ವಕ್ಕ್ಯಾನ ವ್ಯಾಲೆಂಟೇನ್ಸ್ ವೀಕ್….

ನಾ B.Sc ಕಲಿಬೇಕಾರ ನನ್ನ ಜೊತಿ ವಕ್ಕುಂದ ಅಂತ ಒಬ್ಬ ದೋಸ್ತ ಇದ್ದಾ. ಹಂಗ ವಯಸ್ಸಿನಾಗ ನನ್ನ ಕಿಂತಾ ಎರಡ ಮೂರ ವರ್ಷ ದೊಡ್ಡಂವ, ಆದರ SSLC ಒಳಗ,PUC IIರಾಗ ಲಗಾ ಹೊಡದ B.Sc ಒಳಗ ನನ್ನ ಕ್ಲಾಸಮೇಟ್ ಆಗಿದ್ದಾ. ಅಂವಂಗೇನ ಸಾಲಿ ಕಲತ ಶಾಣ್ಯಾ ಆಗಬೇಕಂತ ಇದ್ದಿದ್ದಿಲ್ಲಾ ಮತ್ತ ಆ ಕ್ಯಾಪಾಸಿಟಿನೂ ಅವಂಗ ಇರಲಿಲ್ಲ. ಅವರದೊಂದ ಚಹಾ ಪುಡಿ ಅಂಗಡಿ ಇತ್ತ, ಹಿಂಗಾಗಿ ಅಂವಾ ಕಾಲೇಜಿಗೆ ಹೋಗಲಿಲ್ಲಾ ಅಂದರ ಮನ್ಯಾಗ ಚಹಾ ಪುಡಿ ಪಟ್ಣಾ ಕಟ್ಟಲಿಕ್ಕೆ ಕೂಡಸ್ತಾರ ಅನ್ನೋ ಸಂಕಟಕ್ಕ ಕಾಲೇಜಿಗೆ ಬರ್ತಿದ್ದಾ. ಕಾಲೇಜಿನಾಗ ಬರೇ ಮಂಗ್ಯಾನಾಟ ಮಾಡ್ತಿದ್ದಾ. ನೋಡಲಿಕ್ಕೆ ಇಷ್ಟ ಅಲ್ಲಾ ಸ್ವಭಾವದಾಗು ಪಿಕ್ಚರನಾಗಿನ ಅಸ್ರಾಣಿ, ಜಾನಿ ಲಿವರ್ ಇದ್ದಂಗ ಇದ್ದಾ. ಅವಂದ sense of humour, ಮಾತಿನಾಗ creativity ಅಗದಿ ಕೇಳೋಹಂಗ ಇರತಿತ್ತ. ಒಟ್ಟ ಯಾವಾಗಲೂ ಎಲ್ಲಾರನು ನಗಿಸಿಗೋತ ಏನೇನರ ಹುಚ್ಚುಚಾಕಾರ ಮಾತಾಡ್ಕೋತ ಇರತಿದ್ದಾ.
ಹಂಗ ಅವಂಗ ಉಡಾಳಂತ ಅನ್ನಲಿಕ್ಕು ಬರತಿದ್ದಿಲ್ಲಾ, ಯಾಕಂದರ ಉಡಾಳಗಿರಿ, ದಾದಾಗಿರಿ ಮಾಡೋ ತಾಕತ್ತ ಇದ್ದಿದ್ದಿಲ್ಲಾ. ಮ್ಯಾಲೆ ಖರ್ಚ್ ಮಾಡಲಿಕ್ಕೆ ಕಿಸೆದಾಗ ರೊಕ್ಕ ಇರತಿದ್ದಿಲ್ಲಾ. ದಿವಸಾ ಸೈಕಲ್ ಇಲ್ಲಾ ಬಸ್ಸಿನಾಗ ಕಾಲೇಜಿಗೆ ಬರತಿದ್ದಾ ಕನಸ ಮಾತ್ರ ಗಾಡ್ಯಾಗ ಅಡ್ಡ್ಯಾಡೊ ಹುಡಗ್ಯಾರದ ಕಾಣತಿದ್ದಾ.
ಅವಂದ imagination ಭಾಳ ಛಂದ ಇರತಿದ್ವು.
ರಾಯರ ಮಠದ ಕಡೆ ಇರೋ ಹುಡಗ್ಯಾರ ಕಾಲೇಜ ಕ್ಲಾಸ ರೂಮ ಎಂಟರ ಆಗಬೇಕಾರ ಇಂವಾ ಸೈಡಿಗೆ ನಿಂತ
“ಚಪ್ಪಲ್ಲ ಇಲ್ಲೇ ಬಿಟ್ಟ, ಕಾಯಿ ಕಲ್ಲಸಕ್ಕರಿ ತೊಗಂಡ ಹೋಗರಿ” ಅಂತ ಒದರತಿದ್ದಾ.
ಯಾವದರ ಸಿನಿಯರ್ ಹುಡಗಿ ಪಾಪ ಅಪ್ಪಿ ತಪ್ಪಿ ಒಂದೊಂದ ದಿವಸ ಏನರ ಡೀಪ ಬ್ಯಾಕ್ ಬ್ಲೌಸ್ ಹಾಕ್ಕೊಂಡ ಬಂದರ “ಏನ ಬೆನ್ನಲೇ, ಸಂಗೀತ ಟಾಕೀಸ ಸ್ಕ್ರೀನ್ ಆಗೇತಿ” ಅಂತ ಅಕಿ ಹಿಂದ ಅಡ್ದ್ಯಾಡತಿದ್ದಾ.
ಯಾವದರ ಬೆಳ್ಳನಿ ಹುಡಗಿ ಕಂಡರ “ಅಗದಿ ಬ್ಲೀಚಿಂಗ ಪೌಡರ ಹಚ್ಚಿ ಮೈ ತೊಳ್ಕಂಡಾಳ ನೋಡ, ಹಂಗ ಮೈದಾ ಹಿಟ್ಟಲೇ ಮಾಡಿದಂಗ ಇದ್ದಾಳ” ಅಂತಿದ್ದಾ.
ಯಾವದರ ಹುಡಗಿ ಮಾರಿ ಮ್ಯಾಲೆ ಬೈ ಮಿಸ್ಟೇಕ ಏನರ ಒಂದ್ಯಾರಡ ಪಿಂಪಲ್ಸ್ ಕೆಜಿ ಗಟ್ಟಲೇ ಪೌಡರ, ಸ್ನೊ ಮೆತಗೊಂಡರು ಕಾಣಲಿಕತ್ತಿದ್ದರ
“ಯಾಕ ಗೊಬ್ಬರ ಎದ್ದಾವಿನ, ಮಂಗಳವಾರ ದಿವಸ ಕರಿಯಮ್ಮನ ಗುಡಿಗೆ ನೀರ ಹಾಕಿ ಬಾ” ಅಂತಿದ್ದಾ
ಬಸ್ಸನಾಗ ಬರಬೇಕಾರ ಕಂಡಕ್ಟರಗೆ ಮುಂದ ನಿಂತೀರೊ ನಮ್ಮ ಕ್ಲಾಸ ಹುಡಗಿ ತೊರಿಸಿ
“ಆ ಹುಡಗಿದ ಪಾಸ ಇಲ್ಲಾ, ಅಕಿ ಸುಳ್ಳ ಪಾಸ ಅಂತ ಹೇಳ್ತಾಳ ನೀವು ಪಾಸ್ ಚೆಕ್ ಮಾಡರಿ” ಅಂತ ಹೇಳ್ತಿದ್ದಾ. ಪಾಪ ಕಂಡಕ್ಟರ ಹಂತಾ ಗದ್ಲದಾಗ ಎಲ್ಲಾರದು ಬಿಟ್ಟ ಆ ಹುಡಗಿದ ಒಬ್ಬಕಿದ ವ್ಯಾನಿಟಿ ಬ್ಯಾಗ ತಗಿಸಿಸಿ ಪಾಸ್ ಚೆಕ್ ಮಾಡತಿದ್ದಾ. ಅಕಿ ಪಾಸ ತೊರಿಸಿದ ಮ್ಯಾಲೆ ಕಂಡಕ್ಟರ ಆ ಹುಡಗಿ ಇಬ್ಬರು ಕೂಡೆ ಇವಂಗ ಬೈತಿದ್ದರು ಆ ಮಾತ ಬ್ಯಾರೆ.
ದಪ್ಪಗ ದುಂಡ-ದುಂಡಗ ಇದ್ದ ಹುಡಗ್ಯಾರ ಬಸನಾಗ ಇದ್ದಾಗ “ಅಕಿದ ಲಗೇಜ ಚಾರ್ಜ ತೊಗೊರಿ” ಅಂತ ಕಂಡಕ್ಟರಗೆ ಹೇಳ್ತಿದ್ದಾ. ಕಂಡಕ್ಟರ ಆಮ್ಯಾಲೆ ತಲಿಕೆಟ್ಟ “ಅವರದೇನ ಲಗೇಜ ಇಲ್ಲಂತರಿ” ಅಂತಿದ್ದಾ, ಅದಕ್ಕ ಇಂವಾ “ಯೇ, ಇಷ್ಟ ದಪ್ಪ ದಪ್ಪ ಅದಾಳ ಕಾಣಂಗಿಲ್ಲೇನ” ಅಂತಿದ್ದಾ.
ಒಂದ ಎರಡ ಅವನ ಕಿತಾಪತಿ.
ಹಿಂತಾವ ನನ್ನ ಸರ್ಕಲನಾಗ ಅದ ಹೆಂಗ ಹೊಕ್ಕೊಂಡನೋ ಹೊಕ್ಕೊಂಡಿದ್ದಾ. ನಾ ಶಾಣ್ಯಾ ಇದ್ದೆ, ನನ್ನ ಜೊತಿ ಎಲ್ಲಾ ಹುಡಗ್ಯಾರು ದೋಸ್ತಿ ಮಾಡೇ ಮಾಡ್ತಾರ ಮುಂದ ಅವರನ ತಾ ಪಟಾಯಿಸಿದರಾತು ಅಂತ ವಿಚಾರ ಇತ್ತೊ ಏನೋ ಮಗಂದ.
ಇಂವಾ ಹಂತಾದರಾಗ ಒಂದ ಬ್ರಾಹ್ಮರ ಹುಡಗಿಗೆ ಲೈನ ಹೊಡಿಲಿಕ್ಕೆ ಶುರು ಮಾಡಿದಾ. ಅಕಿನೂ ಇವನಂಗ ಗಿಡ್ಡಕ, ತೆಳ್ಳಗ ಇದ್ಲು. ರಾಧಾಕೃಷ್ಣ ಗಲ್ಲಿಯಿಂದ ಅಗದಿ ಮಡಿ ಹೆಂಗಸ ಬಂದಂಗ ಬರತಿದ್ಲು. ಮ್ಯಾಲೆ ಶಾಣ್ಯಾತನದಾಗೂ ಇವನಂಗ ಇದ್ಲು. ಇಂವಾ ಅಕಿದ ಸೈಜ,ವೇಟ್, ಹೈಟ, ಶಾಣ್ಯಾತನ ಎಲ್ಲಾ ನೋಡಿ ಅಗದಿ ಸೆಟ್ ಆಗ್ತಾಳಂತ ಅಕಿಗೆ ಬೆನ್ನ ಹತ್ತಿದಾ.
ಆವಾಗ ಹಂಗ ಬ್ರಾಹ್ಮರ ಕನ್ಯಾದ್ದ ಶಾರ್ಟೇಜ್ ಇದ್ದಿದ್ದಿಲ್ಲಾ. ಆಗಿನ ಕಾಲದಾಗ ಬ್ರಾಹ್ಮರ ಕನ್ಯಾದ್ದ ಲಗ್ನ ಆದರ ಸಾಕಗ್ತಿತ್ತ ಹಿಂಗಾಗಿ ನಾನು ಭಾಳ ತಲಿಕೆಡಸಿಗೊಳ್ಳಲಾರದ ಅವಂಗ ಸಪೋರ್ಟ ಮಾಡಿದೆ. ಅಕಿದು ನಂಬದು ಎರಡ ಸಬ್ಜೆಕ್ಟ್ಸ್ ಚೆಂಜ್ ಇದ್ದವು. ನಾವಿಬ್ಬರು P.C.M. ಅಕಿದ C.B.Z, ಕಾಮನ್ ಸಬ್ಜೆಕ್ಟ ಅಂದರ್ chemistry ಒಂದ. ಈ ಮಗಾ ಅದನ್ನ ಫಾಯದಾ ತೊಗೊಂಡ ‘ನಮ್ಮಿಬ್ಬರದು ಒಂದ chemistry’ ಅಂತ ಬೆನ್ನ ಹತ್ತತಿದ್ದಾ. ಅಕಿನರ ಇವನ ಕಂಡರ ಮಾರ ದೂರ ಹೋಗ್ತಿದ್ಲು. ಇಂವಾ ಅಕಿಗೆ ದಿವಸಾ ಪ್ರಪೊಸ ಮಾಡ್ತಿದ್ದಾ, ಇಂವಾ ಹಂಗ ಮಾಡಿದಾಗ ಒಮ್ಮೆ
“ಏ, ಹೋಗ್, ಏನ ಗಂಟ ಬೀಳ್ತಿ, ನಡಿ” ಅಂತ ಅಗದಿ ಓಣ್ಯಾಗ ನಾಯಿ ಬೆನ್ನ ಹತ್ತಿದಾಗ ಮಾಡ್ತಾರಲಾ ಹಂಗ ಮಾಡ್ತಿದ್ದಳು. ಆದರ ಇಂವಾ ಏನ ಬಿಡ್ತಿದ್ದಿಲ್ಲಾ, ದಿವಸಾ ಬೆನ್ನ ಹತ್ತತಿದ್ದಾ.
ಅಕಿ zoology / botonay labಗೆ ಹೋಗಿ ಪ್ರೊಫೆಸರ ಕೈಯಾಗ ಸಿಕ್ಕ sorry sir ನಾ physics lab ಅಂತ ತಿಳ್ಕೊಂಡಿದ್ದೆ ಅಂತ ಹಲ್ಲ ಕಿಸದ ಓಡಿ ಬರತಿದ್ದಾ.
ಹಂಗ ಅಕಿ ಏನರ ಮಾರ್ಕೇಟನಾಗ ಸಿಕ್ಕರ ಮುಗದ ಹೋತ ಅಕಿ ಹಿಂದ ತಿರಗತಿದ್ದಾ. ಕೆಲವೊಮ್ಮೆ ನಮ್ಮ ದೋಸ್ತರಿಗೆ ಯಾರಿಗರ ಅಕಿ ಸೂಟಿ ದಿವಸ ಮಾರ್ಕೇಟನಾಗ ಕಂಡರ ಅವರ ಒಂದ ರೂಪಾಯಿ ಕ್ವಾಯಿನ ಹಾಕಿ ಅವನ ಅಂಗಡಿಗೆ ಫೋನ ಮಾಡಿ “ವಕ್ಯಾ, ಅಕಿ ಇಲ್ಲೆ ಮೈಸೂರ್ ಸ್ಟೋರ್ಸ್ ಕಡೆ ಬಂದಾಳಲೇ” ಅಂತ ಹೇಳ್ತಿದ್ದರು, ಇಂವಾ ಹತ್ತ ನಿಮಿಷದಾಗ ಅವರಣ್ಣಂದ ಲೂನಾ ತೊಗೊಂಡ ಬಂವ್ವ್…. ಅಂತ ಬಂದ ಬಿಡ್ತಿದ್ದಾ. ಅಕಿ ಗ್ರೊಸರಿ ಶಾಪಗೆ ಹೋದರು ಬೆನ್ನ ಹತ್ತತಿದ್ದಾ, ಹೋಸರಿ ಶಾಪಗೆ ಹೋದರು ಬೆನ್ನ ಹತ್ತತಿದ್ದಾ. ಮರುದಿವಸ ಕಾಲೇಜನಾಗ ಎಲ್ಲಾರ ಮುಂದ
“ಏನ, ನಿನ್ನೆ ಖರೀದಿ ಜೋರ್ ಇತ್ತಲಾ L.T.ಪೂಜಾರಿ ಹೋಸರಿ ಅಂಗಡ್ಯಾಗ” ಅಂತ ಅಂತಿದ್ದಾ. ಒಟ್ಟ ಅಕಿ ಜೀವಾ ತಿಂದ ಇಡತಿದ್ದಾ. ಹಂಗ ಯಾರ ಅಕಿ ಎಲ್ಲೆ ಇದ್ದಾಳ ಅಂತ ಹೇಳಿರತಾರ ಅವರಿಗೆ ಅವರ ಕಡೆನ ಸಾಲಾ ಇಸ್ಗೊಂಡ ಫೋನ ಮಾಡಿದ್ದ ಒಂದ ರೂಪಾಯಿ ವಾಪಸ ಕೊಟ್ಟ ಚಹಾ ಕುಡಸ್ತಿದ್ದಾ ಆ ಮಾತ ಬ್ಯಾರೆ. ಕೆಲವೊಮ್ಮೆ ಒಂದಿಷ್ಟ ದೋಸ್ತರ ಅವಂಗ ಕಾಡಸಲಿಕ್ಕೆ ಸುಳ್ಳ ಸುಳ್ಳ
“ವಕ್ಯಾ ಲಗೂ ಬಾ, ಅಕಿ ಇಲ್ಲೆ ಜವಳಿ ಸಾಲನಾಗ ಇದ್ದಾಳ” ಅಂತ ಫೋನ ಮಾಡೋರು ಅಂವಾ ಬಂದ ಮ್ಯಾಲೆ
“ಈಗ ಜಸ್ಟ ಆಟೋ ತೊಗಂಡ ಹೋದ್ಲಲೇ, ಲಗೂನ ಬರಬೇಕಿಲ್ಲ” ಅಂತ ಅನ್ನೋರು.
ಅಕಿಗೆ ಅಂವಾ ಯಾ ಪರಿ ಕಾಡತಿದ್ದಾ ಅಂದರ, ಅಕೇನರ ಯರಕೊಂಡ ಹೆಗಲ ತುಂಬ ಹಂಗ ಕೂದಲಾ ಬಿಟಕೊಂಡ ಬಂದರ ‘ಇವತ್ತ ಯರಕೊಂಡಿ ಏನ’ ಅಂತಿದ್ದಾ. ಅಕಿ ಪ್ರತಿ ಮಂಗಳವಾರ ಬಾಕಳೆಗಲ್ಲಿ ಗಣಪತಿ ಗುಡಿಗೆ ಹೋದಾಗೊಮ್ಮೆ ಇವನು ಹೋಗೊಂವಾ, ಹಂಗ ಒಂದ ವಾರ ಅಕಿ ಹೋಗಲಿಲ್ಲಾ ಅಂದರ ಆ ಗಣಪತಿ ಸುಮ್ಮನಿದ್ದರು ಇಂವಾ ಸುಮ್ಮನಿರತಿದ್ದಿಲ್ಲಾ. “ಯಾಕ ನಿನ್ನೆ ಗುಡಿಗೆ ಬರಲಿಲ್ಲಲಾ” ಅನ್ನೋವಾ, ಮುಂದ “ಯಾಕ ಬರೋಹಂಗ ಇದ್ದಿದ್ದಿಲ್ಲೇನ” ಅಂತ ಕೆದಕಿ ಕೇಳೋಂವಾ. ಅಕಿ ಮುಂದ ಎರಡ ದಿವಸಕ್ಕ ಖರೇನ ಯರಕೊಂಡ ಕಾಲೇಜಿಗೆ ಬಂದ ಬಿಟ್ಟರ ಇಂವಾ ನಮಗೇಲ್ಲಾ ನಾ ಹೇಳಿದ್ದ ಖರೇ ಇತ್ತಿಲ್ಲ ಅಂತಿದ್ದಾ. ಮುಂದ ಇಂವಾ ಪ್ರತಿ ತಿಂಗಳ ಅಕಿ ಯಾವಗ ಯರಕೊತಾಳ ಅಂತ ಭಾರಿ ಕರೇಕ್ಟ ಹೇಳ್ತಿದ್ದಾ.
ಕಡಿಕೆ ಅಂವಾ ಅಕಿಗೆ ಕಾಡೋದ ನೋಡಿ ಅಕಿನ ತಲಿಕೆಟ್ಟ ಇವನ ಜೊತಿ ಫ್ರೆಂಡಶಿಪ್ ಶುರು ಮಾಡ್ಕೊಂಡಳು. ಆದರು ಅಕಿಗೆ ಏನ ಇಂವಾ ಕಾಡೋದ ಬಿಡ್ತಿದ್ದಿಲ್ಲಾ. ಎಲ್ಲಾ ಸಿರಿಯಸ ವಿಷಯ ಆದು ಇದು ಮಾತಾಡಿ ಮತ್ತ ಲಾಸ್ಟಿಗೆ ಬಸ ಸ್ಟಾಪನಾಗ “ಅನ್ನಂಗ ನಾ ಹೇಳಿದ್ದ ಏನ ಮಾಡಿದಿ?” ಅಂತ ತನ್ನ ಪ್ರಪೋಸಲ್ಲಿಗೆ ಬರಿತಿದ್ದಾ, ಅಕಿ
“ಏ,ಹೋಗ, ನಾ ನಿಂಗ ಹಂಗ ತಿಳ್ಕೊಂಡೇಲಾ” ಅಂತ ಇವನ್ನ ಹರಕೊಂಡ ಹೋಗಿ ಬಿಡ್ತಿದ್ಲು.
ಮತ್ತ ಮರದಿವಸ ಅದ ಹಣೇಬರಹ. ಇದ ಹಿಂಗ ಮೂರ ವರ್ಷ ತನಕ ನಡೀತ.
ಅದರಾಗ ನಮ್ಮ ಮಾರವಾಡಿ ದೋಸ್ತ ಒಬ್ಬೊಂವ ಇವಂಗಾ ಹಗಲಗಲಾ
“ಕ್ಯಾ ಬೋಲ್ತಿ ಬೆ ತೆರಿ ಬೆಹನ್” ಅಂತ ಕಾಡಸತಿದ್ದಾ.
ಆ ಮಾರವಾಡಿಗೆ ಎಲ್ಲಾ ದೋಸ್ತರಿಗೂ ಅವರ ಯಾರಿಗೆ ಲೈನ ಹೊಡಿತಿರತಾರಲಾ ಅವರ ಬಗ್ಗೆ ಹಿಂಗ “ಕ್ಯಾ ಬೋಲ್ತಿ ಬೆ ತೆರಿ ಬೆಹನ” ಅಂತ ಅನ್ನೊ ಚಟಾ ಇತ್ತ. ಎಲ್ಲಾರು ಅವಂಗ “ಬೇಹನ ಹೋಗಿ ತೇರಿ, ಸಾಲೇ” ಅಂತಿದ್ದರು.
ಅಂವಾ ‘ಹಂಗರ ನಿಮ್ಮ ಕಡೆ ದಮ್ಮ ಇದ್ದರ ಪಟಾಯಿಸಿ ತೊರಸರಿ’ ಅಂತ ಚಾಲೇಂಜ್ ಮಾಡ್ತಿದ್ದಾ. ಆವಾಗ ಕಾಲೇಜಿನಾಗ ಎಲ್ಲಾ ಹುಡುಗರು ಮನಸ್ಸಿನಾಗ ಮಂಡಗಿ ತಿಂದ ಇದ್ದ ಬಿದ್ದ ತಳಕ್ಕ ಹತ್ತಿದ್ದ ಒಂದ ನಾಲ್ಕ ಹುಡಗ್ಯಾರನ ಅದ ನಂದ, ಇದ ನಿಂದ ಅಂತ ಫಿಕ್ಸ್ ಮಾಡ್ಕೋಳೊ ಮಕ್ಕಳು.
ಆ ವಕ್ಯಾಗಂತೂ ನಮ್ಮ ಮಾರವಾಡಿ ಗಂಟ ಬಿದ್ದಿದ್ದಾ, ನೀ ಅಕಿನ್ನ ಮಾತಾಡಿಸಿದರ ಚಹಾ ಕುಡಸ್ತೇನಿ ಅಂತಿದ್ದಾ, ಅಕಿ ಕಡೆ ಜರ್ನಲ್ ಇಸಗೊಂಡರ ಟಿಫಿನ್ ಮಾಡಸ್ತೇನಿ, ಬಸ್ಸಿನಾಗ ಅಕಿ ಬಾಜುಕ ಕೂತರ ಕೊಟ್ಟರ ಪಾರ್ಟಿ ಕೋಡ್ತೇನಿ ಅಂತಿದ್ದಾ. ಈ ಮಗಾ ಏನಿಲ್ಲದ ಅಕಿ ಹಿಂದ ಗಂಟ ಬಿದ್ದಿದ್ದಾ ಇನ್ನ ಹಿಂಗ ಯಾರರ ಏನರ ಬ್ಯಾಟಾ ಹಚ್ಚಿದರ ಮುಗದ ಹೋತ ಬ್ಯಾಟಿ ನಾಯಿಗತೆ ಬೆನ್ನ ಹತ್ತಿ ಬಿಡತಿದ್ದಾ.
ಮುಂದ ಫೈನಲ್ ಇಯರ ಇದ್ದಾಗ ವ್ಯಾಲೆಂಟೇನ್ಸ್ ವೀಕ ಬಂತ
“ಲೇ, ನೀ ಮೂರ ವರ್ಷ ಬರೆ ಅಕಿಗೆ ಪ್ರಪೋಸ ಮಾಡೋದರಾಗ ಹಾಳ ಮಾಡಿದಿ. ಇದ ಲಾಸ್ಟ ಇಯರ, ನೀ ಏನರ ಅಕಿಗೆ ಹೋಗಿ ಈ ಸರತೆ ಕಿಸ ಡೇ ಕ್ಕ ಒಂದ ಕಿಸ್ ಕೊಟ್ಟರ ನಿಂಗ icelandನಾಗ ನಾರ್ಥ್ ಇಂಡಿಯನ್ ಪಾರ್ಟಿ ಕೊಡ್ತೇನಿ” ಅಂತ ನಮ್ಮ ಮಾರವಾಡಿ ವಕ್ಕ್ಯಾಗ ಚಾಲೇಂಜ ಮಾಡಿದಾ. ಆ ಕಾಲದಾಗ iceland hotelದಾಗ ನಾರ್ಥ್ ಇಂಡಿಯನ್ ಊಟಾ ಮಾಡೊದು ಅಂದರ ಅಗದಿ ದೊಡ್ಡ treat ಇದ್ದಂಗ, ಇಗಿನ ಹಂಗ ಕುಡದರ ಇಷ್ಟ ಪಾರ್ಟೀ ಅಂತೇನ ಇದ್ದಿದ್ದಿಲ್ಲಾ.
ಅಂವಾ ಅಷ್ಟ ಹೇಳೋದ ತಡಾ ಇಂವಾ ತಲಿಕೆಡಸಿಕೊಂಡ ಅದರ ಸಂಬಂಧ ಪ್ಲ್ಯಾನ ಮಾಡಲಿಕ್ಕೆ ಹತ್ತಿದಾ,
ಫೆಬ್ರುವರಿ ಏಳಕ್ಕ ‘ರೋಸ್ ಡೇ’ ಅಂತ ಅಕಿಗೆ ಎರಡ ಗುಲಾಬಿ ಹೂ ಕೊಟ್ಟಾ. ಎರಡ ಯಾಕಲೇ ಅಂದರ
“ಅಕಿ ಹಳ್ಳಿ ಹುಡಗ್ಯಾರಗತೆ ತಲಿತುಂಬ ತಪಾ-ತಪಾ ಎಣ್ಣಿ ಹಚಗೊಂಡ ಎರಡ ಜಡಿ ಹಾಕೊತಾಳಲಾ” ಅದಕ್ಕ ಅಂದಾ.
ಅಕಿ ಹೂವು ಯಾಕ ಅಂತ ಕೇಳಿದರ ಸಾಯಿಬಾಬಾನ ಹೂ ಒಲ್ಲೆ ಅನಬಾರದ ಅಂತ ಹೇಳಿ ಅದರ ಜೊತಿ ಮತ್ತ ಕಲಸಕ್ಕರಿ ಬ್ಯಾರೆ ಕೊಟ್ಟಾ.
ಅದರ ಮರದಿವಸ ಅಂದರ ಫೆಬ್ರುವರಿ ಎಂಟಕ್ಕ ‘ಪ್ರಪೊಸ್ ಡೇ’ ಇತ್ತ. ಏನಿಲ್ಲದ ಇಷ್ಟ ದಿವಸ ಅಕಿ ಹಿಂದ ಪಿಡಾ ಗಂಟ ಬಿದ್ದಂಗ ಬಿದ್ದ ಪ್ರಪೊಸ್ ಮಾಡ್ತಿದ್ದಾ ಇನ್ನ ಅವತ್ತ ಬಿಡ್ತಾನ? ಮತ್ತ ಪ್ರಪೊಸ್ ಮಾಡಿದಾ. ಈ ಸರತೆ ರೈಟಿಂಗನಾಗ ಕೊಟ್ಟಾ. ಪಾಪ ಅಕಿ ಇನ್ನೂ ಆ ಗುಲಾಬಿ ಹೂ ಇಸಗೊಂಡಿದ್ದ ಶಾಕನಾಗ ಇದ್ಲು. ಮತ್ತಾ ಯಥಾ ಪ್ರಕಾರ ” ಏ, ಹೋಗ” ಅಂತ ಹಚಾ-ಹುಚಾ ಮಾಡಿ ಪ್ರಪೋಸಲ್ ಲೆಟರ ಹರದ ಕಳಸಿದ್ಲು.
ಮರದಿವಸ ಫೆಬ್ರುವರಿ ಒಂಬತ್ತಕ ಅಕಿಗೆ ಒಂದ ಕ್ಯಾಡಬರೀ ಚಾಕಲೇಟ ತೊಗಂಡ ಹೋಗಿ ಕೊಟ್ಟಾ. ಅಕಿ ಒಮ್ಮಿಂದೊಮ್ಮಿಲೆ
“ಇದ್ಯಾಕ, ನಾ ಏನ ನಿನ್ನ ಪ್ರಪೋಸಲಗೆ ಹೂಂ ಅಂದಿಲ್ಲಾ” ಅಂದ್ಲು. ಇಂವಾ
“ಇವತ್ತ ‘ಚಾಕಲೇಟ್ ಡೇ’ ಅದಕ್ಕ ಕೊಡಲಿಕತ್ತೇನಿ, ನೀ ಈ ಚಾಕಲೇಟ ತಿಂದ ಆಮ್ಯಾಲೆರ ನನ್ನ ಬಗ್ಗೆ ವಿಚಾರ ಮಾಡ” ಅಂತ ಹೇಳಿದಾ.
ಫೆಬ್ರುವರಿ ಹತ್ತಕ್ಕ ಒಂದ ಟೆಡ್ಡಿ ಬಿಯರ್ ಕೊಟ್ಟಾ ಯಾಕಂದರ ಅವತ್ತ ‘ಟೆಡ್ಡಿ ಡೇ’ಇತ್ತ.
“ಲೇ ಈ ಹುಡಗ್ಯಾರ ವಯಸ್ಸಿಗೆ ಬಂದ ಮ್ಯಾಲೆ ಟೆಡ್ಡಿ ಬಿಯರ್ ಜೊತಿ ಆಟ ಆಡತಾರ” ಅಂತ ಒಂದ ತನ್ನಕಿಂತಾ ದಪ್ಪಂದ, ಕೆಂಪಂದ ಟೆಡ್ಡಿ ಬಿಯರ್ ತೊಗೊಂಡ ಹೋಗಿ ಕೊಟ್ಟಾ. ಅಕಿಗೆ ಏನ ಹೇಳಬೇಕ ತಿಳಿಲಾರದ ಅಂವಾ ಕೊಟ್ಟಿದ್ದ ಟೆಡ್ಡಿ ತೊಗಂಡ ಲೇಡಿಸ್ ರೂಮನಾಗ ಇಟ್ಟಳು.
ಮರದಿವಸ ಮತ್ತ ಅಕಿನ್ನ ಬಸ್ ಸ್ಟಾಪನಾಗ ಹಿಡದ
“ಅನ್ನಂಗ ನನ್ನ ಪ್ರಪೋಸಲ್ ಬಗ್ಗೆ ಏನ ವಿಚಾರ ಮಾಡಿದಿ” ಅಂದಾ.
“ಏ, ಹೋಗ. ನಾ ನಿನಗ ಹಂಗ ತಿಕ್ಕೊಂಡೇಲಾ” ಅಂದ್ಲು.
“ಅಲ್ಲಾ, ನಾ ನೀ ಹಂಗ ತಿಳ್ಕೊ ಅಂತ ಹೇಳಿನ ಪ್ರಪೋಸ ಮಾಡಿದ್ದು ಇಲ್ಲಾಂದರ ನಂಗೇನ ತಲಿಕೆಟ್ಟಿತ್ತೇನ ಛಲೋ-ಛಲೋ ಹುಡಗ್ಯಾರನ ಬಿಟ್ಟ ನಿನಗ ಪ್ರಪೋಸ್ ಮಾಡಲಿಕ್ಕೆ” ಅಂತ ಹೇಳಿದಾ.
ಅಕಿಗೆ ‘ನೀ ಹೂಂ ಅಂದರ ನಾ ನಿನಗ ಮುಂದ ಹಂಗ ನೋಡ್ಕೋತೇನಿ, ಇಷ್ಟ ಪ್ರೀತಿ ಮಾಡ್ತೇನಿ, ರಾಣಿ ಹಂಗ ಜೋಪಾನ ಮಾಡ್ತೇನಿ’ ಅಂತೇಲ್ಲಾ ಪ್ರಾಮೀಸ ಮಾಡಿದಾ. ಅಂವಾ ಹಂಗ ಸಿಕ್ಕಾ ಪಟ್ಟೆ ಹುಚ್ಚುಚಾಕಾರ ಪ್ರಾಮಿಸ್ ಮಾಡೋದ ನೋಡಿ ಅಕಿ
“ಯಾಕ ಇವತ್ತ ‘ಪ್ರಾಮಿಸ್ ಡೇ’ ಅಂತ ಏನೇನರ ಹುಚ್ಚುಚಾಕಾರ ಪ್ರಾಮಿಸ್ ಮಾಡಲಿಕತ್ತಿ ಏನ? ನಾ ನಿನ್ನ ಬಗ್ಗೆ ಇನ್ನೂ ವಿಚಾರ ಮಾಡಿಲ್ಲ ನಡಿ” ಅಂತ ಹೇಳಿ ಹೋದ್ಲು.
ಮರದಿವಸ ಕಿಸ್ ಡೇ ಇತ್ತ. ಅವತ್ತ ಮಧ್ಯಾಹ್ನ ಅಕಿದ zoology practical ಇತ್ತ, ಅಕಿ ಅದನ್ನ ಮುಗಿಸಿಕೊಂಡ ಅಲ್ಲೇ ಲ್ಯಾಬನಾಗ ಇದ್ದಳು, ಕಾಲೇಜ ಕಾರಿಡರ್ ಒಳಗ ನಾವ ಒಂದ ನಾಲ್ಕ ಮಂದಿ ಬಿಟ್ಟರ ಯಾರೂ ಇದ್ದಿದ್ದಿಲ್ಲಾ. ಅಕಿ ನಾವ ಹೊರಗ ನಿಂತದ್ದ ನೋಡಿ ಲ್ಯಾಬಿನಿಂದ ಹೊರಗ ಬರಲಿಲ್ಲಾ. ಲ್ಯಾಬನಾಗಿಂದ ಎಲ್ಲಾರೂ ಹೋದರು ಅಕಿ ಇನ್ನೋಬ್ಬಕಿನ ಕರಕೊಂಡ ಅಲ್ಲೇ ಇದ್ದಳು. ಕಡಿಕೆ ಇಂವಾ ತಲಿ ಕೆಟ್ಟ ಲ್ಯಾಬ ಒಳಗ ಹೋದಾ. ನಾವೇಲ್ಲಾ ಖಿಡಕ್ಯಾಗ ಹಣಿಕೆ ಹಾಕಿ ಕಿಸ್ಸಿಗೆ ಸಾಕ್ಷಿ ಆಗಲಿಕ್ಕೆ ನೋಡಲಿಕತ್ತಿದ್ವಿ, ಒಬ್ಬೊಂವಂಗ ಯಾರರ ಸರ್ ಬಂದರ ನೋಡ್ತಿರ ಅಂತ ನಿಲ್ಲಸಿದ್ವಿ. ಇಂವಾ ಸೀದಾ ಒಳಗ ಹೋಗಿ ಅಕಿ ಜೊತಿ ಅದು ಇದು ಮಾತಾಡಿದಂಗ ಮಾಡಿ ಪಟ್ಟನ ಒಂದ ಗಲ್ಲಕ್ಕ ಪಪ್ಪಿ ಕೊಟ್ಟ ಓಡಿ ಬಂದ ಬಿಟ್ಟಾ. ಅಕಿ ಮುಂದ ಏನ ಅಂದ್ಲೊ ಏನೋ ಅದು ದೇವರಿಗೆ ಗೊತ್ತ. ಇಂವಾ ಮಾತ್ರ ಭಾಳ ಗಾಬರಿ ಆಗಿ ಬೆವತ ಬಿಟ್ಟಿದ್ದಾ.
ನಂಗೂ ಗಾಬರಿ ಆಗಲಿಕತ್ತ, ನಾ “ಏನ ಮನಷ್ಯಾ ಇದ್ದಿಲೇ ಒಂದ ನಾರ್ಥ ಇಂಡಿಯನ್ ಪಾರ್ಟಿ ಸಂಬಂಧ ಪಾಪ ಆ ಬ್ರಾಹ್ಮರ ಹುಡಗಿ ಜೀವನ ಹಾಳ ಮಾಡಿದಲ್ಲಲೇ” ಅಂದೆ.
“ಏ, ನಾ ಹಂತಾದ ಎನ ಮಾಡಿಲ್ಲಲೇ, ಬರೇ ಒಂದ ಕಿಸ್ ಕೊಟ್ಟ ಬಂದೇನಿ” ಅಂದಾ.
ಆದರ ಅಂವಾ ಖರೇನ ಭಾಳ ಹೆದರಿದ್ದಾ. ನಾಳೆ ಎಲ್ಲೇರ ಅಕಿ ಕಂಪ್ಲೇಂಟ ಮಾಡಿಬಿಟ್ಟರ ತಾ ಸತ್ತಂಗ ಅಂತ ಭಾಳ ಟೇನ್ಶನ್ ಆಗಲಿಕತ್ತಿತ್ತ. ಅಲ್ಲಾ ಅವನ ಜೊತಿ ನಂಬದು ಹೆಸರ ಬರತಿತ್ತ ಆ ಮಾತ ಬ್ಯಾರೆ.
ಏನೋ ನಮ್ಮ ಪುಣ್ಯಾಕ್ಕ ಅಕಿ ಯಾರಿಗೂ ಕಂಪ್ಲೇಂಟ ಕೊಡಲಿಲ್ಲಾ, ಬಹುಶಃ ಅಕಿ ನನ್ನ ಮಾರಿ ನೋಡಿ ಸುಮ್ಮನಿದ್ದಾಳ ಅಂತ ನಾ ಅನ್ಕೊಂಡೆ.
ಮರುದಿವಸ ಹಗ್ ಡೇ( ಅಪಗೋಳು ದಿವಸ) ಇತ್ತ.
“ನಾ ಇವತ್ತ ಅಕಿನ್ನ ಅಪಗೊಂಡ ನಿನ್ನೆ ಕಿಸ್ ಕೊಟ್ಟದ್ದಕ ಸ್ವಾರಿ ಕೇಳ್ತೀನಿ” ಅಂದಾ. ಆದ್ರ ಅಕಿ ಏನ ಮರದಿವಸ ಕಾಲೇಜ ಕಡೆ ಹಾಯಲಿಲ್ಲಾ. ಅದರ ಮರದಿವಸ ವ್ಯಾಲೇಂಟೇನ್ಸ್ ಡೇ ಇತ್ತ, ಇನ್ನ ಇಂವಾ ಮತ್ತೇನರ ಹುಚ್ಚುಚಾಕಾರ ಮಾಡ್ತಾನ ಅಂತ ಅಕಿ ಅವತ್ತನೂ ಕಾಲೇಜಿಗೆ ಬರಲಿಲ್ಲಾ. ಮುಂದ ಒಂದ ವಾರಾನ ಗಟ್ಟಲೆ ಅಕಿ ಕಾಲೇಜಿನಾಗ ಕಾಣಲಿಲ್ಲಾ.
ಇತ್ತಲಾಗ ನಮ್ಮ ಮಾರವಾಡಿ ಅಂವಾ ಖರೇನ ಕಿಸ್ ಕೊಟ್ಟದ್ದ ನೋಡಿ ಗಾಬರಿ ಆಗಿ ಬಿಟ್ಟಾ.
“ಏ, ನೀ ಗಲ್ಲಕ್ಕ ಕಿಸ್ ಕೊಟ್ಟರ ಅದ ಕಿಸ್ ಅಲ್ಲಾ, ಮೈ ಪಾರ್ಟಿ ನಹಿ ದೇತಾ” ಅಂದ ಬಿಟ್ಟಾ. ಹೇಳಿ-ಕೇಳಿ ಮಾರವಾಡಿ, ತನ್ನ ಬುದ್ಧಿ ತೋರಿಸೆ ಬಿಟ್ಟಾ.
” ಏ, ಅದ ಹೆಂಗ ಮಗನ ಒಟ್ಟ ಕಿಸ್ ಕೊಡೊದು ಅಂತ ಡಿಸೈಡ ಆಗಿತ್ತ, ತುಟಿಗೆ ಕೊಡಬೇಕು, ಕುತಗಿಗೆ ಕೊಡಬೇಕ ಅಂತೇನಿಲ್ಲಾ” ಅಂತ ವಕ್ಕುಂದ ಜಗಳಾ ತಗದಾ. ಕಡಿಕೆ ಒಂದ ವಾರಗಟ್ಟಲೇ ಆ ಮಾರವಾಡಿ ತಲಿ ತಿಂದ ಪಾರ್ಟಿ ತೊಗೊಂಡಾ.
ಮುಂದ ಅಕಿ ಕಾಲೇಜಿಗೆ ಬಂದಮ್ಯಾಲೆ ನಮನ್ನೇಲ್ಲಾ ಕಂಡರೂ ಕಾಣಲಾರದಂಗ ಅಡ್ಡ್ಯಾಡಲಿಕತ್ಲು. ಕಡಿಕೆ ಈ ಮಗಾ ಅಕಿಗೆ ಒಂದ ಸರತೆ ಸಿ.ಬಿ.ಟ್ಯಾಗ ಹಿಡದ ನಿಲ್ಲಿಸಿ
“ಇಲ್ಲಾ, ಮಾರವಾಡಿ ಮತ್ತ ಆಡೂರ ಇಬ್ಬರೂ ಕೂಡಿ ನನ್ನ ಜೊತಿ ಶರ್ತ ಕಟ್ಟಿದ್ದರು, ಅದಕ್ಕ ಹಂಗ ಮಾಡಿದೆ. ಇಲ್ಲಾಂದರ ನಾ ಮದುವಿ ಆಗೋತನಕ ನಿನ್ನ ಮುಟ್ಟೊ ವಿಚಾರನ ಇರಲಿಲ್ಲಾ” ಅಂತ ನನ್ನ ಹೆಸರ ತೊಗೊಂಡ ಬಿಟ್ಟಾ. ಪಾಪ, ಅಕಿಗೆ ನನ್ನ ಬಗ್ಗೆ ಭಾಳ ರಿಸ್ಪೆಕ್ಟ ಇತ್ತ, ಬ್ರಾಹ್ಮರ ಹುಡಗಾ, ಭಾಳ ಶಾಣ್ಯಾ ಅಂತೇಲ್ಲಾ ತಿಳ್ಕೊಂಡ ನನ್ನ ಜೊತಿ ಒಂದ ಸ್ವಲ್ಪ ದೋಸ್ತಿ ಮಾಡಿದ್ಲು ಅದನ್ನ ಇಂವಾ ಹಳ್ಳಾ ಹಿಡಿಸಿ ಬಿಟ್ಟಾ.
ನಂಗ ಮುಂದ exams ಹತ್ತರ ಇದ್ದಾಗ ನನ್ನ ಜರ್ನಲ್ ಕೊಟ್ಟ, chemistry practical exam ಇದ್ದಾಗ ನಾ ನಿಂಗ ಹೆಲ್ಪ್ ಮಾಡ್ತೇನಿ ಅಂತ ಹೇಳಿ ‘ಆ ಕಿಸ್ ಡೇ ಕಿಸ್’ ಒಳಗ ನಂದೇನೂ ಕೈವಾಡ ಇರಲಿಲ್ಲಾ ಅಂತ ಅಕಿಗೆ ಕನ್ವಿನ್ಸ್ ಮಾಡೋದರಾಗ ರಗಡ ಆತ.
ಮುಂದ ಕಾಲೇಜ ಮುಗದ ಮ್ಯಾಲೂ ವಕ್ಕುಂದ ಏನ ಅಕಿಗೆ ಬೆನ್ನ ಹತ್ತೋದ ಬಿಡಲಿಲ್ಲಾ. ಅಕಿ ಕಂಡಾಗೊಮ್ಮೆ ಮಂಗ್ಯಾನಾಟ ಮಾಡೋದ ಚಾಲೂನ ಇತ್ತ. ಮುಂದ ಅಕಿ ಒಂದ ಫರ್ಮಾ ಕಂಪನಿ ಒಳಗ ಕಂಪ್ಯೂಟರ ಆಪರೇಟರ ಅಂತ ಬಾನಿ ಓಣ್ಯಾಗ ಕೆಲಸಕ್ಕ ಹೋಗ್ತಿದ್ಲು. ಇಂವಾ ದಿನಾ ಅಕಿ ಆಫೀಸ ಬಿಟ್ಟ ಮ್ಯಾಲೆ ಅಕಿ ಹಿಂದ C.B.T ತನಕಾ ಬರತಿದ್ದಾ. ಅಕಿ ಜೊತಿ ಇನ್ನೊಬ್ಬಕಿ ಸಾದಗಪ್ಪ-ಹಲ್ಲದಪ್ಪ ಇದ್ದ ಹುಡಗಿ ಇರತಿದ್ಲು, ಇಂವಾ ‘ನಮ್ಮ ಹುಡಗಿ ತನಗ ದೃಷ್ಟಿ ಹತ್ತಬಾರದಂತ’ ಅಕಿನ್ನ ಕರಕೊಂಡ ಅಡ್ಡ್ಯಾಡತಾಳ ಅಂತಿದ್ದಾ. ಮುಂದ ಒಂದ್ಯಾರಡ ವರ್ಷ ಅಕಿ ಹಿಂದ ಹಂಗ ಗಂಟ ಬಿದ್ದಾ. ಮಾತಡಲಿಕ್ಕೆ ಸಿಕ್ಕಾಗ ಒಮ್ಮೆ ‘ಮತ್ತ ಏನ ಮಾಡಿದಿ ನಾ ಹೇಳಿದ್ದ’ ಅಂತಿದ್ದಾ, ಅಕಿ ‘ಏ, ಹೋಗ, ನಂಗ ನೀ ಲೈಕಿಲ್ಲಾ’ ಅಂತಿದ್ಲು. ಕಡಿಕೆ ಒಂದ ದಿವಸ ಅಕಿನs ಇವಂಗ ಮಾರ್ಕೇಟನಾಗ ಹಿಡದ ನಿಲ್ಲಿಸಿ ತನ್ನ ಲಗ್ನ ಪತ್ರ ಕೊಟ್ಟಳು. ಅಲ್ಲಿಗೆ ವಕ್ಕುಂದನ ಒನ್ ಸೈಡೇಡ ಅಫೇರ ಮುಗದಂಗ ಆತು.
ಆದರ ಅಂವಾ ಮುಂದ ಅಕಿ ತವರ ಮನಿಗೆ ಬಂದಾಗೊಮ್ಮೆ ಅಕಿ ಏನರ ಭೆಟ್ಟಿ ಆದರ
“ಏನ ವಿಶೇಷ, ಮದುವಿ ಆಗಿ ಮೂರ ತಿಂಗಳ ಆತಲಾ” ಅಂತ,
“ಏ, ಎಷ್ಟರಾಗ? ಬಯಕಿ ಜೋರೇನ?” ಅಂತ ಅಕಿ ಬ್ರಾಡವೇದಾಗ ಪಾವ ಭಾಜಿ ತಿನ್ನಬೇಕಾರ ಅಕಿ ಹೊಟ್ಟಿ ನೋಡಿ ಅಂತಿದ್ದಾ,
ಮುಂದ ಅಕಿ ಖರೇನ ಬಸರಾದಾಗ
“ಅಡ್ಡಿಯಿಲ್ಲಾ, ಯಾವಾಗೊ ಗದ್ಲಾ ಹಕಿ ಅಲಾ” ಅಂತ, ಮುಂದ ಅಕಿ ಹೆಣ್ಣ ಹಡದ ಮ್ಯಾಲೆ
“ನೋಡ ನನ್ನ ಮಾಡ್ಕೊಂಡಿದ್ದರ ಗಂಡ ಹುಟ್ಟತಿತ್ತ” ಅಂತೇಲ್ಲಾ ಕಾಡತಿದ್ದಾ. ಬರಬರತ ಅಕಿ ಹುಬ್ಬಳ್ಳಿಗೆ ಬರೋದ ಕಡಿಮೆ ಆಗಲಿಕತ್ತ. ಅವಂದು- ಅಕಿದು ಭೆಟ್ಟಿ ಕಡಿಮೆ ಆದವು.
ಮುಂದ ಇವರ ಮನ್ಯಾಗ ಇವಂದು ಮದುವಿ ಮಾಡಿದರು. ಆ ವ್ಯಾಲೆಂಟೇನ ವೀಕ ಕಿಸ್ಸ ಡೇ ಕಿಸ್ಸಿಗೆ ನಿನ್ನಿಗೆ ಹತ್ತೊಂಬತ್ತ ವರ್ಷ ಆದವು ಆದರು ಇವತ್ತು ನಾಲ್ಕ ಮಂದಿ ಹಳೇ ದೋಸ್ತರ ಭೆಟ್ಟಿ ಆಗಿ ಅಕಿ ಹೆಸರ ತಗದರ ತಾಸ ಗಟ್ಟಲೇ ಅಕಿ ಬಗ್ಗೆ ಮಾತಾಡ್ತಾನ.
ಒಂದ ಮಜಾ ಅಂದರ ಅಕಿ ಕೆಲಸಾ ಬಿಟ್ಟಮ್ಯಾಲೆ ಅಕಿ ಜಾಗಕ್ಕ ಇನ್ನೊಂದ ಬ್ರಾಹ್ಮರ ಹುಡಗಿನ್ನ ಕೆಲಸಕ್ಕ ತೊಗೊಂಡಿದ್ದರು. ಆ ಹುಡಗಿ ಜೊತಿನs ನನ್ನ ಲಗ್ನ ಫಿಕ್ಸ್ ಆತ. ನಮ್ಮಾಕಿ ಜೋಡಿನು ಆ ‘ದೃಷ್ಟಿ ಬಟ್ಟ’ ಸಾದಗಪ್ಪ, ಹಲ್ಲ ದಪ್ಪನ ಹುಡಗಿ ಇನ್ನೂ ಕೆಲಸಕ್ಕ ಇದ್ಲು. ಅಕಿ ನನ್ನ ಹುಡಗಿ ಮುಂದ ಹಿಂದ ಇದ್ದ ಹುಡಗಿಗೆ ನಾವೇಲ್ಲ ಹೆಂಗ ಗೋಳ ಹೋಯ್ಕೊಂಡ್ವಿ ಅಂತ ಹೇಳಿದ್ಲು. ನಮ್ಮ ವಕ್ಯಾ
“ಅಡ್ಡಿಯಿಲ್ಲಲೇ,ಒಟ್ಟ ನಮ್ಮ ಹುಡಗಿ ಜಾಗದಾಗ ಇದ್ದ ಹುಡಗಿನ್ನ ನೀನರ ಕಟಗೊಂಡೇಲಾ, ಸಾಕ ತೊಗೊ ಅಷ್ಟ ಸಮಾಧಾನ” ಅಂದಾ.
ಮುಂದ ನನ್ನ ಹೆಂಡತಿ ಆಗೋಕಿಗೆ ನಿಮ್ಮ ಲಗ್ನಕ್ಕ ನನ್ನ ಮಾಜಿ ಹುಡಗಿನ್ನ ಕರಸರಿ ಅಂತ ಅವರ ಮನಿತನಕ ಹೋಗಿ ಅಕಿ ಅತ್ತಿ ಮನಿ ಅಡ್ರೇಸ್ ಇಸಗೊಂಡ ಬಂದ ನಮ್ಮ ಲಗ್ನ ಪತ್ರ ತಾನ ಸ್ಟ್ಯಾಂಪ್ ಹಚ್ಚಿ ಕಳಸಿದಾ. ಆದರ ಅಕಿ ಏನ ಬರಲಿಲ್ಲಾ. ಆದರ ಇಂವಾ ಏನ ಇವತ್ತೂ ಅಕಿನ್ನ ಮರಿಲಿಲ್ಲಾ.

This entry was posted on Saturday, February 16th, 2013 at 5:31 am and is filed under ಕೆಂಡಸಂಪಿಗೆ. You can follow any responses to this entry through the RSS 2.0 feed. You can leave a response, or trackback from your own site.

1 Comment

  1. Cdr Narayan Kulkarni says:

    This reminds me of my college days at PC Jabin in late 1960s!! Hilarious & written in your own style!! Great and Thank you Prashant Adur!!

    ... on July April 13th, 2015

Post a Comment