ವಾಟ an idea ಸರಜೀ

ಮೊನ್ನೆ idea ಮೊಬೈಲನವರು ಮಾರ್ಕೇಟ್ ಸರ್ವೇ ಮಾಡಲಿಕ್ಕೆ ನಮ್ಮ ಹುಬ್ಬಳ್ಳಿಗೆ ಬಂದಿದ್ದರು. ಯಾಕೋ ಅವರು ಏನ idea ಮಾಡಿದರು ನಮ್ಮ ಉತ್ತರ ಕರ್ನಾಟಕದ ಒಳಗ ಅವರದ idea ಕ್ಲಿಕ್ ಆಗವಲ್ತಂತ, ಹಿಂಗಾಗಿ ಭಾಳ ಕೆಟ್ಟ ಅನಿಸಿಕೊಂಡ ‘ಸರಜೀ ನೀವೇನರ idea ಹೇಳರಿ’ ಅಂತ ನನ್ನ ಕಡೆ ಬಂದಿದ್ದರು.
ನಾ ಅವರಿಗೆ “ಮೊದ್ಲ ನೀವು ನಿಮ್ಮ ‘ವಾಟ an idea ಸರಜೀ’ ಬದ್ಲಿ ಛಂದಾಗಿ ಕನ್ನಡದಾಗ “ಅವನೌನ ಏನ್ ಹೇಳಿದಿಲೇ” ಅಂತ ಅನ್ನರಿ. ಅವನೌನ ಅನ್ನೋದು ನಮ್ಮ ಉತ್ತರ ಕರ್ನಾಟಕದಾಗ noun ಇದ್ದಂಗ” ಅಂದೆ.
“ಆಮ್ಯಾಲೆ ಆ ‘ಜಿ’-‘ಜಿ’ ಅನ್ನೋ ಶಬ್ದ ನಿಮ್ಮ adನಾಗಿಂದ ತಗದ ಬಿಡ್ರಿ, ಅದರಾಗ ನೀವು ‘3ಜಿ’ ಅಂದಕೂಡಲೇ ಕಾಂಗ್ರೆಸ ಮಂದಿಗೆ ಯಡಿಯೂರಪ್ಪಾಜಿ, ಈಶ್ವರಪ್ಪಾಜಿ, ಗೌಡಾಜಿ ನೆನಪಾಗಿ, ನೀವೂ ಬಿಜೆಪಿಯವರಂತ ತಿಳ್ಕೋತಾರ. ಇತ್ತಲಾಗ ನಿಮ್ಮ mobile number portability adನೋಡಿ ಬಿಜೆಪಿಯವರು ‘ನೀವು ಯಾ ಪಕ್ಷದವರ ಆದ್ರೂ ಅಡ್ಡಿಯಿಲ್ಲಾ, ನಮ್ಮ ಪಕ್ಷಕ್ಕ ಬರ್ರಿ, ಮುಂದ ನಿಮ್ಮ connection ಬಿಜೆಪಿಯಿಂದ active ಮಾಡ್ತೇವಿ’ ಅಂತ ಬ್ಯಾರೆ ಬ್ಯಾರೆ ಪಾರ್ಟಿಯಿಂದ ಶಾಸಕರನ್ನ ಕರಕೊಂಡ ಬಂದ ಈಡಿ ಪಕ್ಷದ್ದ network ಹಾಳ ಮಾಡ್ಕೊಂಡಿದ್ದನ್ನ ಬಿಜೆಪಿ ಮಂದಿ ನೋಡಿ ಅವರೂ ನಿಮ್ಮ idea ಕಂಡರ ಹೆದರಲಿಕತ್ತಾರ”.
“ಇನ್ನ next point ಏನಪಾ ಅಂದರ ನಿಮ್ಮ adನಾಗಿಂದ save paper, use mobile ತಗಿರಿ, ನಾವು ಬಯಲಸೀಮಿ ಮಂದಿ, ನಮ್ಮಲ್ಲೇ ಇಪ್ಪತ್ತ mobileಗೆ ಒಂದ mobile toilet ಸಹಿತ ಇಲ್ಲಾ. ಹಿಂಗಾಗಿ ನಾವು ಬಯಲಾಗ ತಂಬಗಿ ತೊಗಂಡ ಹೋಗೋರು, ಹಂಗ ನಾವ ಕೂತಲ್ಲೇಲ್ಲಾ ನಳಾ, ನೀರು ಇರಂಗಿಲ್ಲಾ. ನಮ್ಮ ಸರ್ಕಾರದವರಿಗೆ ವಾರಕ್ಕೊಮ್ಮೆ ಕುಡಿಲಿಕ್ಕೆ ನೀರ ಕೋಡೋದ ರಗಡ ಆಗೇದ. ಹಂತಾದರಾಗ ನೀವು paper ಬಿಟ್ಟ mobile ವಾಪರಸರಿ ಅಂತ ಅಂದ್ರ ನಮಗ ಸರಿ ಅನಸಂಗಿಲ್ಲಾ, ಅದರಾಗ ನೀವ mobileನಾಗ massager ಬ್ಯಾರೆ ಇಟ್ಟಿರಿ ಹಿಂಗಾಗಿ ಅದನ್ನ ಉಪಯೋಗಿಸಲಿಕ್ಕೆ ಬರಂಗಿಲ್ಲಾ, ನಮಗ ಹಾಳಿನ ಬರೊಬ್ಬರಿ” ಅಂದೆ.
ನಾ ಹೇಳಿದ್ದಕ್ಕೆಲ್ಲಾ ಮತ್ತ ಆ ideaದವರ what an idea sirji ಅನ್ಕೋತ ಇದ್ದರು. ನಾ ಹಂಗ ಮುಂದವರದ
“ಇನ್ನ ನಾವ ನಿಮ್ಮ adಪ್ರಕಾರ ನಮ್ಮ ಹೆಸರ ಬದ್ಲಿ ಮೊಬೈಲ್ ನಂಬರ ಹೇಳ್ಕೋತ ಒಡ್ಯಾಡಲಿಕ್ಕೆ ಬರಂಗಿಲ್ಲಾ, ಹಂಗೇನರ ನಾಳೆ ನಾ ನಮ್ಮ ಮನಿ ಮುಂದ ಶ್ರಿ.9379101596 ಅಂತ ಬೊರ್ಡ ಹಾಕ್ಕೋಂಡರ, ನಾ ಹತ್ತಂಕಿ ಲಾಟರಿ ಆಡ್ತೇನಿ ಇಲ್ಲಾ ಓ.ಸಿ.ನಂಬರ ಬರಿಸಿಗೋತಿನಿ ಅಂತ ಪೋಲಿಸರ ಹಿಡದ ನನಗ ಒದ್ದ ಒಳಗ ಹಾಕತಾರ. ಹಿಂಗಾಗಿ ನಾವ ಯಾರು ನಂಬರ ಹಿಡದ ಮಾತಾಡಂಗಿಲ್ಲಾ, ಹೆಸರ ಹಿಡದ ಮಾತಾಡೋರು”.
“ಅದರಾಗ ಇತ್ತೀಚಿಗೆ ನಿಮ್ಮ idea mobile ನಾಗಿಂದ ad ನೋಡಿ “ಕಿತಾಬ ಸೇ ಪಡನಾ old idea” ಅಂತ ಮಕ್ಕಳ ಸಾಲಿ ಪುಸ್ತಕ ಒಯ್ದ ರದ್ದಿಗೆ ಹಾಕಿ mobile ಕೊಡಸಂತ ಗಂಟ ಬಿದ್ದಾರ, ಇನ್ನ ಕೆಲವೊಬ್ಬರು ಕೆಲಸಾ-ಬೊಗಸಿ ಬಿಟ್ಟ ಮೊಬೈಲನಾಗಿನ share marketನಾಗ ಜೂಜಾಟ ಆಡಕೋತ ಮನ್ಯಾಗ ಕೂತಾರ. ಆಮ್ಯಾಲೆ ನೀವು ಮೊಬೈಲ ನಾಗ lie detector ಇಟ್ಟು ನಮ್ಮ ಸಂಸಾರ ಹಾಳ ಮಾಡಲಿಕತ್ತೀರಿ. ಯಾಕಂದರ ಸಂಸಾರ ಅಂದ ಮ್ಯಾಲೆ ಗಂಡಾ ಹೆಂಡತಿಗೆ ಸುಳ್ಳ ಹೇಳ ಬೇಕಾಗ್ತದ, ಅಂದ್ರ ಛಂದಾಗಿ ನಮ್ಮ ಸಂಸಾರ ನಡೇಯೋದು. ಹಂತಾದರಾಗ ಮಾತ ಮಾತಿಗೆ ಹೆಂಡತಿ ‘ಖರೆ ಹೇಳರಿ’ ಅಂತ mobile ಗಂಡನ ಬಾಯಿಗೆ ಹಿಡದರ, ಗಂಡಾ ಖರೆ ಹೇಳಿ ಬಾಯಿ-ಬಾಯಿ ಬಡ್ಕೋಳದ ಸೈ. ಇದಂತೂ life change ಮಾಡೋ idea ಅಲ್ಲಾ, wife change ಮಾಡಸೋ idea”.
“ಆಮ್ಯಾಲೆ ಇನ್ನೋಂದ ಭಾಳ important ಅಂದರ ನೀವು ಮೊದ್ಲ an idea can change your life ಅಂದ್ರಿ, ಜನಾ ಅದನ್ನ ನಂಬಿ ತೊಗಂಡ್ರು, ಆದರ ನಮ್ಮ life ಏನ್ change ಆಗಲಿಲ್ಲಾ. ಈಗ an idea can change your after life ಅನ್ನಲಿಕತ್ತೀರಿ. ಅಲ್ಲಾ ನಿಮ್ಮ idea ಜೀವಂತ ಇದ್ದಾಗ life ಚೇಂಜ್ ಮಾಡಲಿಲ್ಲಾ. ಇನ್ನ ಸತ್ತ ಮ್ಯಾಲೆ ಅಂತೂ life ತನ್ನತಾನ change ಆಗೇ ಆಗ್ತದ, ಅದನ್ನ ನೀವೇನ ತಲಿ ಮಾಡ್ತೀರಿ?”
“ಹಿಂಗಾಗಿ ನಮ್ಗೇಲ್ಲಾ ನಿಮ್ಮ deadly idea ಬಗಿಹರೆಯಂಗಿಲ್ಲಾ, ಛಂದಾಗಿ ಒಬ್ಬರಿಗೊಬ್ಬರು mobileನಾಗ ಮಾತಡಲಿಕ್ಕೆ ಒಂದ lively idea ತೊಗಂಡ ಬರ್ರಿ ಹೋಗರಿ” ಅಂತ ಹೇಳಿ ಕಳಸಿದೆ.
ಅವರ ನನ್ನ ಮಾತಷ್ಟು ಕೇಳಿ ಮತ್ತ what at an idea…..ಅಂದವರು ತಡವರಿಸಿಕೊಂಡ “ಅವನೌನ ಏನ ಹೇಳಿದಿಲೇ” ಅಂತ ಅಂದ ಹೋದರು.

 

This entry was posted on Saturday, August 25th, 2012 at 6:39 am and is filed under ಹಾಳ ಹರಟೆ,ವಿಜಯ ಕರ್ನಾಟಕ ಅಂಕಣ. You can follow any responses to this entry through the RSS 2.0 feed. You can leave a response, or trackback from your own site.

Post a Comment