ನೇರ ನಗದು ಪಾವತಿ

‘ನೇರ ನಗದು ಪಾವತಿ’, ಅಂದರ ‘ಡೈರಕ್ಟ ಮನಿ ಟ್ರಾನ್ಸಫರ’ (direct money transfer). ಇದು ಕೇಂದ್ರ ಸರ್ಕಾರದ ಬಡತನ ನಿರ್ಮೂಲನೆ ಮತ್ತು ಬಡವರ ಶೋಷಣೆ ತಪ್ಪಸಲಿಕ್ಕೆ, ಬಡವರಿಗೆ ತಲುಪಬೇಕಾದ ರಿಯಾಯತಿಯನ್ನ ನೇರವಾಗಿ ನಗದು ರೂಪದೊಳಗ ಪಾವತಿ ಮಾಡುವ ಯೋಜನೆ. ಇದನ್ನ ‘ಡೈರೆಕ್ಟ ಬೆನಿಫಿಟ್ ಟ್ರಾನ್ಸಫರ'( direct benefit transfer) ಅಂತನು ಕರಿತಾರ.
ಹಂಗರ ಸರ್ಕಾರ ಯಾರಿಗೆ ನೇರ ನಗದು ಪಾವತಿ ಮಾಡತದ? ಯಾಕ ಮತ್ತು ಹೆಂಗ ಮಾಡತದ? ಇದರಿಂದ ನಮ್ಮ ದೇಶಕ್ಕ ಏನ ಲಾಭ ಅದರಕಿಂತಾ ಹೆಚ್ಚಾಗಿ ನಮ್ಮ ಜನರಿಗೆ ಏನ ಲಾಭ ಅಂತ ನಮಗ ಪ್ರಶ್ನೆ ಹುಟ್ಟೊದ ಸಹಜ. ಬಹಳಷ್ಟ ಯೋಜನೆಗಳು ನಮ್ಮ ದೇಶದಾಗ ನಮ್ಮ ಜನರಿಗೆ ತಿಳಿಯಂಗೇಲಾ, ಇನ್ನ ಅವನ ತಿಳ್ಕೊಂಡ ಅದರ ಸದುಪಯೋಗ ಬಡ-ಬಗ್ಗರು ತೊಗೊಬೇಕು ಅನ್ನೋದರಾಗ ಆ ಯೋಜನೆ ಬದಲಾಗಿ ಬಿಟ್ಟಿರತಾವ ಇಲ್ಲಾ ಬಂದ ಆಗಿ ಬಿಟ್ಟಿರತಾವ. ಆ ಕಾರಣಕ್ಕ ‘ನೇರ ನಗದು ಪಾವತಿ ಯೋಜನೆ’ ಅನ್ನೋದರ ಬಗ್ಗೆ ಒಬ್ಬ ಸಾಮಾನ್ಯ ವ್ಯಕ್ತಿನೂ ತಿಳಿದುಕೊಳ್ಳಲಿ ಅನ್ನೊದು ಈ ಲೇಖನದ ಉದ್ದೇಶ.
ಈ ‘ನೇರ ನಗದು ಪಾವತಿ’ ಯೋಜನೆ ಪ್ರಕಾರ ಸರ್ಕಾರ ಬಡವರಿಗೆ ಅಂದರ BPL (Below poverty line) ಕಾರ್ಡ ಇದ್ದವರಿಗೆ ರಿಯಾಯತಿ ದರದೊಳಗ ಕಾಳು,ಕಡಿ, ಗೊಬ್ಬರ, ಸೀಮೆಎಣ್ಣೆ, ಡಿಸೇಲ್ ಇವನ್ನೇಲ್ಲಾ ಕೊಡೊದರ ಬದ್ಲಿ ಆ ರಿಯಾಯತಿ ಹಣವನ್ನ ನೇರವಾಗಿ ಅವರ ಬ್ಯಾಂಕ ಖಾತೆಗೆ ಡಿಪಾಸಿಟ್ ಮಾಡುವ ವಿಚಾರವನ್ನ ಹೊಂದಿದೆ, ಇದು ಬಡವರಿಗಾಗಿ ಮೀಸಲಾಗಿರೊದರಿಂದ ನೇರವಾಗಿ ಬಡವರಿಗೆ ಹಣದ ರೂಪದಾಗ ಸರ್ಕಾರದಿಂದ ಲಾಭ ಸಿಗತದ. ಬಡತನ ನಿರ್ಮೂಲನೆ ಮಾಡಲಿಕ್ಕೆ ಈ ಹೊಸಾ ಯೋಜನೆಯನ್ನ ಸರ್ಕಾರ ಈಗಾಗಲೇ ಜನೇವರಿ ೧ರಿಂದ ದೇಶದ ೧೬ ರಾಜ್ಯದ ೫೧ ಜಿಲ್ಲಾ ಕೇಂದ್ರದ ಒಳಗ ಶುರು ಮಾಡೇದ. ಮುಂದಿನ ಎಪ್ರೀಲ್ ೨೦೧೪ ರ ಒಳಗ ಈ ಯೋಜನೆ ದೇಶದ ಪ್ರತಿಯೊಬ್ಬರಿಗೂ ತಲುಪುವ ದೃಷ್ಟಿಯಿಂದ ಈಗಾಗಲೇ ಪ್ರಯತ್ನ ನಡೆಸೆದ. ಈ ಒಂದು ಯೋಜನೆ ಒಳಗ APL card ( above poverty line) ಇದ್ದವರಿಗೆ ಉಳದ ಕಾಳು,ಕಡಿ, ಸೀಮೆಎಣ್ಣಿ ಇವುಗಳ ರಿಯಾಯತಿ ಹಣ ಸಿಗದಿದ್ದರು ತಮ್ಮ ಗ್ಯಾಸ ಸಿಲೆಂಡರ ರಿಯಾಯತಿನ್ನ ಹಣದ ರೂಪದೊಳಗ ಪಡಿಬಹುದು. ಇದು ಈಗಾಗಲೇ ನಮ್ಮ ಕರ್ನಾಟಕದ ಕೆಲ ಭಾಗದೊಳಗ ಜಾರಿ ಆಗಿ ಜನಾ ಅದರ ಫಾಯದೆ ತೊಗೊಳಿಕತ್ತಾರ. ಈ ಒಂದು ಯೋಜನೆಗೆ ಕೇಂದ್ರ ಸರ್ಕಾರ ಪ್ರತಿ ವರ್ಷಕ್ಕೆ ೩.೨೩ ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ.
ಈ ಯೋಜನೆ ಹೆಂಗ ಕೆಲಸಾ ಮಾಡತದ ಅನ್ನೋದನ್ನ ಸ್ವಲ್ಪ ಸರಳವಾಗಿ ಹೇಳಬೇಕು ಅಂದರ
ಉದಾಹರಣೆಗೆ ಈಗ ನಮ್ಮ ಮನಿಗೆ ರೇಶನ್ನಾಗ ತಿಂಗಳಿಗೆ ೨ ಕೆ.ಜಿ ಸಕ್ಕರಿ ೨೫ ರೂಪಾಯಿಕ್ಕ ಕೆ.ಜಿ. ಗತೆ ಕೊಡತಿದ್ದರು ಅಂತ ಇಟ್ಗೋಳ್ರಿ, ಅದು ರೇಶನ್ ಸರಿಯಾಗಿ ನಮಗ ತಿಂಗಳಾ ಸಿಕ್ಕರ. ಎಷ್ಟೋ ಸರತೆ ಸರಿಯಾಗಿ ತಿಂಗಳಾ ರೇಶನ್ ಸಹಿತ ಜನರಿಗೆ ಸಿಗಂಗಿಲ್ಲಾ, ಯಾಕಂದರ ರೇಶನ ಅಂಗಡಿಯಂವಾ ನಮ್ಮ ಪಾಲಿನ ಸಕ್ಕರಿ, ಅಕ್ಕಿ, ಗೋದಿ ಎಲ್ಲಾ ಮುಕ್ತ ಮಾರುಕಟ್ಟೆಯೊಳಗ (open market) ದಲಾಲರಿಗೆ ಹೆಚ್ಚಿನ ರೇಟಿಗೆ ಮಾರ್ಕೊಂಡ ತಾ ರೊಕ್ಕಾ ಮಾಡ್ಕೊಂಡ ನಮಗ ” ರೇಶನ್ ಇನ್ನೂ ಬಂದಿಲ್ಲರಿ, ಬಂದ ಮ್ಯಾಲೆ ಬರ್ರಿ” ಅಂತ ಹೇಳಿ ಕಳಸಿ ಬಿಡ್ತಾನ. ಆವಾಗ ನಾವ ಏನ ಮಾಡ್ತೇವಿ. ನಮಗ ಸಕ್ಕರಿ ಇಲ್ಲದ ಸಂಸಾರ ನಡೆಯಂಗಿಲ್ಲಾ, ೪೦ ರೂಪಾಯಿ ಕೊಟ್ಟ ಹೊರಗ ಮಾರ್ಕೇಟನಾಗಿಂದ ಸಕ್ಕರಿ ತೊಗೊತೇವಿ. ಹಿಂಗಾಗಿ ನಾವು ಬಡತನ ರೇಖೆ ಒಳಗ ಇದ್ದರು, ನಾವು ಸರ್ಕಾರದಿಂದ ಕಡಿಮೆ ದರದೊಳಗ ಸಕ್ಕರಿ ತೊಗೊಳಿಕ್ಕೆ ಅರ್ಹರಿದ್ದರು ಸರಿಯಾಗಿ ರೇಶನ ಸಿಗದ ನಾವು ಸರ್ಕಾರಿ ರಿಯಾಯತಿಯಿಂದ ವಂಚಿತರಾಗಲಿಕತ್ತೇವಿ. ಇದನ್ನ ತಪ್ಪಸಲಿಕ್ಕೆ ಸರ್ಕಾರದವರ ಈ ನೇರ ನಗದು ಪಾವತಿ ಯೋಜನೆ ಒಳಗ ಏನ ಮಾಡಿದರು ಅಂದರ ನೀವು ಸಕ್ಕರಿ ಎಲ್ಲರ ತೊಗೊಳ್ರಿ, ಏಷ್ಟಕ್ಕರ ತೊಗೊರಿ ಆದರ ನಿಮಗ ಸಿಗಬೇಕಾರ ೨ ಕೆ.ಜಿ ಸಕ್ಕರಿದ ರೊಕ್ಕಾ ೨೫ ರೂಪಾಯಕ್ಕ ಕೆ.ಜಿ ಹಂಗ ಅಂದರ ೫೦ ರೂಪಾಯಿ ಅವರ ಸೀದಾ ನಮ್ಮ ಬ್ಯಾಂಕ ಅಕೌಂಟಿಗೆ ಜಮಾ ಮಾಡಿ ಬಿಡ್ತಾರ. ಇದ ರೀತಿ ನಮಗ ಸಿಗಬೇಕಾದ ಎಲ್ಲಾ ಸಾಮಾನಿನ ರಿಯಾಯತಿನ ಸರ್ಕಾರ ನಮಗ ಸೀದಾ ಹಣದ ರೂಪದಾಗ ನಮ್ಮ ಅಕೌಂಟಿಗೆ ಜಮಾ ಮಾಡ್ತಾರ.
ಹಿಂಗ ಮಾಡೋದರಿಂದ ಒಂದ ಈ ಮಿಡ್ಲ್ ಮ್ಯಾನ ಅಂತಾರಲಾ ಅಂದರ ನಡಕಿನವರು ( ರೇಶನ್ ಅಂಗಡಿಯವರು, ಎಜೆಂಟರು) ಇವರ ಫಾಯದೆ ತೊಗೊಳೊದ ತಪ್ಪತದ. ಸೀದಾ ಸರ್ಕಾರದಿಂದ ಯಾರಿಗೆ ಮುಟ್ಟಬೇಕೊ ಅವರಿಗೆ ಫಾಯದೆ ಮುಟ್ಟಸೋದು ಈ ಯೋಜನೆಯ ಒಂದು ಮೂಲ ಉದ್ದೇಶ. ಈ ಯೋಜನೆ ಸರ್ಕಾರದಿಂದ ಸೀದಾ ಜನರಿಗೆ ತಲಪೊದರಿಂದ ಅತ್ಯಂತ ಪಾರದರ್ಶಕವಾಗಿ ಕೆಲಸ ಮಾಡ್ತದ ಹಿಂಗಾಗಿ ಈ ಯೋಜನೆ ಒಳಗ ಯಾರಿಗೂ ನಡಕ ರೊಕ್ಕಾ ಹೊಡ್ಕೊಂಡರು ಅಂತ ಅನ್ನಲಿಕ್ಕೆ ಬರಂಗಿಲ್ಲಾ. ನಮ್ಮ ದೇಶದೊಳಗ ಎಷ್ಟೋಂದ ಯೋಜನೆಗಳು ಜನರನ್ನ ತಲಪದೇ ಇರೋದಕ್ಕ ಕಾರಣ ಭ್ರಷ್ಟಾಚಾರ. ಈ ಭ್ರಷ್ಟಾಚಾರಕ್ಕ ಕಾರಣವಾಗಿರುವ ದಲಾಲಿಗಳು, ಸೋರಿಕೆಗಳು, ಎಜೆಂಟರು ಇವರನ್ನೇಲ್ಲಾ ತಪ್ಪಿಸಿ ಸೀದಾ ಅರ್ಹರಿಗೆ ಅವರ ರಿಯಾಯತಿ ತಲಪಸೋದ ಸರ್ಕಾರದ ಗುರಿ. ಇದರಿಂದ ಯೋಜನೆಗಳ ಕಾರ್ಯಕ್ಷಮತೆ ಮತ್ತ ದಕ್ಷತೆ ಹೆಚ್ಚಗಿ ಆಗತದ. ಇದರ ಮುಖಾಂತರ ಬಡವರನ್ನ ದೇಶದ ಮುಖ್ಯವಾಹಿನಿಗೆ ಜೋಡಿಸೋದು ಒಂದು ಈ ಯೋಜನೆಯ ಉದ್ದೇಶ.
ಈ ಯೋಜನೆ ಒಳಗ ಬರೆ ರೇಶನ್ ಅಂಗಡಿ ಸಾಮಾನ ಇಷ್ಟ ಅಲ್ಲಾ, ನಮ್ಮ ಪೆನ್ಶನ್, ಶಿಕ್ಷಣ ವೇತನ, ರೋಜಗಾರ ವೇತನಾ, ಆರೋಗ್ಯ ಕಲ್ಯಾಣ ವೇತನಾ ಮತ್ತ ಉಳದ ಎಲ್ಲಾ ಬಡವರ ಯೋಗಕ್ಷೇಮದ ಸಲುವಾಗಿ ಇರೋ ಕಲ್ಯಾಣ ಯೋಜನೆಗಳು (welfare plans/schemes), ಬಡ ಬಗ್ಗರಿಗೆ ಸಿಗಬೇಕಾದ ಎಲ್ಲಾ ಸವಲತ್ತು ಇನ್ನ ಮುಂದ ಇದ ರೀತಿ ನೇರ ನಗದು ಪಾವತಿ ಮುಖಾಂತರ ಹಣದ ರೂಪದಾಗ ನಮ್ಮ ಅಕೌಂಟಿಗೆ ಬಂದ ಜಮಾ ಆಗ್ತಾವ. ಒಟ್ಟ ೨೯ ಕಲ್ಯಾಣ ಯೋಜನೆಗಳು ಈ ನೇರ ನಗದು ಪಾವತಿ ಯೋಜನೆ ಒಳಗ ಬರತಾವ. ಇನ್ನ ಮುಂದ ನಮಗ ಸರ್ಕಾರದಿಂದ ಬರೋ ಸವಲತ್ತನ್ನ ನಾವು ಪಡಿಲಿಕ್ಕೆ ಯಾರ ಕೈಕಾಲ ಹಿಡಿಬೇಕಾಗಿಲ್ಲಾ, ಯಾರ ವಸೂಲಿ ಬೇಕಾಗಿಲ್ಲ. ಸರ್ಕಾರ ನಮಗ ನಮ್ಮ ಆದಯದ ಪ್ರಕಾರ, ನಮ್ಮ ಅರ್ಹತೆ ಪ್ರಕಾರ ಎಷ್ಟ ಸಹಾಯ ಮಾಡಬೇಕಿತ್ತೊ ಅದನ್ನ ಡೈರೆಕ್ಟ ಹಣದ ಮುಖಾಂತರ ಕೊಟ್ಟ ಮುಗಿಸಿ ಬಿಡ್ತಾರ.
ಒಂದ BPL ಕುಟುಂಬಕ್ಕ ವರ್ಷಕ್ಕ ೩೨೦೦೦ ರೂಪಾಯಿ ಈ ಯೋಜನೆಯಿಂದ ಸಿಗತದ. ನಗರ ಪ್ರದೇಶದೊಳಗ ಇದ್ದು ದಿವಸಕ್ಕ ೬೬.೧೦ ರೂಪಾಯಿಕ್ಕಿಂತಾ ಕಡಿಮೆ ಮತ್ತ ಗ್ರಾಮಿಣ ಪ್ರದೇಶದೊಳಗ ಇದ್ದ ೩೫.೧೦ ರೂಪಾಯಿಗಿಂತಾ ಕಡಿಮೆ ಆದಾಯ ಇದ್ದೊರೇಲ್ಲಾ ಈ ಯೋಜನೆ ಒಳಗ ಬರತಾರ. ಹಿಂಗ ನೇರವಾಗಿ ಜನರ ಕೈಯೊಳಗ ನಗದು ಪಾವತಿ ಮಾಡಿ ಅವರಿಗೇನ ಮುಕ್ತ ಮಾರ್ಕೇಟನಿಂದ ಖರೀದಿ ಮಾಡುವ ಅಧಿಕಾರ ಕೊಡೋದು ಅದರ ಮುಖಾಂತರ ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಮಾರುಕಟ್ಟೆಯನ್ನ ಉತ್ತೇಜಿಸುವದು ಒಂದು ಸರ್ಕಾರದ ಉದ್ದೇಶ.
ಅಷ್ಟರಾಗ ಈ ಯೋಜನೆಯನ್ನ ಜಾರಿ ಮಾಡೋದರಿಂದ ಒಂದಿಷ್ಟ ಸಮಸ್ಯೆನೂ ಅವ, ಇಲ್ಲಾಂತ ಅಲ್ಲಾ. ಮೊದ್ಲ ಆದರ ರಿಯಾಯತಿ ದರದೊಳಗ ನಮಗ ಸಾಮಾನ ಅಂದರ ಕಾಳು, ಕಡಿ, ಸೀಮೆಎಣ್ಣಿ ಎಲ್ಲಾ ಸಿಗತಿದ್ದವು ಈಗ ಆ ರಿಯಾಯತಿ ಹಣದ ರೂಪದಾಗ ಸಿಗತದ. ಆದರ ಆ ರೊಕ್ಕಾ ಯಾ ಉದ್ದೇಶದ ಸಂಬಂಧ ಸರ್ಕಾರ ಕೊಟ್ಟದಲಾ ಅದು ಅದ ಉದ್ದೇಶಕ್ಕ ಉಪಯೋಗ ಆಗತದ ಅಂತ ಖಾತ್ರಿ ಇರಂಗಿಲ್ಲಾ. ಸರ್ಕಾರ ಕೊಟ್ಟ ರೊಕ್ಕಾ ದುರಪಯೋಗನೂ ಆಗಬಹುದು. ನಾಳೆ ಮನ್ಯಾಗ ಗಂಡನ ಅಕೌಂಟಿಗೆ ಹಣಾ ಜಮಾ ಆತು ಅಂದರ ಅದನ್ನ ಅಂವಾ ಕುಡದ ಹಾಳ ಮಾಡಬಹುದು, ಇಲ್ಲಾ ಬ್ಯಾರೆ ಯಾವದರ ಕೆಲಸಕ್ಕ ಉಪಯೋಗ ಮಾಡಬಹುದು. ಹಿಂಗಾದರ ಮುಂದ ಬಡವರ ಮನಿಗತಿ ಏನು? ಕಾಳು ಕಡಿ ತೊಗೊಳಿಕ್ಕೆ ಕೊಟ್ಟ ಸರ್ಕಾರದ ರಿಯಾಯತಿ ಹಣ ದುರ್ಬಳಕೆ ಆದರ ಮುಂದ ಹೆಂಗ ಅನ್ನೊ ಪ್ರಶ್ನೆನೂ ಬರತದ.
ಇನ್ನ ಸರ್ಕಾರ ೨ ಕೆ.ಜಿ ಸಕ್ಕರಿ ರೊಕ್ಕ ೨೫ ರೂಪಾಯಿಕ್ಕ ಕೆ.ಜಿ ಗತೆ ಹಿಡದ ನಮ್ಮ ಅಕೌಂಟಿಗೆ ೫೦ ರೂಪಾಯಿ ಜಮಾ ಮಾಡಿದರು ಅಂತ ಇಟ್ಗೋಳ್ಳರಿ, ಅದ ಎರಡ ಕೆ.ಜಿ ಸಕ್ಕರಿನ ನಾವ ಮಾರ್ಕೇಟನಾಗ ತೊಗೊಬೇಕು ಅಂದರ ೮೦ ರೂಪಾಯಿ ಕೊಡಬೇಕು. ಇನ್ನ ಪ್ರತಿ ಕೆ.ಜಿ. ಗೆ ೧೫ ರೂಪಾಯಿ ನಾವ ನಮ್ಮ ಕೈಲೆ ರೊಕ್ಕಾ ಹಾಕಿ ತೊಗೊಬೇಕು. ಆ ರೊಕ್ಕ ಎಲ್ಲೀದ ತರಬೇಕು? ನಾವು ಈಗಾಗಲೇ ಬಡತನ ರೇಖೆ ಒಳಗ ಬದಕಲಿಕತ್ತೇವಿ, ನಮ್ಮ ಕಡೆ ಎಲ್ಲಿಂದ ರೊಕ್ಕ ಬರಬೇಕು? ನಮಗ ಸಕ್ಕರಿ ಬದ್ಲಿ ಈ ರೊಕ್ಕಾ ಟ್ರಾನ್ಸಫರ ಮಾಡೊ ಯೋಜನಾ ಬ್ಯಾಡ, ನಮಗ ಸಕ್ಕರೀನ ಕೊಡರಿ ಅಂತ ಅನ್ನೋರು ಇದ್ದಾರ. ಇದು ಬರೆ ಸಕ್ಕರಿ ವಿಚಾರ ಇಷ್ಟ ಅಲ್ಲಲಾ, ಅಕ್ಕಿ, ಗೋದಿ, ಸೀಮೆ ಎಣ್ಣಿ ಎಲ್ಲಾ ರೇಶನ್ನಾಗ ಸಿಗೋ ಸಾಮಾನ ನಾವು ಹೆಚಗಿ ಕೈಲೆ ರೊಕ್ಕಾ ಕೊಟ್ಟ ಹೊರಗ ಮಾರ್ಕೇಟನಾಗ ತೊಗೊಬೇಕು ಅಂದರ ಜನರಿಗೆ ತ್ರಾಸ ಆಗ್ತದ ಅನ್ನೋದು ಒಂದ ವಿಚಾರ.
ಹಂಗ ಇದ ಏನ ನಮ್ಮ ದೇಶದಾಗ ಇಷ್ಟ ಇರೋ ಯೋಜನೆ ಅಲ್ಲಾ, ಜಗತ್ತೀನ ಭಾಳಷ್ಟ ದೇಶದೊಳಗ ಹಿಂತಾ direct money transfer schemes ಅವ. ಅಮೇರಿಕಾ ದೇಶದ ಕೆಲವೊಂದ ಭಾಗದಾಗ ಹಿಂಗ ಗಂಡಸರ ಅಕೌಂಟಿಗೆ ಹಣಾ ಟ್ರಾನ್ಸಫರ್ ಮಾಡಿದರ ಅದು ದುರುಪಯೋಗ ಆಗಬಹುದು ಅಂತ ಅವರು ಗಂಡಸರ ಅಕೌಂಟಗೆ ರೊಕ್ಕಾ ಟ್ರಾನ್ಸಫರ ಮಾಡಂಗಿಲ್ಲಾ. ಅವರು ಸೀದಾ ಆ ಮನೆಯ ಮಹಿಳೆಯರ ಅಕೌಂಟಿಗೆ ರೊಕ್ಕಾ ಹಾಕತಾರ. ಮಕ್ಕಳನ ಸರಿಯಾಗಿ ಸಾಲಿಗೆ ಕಳಸಲಿಕ್ಕೆ(school attendance incentive), ಮಕ್ಕಳದ ಆರೋಗ್ಯದ (child healthcare) ಬಗ್ಗೆ ಕಾಳಜಿ ತೊಗೊಳಿಕ್ಕೆ ಮತ್ತ ಮಕ್ಕಳಿಗೆ ಪೌಷ್ಟಿಕ ಆಹಾರ (nutritious food for child) ಕೊಡಲಿಕ್ಕೆ ಕೊಡೊ ದುಡ್ಡ ಎಲ್ಲಾ ಸರ್ಕಾರ ಸೀದಾ ಆ ಮನಿ ಹೆಣ್ಣಮಕ್ಕಳ ಮುಖಾಂತರನ ಕೊಡತದ.
ಇನ್ನ ಹಿಂತಾ ಯೋಜನೆ ನಮ್ಮ ದೇಶದೊಳಗ ನಡಿತದ ಏನು? ನೂರಾರು ಕೋಟಿ ಜನಾ ಇರೋ ನಮ್ಮ ದೇಶದಾಗ ಎಲ್ಲಾರಿಗೂ ರಿಯಾಯತಿಯನ್ನ ಹಣದ ರೂಪದಾಗ ಕೊಡಲಿಕ್ಕೆ ಆಗತದಾ ಅಂತ ಪ್ರಶ್ನೆ ಕೇಳೋರಿಗೆ ನಮ್ಮ ಸರ್ಕಾರದವರ ಹೇಳೊದ ಅಂದರ ಈಗಾಗಲೇ ಕೆಲವೊಂದ ರಾಜ್ಯದಾಗ electronic benefit transfer ಅಂತ ಪ್ರಾಯೋಗಿಕವಾಗಿ ನಾವು ಈ ಯೋಜನೆ ನಡಸೇವಿ, ಜನರಿಗೂ ಇದ ಅನಕೂಲ ಅನಸಲಿಕತ್ತದ. ಹಿಂಗಾಗಿ ಏನ ಸಮಸ್ಯೆ ಆಗಂಗಿಲ್ಲಾ ಅಂತ ನಮ್ಮ ವಿಶ್ವಾಸ ಅಂತ ಹೇಳ್ತಾರ.
ಇದರದ ಇನ್ನೊಂದ ದೊಡ್ಡ ಸಮಸ್ಯೆ ಏನ ಅಂದರ ಸರ್ಕಾರ ಈ ನೇರ ನಗದು ಪಾವತಿಯನ್ನ The Unique Identification Authority of India (UIDAI) ಅವರು ಕೊಟ್ಟಂತಾ ಆಧಾರ ಕಾರ್ಡ ಇದ್ದೋರಿಗೆ ಮಾತ್ರ ಕೊಡಲಿಕತ್ತದ. ಈ ಇಡೀ ಯೋಜನೆಗೆ ನಮ್ಮ ಕಡೆ ಇರೋ ಆಧಾರ ಕಾರ್ಡನ ಆಧಾರ. ಅದ ಇದ್ದರ ಮುಂದಿನ ಕೆಲಸ. ನಮ್ಮ ದೇಶದಾಗ ಇರೋ ೧೨೦ ಕೋಟಿ ಜನರೊಳಗ ಬರೇ ೨೦ ಕೋಟಿ ಮಂದಿದ ಆಧಾರ ಕಾರ್ಡ ಅವ. ಇನ್ನ ಉಳದವರು ಏನ ಮಾಡಬೇಕು? ಉಳದ ಒಂದ ನೂರ ಕೋಟಿ ಜನಾ ಆಧಾರ ಕಾರ್ಡ ಬರೋತನಕ ಈ ಯೋಜನೆಯಿಂದ ವಂಚಿತರಾಗತಾರ.
ಇನ್ನ ನಮ್ಮ ದೇಶ ಹಳ್ಳಿಗಳ ದೇಶ, ಎಷ್ಟ ಮಂದಿ ಗ್ರಾಮೀಣ ಪ್ರದೇಶದೊಳಗ ಇರೋ ಬಡವರ ಕಡೆ ಬ್ಯಾಂಕ ಅಕೌಂಟ ಇರತದ? ನಮ್ಮ ದೇಶದ ಎಲ್ಲಾ ಹಳ್ಳ್ಯಾಗೂ ಬ್ಯಾಂಕ ಅವನಾ? ಇನ್ನ ಬ್ಯಾಂಕ ಅಕೌಂಟ ಇಲ್ಲಾಂದರ ನಮಗ ಸರ್ಕಾರದಿಂದ ನೇರ ನಗದು ಪಾವತಿ ಹೆಂಗ ಬರಬೇಕು?ಇವೇಲ್ಲಾ ವಿಚಾರ ಮಾಡಿದರ ಅಷ್ಟ ಸರಳ ಈ ಯೋಜನೆ ಜನರ ತನಕ ಲಗೂನ ಮುಟ್ಟಂಗಿಲ್ಲಾ ಅಂತ ಅನಸ್ತದ.
ಹಿಂಗಾಗಿನ ಮೊನ್ನೆ ಜನೇವರಿ ಒಂದಕ್ಕ ದೇಶದ ೧೬ ರಾಜ್ಯದ ೫೧ ಜಿಲ್ಲಾ ಕೇಂದ್ರ ದೊಳಗ ಪ್ರಾರಂಭ ಆಗಬೇಕಾಗಿದ್ದ ಯೋಜನೆ ಕೇವಲ ಆರು ರಾಜ್ಯದ ೨೦ ಜಿಲ್ಲಾ ಕೇಂದ್ರದಾಗ ಮತ್ತು ಮೂರು ಕೇಂದ್ರಾಡಳಿತ ಪ್ರದೇಶದೊಳಗ ಆರಂಭವಾಗಿ ಕೇವಲ ೨೪೮೦೦ ಜನಸಂಖ್ಯೆಯನ್ನ ಮಾತ್ರ ತಲಪಲಿಕ್ಕೆ ಸಾಧ್ಯವಾತು. ಅದು ಇರೋ ೨೯ ಕಲ್ಯಾಣ ಯೋಜನೆ (welfare schemes) ಒಳಗ ೭ ಯೋಜನೆಗಳನ್ನ ಮಾತ್ರ ಈಗ ಅನುಷ್ಟಾನಕ್ಕ ತೊಗಂಡ ಬರೋ ನಿರ್ಣಯ ಮಾಡ್ಯಾರ. ಮುಂದ ಬರೋ ತಿಂಗಳದೊಳಗ ಯಾರ ಈ ಅವಕಾಶದಿಂದ ಬ್ಯಾಂಕ ಅಕೌಂಟ ಇರಲಾರದಕ್ಕ, ಅವರ ಹತ್ತರ ಆಧಾರ ಕಾರ್ಡ ಇರಲಾರದಕ್ಕ ಈ ಯೋಜನೆ ಲಾಭ ತೊಗೊಳಿಕ್ಕೆ ಆಗಿಲ್ಲಾ ಅವರಿಗೆಲ್ಲಾ ಆಧಾರ ಕಾರ್ಡ, ಬ್ಯಾಂಕ ಅಕೌಂಟ ಬಂದ ಮ್ಯಾಲೆ ಇದರ ಲಾಭ ತಲುಪಿಸುವ ಗುರಿ ಇಟಗೊಂಡಾರ.
ಈಗ ಪ್ರಸ್ತುತ ಪ್ರಾರಂಭವಾಗಿರುವ ೭ ಕಲ್ಯಾಣ ಯೋಜನೆಗಳು, ಅವು ಯಾವ ಯಾವ ರಾಜ್ಯ/ ಜಿಲ್ಲೆಯಲ್ಲಿ ಈಗಾಗಲೇ ಕಾರ್ಯರೂಪಕ್ಕ ಬಂದಾವ ಮತ್ತು ಅದರಿಂದ ಎಷ್ಟ ಜನಸಂಖ್ಯೆಗೆ ಲಾಭ ಆಗಲಿದೆ ಅನ್ನೋದನ್ನ ಕೆಳಕಾಣಿಸಿದ ಪಟ್ಟಿಯಲ್ಲಿ ನೀವು ನೋಡಬಹುದು…(insert attached image here)
ಕೇಂದ್ರ ಸರ್ಕಾರ ದೇಶದ ಪ್ರತಿಯೊಂದ ಹಳ್ಳಿ ಹಳ್ಳಿ ಒಳಗ ಬ್ಯಾಂಕ ಇಲ್ಲದೇ ಹೋದರು ಪೋಸ್ಟ ಆಫೀಸನ್ನ ಬ್ಯಾಂಕಿನೊಂದಿಗೆ ಏಕಿಕರಣ ಮಾಡಿ ಪ್ರತಿಯೊಂದ ಹಳ್ಳಿಗು ಈ ಯೋಜನೆಯನ್ನ ಮುಟ್ಟಸ್ತೇವಿ ಅಂತ ಘೋಷಣೆನೂ ಮಾಡ್ಯಾರ. ಆದರು ಇವತ್ತ ಈ ಯೋಜನೆಯ ಫಾಯದೆ ತೊಗೊಳಬೇಕು ಅಂದರ ಹೊಟ್ಟಿಗೆ ಎರಡ ಹೊತ್ತ ಊಟಾ, ಹಾಕೊಳ್ಳಿಕ್ಕೆ ಅರಬಿ, ಇರಲಿಕ್ಕೆ ಒಂದ ಮನಿ ಇದ್ದರ ಇಷ್ಟ ಸಾಲಂಗಿಲ್ಲಾ ನಮಗ ಬ್ಯಾಂಕ ಅಕೌಂಟ ಒಂದ ಇರಲೇ ಬೇಕು. ರೋಟಿ, ಕಪಡಾ, ಮಕಾನ ಔರ ಬ್ಯಾಂಕ್ ಅಕೌಂಟ ಅನ್ನೊಹಂಗ ಆಗೇದ. ನಮ್ಮ ದೇಶದ ಜನಸಂಖ್ಯೆ ಒಳಗ ಕೇವಲ ೩೫ ಪ್ರತಿಶತಃ ಜನಾ ಇಷ್ಟ ಬ್ಯಾಂಕ ಅಕೌಂಟ ಇದ್ದೊರ ಇದ್ದಾರ ಹಿಂಗಾಗಿ ಈ ಯೋಜನೆ ಪೂರ್ಣ ಪ್ರಮಾಣದೊಳಗ ಶುರು ಆಗಬೇಕಂದರ ಸ್ವಲ್ಪ ಸಮಯ ಹಿಡಿಬಹುದು.
ಈ ಯೋಜನೆಯ ರಾಜಕೀಯ ಸಮಸ್ಯೆ ಅಂದರ ವಿರೋಧಿ ಪಕ್ಷದವರು ಇದು ವೋಟ್ ಬ್ಯಾಂಕ ರಾಜಕೀಯ, ಈ ಯೋಜನೆಯ ಮುಖಾಂತರ ಆಡಳಿತದೊಳಗ ಇರೋ ಪಕ್ಷದವರು ನೇರವಾಗಿ ತಮ್ಮ ಮತಕ್ಕೋಸ್ಕರ ಮುಂದಿನ ೨೦೧೪ರ ಚುನಾವಣೆಗೆ ಜನರಿಗೆ ಲಂಚ ಕೊಡುವ ಒಂದು ಮಾರ್ಗ ಅಂತ ಈ ಯೋಜನೆಗೆ ತಮ್ಮ ವಿರೋಧವನ್ನ ವ್ಯಕ್ತಪಡಸಲಿಕತ್ತಾರ. ವರ್ಲ್ಡ ಬ್ಯಾಂಕದ ಒಂದ ಸರ್ವೆ ಪ್ರಕಾರ ಈ ನೇರ ನಗದು ಪಾವತಿಗೂ ಮತ್ತು ಮತದಾರನಿಗೂ ನೇರ ಸಂಬಂಧ ಇದೆ, ಸಾಮಾನ್ಯವಾಗಿ ನೇರ ನಗದು ಪಾವತಿ ಹಣವನ್ನ ಸ್ವೀಕರಿಸುವ ಮತದಾರ ಆಡಳಿತ ಪಕ್ಷಕ್ಕ ಋಣಿ ಆಗಿರತಾನ ಅಂತ ವರ್ಲ್ಡ ಬ್ಯಾಂಕ ರಿಪೋರ್ಟ ಹೇಳ್ತದ.
ಆದರ ನಮ್ಮ ದೇಶದ ಹಣಕಾಸು ಸಚಿವರು ಈ ನೇರ ನಗದು ಪಾವತಿ ಯೋಜನೆ ನಮ್ಮ ದೇಶದ ಅಭಿವೃದ್ಧಿಯ ಮತ್ತು ಆಡಳಿತದ ದಿಕ್ಸೂಚಿಯನ್ನೆ ಬದಲಿಸುವಂತಹ ಯೋಜನೆ, ಇದರಾಗ ಯಾವುದೇ ರಾಜಕೀಯ ಇಲ್ಲಾ, ಬಡತನ ನಿರ್ಮೂಲನೆಗೆ ಮತ್ತ ಅವರ ಶೋಷಣೆಯನ್ನ ತಪ್ಪಸಲಿಕ್ಕೆ ಮಾಡಿರುವಂತಹ ಈ ಯೋಜನೆ ಒಳಗ ರಾಜಕೀಯ ಮಾಡ ಬ್ಯಾಡರಿ ಅಂತ ಅವರು ಈ ಯೋಜನೆಯನ್ನ ಸಮರ್ಥಿಸಿಕೊಳ್ಳಲಿಕತ್ತಾರ.
ನಮ್ಮ ದೇಶದ ಪ್ರತಿಯೊಂದು ಯೋಜನೆಗಳಿಗೂ ತನ್ನದೆ ಅದ ಪರ ಮತ್ತ ವಿರೋಧಿ ವಿಚಾರಗಳು ಇರೋ ಹಂಗ ಈ ನೇರ ನಗದು ಪಾವತಿ ಯೋಜನೆಗೂ ಅವ. ಆದರ ಈ ಯೋಜನೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ದೇಶದ ಬಡತನ, ಭ್ರಷ್ಟಾಚಾರ ನಿರ್ಮೂಲನೆಗೆ ಸಹಾಯ ಮಾಡಿ ದೇಶದ ಅಭಿವೃದ್ಧಿಗೆ ಮತ್ತು ಜನರಿಗೆ ಅನಕೂಲ ಆಗ್ತದ ಅನ್ನೋದನ್ನ ನಾವು ಕಾದು ನೋಡಬೇಕಾಗೆದ.

This entry was posted on Thursday, February 14th, 2013 at 10:31 am and is filed under ಲೇಖನಗಳು. You can follow any responses to this entry through the RSS 2.0 feed. You can leave a response, or trackback from your own site.

3 Comments

 1. Name says:

  sara inthaavaka yaroo coment madangilla bidree.. yaka bareeteeri.. namma mandi hinga..

  ... on July February 15th, 2013
 2. Prabhuraj Harakangi says:

  sara inthaavaka yaroo coment madangilla bidree.. yaka bareeteeri.. namma mandi hinga..

  ... on July February 15th, 2013
 3. Name says:

  ಈಗ ಇರುವ ಸೌಲಭ್ಯಗಳನ್ನು ಬಳಸಿಕೊಂಡು ನೇರ ನಗದು ಅನುಷ್ಠಾನಕ್ಕೆ ಯತ್ನಿಸುವುದು ಬಿಟ್ಟು, 50000 ಕೋಟಿ ಅದಕ್ಕಾಗಿ ಖರ್ಚು ಮಾಡುವುದು ಮೂರ್ಖತನ.

  ... on July April 5th, 2014

Post a Comment