ಯಾರರ ಆರತಿ ಹಾಡ ಹೇಳ್ರೆ ನಮ್ಮವ್ವ…

ಮೊನ್ನೆ ಶ್ರಾವಣ ಮಾಸದಾಗ ನನ್ನ ಹೆಂಡತಿ ಜೀವಾ ತಿಂದ ತಿಂದ ’ನನ್ನ ಕಸೀನ ಮನಿ ಒಳಗ ಸತ್ಯನಾರಾಯಣ ಪೂಜಾಕ್ಕ ದಂಪತ್ತ ಕರದಾರ ಹೋಗೊಣ ಬರ್ರಿ, ನನ್ನ ಜೊತಿ ಬರೋರ ಯಾರಿಲ್ಲಾ ನೀವ ಬರ್ರಿ’ ಅಂತ ಗಂಟ ಬಿದ್ದ ನನ್ನ ಕರಕೊಂಡ ಹೋದ್ಲ. ಅಲ್ಲಾ ದಂಪತ್ತ ಕರದಾರ ಅಂತನೂ ಹೇಳ್ತಾಳ ಮತ್ತ ನನ್ನ ಜೊತಿ ಬ್ಯಾರೆ ಯಾರ ಬರೋರರಿಲ್ಲಾ ಅಂತನೂ ಅಂತಾಳಲಾ ಹುಚ್ಚಿ ಅನಸ್ತ. ಹಂಗ ದಂಪತ್ತಂತ ಕರದರ ಅಕಿ ಜೊತಿ ನಾನ ಹೋಗಬೇಕಲಾ? ಮತ್ಯಾರನರ ಕರಕೊಂಡ ಹೋಗೊಕಿ ಇದ್ಲೋ ಏನೊ ಇಕಿ ಅನಸ್ತ.
ಹಂಗ ನಮ್ಮ ಮನ್ಯಾಗ ಪೂಜಾ ಪ್ರವಚನಕ್ಕೇಲ್ಲಾ ಅತ್ತಿ ಸೊಸಿ ಜೊತಿಲೆ ಹೋಗ್ತಾರ ಆದರ ಅವತ್ತ ನಮ್ಮವ್ವನ್ನ ತವರಮನಿ ಕಡೆನೂ ಒಂದ ಫಂಕ್ಶನ್ ಇದ್ದದ್ದಕ್ಕ ಅಕ್ಕಿ ಆ ಕಡೆ ಜಿಗದಿದ್ಲು. ಅದಕ್ಕ ಪಾಪ ನನ್ನ ಹೆಂಡತಿ ಒಬ್ಬೊಕಿನ ಆಗಿದ್ಲು. ಇನ್ನ ತವರಮನಿ ಕಡೆ ಫಂಕ್ಶನ್ ಅಂದ್ರ ಯಾ ಹೆಣ್ಣಮಕ್ಕಳು ತಪ್ಪಸಂಗಿಲ್ಲ ಬಿಡ್ರಿ, ಅವರ ಕರೆಯೋದ ಒಂದ ಸಾಕ ರೈಟ ಅಂತ ರೆಡಿ ಆಗೇ ಬಿಡ್ತಾರ. ಹಿಂಗಾಗಿ ದಂಪತ್ತ ಅನ್ನೊದಕಿಂತ ನನ್ನ ಹೆಂಡತಿಗೆ ಯಾರರ ಜೊತಿ ಬೇಕಾಗಿತ್ತ ಇಷ್ಟ. ಮ್ಯಾಲೆ ಅವತ್ತ ಸಂಡೆ ಬ್ಯಾರೆ ಇತ್ತ, ನಾ ಮನ್ಯಾಗ ಇದ್ದೆ.
ಇನ್ನ ನಾ ಬರಂಗಿಲ್ಲಾ ಅಂದ್ರು ನನ್ನ ಹೆಂಡತಿ ಸತ್ಯನಾರಯಣ ಪೂಜಾಕ್ಕ ಒಲ್ಲೆ ಅನ್ನಬಾರದು ಅಂತ ಡಿವೋಶನಲ್ ಬ್ಲ್ಯಾಕ ಮೇಲ ಮಾಡಿ ಕಟಗೊಂಡ ಹೋದ್ಲು. ಹೋಗಲಿ ಬಿಡ ಹೋದರಾತು ಒಂದ ಊಟsರ ಹೊರಗ ಹೋಗ್ತದ, ’ಊಟ ಹೋದರ ಕೋಟಿ ಲಾಭ’ ಅಂತಾರ ಅಂತ ನಾ ಅಗದಿ ಊಟದ ಹೊತ್ತಿಗೆ ಅವರ ಮನಿಗೆ ಹೋದರು ಇನ್ನು ಶ್ರೀಸತ್ಯನಾರಾಯಣ ಕಥಿದ ಐದನೇ ಅಧ್ಯಾಯ ನಡದಿತ್ತ. ಕಡಿಕೆ ಕಥಿ ಮುಗಿಸಿ ಮಂಗಳಾರತಿ, ನೇವಿದ್ಯಾ ಮಾಡಿ ಸತ್ಯನಾರಾಯಣಗ ಮೇನ ಆರತಿ ಶುರು ಮಾಡಿದರು.
ನನ್ನ ಹೆಂಡತಿ ಕಸೀನ್ ಒಂಬತ್ತ ವಾರಿ ಸೀರಿದ ಒಂದ ಎಂಡ ಕಾಲಾಗ ಸಿಗಸಿಕೊಂಡ ಆರತಿ ಹಿಡಕೊಂಡ ನಿಂತ್ಲು. ಅಕಿ ಜೊತಿ ಆರತಿ ಹಿಡಿಲಿಕ್ಕೆ ಇನ್ನೊಬ್ಬರ ಯಾರರ ಬೇಕಾಗಿತ್ತ, ಪಾಪ ಅವರತ್ತಿ ತಾ ಹಿಂದ ನಿಂತಲ್ಲಿಂದsನ ಒಂದಿಬ್ಬರ ಮುತ್ತೈದಿಯರಿಗೆ
“ಆರತಿ ಹಿಡಿ ಬರ್ರೇ ನಮ್ಮವ್ವ, ಇನ್ನೊಬರ ಯಾರರ ಬರ್ರಿ” ಅಂತ ಕರದ ಇನ್ನೊಬ್ಬೊಕಿ ಕಡೆ ಆರತಿ ಹಿಡಸಿದರು. ಪಾಪ ಅವರತ್ತಿ ಆರತಿ ಹಿಡಿಯೊಹಂಗ ಇರಲಿಲ್ಲಾ ಹಿಂಗಾಗಿ ಬ್ಯಾರೆಯವರನ ಕರಿಲಿಕತ್ತಿದ್ಲು. ನನ್ನ ಹೆಂಡತಿ ಹಿಂದ ನಿಂತೊಕಿ ತಾ ಆರತಿ ಹಿಡಿಲಿಕ್ಕೆ ಹೊಂಟಿದ್ಲು, ನಾನs ’ನೀ ಬ್ಯಾಡ ಸುಮ್ಮನ ಇಲ್ಲೆ ನಿಲ್ಲ, ನೀ ಮುಂದ ಹೋಗಿ ಆರತಿ ಹಿಡಕೊಂಡ ನಿಂತರ ಸತ್ಯನಾರಾಯಣ ಪೂರ್ತಿ ಕವರಾಗಿ ಬಿಡ್ತಾನ ಆಮ್ಯಾಲೆ ಹಿಂದಿನವರ ಯಾರಿಗೆ ಅಕ್ಕಿ ಕಾಳ ಹಾಕಬೇಕ’ ಅಂತ ನಾನ ಬಿಡಿಸಿದೆ.
ಇತ್ತಲಾಗ ಇಬ್ಬರ ಆರತಿ ಹಿಡಿಯೋದ ತಡಾ ಭಟ್ಟರ ಮಂತ್ರಾ ನುಂಗಕೋತ ಗಂಟಿ ಬಾರಸಲಿಕತ್ತರು. ಆರತಿ ಹಾಡ ಇಲ್ಲದ ಆರತಿ ನಡಿಲಿಕತ್ತ. ಅದನ್ನ ನೋಡಿ ಅವರತ್ತಿಗೆ ಸಿಟ್ಟ ಬಂದ
“ಯಾರರ ಆರತಿ ಹಾಡ ಹೇಳ್ರೆ ನಮ್ಮವ್ವ..” ಅಂತ ಜೋರ ಮಾಡಿದರು ಆದರ ಅಲ್ಲಿ ಇದ್ದ ಒಬ್ಬ ಮುತ್ತೈದಿನು ಪಿಟ್ಟ ಅನ್ನಲಿಲ್ಲಾ. ಅಲ್ಲಿ ಇದ್ದ ಒಂದ ಎಂಟತ್ತ ಮುತ್ತೈದರ ಒಳಗ ಎಲ್ಲಾರು ಈಗಿನ್ನ ಜನರೇಶನ್ ಫ್ರೆಶ್ ಮುತ್ತೈದಿಯರು. ಒಬ್ಬರಿಗೂ ಸರಿಯಾಗಿ ಆರತಿ ಹಾಡ ಬರಂಗಿಲ್ಲಾ. ಅಲ್ಲಾ ಇವರೇಲ್ಲಾ ಬೆಳಿಗ್ಗೆ ಎದ್ದ ತಮ್ಮ ತಮ್ಮ ಮನ್ಯಾಗ ದೇವರಮುಂದ ದೀಪಾ ಹಚ್ಚಬೇಕಾರ ಒಂದ ಮಂತ್ರಾ, ಹಾಡು ಹಾಡಲಾರದವರು ಇನ್ನ ಹಿಂಗ ಸಾರ್ವಜನಿಕವಾಗಿ ಆರತಿ ಹಾಡ ಹಾಡಂದರ ಏನ ಹಾಡತಾರ ತಲಿ.
ಒಬ್ಬರು ಹಾಡ ಹಾಡಲಿಲ್ಲಾ, ’ನೀ ಹಾಡ’, ’ನೀ ಹಾಡ’, ’ನೀ ಛಲೋ ಹೇಳ್ತಿ, ನಿಂಗ ನಿಮ್ಮತ್ತಿ ಕಲಿಸಿಕೊಟ್ಟರ್ತಾರವಾ, ನೀನ ಹೇಳ’ ಅಂತ ಒಬ್ಬರ ಮ್ಯಾಲೆ ಒಬ್ಬರ ಹಾಕಲಿಕ್ಕೆ ಹತ್ತರ ಹೊರತು ಒಬ್ಬರು ಆರತಿ ಹಾಡ ಹೇಳಲಿಕ್ಕೆ ಶುರು ಮಾಡಲಿಲ್ಲಾ.
ಪಾಪ ಆ ಭಟ್ಟಗರ ಗಂಟಿ ಬಾರಿಸಿ ಬಾರಿಸಿ ಕೈ ಸೋತ ಬಿಟ್ಟಿತ್ತ, ಅಂವಾ ತಲಿ ಕೆಟ್ಟ ’ಲಗೂನ ಹೇಳ್ರಿ, ಅದಕ್ಯಾಕ ನಾಚಗೋತಿರಿ, ನಿಮಗೇನ ಒಗಟ ಹಚ್ಚಿ ನಿಮ್ಮ ಗಂಡನ ಹೆಸರ ಹೇಳ ಅಂದೇವಿನ’ ಅಂತ ಜೋರ ಮಾಡಲಿಕತ್ತಾ.
ಅಷ್ಟರಾಗ ಒಬ್ಬೊಕಿ ಗಂಟಲಾ ಸಡಲ ಮಾಡ್ಕೊಂಡ ನಂಗ ಸತ್ಯನಾರಯಣನ ಆರತಿ ಹಾಡ ಬರಂಗಿಲ್ಲಾ ಅಂದ್ಲು. ಕಡಿಕೆ ನನ್ನ ಹೆಂಡತಿ ಕಸೀನನ ಅತ್ತಿ ತಲಿಕೆಟ್ಟ ’ಲಕ್ಷ್ಮೀ ಹಾಡ ಹಾಡಿದರು ನಡಿತದ ತೊಗೊವಾ, ಅದನ್ನರ ಹೇಳು’ ಅಂದರು.
ಅಕಿ ತಲಿ ತುಂಬ ಗಿಡ್ಡ ಸೆರಗ ಹೊತಗೊಂಡ
“ಬೆಳಗುವಿನಾರುತಿಯ ಲಕುಮಿಗೆ…
ಕೋಲ್ಹಾಪುರದೊಳು ವಾಸಿಪ ದೇವಿಗೆ
ಮುತ್ತಿನ ತಟ್ಟೆಯೋಳು ರತ್ನದಾರುತಿ ಪಿಡಿದು…
ಅಚ್ಯುತ ನರಸಿಂಹನ ರಾಣಿಗೆ
ಬೆಳಗುವಿನಾರುತಿಯ ಲಕುಮಿಗೆ…”
ಅಂತ ಹಿಂಗ ಶುರು ಮಾಡಿದಂಗ ಮಾಡಿ ಒಂದ ಪ್ಯಾರ ಹೇಳಿ ನಂಗ ಇಷ್ಟ ಬರೋದ ಅಂತ ನಿಲ್ಲಿಸಿಬಿಟ್ಟಳು.
ಅಷ್ಟ ಅನ್ನೋದರಾಗ ಭಟ್ಟಗ ಗಂಟಿ ಬಾರಿಸಿ ಬಾರಿಸಿ ರಗಡ ಆಗಿತ್ತ ಅದರಾಗ ಇಕಿ ಹಾಡ ಕೇಳಿ ಎಲ್ಲರ ಸಾಕ್ಷಾತ ಲಕ್ಷ್ಮಿನ ಪ್ರತ್ಯಕ್ಷ ಆಗಿ ಗಿಗ್ಯಾಳ ಅಂತ ಅಂವಾ ಭಡಾ ಭಡಾ
“ಓಂ ಸ್ವಸ್ತಿ, ಸಾಮ್ರಾಜ್ಯಂ…..ಭೋಜ್ಯಂ….ಸ್ವಾರಾಜ್ಯಂ…..ವೈರಾಜ್ಯಂ…..” ಅಂತ ಹೇಳಿ ಅಕ್ಕಿ ಕಾಳ ಹಾಕಿಸಿ ’ನೇವಿದ್ಯಾ ಮಾಡಿ, ಎಲಿ ಹಾಕರಿ ಇನ್ನ ಅಂತ ಎಲ್ಲಾರನೂ ಎಬಿಸಿ ಬಿಟ್ಟಾ.
ನನಗ ಅವರೇಲ್ಲಾ ನೀ ಆರತಿ ಹಾಡ ಹಾಡ, ನೀ ಹಾಡು ಅಂತ ಅನ್ನಬೇಕಾರ ಎಲ್ಲೆ ನನ್ನ ಹೆಂಡತಿ ಕಸೀನ ಇಕಿಗೆ ನೀನ ಹಾಡ ಅಕ್ಕಾ ಅಂತಾಳೇನೊ ಅಂತ ಅನ್ಕೊಂಡಿದ್ದೆ ಆದರ ಯಾರು ನನ್ನ ಹೆಂಡತಿಗೆ ಮಾತ್ರ ಹೇಳಲಿಲ್ಲಾ. ಅದಕ್ಕ ಕಾರಣನು ಅದ.
ಇದ ಒಂದ ಹದಿನಾಲ್ಕ ವರ್ಷದ ಹಿಂದಿನ ಮಾತ ಇರಬೇಕ, ನಂದ ಹೊಸ್ದಾಗಿ ಲಗ್ನ ಆಗಿ ಮರದಿವಸ ನಮ್ಮ ಮನ್ಯಾಗು ಹಿಂಗ ಸತ್ಯನಾರಾಯಣ ಪೂಜಾ ಇತ್ತ. ಅವತ್ತಂತು ಮನಿ ತುಂಬ ಹಿರೇಮನಷ್ಯಾರಿದ್ದರು ಆದರು ಆರತಿ ಹಾಡ ಹೇಳಬೇಕಾರ ಎಲ್ಲಾರು ’ಅಯ್ಯ ಹೊಸಾ ಮದು ಮಗಳ ಹಾಡಲಿ ತಡಿರಿ, ಹೆಂಗ ಹಾಡ್ತಾಳ ನೋಡೊಣಂತ’ ಅಂತ ಗಂಟ ಬಿದ್ದರು. ಅದರಾಗ ನಮ್ಮವ್ವಗ ಲಗ್ನದಾಗ ಬೀಗರಿಗೆ ಜೋರ ಮಾಡಿ ಮಾಡಿ ಗಂಟ್ಲ ಬ್ಯಾರೆ ಹಿಡದಿತ್ತ ಹಿಂಗಾಗಿ ಅಕಿನೂ ಸೊಸಿನ ಹಾಡ್ಲಿ ಬಿಡ ಅಂತ ಸುಮನಾಗಿದ್ಲು. ಇಲ್ಲಾಂದರ ಹಂಗ ಅಕಿ ಆರತಿ ಹಾಡ ಹೇಳಲಿಕ್ಕೆ ಚಾನ್ಸ ಸಿಕ್ಕರ ಒಟ್ಟ ಬಿಡೋಕಿನ ಅಲ್ಲಾ.
ಅವತ್ತ ನಮ್ಮಕಿನು ಹಿಂಗ ನಂಗ ಸತ್ಯನಾರಾಯಣನ ಹಾಡ ಬರಂಗಿಲ್ಲಾ ಅಂದಾಗ ನಮ್ಮಜ್ಜಿ
“ಯಾವದರ ಹಾಡ ಹೇಳ, ಲಕ್ಷ್ಮಿ ಹಾಡ ಬಂದರ ಅದನ್ನ ಹಾಡು, ಒಟ್ಟ ಆರತಿ ಹಾಡ ಹಾಡಿದರ ಸಾಕು” ಅಂದ್ಲು. ನನ್ನ ಹೆಂಡತಿ ಯಾ ಮೂಡನಾಗ ಇದ್ಲೊ ಏನೊ ಅದರಾಗ ಅಕಿಗೆ ರಾತ್ರಿ ಪ್ರಸ್ಥದ್ದ ಬ್ಯಾರೆ ಟೆನ್ಶನ್ ಇತ್ತ ಕಾಣತದ ಭಡಾ, ಭಡಾ ನನ್ನ ಕಿವ್ಯಾಗ ’ನಂಗ ಆರತಿ ಹಾಡ ಬರಂಗಿಲ್ಲಾ, ಭಾರತಿ ಹಾಡ ಬರತದ’ ಅಂದ್ಲು. ನಂಗ ಭಡಕ್ಕನ ತಿಳಿಲಿಲ್ಲಾ, ’ಯಾ ಭಾರತಿ ಹಾಡಲೇ’ ಅಂದೆ. ಅದsರಿ ’ ನೀ ತಂದ ಕಾಣಿಕೆ ನಗೆ ಹೂ ಮಾಲಿಕೆ…ನಾ ತಂದ ಕಾಣಿಕೆ ಅನುರಾಗ ಮಾಲಿಕೆ’ಭಾರತಿ ಅಂದ್ಲು.
ನಂಗ ತಲಿ ಕೆಟ್ಟತ ಇಲ್ಲೇ ನಾ ಗಂಟಿ ಹಿಡಕೊಂಡ ಒಂದ ಸಮನ ಬಾರಸ್ಗೋತ ನಿಂತೇನಿ ಇಕಿ ನೋಡಿದರ ಆರತಿ ಹಾಡ ಅಂದರ ಮಶ್ಕಿರಿ ಮಾಡ್ತಾಳಲಾ ಅಂತಾ ಅಕಿಗೆ
“ಲೇ ಹುಚ್ಚಿ, ಅವರ ಹೇಳಿದ್ದು ದೇವರ ಲಕ್ಷ್ಮೀ, ಮತ್ತ ದೇವರಿಗೆ ಆರತಿ ಮಾಡತಾರಲಾ ಆ ಆರತಿ..ಬೆಂಕಿಯ ಬಲೆ ಒಳಗಿನ ’ಬಿಸಿಲಾದರೇನು ಮಳೇಯಾದರೇನು’ ಆ ಲಕ್ಷ್ಮೀನೂ ಅಲ್ಲಾ ಎಡಕಲ ಗುಡ್ಡದಾಗಿನ ’ಸನ್ಯಾಸಿ..ಸನ್ಯಾಸಿ..ಅರ್ಜುನ ಸನ್ಯಾಸಿ, ಹುಸಿನಗೆಯ ಹೊರಸೂಸಿ ಬಂದಾ ಕಳ್ಳ ವೇಷ ಧರಿಸಿ ’ಆರತಿನೂ ಅಲ್ಲಾ” ಅಂತ ಬೈದ ನಾ ನಮ್ಮ ಅತ್ತಿಗೆ
“ನಿಮ್ಮ ಮಗಳಿಗೆ ಏನರಿ, ಒಂದ ಆರತಿ ಹಾಡ ಸಹಿತ ಬರಂಗಿಲ್ಲಾ, ನೀವ ಹಾಡರಿ ಲೇಟಾಗೇದ” ಅಂತ ಆರತಿ- ಮಂಗಳಾರತಿ ಮುಗಿಸಿದ್ದೆ. ಅವತ್ತ ಲಾಸ್ಟ ಮುಂದೆಂದು ನಮ್ಮವ್ವ ನನ್ನ ಹೆಂಡತಿಗೆ ’ಒಂದ ಆರತಿ ಹಾಡ ಹಾಡವಾ’ಅಂತ ಇವತ್ತಿಗೂ ಹೇಳಿಲ್ಲಾ.
ಅಲ್ಲಾ ಹಂಗ ನಾ ಹೇಳೊದ ನಿಮಗ ಮಸ್ಕಿರಿ ಅನಸಬಹುದು, ಇವತ್ತ ಖರೇನ ಎಷ್ಟೊಮಂದಿ ಮನ್ಯಾಗ ಆರತಿ ಹಾಡ ಹಾಡಲಿಕ್ಕೆ ಬರಲಾರದ ಮುತೈದಿಯರ ಇದ್ದಾರ ಅದರಾಗ ಈ ಸಾಫ್ಟವೇರ ಸೊಸೆಂದರ ಅಂತು ಮನಿಗೆ ಅರಿಷಣ ಕುಂಕಮಕ್ಕ ಬಂದ ಮುತ್ತೈದಿಯರ ಕಡೇನ ಆರತಿ ಹಾಡು ಹಾಡಿಸಿ ಆಮ್ಯಾಲೆ ಒಂದ ಹತ್ತ ರೂಪಾಯಿ ದಕ್ಷೀಣಿ ಜಾಸ್ತಿ ಕೊಟ್ಟ ಕಳಸ್ತಾರ. ಏನ ಕಾಲ ಬಂತೊ ಏನೊ, ಹಿಂಗಾದರ ಮುಂದಿನ ಪಿಳಿಗೆ ಜನಾ ಎಲ್ಲೆ ನಮ್ಮ ಸಂಸ್ಕೃತಿ ಸಂಪ್ರದಾಯಕ್ಕ ಮಂಗಳಾರತಿ ಮಾಡ್ತಾರೊ ಅಂತ ಖರೇನ ಚಿಂತಿ ಹತ್ತಿ ಬಿಟ್ಟದ.
ಅನ್ನಂಗ ನಿಮಗ್ಯಾರಿಗರ ಆರತಿ ಹಾಡ ಬರತಿದ್ದ ನಂಗ ಒಂದ ಸ್ವಲ್ಪ ಮೇಲ ಮಾಡರಿ, ನನ್ನ ಹೆಂಡತಿಗೆ ಕಲಿಸಿ ಕೊಡಬೇಕು. ಅದರಾಗ ನಮ್ಮವ್ವಗ ಬ್ಯಾರೆ ವಯಸ್ಸಾತು. ಮ್ಯಾಲೆ ಅಕಿ ಏನ ಸೊಸಿಗೆ ಕಲಸಿ ಹೋಗೊ ಹಂಗ ಕಾಣವಲ್ತ, ಇನ್ನ ನಾನ ಆರತಿ ಹಾಡ ಹೇಳಿ ಕೊಡ್ತೇನಿ. ನಾ ಹೇಳಿದ್ದ ದೇವರ ಆರತಿ ಹಾಡ ಮತ್ತ…’ಈ ಶತಮಾನದ ಮಾದರಿ ಹೆಣ್ಣು..ಸ್ವಾಭಿಮಾನದ ಸಾಹಸಿ ಹೆಣ್ಣು’ ಆ ಆರತಿ ಅಲ್ಲಾ.

This entry was posted on Monday, October 27th, 2014 at 4:16 am and is filed under ಅವಧಿ. You can follow any responses to this entry through the RSS 2.0 feed. You can leave a response, or trackback from your own site.

4 Comments

 1. Abhishek R Kulkarni says:

  Khare helod nodripa… aala hang aarti hada basic bidri… munda manyag pooja padhaati…heengsurudu laxmi shobhane maat Hari kathamruta sara aanood aantu mugada hoot

  ... on July October 31st, 2014
 2. Gurunath Mujumdar says:

  Everytime, I use to sing Aarati haadu in all kannadigas house in surat. Barring very few, no one sing aarti haadu. Fortunately, my wife can sing atleast Aarti haadu.

  I still remember, there was compitition between ladies to sing aarti haadu during my childhood.

  ... on July November 10th, 2014
 3. Prasanna says:

  Agadi khare ada Prashant 100 kka 100 khare. Nammanyaga nan hendti shukravara poojakka nanda haadu. Nammatti nachigi bittu Neev had hadri aki aarti madtala antara. Hanebaraha. Ee kalad bhrambra hudgerige enagedo eno devra balla.

  Ittanghe iruveno Hariye doreye…

  ... on July November 17th, 2014
 4. Name says:

  ’ನಂಗ ಆರತಿ ಹಾಡ ಬರಂಗಿಲ್ಲಾ, ಭಾರತಿ ಹಾಡ ಬರತದ’ sooper bidri nim baravanige 😂
  -Rohini Joshi

  ... on July January 5th, 2015

Post a Comment