ಇಂದಿನ ಯುವಕರು ಮತ್ತು ವಿವೇಕಾನಂದ…..

” ನಮ್ಮ ದೇಶದ್ದ ಹಣೇಬರಹ ಇಷ್ಟ, ನಾವೇನ ಉದ್ಧಾರ ಆಗಂಗಿಲ್ಲಾ. ಎಲ್ಲೆ ನೋಡಿದಲ್ಲೆ ಬ್ರಷ್ಟಾಚಾರ, ಅರಾಜಕತೆ, ರಾಜಕೀಯ ಅಸ್ಥಿರತೆ, ಯಾರನ ನಂಬಬೇಕು ಯಾರನ ಬಿಡಬೇಕು ಒಂದು ತಿಳಿಯಂಗಿಲ್ಲಾ, ಎಲ್ಲಾರೂ ಅವರ, ಹಿಂಗಾದರ ನಮ್ಮ ದೇಶ ಡೆವಲಪ್ ಆದಂಗ”
ಇದ ಇವತ್ತ ನಮ್ಮ ಯುವಕರ ಮಾತೋಡ ಮಾತ. ಬ್ಯಾರೆ ದೇಶ ನೋಡೊದು ‘ಆ ದೇಶದಾಗ ಹಂಗ, ಈ ದೇಶದಾಗ ಹಿಂಗ’ ಅಂತ ನಮ್ಮ ದೇಶದ್ದ ಜೊತಿ ಕಂಪೇರ ಮಾಡ್ಕೊಂಡ ಕಡಿಕೆ ‘ನಮ್ಮ ದೇಶ ಏನ ಸುಧಾರಿಸಂಗಿಲ್ಲ ತೊಗೊ’ ಅಂತ ಇದ್ದ ರಾಜಕೀಯ ವ್ಯವಸ್ಥೆ ಮ್ಯಾಲೆ, ಅದರಾಗ ಇರೋ ಬ್ರಷ್ಟಾಚಾರದ ಮ್ಯಾಲೆ ಹಾಕಿ ತಾವು ಕೈಕಟಗೊಂಡ ಕೂತ ಬಿಡೋದು.
ಇವತ್ತ ಈ ದೇಶದಾಗ ಬದಲಾವಣೆ ಮಾಡಬೇಕಾದ ಯುವಕರ ತಾವ ಕೈಚೆಲ್ಲಿ ಕೂತ ‘ಅವರು ಹಂಗ ಮಾಡಿದರು- ಇವರ ಹಿಂಗ ಮಾಡಿದರು ಅಂತ ಮಂದಿ ಮಾಡಿದ್ದನ್ನ್ ಟೀಕಿಸಿಗೋತ ಹೋದರ ನಮ್ಮ ದೇಶ ಏನ ಉದ್ಧಾರ ಆಗ್ತದ? ಯಾವದ ಸರೀ ಇಲ್ಲಾ ಅದನ್ನ ಸರಿ ಮಾಡಬೇಕಾದದ್ದ ಯಾರ ಕೆಲಸ? ನಮ್ಮಂತಾ ಯುವಕರದ ಅಲಾ?
ಅದಕ್ಕ ವಿವೇಕಾನಂದರ ಹೇಳ್ತಿದ್ದರು “ನಾವು ಏನನ್ನು ಮಾಡುವುದಿಲ್ಲ.ಯಾರಾದರೂ ಮಾಡಿದರೆ ಅವರಲ್ಲಿ ತಪ್ಪು ಕಂಡು ಹಿಡಿಯುತ್ತೇವೆ. ಇದು ನಮ್ಮ ಯುವ ಜನಾಂಗದ ಅಶಾಂತಿಗೆ ಕಾರಣ” ಅಂತ. ಅವರ ಹೇಳಿದ್ದ ಇವತ್ತಲ್ಲ, ನೂರಾ ಇಪ್ಪತ್ತ ವರ್ಷದ ಹಿಂದ. ಆದರ ಇವತ್ತೂ ಈ ಮಾತ ನಮ್ಮ ಯುವಕರಿಗೆ ಹೇಳಿದಂಗ ಅದ.
ನಾವ ಒಮ್ಮೆ ಯಾವದೋ ಒಂದ ಪಕ್ಷಕ್ಕ ವೋಟ್ ಕೊಟ್ಟ ನಮ್ಮ ಕೆಲಸ ಮುಗಿತ ಅಂತ ಕೂತರ ದೇಶ ಹೆಂಗ ಮುಂದವರಿಬೇಕು? ನಾವು ಸಮಾಜದಾಗ ಭಾಗವಹಿಸಲಾರದ ‘ನಮಗ್ಯಾಕ ಬೇಕ ಊರ ಉಸಾಬರಿ’ ಅಂತ ಮನ್ಯಾಗ ಕೂತ ಮುಂದ ಸಮಾಜಕ್ಕ, ಸಾಮಾಜಿಕ ವ್ಯವಸ್ಥೆಗೆ ಬೈಕೊತ ಕೂಡೋದು ಎಷ್ಟ ಕರೆಕ್ಟ್?
to change the system, we should be part of the system ಅನ್ನೋದ ಯಾಕ ತಿಳಿವಲ್ತು?
ಇನ್ನೊಂದ ವಿಚಿತ್ರ ಅಂದರ ನಮ್ಮ ದೇಶದಾಗ ವೋಟಿಂಗ ಮಾಡಲಾರದ ದೊಡ್ಡ-ದೊಡ್ಡ ಮಾತಾಡೊ ಯುವಕರ ಜಾಸ್ತಿ ಇದ್ದಾರ. ಈ ಕಲತ ಯುವಕರ ಮೊದ್ಲ ಛಂದಾಗಿ ವೋಟಿಂಗ ಮಾಡಂಗಿಲ್ಲಾ, ಸರ್ಕಾರದಾಗ ಶಾಮೀಲಾಗಲಿಕ್ಕೆ ಇಂಟರೆಸ್ಟ ಇಲ್ಲಾ ಆದರ ದೇಶದ ಬಗ್ಗೆ ಮಾತಾಡೋದ ಬಿಡಂಗಿಲ್ಲಾ.
ಸ್ವಾಮಿ ವಿವೇಕಾನಂದವರು “ನಮ್ಮಲ್ಲಿ ನಾವು ವಿಶ್ವಾಸ ಕಳೆದುಕೊಳ್ಳದಿರುವುದು ಮತ್ತು ನಮ್ಮನ್ನು ನಾವು ದ್ವೇಷಿಸದಿರುವುದೇ ನಮ್ಮ ಮೊದಲ ಕರ್ತವ್ಯ. ಮೊದಲು ನಮ್ಮ ಬಗ್ಗೆ ನಮಗೆ ನಂಬಿಕೆಯಿದ್ದಲ್ಲಿ ಮಾತ್ರ ಭಗವಂತನಲ್ಲಿ ನಂಬಿಕೆಯಿಡಲು ಸಾಧ್ಯ. ತನ್ನನ್ನೇ ನಂಬದವನು ಭಗವಂತನನ್ನು ಹೇಗೆ ತಾನೇ ನಂಬಲು ಸಾಧ್ಯ?” ಅಂತ ಅಂತಿದ್ದರು.
ಇವತ್ತ ನಮಗ ನಮ್ಮ ರಾಜಕೀಯ ವ್ಯವಸ್ಥೆಮ್ಯಾಲೆ ವಿಶ್ವಾಸ ಇಲ್ಲಾ, ನಮ್ಮ ನಾಯಕರ ಮ್ಯಾಲೆ ವಿಶ್ವಾಸ ಇಲ್ಲಾ, ಹೋಗಲಿ ನಾವರ ಜವಾಬ್ದಾರಿ ತೊಗೊಂಡ ನಮ್ಮ ದೇಶ ಸುಧಾರಸ್ತೇವಿ ಅಂತರ ವಿಶ್ವಾಸ ಅದನs, ಅದು ಇಲ್ಲಾ. ಬರೇ ಮಾತ ಮಾತಿಗೆ ನಮ್ಮ ದೇಶದ ಹಣೇಬರಹ ಇಷ್ಟ ತೊಗೊ ಅಂತ ನಮ್ಮ ಸಿಸ್ಟಿಮನ್ನ ನಾವ ದ್ವೇಷಿಸಿಗೋತ ಕೂತರ ಏನ ನಮ್ಮ ಸಮಸ್ಯೆ ಬಗಿಹರಿತಾವ? ಇಲ್ಲಾ ಯಾರರ ಹೊರಗಿನವರ ಬಂದ ನಮ್ಮ ದೇಶ ಸುಧಾರಸ್ತಾರ?
ಮೊದಲ ನಮಗ ‘ಹೌದು ನಾವು ಸುಧಾರಸ್ತೇವಿ, ಇವತ್ತಿಲ್ಲಾ ನಾಳೆ ನಮ್ಮ ದೇಶದಾಗೂ ಭ್ರಷ್ಟಾಚಾರ ಹೋಗ್ತದ, ನಮ್ಮ ದೇಶನೂ ಅಭಿವೃದ್ಧಿಯಾಗಿ ಸ್ವಾವಲಂಬಿ ರಾಷ್ಟ್ರ ಆಗ್ತದ’ ಅಂತ ನಂಬಿಕಿನ ಇಲ್ಲಾ.
ಇನ್ನೊಂದ ದೊಡ್ಡ ದುರ್ದೈವ ಅಂದರ ಒಂದಿಷ್ಟ ಮಂದಿ ಯುವಕರು ಇತ್ತೀಚಿಗೆ ಬ್ರಷ್ಟ ಸಮಾಜದಾಗ ‘ಹತ್ತರಾಗ ಹನ್ನೊಂದ’ ಅಂದಂಗ ತಾವು ಸೇರಕೊಂಡ “ಏನ ಮಾಡೋದು ಇವತ್ತ ಸಮಾಜನ ಹಿಂಗ ಅದ, ಜೀವನದಾಗ ನಾವು ಮುಂದ ಬರಬೇಕಂದರ ಇದನ್ನೇಲ್ಲಾ ಮಾಡಬೇಕ” ಅಂತ ‘ಮೊದಲ ಸ್ವಾರ್ಥ ಆಮ್ಯಾಲೆ ಪರಮಾರ್ಥ’ ಅಂತಾರ. ಯಾ ಯುವಕರು ದೇಶದ ಪುನರ ನಿರ್ಮಾಣದ ಸಂಕಲ್ಪ ಮಾಡಬೇಕಿತ್ತ ಅವರ ಇವತ್ತ ಬ್ರಷ್ಟ ವ್ಯವಸ್ಥೆ ಜೊತಿ ಕೈಗೂಡಿಸಿದರ ಭಾರತದ ಮುಂದಿನ ಭವಿಷ್ಯಕ್ಕೂ ಮಂಕ ಹಿಡಿತದ ಅನ್ನೋ ಅರಿವು ಅವರಿಗೆ ಇದ್ದರು ಅದರ ಬಗ್ಗೆ ಜವಾಬ್ದಾರಿ ಇಲ್ಲಾ. ಅಷ್ಟರಾಗ ಕೆಲವೊಂದಿಷ್ಟ ಯುವಕರ ದೇಶದ ಸ್ಥಿತಿ- ಪರಿಸ್ಥಿತಿ ಅರ್ಥಾ ಮಾಡ್ಕೊಂಡ ತಮ್ಮಷ್ಟಕ್ಕ ತಾವು ಊರ ಉಸಾಬರಿ ಮಾಡದ, ಇದಕ್ಕೇಲ್ಲಾ ಅವರ ಕಾರಣ ಇವರ ಕಾರಣ ಅಂತ ಬ್ಯಾರೆಯವರ ಮ್ಯಾಲೆ ಹಾಕಲಾರದ ತಮ್ಮ ಕಡೆ ಸಾಧ್ಯ ಆದಷ್ಟ ಸಮಾಜ ಸೇವೆ ಮಾಡ್ಕೋತ ಇದ್ದಾರ. ಇವತ್ತ ಅವರ ಸಮಾಜದಿಂದ ಏನು ನಿರೀಕ್ಷೆ ಮಾಡಂಗಿಲ್ಲಾ, ಮೀಡಿಯಾದಾಗ ಅವರ ತಮ್ಮ ಹೆಸರ ಬರಲಿ ಅಂತನೂ ಮಾಡಂಗಿಲ್ಲಾ. ನಿಸ್ವಾರ್ಥದಿಂದ ತಮ್ಮ ಕ್ಯಾಪಿಸಿಟಿ ಇದ್ದಷ್ಟ ದೇಶಕ್ಕ ಕಂಟ್ರಿಬ್ಯೂಶನ ಮಾಡ್ಕೋತ ಇದ್ದಾರ. ಉಳದವರ ಅವರನ ನೋಡೇರ ಕಲಿಬೇಕು.
ಇವತ್ತ ನಮ್ಮ ಯುವಕರ ನಿರಾಶ ಆಗಲಿಕ್ಕೆ ಮೇನ ಕಾರಣ ಅಂದರ ಅವರಿಗೆ ಒಂದ ಆದರ್ಶ ಇಲ್ಲಾ, ಗುರಿ ಇಲ್ಲಾ ಹಿಂದ ಗುರು ಅಂತೂ ಇಲ್ಲ ಇಲ್ಲಾ. ವಿವೇಕಾನಂದರ ಹೇಳ್ತಿದ್ದರು “ಒಂದು ಆದರ್ಶವನ್ನು, ಗುರಿಯನ್ನು ಕೈಗೆತ್ತಿಕೊಳ್ಳಿ. ಕೇವಲ ಆ ಗುರಿಯ ಬಗ್ಗೆ ಮಾತ್ರ ಯೋಚಿಸಿ, ಚಿಂತಿಸಿ. ನಿಮ್ಮ ಬದುಕನ್ನೇ ಅದಕ್ಕಾಗಿ ಮುಡಿಪಾಗಿಡಿ. ಆ ಗುರಿಯು ನಿಮ್ಮ ಬುದ್ಧಿ, ಮನಸ್ಸು, ಇಂದ್ರಿಯಗಳು, ನರ-ನಾಡಿಗಳನ್ನೆಲ್ಲ ವ್ಯಾಪಿಸಲಿ. ಬೇರೆಲ್ಲ ಆಲೋಚನೆಗಳನ್ನು ಬದಿಗಿಡಿ. ಈ ಗುರಿಯನ್ನ ತಲುಪಬೇಕಾದರೆ ಹಿಂದೆ ಗುರುವಿನ ಮಾರ್ಗದರ್ಶನವಿರಬೇಕು. ಮುಂದೆ ಗುರಿಯ ಕಡೆಗೆ ಸಾಗುವ ಪ್ರಯತ್ನವಿರಬೇಕು. ಆ ಗುರಿ ಒಳ್ಳೆಯದಾಗಿರಬೇಕು, ಇದೇ ಯಶಸ್ಸಿನ ಏಕಮಾತ್ರ ಸೂತ್ರ” ಅಂತ.
ಆದರ ಇವತ್ತ ಯುವಕರು ಗುರಿ ಅಂದರ ರೊಕ್ಕಾ ಮಾಡೊದು, ಹೆಸರ ಗಳಸೋದ ಅಂತ ಅನ್ಕೊಂಡ ಬಿಟ್ಟಾರ. ಅದ ಜೀವನದಾಗ ದೊಡ್ಡ ಸಾಧನೆ. ಇನ್ನ ಇವತ್ತಿನ ಗುರುಗಳಿಗು ವಿವೇಕಾನಂದರ ಹೇಳಿರೋ ಗುರುಗಳಿಗೂ ಭಾಳ ಫರಕ ಅದ. ಇವತ್ತ ವಿದ್ಯಾ ಕಲಸದೊ ಹೊಟ್ಟೆಪಾಡಿಗೆ, ವಿದ್ಯಾ ಕಲಿಯೋದು ಹೊಟ್ಟೆಪಾಡಿಗೆ, ಶಿಕ್ಷಣ ಪ್ರೊಫೆಶನ್ ಆಗಿ ಅದರಾಗಿನ ಪವಿತ್ರತೆ ಎಂದೋ ಹೋಗಿ ಕಮರ್ಶಿಯಲ್ ಆಗಿ ಬಿಟ್ಟದ. ಇನ್ನ ಹಿಂತಾ ಶಿಕ್ಷಣ ಪದ್ದತಿ ಒಳಗ ಇವತ್ತ ನಮ್ಮ ಯುವಕರ ಕಲತ ‘ಆದರ್ಶ, ಗುರಿ’ ಅಂದರ ಏನು ಅನ್ನೊಹಂಗ ಆಗಿ ಹೋಗೇದ. ವಿವೇಕಾನಂದರ ಪ್ರಕಾರ ನಮ್ಮ ಶಿಕ್ಷಣ ಅಂದರ ಅದು ಒಬ್ಬ ಪರಿಪೂರ್ಣ ಮಾನವನನ್ನ ನಿರ್ಮಾಣ ಮಾಡಬೇಕು ಅಂತಿದ್ದರು. ಆದರ ಇವತ್ತ ಶಿಕ್ಷಣ ಬರೇ ಒಂದ ಛಲೋ ನೌಕರಿ ಸಿಗಲಿಕ್ಕೆ ಅಂತ ಆಗಿ ಹೋಗಿರೋದು ನಮ್ಮ ದುರ್ದೈವ.
“ಯುವಕರೇ, ಒಬ್ಬ ಮನುಷ್ಯ ನಾನು ದು:ಖಿ, ದೀನ, ಯಾವುದಕ್ಕೂ ಪ್ರಯೋಜನವಿಲ್ಲ ಎಂದು ಭಾವಿಸುತ್ತಿದ್ದರೆ ಅವನು ನಿಷ್ಪ್ರಯೋಜಕನಾಗುತ್ತಾನೆ. ನಾವೇ ಎಲ್ಲವನ್ನೂ ಏನನ್ನು ಬೇಕಾದರೂ ಮಾಡಲುಸಿದ್ದ. ಏನನ್ನೂ ಬೇಕಾದರೂ ಸಾಧಿಸಿಯೇ ತೀರುವೆವು ಎಂಬ ದೃಢ ವಿಶ್ವಾಸ ನಿಮ್ಮಲ್ಲಿ ಬೆಳೆಯಲಿ. ನಮ್ಮಲ್ಲಿ ಆತ್ಮನಿಂದನೆ ಇರಕೂಡದು. ನಾವು ಬದುಕಿನಲ್ಲಿ ಮುಂದುವರಿಯಬೇಕಾದರೆ ಮೊದಲು ನಮ್ಮಲ್ಲಿ ಆತ್ಮಶೃದ್ದೆ ಇರಬೇಕು” ಅಂತ ವಿವೇಕಾನಂದರು ಹೇಳಿದ್ದರು. ಆದರ ಇವತ್ತ ನಮ್ಮ ಯುವಕರೊಳಗ ಆ ದೃಡ ವಿಶ್ವಾಸನೂ ಇಲ್ಲಾ ಆತ್ಮ ಶೃದ್ದೆನು ಇಲ್ಲಾ.
ನಾವ ಇವತ್ತ ನಿರಾಶಾವಾದಿಗಳಾಗಿ ಬದಕೊದಕಿಂತಾ ‘ಈ ಜೀವನವೊಂದು ಗರಡಿಮನೆ, ಇಲ್ಲಿ ಬಲಿಷ್ಠರಾಗಲು ಬಂದಿದ್ದೇವೆ’ ಅಂತ ಅನ್ಕೊಂಡ ಪ್ರತಿಯೊಬ್ಬರು ವ್ಯಕ್ತಿ ವ್ಯಕ್ತಿಯಾಗಿ ಪಳಗಿ ಭಾರತದ ಪುನರ ನಿರ್ಮಾಣ ಮಾಡಬೇಕಾದದ್ದ ನಮ್ಮ ಕರ್ತವ್ಯ.
ಮಣಗಟ್ಟಲೇ ಸಿದ್ದಾಂತ ಓದಿ, ಹೇಳಿ ಇವತ್ತ ದೇಶದ ಅಭಿವೃದ್ಧಿಯ ದಿಕ್ಕ ತಪ್ಪಸೋದಕಿಂತಾ ನಮ್ಮ ಮನದೊಳಗಿನ ಪುಸ್ತಕ ತಗದ ಓದಿ ನಮ್ಮಿಂದ ಸಾಧ್ಯ ಆದಷ್ಟ ಸಮೃದ್ಧ ಭಾರತೀಯ ಸಮಾಜದ ನಿರ್ಮಾಣಕ್ಕ ನಾವು ಸಹಾಯ ಮಾಡಬೇಕು.
“ನಾವು ಆರ್ಯಮಾತೆಯ ಅಮೃತಪುತ್ರರು, ಭಾರತೀಯರು ನಾವು. ಭಾರತೀಯರೆಲ್ಲ ನಮ್ಮ ಸಹೋದರರು. ಭಾರತೀಯರು ನಮ್ಮ ಪ್ರಾಣ. ಭಾರತೀಯ ದೇವ ದೇವತೆಗಳೆಲ್ಲರೂ ನಮ್ಮ ದೇವರು. ಭಾರತೀಯ ಸಮಾಜ, ನಮ್ಮ ಬಾಲ್ಯದ ತೊಟ್ಟಿಲು, ತಾರುಣ್ಯದ ನಂದನವನ, ವೃದ್ಧಾಪ್ಯದ ವಾರಾಣಸಿ. ಭಾರತ ಭೂಮಿಯೆ ನಮ್ಮ ಪರಂಧಾಮ. ಭಾರತದ ಶುಭವೆ ನಮ್ಮ ಶುಭ” ಇದು ಇಂದಿನ ಯುವಕರ ಪ್ರಾರ್ಥನೆಯಾಗಲಿ ಅನ್ನೋದ ವಿವೇಕಾನಂದವರ ಆಶೆಯಿತ್ತು, ಇದನ್ನ ನಿಜ ಮಾಡೋದು ಇವತ್ತ ನಮ್ಮಂತ ಯುವಕರ ಕೈಯಾಗ ಅದ.

This entry was posted on Tuesday, January 15th, 2013 at 3:46 am and is filed under ಲೇಖನಗಳು. You can follow any responses to this entry through the RSS 2.0 feed. You can leave a response, or trackback from your own site.

8 Comments

 1. Vinit Chimmalagi says:

  agdi khare ada….

  ... on July January 15th, 2013
 2. Veershetty Musriffa says:

  Very true and relevant for current scenario sir!

  ... on July April 4th, 2013
 3. Name says:

  Your Comment…

  ... on July January 24th, 2014
 4. Name says:

  thumba jasthi aithu kandri

  ... on July January 24th, 2014
 5. LAXMI says:

  CHOLA ADA RI KHARENU ADA

  ... on July February 4th, 2014
 6. NANDINE N A says:

  MAST ITHI RI

  ... on July February 4th, 2014
 7. LAXMI N A says:

  NICE ONE……..

  ... on July February 4th, 2014
 8. sharanappa says:

  thanks

  ... on July March 9th, 2014

Post a Comment