ರ್ರೀ….ನಂದ ಅಕೌಂಟ ಕ್ಲೋಸ್ ಮಾಡರಿ

ಒಂದ ವಾರದಿಂದ ಯಾಕೋ ನನ್ನ ಹೆಂಡತಿ ನನಗ
“ರ್ರಿ ಬರೋ ಮಾರ್ಚ ೩೧ಕ್ಕ ನಂದ ಅಕೌಂಟ ಕ್ಲೋಸ್ ಮಾಡಿ ಬಿಡರಿ” ಅಂತ ಗಂಟs ಬಿದ್ದಾಳ. ನಂಗ ಅಕಿ ಯಾ ಸುಡಗಾಡ ಅಕೌಂಟ ಬಗ್ಗೆ ಮಾತಡಲಿಕತ್ತಾಳ ಅಂತ ಗೊತ್ತಾಗವಲ್ತಾಗೇದ. ಹಂಗ ಅಕಿ ಎರಡ ಹಡದ ಮ್ಯಾಲೆ ಅಕಿ ಅಕೌಂಟ ನಾ ಅಕಿ ತವರಮನಿ ಖರ್ಚನಾಗ ಕ್ಲೋಸ ಮಾಡೆ ಮಾಡೇನಿ ಇನ್ನ ಮತ್ತ ಯಾವದ ಇಕಿದ ಅಕೌಂಟ ಒಪೆನ ಅದಪಾ ಕ್ಲೋಸ ಮಾಡಲಿಕ್ಕೆ ಅಂತ ನಾ ವಿಚಾರ ಮಾಡಲಿಕತ್ತೇನಿ. ಅಲ್ಲಾ, ನಾ ಒಂದ ವರ್ಷದ ಹಿಂದ ಮೂಡ ಚೆಂಜ್ ಆಗಿ ಇನ್ನೊಂದ ಆದರ ಆಗಲಿ ಅಂತ ಅಕಿಗೆ ಅಕೌಂಟ ರಿ-ಒಪೆನ್ ಮಾಡಿಸಿಗೊಂಡ ಬಾ ಅಂದಾಗ once closed is closed ಅಂತ ದಿಮಾಕ ಬ್ಯಾರೆ ಬಡದಿದ್ಲು. ಈಗ ಬಂದ ಆಗಿದ್ದ ಅಕೌಂಟ ಮತ್ತ ಕ್ಲೋಸ ಮಾಡರಿ ಅಂತ ಗಂಟ ಬಿದ್ದಳಲಾ ಅನಸಲಿಕತ್ತದ.
ಅದರಾಗ ಇದ ಇಯರ್ ಎಂಡ ಬ್ಯಾರೆ, ನಾ ಆಫೀಸನಾಗ ಕಸ್ಟಮರಗೆ ಔಟಸ್ಟ್ಯಾಂಡಿಂಗ್ ಕ್ಲೀಯರ್ ಮಾಡಿ ಇಯರ್ ಎಂಡಿಗೆ ನಿಮ್ಮ ಅಕೌಂಟ ಕ್ಲೋಸ್ ಮಾಡರಿ ಅಂತ ಗಂಟ ಬಿದ್ದರ ಮನ್ಯಾಗ ನನ್ನ ಹೆಂಡತಿ ನಂಗ ‘ನಂದ ಅಕೌಂಟ ಕ್ಲೋಸ್ ಮಾಡರಿ’ ಅಂತ ಪೀಡಾ ಬೆನ್ನ ಹತ್ತಿದಂಗ ಬೆನ್ನ ಹತ್ಯಾಳ.
ನಾ ನಿನ್ನೆ ತಲಿಕೆಟ್ಟ ಕಡಿಕೆ ಅಕಿಗೆ
“ನಿಂದ ಯಾ ಅಕೌಂಟಲೇ, ನೀ ಏನರ ನನಗ ಸಾಲ ಕೊಟ್ಟಿಯೋ, ಇಲ್ಲಾ ನಾ ನಿಮ್ಮಪ್ಪನ ಕಡೆ ಏನರ ಉದ್ರಿ ಇಸಗೊಂಡೇನೋ? ಇಲ್ಲಾ ನಮ್ಮಿಬ್ಬರದು ಏನರ joint venture ಅದನೋ ಅಕೌಂಟ ಕ್ಲೋಸ ಮಾಡಲಿಕ್ಕೆ?” ಅಂತ ಜೋರ ಮಾಡಿದೆ.
ಅಕಿ ಒಂದ ಸರತೆ ನನ್ನ ಮಾರಿ ನೋಡಿ ಮಕ್ಕಳ ಮಾರಿ ತೋರಿಸಿ
“ಯಾಕ್, ಹೆಂಗ ಅನಸ್ತದ? ಇವ ಯಾರವು? ಇವೇನ joint venture ಇಲ್ಲಾ ನಿಂಬದ ಒಬ್ಬರದ proprietorಶಿಪ್ಪಾ?” ಅಂದ್ಲು. ಆದರು ಅಕಿ ತಂದ ಯಾ ಅಕೌಂಟ ಕ್ಲೋಸ್ ಮಾಡಬೇಕು ಅಂತೇನ ಹೇಳಲಿಲ್ಲಾ. ನಾ ಭಾಳ ಕಾಡಲಿಕತ್ತ ಮ್ಯಾಲೆ
“ಮತ್ತೇನರಿ ಹನ್ನೆರಡ ವರ್ಷದಿಂದ ನಿಮ್ಮ ಸಂಸಾರ ಸಂಭಾಳಸಿ-ಸಂಭಾಳಸಿ ನಂಗ ಸಾಕ ಸಾಕಾಗೇದ. ನೀವೇನ ನಮಗ ಇಷ್ಟ ಸಂಸಾರ ಛಂದಾಗಿ ಮಾಡ್ಕೊಂಡ ಹೋಗಿದ್ದಕ್ಕ ಒಂದ ಪಗಾರ ಕೊಡಂಗಿಲ್ಲಾ, ಬೋನಸ ಕೊಡಂಗಿಲ್ಲಾ, ಇನ್ನೂ ಎಷ್ಟ ದಿವಸಂತ ಹಿಂಗ ನಿಮ್ಮ ಸಂಬಂಧ ಜೀವಾ ತೇಯದ ತೇಯದ ಸಾಯಿಬೇಕು ಸುಮ್ಮನ ನಂಗೇನ ಕೊಡೊದ ಕೊಟ್ಟ ನಂದ ಅಕೌಂಟ ಕ್ಲೋಸ ಮಾಡಿ ಬಿಡರಿ” ಅಂತ ನಂಗ ತಿರಗಿ ಅಂದ್ಲು.
ಅಯ್ಯ..ಇಕಿ ಏನ ಒಮ್ಮಿಂದೊಮ್ಮೇಲೆ ಸೀದಾ ಡೈವರ್ಸಗೆ ಹೊಂಟಳಲಾ, ಹಂತಾದ ಏನ ಕೆಟ್ಟ ಮಾಡೇನಿ ನಾ ಅಕಿಗೆ? ಎಲ್ಲರ ಸುವರ್ಣಾ tvgಗೆ ಇಲ್ಲಾ TV9ಗೆ ಸಂಸಾರ ಬ್ರೇಕ್ ಮಾಡಿ ಬ್ರೇಕ್ಕಿಂಗ news ಕೊಟ್ಟಗಿಟ್ಟಾಳಂತ ನಂಗ ಖರೇನ ಚಿಂತಿ ಹತ್ತಿ
” ಲೇ, ನಿಂದ ಮಹಿಳಾ ದಿವಸದ ಭಾಷಣ ಬಂದ ಮಾಡ. ಸಪ್ತಪದಿ ತುಳದ ಅಗ್ನಿ ಸಾಕ್ಷಿ ಮಾಡ್ಕೊಂಡ ಮುಂದಿನ ಏಳ ಜನ್ಮಕ್ಕ ಇವನ ನನ್ನ ಗಂಡ ಆಗಲಿ ಅಂತ ನನ್ನ ಲಗ್ನ ಮಾಡ್ಕೊಂಡ ಬಂದಿ ಈಗ ಒಂದನೇ ಜನ್ಮಕ್ಕ ಕಟಗೊಂಡ ಗಂಡ ಬ್ಯಾಸರಾದನೇನ ನಿನಗ” ಅಂತ ನಾ ಅಂದರ
“ಅಯ್ಯ, ಆವಾಗ ನನಗೇನ ಗೊತ್ತಿತ್ತ ನನ್ನ ಜನ್ಮಕ್ಕ ಹಿಂತಾ ಗಂಡ ಸಿಗತಾನ ಅಂತ ಹೇಳಿ, ನಂಗ ತಿಳವಳಿಕೆ ಬರೋದರಾಗ ಎರಡ ಮಕ್ಕಳನ ಕೈಯಾಗ ಕೊಟ್ಟ ನೀವ ಆರಾಮ ಇದ್ದೀರಿ. ಎಲ್ಲಾದಕ್ಕೂ ಸಾಯೋಕಿ ನಾ ಒಬ್ಬಕೀನ. ಇಷ್ಟ ಮಾಡಿದರು ನನ್ನ ಹಣೆಬರಹಕ್ಕ ಏನ ಫಾಯದೆ ಇಲ್ಲಾ ಏನೀಲ್ಲಾ” ಅಂತ ತನ್ನ ರಾಗ ಶುರು ಮಾಡಿದ್ಲು.
ನಂಗ ಇಕಿ ಒಮ್ಮಿಂದೊಮ್ಮೇಲೆ ಹಿಂಗ್ಯಾಕ ಮಾತಾಡಲಿಕತ್ತಾಳ ತಿಳಿಲಿಲ್ಲಾ. ಅಲ್ಲಾ ಸಂಸಾರ ಅನ್ನೋದ ಏನ ಬ್ಯುಸಿನೆಸ್ ಇದರಾಗ ಫಾಯದೆ, ಲುಕ್ಸಾನ ನೋಡಲಿಕ್ಕೆ? ಇದನ್ನೇನ ವರ್ಷಕ್ಕೊಮ್ಮೆ ಮಾರ್ಚ ಎಂಡಿಗೆ ಪಾರ್ಟಿ ಅಕೌಂಟ ಕ್ಲೋಸ ಮಾಡಿದಂಗ ಕ್ಲೋಸ್ ಮಾಡಿ ಹೊಸಾ ಅಕೌಂಟ ಒಪೆನ ಮಾಡಲಿಕ್ಕೆ? ಹೆಂಡ್ತೇನ ನನ್ನ ಪಾರ್ಟನರ ‘ನಾಳಿಂದ ನಾವು-ನೀವು ಬ್ಯಾರೆ ಆಗೋಣು’ ಅಂತ ಪ್ರಾಫಿಟ ಶೇರ ಮಾಡ್ಕೊಂಡ ಹೋಗಲಿಕ್ಕೆ ಅಂತ ನಾ ವಿಚಾರ ಮಾಡಲಿಕತ್ತೆ.
ಆದರು ಇತ್ತೀಚಿಗೆ ಎಲ್ಲಾ ಸಂಬಂಧಗಳು, ಭಾಂಧವ್ಯಗಳು ಕಮರ್ಶಿಯಲ್ ಆಗಲಿಕತ್ತಾವ. ಅಲ್ಲಾ, ಎಲ್ಲಾರು ಪ್ರತಿಯೊಂದರಾಗೂ ಪ್ರಾಫಿಟ ಲಾಸ್ ನೋಡಲಿಕತ್ತಾರ ಖರೆ ಆದರೂ ಗಂಡಾ ಹೆಂಡತಿ ನಡಕೂ ವ್ಯವಹಾರ ಬರಬಾರದ ಬಿಡ್ರಿ. ಅದು ನಮ್ಮ ಮನ್ಯಾಗ ಹಿಂಗ ಆಗಲಿಕತ್ತಲಾ ಅಂತ ನಂಗ ಖರೇನ ಕೆಟ್ಟ ಅನಸ್ತ.
ಅದರಾಗ ಯಾವಾಗ ಹೆಂಡತಿ ಗಂಡಾ ಇಬ್ಬರೂ ಕೆಲಸಕ್ಕ ಹೋಗಿ ಇಬ್ಬರು ಗಳಸಲಿಕ್ಕೆ ಶುರು ಮಾಡ್ತಾರಲಾ ಆವಾಗ ಇಬ್ಬರ ನಡಕ ರೊಕ್ಕದ ಸಂಬಂಧ ಕಿರಿ-ಕಿರಿ ಶುರು ಆಗೇ ಆಗ್ತದ. ಇವತ್ತ ಇಬ್ಬರು ದುಡಿತಾರ, ಇಬ್ಬರು ಕೂಡೇ ಖರ್ಚ ಮಾಡ್ತಾರ. ಇಷ್ಟ ಅಲ್ಲಾ ಇಬ್ಬರೂ ತಮ್ಮ ಖರ್ಚ ಲೆಕ್ಕಾನೂ ಸಪರೇಟ ಇಡತಾರ. ಇವತ್ತ ಬಂದಿರೋ ಪ್ರಾಬ್ಲೇಮ ಅದು. ಯಾವಾಗ
“ಯಾಕ್, ನಾ ಏನ ದುಡಿಯಂಗಿಲ್ಲೇನ?”,
“ನನ್ನ ರೊಕ್ಕಾ ನಾ ಯಾರಿಗರ ಕೊಡ್ತೇನಿ”
“ನಾ ದುಡದದ್ದ ನಾ ಏನರ ಮಾಡ್ತೇನಿ?” ಅಂತ ದುಡಿಯೋ ಹೆಂಡ್ತಿ ಅನ್ನಲಿಕತ್ಲೊ ಆವಾಗಿಂದ ಗಂಡಾ ಹೆಂಡತಿನೂ ಪಾರ್ಟನರ ಆದಂಗ ಆದರು. ಇವತ್ತ ಸಂಬಂಧಗಳೇಲ್ಲಾ ಹಾಳ ಆಗಲಿಕತ್ತಿದ್ದ ಈ ಸುಡಗಾಡ ರೊಕ್ಕದ ಸಂಬಂಧ. ಅಲ್ಲಾ ಹಂಗ ನನ್ನ ಹೆಂಡತೇನ ದುಡಿಲಿಕ್ಕೆ ಹೋಗಂಗಿಲ್ಲ ಬಿಡ್ರಿ, ಪಾಪ ಅಕಿಗೆ ನನ್ನ ಸಂಸಾರ ನಡಿಸಿಗೊಂಡ ಹೋಗೊದರಾಗ ರಗಡ ಆಗೇದ.
ಆದ್ರ ಏನ ಅನ್ನರಿ ಗಂಡ ಹೆಂಡತಿ ಇಬ್ಬರೂ ದುಡಿಯೋ ಸಂಸಾರದಾಗ ಸಮಸ್ಯೆನ ವಿಚಿತ್ರ ಇರತಾವ.
ಮೊನ್ನೆ ಬೆಂಗಳೂರಿಂದ ನಮ್ಮ ದೋಸ್ತ ರಾಘ್ಯಾ ಅವರವ್ವನ ಕಣ್ಣ ಆಪರೇಶನ್ ಮಾಡಸಲಿಕ್ಕೆ ಬಂದಿದ್ದಾ, ಆ ಮಗಾ ಕಿಸೆದಾಗ ಒಂದ ಹದಿನೈದ ಸಾವಿರ ರೂಪಾಯಿ ಇಟಗೊಂಡ ಹುಬ್ಬಳ್ಳಿ ಸಣ್ಣ ಊರ, ಕಣ್ಣ ಆಪರೇಶನಗೆ ಭಾಳ ಖರ್ಚ ಆಗಂಗಿಲ್ಲಾ ಅಂತ ಇಲ್ಲೆ ಆಪರೇಶನ್ ಮಾಡಸಲಿಕ್ಕೆ ಬಂದಿದ್ದಾ. ದಾವಾಖಾನ್ಯಾಗ ಹೋಗಿ ಎಲ್ಲಾ ಚೆಕ್ ಮಾಡಿಸಿದ ಮ್ಯಾಲೆ ಆಪರೇಶನ್ ಮತ್ತ ಆ ಇಂಪೊರ್ಟೆಡ್ ಲೆನ್ಸ್ ಎಲ್ಲಾ ಹಿಡದ ಅರವತ್ತ ಸಾವಿರ ರೂಪಾಯಿ ಆಗ್ತದ ಅಂತ ಎಸ್ಟಿಮೇಶನ್ ಕೊಟ್ಟರಂತ.
“ಏ ನಮ್ಮವ್ವಗ ಎಪ್ಪತ್ತ ದಾಟ್ಯಾವ ಲೆನ್ಸ್ ಯಾಕ” ಅಂದರು ಡಾಕ್ಟರ ಅದ ಬೇಕ ಇಲ್ಲಾಂದರ ನಡೆಯಂಗಿಲ್ಲಾ ಅಂತ ಅಂದರಂತ.
ಕಡಿಕೆ ಇಂವಾ ಅರ್ಜೆಂಟ ಒಂದ ಐವತ್ತ ಸಾವಿರ ರೂಪಾಯಿ ಬೇಕು ಅಂತ ನಂಗ ಕೇಳಿದಾ. ನಾ ಅಂವಾ ನನಗ ರೊಕ್ಕಾ ಕೇಳಿದ್ದ ನೋಡಿ ಗಾಬರಿ ಆದೆ. ಅಲ್ಲಾ ಜನಾ ನನಗು ಐವತ್ತ ಸಾವಿರ ರೂಪಾಯಿಗಟ್ಟಲೆ ಸಾಲಾ ಕೊಡೋರ ಲೆವೆಲದಾಗ ನೋಡ್ತಾರಲಾ ಅಂತ ಖುಷಿ ಆತ ಖರೆ ಆದ್ರ ಕೊಡಲಿಕ್ಕೆ ನನ್ನ ಕಡೆ ಅಷ್ಟ ರೊಕ್ಕ ಎಲ್ಲೆ ಬರಬೇಕು, ನಾ ಅವಂಗ ಸೀದಾ
“ಲೇ, ವಡ್ಡರಿಗೆ ಕುಬಸಾ ಕೇಳಿದ್ದರಂತ, ನೀ ಏನಲೇ ನನಗ ಐವತ್ತ ಸಾವಿರ ಕೊಡ ಅಂತಿ ಅಲಾ, ಅಷ್ಟ ರೊಕ್ಕ ನನ್ನ ಕಡೆ ಇದ್ದರ ನಮ್ಮಪ್ಪಂದs ಇನ್ನೊಂದ ಕಣ್ಣಿನ ಆಪರೇಶನ ಮಾಡಸ್ತಿದ್ದಿಲ್ಲೇನ” ಅಂತ ಕಡಿಕೆ ಇನ್ನೊಬ್ಬ ದೋಸ್ತನ ಕಡೆ ರೊಕ್ಕ ಇಸದ ಕೊಟ್ಟೆ.
“ಅಲ್ಲಲೇ ಗಂಡಾ ಹೆಂಡತಿ ಇಷ್ಟ ದುಡಿತೀರಿ, ದುಡದದ್ದನ್ನ ಏನ ಮಾಡ್ತೀರಲೇ” ಅಂತ ಅಂದರ
“ದೋಸ್ತ, ನಿಂಗ ಇದ್ದ ಹಕಿಕತ್ ಹೇಳಲೇನ, ನನ್ನ ಹೆಂಡತಿ ತನ್ನ ಪಗಾರದಾಗಿಂದ ಒಂದ ನಯಾ ಪೈಸಾ ಮನಿಗೆ ಕೊಡಂಗಿಲ್ಲಪಾ, ಬೆಂಗಳೂರಾಗ ಅಪಾರ್ಟಮೆಂಟ ತೊಗೊಂಡೇವಲಾ ಅದಕ್ಕ ಅಕಿ ಒಂದ ರೂಪಾಯಿನೂ ಕೊಡಲಿಲ್ಲಾ. ನಾನ ತಿಂಗಳಾ ಇಪ್ಪತ್ತೈದ ಸಾವಿರ ಕಟ್ಟತೇನಿ. ಇನ್ನ ಅಕಿ ತನ್ನ ಪಗಾರ ತನಗ ಎಷ್ಟ ಬೇಕ ಅಷ್ಟ ಇಟಗೊಂಡ ಉಳದದ್ದನ್ನ ತನ್ನ ತವರಮನಿಗೆ ಕಳಸ್ತಾಳ, ಪಾಪ ನಮ್ಮತ್ತಿಗೆ ಎರಡು ಹೆಣ್ಣ, ಅದರಾಗ ತಂಗಿ ಇನ್ನೂ ಕಲಿತಾಳ ಹಿಂಗಾಗಿ ಅವರ ದೇಖರಕಿಗೂ ರೊಕ್ಕ ಬೇಕಲಾ” ಅಂದಾ. ನಂಗು ಅದ ಖರೇನ ಅನಸ್ತ. ಬರೇ ಹೆಣ್ಣ ಹಡದವರ ಮನಿ ಹೆಂಗ ನಡೀಬೇಕ ಮತ್ತ. ಮಗಳು ಇಲ್ಲಾ ಅಳಿಯಾನ ಮಾಡಬೇಕಲಾ.
ಆದರು ಈ ಮಗಾ ಆವಾಗ ನೌಕರಿ ಇದ್ದೋಕಿ ಬೇಕ ಅಂತ ಮಾಡ್ಕೊಂಡ ನಮ್ಮ ಮುಂದ ನಂಬದ ಎರಡ ಪಗಾರ ಅಂತ ದೊಡ್ಡಿಸ್ತನಾ ಬಡದಿದ್ದಾ ಅನುಭವಸಲಿ ಬಿಡ ಅಂತ ಸುಮ್ಮನಾದೆ.
ಅದರಾಗ ಅವನ ಹೆಂಡತಿ ಯಾ ಪರಿ ಇದ್ದಾಳಂದ್ರ ಇವರ ಪೈಕಿ ಯಾರದರ ಮದುವಿ, ಮುಂಜವಿ ಆದರ
“ಯಾಕ, ನನ್ನ ರೊಕ್ಕ ಯಾಕ? ನಿಮ್ಮ ಪೈಕಿ ಮದುವಿ, ನೀವ ಗಿಫ್ಟ ಕೊಡ” ಅಂತ ಭಿಡೆ ಬಿಟ್ಟ ಹೇಳ್ತಾಳಂತ. ಅದಕ್ಕ ಈ ಮಗಾನೂ ಅಕಿಗೆ
“ನಿನ್ನ ತವರಮನಿ ನಿನ್ನ ಖರ್ಚಿಲೇನ ಹೋಗಿ ಬಾ” ಅಂತ ಕಳಸ್ತಾನ, ಬೇಕಾರ ಅಕಿ ವರ್ಷಕ್ಕ ಹತ್ತ ಸರತೆ ಹೋಗವಳ್ಳಾಕ. ಇನ್ನ ಮನಿ ಇಂವಾ ನಡಸೋದ ಎಲ್ಲಾ ತನ್ನ ಪಗಾರದಾಗ, ಕಾರ ಕಂತ ಕಟ್ಟೊದ ತನ್ನ ಪಗಾರದಾಗ. ಇಷ್ಟೇಲ್ಲಾ ಮಾಡಿ ಮ್ಯಾಲೆ ಮತ್ತ ವರ್ಷಕ್ಕ ಒಂದ ಎರಡ ತೊಲಿ ಬಂಗಾರ ಮಿನಿಮಮ್ ಅಕಿಗೆ ಕೊಡಸಬೇಕು. ಅದ ಎಲ್ಲಾ ಗಂಡಂದರಿಗೂ ಮ್ಯಾಂಡೇಟರಿ ಬಿಡ್ರಿ, ಹೆಂಡ್ತಿ ಬಂಗಾರದಂಗ ಇರಲಿ ಬಿಡಲಿ ಬಂಗಾರಂತು ಕೊಡಸಬೇಕು. ಹಾಂ, ಅದಕ್ಕೂ ಮೀರಿ ಅಕಿಗೆ ಮತ್ತೇನರ ಬಯಕಿ ಹತ್ತಿದರ ಅಕಿ ಅದನ್ನ ತನ್ನ ರೊಕ್ಕದಾಗ ತಿರಿಸ್ಗೋತಾಳ. ಮ್ಯಾಲೆ ಇವರ ಅವ್ವಂದು, ಹುಬ್ಬಳ್ಳಿ ಮನಿ ಖರ್ಚ ಎಲ್ಲಾ ಇವನ ಪಗಾರದಾಗ. ಅವರವ್ವನ ಮನಿದು ಅಕಿ ಪಗಾರದಾಗ, ಹಂಗ ವ್ಯವಹಾರದಾಗ ಭಾರಿ ಕ್ಲೀಯರ್ ಇದ್ದಾರ ಇಬ್ಬರು.
ಏನ್ಮಾಡ್ತೀರಿ ಇದು ನಮ್ಮ ಗಂಡಾ ಹೆಂಡತಿ ಇಬ್ಬರು ಕೆಲಸಾ ಮಾಡಿ ಸಂಸಾರ ನಡಸೋ ರೀತಿ. ಇವತ್ತ ಮನಿಗೆ ಎರಡ ಪಗಾರನ ಎರಡ ಸಂಸಾರ ಆಗಲಿಕ್ಕೆ ಮೂಲ ಕಾರಣ ಆಗಲಿಕತ್ತಾವ ಅಂತ ನನಗ ಅನಸ್ತದ.
ಆ ರಾಘ್ಯಾನ ಹೆಂಡತಿದ ಇನ್ನೊಂದ ಮಜಾ ಕೇಳ್ರಿ ಇಲ್ಲೆ, ಅಕಿ ಮಾಮಾ ಒಬ್ಬಂವಾ ಹುಬ್ಬಳ್ಳ್ಯಾಗ ಲೈಫ ಇನ್ಸುರೆನ್ಸ್ ಎಜೆಂಟ ಇದ್ದಾನ, ಅಕಿ ನಂಗ
“ಪ್ರಶಾಂತಣ್ಣಾ ನೀವ ಇನ್ಸುರೆನ್ಸ್ ಏನರ ಮಾಡಸಿದರ, ನಮ್ಮ ಮಾಮಾನ ಕಡೇನ ಮಾಡಸರಿ ಮತ್ತ, ಪಾಪ ಭಾಳ ಬಡವರಿದ್ದಾರ ಅವರಿಗೂ ಸ್ವಲ್ಪ ಹೆಲ್ಪ್ ಆಗತದ” ಅಂತ ಹೊಸ್ತಾಗಿ ಲಗ್ನ ಆದಾಗ ಭೆಟ್ಟಿ ಆದಾಗೊಮ್ಮೆ ಹೇಳೋಕಿ. ನಾ ಹೂಂ,ಹೂಂ ಅಂತ ಹೇಳಿ ಮಾತ ಹಾರಿಸಿ ಬಿಡತಿದ್ದೆ. ಅಲ್ಲರಿ ನಾವ ದುಡಿಯೋದ ಅಷ್ಟಛಂದ ಅದರಾಗ ದುಡದಿದ್ದ ರೊಕ್ಕಾ ಕೊಟ್ಟ ಇನ್ಸುರೆನ್ಸ್ ಮಾಡಿಸಿ ನಾಳೆ ನಾವ ಸತ್ತರ ಮನಿ ಮಂದಿಗೆ ಅಂತ ರೊಕ್ಕಾ ತುಂಬೋದ ನಂಗ ಒಟ್ಟ ಲೈಕ ಇಲ್ಲಾ. ಆದರ ನಮ್ಮ ರಾಘ್ಯಾ ಮಾತ್ರ ಯಾವದ ಪಾಲಿಸಿ ಹೊಸಾದ ಬರಲೀ ಅವನ ಹೆಂಡತಿ ಮಾಮಾನ ಕಡೆ ಇನ್ಸುರೆನ್ಸ್ ಮಾಡಿಸೆ ಬಿಡೊಂವಾ. ಅಲ್ಲಾ, ಇಲ್ಲಾಂದರ ಅವನ ಹೆಂಡತಿ ಬಿಡತಿದ್ದಿಲ್ಲಾ. ಇಂವಾ ತನ್ನ ಹೆಂಡತಿ ಕಾಟಕ್ಕೊ, ಇಲ್ಲಾ ಖರೇನ ತಾ ಸತ್ತರ ತನ್ನ ಹೆಂಡ್ತಿ ಮಕ್ಕಳಿಗೆ ಇರಲಿ ಅಂತನೋ, ಇಲ್ಲಾ ಈ ದೊಡ್ಡ ನೌಕರಿ ಮಂದಿ ಟ್ಯಾಕ್ಸ್ ಉಳಸಲಿಕ್ಕೆ ಇನ್ಸುರೆನ್ಸ್ ಮಾಡಸ್ತಾರಲಾ ಹಂಗೋ ಗೊತ್ತಿಲ್ಲಾ ಒಟ್ಟ ಸಿಕ್ಕಾ ಪಟ್ಟೆ ಇನ್ಸುರೆನ್ಸ್ ಮಾಡಸ್ತಿದ್ದಾ. ಅದರಾಗ ಇಯರ ಎಂಡ ಇದ್ದಾಗ ಅವನ ಕಡೆ ಇನ್ಸುರೆನ್ಸ ತುಂಬಲಿಕ್ಕೂ ರೊಕ್ಕ ಇರತಿದ್ದಿಲ್ಲಾ ಮಂದಿ ಕಡೆ ಸಾಲಾ ಮಾಡಿ ತುಂಬತಿದ್ದಾ, ಯಾಕಂದರ ಇವಂಗ ಆ ಇಯರ ಒಳಗ ತುಂಬಿದರ ಇಷ್ಟ ಇನಕಮ್ ಟ್ಯಾಕ್ಸ್ ಬೆನಿಫಿಟ್ ಆಗತಿತ್ತ.
ಇನ್ನು ಮಜಾ ಅಂದರ ಆ ರೊಕ್ಕಾನೂ ಅಕಸ್ಮಾತ ಕಡಿಮಿ ಬಿದ್ದರ ಇವಂಗ ಹೆಂಡ್ತಿ ತನ್ನ ಪಗಾರದಾಗಿಂದ ಕೊಡತಿದ್ದಿಲ್ಲಾ, ನಿನ್ನ ಇನ್ಸುರೆನ್ಸ್ ನೀ ಸಾಲಾ ಮಾಡಿ ತುಂಬಕೊ ಅಂತಿದ್ಲು. ಅಲ್ಲಾ ಆ ಇನ್ಸುರೆನ್ಸ್ ಅವಂದ ಇದ್ದರು ನಾಮೀನೀ ಅಕಿನ, ಮ್ಯಾಲೆ ಆ ಸುಡಗಾಡ ಇನ್ಸುರೆನ್ಸ್ ಎಜೆಂಟ ಅಕಿ ಸೋದರ ಮಾವನ, ಆದರು ಅಕಿ ಅವಂಗ ಇನ್ಸುರೆನ್ಸ್ ತುಂಬಲಿಕ್ಕೆ ರೊಕ್ಕಾ ಕೊಡ್ತಿದ್ದಿಲ್ಲಾ. ನಾ ಒಂದ ಸರತೆ ಅಂವಾ ವರ್ಷಾ ಎಷ್ಟ ಇನ್ಸುರೆನ್ಸ್ ತುಂಬತಾನ ಅಂತ ಲೆಕ್ಕಾ ಹಾಕಿದರ ಬರೋಬ್ಬರಿ ವರ್ಷಕ್ಕ ಒಂದೂವರಿ ಲಕ್ಷ ಪ್ರಿಮಿಯಮ್ ತುಂಬತಿದ್ದಾ. ಇನ್ನ ಅವಂದ ಇನ್ಸ್ಯುರಡ ಅಮೌಂಟ ಎಷ್ಟ ಇರಬೇಕ ನೀವ ಲೆಕ್ಕಾ ಹಾಕರಿ. ಅವೇನ ಪಾಲಿಸಿ ಏನತಾನ ಎಂಡೋವಮೆಂಟ ಪಾಲಿಸಿ ಅಂತ, ಯುನಿಟ್ ಲಿಂಕಡ ಅಂತ, ಟರ್ಮ್ ಇನ್ಸುರೆನ್ಸ್ ಅಂತ, ನೂರಾ ಎಂಟ ಪಾಲಿಸಿ ಬಂದಾವ. ಅದರಾಗ ಈ ಟರ್ಮ್ ಇನ್ಸುರೆನ್ಸ್ ಅಂತು ರೊಕ್ಕ ವಾಪಸ ಬರೋದ ಅಲ್ಲೇ ಅಲ್ಲಾ, ಸತ್ತರ ಇಷ್ಟ ಬರೋದ, ಅದು ನಾಮಿನೀ ಇದ್ದೋರಿಗೆ. ಅವನ ಹೆಂಡತಿ ಭಾಳ ಶಾಣ್ಯಾಕಿ, ಅವನ ಕಡೆ ಏನಿಲ್ಲಾಂದರು ಒಂದ ಎಂಬತ್ತ ಸಾವಿರ ರೂಪಾಯಿ ಪ್ರಿಮಿಯಮದ್ದ ಟರ್ಮ ಇನ್ಸುರೆನ್ಸ್ ಮಾಡಸಿದ್ಲು. ಹಂಗೇನರ ಇಂವಾ ಗೊಟಕ ಅಂದರ ಅಕಿ ರಾತ್ರೋ ರಾತ್ರಿ ಕರೋಡಪತಿ ಅಲ್ಲಾ ಕರೋಡ ಪತ್ನಿ ಆಗತಿದ್ಲು. ನಾ ಒಂದ ಸರತೆ ಹಂಗ ಚಾಷ್ಟಿಗೆ ಅಕಿಗೆ
“ನಿನ್ನ ಗಂಡ ಇಷ್ಟ ಇನ್ಸುರೆನ್ಸ್ ಮಾಡಸಿದ್ದ ನೋಡಿದರ ಅಂವಾ ಬದಕೋದಕಿಂತಾ ಸಾಯೋದ ಛಲೋ, ಅದರಾಗ ಫಾಯದೆ ಜಾಸ್ತಿ ಅದ ಅನಸ್ತದ” ಅಂದರ ಅಕಿ ಸಿರಿಯಸ್ ಆಗಿ ‘ನಂಗೂ ಹಂಗ ಅನಸ್ತದ ಪ್ರಶಾಂತಣ್ಣಾ ಅನ್ನಬೇಕ?’ ಏನ್ಮಾಡ್ತೀರಿ?
ಇನ್ನೊಂದ ಮಜಾ ಅಂದರ ಈ ಹೆಂಡಂದರು ತಮ್ಮ ತಮ್ಮ ಗಂಡಂದರಿಗೆ ಗಂಟ ಬಿದ್ದ ಲೈಫ ಇನ್ಸೂರೆನ್ಸ್ ಮಾಡಸರಿ, ಲೈಫ ಇನ್ಸೂರೆನ್ಸ್ ಮಾಡಸರಿ ನಾಳೆ ಏನರ ಹೆಚ್ಚು ಕಡಿಮೆ ಆದರ ಏನ ಮಾಡೋದು ಮಕ್ಕಳ ಇನ್ನೂ ಸಣ್ಣವ ಅವ ಅಂತ ಹೇಳಿ ಎಮೋಶನಲ್ ಬ್ಲ್ಯಾಕ್ ಮೇಲ ಮಾಡಿ ಇನ್ಸೂರೆನ್ಸ್ ಮಾಡಸಸ್ತಾರ, ಪಾಪ ಗಂಡಾ ಹೌದ ನನ್ನ ಹೆಂಡತಿ ಹೇಳೊದು ಖರೆ ಅಂತ ವರ್ಷಾ ಇನ್ಸೂರೆನ್ಸ್ ಪ್ರಿಮಿಯಮ್ ತುಂಬಿ-ತುಂಬಿ ಸಾಯ್ತಾನ. ಆದರ ನೀವ ಯಾರದರ ಹೆಂಡತಿ ತನ್ನ ಪಗಾರದಾಗ ಪ್ರಿಮಿಯಮ್ ತುಂಬಿ ಗಂಡನ್ನ ನಾಮೀನೀ ಮಾಡಿದ್ದ ಎಲ್ಲೇರ ಕೇಳಿರೇನ?
“ನಾಳೆ ನೀವ ಇಲ್ಲಾಂದರ ಮನಿ ಹೆಂಗ ನಡೇಬೇಕು, ಮಕ್ಕಳದ ಹೆಂಗ ಮುಂದ” ಅಂತ ಹೆಂಡತಿ ತನ್ನ ನಾಮೀನೀ ಮಾಡ್ಕೊಂಡ ಗಂಡನ ಹೆಸರಲೇ ಇನ್ಸೂರೆನ್ಸ್ ಮಾಡಸಸ್ತಾಳ ಹೊರತು ಒಬ್ಬರರ ನಾಳೆ ಹೆಂಡತಿಗೆ ಏನರ ಆತಂದರ ಗಂಡಾ ಅನಾಥ ಆಗ್ತಾನ, ಮಕ್ಕಳ ಅನಾಥ ಆಗ್ತಾವ, ಗಂಡಾ ಇನ್ನೊಂದ ಲಗ್ನಾ ಮಾಡ್ಕೋಬೇಕಾಗ್ತದ ಅದಕ್ಕೇಲ್ಲಾ ರೊಕ್ಕ ಬೇಕಾಗ್ತದ ಅಂತ ಗಂಡನ್ನ ನಾಮೀನೀ ಮಾಡಿ, ಮುಂದ ಗಂಡ ಅದನ್ನ ಕ್ಲೇಮ ಮಾಡಿದ್ದ ನೋಡಿರೇನ? ಸಾಧ್ಯನ ಇಲ್ಲಾ. ನಾ ಅಂತೂ ಕೇಳೆ ಇಲ್ಲಾ. ಹಂಗೇನರ ಯಾರದರ ಹೆಂಡತಿ ತನ್ನ ಹೆಸರಿಲೆ ಪಾಲಿಸಿ ಮಾಡಿಸಿ ಗಂಡನ್ನ ನಾಮಿನಿ ಮಾಡಿದ್ದರ ಅದ ಅವರ ಹಳೇ ಜನ್ಮದ ಪುಣ್ಯಾ.
ಅದಕ ಅಲಾ ಮತ್ತ ಇದಕ್ಕ ಕಲಿಯುಗ ಅನ್ನೋದ, ದುಡಿಲಿಕ್ಕೆ ಗಂಡ ಬೇಕ, ಸಾಕಲಿಕ್ಕೆ ಗಂಡ ಬೇಕ, ಇನ್ಸುರೆನ್ಸ್ ತುಂಬಲಿಕ್ಕೆ ಗಂಡ ಬೇಕ, ಮುಂದ ಇನ್ಸುರೆನ ಕ್ಲೇಮ್ ಆಗಬೇಕಂದರ ಸಾಯಲಿಕ್ಕೂ ಗಂಡ ಬೇಕ. ಯಾಕಂದರ ನಾಳೆ ಆ ಗಂಡಾ ಅನ್ನೋ ಪ್ರಾಣಿ ಸತ್ತರ ಇಷ್ಟ ಇನ್ಸುರೆನ್ಸ್ ಮಾಡಿಸಿದ್ದರದ ಫಾಯದೆ. ಆದರ ಯಾವದರ ಹೆಂಡ್ತಿ ಎಂದರ ಗಂಡಗ ಮಾಡಿಟ್ಟ ಹೋಗ್ಯಾಳೇನ? ಹಿಂದಿನ ಕಲದಾಗ ಹೆಂಡಂದರ ಎಂಟ ಹತ್ತ ಹಡದರ ಹೋಗ್ತಿದ್ದರು, ಆಮ್ಯಾಲೆ ಗಂಡ ಆ ಮಕ್ಕಳನ ಸಾಕಲಿಕ್ಕರ ಇನ್ನೊಂದ ಲಗ್ನ ಮಾಡ್ಕೋತಿದ್ದಾ. ಈಗ ಅದು ಬಂದ ಆಗೆ ಹೋಗೇದ. ಈಗಿನ ಹೆಣ್ಣಮಕ್ಕಳಿಗೆ ಒಂದ ಹಡಿಯೋದರಾಗ ಸಾಕ ಸಾಕಾಗಿ ಹೋಗ್ತದ.
ಅಲ್ಲಾ ಅದಕ್ಕೂ ಗಂಡಂದರ ಪಡದ ಬರಬೇಕ ತೊಗೊರಿ…..
ಈ ರಘ್ಯಾನ ಹೆಂಡತಿ ಮೂರ ವರ್ಷದ ಹಿಂದ ‘ನಿಮ್ಮ ಮನೇಯವರ ಲೈಫ್ ಇನ್ಸೂರೆನ್ಸ್ ಮಾಡಿಶ್ಯಾರ ಇಲ್ಲೊ?’ ಅಂತ ನನ್ನ ಹೆಂಡತಿ ತಲ್ಯಾಗ ಅದು ಇದು ಹೆದರಕಿ ತುಂಬಿ ತಮ್ಮ ಎಜೆಂಟ ಮಾವನ ಕಡೆ ವರ್ಷಕ್ಕ ಹತ್ತ ಸಾವಿರ ರೂಪಾಯಿದ್ದ ಯಾವದೊ ಒಂದ ಸುಡಗಾಡ ಟರ್ಮ ಇನ್ಸುರೆನ್ಸ್ ಮಾಡಸಿಸಿದ್ಲು. ನಾ ನನ್ನ ಹೆಂಡತಿಗೆ ಎಷ್ಟ ಹೇಳಿದೆ ಅದು ಟರ್ಮ ಇನ್ಸುರೆನ್ಸ ನಾ ಜೀವಂತ ಇರೋ ತನಕ ರೊಕ್ಕ ವಾಪಸ ಬರಂಗಿಲ್ಲಾ, ಬ್ಯಾರೆ ಯಾವದರ ಮಾಡಸೋಣ ಅಂದ್ರು ನನ್ನ ಹೆಂಡತಿ ಮಾತ ಕೇಳಲಿಲ್ಲಾ. ರಾಘ್ಯಾನ ಹೆಂಡತಿ ಹೇಳ್ಯಾಳ ಅಂತ ಗಂಟ ಬಿದ್ದ ಮಾಡಸಿದ್ಲು. ಈಗ ನಾ ನನ್ನ ಸಣ್ಣ ಪಗಾರದಾಗ ವರ್ಷಾ ಹತ್ತ- ಹತ್ತ ಸಾವಿರ ರೂಪಾಯಿ ತುಂಬಕೋತ ಹೊಂಟೇನಿ. ಲಾಸ್ಟ ಎರಡ ವರ್ಷದಿಂದ ತುಂಬಲಿಕತ್ತೇನಿ. ಇನ್ನೂ ಎಷ್ಟ ವರ್ಷ ಹಿಂಗ ತುಂಬಬೇಕು ಅಂತ ಕೇಳೊ ಹಂಗ ಇಲ್ಲಾ. ಯಾಕಂದರ ಅದ ಇಪ್ಪತ್ತ ವರ್ಷದ ಪಾಲಿಸಿ ಇನ್ನ ಅದರ ಫಾಯದೆ ಅಂತು ನಾ ಇರೋ ತನಕ ಬರೋದಲ್ಲೇಲ್ಲಾ, ಏನ್ಮಾಡ್ತೀರಿ…
ಹಕ್ಕ…..ಈ ಇನ್ಸೂರೆನ್ಸ್ ವಿಷಯ ತಗದಕೊಳೆ ನೆನೆಪಾತ ನೋಡ್ರಿ ಅನ್ನಂಗ ನಾ ಮಾರ್ಚ ೨೦ರ ಒಳಗ ಈ ಇನ್ಸೂರೆನ್ಸ್ ಪ್ರಿಮಿಯಮ್ ತುಂಬ ಬೇಕಿತ್ತ ಮರತ ಬಿಟ್ಟೇನೆ. ಛೇ! ಇನ್ನ ದಂಡಾ ಕಟ್ಟಿ ತುಂಬ ಬೇಕ…
ಓಹೋ..ಬಹುಶಃ ಅದಕ್ಕ ನನ್ನ ಹೆಂಡತಿ ಹಿಂಗ ಮಾತ ಮಾತಿಗೆ ‘ನಂದ ಅಕೌಂಟ ಕ್ಲೋಸ ಮಾಡರಿ ‘ ಅಂತ ಗಂಟ ಬಿದ್ದೀರಬೇಕ….ಕರೆಕ್ಟ.ಕರೆಕ್ಟ..ಈ ಇನ್ಸೂರೆನ್ಸ್ ನಾ ಮಾಡಸಿದ್ದ ನನ್ನ ಮ್ಯಾಲೆ, ನಾಮೀನೀ ಅಕಿನ. ಅದು ಅಗದಿ ಹದಿನೈದ ಲಕ್ಷದ್ದ ಅದರಾಗ ಇದು ಟರ್ಮ ಇನ್ಸೂರೆನ್ಸ್.
ಈಗ ಎಲ್ಲಾ ಕ್ಲೀಯರ್ ಆತ ನೋಡ್ರಿ ನಾ ಆ ಪಾಲಿಸಿ ಪ್ರಿಮಿಯಮ್ ತುಂಬಲಾರದಕ್ಕ ಇಕಿ ಶಟಗೊಂಡ ತನ್ನ ಅಕೌಂಟ ಕ್ಲೋಸ ಮಾಡಂತ ಗಂಟ ಬಿದ್ದಾಳಂತ ಗ್ಯಾರಂಟೀ ಆತ. ಹೋದ ತಿಂಗಳ ಅಕಿ ನನಗ ಒಂದ ಎರಡ ಸಲಾ ನೆನಪ ಮಾಡಿದ್ಲು, ‘ರ್ರಿ, ಮುಂದಿನ ತಿಂಗಳ ಇನ್ಸುರೆನ್ಸ್ ತುಂಬಬೇಕ’ ಅಂತ. ನಾ ಆವಾಗ ಸಿರಿಯಸ್ ತೊಗೊಳಾರದ
“ಏ, ಹೋಗಲೇ ಎಲ್ಲಿ ಇನ್ಸುರೆನ್ಸ್ ಹಚ್ಚಿ, ಇಲ್ಲೆ ಬದಕಲಿಕ್ಕೆ ರೊಕ್ಕ ಸಾಲವಲ್ತು ಇನ್ನ ಸತ್ತ ಮ್ಯಾಲೆ ಫಾಯದೇ ಕೊಡೊ ಇನ್ಸುರೆನ್ಸ್ ಎಲ್ಲೀದ” ಅಂತ ನಾ ಜೋರ ಮಾಡಿದ್ದ ನೆನಪಾತ.
ಏನ ಜನಾ ಇರತಾರ ನೋಡ್ರಿ, ಹೆಜ್ಜಿ ಮ್ಯಾಲೆ ಹೆಜ್ಜಿ ಇಟ್ಟ ಏಳೇಳ ಜನ್ಮಕ್ಕೂ ನೀನ ನನ್ನ ಗಂಡ ಅಂತಾ ಕಟಗೊಂಡ ಬಂದ, ಒಂದ ವರ್ಷ ಟರ್ಮ ಇನ್ಸೂರೆನ್ಸ್ ಪಾಲಿಸಿದ ಪ್ರಿಮಿಯಮ್ ತುಂಬಲಿಲ್ಲಾ ಅಂದರ ಗಂಡನ ಜೊತಿ ಇದ್ದದ್ದ ಅಕೌಂಟ ಕ್ಲೋಸ ಮಾಡ್ತಾರ ಅಂದರ ಏನ ಹೇಳಬೇಕ ನೀವ ಹೇಳರಿ?
ನೋಡ್ರಿ ಮತ್ತ ಇಯರ ಎಂಡ ಬಂದದ, ನೀವು ಯಾವದರ ಪಾಲಿಸಿದ ಪ್ರಿಮಿಯಮ್ ತುಂಬಿಲ್ಲಾ ಅಂದರ ತುಂಬಿ ಬಿಡ್ರಿ, ನಾಮಿನೀ ಯಾರರ ಇರವಲ್ಲರಾಕ.

This entry was posted on Monday, June 10th, 2013 at 9:51 am and is filed under ಕೆಂಡಸಂಪಿಗೆ. You can follow any responses to this entry through the RSS 2.0 feed. You can leave a response, or trackback from your own site.

Post a Comment