ಪ್ರತಿಭಾನಿರ್ಗಮನೆ ‘ಪುರ್ಣೋ’ ಪರಾಜಯಃ ಪ್ರಣಬಿದಮ್….

ಒಂದ ವಾರದ ಹಿಂದ ಬೆಂಗಳೂರಾಗ ‘ಪೂರ್ಣೊ’ ಭೇಟ್ಟಿ ಆಗಿದ್ರ, ಅದ ರಾಷ್ಟ್ರಪತಿ ಅಭ್ಯರ್ಥಿ ಪೂರ್ಣೋ ಎ. ಸಂಗ್ಮಾ. ಪಾಪ, ಭಾಳ ಟೆನ್ಶನಾಗ ಇದ್ರು.
“ಯಾಕ್ರಿ, ನೀವು ಇಲ್ಲೆ? ಮತ್ತೇನ್ ವಿಶೇಷ. ಯಡಿಯೂರಪ್ಪೇನರ ನಿಮಗ ಸಪೋರ್ಟ ಮಾಡಂಗಿಲ್ಲಾ ಅಂತ ಮತ್ತ ಹೆದರಸ್ಯಾರೇನ?” ಅಂದೆ.
“ಹೆ..ಹಾಗೇನಿಲ್ಲಾ. ಮುಂದಿನ ವಾರ ಇಲೇಕ್ಷನ್ ಬಂತಲ್ಲಾ, ಅದಕ್ಕ ‘ಆಪರೇಶನ್ ಕಮಲ’ದ ಕಿಂಗ ಯಡಿಯೂರಪ್ಪಾಜಿನ ಭೆಟ್ಟಿ ಆಗಿ ಹೋದರಾತು ಅಂತ ಬಂದೇನಿ” ಅಂದ್ರು.
ಏ ಇವರೇಲ್ಲರ ಆ ಯಡಿಯೂರಪ್ಪನ ಮಾತ ಕೇಳಿ ‘ಆಪರೇಶನ್ ಸಂಗ್ಮಾ’ ಮಾಡಲಿಕ್ಕೆ ಹೋಗಿ ತಮ್ಮ ‘ಪಾಲಿಟಿಕಲ್ ಡೋಗ್ಮಾ’ ಕಳ್ಕೋಂಡ ಗಿಳ್ಕೊಂಡಾರ ಅಂತ
” ಆತ ತೊಗೊ, ನೀವು ಅವರ ನೆಚ್ಚಿದರ ಇಲೇಕ್ಷನ್ ಗೆದ್ದಂಗ ಆತ, ಅಲ್ಲರಿ ‘ಆಪರೇಶನ್ ಕಮಲ’ ಮಾಡಿ ಮೇಜಾರಿಟಿ ಇದ್ದದ್ದ ತಮ್ಮ ಪಾರ್ಟಿನ ಮೈನಾರಿಟಿಗೆ ತಂದಾರ, ಇನ್ನ ನಿಮ್ಮಂತಾ ಮೈನಾರಿಟಿ ಕಾಂಡಿಡೇಟ ಗೆಲ್ಲಸ್ತಾರ?” ಅಂದೆ.
“ಏ, ಹಂಗ್ಯಾಕ ಅಂತೀರಾ ಸಾರ್, ಅವರ ಬಿಜೇಪಿ ಹೈಕಮಾಂಡದ ಕಮಂಡಲನೇ ಅಳಗ್ಯಾಡಸ್ತಾರೆ ಅಂದರೆ ಸುಮ್ಮನೆನಾ ಸಾರ್, ‘ಅವರ ಮನಸ್ಸ ಮಾಡಿದ್ರೆ ಕಾಂಗ್ರೇಸ ಕೈ ಒಳಗು ಅಡ್ಡಗಾಲ ಹಾಕಿ ನೀವು ಗೆಲ್ಲೋ ಹಾಗೆ ಮಾಡ್ತಾರೆ ಅವರನ ಹಿಡ್ಕೋರ್ರಿ’ ಅಂತ ಗಡಕರಿ ಅವರೇ ಹೇಳಿ ಕಳಸಿದ್ದಾರೆ” ಅಂತ ಅಂದ್ರು.
“ರ್ರೀ..ಆ ಗಡಕರಿ ಬಂದಾಗಿಂದ ಬಿಜೇಪ್ಯಾಗ ಕಿರಿಕಿರಿ ಶುರು ಆಗಿದ್ದ, ನೀವು ಬಿಜೇಪಿಯವರನ ಹಿಡಕೊಂಡ ಏನ ತಿಪ್ಪರಲಾಗ ಹೊಡದ್ರು ಪ್ರಣಬದಾ ನ ಸೋಲಸಲಿಕ್ಕೆ ಆಗಂಗಿಲ್ಲಾ, ಯಾಕ ಸುಮ್ಮನ ಗುದ್ಯಾಡತೀರಿ” ಅಂದೆ.
ನಾ ಹಂಗ ಅಂದ ಕೂಡಲೇ ಅವರಿಗೆ ಸಿಟ್ಟಬಂತ.
“ನೀವೆಲ್ಲಾ ಆ ವಿದೇಶಿ ಸೊನಿಯಾಗಾಂಧಿ ಮಂದಿ, ರಾಜಕೀಯದಾಗ ಗೆಲ್ಲೋದಿಷ್ಟ ಮುಖ್ಯಲ್ಲಾ ಸ್ಪರ್ಧಿಸೋದು, ಗೆಲ್ಲೊರನ ವಿರೋಧಿಸೋದು ಮುಖ್ಯ. ನಮ್ಮ ದೇಶದಾಗ ಸ್ವದೇಶಿ ಮಂದೇಲ್ಲಾ ಮಲ್ಕೋಂಡಾರ ಅವರನ ಎಬ್ಬಸಬೇಕು” ಅಂತ ಸಿಟ್ಟಲೇ ಸೀಟಿ ಹೊಡದ ‘ಜಾಗ್ತೇ ರಹೋ’ ಅಂತ ಕೋಲಲೆ ಕಟ್ಟಿಗೆ ಬಡದ ಹೋಗಿ ಬಿಟ್ಟರು.
ಅಲ್ಲಾ, ಈ ಮಾತಿಗೆ ಈಗ ಒಂದ ವಾರದ ಮ್ಯಾಲೆ ಆತ ಬಿಡ್ರಿ. ಇಗಾಗಲೇ ರಾಷ್ಟ್ರಪತಿ ಇಲೇಕ್ಷನ್ ಮುಗದ ಹೋಗಿ ಪ್ರಣಬ ಮುಖರ್ಜಿಯವರ ಗೆದ್ದ ಆತ. ಹಂಗ ಗೆದ್ದೋರೇನ ಮೀಸಿ ತಿರವಲಿಲ್ಲಾ, ಬಿದ್ದೋರದ ಏನ ಮೀಸಿ ಮಣ್ಣಾಗಲಿಲ್ಲಾ ಯಾಕಂದರ ಇಬ್ಬರಿಗೂ ಮೀಸಿ ಇಲ್ಲಾ. ಅಲ್ಲಾ, ಹಂಗ ಕಾಂಗ್ರೇಸದಾಗಂತೂ ‘ಮೀಸೇಹೊತ್ತ ಗಂಡಸರ’ ಇಲ್ಲ ಬಿಡ್ರಿ, ಆ ಮಾತ ಬ್ಯಾರೆ.
ಹಂಗ ನೋಡಿದರ ನಾವೇಲ್ಲಾ ಈ ಇಲೇಕ್ಷನಕ್ಕ ಅಷ್ಟ ತಲಿ ಕೆಡಸಿಗೊಂಡಿಲ್ಲಾ, ಯಾಕಂದರ ಈ ಇಲೇಕ್ಷನ್ನದಾಗ ನಮ್ಮ ವೊಟ ನಡಿಯಂಗಿಲ್ಲಾಂತ ನಮಗ ಯಾರು ರೊಕ್ಕಾ ಕೊಟ್ಟ ವೊಟ ಹಾಕರಿ ಅನ್ನಲಿಲ್ಲಾ. ಅದರಾಗ ನಮ್ಮ ದೇಶದಾಗ ರಾಷ್ಟ್ರಪತಿ ಅಂದರ ಒಂಥರಾ “ಅಮ್ಮಾವ್ರ ಗಂಡ” ಇದ್ದಂಗ, ‘ಊಟಕ್ಕ ಉಂಟು, ಆಟಕ್ಕಿಲ್ಲಾ’ ಅಂದಂಗ ರೂಲಿಂಗ ಪಾರ್ಟೀಯವರ ಹೇಳಿದಂಗ ಕೇಳ್ಕೋಂಡ ಐದ ವರ್ಷ ರಾಷ್ಟ್ರಪತಿ ಭವನದಾಗ ಚೈನಿ ಹೊಡದ,ವರ್ಷದಾಗ ಒಂದಿಷ್ಟ ಮಂದಿ ಮೂರ್ತಿಗೆ ಮಾಲಿ ಹಾಕಿ, ಬ್ಯಾಸರಾದಗೊಮ್ಮೆ ಒಂದಿಷ್ಟ ಫಾರೇನ್ ಅಡ್ಯಾಡಿ ಆರಾಮ ಇದ್ದ ಹೋಗೊದು.
ಹೋದಸಲಾ ನೋಡಿದ್ರಿಲ್ಲೋ? ನಮ್ಮ ದೇಶದ ಮೊದಲ ಮಹಿಳಾ ರಾಷ್ಟ್ರಪತಿ, ಪ್ರತಿಭಾ ಪಾಟೀಲವರು ಎಷ್ಟ ದೇಶಾ ತಿರಗ್ಯಾಡಿದರು ಅಂತ. ಐದ ವರ್ಷದಾಗ ೨೦೫ ಕೋಟಿ ರೂಪಾಯಿ ಖರ್ಚ ಮಾಡಿ, ೧೨ ವಿದೇಶಿ ಪ್ರವಾಸ ಮಾಡಿ ೪ ಖಂಡದಾಗಿನ ೨೩ ದೇಶಕ್ಕ ಅವರು ಭೆಟ್ಟಿ ಕೊಟ್ಟ ಬಂದರು,ಅದು ಸಹಕುಟಂಬ ಪರಿವಾರ ಸಹಿತ. ಏನ್ ಮಾಡ್ತೀರಿ? ನಮ್ಮ ದೇಶದ ರಾಷ್ಟಪತಿ ಅಂತ ಅಂದಮ್ಯಾಲೆ ಅಷ್ಟು ಖರ್ಚ ಮಾಡಲಿಲ್ಲಾ ಅಂದರ ಹೆಂಗ ಮತ್ತ? ಮಾಡ್ಲಿ, ಯಾರದೋ ರೊಕ್ಕ ಎಲ್ಲಮ್ಮನ ಜಾತ್ರಿ ಅಂತಾರಲಾ ಹಂಗ ಮಾಡಿ ಕಡಿಕೆ ಮೊನ್ನೆ ಹೋಗಬೇಕಾರ ನಮ್ಮ ಪ್ರತಿಭಾನ್ವಿತ ಪಾಟೀಲರು ೩೫ ಮಂದಿ ಕೊಲೆಗಡಕರು, ಕಿಡ್ನ್ಯಾಪ ಮಾಡಿದವರು, ಅತ್ಯಾಚಾರ ಮಾಡಿದವರದ ಗಲ್ಲ ಶಿಕ್ಷೆ ರದ್ದಗೊಳಿಸಿ ಜೀವಾವಧಿ ಅಂತ ಘೋಷಣಾ ಮಾಡಿ ತಮ್ಮ ಅವಧಿ ಮುಗಿಸಿ ಜೈ ಹಿಂದ ಅಂದರು. ಏನ್ಮಾಡ್ತೀರಿ?
ಎಷ್ಟ ಅಂದರು ಅವರದ ಹೆಣ್ಣಗರಳ ಅಲಾ. ಏನೋ ನಮ್ಮ ಪುಣ್ಯಾಕ್ಕ ಅಫ್ಜಲ ಗುರುಗ, ಕಸಬಗ ಮಾಫಿ ಮಾಡಲಿಲ್ಲಾ.
ಹೋಗಲಿ ಬಿಡರಿ ಈಗ ಆಗಿದ್ದ ಆಗಿ ಹೋತ, ಇವತ್ತ ಈ ರಾಷ್ಟ್ರಪತಿ ‘ಪ್ರತಿಭಾನಿರ್ಗಮನ’ದ ನಂತರ ನಮ್ಮ ‘ಪೂರ್ಣೋ’ನ ಪರಾಜಯ ಗೊಳಿಸಿ ಗೆದ್ದ ಬಂದ ‘ಪ್ರಣಬ’ದಾನರ ರಾಷ್ಟ್ರಪತಿ ಆದಮ್ಯಾಲೆ ಕೋಟಿಗಟ್ಟಲೆ ಖರ್ಚ ಮಾಡಿದರು ಅಡ್ಡಿಯಿಲ್ಲಾ ಒಂದ ಸ್ವಲ್ಪ ದೇಶದ್ದ ಬಗ್ಗೆನು ಲಕ್ಷ ಕೊಟ್ಟರ ಸಾಕು.
ಅಲ್ಲಾ, ಪಾಪ ನಮ್ಮ ಪೂರ್ಣೊಗ ಕರ್ನಾಟಕದಾಗಿನ ಬಿಜೇಪಿ ವೋಟ ಸಹಿತ ಪೂರ್ತಿ ಬಿಳಲಿಲ್ಲಾ, ಏನ್ಮಾಡ್ತೀರಿ? ನಾ ಅವರಿಗೆ ಮೊದ್ಲ ಹೇಳಿದ್ದಿಲ್ಲಾ ಈ ಬಿಜೇಪಿ ಮಂದಿನ್ನ ನಂಬ ಬ್ಯಾಡರಿ ಅಂತ. ನನ್ನ ಮಾತ ಕೇಳಲಿಲ್ಲಾ,

This entry was posted on Wednesday, July 25th, 2012 at 3:36 am and is filed under ಹಾಳ ಹರಟೆ,ವಿಜಯ ಕರ್ನಾಟಕ ಅಂಕಣ. You can follow any responses to this entry through the RSS 2.0 feed. You can leave a response, or trackback from your own site.

Post a Comment