ನಂದ ‘ಡೇಟ್’ ಅದ, ನಾ ಬರೋದ ‘ಡೌಟ’

ಮುಂದಿನ ವಾರ ನಮ್ಮ ಸುಮಕ್ಕನ ಮಗನ ಮದುವಿ ಫಿಕ್ಸ ಆಗೇದ. ನಿನ್ನೆ ನಮ್ಮ ಸುಮಕ್ಕ ನನ್ನ ಹೆಂಡತಿಗೆ ದೇವರ ಊಟಕ್ಕ ‘ಹಿತ್ತಲ ಗೊರ್ಜಿ’ ಮುತ್ತೈದಿ ಅಂತ ಹೇಳಲಿಕ್ಕೆ ಬಂದಿದ್ದರು. ಆದ್ರ ನನ್ನ ಹೆಂಡತಿ “ಸುಮಕ್ಕ ನಂದ ಡೇಟ್ ಅದ , ನಾ ಬರೋದ ಡೌಟ ” ಅಂತ ಅವರ ಮಾರಿ ಮ್ಯಾಲೆ ಹೊಡದಂಗ ಹೇಳಿ ಬಿಟ್ಟಳು. ಪಾಪಾ ನಮ್ಮ ಸುಮಕ್ಕ ” ಅಯ್ಯ ನಮ್ಮವ್ವ ಇನ್ನ ಹಿತ್ತಲಗೊರ್ಜಿ ಮುತ್ತೈದಿನ ಎಲ್ಲೆ ಹುಡಕಬೇಕವಾ, ನೋಡು ಒಳಗ ಇದ್ದರ ಬಂದ ಹೋಗು” ಅಂತ ಅರಷಿಣ-ಕುಂಕುಮ ಕೊಟ್ಟ ಹೋದರು. ‘ಹಿತ್ತಲಗೊರ್ಜಿ ಮುತ್ತೈದಿ’ ಅಂದರ ‘ಯಾ ಮುತ್ತೈದಿಗೆ ಅಂದರ ಅಕಿಗೆ ಗಂಡ ಅಂತೂ ಇರಬೇಕ ಆ ಮಾತ ಬ್ಯಾರೆ, ಇನ್ನ ತವರಮನ್ಯಾಗ ಅವ್ವಾ-ಅಪ್ಪಾ ಇನ್ನೂ ಇರ್ತಾರೋ, ಅತ್ತಿಮನ್ಯಾಗ ಅತ್ತಿ-ಮಾವಗ ಅಕಿ ಇನ್ನೂ ಜೀವಂತ ಇಟ್ಟಿರತಾಳೋ ಹಂತಾಕಿಗೆ ಹಿತ್ತಲಗೊರ್ಜಿ ಮುತ್ತೈದಿ’ಅಂತ ಕರಿತಾರ. ಹೀಂತಾ ಮುತ್ತೈದಿಯರು ನೂರಕ್ಕ ಒಬ್ಬರ ಸಿಗತಾರ. ಹಂತಾವರ ಒಳಗ ನನ್ನ ಹೆಂಡತಿನೂ ಒಬ್ಬಕಿ. ಆದರ ಪಾಪಾ ಅಕಿದ ಡೇಟ ಅದ ಅಕಿನರ ಏನ ಮಾಡಬೇಕ. ಅದ ಅಕಿ ಕೈಯಾಗಿಂದ ಅಲ್ಲಲಾ !
ನಾಳೆ ನವೆಂಬರ ೨೮ಕ್ಕ ನಂದ ಮದುವಿ ಆಗಿ ಬರೊಬ್ಬರಿ ಹನ್ನೊಂದ ವರ್ಷ ತುಂಬಿ ಹನ್ನೆಡರಾಗ ಬೀಳತಾವ. ನಾನೂ ಇಷ್ಟ ವರ್ಷದಿಂದ ನೋಡೆ ನೋಡಲಿಕತ್ತೇನಿ, ನನ್ನ ಹೆಂಡತಿಗೆ ಯಾವಾಗ ನಮ್ಮ ಪೈಕಿ ಯಾರದರ ಮನ್ಯಾಗ ಫಂಕ್ಶನ್ ಇತ್ತಂದರ ಸಾಕು ಆವಾಗ ಕರೆಕ್ಟ ಅಕಿದ ‘ಡೇಟ್’ ಇರತದ, ಇರತದ ಅಂತ ಅಕಿ ಹೇಳತಾಳ ಯಾಕಂದರ ನನಗೇನ ಗೊತ್ತಾಗಬೇಕ ತಲಿ, ಅಕಿ ಹೇಳಿದ್ದಕ್ಕ ನಾ ಹೂಂ ಅನ್ನಬೇಕ ಅಷ್ಟ. ಒಂದ ಸಲಾ ಛಂದ, ಎರಡ ಸಲಾ ಛಂದ ಆದರ ಈಕಿದು ಹನ್ನೊಂದ ವರ್ಷದಿಂದ ಹಿಂಗ ನಡದದ. ಪಾಪಾ ಯಾರರ ಮನಿತನಕಾ ಬಂದು “ಎಲ್ಲಾರೂ ಬರಬೇಕ ಮತ್ತ , ಪ್ರೇರಣಾ ತಪ್ಪಸ ಬ್ಯಾಡಾವಾ ” ಅಂತ ಅಂದ್ರ ಸಾಕೂ “ನಂದ ಡೇಟ್ ಅದ, ನಾ ಬರೋದ ಡೌಟ ” ಅಂತ ಬೋರ್ಡ ತೊರಿಸೆ ಬಿಡತಾಳ. ಪಾಪಾ ಕರದವರರ ಏನ ಮಾಡಬೇಕು “ಆತವಾ ಹಂಗರ ,ಆದೇನ ಯಾರ ಕೈಯಾಗಿಂದನು. ನಿನ್ನ ಗಂಡನ್ನರ ಕಳಸು , ಅವಂದೇನ ಡೇಟ ಇಲ್ಲಲಾ ” ಅಂತ ಹೇಳಿ ಹೊಗ್ತಾರ. ನಮ್ಮ ಲಗ್ನಾದ ಹೊಸದಾಗಿನೂ ಹೀಂಗ ಆಗತಿತ್ತು. ನಮ್ಮ ಪೈಕಿ ಯಾವದರ ಕಾರ್ಯಕ್ರಮಕ್ಕ ಜೋಡಿಲೆ ಹೋಗಬೇಕಂದ್ರ ಈಕಿದ ಡೇಟ್ ಅಡ್ಡಬರ್ತಿತ್ತು ! ನಮ್ಮ ಬಳಗದವರು ” ಏನಲೇ ನಿನ್ನ ಹೆಂಡತಿದ ತಿಂಗಳಿಗೆ ಎಷ್ಟ ಸಲಾ ‘ಡೇಟ್’? ಯಾವಾಗಲೂ ‘ಔಟ ‘ ಇರತಾಳಲಾ ” ಅಂತ ನನಗ ಚಾಷ್ಟಿ ಮಾಡತಿದ್ದರು. ನಾ ತಲಿ ಕೆಟ್ಟ ಒಂದ ಸಲಾ ಕೇಳಿದೆ
” ನಿನಗ ತವರ ಮನಿ ಕಡೆ ಫಂಕ್ಶನ್ ಇದ್ದಾಗ ಡೇಟ್ ಇರಂಗಿಲ್ಲಾ, ನಮ್ಮ ಪೈಕಿ ಫಂಕ್ಶನ್ ಇದ್ದಾಗ ಇಷ್ಟ ಅದ ಹೆಂಗ ‘ಡೇಟ್’ ಕರೆಕ್ಟ ಬರತದ ” ಅಂತ.
” ನಮ್ಮ ತವರ ಮನ್ಯಾಗ ಏನ ಕಾರ್ಯಕ್ರಮ ಮಾಡಬೇಕಾದರೂ ನನ್ನ ‘ಡೇಟ್’ ನೋಡ್ಕೊಂಡ ಫಿಕ್ಸ ಮಾಡತಾರ, ನಿಮ್ಮಂದಿಗತೆ ಅಲ್ಲಾ ” ಅಂದ್ಲು
” ಅಂದರ ನಿಮ್ಮ ತವರ ಮನಿ ಕ್ಯಾಲೆಂಡರನಾಗ ತಿಂಗಳಿಗೆ ಮೂರ ದಿವಸ ನಿಂದ ಡೇಟ್ ಇದ್ದಾಗ ಕೆಂಪ ಬಣ್ಣದಲೇ ತಾರೀಖ ಮಾರ್ಕ ಮಾಡಿರತಾರೇನ ಅದನ್ನ ನೋಡಿ ಕಾರ್ಯಕ್ರಮ ಫಿಕ್ಸ ಮಾಡಲಿಕ್ಕೆ ?” ಅಂದೆ.
“ರ್ರೀ! ಹೋಗರ್ರೀ , ಅವರು ನಂದ ಡೇಟ್ ಈ ತಿಂಗಳ ಯಾವಾಗ ಅದ ಅಂತ ನನ್ನ ಕೇಳಿ ಕಾರ್ಯಕ್ರಮ ಫಿಕ್ಸ ಮಾಡತಾರ ” ಅಂತ ಅಂದ್ಲು.
ಈಕಿದ ಡೇಟ್ ಅಂದ್ರ ಏನಂತ ತಿಳ್ಕೋಂಡಿರಿ, ಯಾವಾಗ ಬೇಕ್ ಆವಾಗ ರೇಶನ ಅಂಗಡ್ಯಾಗ ಚಿಮಣಿಯಣ್ಣಿ ಬಂದಂಗ ತನ್ನ ಅನುಕೂಲದ ಪ್ರಕಾರನ ಬರತದ.
ಹಿಂದ ನನ್ನ ಲಗ್ನದ ಡೇಟ್ ಫಿಕ್ಸ್ ಮಾಡಬೇಕಾರೂ ಹೀಂಗ ಆತು. ಫೇಬ್ರುವರಿ ೧೩, ೨೦೦೦ ಕ್ಕ ನಂದ ನಿಶ್ಚಯ ಆತು. ಮುಂದ ಲಗ್ನದ ಡೇಟ ಫಿಕ್ಸ ಮಾಡಬೇಕಂದರ ಪಾಪಾ ನಮ್ಮ ಮಾವಗ ಸಾಕ ಸಾಕಾಗಿ ಹೋತು. ಒಂದು ಮೂಹೂರ್ತ ಇದ್ದಾಗ ಅವರ ಬಜೆಟನಾಗಿಂದ ಕಲ್ಯಾಣ ಮಂಟಪ ಖಾಲಿ ಇರಬೇಕು. ಮತ್ತ ಮದುವಿ ಮೂಹೂರ್ತ ರವಿವಾರನ ಇರಬೇಕು ಇದ ನಮ್ಮ ಕಂಡಿಷನ್, ಯಾಕಂದರ ನಾವು ಸ್ಮಾರ್ಥರಾಗ ನೌಕರಸ್ಥ ಮಂದಿ, ಎಲ್ಲಾ ರವಿವಾರನ ಆಗಬೇಕು. ಹೀಂಗಾಗಿ ಏನ ಮಾಡಿದರೂ ರವಿವಾರನ ಮಾಡೋರು. ಬ್ಯಾರೇ ದಿವಸ ಆದರ ನಾವು ನಮ್ಮ ಅಪ್ಪನ್ನ ಲಗ್ನಕ್ಕೂ ಹೋಗೊ ಮಂದಿ ಅಲ್ಲಾ. ಇನ್ನ ಎಲ್ಲಾದರಕ್ಕಿಂತ ಹೆಚ್ಚಾಗಿ ಅವತ್ತ ನನ್ನ ಹೆಂಡತಿ ಆಗೋಕಿದ ‘ಡೇಟ್’ ಇರಬಾರದು. ಈ ಮೂರು ಹೊಂದೊದು ಅಷ್ಟ ಸರಳ ಇರಲಿಲ್ಲ. ತೋಗೊ ! ನಮ್ಮ ಮಾವಗ ಇವನ್ನೇಲ್ಲಾ ನೋಡಿ ಕಲ್ಯಾಣ ಮಂಟಪ ಫಿಕ್ಸ ಮಾಡೋದರಾಗ ‘ಕುರಿ -ಕೋಣ’ ಬಿದ್ದ ಹೋತ, ಒಂದ ಫೆಬ್ರುವರಿಗೆ ನಿಶ್ಚಯ ಆಗಿದ್ದ ಕಡಿಕೂ ನವೆಂಬರದಾಗ ಮದುವಿ ಫಿಕ್ಸ್ ಆತ. ಅದು ‘ರವಿವಾರ’ ಆಗಲಿಲ್ಲರಿ , ಮಂಗಳವಾರ ಆತು . ಕಡಿಕೆ ನಾ ರಜಾ ತೊಗಂಡ ಲಗ್ನಾ ಮಾಡ್ಕೋಂಡೆ. ರವಿವಾರನ ಅಂತ ಕೂತಿದ್ರ ಈಕಿ ಡೇಟ್ ಗದ್ದಲದಾಗ ನಂದ ಲಗ್ನದ ಡೇಟ್ ಫಿಕ್ಸ ಆಗತಿದ್ದಿದ್ದಿಲ್ಲ. ಬರೋಬ್ಬರಿ ನಿಶ್ಚಯಕ್ಕ ಲಗ್ನಕ್ಕ ಒಂಬತ್ತ ತಿಂಗಳ ಹದಿನೈದ ದಿವಸ ಫರಕ್ ಆತ. ಹಂಗೇನರ ನಮ್ಮ ಮಂದ್ಯಾಗ ನಿಶ್ಚಯ ದಿವಸ ‘ಪ್ರಸ್ಥ’ದ ಪದ್ಧತಿ ಇದ್ದಿದ್ದರ ಲಗ್ನ ತನಕ ಮಿನಿಮಮ್ ಒಂದ ಡಿಲೇವರಿ ಆಗತಿತ್ತು, ಕಡಿಕೆ ‘ಸೀಮಂತ ಕಾರ್ಯಾ’ ರ ಆಗಿರತಿತ್ತು ಆ ಮಾತ ಬ್ಯಾರೇ , ಇರಲಿ ಆಗಿದ್ದ ಆಗಿ ಹೋತ .
ಒಂದ ಮೂರ ವರ್ಷದ ಹಿಂದಿನ ಮಾತು. ನನ್ನ ಹೆಂಡತಿ ಮೌಶಿ ಮಗಳ ಮದುವಿ ಫಿಕ್ಸ ಮಾಡಿದ್ದರು. ಈ ಸಲಾ ಪಾಪಾ ಅವರು ನನ್ನ ಹೆಂಡತಿದ ‘ಡೇಟ್’ ಕೇಳಲಾರದ ಗಂಡ ಬೀಗರ ಮಾತ ಕೇಳಿ ಮದುವಿ ‘ಡೇಟ್’ ಫಿಕ್ಸ್ ಮಾಡಿದ್ದರು. ಮುಂದ ಅವರಿಗೆ ಗೊತ್ತಾತು ಕರೆಕ್ಟ ಲಗ್ನದ ಮೂಹೂರ್ತಕ್ಕ ಈಕಿದ ‘ಡೇಟ್’ ಅದ ಅಂತ. ಒಂದ ಸಲಾರ ನನ್ನ ಹೆಂಡತಿದ ತವರಮನಿ ಕಾರ್ಯಕ್ರಮಕ್ಕೂ ಅಕಿ ‘ಡೇಟ್’ ಅಡ್ಡ ಬಂತಲಾ ಅಂತ ನನಗ ಖುಶಿ ಆತು. ತವರಮನಿ ಮದುವಿ ತಪ್ಪತದಲಾ ಅಂತ ನನ್ನ ಹೆಂಡತಿಗೆ ಸಂಕಟ ಆಗಲಿಕತ್ತು. ಈಗ ಮದುವಿ ಡೇಟ್ ಅಂತೂ ಮುಂದ ಹಾಕಲಿಕ್ಕ ಬರಂಗಿಲ್ಲಾ, ಇಕಿ ತನ್ನ ‘ಡೇಟ್’ ಹೇಂಗ ಮುಂದ ಹಾಕಬೇಕಂತ ವಿಚಾರ ಮಾಡಲಿಕತ್ತಳು. ಆವಾಗ ನಮ್ಮವ್ವಾ ” ನೀ ಏನರ ಹಾಳ ಗುಂಡಿ ಬೀಳ ಆದರ ಗುಳಗಿ ಮಾತ್ರ ತೊಗೊಬ್ಯಾಡಾ, ನಿಸರ್ಗದ ಸ್ವಾಭವಿಕ ಪ್ರಕ್ರೀಯೆಗಳನ್ನ ಹೀಂಗ ವಿಜ್ಞಾನದಿಂದ ಮುಂದೂಡಿದರ ಮುಂದ ನೈಸರ್ಗಿಕ ವಿಕೋಪ ಆಗತದ” ಅಂತ ಹೆದರಿಸಿದ್ಲು. ಪಾಪಾ ನನ್ನ ಹೆಂಡತಿ ಹೆದರಿ ತಮ್ಮ ಪೈಕಿ ಎಲ್ಲಾ ಹಿರೇ ಮುತ್ತೈದಿಯರನ್ನ ಕನ್ಸಲ್ಟ ಮಾಡಿ ತನ್ನ ಮುದ್ದತ ಮುಂದ ಹಾಕಲಿಕ್ಕೆ ನೈಸರ್ಗಿಕ ವಿಧಾನಗಳನ್ನ ಕೇಳಲಿಕ್ಕೆ ಶುರು ಮಾಡಿದ್ಲು.
ಅವರ ಮೌಶಿ ಹೇಳಿದ್ಲು ” ಅವ್ವಕ್ಕ, ದೇವರನ ಬೇಡಕೊಂಡ ಒಂದ ಅಡಕಿ ಬೆಟ್ಟಾ ತುಳಸಿ ಕಟ್ಟಿ ಒಳಗ ನೆಡವಾ ಅಂದರ ಮುಂದ ಹೋಗತದ ”
ನಾ ಇಕಿಗೆ ಹೇಳಿದೆ ” ಬರೇ ಅಡಕಿ ಬೆಟ್ಟಾ ಯಾಕ ಸುಮ್ಮನ ಟೆಂಗಿನಕಾಯಿ ನೆಡು, ಒಂದ ವರ್ಷ ಮುಂದ ಹೋಗವಲ್ತಾಕ” ಅಂದೆ.
ಮುಂದ ಅಕಿ ಅತ್ಯಾನ ಸಲಹೆ ಬಂತು ” ಅವ್ವಿ, ಒಂದ ಸ್ವಲ್ಪ ಗೋಪಿ ಚಂದನ ತೊಗೊಂಡ ಮಸರನಾಗ ತೇಯದ ಹೊಟ್ಟ್ಯಾಗ ತೊಗೊ” ಅಂದರು
ನಾ ” ಗಂಡನ ಜೀವಾನ ತೆಯದ -ತೆಯದ ದಿವಸಾ ಹೊಟ್ಟ್ಯಾಗ ತೊಗೋಳವರಿಗೆ ಇದೇನ ದೊಡ್ಡ ಮಾತ ತೊಗೊ” ಅಂದೆ.
ಅವರ ಮಾಮಿ ಫೊನ್ ಮಾಡಿ ಹೇಳಿದ್ರು ” ಒಂದ ನಾಲ್ಕ ಲಿಂಬೆ ಹಣ್ಣಿನ ಬೀಜಾ ನುಂಗ, ನಿಂದ ‘ಡೇಟ್’ ಒಂದ ವಾರ ಮುಂದ ಹೋಗ್ತದ” ಅಂತ.
ನಾ ಹೇಳಿದೆ ” ನೀ ಒಬ್ಬಕೀನ ನುಂಗ ಮತ್ತ, ನೀ ಏನ್ ಎಲ್ಲರ ತವಿ ಒಳಗ ಲಿಂಬಿ ಹಣ್ಣ ಹಿಂಡಿ ಬೀಜಾ ತಗಿಲಾರದ ಹಂಗ ಬಿಟ್ಟ ಗಿಟ್ಟಿ, ಆಮೇಲೆ ಇಡಿ ಮನಿ ಮಂದಿ ನುಂಗಿ ಎಲ್ಲಾರದೂ ‘ಡೇಟ್’ ಮುಂದ ಹೋಗಿ-ಗಿಗಿತ್ತ ”
” ರ್ರೀ ನೀವ ಸ್ವಲ್ಪ ಸುಮ್ಮನ ಕೂಡ್ರಿ, ನನ್ನ ಸಂಕಟ ನನಗ ಹತ್ತೇದ, ನಿಮಗೇನ್ ಹುಡಗಾಟಕಿ ಆಗೇದ” ಅಂದ್ಲು. ಒಬ್ಬರ ಯಾರೋ ಅವರ ಪೈಕಿಯವರು ‘ಕಸಬರಗಿ ಮತ್ತ ಮಸಿ ಅರಬಿ’ ಮುದ್ದಾಮ ತುಳಿಬ್ಯಾಡಾ , ತುಳದರ ಲಗೂ ಆಗ್ತದ ಅಂತ ಹೇಳಿದ್ರು. ಮತ್ತೊಬ್ಬರ ಯಾರೋ ‘ಎಡಗೈ ಕಿರಬಟ್ಟಿಗೆ ಕರೆ ಧಾರಾ ಕಟಗೊ’ ಅಂದ್ರು. ಇನ್ನೊಬ್ಬರು ‘ಉಪ್ಪಿನಾಗ ತಾಮ್ರದ ಬಿಲ್ಲಿ’ ಹುಗದ ಇಡ ಅಂದ್ರು. ಒಟ್ಟ ಎಲ್ಲಾರು ತಲಿಗೆ ತಿಳದದ್ದ ಹೇಳ್ಕೋತ ಹೊಂಟರು. ಇಕಿ ಅವರ ಹೇಳಿದ್ದ ಎಲ್ಲಾ ಮಾಡ್ಕೋತ ಹೊಂಟಳು.
ಹೀಂಗ ಇಡಿ ಅಕಿ ತವರಮನಿನ ಅಕಿದ ‘ಡೇಟ್’ ಮುಂದ ಹಾಕಸ್ಲಿಕ್ಕೆ ಗುದ್ದಾಡಲಿಕತ್ತ. ಇಷ್ಟ ಇಕಿ ನಮ್ಮ ಮನಿ ಕಡೆ ಫಂಕ್ಶನ್ ಇದ್ದಾಗ ಒಮ್ಮಿನೂ ತಲಿ ಕೆಡಿಸಿಗೊಂಡಿದ್ದಿಲ್ಲಾ. ಅಂತೂ ಇಂತೂ ಮದುವಿ ‘ಡೇಟ್’ ಹತ್ತರ ಬಂತು, ಗಡಿಗೆ ನೀರು ಆತು, ದೇವರ ಊಟ ಆತು ,ರುಕ್ಕೋತ ಬಂತು, ಹೂಂ-ಹೂಂ ‘ಡೇಟ್’ ಮಾತ್ರ ಬರಲಿಲ್ಲಾ. ಮುಂದ ಮದುವಿ ಆತು, ಮದುವಿ ಆದವರದ ಪ್ರಸ್ಥ ಆತ, ಸತ್ಯನಾರಯಣನೂ ಮುಗಿತ. ಮದುವಿ ಮಾಡ್ಕೊಂಡವರಗಿಂತಾ ಇಕಿ ಮಾರಿ ಮ್ಯಾಲೇ ಜಾಸ್ತಿ ಕಳೆ ಇತ್ತ. ಈಕಿದ ‘ಡೇಟ್’ ಒಂಥರಾ ಕೋರ್ಟನಾಗಿನ ಮುದ್ದತ ಮುಂದ ಹೋದಂಗ ಹೊಂಡತು. ಮುರ- ನಾಲ್ಕ ಮಂದಿ ಮಾತ ಕೇಳಿ ಎಲ್ಲಾರ ಸಲಹೆನೂ ಪಾಲಿಸಿದ್ದಳು, ಬಹುಶಃ ಎಲ್ಲಾರದೂ ರಿಸಲ್ಟ ಕೂಟ್ಟಿತ್ತ ಕಾಣಸ್ತದ, ಮದುವಿ ಮುಗದ ೧೦-೧೨ ದಿವಸಾ ಆದರೂ ಇಕಿ ‘ಡೇಟ್’ದ ಪತ್ತೆ ಇರಲಿಲ್ಲ, ಕಡಿಕೆ ಆ ಹೊಸ್ತಾಗಿ ಮದುವಿ ಆಗಿದ್ದ ಇವರ ಮೌಶಿ ಮಗಳದ್ದ ‘ಡೇಟ್’ ಆತ, ಆದರ ಇಕಿದ ಆಗಲಿಲ್ಲ. ನಾ ಹೇಳಿದೆ ” ಎಲ್ಲಾರೂ ಏನೇನ ಹೇಳ್ಯಾರ ಎಲ್ಲಾ ನೆನಪ ಇಟಗೋ, ಇನ್ನ ಮುಂದ ನಮ್ಮ ಪೈಕಿ ಯಾರದರ ಫಂಕ್ಶನ್ ಇದ್ದಾಗ ಉಪಯೋಗ ಆಗ್ತದ” ಅಂದೇ .
ಮುಂದ ೧೦-೧೫ ದಿವಸದಾಗ ನಾ ಇಕಿ ‘ಡೇಟ್ ಪುರಾಣ’ ಮರತ ಬಿಟ್ಟೆ ಆದರ ಅಕಿ ಮರಿಲಿಲ್ಲ , ಅಕಿಗೆ ಏನೋ ಒಂದ ತರಹ ಹೊಟ್ಯಾಗ ಗುಳು-ಗುಳು ಶುರು ಆತ. ಅವರಿವರ ಮಾತ ಕೇಳಿ ಸುಟ್ಟು ಸುಡಗಾಡ ತಿಂದ ‘ಡೇಟ್’ ಮುಂದ ಹಾಕ್ಕೊಂಡಿದ್ದಳು. ಪಿತ್ತ ಆಗಿ ತಲಿತಿರಗಿದಂಗ, ವಾಂತಿ ಬರೋಹಂಗ ಆಗಲಿಕ್ಕ ಹತ್ತು. ಒಂದ್ಯಾರಡ ಸಲಾ ವಾಂತಿನೂ ಮಾಡ್ಕೊಂಡಳು, ನಾ ಅಂದೆ ” ಯಾಕೋ ವಾಂತಿ ವಾತಾವರಣ ನೋಡಿದ್ರ ಪಿತ್ತದ್ದ ಅನಸಂಗಿಲ್ಲಾ , ಒಂದ ಸರತೆ ಯಾವದರ ಡಾಕ್ಟರ್ ಗೆ ತೋರಿಸ್ಕೊಂಡ ಬಾ, ಒಂದ ಹೋಗಿ ಇನ್ನೊಂದ ಆಗಬಾರದು ” ಅಂದೆ.
” ಯೇ, ಹೋಗರೀ ಸುಮ್ಮನ ಹೆದರಸ ಬ್ಯಾಡರಿ, ನಾ ತೊಗಂಡಿದ್ದ ಎಲ್ಲಾ ಔಷಧ ಮೈಗೆ ಹತ್ತಿರ ಬೇಕ ಹಿಂಗಾಗಿ ಪಿತ್ತ-ಗಿತ್ತ ಆಗಿರಬೇಕು “ಅಂದ್ಲು,
ಆದ್ರ ಅದ ಹಂಗ ಆಗಿದ್ದಿಲ್ಲಾ ,ಅಕಿಗೆ ಖರೇ ಹೇಳ್ಬೇಕಂದ್ರ ಅವರ ಬಳಗದವರ ಯಾರ ಹೇಳಿದ್ದ ಔಷಧಾನೂ ಮೈಗೆ ಹತ್ತಿದ್ದಿಲ್ಲ. ಅಕಿಗೆ ಮೈಗೇ ಹತ್ತಿದ್ದ ಬ್ಯಾರೇ. ಕಡಿಕೆ ಲೇಡಿ ಡಾಕ್ಟರಗೆ ತೋರಿಸ್ದಾಗ ಅವರ ನನ್ನ ಮಾರಿನೋಡಿ ನಕ್ಕ ” ಕಾಂಗ್ರ್ಯಾಟ್ಸರೀ, ಅಂತೂ ಮಗಳ ತಯಾರಿ ಮಾಡಿದಿರಲಾ” ಅಂದ್ರೂ. ನಾ ಅವರಿಗೆ ಥ್ಯಾಂಕ್ಸ್ ಹೇಳಿ ಸ್ಕ್ಯಾನಿಂಗ್ ಗೆ ಯಾವಾಗ ಕರಕೋಂಡ ಬರಲೀ ಅಂತ ಕೇಳ್ಕೋಂಡ ಮನಿಗೆ ಬಂದೆ.
ನನಗ ಇವತ್ತೂ ನನ್ನ ಮಗಳ ‘ಪ್ರಶಸ್ತಿ’ಮಾರಿ ನೋಡಿದಾಗೊಮ್ಮೆ ನನ್ನ ಹೆಂಡತಿ ‘ಡೇಟ್’ಮುಂದ ಹಾಕಸಲಿಕ್ಕೆ ನುಂಗಿದ್ದ ಲಿಂಬೆ ಹಣ್ಣಿನ ಬೀಜಾ, ತೇಯದ ನೆಕ್ಕಿದ್ದ ಗೋಪಿ ಚಂದನ , ಹುಗದಿಟ್ಟಿದ್ದ ಅಡಕಿ ಬೆಟ್ಟಾ, ಕಿರಬಳ್ಳಿಗೆ ಕಟಗೊಂಡಿದ್ದ ಕರೆ ಧಾರಾ ಎಲ್ಲಾ ನೆನಪಾಗ್ತಾವ. ಅಲ್ಲಾ ,ಇಕಿ ‘ಡೇಟ್’ ಮುಂದ ಹಾಕೋದರ ಸಂಬಂಧ ಊರ ಮಂದಿನ್ನೇಲ್ಲಾ ಕೇಳಿ ಏನೆಲ್ಲಾ ಮಾಡಿದ್ಲು, ಮನಿ ಗಂಡನ್ನ ಒಂದ ಮಾತ ಕೇಳಲಿಲ್ಲಾ ಅನಸ್ತು. ನಾನರ ಎಷ್ಟ ಶಾಣ್ಯಾ ‘ಡೇಟ್’ಮುಂದ ಹಾಕಸೋದ ನನ್ನ ಕೈಯಾಗ ಇತ್ತು , ಸುಳ್ಳ ಊರಮಂದಿನೆಲ್ಲಾ ಕೇಳಿಸಿದೆ. ಬಹುಶಃ ಅದಕ್ಕ ಅಂತಾರ ‘ಹಿತ್ತಲ ಗಿಡಾ ಮದ್ದಲ್ಲಾ ,ಕಟಗೊಂಡ ಗಂಡಗ ಬುದ್ಧಿ ಇಲ್ಲಾ’ ಅಂತ. ಇರಲಿ ಇನ್ನೋಮ್ಮೆ ಏನರ ಅಕಿ ನಮ್ಮ ಪೈಕಿ ಯಾರದರ ಫಂಕ್ಶನ್ ಇದ್ದಾಗ “ನಂದ ಡೇಟ್ ಅದ , ನಾ ಬರೋದ ಡೌಟ ” ಅಂತ ಅನ್ನಲಿ, ಅದನ್ನ ಹೆಂಗ ಮುಂದ ಹಾಕಸಬೇಕ ಅಂತ ಗೊತ್ತಾತಲಾ ಈಗ ಅನಸ್ತು. ಆದರ ಹಂಗ ನಾ ಇಕಿ ‘ಡೇಟ್’ ಮುಂದ ಹಾಕಸಲಿಕ್ಕ ಹಡಕೊತ್ತ ಹೊಂಟರ ಮುಂದ ಮಕ್ಕಳನ್ನ ಸಾಕೋರ ಯಾರರಿಪಾ, ನಾನ ಅಲಾ. ಸುಮ್ಮನ ಅಕಿ ಏನರ ಸುಟ್ಟು-ಸುಡಗಾಡ ತಿಂದ, ಇಲ್ಲಾ ಅಡಕಿ ಬೆಟ್ಟಾ ಎಲ್ಲರ ನೆಟ್ಟ ಮುದ್ದತ ಮುಂದ ಹಾಕೊಳ್ಳಿ ಬಿಡರಿ, ನನಗ್ಯಾಕ ಅಕಿ ಉಸಾಬರಿ.

 

This entry was posted on Friday, June 15th, 2012 at 10:46 am and is filed under ಕುಟ್ಟವಲಕ್ಕಿ. You can follow any responses to this entry through the RSS 2.0 feed. You can leave a response, or trackback from your own site.

5 Comments

 1. Anand says:

  😀 . Awesome

  ... on July November 10th, 2013
 2. Raghu says:

  Superb…

  ... on July November 14th, 2013
 3. chandru says:

  What a Writing …. Sir Enjoyed.

  ... on July July 7th, 2014
 4. Satyabodha Raichur says:

  I must say you have a good sense of humour Mr Prashant.

  ... on July July 22nd, 2016
 5. Name says:

  ಫಂಕ್ಶನ್ ಅಲ್ರೀಽ, ಫಂಕ್ಪನ್. ಫಙ್ ಕ್ಷನ್ – ಸಮಾತ್ ನ್ಯಾಗ್ ಉಚ್ಚಾರ ಮಾಡ್ ಬೇಕ್ ಅಂದ್ರ.

  ... on July July 23rd, 2016

Post a Comment