ಮಾಮಾನ ಯಾಕ ? ಕಾಕಾ ಯಾಕ ಅಲ್ಲಾ??

ಹೋದ ವಾರ ದೀಪಾವಳಿ ಫರಾಳಕ್ಕ ನಮ್ಮ ಗೆಳ್ಯಾ ತಮ್ಮ ಮನಿಗೆ ಕರದಿದ್ದಾ , ಈ ಗೆಳ್ಯಾಗ ಹೆಸರ ಅದ, ಆದರ ಈ ಸರತೆ ಯಾಕೋ ಹೆಸರ ಬರೆಯೋದ ಅಷ್ಟ ಸರಿ ಅನಸವಲ್ತು , ಯಾಕ ಅನ್ನೋದ ನಿಮಗೂ ಆಮೇಲೆ ಲೇಖನಾ ಒದತಾ ಗೊತ್ತಾಗ್ತದ. ಸರಿ, ಫರಾಳಕ್ಕ ಅವನ ಮನಿಗೆ ಒಬ್ಬನ ಹೋದೆ, ಅವನ ಮನಿಗೆ ಹೋಗಲಾರದನೂ ಭಾಳ ವರ್ಷ ಆಗಿತ್ತ , ಅವಂಗ ಈಗ ಒಂದ ಮೂರ ವರ್ಷದ ಮಗಳ ಬ್ಯಾರೆ ಇದ್ದಾಳಂತ ಒಂದ ಹತ್ತ ರೂಪಾಯಿದ ಕ್ಯಾಡಬರಿ ಚಾಕಲೇಟ ತೊಗೊಂಡ ಹೋದೆ. ಮನ್ಯಾಗ ಗಂಡಾ-ಹೆಂಡತಿ ಇಬ್ಬರೂ ಇದ್ದರು. ಮುಂದ ಒಂದ ಹತ್ತ ನಿಮಿಷಕ್ಕ ಅವರ ಮುದ್ದಿನ ಮಗಳು ಹೊರಗ ಆಟ ಆಡಲಿಕ್ಕ ಹೋಗಿದ್ದ ಓಡಿ ಒಳಗ ಬಂತು. ಅದನ್ನ ನೋಡಿದ್ದ ಅವರಪ್ಪ ಅಂದರ ನನ್ನ ಗೆಳ್ಯಾ ” ಅಲ್ಲೆ ನೋಡಲ್ಲೆ, ಯಾರ ಬಂದಾರ , ಪ್ರಶಾಂತ ಮಾಮಾ ಬಂದಾರ ” ಅಂತ ನನ್ನ ಮಗಳಿಗೆ ಪರಿಚಯ ಮಾಡಿಸಿದಾ. ನಾನು ” ಬಾ ಪುಟ್ಟಿ, ಚಾಕಲೇಟ ಕೊಡತೇನಿ ” ಅಂತ ಕರದ ಹುಡಗಿಗೆ ಚಾಕಲೇಟ ಕೊಟ್ಟೆ, ಪಾಪಾ ಕೂಸು ಮೊದಲೆ ಸಲಾ ನನ್ನ ನೋಡಿದ್ದ, ಸ್ವಲ್ಪ ನಾಚಗೊಂಡತು. “ಮಾಮಾ ಚಾಕಲೇಟ ಕೊಟ್ಟರೂ ? ಮಾಮಾಗ ಥ್ಯಾಂಕ್ಸ ಹೇಳು” ಅಂತ ಅವರಪ್ಪ ಅಂದಾ. ಅವರವ್ವ ಚಾಕಲೇಟ ತೊಗೊಂಡ ಒಳಗ ಫ್ರಿಡ್ಜನಾಗ ಇಟ್ಟ ಬಂದಳು. ನಾ ಅವರ ಮನ್ಯಾಗ ಒಂದ ಸ್ವಲ್ಪ ಫರಾಳ , ಒಂದ ಇಷ್ಟ ಹಾಳ ಹರಟೆ ಹೊಡದ ನಮ್ಮ ಮನಿ ದಾರಿ ಹಿಡದೆ.
ಹಿಂಗ ಮನಿಗೆ ಬರತ ಎನೇನೋ ವಿಚಾರ ಮಾಡತಾ-ಮಾಡತಾ ಸಡನ್ ಆಗಿ ನಮ್ಮ ದೋಸ್ತ “ಅಲ್ಲೇ ನೋಡಲ್ಲೆ, ಯಾರ ಬಂದಾರ ,ಪ್ರಶಾಂತ ಮಾಮಾ ಬಂದಾರ ” ಅಂತ ಅಂದದ್ದ ತಲ್ಯಾಗ ಬಂತು. ಅಲ್ಲಾ ಅಂವಾ ನನಗ ತನ್ನ ಮಗಳ ಕಡೆಯಿಂದ ಮಾಮಾನ ಅಂತ ಯಾಕ ಅನಿಸಿಸಿದಾ? ಕಾಕಾ ಅಂತನೂ ಅನಸಬಹುದಿತ್ತಲಾ ಅಂತ ವಿಚಾರ ಮಾಡಲಿಕತ್ತೆ. ಆ ಹುಡಗಿಗೆ ಮಾಮಾ ಅಂದರ ನಾ ಅವನ ಹೆಂಡತಿಗೆ ಅಣ್ಣ ಆದಂಗ, ಅದರಾಗ ನಂಗೇನ ಅಭ್ಯಂತರ ಇಲ್ಲಾ ಆ ಮಾತ ಬ್ಯಾರೆ ಆದರೂ ಮಾತ ಹೇಳತೇನಿ, ನಾ ‘ಮಾಮಾನ ಯಾಕ ಆಗಬೇಕು? ಕಾಕಾ ಯಾಕ ಆಗಬಾರದು’ ?ಯಾಕ ‘ಕಾಕಾ’ ಅಂದರ ಕೆಟ್ಟ, ‘ಮಾಮಾ’ ಅಂದರ ಇಷ್ಟ ಛೋಲೊ ಇನ ? ‘ಕಾಕಾ’ ಅಂತ ಆ ಹುಡಗಿ ಕಡೆ ಕರಿಸಿ ಅಂವಾ ನನ್ನ ತಮ್ಮ ಆಗಬಹುದಿತ್ತಲಾ? ಯಾಕ ಜಬರದಸ್ತಿ ನನಗ ಅಂವಾ ಅವನ ಹೆಂಡತಿಗೆ ಅಣ್ಣನ ಮಾಡಿದಾ?
ನಾ ಏನ ಸಲ್ಮಾನಖಾನ್? ನನ್ನ ನೋಡಿ ಅವನ ಹೆಂಡತಿ ಎಲ್ಲರ ಫಿದಾ ಆದರದ ಅನ್ನಲಿಕ್ಕೆ ? ಇಲ್ಲಾ, ನಾ ಏನ ಇಮ್ರಾನ್ ಹಶ್ಮಿನಾ, ಮತ್ತೊಬ್ಬರ ಹೆಂಡತಿಗೆ ಲೈನ್ ಹೊಡದ ಪಟಾಯಿಸಲಿಕ್ಕೆ ? ಅಥವಾ ಅಂವಾ ತನ್ನ ಹೆಂಡತಿ ಐಶ್ವರ್ಯಾರಾಯ ಅಂತ ತಿಳ್ಕೋಂಡಾನಿನ ಮತ್ತ, ಮನಿಗೆ ಬಂದೋರೆಲ್ಲಾ ಎಲ್ಲರ ಅಕಿಗೆ ಲೈನ್ ಹೊಡಿತಾರ ಅನ್ನಲಿಕ್ಕೆ? ಅದ ಏನೋ ಅಂತಾರಲಾ ‘ಹೆತ್ತವರಿಗೆ ಹೆಗ್ಗಣ ಮುದ್ದ’ ಅಂತ, ಹಂಗ ನಾವ ಸುಡಗಾಡ ಹೆಂಗ ಇದ್ದರು ನಮ್ಮ- ನಮ್ಮ ಕಟಗೊಂಡಿದ್ದ ಹೆಂಡತಿ ನಮಗ ಐಶ್ವರ್ಯಾರಯನ ಆ ಮಾತ ಬ್ಯಾರೆ. ಆದ್ರ ನಾ ಯಾಕ ಮನ್ಯಾಗಿನ ನಿರೂಪ ರಾಯ್ ಬಿಟ್ಟ ಇವನ ಐಶ್ವರ್ಯಾರಾಯಗ ಬೆನ್ನ ಹತ್ತಲಿ. ಛಂದಾಗಿ ನನ್ನ ಹೆಂಡತಿಗೆ ಲೈನ್ ಹೊಡದ ಪಟಾಯಿಸಲಿಕ್ಕೆ ನಂಗ ಲಗ್ನಾದ ಮ್ಯಾಲೆ ಹತ್ತ ವರ್ಷ ಹಿಡದದ, ಇನ್ನ ಅವನ ಹೆಂಡತಿಗೆ ನಾ ಯಾಕ ಲೈನ ಹೊಡಿಲಿರಿ.
ಅಲ್ಲಾ, ಇದ ದೋಸ್ತ ಕಾಲೇಜನಾಗ ಇದ್ದಾಗ ಅವರ ತಂಗಿ ಕಡೆ ರಾಖಿ ಕಟ್ಟಿಸಿದಾ, ನಾನು ಸಣ್ಣವ ಇದ್ದೆ ಅಷ್ಟ ತಿಳಿತಿದ್ದಿಲ್ಲಾ, ಹೋಗಲಿ ಬಿಡ ನಮ್ಮ ದೊಸ್ತನ ತಂಗಿ, ಸಣ್ಣ ಹುಡಗಿ ಅಂತ ಸುಮ್ಮನ ಬಾಯಿಮುಚಗೊಂಡ ರಾಖಿ ಕಟ್ಟಿಸಿಕೊಂಡೆ. ಮಗಾ ಈಗ ಹೆಂಡತಿ ಕಡೆಯಿಂದನೂ ರಾಖಿ ಕಟ್ಟಸೋ ವಿಚಾರದಾಗ ಇದ್ದಾನ. ಇನ್ನೊಂದ ೧೫ ವರ್ಷ ಬಿಟ್ಟ ಮಗಳ ವಯಸ್ಸಿಗೆ ಬಂದ ಮ್ಯಾಲೆ ಅಕಿ ಕಡೆಯಿಂದನೂ ನನಗ ರಾಖಿ ಕಟ್ಟಿಸಿದರು ಕಟ್ಟಿಸಿದನ. ಇಂವಾ ಏನ ರಾಖಿ-ರೊಕ್ಕದ ಸಲುವಾಗಿ ಹಿಂಗ ಮಾಡತಾನೋ , ಇಲ್ಲಾ ಇವಂಗ ಖರೇನ ನನ್ನ ಮ್ಯಾಲೆ ವಿಶ್ವಾಸ ಇಲ್ಲೋ ಅಥವಾ ಇವಂಗ ತಮ್ಮ ಮನಿ ಹೆಣ್ಣ ಮಕ್ಕಳ ಮ್ಯಾಲೇ ವಿಶ್ವಾಸ ಇಲ್ಲೋ ಆ ದೇವರಿಗೆ ಗೊತ್ತ.
ಇದ ಅವಂದ ಒಬ್ಬಂದ ವಿಷಯಲ್ಲಾ ನಾ ಭಾಳ ಮಂದಿ ನೋಡೇನಿ ( ಅದರಾಗ ನೀವು ಬಂದ್ರಿ), ತಮ್ಮ ದೋಸ್ತರನ್ ಮಕ್ಕಳಿಗೆ ಪರಿಚಯ ಮಾಡಬೇಕಾರ ಮೊಸ್ಟಲೀ ಮಾಮಾನ ಅಂತ ಪರಿಚಯ ಮಾಡತಾರ. ಅಲ್ಲಾ ನಾವು ಭಾಳ ಸುಸಂಸ್ಕೃತರು, ಸಂಭಾವಿತರು, ಒಬ್ಬರಿಗೆ ಒಬ್ಬರ ಸಂಬಂಧಿಕರಗತೆ ತಿಳ್ಕೋತೇವಿ, ಅದೆಲ್ಲಾ ಖರೇ , ಆದ್ರ ಸಂಬಂಧದಾಗ ನಾ ‘ಮಾಮಾನ ಯಾಕ ? ಕಾಕಾ ಯಾಕ ಅಲ್ಲಾ? ’
ನಮ್ಮ ಹಿಂದು ಸಂಸ್ಕ್ರತಿ ಒಳಗ ನಾವು ‘ನಮ್ಮ ಹೆಂಡತಿ ಒಬ್ಬಾಕಿನ ಬಿಟ್ಟರ ಉಳದ ಎಲ್ಲಾ ಹೆಣ್ಣ ಮಕ್ಕಳನ್ನ ತಾಯಿ ಸ್ಥಾನದಾಗ ನೋಡತೇವಿ’ ಅಂತ ಗೊತ್ತಿದ್ದ ಮ್ಯಾಲೂ ‘ಮಾಮಾನ ಯಾಕ, ಕಾಕಾ ಯಾಕ ಅಲ್ಲಾ?’ ಇತ್ತಿಚಿಗಂತೂ ನಾವು ಬ್ಯಾರೆಯವರ ಹೆಂಡತಿ ದೂರ ಉಳಿತು, ನಮ್ಮ ಹೆಂಡತಿನ್ನ ನಾವ ‘ಹೆಂಡತಿ ಅನ್ನೊ ದೃಷ್ಟಿ’ ಯಿಂದ ನೋಡೊದ ವಾರಕ್ಕೊಮ್ಮೆ ಇಲ್ಲಾ ಎರಡ ಸಲ, ಬಾಕಿ ಟೈಮ್ ನಾಗ ಹೆಂಡತಿ ಅನ್ನೋಕಿ ನಮಗ ಕೆಲವಮ್ಮೆ ಭಾಂಡಿ ತಿಕ್ಕೊ ಬೂಬೂನ ಪಾತ್ರದಾಗ, ಕಾರ್ಪೋರೇಶನ ರಸ್ತೆದಾಗ ಕಸಾ ಹುಡುಗೊ ಕಮಲವ್ವನ ಅವತಾರದಾಗ ಒಮ್ಮೋಮ್ಮೆಂತೂ ತ್ರೇತಾ ಯುಗದ ಕೈಕಯಿ, ಮಂಥರೆ ಮತ್ತೋಮ್ಮೆ ದ್ವಾಪರ ಯುಗದ ಹಿಡಿಂಬಾ, ಪೂತನಿ ರೂಪದಾಗ ಗೊಚರಿಸತಾಳ. ಹಿಂತಾದರಾಗ ನಮಗ ನಮ್ಮ ಹೆಂಡತಿ ಜೊತಿ ಸಂಬಂಧ ಬೆಳಸೋದ ರಗಡ ಅಗೇದ, ಇನ್ನ ನಾವು ಇವನ ಹೆಂಡತಿ ತೊಗಂಡ ಏನ ಮಾಡಬೇಕು?
ಒಂದ ಕಾಲದಾಗ ನಾವ ದೋಸ್ತರೇಲ್ಲಾ ಸಾಮೂಹಿಕವಾಗಿ ಕಾಲೇಜನಾಗ ಹುಡಿಗ್ಯಾರಿಗೆ ಲೈನ ಹೊಡಿತಿದ್ದವಿ, ತಲ್ಯಾಗ ತಿಳಿದದ್ದ ಕಮೆಂಟ ಮಾಡತಿದ್ದವಿ, ಮನಸ್ಸಿನ ಭಾವನೆಗಳನ್ನ ಖುಲ್ಲಂ-ಖುಲ್ಲಾ ಬಾಯಿಗೆ ಬಂದಂಗ ಬೊಗಳತಿದ್ದವಿ, ಆವಾಗ ಇನ್ನೂ ಯಾರದು ಲಗ್ನದ ವಯಸ್ಸ ಆಗಿದ್ದಿಲ್ಲಾ , ಹುಡಗ ಬುದ್ಧಿ , ಹುಡಗ್ಯಾರ ಹಿಂದ ಬೀಳ್ತಿತ್ತು. ಅದರಾಗ ನಾ ಸ್ವಲ್ಪ ಶಾಣ್ಯಾ ಬ್ಯಾರೆ, ಭಾರಿ ಕ್ರಿಯೇಟಿವ್ ಆಗಿ ಹುಡಗ್ಯಾರ ಮ್ಯಾಲೆ ಕೆಟ್ಟ – ಕೆಟ್ಟ ಕಮೆಂಟ ಕ್ರೀಯೆಟ್ ಮಾಡತಿದ್ದೆ. ಈ ಮಗಾ ಬಹುಶಾಃ ಅದನ್ನೆಲ್ಲಾ ಇನ್ನೂ ನೆನಪ ಇಟಗೊಂಡ ಏನೇನರ ಕಲ್ಪನೆ ಮಾಡ್ಕೊಳ್ಳಿಕತ್ತಾನೋ ಏನೋ ? ಹಿಂಗಾಗಿ ಅವಂಗ ನನ್ನ ಮ್ಯಾಲೆ ಇವತ್ತ ಏನರ ಡೌಟ ಇದ್ದರು ಇರಬಹುದು, ಯಾರಿಗೊತ್ತ ?
ಆ ವಯಸ್ಸ ಹಂಗ ಇತ್ತ, ಕಾಲೇಜನಾಗ ‘ಬರೆ ಹಲ್ಲ ಉಬ್ಬ ಇದ್ದೋಕಿ’ ಅಕಿನಾಗಿ ಬಂದ ನಮಗ ಯಾರಿಗರ ಮಾತಡಿಸಿದರ ಸಾಕು, ನಾಲ್ಕ ಚಹಾದಾಗ ಎಂಟ ಮಂದಿಗೆ ಕುಡಿಸಿ ಪಾರ್ಟಿ ಮಾಡತಿದ್ದವಿ. ಒಂದ ವಾರ ತನಕಾ ಮನಸಿನಾಗ ಮಂಡಗಿ ತಿಂತಿದ್ದಿವಿ. ಮುಂದ ಇನ್ನೋಬ್ಬಾಕಿ ಬಂದ ನಮ್ಮನ್ನ ನೋಡಿ ಹಲ್ಲ ಕಿಸಿಯೋ ತನಕಾ ಆ ‘ಕಾಲ್ಗೇಟ್’ ಹುಡಗಿದ ಕನಸ ಕಾಣತಿದ್ದವಿ. ಒಂದ ಮಾತನಾಗ ಹೇಳ್ಬೆಕಂದರ ಹುಡಗ್ಯಾರನ ಕಂಡರ ‘ಕಂಡೇನೋ ಇಲ್ಲೋ ಅನ್ನೋರಂಗ’ ಮಾಡತಿದ್ದವಿ. ಒಂದಿಷ್ಟ ಮಂದಿ ಇವತ್ತು ಹಂಗ ಮಾಡತಾರ ಆ ಮಾತ ಬ್ಯಾರೆ.
ಮುಂದ ನಾವೆಲ್ಲಾ ದೋಸ್ತರ ಕನ್ಯಾ ನೋಡಲಿಕ್ಕ ಶುರು ಮಾಡಿದಾಗ ನಮ್ಮ – ನಮ್ಮ ಕನ್ಯಾ ಹೆಂಗಿರ ಬೇಕು ಅಂತಾ ಚರ್ಚಾ ಮಾಡತಿದ್ದಿವಿ, ನಾ ಕನ್ಯಾ ಮುಂದಿನಿಂದ ಹೆಂಗ ಕಾಣಬೇಕು , ಹಿಂದಿನಿಂದ ಹೆಂಗ ಕಾಣಬೇಕು ಅಂತೇಲ್ಲಾ ಕ್ರಿಯೇಟಿವ್ ಆಗಿ ಸೈಡನಿಂದ ಹೇಳ್ತಿದ್ದೆ. ಬಹುಶಃ ಅದು ಅವಂಗ ಇವತ್ತ ನೆನಪ ಆದರು ಆಗ್ತಿರಬಹುದು. ನನ್ನ ಆ ಕ್ರಿಯೇಟಿವಿಟಿ ನನ್ನ ಲಗ್ನ ಆದ ಮ್ಯಾಲೆ ಇನ್ನೂ ಜೀವಂತ ಅದ ಅಂತ ಅಂವಾ ತಿಳ್ಕೋಂಡರು ತಿಳ್ಕೋಂಡಿರಬಹುದು. ನಮ್ಮಪ್ಪ ಯಾವಾಗಲೂ ಒಂದ ಮಾತ ಹೇಳ್ತಾನ ” ಮನಿ ಹೆಂಡತಿ ಕಾಡ ಇರಬೇಕು, ಗೆಳ್ಯಾನ ಹೆಂಡತಿ ಛಂದ ಇರಬೇಕು” ಅಂತ. ಆ ಮಾತ ನೆನಿಸಿಕೊಂಡ ಇಂವಾ ಏನರ ನನಗ ಜಬರದಸ್ತಿ ತನ್ನ ಮಗಳಿಗೆ ಮಾಮಾ ಮಾಡಸಲಿಕತ್ತಾನೋ ಏನೊ? ಅಲ್ಲಾ, ಆದರ ನನ್ನ ಹೆಂಡತಿ ಏನ ಅಷ್ಟ ಕಾಡ ಇಲ್ಲ ಬಿಡರಿ. ಒಮ್ಮೆ ನೋಡಿದವರ ಇನ್ನೊಮ್ಮೆ ತಿರುಗಿ ನೋಡೊ ಹಂಗ ಇದ್ದಾಳ. ಹಂಗ ಏನರ ಯಾರರ ಎರಡೆರಡ – ಮೂರ ಮೂರ ಸಲಾ ಅಕಿನ್ನ ತಿರುಗಿ-ತಿರುಗಿ ನೋಡಿದ್ರ ನಾನು ಒಮ್ಮೆ ತಿರುಗಿ ನೋಡತೇನಿ ‘ಹಂತಾದ ಏನ ಅದ ಅಂತ ಇಕಿನ್ನ ಮಂದಿ ತಿರುಗಿ-ತಿರುಗಿ ನೋಡಲಿಕ್ಕತ್ತಾರ’ ಅಂತ ತಿಳ್ಕೋಳ್ಳಿಕ್ಕೆ. ಒಂದ ಟೈಮ್ ಇತ್ತ ಅವಾಗ ನಮಗ ನಮ್ಮ ಹೆಂಡತಿ ನಾಲ್ಕ ಮಂದಿ ನೋಡೊ ಹಂಗ ಇರಬೇಕು, ನೋಡಿ ಸಂಕಟಾ ಪಡೋ ಹಂಗ ಇರಬೇಕು ಅಂತ ಅನಸ್ತಿತ್ತು, ಅದು ಮದುವಿ ಆಗೋಕ್ಕಿಂತ ಮೂದಲ ಮತ್ತ ಮದುವಿ ಆದ ಹೊಸ್ತಾಗಿಂದ ಮಾತ. ಆಮೇಲೆ ಬರಬರತ ಯಾರರ ನಮ್ಮ ಹೆಂಡತಿ ಮ್ಯಾಲೆ ಕಣ್ಣ ಹಾಕಿದರ ನಮಗ ಸಂಕಟ ಆಗಲಿಕತ್ತ, ನಮಗಿಷ್ಟ ನಮ್ಮ ಹೆಂಡತಿ ಛಂದ ಕಾಣಬೇಕ ಅಂತ ಅನಸ್ಲಿಕತ್ತ. ಈಗ ಯಾರರ ನಮ್ಮ ಹೆಂಡತಿ ಮ್ಯಾಲೆ ದೃಷ್ಟಿ ಬಿಟ್ಟರ ನಮಗ ಆಶ್ಚರ್ಯ ಆಗತದ ‘ಎರಡ ಮಕ್ಕಳಾದರೂ ನನ್ನ ಹೆಂಡತಿ ಕಡೆ ಜನಾ ನೋಡ್ತಾರಲಾ ಅಂತ ನಾವು ಮತ್ತೊಮ್ಮೆ ತಿರುಗಿ ಖರೇನ ಛಂಧ ಕಾಣಸಲಿಕತ್ತಾಳ ಏನ ಇವತ್ತ’ ಅಂತ ನೋಡೊ ಹಂಗ ಆಗೇದ.
ಹಿಂತಾದರಾಗ ನಮಗ ಯಾಕ ಬೇಕರಿ ಮತ್ತೊಬ್ಬರ ಹೆಂಡತಿ ಉಸಾಬರಿ. ಹಂಗೇನರ ಉಸಾಬರಿ ಮಾಡಿದೆ ಅಂತ ಅನ್ಕೋಳ್ರಿ, ಮನಿ ಹೆಂಡತಿ ಕಸಬರಿಗೆ ತೊಗೊತಾಳ ಇಲ್ಲೋ? ಇಷ್ಟ ಎಲ್ಲಾ ಗೊತ್ತಿದ್ರೂ ನನಗ ಮಕ್ಕಳ ಕಡೆಯಿಂದ ‘ಮಾಮಾ’ ಅನಸ್ತಾರಲಾ ಅದ ನನಗ ಭಾಳ ಕೆಟ್ಟ ಅನಸ್ತದ, ಹೋಗಲಿ ಅಂಕಲ್ ಅನಸಲಿ ನಡಿತದ, ಅಂಕಲ್ ಅಂದ್ರ ನಾ ಬ್ಯಾರೇ ತಿಳ್ಕೋತೀನಿ , ಅಂವಾ ಒಂದ ತಿಳ್ಕೊಂಡಿರತಾನ , ಅವನ ಹೆಂಡತಿ ಒಂದ ತಿಳ್ಕೊಂಡಿರತಾಳ, ಪಾಪಾ ಆ ಮಕ್ಕಳಿಗೆ ಏನು ತಿಳದಿರಂಗಿಲ್ಲಾ ಆ ಮಾತಬ್ಯಾರೆ. ಇಲ್ಲಾ ಒಗಟ ಹಚ್ಚಿ ( ಹೆಣ್ಣ ಮಕ್ಕಳ ಇಷ್ಟ ಮತ್ತ ) ಹೆಸರ ಹಿಡದ ‘ಪರಶ್ಯಾ’ ಅಂತ ಹೇಳಸಲಿ, ನಾ ಏನ ತಪ್ಪ ತಿಳ್ಕೋಳಂಗಿಲ್ಲಾ. ಆದರ ಯಾಕೋ ಮಾಮಾ ಬ್ಯಾಡಾ ಅನಸ್ತದ.
ಈ ಲೇಖನಾ ನೋಡಿ ಒಂದ ಹತ್ತ – ಹದಿನೈದ ಮಂದಿ ದೋಸ್ತರು ಅಂದರ ಯಾರ ತಮ್ಮ-ತಮ್ಮ ಮಕ್ಕಳ ಕಡೆಯಿಂದ ಇಷ್ಟ ದಿವಸ ನನಗ ‘ಮಾಮಾ’ ಅನಿಸ್ಯಾರ, ಅವರು ಈ ಕಥಿ ‘ನಾ ಅವರ ಮ್ಯಾಲೆ ಬರದೇನಿ’ ಅಂತ ತಿಳ್ಕೋಂಡ ನನಗ ಫೋನ ಮಾಡಿ ಎಣ್ಣಿ ಹಚ್ಚಿ ಹೋಯ್ಕೋಳಿಲ್ಲಾ ಅಂದರ ಹೇಳ್ರಿ ಮತ್ತ. ಅದಕ ನಾ ಆ ದೋಸ್ತ ಯಾರು ಅಂತ ಹೆಸರು ಬರಿಲಿಕ್ಕೆ ಹೋಗಲಿಲ್ಲಾ, ಈಗ ನೋಡ್ರಿ ಎಲ್ಲಾರು ಇದ ತಮ್ಮ ಬಗ್ಗೆ ಅಂತ ತಿಳ್ಕೋಂಡಿರತಾರ. ಇಷ್ಟ ತಿಳಿಸಿ ಹೇಳಿದ ಮ್ಯಾಲೂ ಅವರೇನ ತಮ್ಮ ಮಕ್ಕಳ ಕಡೆಯಿಂದ ನನಗೇನ ಈಗ ‘ ಕಾಕಾ’ ಅನಸಂಗಿಲ್ಲಾ ಆ ಮಾತ ಬ್ಯಾರೆ, ಆದ್ರ ಅವರು ಇನ್ನೋಮ್ಮೆ ಯಾರಿಗರ ತಮ್ಮ ಮಕ್ಕಳ ಕಡೆಯಿಂದ ‘ಮಾಮಾ’ ಅನಸಬೇಕಾರ ಈ ಲೇಖನಾ ನೆನಪ ಮಾಡ್ಕೊಳ್ಳಿಲ್ಲಾ ಅಂದರ ಹೇಳ್ರಿ ನನಗ.
ನೀವು ಅಷ್ಟ ಮತ್ತ, ನಿಮ್ಮ ಮಕ್ಕಳ ಕಡೆಯಿಂದ ಯಾರಿಗರ ‘ಮಾಮಾ’ ಅನಸಬೇಕಾರ ಇನ್ನ ಮುಂದ ಹತ್ತ ಸಲಾ ವಿಚಾರ ಮಾಡೇ ಮಾಡ್ತಿರಿ. ನಾಳೆ ಅಕಸ್ಮಾತ ನೀವೆಲ್ಲರ ನಿಮ್ಮ ಸ್ವಂತ ಸಂಸಾರದ ಜೊತಿ ನನಗ ಭೆಟ್ಟಿ ಆದರ, ನಿಮ್ಮ ಮಕ್ಕಳ ಬಾಯಿಲೆ ನನಗ ಏನಂತ ಕರಸತಿರಿ ಅಂತ ನೀವ ವಿಚಾರ ಮಾಡ್ರಿ. ನಾ ಹೇಳೋ ಅಷ್ಟ ಹೇಳೇನಿ, ಮುಂದಿಂದ ನಿಮಗ ಬಿಟ್ಟಿದ್ದ. ಆದ್ರ ನನ್ನ ಮ್ಯಾಲೇ ಸಂಶಯ ಪಟ್ಟ ಮಾತಾಡಸೋದ ಬಿಡಬ್ಯಾಡರಿ ಇಷ್ಟ.
ಆದ್ರು ಒಂದ ಸಲಾ ವಿಚಾರ ಮಾಡರಿ ‘ಮಾಮಾನ ಯಾಕ ? ಕಾಕಾ ಯಾಕ ಅಲ್ಲಾ?’ ಅಂತ.

This entry was posted on Friday, June 15th, 2012 at 11:02 am and is filed under ಕುಟ್ಟವಲಕ್ಕಿ. You can follow any responses to this entry through the RSS 2.0 feed. You can leave a response, or trackback from your own site.

1 Comment

  1. Name says:

    ಸವಸುದಿ

    ... on July July 13th, 2017

Post a Comment