ಸಿಂಧೂನ ಗಂಡ…..

ಕೃಷ್ಣಮೂರ್ತಿಗೆ ಈಗ ೭೫ ವರ್ಷ ಆಗಲಿಕ್ಕೆ ಬಂತ. ಅವನ ಹೆಂಡ್ತಿ ಸಿಂಧೂಗ ೬೭ ದಾಟಿದ್ವು. ಇಬ್ಬರದು ೪೩-೪೪ ವರ್ಷದ ಸಂಸಾರ, ಎರಡ ಮಕ್ಕಳು, ಎರಡು ಮೊಮ್ಮಕ್ಕಳು ಅಗದಿ ಫ್ಯಾಮಿಲಿ ಪ್ಲ್ಯಾನಿಂಗ ಫ್ಯಾಮಿಲಿ. ಹಂಗ ಕೃಷ್ಣಮೂರ್ತಿದ ಆರೋಗ್ಯ ಈಗ ಒಂದ ಸ್ವಲ್ಪ ಡಗಮಾಯಿಸಿದುರು ತನ್ನ ಕಾಲ ಮ್ಯಾಲೆ ತಾ ನಿಲ್ತಾನ, ಸಿಂಧು ಭಾಂಡಿ ಗಲಬರಿಸಿದರ ಅಂವಾ ಇವತ್ತು ಡಬ್ಬ್ ಹಾಕ್ತಾನ, ಅಕಿ ಅರಬಿ ಹಿಂಡಿ ಕೊಟ್ಟರ ಹೊರಗ ಮುಂಚಿ ಕಡೆ ಒಣಾ ಹಾಕ್ತಾನ, ಮರದಿವಸ ಒಣಾ ಹಾಕಿದ್ದ ಅರಬಿ ತರೋದ ಅವಂದ ಜವಾಬ್ದಾರಿ, ಹಂಗ ನಡಕ ಮಳಿ ಬಂದರು ಅವನ ಹೋಗಿ ಅರಬಿ ತಕ್ಕೊಂಡ ಬರಬೇಕು. ಇವತ್ತೂ ಸಿಂಧು ಕುಕ್ಕರ ಇಟ್ಟರ ಸೀಟಿ ಹೊಡಿಸೋದು, ಅಕಿ ಹಾಲ ಇಟ್ಟ ಧಾರವಾಹಿ ನೋಡ್ಕೋತ ಕೂತರ ಗ್ಯಾಸ ಆರಸೋದು, ಮಗಾ ಆಫೀಸನಿಂದ ಬಂದ ಕೂಡಲೇ ತಾಟ ಹಾಕೋದು, ತಂಬಗಿ ತುಂಬಿ ಇಡೋದು ಎಲ್ಲಾ ಇವಂದ ಕೆಲಸ.
ಹಂಗ ಸಿಂಧುಗ ಇವನ ಏನ ಮನ್ಯಾಗ ಕೆಲಸಾ ಮಾಡಬೇಕಂತೇನಿಲ್ಲಾ, ಅದರ ಸಂಬಂಧ ಅಂತ ಮಗನ ಲಗ್ನಾ ಮಾಡಿ ಸೊಸಿನ ಒಬ್ಬೊಕಿನ್ನ ಇಟಗೊಂಡಾಳ. ಆದರ ಕೃಷ್ಣಮೂರ್ತಿ ತಾ ಕೆಲಸಾ ಮಾಡೊ ಅಷ್ಟ ಹೊತ್ತ ತನ್ನ ಜಡ್ಡ ಮರಿತಾನ ಅಂತ ಸಿಂಧು ಅವಂಗ ಕರದ ಕರದ ಕೆಲಸಾ ಹಚ್ಚೋಕಿ. ಅದರಾಗ ಕೃಷ್ಣಮೂರ್ತಿಗೆ ಪೇಪರ, ಬುಕ್ ಓದೊದ ಆಗಲಿ, ಸಿಂಧುನ ಗತೆ ಇಪ್ಪತ್ತನಾಲ್ಕ ತಾಸ ಟಿ.ವಿ.ಧಾರಾವಾಹಿ ನೋಡೊದ ಆಗಲಿ ಇಲ್ಲಾ ಮೊಮ್ಮಗನ ಗತೆ ಕ್ರಿಕೇಟ ಹುಚ್ಚ ಆಗಲಿ ಎನೂ ಇಲ್ಲಾ. ಹಿಂಗಾಗಿ ಯಾವಾಗಲು ಖಾಲಿ ತಲಿ, ಬರೆ ನಂಗ ಹಂಗಾತು ನಂಗ ಹಿಂಗಾತು ಅಂತ ತನ್ನ ಜೆಡ್ಡಿನ ಬಗ್ಗೆನ ವಿಚಾರ ಮಾಡ್ಕೋತ ಮನಿ ಮಂದಿ ಜೀವಾ ತಿನ್ಕೋತ ಕೂತ ಬಿಡೊಂವಾ. ಅದರಾಗ ಹೋಗಲಿ ಏನರ ಕೆಟ್ಟ ಚಟಾನರ ಅವ ಅವಂಗ ಅದರಾಗರ ತನ್ನ ಜಡ್ಡ ಮರಿತಾನ ಅನ್ನಲಿಕ್ಕೆ ಯಾ ಸುಡಗಾಡ ಕೆಟ್ಟ ಚಟಾನೂ ಇಲ್ಲಾ. ಅಲ್ಲಾ ಮಗನ್ನ ನೋಡಿನು ಒಂದ ನಾಲ್ಕ ಚಟಾನೂ ಕಲಿಲಿಲ್ಲಾ ಮಾರಾಯಾ.
ಒಟ್ಟ ಒಂದ ಮಾತನಾಗ ಹೇಳಬೇಕಂದರ ೪೫ ವರ್ಷದಿಂದ ಸಿಂಧೂ ಹೇಳಿದಂಗ ಕೇಳ್ಕೊಂಡ ಕೃಷ್ಣಮೂರ್ತಿ ಸುಖವಾಗಿ ಸಂಸಾರ ನಡಿಸಿಗೋತ ಹೊಂಟಾನ ಅಷ್ಟ ಮಾತ್ರ ಖರೆ, ಅಲ್ಲಾ ಹಂಗ ಈಗ ಮಗನ ಮದುವಿ ಆಗಿ ಸೊಸಿ ಬಂದ ಮ್ಯಾಲೆ ಸಿಂಧೂಂದ ಆಗಲಿ ಸಿಂಧೂನ ಗಂಡ ಇವಂದಾಗಲಿ ಅಷ್ಟ ಮನ್ಯಾಗ ನಡೆಯಂಗಿಲ್ಲಾ ಅದರೂ ಎಲ್ಲಾರೂ ಸೇರಿ ಸಂಸಾರ ತೂಗಿಸಿಕೊಂಡ ಹೊಂಟಾರ.
ಹಂಗ ಈ ಕೃಷ್ಣಮೂರ್ತಿಗೆ ಕೃಷ್ಣಮೂರ್ತಿ ಅಂತ ಕರಿಯೊರಕಿಂತಾ ಸಿಂಧೂನ ಗಂಡ ಅಂತ ಕರೇಯೋರ ಜಾಸ್ತಿ ಯಾಕಂದರ ಸಿಂಧು ಇಲ್ಲೆ ಧಾರವಾಡದೋಕಿ, ಅಕಿ ಬಂಧು ಬಳಗಾ ಎಲ್ಲಾ ಇಲ್ಲೆ ಹುಬ್ಬಳ್ಳಿ-ಧಾರವಾಡದಾಗ ಹಿಂಗಾಗಿ ಅವರೇಲ್ಲಾ ಮಾತ ಮಾತಿಗೆ ಸಿಂಧೂನ ಗಂಡ, ಸಿಂಧೂನ ಗಂಡ ಅಂತ ಇವಂಗ ಅಂದ ಅಂದ ಅಂವಾ ತಾ ಕೃಷ್ಣಮೂರ್ತಿ ಅನ್ನೋದನ್ನ ಮರತ ’ನಾ ಸಿಂಧೂನ ಗಂಡಾ’ ಅಂತನ ಸಂಸಾರ ಮಾಡ್ಕೋತ ಹೊಂಟ ಬಿಟ್ಟಾನ..ಅಲ್ಲಾ ಹಂಗ ಇದ ಒಂಥರಾ ’ಅಮ್ಮಾವ್ರ ಗಂಡ’ ಅಂತಾರಲಾ ಹಂಗೇನ ಅಲ್ಲ ಮತ್ತ. ಹೆಸರಿಗೆ ಇಷ್ಟ ಸಿಂಧೂನ ಗಂಡ. ಅದರಾಗ ಸಿಂಧೂನ ತವರಮನಿ ಭಾಳ ದೊಡ್ಡ ಮನೆತನದ್ದ ಹಿಂಗಾಗಿ ಆ ಮನೆತನದ ಹೆಣ್ಣಮಕ್ಕಳ ಮದ್ವಿ ಮಾಡ್ಕೊಂಡ ಎಲ್ಲಾ ಗಂಡಂದರಿಗೂ ಸ್ವಂತ ಐಡೆಂಟಿಟಿನ ಇಲ್ಲಾ ಅಂದರು ತಪ್ಪ ಆಗಂಗಿಲ್ಲಾ, ಆ ಮನೆತನದ ಅಳಿಯಂದರೇಲ್ಲಾ ’ಚಂದಕ್ಕನ ಗಂಡಾ, ಭೀಮಪ್ಪನ ಅಳಿಯಾ, ಪುಟ್ಟಪ್ಪನ ಮಗಳ ಪುಟ್ಟಿ ಗಂಡಾ..’ ಅಂತನ ಕರಿಸ್ಗೋತಾರ. ಅದರ ಪ್ರಕಾರ ಇಂವಾ ಸಿಂಧೂನ ಗಂಡಾ ಇಷ್ಟ.
ಕೃಷ್ಣಮೂರ್ತಿ ಹುಟ್ಟಾ ಈ ಕಡೆದಂವಾ ಅಲ್ಲಾ, ಇಂವಾ ಶಿರ್ಶಿ ಇಂದ ಬಂದ ಹುಬ್ಬಳ್ಳಿ ಒಳಗ ಸೆಟ್ಲ್ ಆದಂವಾ. ಹಂಗ ಇಂವಾ ಶಿರ್ಶಿ ಬಿಟ್ಟ ಹುಬ್ಬಳ್ಳಿಗೆ ಬಂದದ್ದು ಒಂದ ದೊಡ್ಡ ಕಥೀನ ಅದ.
ಇದ ೧೯೬೯-೭೦ನೇ ಇಸ್ವಿ ಮಾತ ಇರಬೇಕ, ಇಂವಾ ಅವರವ್ವಾ ಅಪ್ಪನ ಜೊತಿ ಶಿರ್ಶಿ ಒಳಗ ಇರ್ತಿದ್ದಾ, ಅವರಪ್ಪ ಹೊಂಬಾಳಿ ರಾಂ ಭಟ್ಟರು ಮಗಗ ಸಾಲಿ ಕಲಿಸೋದ ಬಿಟ್ಟ ಇರೋ ನಾಲ್ಕ ವೇದದೊಳಗ ಎರಡ ವೇದಾ ಕಲಸಿ ಅದರ ಮ್ಯಾಲೆ ಉಪಜೀವನ ಮಾಡ್ಕೋಳಿ ಅಂತ ಬಿಟ್ಟ ಬಿಟ್ಟಿದ್ದರು. ಆದರ ಕೃಷ್ಣಮೂರ್ತಿಗೆ ದಿನಾ ಒಂದಕ್ಕೂ ಅದ ಸಂಧ್ಯಾವಂದನಿ, ಅದ ಸೌಟ, ಅದ ಥಾಲಿ, ಅದ ಭಾವಿ ನೀರ ಆಚಮನಾ, ಲಂಡ ಪಂಜಿ ಮ್ಯಾಲೆ ತಾಸ ಗಟ್ಟಲೇ ದೇವರ ಪೂಜಾ ಮ್ಯಾಲೆ ಮನಿ ಪೂಜೆ ಸಾಲದ್ದಕ್ಕ ಪಟವರ್ಧನ ಡಾಕ್ಟರ ಮನಿ ಪೂಜಾ ಬ್ಯಾರೆ, ಇನ್ನ ಅವರ ಇವರ ಯಾರರ ಊರಾಗ ತಮ್ಮ ಮನಿ ಸತ್ಯನಾರಯಣ ಪೂಜಾಕ್ಕ ಕರದರ ಅದೊಂದ ಬ್ಯಾರೆ, ಇವೇಲ್ಲಾ ಸಾಕಾಗಿ ಬಿಟ್ಟಿದ್ವು.
ಅವಂಗ ಒಂದ ಅಂತು ಭಾಳ ಕ್ಲೀಯರ ಇತ್ತು, ತಾ ಎಷ್ಟ ಪೂಜಾ ಮಾಡಿದ್ರು ದೇವರೇನ ಪ್ರತ್ಯಕ್ಷ ಆಗಂಗಿಲ್ಲಾ, ಹಂಗ ಪ್ರತ್ಯಕ್ಷ ಆದರು ಇವನ ಭಕ್ತಿಗೆ ಮೆಚ್ಚಿ ದೇವರ ವರಾ ಕೊಡೋದೇನ ಗ್ಯಾರಂಟಿ ಇಲ್ಲಾ ಅಂತ. ಅಲ್ಲಾ ಹಂಗ ಇವಂಗ ದೇವರ ವರಾ ಬೇಕಾಗಿದ್ದು ಅಷ್ಟರಾಗ. ಅವಂಗ ಆವಾಗ ಬೇಕಾಗಿದ್ದ ಕನ್ಯಾನ ಹೊರತು ವರಾ ಅಲ್ಲಾ, ಹಿಂಗಾಗಿ ಇಂವಾ ದೇವರ ಮುಂದ ಕೂತ ಎಷ್ಟ ಗೊಳೊ ಅಂತ ದೇವರದ ಗೋಳ ತಿಂದರು ಇವಂಗ ದೇವರ ವರಾನು ಕೊಡಲಿಲ್ಲಾ, ಕನ್ಯಾನು ಕೊಡಲಿಲ್ಲಾ.
ಅತ್ತಲಾಗ ಅಷ್ಟರಾಗ ಇವನ ತಮ್ಮ ದತ್ತಾ ’ನೀ ಲಗ್ನಾ ಮಾಡ್ಕೋತಿಯೊ ಇಲ್ಲಾ ನಾ ಮಾಡ್ಕೋಳ್ಯೊ’ ಅನ್ನೊ ಲೇವಲ್ಲಿಗೆ ಬಂದ ಬಿಟ್ಟಿದ್ದಾ. ಅದರಾಗ ಅವಂದ ಕೆ.ಡಿ.ಸಿ.ಸಿ. ಬ್ಯಾಂಕ ಒಳಗ ನೌಕರಿ, ಕೃಷ್ಣಮೂರ್ತಿಗೆ ನೋಡಿದ್ರ ನೌಕರಿ ಇಲ್ಲಾ ಚೌಕರಿ ಇಲ್ಲಾ, ಇರೋದ ಒಂದ ಜುಟ್ಟಾ, ಅದನ್ನ ನೋಡಿ ಛೋಕರಿ ಸಿಗೋದ ಸಹಿತ ತ್ರಾಸ ಆಗಲಿಕತ್ತಿತ್ತ.
ಕಡಿಕೆ ಒಂದ ದಿವಸ ಇಂವಾ ತಲಿ ಕೆಟ್ಟ ನಾ ಹಿಂಗ ಬರೇ ಪೂಜಿ ಪುನಸ್ಕಾರ ಅಂತ ಕೂತರ ದೇವರ ಉದ್ಧಾರ ಆಗ್ತಾನ ಹೊರತು ನನ್ನ ಜೀವನೇನ ಉದ್ಧಾರ ಆಗಂಗಿಲ್ಲಾ ಅಂತ ಹೇಳದ ಕೇಳದ ಸೀದಾ ಹುಬ್ಬಳ್ಳಿಗೆ ಜಿಗದ ಬಿಟ್ಟಾ. ಆವಾಗ ಅಂವಾ ಜೀವನದಾಗ ಲಗ್ನ ಆಗೋದ ಉದ್ಧಾರ ಅಂತ ತಿಳ್ಕೊಂಡಿದ್ದಾ.
ಹುಬ್ಬಳ್ಳಿಗೆ ಬಂದ ಮರದಿವಸ ರಾಧಾ ಕೃಷ್ಣಗಲ್ಲಿ ಒಳಗಿನ ಹಜಾಮತಿ ಅಂಗಡಿಗೆ ಹೋಗಿ ತನ್ನ ಚಂಡಕಿ ತಗಿಸಿಕೊಂಡ ಎರಡ ಜೋಡಿ ಪ್ಯಾಂಟ ಶರ್ಟ್ ಉದ್ರಿ ಒಳಗ ಹೊಲಿಸಿಕೊಂಡ ಉಪಜೀವನಕ್ಕ ಏನರ ಮಾಡಬೇಕು ಅಂದರ ಇಷ್ಟ ಕನ್ಯಾ ಸಿಗ್ತಾವ ಅಂತ ಪ್ರೆಸ್ಸಿಗೆ ಕೆಲಸಕ್ಕ ಹೊಂಟಾ. ಇಲ್ಲೆ ಹುಬ್ಬಳ್ಳ್ಯಾಗ ಅವನ ಸಪೋರ್ಟಿಗೆ ಅವನ ಅಬಚಿ ಮಗಾ ಗುಂಡಣ್ಣಾ ಇದ್ದಾ.
ಆ ಗುಂಡಣ್ಣ ಒಂದ ವಿಚಿತ್ರ ಗಿರಾಕಿ, ಅವಂಗ ಮಂದಿ ಮದ್ವಿ ಮಾಡಸೋದ ಒಂದ ಜೀವನದ ಗುರಿ ಇತ್ತ. ಅಂವಾ ತಂದ ಸ್ವಂತ ಲಗ್ನಾ ಮಾಡ್ಕೋಳೊಕಿಂತಾ ಮುಂಚೆನ ಹದಿನೈದ ಮಂದಿ ಲಗ್ನಾ ಮಾಡಿಸಿದ್ದನಂತ ಹಿಂಗಾಗಿ ಅಂವಾ ನಂದು ಲಗ್ನಾ ಮಾಡಸ್ತಾನ ಅಂತ ಕೃಷ್ಣಮೂರ್ತಿಗೆ ಭಾಳ ಆಶಾ ಇತ್ತ. ಸರಿ ಇಂವಾ ಹುಬ್ಬಳ್ಳಿಗೆ ಬರೊ ಪುರಸತ್ತ ಇಲ್ಲದ ಗುಂಡಣ್ಣ ಇವನ ಕುಂಡ್ಲಿ ಒಂದ ಹತ್ತ ಕಾಪಿ ತಾನ ಕೈಲೆ ಬರದ ದುರ್ಗದ ಬೈಲಾಗ ನಿಂತ ಹಂಚಲಿಕ್ಕೆ ಶುರು ಮಾಡೇ ಬಿಟ್ಟಾ. ಹಿಂಗ ಆ ಕುಂಡ್ಲಿ ದುರ್ಗದ ಬೈಲ ದಾಟಿ ಬ್ರಾಡವೇ ಒಳಗ ನಾಲ್ಕ ಅಂಗಡಿ ದಾಟೋದ ತಡಾ ಅಲ್ಲೇ ಒಬ್ಬ ಶಿವಪ್ಪಾ ಶಿಂದಗಿ ಅಂತ ಹೋಮಿಯೋಪತಿ ಡಾಕ್ಟರ ಹೊಚ್ಚಲಾ ದಾಟತ. ಆ ಶಿವಪ್ಪ ನೋಡಿದ್ರ ತಾನೂ ಕೃಷ್ಣಮೂರ್ತಿ ವಾರ್ಗಿಯವನ ಆದರ ಅವನ ಅಣ್ಣನ ಮಗಳ ಒಬ್ಬೊಕಿ ಕನ್ಯಾ ಇದ್ಲು, ಅದರಾಗ ದಣೇಯಿನ ಅವರ ಅಣ್ಣನು ತೀರ್ಕೊಂಡಿದ್ದಾ ಹಿಂಗಾಗಿ ಆ ಹುಡಗಿಗೆ ಒಂದ ಕನ್ಯಾ ನೋಡಿ ಲಗ್ನಾ ಮಾಡೋದ ತಮ್ಮ ಜವಾಬ್ದಾರಿ ಅಂತ ಶಿವಪ್ಪಾ ತನ್ನ ಅಣ್ಣನ ಮಗಳ ಜಾತಕಾ ಗುಂಡಣ್ಣಗ ಕೊಟ್ಟ ಬಿಟ್ಟಾ. ಗುಂಡಣ್ಣಗ ಒಟ್ಟ ತಾ ಮಾಡಿಸಿದ್ದ ಮದುವಿ ಕೌಂಟಿಂಗ ಜಾಸ್ತಿ ಮಾಡ್ಕೋಬೇಕಿತ್ತ ಆ ಕುಂಡ್ಲಿ ಯಾರಿಗೆ ತೋರಿಸಿದ್ನೋ ಯಾರಿಗ ಬಿಟ್ಟನೋ ಗೊತ್ತಿಲ್ಲಾ ಮುಂದ ಎರಡ ದಿವಸದಾಗ ಕುಂಡ್ಲಿ ಕೂಡೇದ ಅಂತ ಕನ್ಯಾ ತೋರಸೊ ಕಾರ್ಯಕ್ರಮ ಮುಗಿಸೆ ಬಿಟ್ಟಾ.
ಅದರಾಗ ಆ ಹುಡಗಿನೂ ಧಾರವಾಡದಾಗ ಪ್ರೆಸ್ ನಾಗ ಕೆಲಸಾ ಮಾಡ್ತಿದ್ಲು, ಮ್ಯಾಲೆ ಅಕಿನೂ ತೆಳ್ಳಗ ಅಗದಿ ಕೃಷ್ಣಮೂರ್ತಿಗೆ ಸೆಟ್ಟ್ ಆಗೊ ಹಂಗ ಇದ್ಲು ಭಡಾ ಭಡಾ ಗುಂಡಣ್ಣಾ ’ಹುಡಗಿ ಹೂಂ ಅಂದಿದ್ದ ನಿನ್ನ ಪುಣ್ಯಾ ನೀ ಏನ ಭಾಳ ವಿಚಾರ ಮಾಡ್ತಿ’ ಅಂತ ಕೃಷ್ಣಮೂರ್ತಿಗೆ ಒಪ್ಪಿಸಿಸಿ ಮಾತುಕತಿ ತಾನ ಮುಗಿಸಿ ಬಿಟ್ಟಾ. ಕೃಷ್ಣಮೂರ್ತಿನೂ ಎಲ್ಲೆ ತನಗ ಕನ್ಯಾ ಸಿಗ್ತಾವೊ ಇಲ್ಲೊ ಅನ್ಕೊಂಡಿದ್ದಾ ಕಾಣತದ ಸುಮ್ಮನ ಗುಂಡಣ್ಣನ ಗಡಿಬಿಡಿಗೆಗೆ ಕನ್ಯಾಕ್ಕ ಹೂಂ ಅಂದ ಬಿಟ್ಟಾ. ಆಮ್ಯಾಲೆ ಹಿಂಗ ಒಂದ ಸ್ವಲ್ಪ ಹೆಣ್ಣಿನವರ ಬಳಗಾ ಕೆದರಿ ನೋಡೊದರಾಗ ಗೊತ್ತಾತು ಅವರ ದೂರಿಂದ ಕೃಷ್ಣಮೂರ್ತಿ ಅವ್ವಗ ಬಳಗ ಆಗಬೇಕಂತ. ಗುಂಡಣ್ಣಗ ಅಷ್ಟ ಸಾಕಾಗಿತ್ತ, ತಾನ ತನ್ನ ಸ್ವಂತ ಗಾಡಿ ಖರ್ಚ ಮಾಡ್ಕೊಂಡ ಶಿರ್ಶಿಗೆ ಹೋಗಿ ಕೃಷ್ಣಮೂರ್ತಿ ಅವ್ವಾ- ಅಪ್ಪನ ಒಪ್ಪಿಸಿಸಿ ಧಾರವಾಡ ಲಕಮನಹಳ್ಳಿ ಮನ್ಯಾಗ ಮದ್ವಿ ಮಾಡಿಸಿ ಇದ ನಾ ಮಾಡಿಸಿದ್ದ ೮೮ನೇ ಮದುವಿ ಅಂತ ತನಗೊಂದ ಜೋಡಿ ಪ್ಯಾಂಟ ಶರ್ಟ ತನ್ನ ಹೆಂಡ್ತಿ ಕಮಲಾಬಾಯಿಗೆ ಒಂದ ಒಂಬತ್ತವಾರಿ ಪತ್ಲಾ ಎರಡು ಬೀಗರ ಕಡೆ ಕೆತ್ತಿದಾ.
ಇತ್ತಲಾಗ ಲಗ್ನ ಆದ ಮ್ಯಾಲೆ ಕೃಷ್ಣಮೂರ್ತಿಗೆ ಒಂದ ಸ್ವಲ್ಪ ಬಿಸಿ ಹತ್ತ. ಮೊದ್ಲ ಆರಾಮ ಒಬ್ಬೊನ ಚೈನಿ ಹೊಡ್ಕೋತ ಯಾರದೊ ಮನ್ಯಾಗ ಚಹಾ, ಯಾರದೊ ಮನ್ಯಾಗ ಊಟಾ ಅಂತ ಅಡ್ಡಾಡತಿದ್ದಾ ಆದರ ಈಗ ಹಿಂಗ ನಡೆಯಂಗಿಲ್ಲಲಾ. ಕಡಿಕೆ ತಾನು ಒಂದ ಕರಿ ಹಂಚಿನ ಮನಿ ನೋಡಿ ಜೋಳದ ಓಣ್ಯಾಗ ಮನಿ ಹಿಡದ, ಹೆಂಗಿದ್ದರೂ ಹೆಂಡ್ತಿ ಕಂಪೋಸಿಟರ್ ಇದ್ಲು, ಅಕಿಗೂ ಒಂದ ಪ್ರೆಸ ಒಳಗ ನೌಕರಿಗೆ ಸೇರಿಸಿಸಿ ತಾನು ಒಂದ ಪ್ರೆಸ ಒಳಗ ನೌಕರಿ ಮಾಡ್ಕೋತ ಸಂಸಾರ ಶುರು ಮಾಡಿದಾ.
ಮುಂದ…ಮುಂದೇನ ಲಗ್ನ ಆಗಿ ಒಂದ ವರ್ಷಕ್ಕ ಒಬ್ಬ ಮಗಾ, ಮುಂದ ಕರೆಕ್ಟ ಆರ ವರ್ಷಕ್ಕ ಒಬ್ಬೊಕಿ ಮಗಳು, ಕೀರ್ತಿಗೊಂದು, ಆರತಿಗೊಂದು ಎರಡ ಸಾಕ ಅಂತ ಫ್ಯಾಮಿಲಿ ಪ್ಲ್ಯಾನಿಂಗ ಆಪರೇಶನ್ ಮಾಡಿಸಿ ಜೈ ಅಂದ ಸಿಂಧೂನ ಗಂಡ ಆಗಿ ಸಂಸಾರದ ಜೀಕ ಜೀಕಲಿಕತ್ತಾ.
ಆವಾಗಿಂದ ಇವತ್ತೀನ ತನಕ ಸಿಂಧೂನ ಗಂಡನ ಸಂಸಾರ ನಡ್ಕೋತ ಹೊಂಟದ. ಆ ಗುಂಡಣ್ಣ ಗಡಬಿಡಿ ಒಳಗ ಕುಂಡ್ಲಿ ಹೆಂಗರ ನೋಡಿರ್ವಲ್ನಾಕ ಆದರ ಕೃಷ್ಣಮೂರ್ತಿ ಸಂಸಾರ ಮಾತ್ರ ಅಗದಿ ನಾಲ್ಕ ಮಂದಿ ಕಣ್ಣ ಬಿಡಬೇಕ ಹಂಗ ನಡ್ಕೋತ ಹೊಂಟದ. ಹಂಗ ಅವಂಗ ಕೃಷ್ಣಮೂರ್ತಿಗೆ ಇವತ್ತು ಯಾರರ ಸಿಂಧೂನ ಗಂಡ ಅಂದರ ಭಾಳ ಸಿಟ್ಟ ಬರತದ ಖರೆ ಆದರ ಏನ ಮಾಡೋದ ಸಿಂಧೂನ ಗಂಡ ಇದ್ದಂತು ಖರೇನ. ಅದರಾಗ ಮೊದ್ಲ ಹೇಳಿದ್ನೇಲ್ಲಾ ಸಿಂಧು ಈ ಕಡೆದೋಕಿ ಹಿಂಗಾಗಿ ಅಕಿ ಬಳಗ ಎಲ್ಲಾ ಇಲ್ಲೆ, ಹಿಂಗಾಗಿ ಅವರ ಜಾಸ್ತಿ ಮನಿಗೆ ಬಂದು-ಹೋಗಿ ಮಾಡೋರು, ಅವರೇಲ್ಲಾ ಇವಂಗ ಸಿಂಧೂನ ಗಂಡ, ಸಿಂಧೂನ ಗಂಡ ಅಂತ ಆವಾಗಿಂದ ಶುರು ಹಚಗೊಂಡೊರು ಇವತ್ತು ಹಂಗ ಕರೀತಾರ. ಯಾ ಮಟ್ಟಕ್ಕ ಇಂವಾ ಸಿಂಧೂನ ಗಂಡಾ ಅಂತ ಫೇಮಸ್ ಆಗ್ಯಾನ ಅಂದರ ಸಿಂಧೂನ ತವರಮನಿ ಪೈಕಿ ಕೆಲವೊಬ್ಬರಿಗೆ ಇವತ್ತೂ ಅವನ ಹೆಸರ ಕೃಷ್ಣಮೂರ್ತಿ ಅಂತ ಗೊತ್ತಿಲ್ಲಾ. ಏನ್ಮಾಡ್ತೀರಿ?
ಅಲ್ಲಾ ಇಷ್ಟೇಲ್ಲಾ ಸಿಂಧೂನ ಗಂಡನ ಬಗ್ಗೆ ಬರದಿಯಲಾ ನಿಂಗ ಇದೇಲ್ಲಾ ಹೆಂಗ ಗೊತ್ತ ಅಂತ ಕೇಳ್ಬ್ಯಾಡ್ರಿ ಮತ್ತ. ಯಾಕಂದರ ಆ ಸಿಂಧೂನ ಮಗಾನ ನಾನ. ಹಂಗ ನಂಗೂ ಸಿಂಧೂನ ಮಗಾ, ಸಿಂಧೂನ ಮಗಾ ಅಂತ ಒಂದಿಷ್ಟ ಮಂದಿ ಕರಿತಾರ ಆ ಮಾತ ಬ್ಯಾರೆ. ಆದರ ಯಾವಾಗ ನಾ ನೇಕಾರ ನಗರದ ಹುಡಗಿ ’ಅವ್ವಿ’ನ್ನ ಲಗ್ನಾ ಮಾಡ್ಕೊಂಡನೇಲಾ ಆವಾಗಿಂದ ನಾನು ಅವ್ವಿ ಗಂಡ ಆಗಲಿಕತ್ತೇನಿ ಆ ಮಾತ ಬ್ಯಾರೆ.

This entry was posted on Thursday, December 18th, 2014 at 5:01 am and is filed under ಅವಧಿ. You can follow any responses to this entry through the RSS 2.0 feed. You can leave a response, or trackback from your own site.

3 Comments

 1. Vadiraj says:

  Agadi bhaari kalaa bidri nimdu bariyud…
  Simple and sweet article

  ... on July June 12th, 2015
 2. Name says:

  Super !!!!!..Was getting bored but now refreshed by reading your article….Thanks

  ... on July July 16th, 2016
 3. Prashant Joshi says:

  Super !!!!!..Was getting bored but now refreshed by reading your article….Thanks

  ... on July July 16th, 2016

Post a Comment