ಎಲ್ಲೆರ ಇರು, ಹೆಂಗರ ಇರು…ಒಟ್ಟ ಫೇಸಬುಕ್ಕಿನಾಗ ಇರು…

“ಲೇ, ನಿನ್ನೌನ. ಎಲ್ಲಿ ಇದ್ದೀಲೇ? ಏನ ಸುದ್ದೀನ ಇಲ್ಲಲಾ? ಇದಿಯೋ ಸತ್ತೀಯೋ” ಅಂತ ನಿನ್ನೆ ನಮ್ಮ ರಾಘ್ಯಾ ಬೆಂಗಳೂರಿಂದ ಫೋನ ಮಾಡಿದ್ದಾ.
ಅವನೌನ ಇವಂಗ ಎಲ್ಲಾ ಬಿಟ್ಟ ಇವತ್ತ ಯಾಕ ನಂದ ನೆನಪಾತಪಾ? ಈ ಮಗಾ ಲಾಸ್ಟ ನನಗ ಫೋನ ಮಾಡಿದ್ದ ಆರ ತಿಂಗಳ ಹಿಂದ, ಭೆಟ್ಟಿ ಆಗಲಾರದಂತೂ ಎರಡ ವರ್ಷದ ಮ್ಯಾಲೆ ಆತ ಹಂತಾವ ಒಮ್ಮಿಂದೊಮ್ಮಿಲೆ ಏನ ನಾವ ದಿವಸಾ ಒಬ್ಬರಿಗೊಬ್ಬರ ಭೆಟ್ಟಿ ಆಗೊರಗತೆ ಏನ ಸುದ್ದೀನ ಇಲ್ಲಾ, ಇದ್ದೇನೋ ಇಲ್ಲೊ ಅಂತ ಕೇಳಲಿಕತ್ತಾನಲಾ ಅಂತ ನಂಗ ಖರೇನ ಆಶ್ಚರ್ಯ ಆತ
“ಲೇ, ನಾ ಎಲ್ಲೆ ಹೋಗಬೇಕಲೆ, ಇಲ್ಲೆ ಇದ್ದೇನಿ. ಕತ್ತಿ ಹಾದಿ ತಪ್ಪಿದರ ಹಾಳ ಗ್ವಾಡಿ ಅಂತಾರಲಾ ಹಂಗ ನಾವ ಹುಬ್ಬಳ್ಳಿ ಬಿಟ್ಟ ಎಲ್ಲೆ ಹೋಗಬೇಕ. ಅಲ್ಲಾ, ಎಲ್ಲಾ ಬಿಟ್ಟ ಇವತ್ತ ನಿಂಗ್ಯಾಕ ನಂದ ನೆನಪಾತಪಾ” ಅಂದೆ.
“ಹಂಗ ಅಲ್ಲಲೇ, ಭಾಳ ದಿವಸಾತ ನಿಂದ ಫೇಸಬುಕ್ಕ ಒಳಗ ಏನು activityನ ಕಾಣವಲ್ತು, ಅದಕ್ಕ ಆರಾಮ ಇದ್ದಿ ಇಲ್ಲೋ ಅಂತ ಕೇಳಲಿಕ್ಕೆ ಫೊನ ಮಾಡಿದ್ದೆ” ಅಂದಾ.
ಹಕ್ಕ! ನಾ ಫೇಸಬುಕ್ಕ ಒಳಗ ಕಂಡಿಲ್ಲಾ ಅಂತ ಈ ಮಗಾ ನಾ ಇದ್ದೇನೋ ಸತ್ತೇನೋ ನೋಡಲಿಕ್ಕೆ ಫೋನ ಮಾಡ್ಯಾನ ಅನಸ್ತು.
“ಏ, ಇಲ್ಲಲೇ, ಒಂದ ಸ್ವಲ್ಪ ಆಫೀಸ ಕೆಲಸದಾಗ ಬ್ಯುಸಿ ಇದ್ದೆ, ಅದರಾಗ ನಮ್ಮ ಆಫೀಸಿನಾಗ ಅವನೌನ ಫೇಸಬುಕ್ ಬ್ಯಾರೆ ಬ್ಯಾನ ಮಾಡ್ಯಾರ, ಇನ್ನ ಮನ್ಯಾಗ ಇಂಟರನೆಟ್ ತೊಗೊಂಡ್ರ ಹೆಂಡ್ತಿನೂ facebook ಹಿಡಕೊಂಡ ಕೂಡ್ತಾಳ ಅಂತ ಬಿಟ್ಟೇನಿ, ಹಿಂಗಾಗಿ ಒಂದ ಸ್ವಲ್ಪ ಫೇಸಬುಕ್ಕ ಕಡಿಮೆ ಆಗೇದ” ಅಂತ ನಾ ಅಂದೆ.
“ಇಷ್ಟs ಅಲಾ, ನಾ ನೀ ಒಟ್ಟ ಫೇಸಬುಕ್ಕಿನಾಗ ಕಾಣಲಿಲ್ಲಾ ಅಂದ ಕೂಡಲೇ ಗಾಬರಿ ಆಗಿದ್ದೆ, ಅಲ್ಲಾ ಹಂಗ ನೀ ಕಾಯಮ್ ಫೇಸಬುಕ್ಕಿನಾಗ ಇರೋ ಮನಷ್ಯಾ, ಹೆಂಗ ಒಮ್ಮಿಂದೊಮ್ಮಿಲೆ ಮಾಯ ಆದಾ ಅನಸ್ತ ಅದಕ್ಕ ಆರಾಮರ ಇದ್ದೀ ಇಲ್ಲೋ ಅಂತ ಕೇಳಲಿಕ್ಕೆ ಫೋನ ಮಾಡಿದ್ದೆ” ಅಂತ ಅಂದ ಕಡಿಕೆ
“ಎಲ್ಲೇರ ಇರ, ಹೆಂಗರ ಇರ ಒಟ್ಟ ಫೇಸಬುಕ್ಕಿನಾಗ ಇರಪಾ, ಅದಿಲ್ಲಾಂದ್ರ ಒಬ್ಬರಿಗೊಬ್ಬರದ ಟಚ್ ತಪ್ಪಿ ಬಿಡ್ತದ” ಅಂದ ಫೋನ ಇಟ್ಟಾ.
ಏನ್ಮಾಡ್ತೀರಿ, ನಾ ಒಂದ ಹತ್ತ ದಿವಸ ಫೇಸಬುಕ್ಕಿನಾಗ ಕಾಣಲಿಲ್ಲಾ ಅಂದರ facebook friends ಫೋನ ಮಾಡಿ ನಾ ಇದ್ದೇನೋ ಸತ್ತೇನೋ ಅಂತ ಕೇಳ್ತಾರ ಅಂದ್ರ ಪಾಪ, ನಮ್ಮ ದೋಸ್ತರ ಎಷ್ಟ ನನಗ ಫೇಸಬುಕ್ಕಿನಾಗ miss ಮಾಡ್ಕೋತಾರ ವಿಚಾರ ಮಾಡ್ರಿ. ಅಲ್ಲಾ ಹಂಗ ಫೇಸಬುಕ್ಕಿನಾಗ friends ನಮ್ಮನ್ನ miss ಮಾಡ್ಕೊಂಡಷ್ಟ ಮನಿ ಮಂದಿನೂ miss ಮಾಡ್ಕೊಳಂಗಿಲ್ಲ ಬಿಡ್ರಿ.
ಇವತ್ತ ನಮ್ಮ ಬಂಧು-ಬಳಗ, ದೋಸ್ತರು ಎಲ್ಲಾರೂ ಒಂದ ಕಡೆ ಸಿಗೋದ ಅಂದ್ರ ಫೇಸಬುಕ್ಕಿನಾಗ ಇಷ್ಟ. ಅದರಾಗ ಇದ್ದ ಬಿಟ್ಟರ ಮುಗಿತ ಎಲ್ಲಾರ ಜೊತಿ ಟಚನಾಗ ಇದ್ದಂಗ. ಹಂಗ ಯಾರರ ಫೇಸಬುಕ್ಕಿನಾಗ ಕಾಣಲಿಲ್ಲಾಂದರ ನಾವ ಅವರಿಗೆ ‘ಏನಲೇ ಟಚನಾಗ ಇಲ್ಲಲಾ’ ಅಂತೇವಿ. ಬೇಕಾರ ಅಂವಾ ನಮ್ಮ ಬಾಜು ಮನ್ಯಾಗs ಇರವಲ್ನಾಕ, ಅದು ಸಂಬಂಧ ಇಲ್ಲಾ. ಫೇಸಬುಕ್ಕಿನಾಗ ಇದ್ದರ ಇಷ್ಟ touchನಾಗ ಇದ್ದಂಗ.
ಮೊನ್ನೆ ನಮ್ಮ ಬಾಜು ಮನಿ ದೋಸ್ತಗ ತನ್ನ ತಮ್ಮನ birthday ಫೇಸಬುಕ್ಕಿನಾಗ ನೋಡಿದ ಮ್ಯಾಲೆ ಗೊತ್ತಾತಂತ, ಅಂವಾ ಮತ್ತ ಮನಿಗೆ ಹೋಗೊದರಾಗ ಮರತ-ಗಿರತೆನಂತ ಅಲ್ಲೇ ಫೇಸಬುಕ್ಕಿನಾಗ ವಿಶ್ ಮಾಡಿ ಬಿಟ್ಟನಂತ. ಏನಂತರಿ ಇದಕ್ಕ? ನಮಗ ಇವತ್ತ ಯಾರ ಫೇಸಬುಕ್ಕಿನಾಗ ಇದ್ದಾರ ಅವರದಿಷ್ಟ birthday ಗೊತ್ತ ಇರ್ತಾವ. ಅದರಾಗಿದ್ದವರ ನಮಗ ಗೊರ್ತ ಇರಲಿ ಬಿಡಲಿ ಮರಿಲಾರದ ವಿಶ್ ಮಾಡ್ತೇವಿ, ಆದರ ನಮ್ಮ ಒಡಹುಟ್ಟಿದ ಅಣ್ಣ ತಮ್ಮಂದರದ birthday ಅವರ ಫೇಸಬುಕ್ಕಿನಾಗ ಇರಲಿಲ್ಲಾ ಅಂದರ ನಮಗ ನೆನಪ ಇರಂಗಿಲ್ಲಾ.
ಆದ್ರೂ ಏನ ಅನ್ನರಿ ಇತ್ತೀಚಿಗೆ ಅವನೌನ ಈ ಫೇಸಬುಕ್ಕ್ ಮಾಣಿಕಚಂದ ಗುಟ್ಕಾ/ ITC King ಸಿಗರೇಟ ಕಿಂತಾ ಜಾಸ್ತಿ addiction ಆಗಲಿಕತ್ತದ ಅಂತ ಅನಸಲಿಕತ್ತದ.
ಮೊನ್ನೆ ನಮ್ಮ ಒಬ್ಬ ದೋಸ್ತ ಒಬ್ಬಂವಾ ಇಪ್ಪತ್ತ ವರ್ಷದಿಂದ ಸಿಗರೇಟ ಸೇದೊಂವಾ ಒಮ್ಮಿಂದೊಮ್ಮಿಲೆ ಫೇಸಬುಕ್ಕಿನಾಗ
“ನಾ ಇವತ್ತಿನಿಂದ ಸಿಗರೇಟ ಬಿಟ್ಟೆ” ಅಂತ status message ಹಾಕಿದಾ. ನಾ ಇವಂಗೇನ ಆತಪಾ ಹಂತಾದ, ಆರಾಮ ಇದ್ದಾನ ಇಲ್ಲೋ, ಇಲ್ಲಾ ಯಾರರ ಇವಂದ facebook account hack ಮಾಡಿ ಈ status message ಹಾಕ್ಯಾರಿನು ಅಂತ ಕೇಳಲಿಕ್ಕ ಅವನ ಮನಿಗೆ ಫೊನ ಮಾಡಿದರ ಅವರ ಮನೆಯವರ ಫೋನ ತೊಗೊಂಡರು. ನಾ ಅವರಿಗೆ
“ಯಾಕ್ರಿ ವೈನಿ, ಇಂವಾ ಹಿಂಗ್ಯಾಕ ಒಮ್ಮಿಂದೊಮ್ಮೀಲೇ ಸಿಗರೇಟ ಬಿಡ್ತೇನಿ ಅಂತ status message ಹಾಕ್ಯಾನ, ಹಂತಾದ ಏನ ಆಗೇದ ಧಾಡಿ ಅವಂಗ? ಇಲ್ಲಾ ಅಂವಾ ಸಿಗರೇಟ ಸೇದೊದಕ್ಕ ನಿಮಗೇನರ ದಮ್ಮ-ಗಿಮ್ಮ ಹತ್ತೇದೊ” ಅಂತ ಕೇಳಿದರ
“ನಂಗೇನ ದಮ್ಮ ಹತ್ತಿಲ್ಲಾ, ನಿಮ್ಮ ದೋಸ್ತಗ ಒಂದು ನೀವು ಫೇಸಬುಕ್ಕರ ಬಿಡ್ರಿ ಇಲ್ಲಾ ಸಿಗರೇಟರ ಬಿಡ್ರಿ ಅಂತ ನಾ ದಮ್ಮ ಕೊಟ್ಟಿದ್ದಕ್ಕ, ಸಿಗರೇಟ ಬಿಟ್ಟಾರ” ಅಂತ ಹೇಳಿದ್ಲು.
ಅಯ್ಯಯ್ಯ… ಅವನೌನ ಇದ ಏನಪಾ, ಅಲ್ಲಾ ಒಬ್ಬ ಮನಷ್ಯಾ ದಿನಕ್ಕ ಕನಿಷ್ಟ ಒಂದ ಪ್ಯಾಕ ಅಂದರ ಹತ್ತ ಸಿಗರೇಟ ಲಾಸ್ಟ ೨೦ ವರ್ಷದಿಂದ ಸೇದಕೋತ ಇದ್ದೊಂವಾ ಇವತ್ತ ಫೇಸಬುಕ್ಕ ಸಂಬಂಧ ಸಿಗರೇಟ ಬಿಟ್ಟಾನ ಅಂದ್ರ ಯಾವದ ದೊಡ್ಡ ಚಟಾ ಅಂತೀರಿ. ಅಲ್ಲಾ ಇದs ಹೆಂಡತಿ ‘ನಾ ನೀವ ಸಿಗರೇಟ ಬಿಡಲಿಲ್ಲಾ ಅಂದರ ನಾನs ನಿಮ್ಮನ್ನ ಬಿಡ್ತೇನಿ’ ಅಂತ ಅಂದಾಗು ಬಗ್ಗಲಾರದಾಂವ ಇವತ್ತ ಫೇಸಬುಕ್ಕ ಸಂಬಂಧ ಸಿಗರೇಟ ಬಿಟ್ಟನಲಾ ಅದನ್ನ ಹೇಳ್ರಿ.
ಈಗ ಅವನ ಹೆಂಡ್ತಿ ‘ಹಂತಾದ ಏನ ಈ ಸುಡಗಾಡ ಫೇಸಬುಕ್ಕಿನಾಗ ಅದ, ಯಾ ಸಿಗರೇಟ ಸಂಬಂಧ ಇಂವಾ ನನ್ನ ಬಿಡಲಿಕ್ಕೆ ರೆಡಿ ಆಗಿದ್ದಾ ಹಂತಾವ ಇವತ್ತ ಫೇಸಬುಕ್ಕ ಸಂಬಂಧ ಸಿಗರೇಟ ಬಿಟ್ಟನಲಾ’ ಅಂತ ಅಕಿ ತಲಿ ಕೆಡಸಿಕೊಂಡ ವಿಚಾರ ಮಾಡಲಿಕ್ಕೆ ಹತ್ತ್ಯಾಳ. ಅದರಾಗ ಸಿಗರೇಟ ಹಗಲಹೊತ್ತಿನಾಗ ಇಷ್ಟ ಸೇದತಿದ್ದಾ ಆದರ ಈ ಸುಡಗಾಡ ಫೇಸಬುಕ್ಕ್ ಹಗಲು ರಾತ್ರಿ ಚಾಲೂನ ಇರ್ತದ ಅಂತ ಅಕಿಗೆ ಈಗ ಹೊಸಾ ಚಿಂತಿ ಹತ್ತೇದ. ಅದಕ್ಕ ನಾ ಹೇಳಿದ್ದ ಫೇಸಬುಕ್ಕ ಒಂದ ಕೆಟ್ಟ ಚಟಾ ಆಗಲಿಕತ್ತದ, ಇದರಿಂದ ದೇಹಕ್ಕ ಇಷ್ಟ ಅಲ್ಲಾ ಮಾನಸಿಕ ಹಾನಿನು ಆಗ್ತದ ಅಂತ.
ಇವತ್ತ ನಡರಾತ್ರ್ಯಾಗ ಎದ್ದ ‘i am not getting sleep’ ಅಂತ status message update ಮಾಡೋರ, ಅದಕ್ಕ ‘same here’ ಅಂತ comment ಮಾಡೋರು, ಊರ ಮಂದಿ commentಗೆ like ಮಾಡೋರು ಎಷ್ಟ ಮಂದಿ ಇದ್ದಾರ. ಎದ್ದ ಕೂಡಲೇ ಬಾಯಗ ಬ್ರಶ್ ಇಟಗೊಂಡ ಕೈಯಾಗ samsung galaxy note ಹಿಡಕೊಂಡ ತಂಬಗಿ ತೊಗೊಂಡ ಹೋಗರಿಗೂ ಇವತ್ತ ಕಡಿಮೆ ಇಲ್ಲಾ.
ಮೊನ್ನೆ ಪೂಣಾದಿಂದ ನಮ್ಮ ಮೌಶಿ ಫೋನ ಮಾಡಿ ನಮ್ಮವ್ವನ ಜೊತಿ ಒಂದ ತಾಸ ಮಾತಾಡಿ ತನಗ ಮೊಮ್ಮಗ ಹುಟ್ಟಿದ್ದ, ಅವಂಗ ಹೆಸರ ಇಟ್ಟಿದ್ದ ಎಲ್ಲಾ ಕಥಿ ಹೇಳಿದ್ಲು. ನಮ್ಮವ್ವ ಅಕಿಗೆ
“ಅಯ್ಯ..ನಮ್ಮವ್ವ ನಮಗ ಬಸರ ಇದ್ದಿದ್ದ ಗೊತ್ತಿಲ್ಲಾ, ಗೊತ್ತಾಗಿದ್ದರ ನಾನು ಕುಬಸಾ ಮಾಡ್ತಿದ್ದೆ. ಇಷ್ಟೇಲ್ಲಾ ಆದರು ನಮಗ ಒಂದ ಮಾತ ತಿಳಿಸ ಬೇಕೊ ಬ್ಯಾಡೋ” ಅಂದ್ರ,
“ಅಯ್ಯ, ಎಲ್ಲಾ ಸುದ್ದಿ ಫೇಸಬುಕ್ಕಿನಾಗ ಹಾಕಿತ್ತಲ ನಮ್ಮವ್ವಾ, ನಿನ್ನ ಮಗಾ ನೋಡಿ ಲೈಕ ಮಾಡಿ ಕಮೆಂಟ ಮಾಡಿದ್ದಾ. ನಾ ನಿಂಗ ಗೊತ್ತದ ಅಂತ ತಿಳ್ಕೊಂಡಿದ್ದೆ” ಅಂತ ನಮ್ಮ ಮೌಶಿ ಅಂದ್ಲಂತ.
ಅಲ್ಲಾ ನಮ್ಮ cousin ತನ್ನ ಹೆಂಡತಿ ಸೀಮಂತದ್ದ ಫೋಟೊ ಹಾಕಿದ್ದಾ ನಾ ಅಲ್ಲೇ ‘ಅಷ್ಟ ಪುತ್ರಿ ಸೌಭಾಗ್ಯವತಿ ಭವ’ ( ಪುತ್ರಿ ಯಾಕಂದರ ನಮ್ಮಂದ್ಯಾಗ ಕನ್ಯಾ ಕಡಮಿ ಅವ ) ಅಂತ ಕಮೆಂಟ ಬರದಿದ್ದೆ. ಆದರ ಪಾಪ ನಮ್ಮವ್ವಂದ ಫೇಸಬುಕ್ಕಿನಾಗ ಅಕೌಂಟ ಇಲ್ಲಾ ಹಿಂಗಾಗಿ ಅಕಿಗೆ ಗೊತ್ತ ಇದ್ದಿದ್ದಿಲ್ಲಾ. ಇಲ್ಲಾ ಅಂದರ ಅಕಿ ಫೇಸಬುಕ್ಕಿನಾಗ ಕುಬಸಾ ಮಾಡ್ತಿದ್ಲೋ ಎನೋ.
ಮುಂದ ನಮ್ಮ cousin ತನ್ನ ಹೆಂಡತಿನ್ನ ದಾವಾಖಾನಿಗೆ ಕರಕೊಂಡ ಹೋಗಬೇಕಾರ on the way to maternity hospital ಅಂತ, i am going to be father anytime soon ಅಂತ ಬರದ ಅವನ ಹಂಡೆದಂತ ಹೊಟ್ಟಿ ಬಿಟಕೊಂಡ ಹೆಂಡತಿಗೆ ಬರೇ ಒಂದ ಡಿಲೇವರಿ ಗೌನ ಹಾಕಿ scissoring room ಅಂದರ operation theatreಗೆ ಕರಕೊಂಡ ಹೋಗೊ ಫೋಟೊ ಹಾಕಿದ್ದಾ. ನಾ ಅವನ ಎಲ್ಲಾ live update like ಮಾಡಿ all the best ಅಂತ comment ಮಾಡಿದ್ದೆ. ಮುಂದ ಇಂವಾ ಒಂದ ತಾಸಿಗೆ ತನ್ನ ಮಗನ ಫೋಟೊ iphoneನಾಗ ಹೊಡದ ಫೇಸಬುಕ್ಕಿನಾಗ my one hour old son ಅಂತ announce ಮಾಡಿದ್ದಾ. ಕಡಿಕೆ ಹೆಂಡ್ತಿದ ಡಿಲೇವರಿ ಆದಮ್ಯಾಲಿಂದ ಫೋಟೊನು ಹಾಕಿ before, after ಅಂತ ಟೈಟಲ್ ಬ್ಯಾರೆ ಕೊಟ್ಟಿದ್ದಾ. ಮುಂದ ಹದಿನೈದ ದಿವಸ ಬಿಟ್ಟ suggest name for my son ಅಂತ status message ಹಾಕಿ ತಾ ಸ್ವಂತ ಹಡದದ್ದ ಮಗಗ ಫೇಸಬುಕ್ಕ ಮಂದಿ ಕಡೆ suggestion ಕೇಳಿ ಹೆಸರಿಟ್ಟಾ.
ನನಗ ನನ್ನ ಮಗಳ ಹುಟ್ಟಿದಾಗ ಮೂರ ತಿಂಗಳ ತನಕಾ ನಮ್ಮವ್ವಾ ಅಕಿ ಫೋಟೊ ಹೊಡಿಲಿಕ್ಕೆ ಕೊಟ್ಟಿದ್ದಿಲ್ಲಾ. ಇಲ್ಲೇ ನೋಡಿದರ ಆ ಹುಟ್ಟಿದ್ದ ಕೂಸಿಂದ ಇನ್ನು ಅವರವ್ವ ಕಣ್ಣ ಬಿಟ್ಟ ನೋಡೊಕಿಂತ ಮುಂಚೆ ಇಡಿ ಜಗತ್ತಿಗೆ ಗೊತ್ತಾಗೊ ಹಂಗ ಜನಾ facebookನಾಗ ಹಾಕ್ತಾರಲಾ ಅನಸ್ತು.
ನಾವೇಲ್ಲಾ ಯಾರರ ಇತ್ತೀಚಿಗೆ ಹಡದರ ಅವರ ಕೂಸಿನ್ನ ನೋಡಲಿಕ್ಕೆ ದಾವಾಖಾನಿಗೆ ಇಲ್ಲಾ ಅವರ ಮನಿಗೆ ಹೋಗೊ ಅವಶ್ಯಕತೆನ ಇಲ್ಲರಿ, ಅವರ ಫೇಸಬುಕ್ಕಿನಾಗ ಹಾಕಿದ್ದ ಫೋಟೊ ಲೈಕ ಮಾಡಿ ಬಿಟ್ಟರ ಮುಗದ ಹೋತ. ಆ ಕೂಸಿನ ಕೈಯಾಗ ನೂರ ರೂಪಾಯಿ ಕೊಡೊದ, ಹೊಗೊ ಬರೊ ಗಾಡಿ ಖರ್ಚ ಎಲ್ಲಾ ಉಳಿತದ.
ಇನ್ನ ಯಾವದರ ಹುಡಗಾ-ಹುಡಗಿದ ಮದುವಿ ಆಗಬೇಕಾರ ಅವರ ಮೊದ್ಲ ನೋಡೊದು ಫೇಸಬುಕ profile, ಅದನ್ನ ನೋಡಿದರ ಆ ಹುಡಗಂದು ಇಲ್ಲಾ ಆ ಹುಡಗಿದ ಅರ್ಧಾ ಕುಂಡ್ಲಿ ಗೊತ್ತಾಗೇ ಬಿಡ್ತದ.
ಮೊನ್ನೆ ನಮ್ಮ ಅತ್ಯಾ ತನ್ನ ಮಗಗ ಪಸಂದ ಮಾಡಿದ್ದ ಹುಡಗಿದ ಫೇಸಬುಕ್ ಪ್ರೋಫೈಲ ನೋಡಿ ಅದರಾಗ ಅಕಿ photo album ಒಳಗ sleevless t-shirt ಹಾಕ್ಕೊಂಡಿದ್ದ ಫೋಟೊ, shorts ಹಾಕ್ಕೊಂಡಿದ್ದ ಫೋಟೊ ಎಲ್ಲಾ ನೋಡಿ ‘sorry, horoscope match ಆಗಲಿಲ್ಲಾ’ ಅಂತ ಅಲ್ಲೇ ಆ ಹುಡಗಿ profileಗೆ ನೀರ ಬಿಟ್ಟ ಬಿಟ್ಟಳು.
ನಾ ” ಅಲ್ಲವಾ ಅತ್ಯಾ, ಹುಡಗಿ ನಿನ್ನ ಮಗಗ ಹೂಂ ಅಂದದ್ದ ಹೆಚ್ಚು, ಮೊದ್ಲ ಕನ್ಯಾ ಸಿಗವಲ್ವು. ಹೂಂ ಅಂದದ್ದ ಕನ್ಯಾ ಫೇಸಬುಕ್ಕಿನಾಗ ಹೆಂಗರ ಇರವಲ್ತಾಕ, ನಮ್ಮ ಮನಿಗೆ ಬಂದ ಮ್ಯಾಲೆ ನೀ ಒಂಬತ್ತ ವಾರಿ ಸೀರಿನ ಉಡಸವಂತಿ” ಅಂತ ಅಂದರು ಕೇಳಲಿಲ್ಲಾ.
ಆಮ್ಯಾಲೆ ಈಗ ಮೊದ್ಲಿನಂಗ ಕನ್ಯಾದವರು ಹುಡಗನ ಮನೆಯವರ ಬಗ್ಗೆ, ಹುಡಗನ ಬಗ್ಗೆ ನಾಲ್ಕ ಮಂದಿಗೆ ಕೇಳ್ಬೇಕಂತ ಇಲ್ಲೆ ಇಲ್ಲಾ. ಹುಡುಗನ profile ನೋಡಿದರ ಸಾಕ. ಅದರಾಗ ಅಂವಾ ಎಲ್ಲರ pubನಾಗಿಂದು, clubನಾಗ ಸಿಗರೇಟ ಜಗ್ಗೋದು ಫೋಟೊ ಏನರ ಹಾಕಿದ್ದಾ ಅಂದರ ಅಂವಾ ಸತ್ತಾ ಅಂದಂಗ. ಅವಂಗ ಛಲೋ ಕನ್ಯಾ ಸಿಕ್ಕರ ದೇವರಾಣಿ. ಅದರಾಗ ಒಂದಿಷ್ಟ ಮಂದಿ ದೋಸ್ತರ ತಾವ ನಮ್ಮ ಜೊತಿ ಬಾಟ್ಲಿ ಹಿಡದದ್ದ ಫೋಟೊ ಹಾಕಿ ನಮ್ಮನ್ನ ಟ್ಯಾಗ ಮಾಡ್ತಾರ. ಹಂತಾವರಿಗೆ ಅಂತು ಹಿಡದ ಬೂಟಲೇ ಹೋಡಿಬೇಕು.
ಅದಕ್ಕ ನಾ ಲಗ್ನಾ ಆಗೋ ಹುಡಗರಿಗೆ
“ಲೇ, ಮೊದ್ಲ ನಿಮ್ಮ facebook profileನಾಗಿನ ಫಾಲತು ಫೋಟೊ ತಗದ ಒಂದಿಷ್ಟ ಮಂತ್ರಾಲಯಕ್ಕ ಹೋಗಿದ್ದ, ತಿರುಪತಿಗೆ ಹೋಗಿದ್ದ, ಕಾಯಿಪಲ್ಲೇ ತರೋ ಫೋಟೊ, ಗಿರಣಿಗೆ ಬೀಸಗೊಂಡ ಬರಲಿಕ್ಕೆ ಹೋಗಿದ್ದ ಫೋಟೊ, ನೀರ ತುಂಬೊ ಫೋಟೊ update ಮಾಡರಿ ಮಕ್ಕಳ, ಅಂದರರ ನಿಮಗ ಕನ್ಯಾ ಸಿಗಬಹುದು” ಅಂತ ಕಿವಿ ಮಾತ ಹೇಳ್ತಿರತೇನಿ. ಪಾಪ, ನಮ್ಮ ಹುಡಗರಿಗೆ ಮೊದ್ಲ ಕನ್ಯಾ ಸಿಗಂಗಿಲ್ಲಾ, ಇನ್ನ ಇವರ facebook profile ನೋಡಿ ಬಿಟ್ಟರ ಸಿಕ್ಕ ಕನ್ಯಾನು ಕಟಗೊಳಿಕ್ಕೆ ಮೀನಾ-ಮೇಷ ಮಾಡಲಿಕ್ಕೆ ಶುರು ಮಾಡ್ತಾಳ.
ಇನ್ನೊಂದ ಮಜಾ ಅಂದರ ಇತ್ತೀಚಿಗೆ ಮನ್ಯಾಗ ಇರೋ ಹೆಣ್ಣಮಕ್ಕಳು ಸಹಿತ facebook addict ಆಗಿ ಬಿಟ್ಟಾರ. ನಮ್ಮ ಬೆಂಗಳೂರ ಮಾಮಿ ಒಬ್ಬೊಕಿ ಫೇಸಬುಕ್ಕ ಸಂಬಂಧ ಹಟಾ ಹಿಡದ ಮನಿಗೆ ಒಂದ ಕಂಪ್ಯೂಟರ ತೊಗೊಂಡ ಅದರಾಗ ದಿವಸಕ್ಕ ಹತ್ತ ಪೊಸ್ಟ ಮಾಡತಾಳ. ಮುಂಜಾನೆ ಎದ್ದ ತಾ ಹಾಕಿದ್ದ ರಂಗೋಲಿ, ತಾ ಕೇಳೋ ಹಾಡಿಂದ ಲಿಂಕ, ಮಾಡಿದ್ದ ತಿಂಡಿ ತನಕ ಎಲ್ಲಾ ಫೇಸಬುಕ್ಕಿನಾಗ ಫೋಟೊ ಹಾಕಿ ಆಮ್ಯಾಲೆ ಸ್ನಾನಕ್ಕ ಹೋಗ್ತಾಳ. ಅರ್ಧಾ ಅಕಿ ಫೇಸಬುಕ್ಕಿನಾಗ ಫೋಟೊ ಹಾಕೊ ಸಂಬಂಧ ದಿವಸಾ ಮಜಾ-ಮಜಾ ತಿಂಡಿ ಮಾಡತಾಳ ಕಾಣ್ತದ. ಅಕಿಗೆ ಫೇಸಬುಕ್ಕಿನಾಗ upload ಮಾಡಿದರ ಅದ ನೇವೇದ್ಯ ಆದಂಗ, ಮುಂದ ಊರ ಮಂದಿ ಅಕಿ breakfastಗೆ ಕಣ್ಣ ಬಿಟ್ಟ like ಮಾಡಿದಮ್ಯಾಲೆ ಅಕಿಗೆ ಅದನ್ನ ತಿಂದಷ್ಟ ಸಮಾಧಾನ. ಪಾಪ, ನಮ್ಮ ಮಾಮಾ ತಿಂಡಿ ತಿಂದ ಆಫೀಸಿಗೆ ಹೋಗೊದರಾಗ ಇಡೀ ಆಫೀಸ ಮಂದಿ ಎಲ್ಲಾ “ಏನಪಾ ಇವತ್ತ ವಡಾ- ಪಾವ ಜೋರ ಇತ್ತನ” ಅಂತ ಕೇಳ್ತಾರ. ಮೊದ್ಲ ಇವಂಗ ಗೊತ್ತಾಗತಿದ್ದಿಲ್ಲಾ ಇವರಿಗೆಲ್ಲಾ ಹೆಂಗ ಗೊತ್ತಾಗತದ ನಾ ತಿಂದ ಬಂದಿದ್ದ ಅಂತ. ಆಮ್ಯಾಲೆ ಗೊತ್ತಾತ ಇದ ಎಲ್ಲಾ ತನ್ನ ಹೆಂಡತಿ ಫೇಸಬುಕ್ಕ ಪ್ರಭಾವ ಅಂತ. ಕೆಲವೊಮ್ಮೆ ಹಿಂದಿನ ದಿವಸದ ಅನ್ನ ಉಳದಾಗ ನಮ್ಮ ಮಾಮಿ ಅವಂಗ ಕಲಸನ್ನ ತಿನಿಸಿ ಕಳಸಿರತಾಳ, ಆಮ್ಯಾಲೆ ಆ ಫೇಸಬುಕ್ಕಿನಾಗ ಫೋಟೊ ಹಾಕೋ ಸಂಬಂಧರ ಕಡಿಕೆ ನೀರ ದೋಸೆ ಮಾಡಿ ತಾ ಒಬ್ಬಕಿನ ಹೊಡದಿರತಾಳ. ಏನ್ಮಾಡ್ತೀರಿ ಹಿಂತಾ ಹೆಣ್ಣ ಮಕ್ಕಳಿಗೆ?
ಒಟ್ಟ ನೀವ ಏನ ಅನ್ನರಿ ಇವತ್ತ ಅವನೌನ ನಮಗ ಆಧಾರ ಕಾರ್ಡ ಇಲ್ಲದ ಗ್ಯಾಸ ಸಿಲೆಂಡರಗೆ subsidy ಸಿಗದಿದ್ದರೂ ಅಡ್ಡಿಯಿಲ್ಲಾ facebook profile ಮಾತ್ರ ಮನಿಗೆ ಒಬ್ಬರಿಗರ ಇರಬೇಕ ಅಂತ ನನಗ ಅನಸ್ತದ. ಅಲ್ಲಾ, ಅದ ಇಲ್ಲಾ ಅಂದರ ನೀವು ಇದ್ದರು ಇಲ್ಲದಂಗ ಮತ್ತ. ಇವತ್ತ ನೀವು ಸಮಾಜದಾಗ ನಾಲ್ಕ ಮಂದಿಗೆ ಹಚಗೊಳ್ಳಿಲ್ಲಾಂದ್ರು ಅಡ್ಡಿಯಿಲ್ಲಾ ಫೇಸಬುಕ್ಕಿನಾಗರ ಹಚಗೊಳ್ಳರಿ. ಈಗೇಲ್ಲಾ ಮಂದಿ ಸುಖ-ದುಃಖ ಹಂಚಗೊಳದ ಫೇಸಬುಕ್ಕಿನಾಗ, ನೀವು ಫೇಸಬುಕ್ಕಿನಾಗ ಇಲ್ಲಾಂದರ ನಿಮಗ ಯಾರ ಹಡದದ್ದು ಗೊತ್ತಾಗಂಗಿಲ್ಲಾ, ಸತ್ತದ್ದು ಗೊತ್ತಾಗಂಗಿಲ್ಲಾ. ಫೇಸಬುಕ್ಕಿನಾಗ ಮಂದಿ ಹಡದರ congrats ಅಂತಾರ, ಸತ್ತರ RIP ಅಂತಾರ. ಆಮ್ಯಾಲೆ ಮೊದ್ಲಿನಂಗ ಈಗ ಸತ್ತವರ ಮನಿಗೆ ಹೋಗಿ ದೂರಿಂದ ಮಾತಾಡಿಸಿ ಬರೋ ಪದ್ದತಿ ಹೋಗೆ ಬಿಟ್ಟದ. ಎಲ್ಲಾ ಫೇಸಬುಕ್ಕಿನಾಗ, ಸತ್ತ ಸುದ್ದಿ ಲೈಕ ಮಾಡಿ RIP ಅಂದರ ಮುಗದ ಹೋತ. ಆಮ್ಯಾಲೆ ಯಾರ ಮನ್ಯಾಗ ಸತ್ತೀರತಾರಲಾ ಅವರು ಎಲ್ಲಾರಿಗೂ ಹೇಳ ಬೇಕಂತ ಏನಿಲ್ಲಾ, facebook ಒಳಗ ಹಾಕಿ ಬಿಟ್ಟರ ಮುಗದ ಹೋತ. ಮೊನ್ನೆ ಒಬ್ಬಂವಾ ಅವರವ್ವಂದ ಕಾಗಿ ಪಿಂಡದ್ದ ಫೋಟೊ ಸಹಿತ ಫೇಸಬುಕ್ಕಿನಾಗ ಹಾಕಿ ಅವರ ಅಣ್ಣ ತಮ್ಮಂದರಿಗೆಲ್ಲಾ ಟ್ಯಾಗ ಮಾಡಿದ್ದಾ! ಏನ್ಮಾಡ್ತೀರಿ?
ಇವತ್ತ ನೀವ ಫೇಸಬುಕ್ಕಿನಾಗ ಇಲ್ಲಾಂದರ ನಿಮ್ಮ ಬಗ್ಗೆ ಮಂದಿಗೆ, ಮಂದಿ ವಿಷಯ ನಿಮಗ ಹೆಂಗ ಗೊತ್ತಾಗ ಬೇಕ? ಅದಕ್ಕ ನಮ್ಮ ರಾಘ್ಯಾ ಹೇಳಿದ್ದ ‘ಎಲ್ಲೇರ ಇರ, ಹೆಂಗರ ಇರ… ಒಟ್ಟ ಫೇಸಬುಕ್ಕಿನಾಗ ಇರ’ ಅಂತ ಹೇಳಿ. ಈಗ ನೋಡ್ರಿ ನೀವು ಫೇಸಬುಕ್ಕಿನಾಗ ಇದ್ದಿದ್ದಿಲ್ಲಾ ಅಂದರ ಇವತ್ತ ನಿಮಗ ಈ ಲೇಖನಾ ನಾ ಕೆಂಡಸಂಪಗಿ ಒಳಗ ಬರದಿದ್ದರ ಗೊತ್ತಾಗತಿತ್ತ?
ಅದಕ್ಕ ನಾನೂ ಹೇಳೋದ ‘ಎಲ್ಲೇರ ಇರ್ರಿ, ಹೆಂಗರ ಇರ್ರಿ, ಒಟ್ಟ ಫೇಸಬುಕ್ಕಿನಾಗ ಇರ್ರಿ’ ಅಂತ.
ಅನ್ನಂಗ ಎಲ್ಲಾ ಬಿಟ್ಟ ಇವತ್ತ ಮತ್ತ ಯಾಕ ಈ ಸುಡಗಾಡ ಫೇಸಬುಕ್ಕದ ವಿಷಯ ಬಂತು ಅಂದರ ಇವತ್ತ ನಮ್ಮ ಫೇಸಬುಕ್ಕಿಗೆ ಒಂಬತ್ತ ತುಂಬಿ ಹತ್ತರಾಗ ಬಿತ್ತ, ಇವತ್ತ facebook ನಮ್ಮ ಜೀವನದ ಅವಿಭಾಜ್ಯ ಅಂಗ ಅಂದಮ್ಯಾಲೆ ಅದರ ಬಗ್ಗೆ ಅದರ ಹುಟ್ಟಿದ ಹಬ್ಬಕ್ಕ ಬರಿಲಿಲ್ಲಾ ಅಂದರ ಹೆಂಗ ಅಂತ ಬರದೆ ಇಷ್ಟ.
ಇದನ್ನ ಲೈಕ ಮಾಡಿ ನಿಮ್ಮ ಫೇಸಬುಕ್ಕಿನಾಗ ಶೇರ್ ಮಾಡಿ ಪುಣ್ಯಾ ಕಟಗೋರಿ…..ಇಲ್ಲಾಂದರ ಫೇಸಬುಕ್ಕ ಸಿಟ್ಟಗೇಳತದ ಮತ್ತ.

This entry was posted on Saturday, February 16th, 2013 at 5:30 am and is filed under ಕೆಂಡಸಂಪಿಗೆ. You can follow any responses to this entry through the RSS 2.0 feed. You can leave a response, or trackback from your own site.

Post a Comment