ “ಏ, ಹೋಗಲಿ ಬಿಡ, ನಮ್ಮ ಮನಿ ಸೀರಿ ನಮ್ಮ ಮನಿಗೆ ಬಂತಲಾ, ಯಾಕ ಅಷ್ಟ ತಲಿಗೆಡಸಿಗೋತಿ” ಅಂತ ನಾ ಅಂದರ ನನ್ನ ಹೆಂಡತಿ ಕೇಳಲಿಲ್ಲಾ.
ಅಲ್ಲಾ ಹಂಗ ಎಲ್ಲಾರ ಮನ್ಯಾಗ ಅವರ ಕೊಟ್ಟದ್ದ ಸೀರಿ ಇವರಿಗೆ ಕೊಡೋದು, ಇವರ ಕೊಟ್ಟದ್ದ ಸೀರಿ ಅವರಿಗೆ ಕೊಡೋದು ಅಗದಿ ಕಾಮನ್, ಹಂತಾದರಾಗ ಹಿಂಗ ಒಮ್ಮೊಮ್ಮೆ ನಮ್ಮ ಸೀರಿ ಅಂದ್ರ ನಾವ ಕೊಟ್ಟ ಸೀರಿ ಮತ್ತ ನಮ್ಮ ಮನಿಗೆ ಬರೋ ಚಾನ್ಸಿಸ್ ಇರತದ ಆದರ ಇದ ಪೂಣಾಕ್ಕ ಕೊಟ್ಟದ್ದ ಸೀರಿ ಹುಬ್ಬಳ್ಳಿಯಿಂದ ಹೆಂಗ ವಾಪಸ ಬಂತು ಅನ್ನೊದನ್ನ ಪತ್ತೇ ಹಚ್ಚಲಿಕ್ಕೆ ನನ್ನ ಹೆಂಡತಿ ಶುರು ಮಾಡಿದ್ಲು.
ಅಗದಿ ಯಂಡಮೂರಿ ವಿರೇಂದ್ರನಾಥವರ ಪತ್ತೇದಾರಿ ಕಾದಂಬರಿ ಗತೆ ಇಕಿ ತೆಹಕಿಕಾತ ಶುರು ಮಾಡಿದ್ಲು.
ಫಸ್ಟ ನಮ್ಮ ಸುಮಕ್ಕಗ ಫೋನ ಮಾಡಿ ಲಾಸ್ಟ ಟೈಮ ಹುಬ್ಬಳ್ಳಿಗೆ ಬಂದಾಗ ನಮ್ಮ ಮನಿ ಆದಮ್ಯಾಲೆ ಅಕಿ ಮತ್ತ ಯಾರ ಯಾರ ಮನಿಗೆ ಹೋಗಿದ್ಲು ಪತ್ತೇ ಹಚ್ಚಿದ್ಲು, ಅದ ಏನ ಆಗಿತ್ತಂದರ ನಮ್ಮ ಅಕ್ಕ ಮುಂದ ಎರಡ ದಿವಸ ಬಿಟ್ಟ ಧಾರವಾಡದಾಗ ತಮ್ಮ ಮೈದನ ಮಗನ ಮನಿಗೆ ಹೋಗಿದ್ಲಂತ, ಅಲ್ಲೇ ಅವರ ಮಗನ ಮದುವಿಗೂ ಹೋಗಿದ್ದಿಲ್ಲಾ ಅಂತ ಅವನ ಹೆಂಡತಿ ಕೈಯಾಗ ಒಂದ ಸೀರಿ ಅಂದರ ನಾವ ಕೊಟ್ಟ ಸೀರಿ ಕೊಟ್ಟ ಹೋಗಿದ್ಲು. ಆ ಹುಡಗಿ ರೋಣದೊಕಿ, ಅಕಿ ಮುಂದ ತನ್ನ ತವರಮನಿ ಒಳಗ ಅಕಿ ಅತ್ಯಾನ್ನ ಮಗಳ ಮದ್ವಿ ಮುಂದ ಆ ಸೀರಿ ತನ್ನ ಅತ್ಯಾಗ ಕೊಟ್ಟಿದ್ಲು. ಆ ಅತ್ಯಾನ್ನ ಕೊಟ್ಟಿದ್ದ ನವಲಗುಂದ ತಾಲುಕ ನಾವಳ್ಳಿ ಪಾಟೀಲರ ಮನಿಗೆ, ಆ ನಾವಳ್ಳಿ ಪಾಟೀಲ ಅತ್ಯಾ ತಮ್ಮ ಬಾಜು ಮನಿ ಕುಲಕರ್ಣಿಯವರದ ಅರವತ್ತ ವರ್ಷದ ಶಾಂತಿಗೆ ಹೋದಾಗ ಕುಲಕರ್ಣಿಯವರ ಹೆಂಡತಿಗೆ ಕೊಟ್ಟಿದ್ಲಂತ. ಹಂಗ ನನ್ನ ಹೆಂಡತಿ ಅಪ್ಪನ ಊರು ನಾವಳ್ಳಿ, ಹಿಂಗಾಗಿ ಆ ಸೀರಿ ನಾವಳ್ಳಿ ಕುಲಕರ್ಣಿಯವರಿಂದ ಮುಂದ ನಮ್ಮ ನೇಕಾರ ನಗರ ಕುಲಕರ್ಣಿ ಅಂದರ ನಮ್ಮ ಮಾವನ ಮನಿಗೆ ನಮ್ಮ ಅಳಿಯಾನ ಮಗನ ಹೆಸರ ಇಡೊ ಕಾರ್ಯಕ್ರಮದಾಗ ಅವನ ಹೆಂಡತಿಗೆ ಬಂತು. ಮುಂದ ಆ ಸೀರಿನ್ನ ನಮ್ಮ ಅಳಿಯಾನ ಹೆಂಡತಿ ತನ್ನ ಗಂಡನ್ನ ಮೌಶಿ ಅಂದರ ನನ್ನ ಹೆಂಡತಿ ಮೌಶಿನ ಅಲಾ, ಅಕಿಗೆ
ದ್ವಾದಶಿ ಬಾಗಣದಾಗ ಕೊಟ್ಟಿದ್ಲು.
ನನ್ನ ಹೆಂಡತಿ ಮೌಶಿ ಒಂದ ಸ್ವಲ್ಪ ಹೆಸರ ಇಡೋ ಚಾಳಿಯೊಕಿ, ಅಕಿ ಆ ಸೀರಿ ನೋಡಿ
“ಏನ ಖಮ್ಮಂದ ಸೀರಿ ಕೊಟ್ಟಾಳ ನೋಡ, ತಡಿ ಈ ಸೀರಿ ದಾಟಸಿದರಾತು” ಅಂತ ತಮ್ಮ ಮನಿ ಒಪನಿಂಗ ಟೈಮ ಒಳಗ ನಮ್ಮ ಅವ್ವಗ ಅರಿಷಣ ಕುಂಕಮಾ ಹಚ್ಚಿ ’ಅಯ್ಯ, ಹೀರೇಮನಷ್ಯಾರ, ಹಂಗ ಹೆಂಗ ಕಳಸಲಿಕ್ಕೆ ಬರತದ’ ಅಂತ ಉಡಿತುಂಬಿ ಕಳಸಿದ್ಲು.
ಈಗ ಗೊತ್ತಾತಲಾ, ನಮ್ಮ ಮನಿ ಸೀರಿ ನಮ್ಮ ಮನಿಗೆ ಹೆಂಗ ಬಂತು ಅಂತ.
ಇದನ್ನೇಲ್ಲಾ ನನ್ನ ಹೆಂಡತಿ ಹೆಂಗ ಕಂಡ ಹಿಡದ್ಲು ಅನ್ನೋದನ್ನ ನಾ ಡಿಟೇಲಾಗಿ ಬರಿಲಿಕತ್ತರ ಅದ ಪ್ರಹಸನ ಆಗಂಗಿಲ್ಲಾ, ಪತ್ತೇದಾರಿ ಕಾದಂಬರಿ ಆಗ್ತದ. ಆದರೂ ನನ್ನ ಹೆಂಡತಿ ಈ ಸೀರಿ ಫ್ಲೊ ಚಾರ್ಟ ಮಾಡಿ ತೋರಿಸಿದಾಗ ನಂಗ ಮೂರ್ಚೆ ಹೋಗೊದ ಒಂದ ಬಾಕಿ ಇತ್ತ, ಅಗದಿ ಮೆಚ್ಚಬೇಕ ಬಿಡ್ರಿ ಅಕಿನ್ನ ಅನಸ್ತು, ಜೀವನದಾಗ ಹಂಗ ಒಂದನೇ ಸಲಾ ಅನಸಿದ್ದ ಅಕಿ ಬಗ್ಗೆ ನನಗ ಆ ಮಾತ ಬ್ಯಾರೆ.
“ಲೇ, ಹುಚ್ಚಿ, ದಾನಕ್ಕ ಕೊಟ್ಟ ಆಕಳದ್ದ ಹಲ್ಲ ಎಣಸಬಾರದು ಅಂತಾರ, ಒಟ್ಟ ನಮ್ಮ ಮನಿ ಸೀರಿ ಮತ್ತ ನಮ್ಮ ಮನಿಗೆ ದೇಶಾ ಸುತ್ತಿ ವಾಪಸ್ಸ ಬಂತಲಾ, ಸಾಕ ತೊಗೊ” ಅಂತ ನಾ ಅಂದರ.
“ಅಲ್ಲರಿ ಕೊಡೊದ ಕೊಡ್ತಾರ ಒಂದ ಸ್ವಲ್ಪ ಛಲೋದ ಕೊಡಬೇಕರಿಪಾ, ಒಂದ ನಾಲ್ಕ ಒಪ್ಪತ್ತ ಉಡೋ ಹಂತಾದ ಕೊಟ್ಟರ ಮಾತ ಬ್ಯಾರೆ” ಅಂತ ನಂಗ ಅಂದ್ಲು.
ಇಕಿ ತಾ ಕೊಟ್ಟದ್ದ ಮರತ ಬಿಟ್ಟಾಳ. ಅಲ್ಲಾ ಹಂತಾ ಸೀರಿ ನೀ ಯಾಕ ಮೊದ್ಲ ಕೊಟ್ಟಿ ಅಂತ ಕೇಳಿದರ
“ನಾ ಎಲ್ಲೇ ರೊಕ್ಕಾ ಕೊಟ್ಟ ತೊಗಂಡಿದ್ದರಿ, ನಂಗೂ ಯಾರೊ…… ಮುಂಜವಿ ಒಳಗ ಕೊಟ್ಟಿದ್ದು” ಅಂತ ತನಗ ಯಾರ ಕೊಟ್ಟಿದ್ದರೂ ಅಂತ ವಿಚಾರ ಮಾಡಲಿಕತ್ಲು.
“ಏ, ನಮ್ಮವ್ವ ಹೋಗ್ಲಿ ಬಿಡ, ನಿಂಗ ಯಾರರ ಕೊಡವಲ್ಲರಾಕ, ನೀ ಇನ್ನ ಅದನ್ನ ಪತ್ತೇ ಹಚ್ಚಲಿಕ್ಕೆ ತಲಿಕೆಡಸಿಗೊಳ್ಳಿಕ್ಕೆ ಹೋಗಬ್ಯಾಡ, ಒಟ್ಟ ನಮಗ ಬಂದ ಸೀರಿ ಮತ್ತ ನಮಗ ಬಂತಲಾ, ಸಾಕ ಬಿಡ” ಅಂತ ನಾ ಆ ವಿಷಯ ಅಲ್ಲಿಗೆ ಮುಗಿಸಿದೆ.
ಹಂಗ ನೋಡಿದ್ರ ಈ ವಿಷಯ ಏನ ದೊಡ್ಡದಲ್ಲಾ, ಹೊಸಾದಲ್ಲಾ, ಎಲ್ಲಾರ ಮನ್ಯಾಗಿನ ಹೆಣ್ಣಮಕ್ಕಳು ಹಿಂಗ. ಮಂದಿ ಕೊಟ್ಟದ್ದಕ್ಕ ಹೆಸರ ಇಡೋದು ಅದನ್ನ ಮತ್ತ ಮಂದಿಗೆ ಕೊಡೊದು. ಹಂತಾದ ಮಂದಿ ನಮಗೂ ಕೊಡ್ತಾರ ಅನ್ನೊದ ಸ್ವಲ್ಪ ಖಬರ ಇರಬೇಕ ಇಷ್ಟ. ನಮ್ಮ ಮನ್ಯಾಗ ನನ್ನ ಮಗನ ಮುಂಜವಿಗೆ ಬಂದದ್ದ ನನ್ನ ಹೆಂಡತಿ ಉಡಲಾರದಂತಾವ ಇನ್ನೂ ಒಂದ ಅರವತ್ತ ಎಪ್ಪತ್ತ ಸೀರಿ ಅವ, ಅವು ಇವತ್ತಿಲ್ಲಾ ನಾಳೆ ನಿಮ್ಮಂತಾವರ ಮನಿಗೆ ಮುಟ್ಟತಾವ, ಅದಕ್ಕ ಹೆಸರ ಇಡಲಿಕ್ಕೆ ಹೋಗಬ್ಯಾಡರಿ ಮತ್ತ. ಅಲ್ಲಾ ನಮಗೂ ಗೊತ್ತಿಲ್ಲಾ ಹಂತ ಖಮಟ ಸೀರಿ ಯಾರ ಕೊಟ್ಟಾರಂತ ಹಿಂಗಾಗಿ ಮನಿಗೆ ಬಂದೊರಿಗೆ ಅರಷಣಾ ಕುಂಕಮಾ ಹಚ್ಚಿ ಉಡಿತುಂಬಿ ಕಳಸೋದ್ರಿಪಾ.
ಅನ್ನಂಗ ಇನ್ನೊಂದ ಹೇಳೋದ ಮರತೆ, ಈ ನನ್ನ ಹೆಂಡತಿ ಮೌಶಿ ಇದ್ದಾಳಲಾ ಅಕಿ ಭಾರಿ ಖತರನಾಕ, ಒಂದ ಸರತೆ ಅಕಿ ಮನಿಗೆ ನಾ ಯಾವದೊ ಫಂಕ್ಶನಗೆ ಹೋದಾಗ ಅವರ ಮನಿ ಮಂದೆಲ್ಲಾ ಯಾಕ ‘ಒಬ್ಬನ ಬಂದಿ’,’ಒಬ್ಬನ ಬಂದಿ’, ‘ಹೆಂಡ್ತಿನ್ ಯಾಕ ಕರಕೊಂಡ ಬಂದಿಲ್ಲಾ’ ಅಂತ ಕೇಳೆ- ಕೇಳೋರ. ಈ ಮಂದಿನೂ ಹೇಳ್ತೇನಿ, ಬಂದವರನ ಬಿಟ್ಟ ಬರಲಾರದವರನ ಕೇಳ್ತಾರ. ಅದರಾಗ ಎಲ್ಲಾರು ನನ್ನ ಹೆಂಡ್ತಿ ಯಾಕ ಬಂದಿಲ್ಲಾ ಅಂತ ಕೇಳೋದ ಕೇಳಿ ನಂಗ ತಲಿಕೆಟ್ಟ ಹೋತ.
ಲಾಸ್ಟಿಗೆ ನಾ ಊಟಾ ಮಾಡಿ ಬರಬೇಕಾರ ನನ್ನ ಹೆಂಡತಿ ಮೌಶಿ ನಂಗ ಕರದ
“ಹೆಂಡ್ತಿ ಬಿಟ್ಟ ಬಂದಿ ತಿಳಿಯಂಗಿಲ್ಲಾ, ಬಾ ಇಲ್ಲೆ, ಅಕಿ ಪಾಲಿಂದ ಜಂಪರ್ ಪೀಸ್ ನೀನ ತೊಗೊಂಡ ಹೋಗ” ಅಂತ ಒಂದ ಜಂಪರ್ ಪೀಸ ನಂಗ ಉಡಿತುಂಬಿದ್ಲು ( ಕೊಟ್ಟಳು). ನನ್ನ ಪುಣ್ಯಾಕ್ಕ ಅರಷಣ ಕುಂಕಮಾ ಒಂದ ಹಚ್ಚಲಿಲ್ಲಾ. ನಂಗ ಒಂಥರಾ ಆತ, ಅವನೌನ ಯಾಕರ ನನ್ನ ಹೆಂಡ್ತಿನ್ನ ಬಿಟ್ಟ ಬಂದೇಪಾ ಅಂತ ಅನಿಸಿ ಬಿಡ್ತ.
ನಾನೂ ಸುಮ್ಮನ ಕೂಡಲಿಲ್ಲಾ, ಹೇಳಿ ಕೇಳಿ ಅವರ ಮನಿ ಅಳಿಯಾ, ಆ ಜಂಪರ ಪೀಸ ಬಿಚ್ಚಿ ನೋಡಿ
“ಇದ ನನ್ನ ಹೆಂಡತಿಗೆ ಸಾಲಂಗಿಲ್ಲಾ, ನೀವ ಇಟಗೋರಿ” ಅಂತ ವಾಪಸ ಕೊಟ್ಟ ಬಂದಿದ್ದೆ. ಬಹುಶಃ ಅಕಿ ಆ ಸಿಟ್ಟ ಇಟ್ಟ ನಮ್ಮವ್ವಗ ಹಿಂತಾ ಖಮ್ಮನ ಸೀರಿ ಕೊಟ್ಟ ಕಳಸಿದ್ಲೊ ಏನೋ?
ಆದ್ರು ಏನ ಅನ್ನರಿ ಈ ಸುಡಗಾಡ ಸೀರಿ ಕೋಡೊದ ಇಸಗೊಳೊದು ಮ್ಯಾಲೆ ಅವಕ್ಕ ಹೆಸರ ಇಡೋದ ಒಂದ ದೊಡ್ಡ ಹಣಗಲ ಬಿಡ್ರಿ….ಅಲ್ಲಾ ನಮಗ್ಯಾಕ ಬೇಕ ಬಿಡ್ರಿ ಹೆಣ್ಣಮಕ್ಕಳ ಸೀರಿ ಉಸಾಬರಿ ಆದ್ರು ಮೊನ್ನೆ ಹೋಳಿ ಹುಣ್ಣಮಿಗೆ ಬಣ್ಣಾ ಆಡಬೇಕಾರ ನನ್ನ ಹೆಂಡತಿ ಆ ಸುಡಗಾಡ ಸೀರಿ ಉಟಗೊಂಡ ಬಣ್ಣಾ ಆಡಿದ್ಲು ಆವಾಗ ಇಷ್ಟೇಲ್ಲಾ ಕಥಿ ನೆನಪಾತ ಅದಕ್ಕ ಈ ರಾಮಾಯಣ ಬರಿಬೇಕಾತ.

This entry was posted on Monday, June 2nd, 2014 at 4:35 am and is filed under ಅವಧಿ. You can follow any responses to this entry through the RSS 2.0 feed. You can leave a response, or trackback from your own site.

1 Comment

  1. Madhusudhan Varkhedi says:

    Khatarnaak!

    ... on July July 29th, 2016

Post a Comment