ನಾಳೆ ನೀ ಸತ್ತರ ಯಾರು ಬರಂಗಿಲ್ಲಾ……

ನಾ ಹಿಂಗ ಆಫೀಸಿಗೆ ಬಂದ ಇನ್ನೇನ ಸಿಸ್ಟಿಮ್ ಆನ್ ಮಾಡಬೇಕು ಅನ್ನೋದರಾಗ ನಮ್ಮ ಸುಬ್ಯಾಂದ ಫೋನ ಬಂತ. ನಂಗ ಅವಂದ ಫೋನ ಬಂದರ ಸಾಕ ಹೆದರಕಿನ ಬರತದ. ಯಾಕಂದರ ಅಂವಾ ೯೦% ಫೋನ ಮಾಡೋದ ಯಾರರ ಸತ್ತದ್ದ ಸುದ್ದಿ ಹೇಳಲಿಕ್ಕೆನ. ಆ ಸತ್ತೋರ ನಮಗ ಪರಿಚಯ ಇರಲಿ ಬಿಡಲಿ ಒಟ್ಟ ಅವರ ಹೆಸರ ನಾವ ಕೇಳೇವಿ ಅಂದರ ಸಾಕ ನಮಗ ಸುದ್ದಿ ಮುಟ್ಟಿಸಿ ಬಿಡೊಂವಾ. ಅಂವಾ ಹಂಗ ಬರೇ ಸುದ್ದಿ ಹೇಳಿ ಸುಮ್ಮನಿದ್ದರ ಮುಗದ ಹೋಗ್ತಿತ್ತ. ಆದರ ಅಂವಾ ಅಷ್ಟಕ್ಕ ಬಿಡತಿದ್ದಿಲ್ಲಾ. ’ ಅವರದ ಮಣ್ಣ ಎಷ್ಟ ಗಂಟೆಕ್ಕ, ಯಾ ಸುಡಗಾಡಗಟ್ಟಿ ಒಳಗ ಮಾಡ್ತಾರ’ ಎಲ್ಲಾ ಡಿಟೇಲ್ಸ ಕೊಟ್ಟ ಮ್ಯಾಲೆ ’ನೀ ಎಷ್ಟ ಗಂಟೇಕ್ಕ ಬರ್ತಿ’ ಅಂತ ಕೇಳಿ ಫೋನ ಇಡ್ತಿದ್ದಾ. ಒಂಥರಾ ಇವನ ಫೋನ ಬಂತಂದರ ನಮಗ ’ನಿಧನ ವಾರ್ತೆಗಳು’ ಕೇಳಿದಂಗ ಅನಸ್ತಿತ್ತ. ಹಿಂತಾ ಸುದ್ದಿಗೆಲ್ಲಾ ಯಾವಾಗಲೂ ಇವನ RSVP.
ಹಂಗ ನಮ್ಮ ಸುಬ್ಯಾ ಹುಟ್ಟಾ ಸಾಮಾಜಿಕ ಜೀವಿ. ಒಂಥರಾ ಸಮಾಜದಿಂದ – ಸಮಾಜಕ್ಕಾಗಿ- ಸಮಾಜಕ್ಕೋಸ್ಕರ ಬದಕತಾ ಇರೋ ಮನಷ್ಯಾ. ಹಿಂಗಾಗಿ ಅವಂಗ ಯಾರs ಸತ್ತರು ಇಂಪಾರ್ಟೆಂಟ. ಆಮ್ಯಾಲೆ ಇಂವಾ ಸತ್ತವರ ಮನ್ಯಾಗ ತಾನ ಮೊದ್ಲ ಹಾಜರ ಆಗಿ ತನ್ನ ಪ್ರೆಸೆನ್ಸ್ ಸತ್ತವರನ ಒಬ್ಬರನ ಬಿಟ್ಟ ಉಳದವರಿಗೆಲ್ಲಾ ಫೀಲ್ ಮಾಡಿಸೆ ಬಿಡ್ತಿದ್ದಾ. ಹಂಗ ಅವನ ಕಂಟ್ಯಾಕ್ಟ್ಸ ಭಾಳ ಛಲೋ ಇರ್ತಿದ್ವು ಹಿಂಗಾಗಿ ಯಾರರ ಸತ್ತರ ’ಮೊದ್ಲ ಸುಬ್ಯಾಗ ಹೇಳ್ರಿ ಅವಂಗ ಹೇಳಿದ್ರ ಅರ್ಧಾ ಹುಬ್ಬಳ್ಳಿಗೆ ಹೇಳಿದಂಗ’ ಅಂತಿದ್ದರು. ಇಂವಾ ಸತ್ತದ್ದ ಕನಫರ್ಮ ಆಗೋದ ತಡಾ ಆ ಮನಿ ಮಂದಿಗೆ ಒಂದ ಸರತೆ ಫಾರ್ಮಾಲಿಟಿಗೆ ಡೇಟ್ & ಟೈಮ ಆಫ್ ಫುನರೆಲ್ ಕನಫರ್ಮ ಮಾಡ್ಕೊಂಡವನ ಒಂದ ನೂರ- ಎರಡನೂರ ಎಸ್.ಎಮ್.ಎಸ್, ಒಂದ ಇಪ್ಪತ್ತ ಕಾಲ್ ಮಾಡಿ ಬಿಡ್ತಿದ್ದಾ. ಮುಂದ ಮುಕ್ತಿಧಾಮ ಬುಕ್ಕ ಮಾಡೋದ, ಹೆಣಾ ಒಯಲಿಕ್ಕೆ ಅಂಬುಲೆನ್ಸ್ ಬುಕ್ ಮಾಡೋದು, ಕಟಗಿ – ಚಿಮಣಿ ಎಣ್ಣಿ ವ್ಯವಸ್ಥಾ, ಅದರಾಗ ನಮ್ಮ ಬ್ರಾಹ್ಮರ ಮಂದಿ ಯಾರರ ಸತ್ತಿದ್ದರ ಇದ್ದ ಮಕ್ಕಳನ ಎಣಿಸಿ ಅವರಿಗೆ ಬ್ರಾಹ್ಮಣ ಸಂಘದಿಂದ ಪಂಜಿ, ಕುಳ್ಳು, ಬಿದಿರು, ಗಡಿಗಿ, ಎಲ್ಲಾ ತರಿಸಿ ಚಟ್ಟಾ ಕಟ್ಟೋದಿಂದ ಹಿಡದ ಎಳ್ಳು ನೀರು ಬಿಡೋ ತನಕ ಇವಂದs ಉಸ್ತುವಾರಿ. ಅಗದಿ ಯಾರರ ನೋಡಿದವರ ಇವಂಗೇನರ ಸತ್ತೋರ ಆಸ್ತಿ ಒಳಗ ಪಾಲ ಬರದಿಟ್ಟಾರೇನ ಅನಬೇಕ ಅಷ್ಟ ಹಚಗೊಂಡ ಮಾಡ್ತಿದ್ದಾ. ಅಷ್ಟಕ್ಕ ಮುಗಿತಿದ್ದಿಲ್ಲಾ ಇವನ ಜವಾಬ್ದಾರಿ, ಮುಂದ ಸತ್ತವರ ಪೈಕಿಯವರನ ಸುಡಗಾಡಗಟ್ಟಿಯಿಂದ ಮನಿಗೆ ಮುಟ್ಟಿಸಿ, ಅವರಿಗೆ ಊಟದ್ದ ವ್ಯವಸ್ಥಾ ಮಾಡಿ ಅವರ ಮನ್ಯಾಗ ಸತ್ತೋರದ ಒಂದ ಪಾಸ ಪೋರ್ಟ ಸೈಜ ಫೋಟೊ ಹುಡಕಿ ನಿಧನ ವಾರ್ತೆ ಸಂಬಂಧ ಒಂದ ಡ್ರಾಫ್ಟ ರೆಡಿ ಮಾಡಿ ಅವರದ ಸಹಿ ತೊಗೊಂಡ ಎಲ್ಲಾ ಪೇಪರಗೆ ಮುಟ್ಟಿಸಿ ಆಮ್ಯಾಲೆ ತನ್ನ ಮನಿಗೆ ಹೋಗೊಂವಾ.
ಹಂಗ ಮೊದ್ಲ ಇಂವಾ ಫೋನ ಮಾಡಿ ಹಿಂತಾವರ ಸತ್ತಾರ ಅಂದರ ಸಾಕ ಪೇಪರನವರ ಕಣ್ಣಮುಚ್ಚಿ ನಿಧನ ವಾರ್ತೆ ಒಳಗ ಫಸ್ಟ ಇಂವಾ ಹೇಳಿದವರ ಹೆಸರ ಹಾಕತಿದ್ದರ. ಆದರ ಒಂದ ಸರತೆ ಯಾರೊ ಇವನ ಹೆಸರ ಹೇಳಿ ಇವಂಗ ಸಿಗಸಲಿಕ್ಕೆ ಸುಳ್ಳ ಸುಳ್ಳ ತಮಗ ಆಗಲಾರದವರ ಪೈಕಿ ಸತ್ತಾರ ಅಂತ ಹೇಳಿ ಪೇಪರನಾಗ ಕೊಡಿಸಿ ಬಿಟ್ಟಿದ್ದರು. ಆಮ್ಯಾಲೆ ಪೇಪರನಾಗ ಯಾರದ ಸತ್ತಾರ ಅಂತ ನಿಧನ ವಾರ್ತೆಗಳು ಒಳಗ ಹೆಸರ ಬಂದಿತ್ತಲಾ ಅವರ ತಲಿ ಕೆಟ್ಟ ಪ್ರೆಸ್ಸಿಗೆ ಹೋಗಿ ’ ನಿಮಗ ಯಾರ ನಾ ಸತ್ತೇನಿ ಅಂತ ಹೇಳಿದರು, ನೀವು ಹೆಂಗ ಪ್ರಿಂಟ ಮಾಡಿದಿರಿ? ನಾನ ಇವತ್ತ ನಿಮ್ಮ ನಿಧನ ವಾರ್ತೆಗಳು ಒಳಗ ಬಂದಂವಾ’ ಅಂತ ದೊಡ್ಡ ರಾಮಾಯಾಣ ಆದಾಗಿಂದ ಈಗ ಯಾ ಪ್ರೆಸ್ಸನವರು ಇಂವಾ ಒರಲಿ ಹೇಳಿದರ ಸುದ್ದಿ ತೊಗೊಳಂಗಿಲ್ಲಾ, ಈಗೇನಿದ್ದರು ಇನ ರೈಟಿಂಗ ಅದು ನೀರ ಬಿಟ್ಟವರದ ಇಲ್ಲಾ ಬೆಂಕಿ ಇಟ್ಟವರದು ಸಹಿ ಇದ್ದರ ಇಷ್ಟ.
ಇನ್ನ ಹಿಂತಾ ಮನಷ್ಯಾ ಬೆಳಿಗ್ಗೆ ಬೆಳಿಗ್ಗೆ ಫೋನ ಮಾಡ್ಯಾನಲಾ ಅಂತ ನಾ ಹತ್ತ ಸರತೆ ನಮ್ಮ ಸರ್ಕಲನಾಗ ಯಾರ ಸಿರಿಯಸ್ ಇದ್ದರು, ಯಾರ ಇವತ್ತಿಲ್ಲಾ ನಾಳೆ ಅನ್ನೊ ಹಂಗ ಇದ್ದರು ಅಂತ ವಿಚಾರ ಮಾಡಿ ಫೋನ ಎತ್ತಿದೆ.
ನಾ ಅನ್ಕೊಂಡಂಗ ಅಂವಾ ಫೋನ ಎತ್ತೊ ಪುರಸತ್ತ ಇಲ್ಲದ
’ಲೇ, ಆಡ್ಯಾ…ಜೋಶ್ಯಾರ ಅಪ್ಪಾರ ಸತ್ತಾರ, ಹನ್ನೊಂದ ಗಂಟೆಕ್ಕ ಕೇಶ್ವಾಪುರ ಮುಕ್ತಿಧಾಮಕ್ಕ ಬಾ’ ಅಂತ ಹೇಳಿ ಫೋನ ಇಟ್ಟ ಬಿಟ್ಟಾ. ಅವಂಗ ಪಾಪ ಇನ್ನು ಎಷ್ಟ ಮಂದಿಗೆ ಹೇಳೊದ ಇತ್ತೋ ಏನೋ ನಂಗ ಯಾ ಜೋಶ್ಯಾರ ಅಪ್ಪ ಸತ್ತಾ ಅಂತ ಕೇಳಲಿಕ್ಕೂ ಅವಕಾಶ ಕೊಡಲಿಲ್ಲಾ.
ನಮ್ಮ ಸರ್ಕಲನಾಗ ನಾಲ್ಕ ಮಂದಿ ಜೋಶಿಗಳು, ಅದರಾಗ ಮೂರ ಮಂದಿ ಜೋಶ್ಯಾರ ಅಪ್ಪಾರ ೭೦ತ್ತ ದಾಟಿ ಇವತ್ತ ನಾಳೆ ಅನ್ನಲಿಕತ್ತಿದ್ದರು. ಇನ್ನ ನಾ ಯಾ ಜೋಶ್ಯಾಗ ಫೋನ ಮಾಡಿ
’ನಿಮ್ಮಪ್ಪ ಹೋದರಂತಲ್ಪಾ’ ಅಂತ ಕೇಳಲಿ ಅಂತ ವಿಚಾರ ಮಾಡಲಿಕತ್ತೆ. ಈ ಮಗಾ ನೋಡಿದರ ಪೂರ್ತಿ ಸುದ್ದಿನು ಹೇಳಂಗಿಲ್ಲಾ, ಮತ್ತ ಒಂದ ಜೋಶಿ ಹೋಗಿ ಇನ್ನೊಂದ ಜೋಶಿ ಆಗಿದ್ದರ ಏನ ಮಾಡಬೇಕ?
ಹಿಂದಕ ಒಂದ ಸರತೆ ಹಿಂಗ ಆಗಿತ್ತ, ನಮ್ಮ ದೋಸ್ತ ಪ್ರಶಾಂತ ರೋಣದನ ಅಪ್ಪ ಸತ್ತಾಗ ಈ ಮಗಾ ಎಲ್ಲಾರಿಗೂ ’ಪ್ರಶಾಂತವರ ಅಪ್ಪಾರ ತೀರ್ಕೊಂಡಾರ, ಲಗೂನ ಬರ್ರಿ’ ಅಂತ ಫೋನ ಮಾಡಿದ್ದಾ. ಒಂದಿಷ್ಟ ಮಂದಿ ಪ್ರಶಾಂತವರ ಅಪ್ಪಾ ಅಂದಕೂಡಲೇ ಅವರ ಪ್ರಶಾಂತ ಆಡೂರವರ ಅಪ್ಪಾ ಅಂತ ತಿಳ್ಕೊಂಡ ನಂಗ ಫೋನ ಮಾಡಿ ’ ಯಾವಾಗ ಆತು, ಎಷ್ಟ ಗಂಟೆಕ್ಕ, ಮುಂದಿಂದ ತಡಸನಾಗ ಮಾಡ್ತೀರೊ ಇಲ್ಲಾ ಹಂಪಿಗೆ ಹೋಗ್ತಿರೊ’ ಅಂತೇಲ್ಲಾ ಕೇಳಿದ್ದರು. ಹಂಗ ಆವಾಗ ನಮ್ಮಪ್ಪಗೂ ಸ್ವಲ್ಪ ಸಿರಿಯಸ್ ಇತ್ತು ಅವನು ಎಪ್ಪತ್ತ ದಾಟಿದ್ದ, ಪಾಪ ಅವರ ನಮ್ಮಪ್ಪನ ಅಂತ ತಿಳ್ಕೊಂಡ ನಂಗ ಫೋನ ಮಾಡಿದ್ದರು. ಹಂಗ ನಮ್ಮಪ್ಪಗ ಏನು ಆಗಿಲ್ಲಾ ಸತ್ತವರ ಪ್ರಶಾಂತ ರೋಣದವರ ಅಪ್ಪಾ ಅಂತ ತಿಳಿಸಿ ಹೇಳಿದ ಮ್ಯಾಲೆ ಪಾಪ ಅವರ ಸ್ವಾರಿ ಕೇಳಿ ’ ನಿಮ್ಮ ತಂದೆಯವರದ ಆಯುಷ್ಯ ವೃದ್ಧಿ ಆಗ್ತದ ತೊಗೊಳ್ರಿ’ ಅಂತ ಹೇಳಿದ್ದರು. ಅಲ್ಲಾ ಹಂಗ ನಮ್ಮಪ್ಪ ಇನ್ನೂ ಗಟ್ಟೆನ ಇದ್ದಾನ ಆ ಮಾತ ಬ್ಯಾರೆ. ಹಿಂಗ ಇಂವಾ ಸತ್ತವರದ ಸುದ್ದಿ ಹೇಳ್ಬೇಕಾರು ಪೂರ್ತಿ ಕರೆಕ್ಟ ಆಗಿ ಹೇಳ್ತಿದ್ದಿಲ್ಲಾ, ಯಾಕಂದರ ಇವಂಗ ಭಾಳ ಗಡಬಡಿ ಇರ್ತಿತ್ತ. ಇವಂಗ ಸತ್ತ ಸುದ್ದಿ ಹೇಳೊದರಾಗು ಕ್ರೆಡಿಟ ತೊಗೊಳೊ ಚಟಾ. ಯಾರರ ’ನಿಮಗ ಸುದ್ದಿ ಹೆಂಗ ಗೊತ್ತಾತು’ ಅಂತ ಕೇಳಿದರ ’ನಮಗ ಸುಬ್ಯಾ ಹೇಳಿದಾ’ ಅಂತನ ಹೇಳ್ಬೇಕ ಅನ್ನೋದ ಅವನ ವಿಚಾರ.
ಅಲ್ಲಾ ಮೊದ್ಲ ಹೇಳಿದ್ನೇಲ್ಲಾ ಸಮಾಜ ಜೀವಿ ಅಂತ ಹಿಂಗಾಗಿ ಎಲ್ಲಾದಕ್ಕೂ ಕ್ರೆಡಿಟ ಬೇಕ ಮತ್ತ್. ಹಂಗ ಕೆಲವೊಮ್ಮೆ ಅಂತು ಖಾಸ ಮಕ್ಕಳಿಗೆ ಸಹಿತ ಇವನ ’ನಿಮ್ಮಪ್ಪ ಸತ್ತಾ..ನಿಂಗಿನ್ನು ಗೊತ್ತಾಗಿಲ್ಲಾ’ ಅಂತ ಸುದ್ದಿ ಹೇಳಿದಂವಾ, ಅಷ್ಟ ಫಾಸ್ಟ ಅಪಡೇಟ ಇತ್ತ ಇವಂದ.
ಇನ್ನ ಇಂವಾ ಫೋನ ಮಾಡ್ಯಾನ ಅಂದರ ಏನ ಮಾಡಬೇಕಪಾ ಅಂತ ನಾ ವಿಚಾರ ಮಾಡಲಿಕತ್ತೆ. ಹಂಗ ನಾ ದಣೇಯಿನ ಫ್ಯಾಕ್ಟರಿಗೆ ಬಂದ ಕೂತೇನಿ ಮ್ಯಾಲೆ ಮಂಥ ಎಂಡ್ ಬ್ಯಾರೆ ಹಿಂಗ ಅವರಪ್ಪ ಸತ್ತ, ಇವರವ್ವ ಸತ್ಲು ಅಂತ ನೌಕರಿ ಬಿಟ್ಟ ಹೆಂಗ ಹೋಗಬೇಕು ಅಂತೇನಿ. ನಾ ಖರೇ ಹೇಳ್ತೇನಿ ಇಂವಾ ಏನೋ ತಪ್ಪದ ಊರಾಗ ಯಾರ ನಂಗ ಪರಿಚಯದವರ ಸತ್ತರು ಫೊನ ಮಾಡ್ತಾನ ಖರೆ, ನಾ ಮಾತ್ರ ಹತ್ತರಾಗ ಒಂದಕ್ಕ ಹೋಗಿರ್ತೇನಿ. ಅಲ್ಲಾ ನಮ್ಮಂಗ ಪ್ರೈವೇಟ ಒಳಗ ಕೆಲಸಾ ಮಾಡೋರಿಗೆ ಯಾರರ ಸತ್ತರು ಅನ್ನೋದ ತಡಾ ಅಲ್ಲೆ ಹೋಗಿ ಅತ್ತ, ಹೆಣಾ ಹೊತ್ತ, ಸುಡಗಾಡಗಟ್ಟಿಗೆ ಮುಟ್ಟಿಸಿ ಮೂರ ಸುತ್ತ ಹೊಡ್ಕೋತ ಕೂತರ ನಮ್ಮ ಆಫೀಸನಾಗ ನಮ್ಮ ಹೆಣಾ ಹೊರತಾರ ಇಷ್ಟ. ಇದನ್ನ ಆ ಮಗಗ ಹೇಳಿದರ ಅವಂಗ ತಿಳಿಯಂಗಿಲ್ಲಾ. ಮತ್ತ ನಮಗ ’ಮಗನ ನೀ ಯಾರ ಸತ್ತರು ಬರಂಗಿಲ್ಲಾ, ಹಿಂಗಾದರ ನಾಳೆ ನೀ ಸತ್ತರು ಯಾರು ಬರಂಗಿಲ್ಲಾ’ ಅಂತ ದಮ್ಮ ಕೊಡ್ತಾನ. ಅಲ್ಲಾ ಹಂಗ ನಾಳೆ ನಾ ಸತ್ತ ಮ್ಯಾಲೆ ಯಾರ ಬಂದರೇನ ಬಿಟ್ಟರೇನ ಬಿಡ್ರಿ. ಆದರೂ ಯಾರರ ಸಾಯೋದ ತಡಾ ಅವರನ ಮುಕ್ತಿಧಾಮಕ್ಕ ಅಟ್ಟೋದ ಒಂದ ಸಾಮಾಜಿಕ ಕೆಲಸ ಅಂತ ನಂಗೇನ ಅನಸಂಗಿಲ್ಲಾ.
ಹಂಗ ನಂಗ ಖರೇ ಹೇಳ್ತೇನಿ ಯಾರರ ಸಂಜಿ ಆರ ಗಂಟೆ ಮ್ಯಾಲೆ ಸತ್ತರ ಇಲ್ಲಾ ಸಂಡೆ ಸತ್ತರ ಭಾಳ ಖುಷಿ. ಹಂತಾ ಟೈಮನಾಗ ನಾನು ಅಗದಿ ಭಾರಿ ಜವಾಬ್ದಾರಿ ತೊಗೊಂಡ ಏನ ಮ್ಯಾಲೆ ಹೋದವರ ನನ್ನ ಹೆಸರಿಲೆನೂ ಅರ್ಧಾ ಎಕರೆ ಹೊಲಾ ಬರದ ಕೊಟ್ಟಾರೇನೋ ಅನ್ನೋರಗತೆ ಓಡಾಡಿ ಮಣ್ಣಮಾಡಿ ಬರ್ತೇನಿ ಆದರ ಹಿಂಗ ಹೊತ್ತಿಲ್ಲದ ಹೊತ್ತಿನಾಗ ಸತ್ತರ ಹೆಂಗ ಅಂತೇನಿ.
ಅಲ್ಲಾ ಸಾಯೋರಿಗೆ ಏನ ಬಿಡ್ರಿ ಪಾಪ ಅದೇನ ಅವರ ಕೈಯಾಗಿಂದ ಅಲ್ಲಾ ಏನ ಅಲ್ಲಾ ಆದರ ನಮ್ಮ ಸುಬ್ಯಾನಂತಾವರ ನಡಕ ಹಿರೇತನಾ ಮಾಡಿ ನಮಗ ತ್ರಾಸ ಮಾಡ್ತಾರ ಇಷ್ಟ.ಮತ್ತ ಅಷ್ಟರಾಗ ಯಾರ ಸತ್ತಿರ್ತಾರ ಇಲ್ಲಾ, ಯಾರ ಮನ್ಯಾಗ ಸತ್ತಿರ್ತಾರಲಾ ಅವರ ನಾ ಹೋಗಲಾರದ್ದಕ್ಕ ಏನ ಅನ್ಕೊಂಡಿರಂಗಿಲ್ಲಾ ಆದರ ಇಂವಾ ಅದನ್ನ ಲೆಕ್ಕಾ ಇಟ್ಟ ಇಟ್ಟ ನಮಗ ’ನಾಳೆ ನೀ ಸತ್ತರ ಯಾರು ಬರಂಗಿಲ್ಲ ಮಗನ’ ಅಂತ ಮಾತ ಮಾತಿಗೆ ಅಂತಿರ್ತಾನ.
ಕಡಿಕೆ ನಾ ಯಾ ಜೋಶ್ಯಾ ಅಂತ ಕನಫರ್ಮ ಮಾಡ್ಕೊಂಡ ಮುಕ್ತಿಧಾಮಕ್ಕ ಹೋಗೊದರಾಗ ಸತ್ತವರ ಸ್ವರ್ಗ ಸೇರಿ, ಅವರ ಚಿತಾ ಭಸ್ಮ ಆಗಿ ಅವರ ಆತ್ಮಕ್ಕ ಶಾಂತಿ ಕೋರಲಿಕ್ಕೆ ಅಲ್ಲಿ ಸೇರಿದ ನಾಲ್ಕ ದು:ಖ ತಪ್ತ ಜನರನ್ನ ಉದ್ದೇಶಿಸಿ ನಮ್ಮ ಸುಬ್ಯಾನ ಮಾತಾಡಲಿಕತ್ತಿದ್ದಾ. ಇವಂಗ ಅದೊಂದ ಕೆಟ್ಟ ಚಟಾ ಇತ್ತ, ಒಟ್ಟ ಯಾರ ಸತ್ತರು ಅಲ್ಲೇ ಅವರ ದೇಹಕ್ಕ ಬೆಂಕಿ ಇಡೊ ಪುರಸತ್ತ ಇಲ್ಲದ ಬಂದ ಜನನ್ನೇಲ್ಲಾ ಸೇರಿಸಿ ಸತ್ತವರ ಬಗ್ಗೆ ಇಂವಾ ಒಂದ ನಾಲ್ಕ ಮಾತ ಮಾತಾಡಿ ಅವರ ಆತ್ಮಕ್ಕ ಎರಡ ನಿಮಿಷ ಮೌನ ಆಚರಿಸಿ ಆಮ್ಯಾಲೆ ಎಲ್ಲಾರನೂ ಮುಕ್ತಿಧಾಮದಿಂದ ರೀಲೀಸ ಮಾಡ್ತಿದ್ದಾ. ಮೊದ್ಲ ಹೇಳಿದ್ನೇಲ್ಲಾ ಅಂವಾ ಸಾಮಾಜಿಕ ಮನಷ್ಯಾ ಅಂತ, ಹಿಂಗ ಅನಾಯಸ ಐವತ್ತ- ಅರವತ್ತ ಮಂದಿ ಸಿಕ್ಕರ ಸಾಕ ಒಂದ ಭಾಷಣ ಬಿತ್ತ…ಅದ ಮುಕ್ತಿಧಾಮನರ ಇರಲಿ, ಮುನ್ಸಿಪಾಲ್ಟಿನರ ಇರಲಿ.
ನಾ ಏನಪಾ ಇದ ನಾ ಬರೋದರಾಗ ಎಲ್ಲಾ ಮುಗದ ಬಿಡ್ತಲ್ಲಾ ಅಂತ ಜೋಶ್ಯಾಗ ಇಷ್ಟ ಭೇಟ್ಟಿ ಆಗಿ ಅಲ್ಲಿಂದ ದಾಟಬೇಕು ಅನ್ನೋದರಾಗ ಇಂವಾ ಎದರಿಗೆ ಸಿಕ್ಕ ಬಿಟ್ಟಾ
“ಏನಲೇ ಬರೋದ, ಎಲ್ಲಾ ಮುಗದ ಮ್ಯಾಲೆ ಬಂದೇಲಾ, ಮಗನ ನೀ ಹಿಂಗ ಮಾಡಿದರ ನಾಳೆ ನೀ ಸತ್ತಾಗ ಯಾರು ಬರಂಗಿಲ್ಲ ನೋಡ” ಅಂದ ಹೋದಾ. ಏನ್ಮಾಡ್ತೀರಿ?
ನಂಗ ಖರೇನ ತಲಿ ಕೆಟ್ಟಿತ್ತ..’ಲೇ ನಾಳೆ ನೀ ಸತ್ತರ ಬರ್ತೇನ್ಲೇ…ಹಿಂಗಾಗಿ, ನೀ ಒಬ್ಬಂವ ನಾ ಸತ್ತಾಗ ಬಂದರ ಸಾಕ ನನ್ನ ಕಾರ್ಯ ಎಲ್ಲಾ ಸರಳ ಆಗ್ತದ” ಅಂತ ಅನ್ನೊಂವ ಇದ್ದೆ ಮತ್ತ ಎಲ್ಲೆ ಅವನ ಜೊತಿ ವರಟ ಹರಿಯೋದ ಅಂತ ಸೀದಾ ಆಫೀಸ ಹಾದಿ ಹಿಡದೆ. ಅಲ್ಲಾ ಹಂಗ ನಾ ಈಗ ಸತ್ತರ ಸುದ್ದಿ ಆಗೋ ಅಷ್ಟ ಫೇಮಸ್ ಆಗೇನಿ, ಹಂಗ ಸುದ್ದಿ ಗೊತ್ತಾದರ ಜನಾ ಏನ ನಮ್ಮ ಸುಬ್ಯಾ ಕರಿಲಿಲ್ಲಾ ಅಂದರು ಬರ್ತಾರ ಆ ಮಾತ ಬ್ಯಾರೆ.

This entry was posted on Monday, December 22nd, 2014 at 9:14 am and is filed under ಅವಧಿ. You can follow any responses to this entry through the RSS 2.0 feed. You can leave a response, or trackback from your own site.

1 Comment

  1. PG says:

    I liked your friend’s chataaa.

    ... on July January 26th, 2015

Post a Comment