ನೈಟಿ ಕಂಡಹಿಡದವನಿಗೆ ನೊಬೆಲ್ ಬಹುಮಾನ

ನನಗ ಯಾಕೋ ಇತ್ತೀಚಿಗೆ ಈ ನೈಟಿ ಕಂಡ ಹಿಡದವಂಗ ನೊಬೆಲ್ ಬಹುಮಾನ ಯಾಕ ಕೊಡಬಾರದು ಅಂತ ಅನಸಲಿಕತ್ತದ. ನಾ ಹೇಳಿದ್ದ ಹೆಣ್ಣ ಮಕ್ಕಳದ ನೈಟಿ ಮತ್ತ, ಗಂಡಸರದ ನೈಂಟಿ ಅಲ್ಲಾ. ಹಂಗ ನೈಂಟಿ (ಅಲ್ಕೋಹಾಲ) ಕಂಡ ಹಿಡದಂವಾ ವಿಜ್ಞಾನಿ, ಅವಂಗ ನೋಬೆಲ್ ಸಿಕ್ಕ ಸಿಕ್ಕಿರತದ ಆ ಮಾತ ಬ್ಯಾರೆ, ಆದರ ನೈಟಿ ಕಂಡ ಹಿಡದಂವಾ ಅವನಕಿಂತಾ ಮಹಾಜ್ಞಾನಿ ಅಂತ ನನಗ ಅನಸ್ತದ. ಅಲ್ಲಾ ಇವತ್ತ ನಮ್ಮೇಲ್ಲಾರ ಮನ್ಯಾಗಿನ ಹೆಣ್ಣ ಮಕ್ಕಳ ದೇಹ ಮತ್ತ ಜೀವನದಾಗ ಹಾಸು ಹೊಕ್ಕಿರುವ ಈ ನೈಟಿ ಕಂಡ ಹಿಡದಂವಂಗ ನೊಬೆಲ್ ಕೊಡಲಿಲ್ಲಾಂದ್ರ ಹೆಂಗ ಅಂತೇನಿ. ಇದರಂತಹ ಅಗದಿ ಕಮಫಾರ್ಟೇಬಲ್ ಮತ್ತ ಮಲ್ಟಿ ಪರ್ಪಸ ಗಾರ್ಮೆಂಟ ನಾ ಎಲ್ಲೂ ಕೇಳಿಲ್ಲಾ, ನೋಡಿಲ್ಲಾ.
ಅಲ್ಲಾ, ಈಗ ಎಲ್ಲಾ ಬಿಟ್ಟ ಒಮ್ಮಿಂದೊಮ್ಮಿಲೆ ನನಗ ನೈಟಿ ಯಾಕ ನೆನಪಾತಪಾ ಅಂದರ, ನಿನ್ನೆ ಸಂಜಿ ಮುಂದ ನಾ ಸಾಕಾಗಿ ಆಫೀಸದಿಂದ ಮನಿಗೆ ಬರೋದ ತಡಾ, ನನ್ನ ಹೆಂಡತಿ ತಯಾರಾಗಿ ಗೇಟದಾಗ ನಿಂತಿದ್ಲು.
“ಯಾಕವಾ, ಎಲ್ಲಿಗೊ ಹೊಂಟದಲಾ ಸವಾರಿ?” ಅಂದೆ.
“ನೀವ ಬರೋ ಹಾದಿನ ಕಾಯ್ಕೋತ ನಿಂತಿದ್ದೆ, ಲಗೂನ ಕೈ ಕಾಲ ತೊಳ್ಕಂಡ ಬರ್ರಿ, ದುರ್ಗದಬೈಲಗೆ ಹೋಗಿ ನೈಟಿ ತೊಗೊಂಡ ಬರೋಣು” ಅಂದ್ಲು.
ಹಕ್ಕ್, ಒಂದ ವಾರಾನ ಗಟ್ಟಲೇ ದುಡದ ಸಾಕಾಗೆದ, ಇವತ್ತ ಹೆಂಗಿದ್ರೂ ಶನಿವಾರ, ಒಂದ ನೈಂಟಿ ಹೊಡದ ಮನ್ಯಾಗ ಆರಾಮ ಇದ್ರಾತು ಅಂದ್ರ ಇಕೆ ಎಲ್ಲಿದ ಹೊತ್ತಿಲ್ಲದ ಹೊತ್ತಿನಾಗ ನೈಟಿ ತಂದಳಲೇ ಅಂತ ನಾ ತಲಿಕೆಟ್ಟ
“ನೈಟಿ ಇಲ್ಲಾ ಗಿಟಿ ಇಲ್ಲಾ, ನಂಗ ಸಾಕಾಗೇದ ಹೋಗಲೇ” ಅಂದೆ. ಅಕಿಗ ನಾ ಹಂಗ ಅಂದಿದ್ದ ಕೇಳಿ ಪಿತ್ತ ನೆತ್ತಿಗೇರತ ಕಾಣತದ
“ಲಗ್ನ ಆದ ಹೊಸ್ತಾಗಿ ನಂಗ ವರ್ಷಾ ಎರೆಡೆರಡ ನೈಟಿ ಕೊಡಸ್ತೇನಿ ಅಂದಿದ್ರಿ, ಈಗ ನೋಡಿದ್ರ ಒಂದ ನೈಟಿಗೂ ಗತಿ ಇಲ್ಲದಂಗ ಆಗೇದ ” ಅಂತ ಬಾಗಲದಾಗ ನಿಂತ ಊರ ಮಂದಿಗೆ ಕೇಳೊ ಹಂಗ ಒದರಲಿಕತ್ತಳು. ನಾ
“ಲೇ, ನಿನ್ನೌನ, ನೀ ಒಳಗ ಬಂದ ಬೇಕಾರ ಇದ್ದದ್ದ ನೈಟಿನೂ ಹರಕೊಂಡ ಒದರ. ರಸ್ತೆದಾಗ ನಿಂತ ಒದರಿ ನನ್ನ ಮರ್ಯಾದಿ ಕಳಿಬ್ಯಾಡಾ” ಅಂತ ಅಕಿನ್ನ ಒಳಗ ಜಕ್ಕೊಂಡ ಹೋದೆ.
ನನ್ನ ಹೆಂಡತಿಗೆ ನೈಟಿದ ಭಾಳ ಹುಚ್ಚರಿಪಾ, ಅಕಿಗೆ ಮನ್ಯಾಗ ಹಾಕ್ಕೊಳ್ಳಿಕ್ಕೆ ಒಂದ, ರಾತ್ರಿ ಹಾಕ್ಕೊಂಡ ಕಳಿಲಿಕ್ಕೆ ಒಂದ, ಹಂಗ ಒಣ್ಯಾಗ ಹಾಲ ತರಲಿಕ್ಕೆ ಬ್ಯಾರೆ, ಒಂದ ಚೂರ ದೂರ ಹೋಗಿ ಅಂಗಡ್ಯಾಗಿಂದ ಸಣ್ಣ-ಪುಟ್ಟ ಸಾಮಾನ ತರಲಿಕ್ಕೆ ಒಂದ, ಊರಿಗೆ-ಕೇರಿಗೆ ಹೋದರ ಬ್ಯಾರೆ ನೈಟಿ. ಹಿಂಗ ಒಟ್ಟ ಅಕಿಗೆ ಒಂದ ನಾಲ್ಕ ಐದ ಟೈಪ್ ನೈಟಿ ಬೇಕ. ಒಂದ ಮಾತನಾಗ ಹೇಳಬೇಕ ಅಂದರ ಅಕಿ ಇಡಿ ಜೀವನಾನ ನೈಟಿ ಮ್ಯಾಲೆ ಕಳಿಬೇಕ ಅನ್ನೊ ವಿಚಾರದೊಕಿ. ಇನ್ನ ಹಂತಾಕಿಗೆ ಎಷ್ಟ ನೈಟಿ ಕೊಡಸಿದರು ಕಡಮಿನ ಬಿಡ್ರಿ. ಅಷ್ಟರಾಗ ಮುಸರಿ ತಿಕ್ಕಲಿಕ್ಕೆ, ಅರಬಿ ಒಗಿಲಿಕ್ಕೆ ಬ್ಯಾರೆ ನೈಟಿನ ಮತ್ತ, ಆ ನೈಟಿ ಅಂತೂ ಇಷ್ಟ ಖಮ್ಮಗ ಇರ್ತದ ಅಲಾ! ಅಯ್ಯಯ್ಯ. ಹೇಳೊಹಂಗ ಇಲ್ಲಾ.
ಮೊನ್ನೆ ಒಂದ ಸರತೆ ನಮ್ಮ ಮನಿಗೆ ಬಂದವರ ಒಬ್ಬರು ಹಿತ್ತಲದಾಗ ಹಣಿಕಿ ಹಾಕಿ, ನನ್ನ ಹೆಂಡತಿ ನೈಟಿ ಮ್ಯಾಲೆ ಭಾಂಡೆ ತಿಕ್ಕೋತ ಕೂತದ್ದ ನೋಡಿದರು. ಅವರು ಅಕಿ ನೈಟಿ ಹಣೇಬರಹ ನೋಡಿ ಅಕಿನ್ನ ಗೊತ್ತ ಹಿಡಿಲಿಲ್ಲಾ, ಒಳಗ ನಮ್ಮವಗ “ಯಾಕ ಕೆಲಸದೊಕಿ ಭಾಳ ಲೇಟಾಗಿ ಬರ್ತಾಳ ಏನ್ ನಿಮ್ಮ ಮನಿಗೆ” ಅಂತ ಅಂದ್ರು, ಏನ್ಮಾಡ್ತೀರಿ? ಇದ ಅಕಿ ಹಾಕ್ಕೊಂಡಿದ್ದ ನೈಟಿ ಪ್ರಭಾವ.
ಆದರೂ ಏನ ಅನ್ನರಿ ಇದರಂತಾ ಮೋಸ್ಟ ಕಮಫಾರ್ಟೇಬಲ್ ಗಾರ್ಮೆಂಟ ಹೆಣ್ಣ ಮಕ್ಕಳಿಗೆ ಮತ್ತೊಂದ ಇಲ್ಲಾ. ನೀವ ಏನ ಅನ್ರಿ ಈ ನೈಟಿ ಕಂಡ ಹಿಡದದ್ದ ನಮ್ಮ ಹೆಣ್ಣಮಕ್ಕಳಿಗೆ ಭಾರಿ ಅನಕೂಲ ಆಗೇದ. ಹಂಗ ನೊಬೆಲ್ ಬಹುಮಾನ ತೊಗೊಬೇಕು ಅಂದರ you must make an important contribution in the fields of chemistry, physics, literature, peace and physiology or medicine ಅಂತ ಹೇಳ್ತಾರ, ಇದಕ್ಕ in the field of women ಒಂದ ಜೋಡಸಿ ಈ ನೈಟಿ ಹೆಣ್ಣಮಕ್ಕಳ ಫೀಲ್ಡ್ ಒಳಗ ಭಾಳ ಇಂಪಾರ್ಟೇಂಟ ಕಾಂಟ್ರೀಬ್ಯುಶನ್ ಮಾಡೆದ ಅಂತ ಇದನ್ನ ಕಂಡ ಹಿಡದವರಿಗೆ ಹುಡಕಿ ಹಿಡದ ನೊಬೆಲ್ ಕೊಡಲೇಬೇಕು ಅನ್ನೋದ ನನ್ನ ವಿಚಾರ.
ಹಂಗರ ಈ ನೈಟಿ ಕಂಡ ಹಿಡದವರರ ಯಾರು ಅಂತ ನಾ ಮೊನ್ನೆ ಎಷ್ಟ ಗೂಗಲ್ ಸರ್ಚ್ ಮಾಡಿದರು ಇದರ ಬಗ್ಗೆ ಮಾಹಿತಿ ಸಿಗಲಿಲ್ಲಾ. ಯಾಕಂದರ ನಮ್ಮ ಹೆಣ್ಣಮಕ್ಕಳ ಎಷ್ಟ ಪುರತಾನವಾದವರ ಅಲಾ, ಅಷ್ಟ ನೈಟಿನೂ ಪುರತಾನವಾದದ್ದು. ನಂಗ ಆಮ್ಯಾಲೆ ಅನಸಲಿಕತ್ತು ಸುಮ್ಮನ ‘ಈ ನೈಟಿ ಕಂಡ ಹಿಡದವರಿಗೆ ಕಂಡ ಹಿಡದ ನೊಬೆಲ್ ಕೊಡೊದಕಿಂತಾ, ಈ ನೈಟಿ ಒಳಗ ಒಂದೊಂದ ಕೆಲಸಕ್ಕ ಒಂದಂದ ಟೈಪ್ ನೈಟಿ ಅಂತ ಕಂಡ ಹಿಡದ ನನ್ನ ಹೆಂಡತಿಗೆರ ಯಾವದರ ಅವಾರ್ಡ ಕೊಡಬೇಕು ಅಂತ.
ಹಿಂಗಾಗಿ ನಾಳೆ ಹೆಂಗಿದ್ದರು ಡಿಸೆಂಬರ್ ಹತ್ತ, ನೊಬೆಲ್ ಬಹುಮಾನ ವಿತರಣಾ ಸಮಾರಂಭ. ಜಗತ್ತಿನಾಗ ಬ್ಯಾರೆ ಬ್ಯಾರೆ ಕ್ಷೇತ್ರದಾಗ ಸಾಧನೆ ಮಾಡಿದವರಿಗೆಲ್ಲಾ ನೊಬೆಲ ಕೊಡ್ತಾರ. ನಾನೂ ನನ್ನ ಹೆಂಡತಿಗೆ ಅರಿಷಣ ಕುಂಕಮ ಹಚ್ಚಿ ಒಂದ ಜೋಡಿ ನೈಟಿ ಕೊಡಬೇಕು ಅಂತ ಮಾಡೇನಿ. ಯಾಕಂದರ ಈ ಹೆಣ್ಣ ಮಕ್ಕಳಿಗೆ ನೈಟಿ ನೊಬೆಲನಷ್ಟ ಅಮೂಲ್ಯವಾದ ಪುರಸ್ಕಾರ ಅಂತ ನನಗ ಗ್ಯಾರಂಟಿ ಅದ.

 

This entry was posted on Friday, December 14th, 2012 at 4:12 am and is filed under ಹಾಳ ಹರಟೆ,ವಿಜಯ ಕರ್ನಾಟಕ ಅಂಕಣ. You can follow any responses to this entry through the RSS 2.0 feed. You can leave a response, or trackback from your own site.

2 Comments

 1. Sameer rao says:

  Prashanth,

  I enjoy your articles very much. I just wonder how you get these ideas! Simply great! Thank you for making us laugh!!

  Sameer

  ... on July December 29th, 2012
 2. Anonymous says:

  yen teli ri yellind yelli vichar madiri….bhari..bidri…awesome…awesome…awesome….

  ... on July January 11th, 2013

Post a Comment