ಇದೇನ ಫೇಸಬುಕ್ಕೊ, ಬಸ್ ಸ್ಟ್ಯಾಂಡ್ ಗೋಡಿನೋ

ಏನ ಜನಾಪಾss, ಆ ಫೇಸಬುಕ್ ಬಂದಾಗಿಂದ ಅದರಾಗ ಸಂಬಂಧ ಇರಲಿ ಬಿಡಲಿ ತಮ್ಮ ತಲ್ಯಾಗ ಬಂದಿದ್ದೇಲ್ಲಾ ಬರಿತಾರ, ಅಲ್ಲಾ ಬರೀತಾರ ಅಂತಾರ ಅನ್ನೋದಕಿಂತಾ ಗೀಚತಾರ ಅನ್ನೋದ ಕರೆಕ್ಟ ಅನಸ್ತದ. ಅಲ್ಲಾ ಹಂಗ ತಾವ ಬರದರ ಬರ್ಕೊವಳ್ಳರಾಕ ಆದರ ಅದನ್ನ ಮತ್ತ ಒಂದ ಹತ್ತ ಮಂದಿಗೆ ಟ್ಯಾಗ ಮಾಡ್ತಾರ. ಇಲ್ಲೆ ನಮ್ಮ ಜೀವನನ ನಮಗ ವಜ್ಜ ಆಗಿರ್ತದ ಹಂತಾದರಾಗ ಮಂದಿ ಟ್ಯಾಗ ಕಟಗೊಂಡ ಫೇಸಬುಕ್ ತುಂಬ ನಮ್ಮ ಪ್ರೊಫೈಲ ತಿರಗತಿರತದ.
ಅಲ್ಲಾ ಜನಾ ಏನೇನ ಹಾಕೋತಾರ ಫೇಸಬುಕ್ಕಿನಾಗ ಅಂತೇನಿ.
ಒಬ್ಬೊಂವ ಅವರಪ್ಪನ ಹೆಣದ ಮುಂದ ನಿಂತ ಸೆಲ್ಫಿ ಫೋಟೊ ಹೊಡ್ಕೊಂಡ ’ನಮ್ಮಪ್ಪ ಸತ್ತಾ, ಅವನ ಆತ್ಮಕ್ಕ ಶಾಂತಿ ಕೋರರಿ’ ಅಂತ ಬರಕೊತಾನ, ಮತ್ತೊಬ್ಬಂವ ಹೆಣಾ ಹೊರದನ್ನ ಸೆಲ್ಫಿ ಹೊಡ್ಕೊಂಡ ಫೇಸಬುಕ್ಕಿನಾಗ ಹಾಕಿರ್ತಾನ ಮತ್ತ ಯಾರೊ ತನ್ನ ಹೆಂಡ್ತಿದ ಇವತ್ತ ಮನ್ಯಾಗ ಕಳ್ಳ ಕುಬಸಾ ಮಾಡಿದರು ಅಂತ ಅಕಿಗೆ ಉಡಿ ತುಂಬೊದ ಫೋಟೊ ಹಾಕೋತಾನ. ಅಲ್ಲಾ ಕಳ್ಳಾ ಕುಬಸಾ ಅನ್ನೋದ ಆಜು-ಬಾಜು ಮನಿಯವರಿಗೆ ಗೊತ್ತಾಗಲಾರದಂಗ ತವರಮನಿಯವರ ಇಷ್ಟ ಗಪ್-ಚುಪ್ ಬಂದ ಮಾಡಿ ಹೋಗ್ತಾರ ಈ ಮಗಗ ಎಲ್ಲೆ ಗೊತ್ತ ಸಂಪ್ರದಾಯ, ಅಂವಾ ಸೀದಾ ಫೇಸಬುಕ್ಕಿನಾಗ ಹಾಕಿ ಊರ ಮಂದಿ ತನ್ನ ಹೆಂಡ್ತಿಗೆ ವಿಶ್ ಮಾಡೊ ಹಂಗ ಮಾಡ್ಕೋತಾನ.
ಮನ್ನೆ ಒಬ್ಬಂವಾ ಹೆಂಡ್ತಿ ಹಡಿಲಿಕ್ಕೆ ಡಿಲೇವರಿ ರೂಮಿಗೆ ಹೋಗೊಕಿಂತ ಮುಂಚೆ ಒಂದ ಫೋಟೊ ಹೊಡದ ಆಮ್ಯಾಲೆ ಹಡದ ಬಂದ ಮ್ಯಾಲೆ ಆ ಕೂಸಿನ ಜೊತಿ ಮಲ್ಕೊಂಡಿದ್ದ ಫೋಟೊ ಹಾಕಿ before, after ಅಂತ ಬರಕೊಂಡಿದ್ದಾ. ಪಾಪಾ ಆ ಬಾಣಂತಿ ಮಾರಿ ಮ್ಯಾಲೆರ ಸಿಜರಿನದ್ದ ಹೊಲಿಗೆ ಎದ್ದ ಕಾಣ್ತಿದ್ದವು ಇಲ್ಲೆ ಗಂಡಗ ನೋಡಿದರ ಫೇಸಬುಕನಾಗ ಅಪಡೇಟ್ ಮಾಡೊ ಚಟಾ. ಏನೊ ನಮ್ಮ ಪುಣ್ಯಾ ಇವಂಗ ಏನರ ಒಳಗ ಆಪರೇಶನ್ ಥೆಟರನಾಗ ಬಿಟ್ಟಿದ್ದರ ಅಕಿ ಸಿಜರಿನ್ ಮಾಡಿದ್ದ ಫೋಟೊ ಹೊಡದ ’blessed with baby boy, wife had seizerin’ ಅಂತ ಅಪಡೇಟ್ ಮಾಡೊ ಮಕ್ಕಳು ಇದ್ದಾರ.
ಮೊನ್ನೆ ಒಬ್ಬರ ರಾತ್ರಿ ನೈಟ ಡ್ಯೂಟಿ ಮುಗಿಸಿಕೊಂಡ ಬರಬೇಕಾರ ಗಾಡಿ ಸ್ಕಿಟ್ ಆಗಿ ಬಿದ್ದ ಕೈಮುರ್ಕೊಂಡ ಅದಕ್ಕೊಂದ ಪ್ಲಾಸ್ಟರ ಹಾಕಿಸಿಕೊಂಡ ಸೆಲ್ಫಿ ಹೊಡ್ಕೊಂಡ ಫೇಸಬುಕ್ಕಿಗೆ ಅಪಡೇಟ್ ಮಾಡಿ ’ನಿಮ್ಮ ದಯೆಯಿಂದ ನಾನು ಭಾರಿ ಅಪಘಾತದಿಂದ ಪಾರಾದೇ, ಕೈಗೆ ಚಿಕ್ಕ ಹೇರಲೈನ್ ಕ್ರ್ಯಾಕ ಆಗಿದೆ, ನಿಮ್ಮ ಶುಭಕೋರಿಕೆಗಳಿಗೆ ನಾನು ಋಣಿ’ಅಂತ ಬರ್ಕೊಂಡಿದ್ದರು. ಅಲ್ಲಾ ಹಂಗ ರಾತ್ರಿ ಬರಬೇಕಾರ ಗಾಡಿ ಮ್ಯಾಲೆ ಫೇಸಬುಕ್ ನೋಟಿಫಿಕೇಶನ್ ನೋಡಲಿಕ್ಕೆ ಹೋಗಿ ಬಿದ್ದ ಕೈ ಮುರ್ಕೊಂಡ ಮುಂಜಾನೆ ಅನ್ನೋದರಾಗ ಪ್ಲಾಸ್ಟರ ಹಾಕ್ಕೊಂಡ ಫೋಟೊ ಹೊಡ್ಕೊಂಡ ಅಪಲೋಡ್ ಮಾಡಿದರ ಇಲ್ಲೆ ಮಂದಿ ದಯಾ ಎಲ್ಲಿದ ಬಂತ, ಅವರ ಶುಭಕೋರಿಕೆ ಎಲ್ಲೆ ಬಂದ್ವು ಅಂತೇನಿ.
ನಮ್ಮ ದೋಸ್ತ ಒಬ್ಬವಂತೂ ತಿಂಗಳದಾಗ ಮೂರ ಸರತೆ ’ರಕ್ತ ದಾನ- ಶ್ರೇಷ್ಟ ದಾನ, ನಿನ್ನೆ ರಕ್ತ ದಾನ ಮಾಡಿದೆ’ ಅಂತ ರಕ್ತಾ ಕೊಡೊದನ್ನ ಫೋಟೊ ಹೊಡಸಿಸಿ ಅಪಲೋಡ ಮಾಡ್ತಾನ. ಅಲ್ಲಾ ಹಂಗ ರಕ್ತಾ ದಾನ ಮಾಡೋದ ಪೂಣ್ಯಾದ್ದ ಕೆಲಸ ಆದರು ಇಂವಾ ಹೆಂಗ ತಿಂಗಳದಾಗ ಮೂರ ಮೂರ ಸರತೆ ರಕ್ತಾ ಕೊಡ್ತಾನ ಅಂತ ಮೊನ್ನೆ ಒಂದ ಪ್ರವೈಟ ಮೆಸೆಜ್ ಒಳಗ ’ನಿನ್ನ ಬ್ಲ್ಯಾಡರ ಒಳಗ ಯೂರಿನ್ ಜೊತಿ ರಕ್ತನೂ ಕಲೆಕ್ಟ ಆಗ್ತದ ಏನಪಾ, ತಿಂಗಳಿಗೆ ಮೂರ ಮೂರ ಸರತೆ ರಕ್ತಾ ಕೊಡ್ತಿಯಲಾ’ ಅಂತ ಕೇಳಿದರ. ’ಸರ್. ಜನರಿಗೆ ರಕ್ತಾ ಕೊಡಲಿಕ್ಕೆ encourage ಮಾಡಲಿಕ್ಕೆ ಹಂಗ ಹಾಕ್ಕೊಂಡಿರ್ತೇನರಿ’ ಅಂತ ಅಂದಾ. ಏನ್ಮಾಡ್ತೀರಿ? ದೊಡ್ಡಿಸ್ತನಾ ಬಡಿಲಿಕ್ಕೆ ಈ ಮಂದಿಗೆ ಫೇಸಬುಕ್ಕ್ ಒಂದ ಕಡಮಿ ಆಗಿತ್ತ ಇಷ್ಟ. ಇನ್ನ ಫೇಸಬುಕ್ಕಿನಾಗ ಇರೋ ನಮ್ಮಂತಾ ಜನಾನು ಅಷ್ಟ ಶಾಣ್ಯಾ ಇರ್ತೇವಿ, ಒಂದು ನೆನಪ ಇರಂಗಿಲ್ಲಾ ಏನಿಲ್ಲಾ, ಸುಮ್ಮನ ಎಲ್ಲಾದಕ್ಕೂ ಲೈಕ್ ಮಾಡೋದು ಕಮೆಂಟ್ ಮಾಡೋದ. ಫೇಸಬುಕ್ ಮೆಮರಿ ಅನ್ನೋದ ನನ್ನ ಪ್ರಕಾರ shortest memory ಅನಸ್ತದ.
ಸತ್ಯನಾರಯಣನ ಪೂಜಾ ಮಾಡಿದರು ಫೋಟೊ ಹಾಕ್ತಾರ, ಅಜ್ಜನ ಶ್ರಾದ್ಧಾ ಮಾಡಿದರು ಫೋಟೊ ಹಾಕ್ತಾರ. ಅವರಜ್ಜ ಜೀವಂತ ಇದ್ದಾಗ ಒಂದ ದಿವಸ ಛಂದ ಮಾತಾಡಸ್ಲಾರದವರು ಸತ್ತ ಮ್ಯಾಲೆ ಅಜ್ಜನ ಫೋಟೊ ಹಾಕಿ ನಮ್ಮಜ್ಜ ಹಂಗ ಇದ್ದಾ ಹಿಂಗಾ ಇದ್ದಾ ಅಂತ ಬರಿತಾರ. ಅಲ್ಲೆ ಮನ್ಯಾಗಿನ ಗೊಡೆ ಮ್ಯಾಲಿನ ಅವರ ಅಜ್ಜನ ಫೋಟೊಕ್ಕ ಧೂಳ ಹೊಡಿಯೊರಗತಿ ಇರಂಗಿಲ್ಲಾ ಇಲ್ಲಾ ಇಲ್ಲೆ ಅವರಜ್ಜನ ಫೋಟೊದ ಸಾಫ್ಟ ಕಾಪಿ ಟ್ರೇಂಡಿಂಗ್ ಆಗ್ತಿರ್ತದ.
ಅಲ್ಲಾ ಒಟ್ಟ ಒಂದ ಮಾತಿನಾಗ ಹೇಳಬೇಕಂದರ ಫೇಸಬುಕ್ ಅನ್ನೋದ ಒಂಥರಾ ಹಳೇ ಬಸ್ಟ್ಯಾಂಡದ ಹಿಂದಿನ ಕಂಪೌಂಡಿನ ಗ್ವಾಡಿ ಆದಂಗ ಆಗೇದ ಊರ ಮಂದಿ ಬಂದ ಎಲ್ಲಾ ಅಲ್ಲೇ ತಮ್ಮ ಮನಸ್ಸಿಗೆ ಬಂದಂಗ ಬರದ ಹೋಗ್ತಾರ ಅನಸಲಿಕತ್ತದ.
ಆಮ್ಯಾಲೆ ಹಿಂತಾ ವಿಷಯ ಫೇಸಬುಕ್ಕಿನಾಗ ಚರ್ಚೆ ಆಗಂಗಿಲ್ಲಾ ಅಂತ ಇಲ್ಲಾ ಮತ್ತ. ಜಗತ್ತಿನಾಗಿನ ಎಲ್ಲಾ ವಿಷಯಕ್ಕು ಒಂದ ಮೂರು ಅಕ್ಕಿ ಕಾಳ ಫೇಸಬುಕ್ಕಿನಾಗ ಬಿದ್ದ ಬಿಳ್ತಾವ. ಇದರಾಗ freedom of expressionಗೆ ಏನ ಕಡಿಮಿ ಇಲ್ಲಾ, ಯಾರ ಬೇಕಾದವರ ಯಾರ ಬೇಕಾದವರ ಬಗ್ಗೆ ಲಿಂಗ-ಜಾತಿ-ಭೇದ-ಭಾವ ಮರತ ಮಾತಡಬಹುದು.
ಅಲ್ಲಾ ನಾ ಹೇಳಿದ್ದ ಖರೇ ಅನಸಿದರ ಖರೇ ಅನ್ನರಿ ಸುಳ್ಳ ಅನಸಿದರ ಸುಳ್ಳ ಅನ್ನರಿ. ಹಂಗ ನಾನೂ ಈ ಸುಡಗಾಡ ಫೇಸಬುಕ್ಕಿನಾಗ ಇದ್ದೇನಿ, ನಾನೂ ಒಬ್ಬೊಂವ ಹಂತಾವನ ಬೇಕಾರ ನಂಗ ನೀವು ಫಾಲೋ ಮಾಡ್ರಿ ಅಂದರ ನಾ ಏನೇನ ಹುಚ್ಚುಚಾಕಾರ ಮಾಡ್ತೇನಿ ಫೇಸಬುಕ್ಕಿನಾಗ ಅಂತ ಗೊತ್ತಾಗತದ

This entry was posted on Wednesday, March 29th, 2017 at 6:31 am and is filed under ಹಾಸ್ಯ ಲೇಖನಗಳು. You can follow any responses to this entry through the RSS 2.0 feed. You can leave a response, or trackback from your own site.

Post a Comment