googleನಾಗ ಗಂಡನ್ನ್ ಯಾಕ ಹುಡಕ್ತಿ ?

ನಿನ್ನೆ ನನ್ನ ಹೆಂಡತಿ ಮಗಗ “google ಅಂದ್ರ ಏನ ಬೊಗಳಲೇ?” ಅಂತ ಒದರಲಿಕತ್ತಿದ್ಲು, ಅಂವಾ ಅವರವ್ವಗ ಗೂಗಲ್ ಅಂದ್ರ ತಿಳಿಯೋದು ಅಷ್ಟರಾಗ ಅಂತ ಇಂಟರನೆಟ್..ಇಂಟರನೆಟ್ವಾ ಅಂತ ಹೇಳಲಿಕತ್ತಿದ್ದಾ, ಆದ್ರು ಆಕಿ ಮತ್ತ ಮತ್ತ “ಗೂಗಲ್ ಅಂದ್ರ ಯಾರು, ಏನು?” ಅಂತ ಗಂಟ ಬಿದ್ದಿದ್ಲು.
“ಲೇ, ಆ ಗೂಗಲ್ ತೊಗಂಡ ನೀ ಏನ ಮಾಡ್ತೀ, ನಿಂಗ್ಯಾಕ ಬೇಕ” ಅಂತ ನಾ ಕೇಳಿದೆ,
“ಇಲ್ಲರಿ, ಸಾಲ್ಯಾಗ ನಿಮ್ಮಗನ ಟೀಚರ ‘ನಿಮ್ಮ ಮಗಾ ಎಲ್ಲಾ ಗೂಗಲ್ ನೋಡಿ ಹೋಮ್ ವರ್ಕ್ ಮಾಡ್ತಾನ ಸ್ವಂತ ಬುದ್ಧಿನಾ ಇಲ್ಲಾ’ ಅಂತ ಹೇಳ್ಯಾರ ಅದಕ್ಕ ನಾ ಕೇಳಲಿಕತ್ತೇನಿ” ಅಂದ್ಲು.
ನಾನ ನನ್ನ ಮಗಗ ‘ನಿನಗೇನರ ತಿಳಿಲಿಲ್ಲಾಂದ್ರ ನೀ ಗೂಗಲನಾಗ ನೋಡಿ ಬರಿಲೇ,ನಿಮ್ಮವ್ವನ ಕೇಳಿ ತಪ್ಪ-ತಪ್ಪ ಬರಿಬ್ಯಾಡ ‘ ಅಂತ ಹೇಳಿದ್ದೆ. ಈಗ ಇಕಿ ಮಗಗ ‘ಗೂಗಲ್ ಅಂದ್ರ ಯಾರು’ ಅಂತ ಬೆನ್ನ ಹತ್ಯಾಳ. ಏನ್ಮಾಡ್ತೀರಿ?
ಅವನೌನ ನಾ ಲಗ್ನಾ ಮಾಡ್ಕೋಬೇಕಾರ ಗೂಗಲ ಸರ್ಚ್ ಮಾಡಿ ಒಂದ ಛಲೊ ಕಲತಿದ್ದ ಹುಡಗಿ ಮಾಡ್ಕೊಳ್ಳಲಾರದ ಲೋಕಲ್ ಸರ್ಚ್ ಮಾಡಿ ಮಾಡ್ಕೋಂಡಿದ್ದರ ಹಣೇಬರಹ.
ನಾ ಒಂದ ಸ್ವಲ್ಪ ಸಮಾಧಾನ ತೊಗೊಂಡ. ಎಷ್ಟಂದರೂ ನನ್ನ ಹೆಂಡತಿ, ಇನ್ನ ಮ್ಯಾಲೆ ಶಾಣ್ಯಾಕಿ ಆದರು ತಪ್ಪೇನಿಲ್ಲಾ ಅಂತ ಗೂಗಲ್ ಬಗ್ಗೆ ತಿಳಿಸಿ ಹೇಳಿದೆ. ಅದರಾಗ ಏನ ಹುಡಕಿದರು ಅದರ ಬಗ್ಗೆ ಡಿಟೇಲ್ಸ ಸಿಗತದ ಅಂದ ಕೂಡಲೇನ ನನ್ನ ಹೆಂಡತಿ ಅಗದಿ ಖುಶ್ ಆಗಿ ‘ಎಲ್ಲೆ ? ತೋರಸ್ರಿ’ ಅಂತ ಲ್ಯಾಪಟಾಪ್ ತೊಗಂಡ ಬಂದ್ಲು.
ಅಕಿಗೆ ಗೂಗಲ್ ಒಪನ ಮಾಡಿ “ನಿಂಗ ಏನ್ಬೇಕ ಅದನ್ನ ಅಲ್ಲೇ ಸರ್ಚ್ ಬಾರ್ ಒಳಗ ಟೈಪ್ ಮಾಡ” ಅಂದೆ.
ಅಕಿ ಒಂದ ಎರಡ ನಿಮಿಷ ಬಿಟ್ಟ ಒಮ್ಮಿಂದೊಮ್ಮಿಲೆ “ರ್ರಿ, ಏನ್ ಕರೆಕ್ಟ ಸಜೆಸ್ಟ್ ಮಾಡ್ತದರೀ ಇದು ನಿಮ್ಮ ಬಗ್ಗೆ” ಅಂತ ಚೀರಿದ್ಲು, ಏ ಹಂತಾದ ಏನ ನೋಡಿದಲೇ ಇಕಿ ನನ್ನ ಬಗ್ಗೆ ಅಂತ ನೋಡಿದರ, ಇಕಿ my husband is ಅಂತ ಟೈಪ ಮಾಡ್ಯಾಳ, ಅದಕ್ಕ ಗೂಗಲ್ ಇಕಿಗೆ my husband – is angry with me, is not handsome, is momma’s boy, is boring ಅಂತ ಒಂದ ನಾಲ್ಕ ಸಜೆಶನ್ಸ್ ಕೊಟ್ಟದ, ಅದನ್ನ ನೋಡಿ ಈಕಿ ಫುಲ್ ಖುಶ್ ಆಗಿ ಬಿಟ್ಟಾಳ. ಪುಣ್ಯಾಕ ಲಾಸ್ಟ ಆಪ್ಶನದಾಗ my husband is gay ಅಂತ ಇದ್ದಿದ್ದ ಇಕಿಗೆ ತಿಳಿದಿದ್ದಿಲ್ಲಾ.
“ಲೇ, ನಿನ್ನೌನ ಬಾಜೂಕ ಗಂಡನ್ನ ಇಟಗೊಂಡ ಗೂಗಲನಾಗ ಯಾಕ ಹುಡಕ್ತಿ, ನಾ ನಿನ್ನ ಬಗ್ಗೆ ಸರ್ಚ್ ಮಾಡಿ ತೋರಸ್ಲೆನ” ಅಂತ ನಾ wife is ಅಂತ ಟೈಪ ಮಾಡಿದೆ, ಅದು wife is – physically abusive, never happy, a gangster, calling ring tone ಅಂತ ನಾಲ್ಕ ಸಜೆಶನ್ಸ್ ತೊರಸ್ತ, “ನೋಡ ಈಗ ಅದ ನಿನ್ನ ಬಗ್ಗೆ ಹೆಂಗ ತೋರಸ್ತದ?” ಅಂದೆ. ಅಕಿ ಗಂಟ ಮಾರಿ ಹಾಕ್ಕೊಂಡ ಈ ಸರತೆ my son is ಅಂತ ಟೈಪ್ ಮಾಡಿದ್ಲು, ಅದಕ್ಕ ಅದು ಅಕಿಗೆ my son is -very thin, not eating, not interested in studies ಅಂತ ತೋರಿಸಿ, ಲಾಸ್ಟ optionದಾಗ my son is not my son ಅಂತ ತೋರಸ್ತು, ಅದನ್ನ ನೋಡಿ ಇಕಿ
“ಇದೇನ ಸುಡಗಾಡ ಗೂಗಲ್ರಿ, ನನ್ನ ಮಗಾ ನನ್ನ ಮಗನ ಅಲ್ಲಾ ಅಂತ ಹೇಳ್ತದ, ನೀವ ಖರೇ ಹೇಳರಿ ಇಂವಾ ಯಾರ ಮಗಾ” ಅಂದ್ಲು “ಲೇ, ಹಡದಕಿ ನೀನ, ನೀ ಹೇಳಲೇ ಹುಚ್ಚಿ, ನಿನಗ ಏನರ ನೋಡಂದರ ಏನರ ನೋಡತಿ, ನಿನ್ನ ಬುದ್ಧಿನ ಅಷ್ಟ, ಎಲ್ಲರ ಅದನ್ನ ನೋಡಿ ಸಂಸಾರ ಹಾಳ ಮಾಡ್ಕೋಂಡಿ, ಸಾಕ ಮುಗಸಿನ್ನ ಆ ಗೂಗಲ್ ಸರ್ಚ್” ಅಂದೆ.
” ಯಾರ್ರಿ ಈ ಗೂಗಲ್ ಹಡದವರು, ಏನೇನರ ಅಸಂಯ್ಯ ಅಸಂಯ್ಯ ತೋರಸ್ತದ” ಅಂದ್ಲು.
“ನಿನ್ನ ಹಂತಾವರ ಯಾರರ ಹಡದಿರಬೇಕ ತೊಗೊ, ಅದನ್ನ ತೊಗೊಂಡ ಏನ ಮಾಡ್ತೀ” ಅಂತ ತಲಿ ಕೆಟ್ಟ ಲ್ಯಾಪಟಾಪ್ ಬಂದ ಮಾಡಿದೆ.
ಹಂಗ ನನ್ನ ಹೆಂಡತಿ ಗೂಗಲನಾಗ ನೋಡಿದ್ದ ಸುಳ್ಳಲ್ಲಾ, ಬೇಕಾರ ನೀವು ಸರ್ಚ್ ಮಾಡಿ ನೋಡರಿ. ನೀವು ಏನ ಟೈಪ ಮಾಡ್ತೀರಬೇಕಾರು ಅದ ನಿಮಗ ಹುಚ್ಚುಚಾಕಾರ ಒಂದ ನಾಲ್ಕ ಸಜೆಶನ್ಸ ಕೊಟ್ಟ ಬಿಡತದ.
ಅನ್ನಂಗ ನಾಡದ ನಾಲ್ಕನೇ ತಾರೀಖಿಗೆ ಗೂಗಲದ ಹುಟ್ಟು ಹಬ್ಬ, ವಿಶ್ ಮಾಡೋದ ಮರಿಬ್ಯಾಡರಿ. ಅದಿಲ್ಲಾಂದ್ರ ನಮ್ಮ ತಲ್ಯಾಗಿನ ಮೆದುಳು ಓಡಂಗಿಲ್ಲಾ.

 

 

This entry was posted on Thursday, September 27th, 2012 at 5:33 am and is filed under ಹಾಳ ಹರಟೆ,ವಿಜಯ ಕರ್ನಾಟಕ ಅಂಕಣ. You can follow any responses to this entry through the RSS 2.0 feed. You can leave a response, or trackback from your own site.

Post a Comment