ಈ ಸರತೆ ಕಾಶಿಗೆ ಹೋದಾಗ ಏನ ಬಿಟ್ಟ ಬಂದಿ?

ನಮ್ಮ ಭಾಗಿರಥಿ ಮಾಮಿಗೆ ವರ್ಷಾ ಕಾಶಿಗೆ ಹೋಗೊ ಚಟಾ ಇತ್ತ. ಹಂಗ ಯಾರರ ’ನಾವ ಕಾಶಿಗೆ ಹೊಂಟೇವಿ, ನೀವ ಹೆಂಗಿದ್ದರೂ ಒಂದ ಸರತೆ ಬಿಟ್ಟ ಹತ್ತ ಸರತೆ ಹೋಗಿ ಬಂದವರ ಇದ್ದೀರಿ ನಮ್ಮ ಜೋಡಿನೂ ಬರ್ತಿರೇನ’ ಅಂತ ಕರದರ ಸಾಕ ರೈಟ ಅಂತ ಕಚ್ಚಿ ಏರಸೇ ಬಿಡ್ತಿದ್ಲು. ಪಾಪ ಗಂಡಂದ ಪೆನ್ಶನ್ ರೊಕ್ಕಾ ಪೂರ್ತಿ ಕಾಶಿ, ಬದರಿ, ರಾಮೇಶ್ವರಕ್ಕ ಹೋಗಿ ಹೋಗಿನ ಖಾಲಿ ಆಗಲಿಕತ್ತಿತ್ತ ಅಂದರೂ ಅಡ್ಡಿಯಿಲ್ಲಾ. ಹಂಗ ಅಕಿ ಕಾಶಿಗೆ ಹೋಗಬೇಕಾರ ಒಮ್ಮೆ ನಮ್ಮ ಮನಿಗೆ ಬಂದ ’ಸಿಂಧು, ನೀ ಅವಲಕ್ಕಿ ಭಾಳ ಛಲೊ ಹಚ್ಚತಿವಾ, ಒಂದ ಐದ ಕೆ.ಜಿ ಅವಲಕ್ಕಿ ಹಚ್ಚಿ ಕೊಡು, ಪುಣ್ಯಾದ್ದ ಕೆಲಸಾ ಒಲ್ಲೇ ಅನಬ್ಯಾಡ’ ಅಂತ ನಮ್ಮ ಮನಿಗೆ ಬಂದ ಒಂದ ಹೊತ್ತ ಊಟಾ ಹೊಡದ ಅವಲಕ್ಕಿ ಹಚ್ಚಿಸಿಗೊಂಡ ಹೋಗೊಕಿ, ಇನ್ನ ಅಕಿ ಪುಣ್ಯಾದ್ದ ಕೆಲಸ ಅಂದದ್ದಕ್ಕ ಆ ಐದ ಕೆ.ಜಿ. ಅವಲಕ್ಕಿ ರೊಕ್ಕಾ ನಮ್ಮ ಅಕೌಂಟಗೆ ಆ ಮಾತ ಬ್ಯಾರೆ.
ಹಂಗ ಈ ಭಾಗಿರಥಿ ಮಾಮಿ ನಮ್ಮವ್ವಗ ದೂರಿಂದ ಮಾಮಿ ಆಗ್ಬೇಕ, ಎಲ್ಲಾರೂ ಅಕಿಗೆ ಮಾಮಿ ಮಾಮಿ ಅನ್ನೋದಕ್ಕ ನಾನು ಮಾಮಿ ಮಾಮಿ ಅಂತ ಕರಿತಿದ್ದೆ. ನಾ ಅಕಿಗೆ ಒಂದ ಸರತೆ
’ಎಷ್ಟ ಸಲಾ ಅಂತ ಕಾಶಿಗೆ ಹೋಗ್ತಿಯ ನಮ್ಮವ್ವಾ, ವಯಸ್ಸಾತ ಸುಮ್ಮನ ರಾಮ ರಾಮಾ ಅಂತ ಮನ್ಯಾಗ ಇರಬಾರದ’ ಅಂತ ಅಂದರ
’ಅಯ್ಯ ನಮ್ಮ ಕೈಕಾಲ ಗಟ್ಟಿ ಇರೋತನಕಾ ಹೋಗೊದಪಾ ಆಮ್ಯಾಲಿಂದ ಇದ್ದಲ್ಲೇ ಕೈಮುಗದ ಶಿವಾ ಶಿವಾ ಅಂತ ಹೋಗೊದು, ನಾ ಏನ ನನ್ನ ಮಕ್ಕಳಿಗೆ ತ್ರಾಸ ಕೊಟ್ಟ ಕಾಡಿ ಬೇಡಿ ರೊಕ್ಕಾ ಇಸ್ಗೊಂಡ ಹೋಗಂಗಿಲ್ಲಾ ಏನಿಲ್ಲಾ, ನನ್ನ ಗಂಡಂದ ಸೆಂಟ್ರಲ್ ಗವರ್ನಮೆಂಟ್ ಪೆನ್ಶನ್ ಬರತದ ಅದರಾಗ ಹೋಗಿ ಬರ್ತೇನಿ’ಅನ್ನೋಕಿ. ಹಂಗ ಅಕಿಗೆ ಕಾಶಿಗೆ ಹೋಗಲಿಕ್ಕೆ ಬ್ಯಾಸರ ಆಗದಿದ್ದರು ನಮಗ ಅವಲಕ್ಕಿ ಹಚ್ಚಿಕೊಟ್ಟ ಹಚ್ಚಿಕೊಟ್ಟ ಬ್ಯಾಸರ ಆಗಿ ಬಿಟ್ಟಿತ್ತ. ಒಮ್ಮೊಮ್ಮೆ ಅಂತೂ ಗಂಡ ನಾವ ಹೊದವರ್ಷನರ ಹೋಗಿ ಬಂದೇವಿ ಇದೊಂದ ವರ್ಷ ಗ್ಯಾಪ ಮಾಡೋಣು ಅಂದರ ಅಕಿ ಗಂಡನ್ನ ಬಿಟ್ಟ ಒಬ್ಬೊಕಿನ ಹೊಗಲಿಕ್ಕೂ ರೆಡಿ ಇರ್ತಿದ್ದಳು. ಅಲ್ಲಾ ಪುಣ್ಯಾದ್ದ ಕೆಲಸ ಬಿಡ್ರಿ, ತಮ್ಮ ರೊಕ್ಕದ್ದಲೇ ತಾ ಹೋಕ್ತಾಳ ನಾ ಯಾಕ ಅಂದ ಕೆಟ್ಟ ಆಗ್ಬೇಕ ಆದ್ರೂ ಮಾತ ಹೇಳ್ತೇನಿ.
ಹಂಗ ನಾನೂ ನಮ್ಮ ಅವ್ವಾ ಅಪ್ಪಗ ಕಾಶಿಗೆ ಕಳಸ್ಬೇಕಿತ್ತು, ಆದರ ಏನ್ಮಾಡೋದ ನಮ್ಮಪ್ಪನ ಆರೋಗ್ಯ ಸ್ವಲ್ಪ ಪ್ರಾಬ್ಲೇಮ್ ಆಗಿದ್ದಕ್ಕ ವಯಸ್ಸ ಇದ್ದಾಗ ಕಳಸಲಿಕ್ಕೆ ಆಗಲಿಲ್ಲಾ, ಈಗಂತೂ ಇಬ್ಬರಿಗೂ ವಯಸ್ಸಾಗೇವ ಹಿಂಗಾಗಿ ಇಲ್ಲೇ ಕಾಶೀ ವಿಶ್ವನಾಥಗ ಮುಗದ ಕೈಮುಗದ ಕೈತೊಳ್ಕೊಂಡ ಬಿಟ್ಟಾರ. ನಮ್ಮವ್ವ ವರ್ಷಾ ನಮ್ಮ ಭಾಗಿರಥೀ ಮಾಮಿಗೆ ನೂರ ರೂಪಾಯಿ ಕೊಟ್ಟ ಕಾಶೀ ವಿಶ್ವನಾಥಗ ಹಾಕವಾ ಅಂತ ಕೊಟ್ಟ ಅಕಿ ತಂದ ಕೊಟ್ಟಿದ್ದ ಪ್ರಸಾದ ತಿಂದ ಫ್ರೇಶ್ ಗಂಗಾ ಗಿಂಡಿ ತರಿಸಿ ತರಿಸಿ ಇಟಗೋತಾಳ, ಹಂಗ ನಮ್ಮ ಮಾಮಿ ಒಂದನೇ ಸರತೆ ತಂದ ಕೊಟ್ಟಿದ್ದ ಗಂಗಾಜಲದ ಗಿಂಡಿದ ತಿರಗಿ ಡೇಟ್ ಬಾರ್ ಆಗಿದ್ದರೂ ಆಗಿರಬಹುದು. ಏನೋ ಒಬ್ಬೊಬ್ಬರಿಗೆ ಒಂದೊಂದ ಚಟಾ ಅಂತಾರಲಾ ಹಂಗ ನಮ್ಮವ್ವಗ ಗಂಗಾಜಲದ ಗಿಂಡಿ ಜಮಾಯಿಸು ಚಟಾ.
ಇನ್ನ ಕಾಶಿಗೆ ಹೋದಾಗ ಎಲ್ಲಾರೂ ತಿನ್ನೊ ವಸ್ತುಗಳ ಒಳಗ ತಮಗ ಯಾವದ ಭಾಳ ಸೇರತದ ಅದನ್ನ ಬಿಟ್ಟ ಬರಬೇಕ ಅಂತ ಪದ್ಧತಿ ಅದ ಅಂತ. ಹಂಗ ನಮ್ಮ ಮಾಮಿಗೆ ಹಿಂತಾದ ಸೇರಂಗಿಲ್ಲಾ ಅಂತ ಇದ್ದಿದ್ದಿಲ್ಲಾ, ಪಾಪ ಅಕಿಗೆ ಏನ ಬಿಟ್ಟಬರಬೇಕು ಕಾಶಿಗೆ ಹೋದರ ಅಂತ ಭಾಳ ಟೇನ್ಶನ್ ಆಗಿ ಕಡಿಕೆ ಯಾರೋ ಹೇಳಿದರಂತ ’ಯಾವದ ಭಾಳ ಸೇರತದ ಅದನ್ನ ಬಿಟ್ಟ ಬರಬೇಕು’ ಅಂತ ಅದಕ್ಕ ಅಕಿ ಒಂದನೇ ಸರತೆ ಕಾಶಿಗೆ ಹೋದಾಗ ಬದನಿಕಾಯಿ ಇಡಗಾಯಿ ಪಲ್ಯಾ ಬಿಟ್ಟ ಬಂದಿದ್ಲು. ಮುಂದ ಒಂದ ಎರಡ ತಿಂಗಳ ಹೆಂಗ ಬಾಯಿ ಚಟಾ ತಡ್ಕೊಂಡಿದ್ಲು ಆದರ ಒಂದ ಸರತೆ ತಡ್ಕೊಳಿಕ್ಕೆ ಆಗಲಾರದ ಸೊಸಿ ಕಡೆ ಬದನಿಕಾಯಿ ಭಜಿ ಮಾಡಿಸ್ಗೊಂಡ ತಿಂದ ಬಿಟ್ಲು. ಆ ಸೊಸಿ ಬದ್ನಿಕಾಯಿ ಭಜಿ ಮಾಡೊತನಕ ಮಾಡಿಕೊಟ್ಟ ಆಮ್ಯಾಲೆ ’ಅಲ್ರಿ ಅತ್ಯಾ ನೀವು ಬದ್ನಿಕಾಯಿ ಕಾಶಿ ಹೋದಾಗ ಬಿಟ್ಟ ಬಂದೀರಿ, ಅದರ ಭಜಿ ತಿಂದ ಬಿಟ್ಟರಿ ಅಲ್ಲರಿ’ ಅಂತ ಟಾಂಟ್ ಹೊಡಿಲಿಕ್ಕೆ ಶುರು ಮಾಡಿದ್ಲು. ’ಏ, ಹೋಗ ನಮ್ಮವ್ವಾ ನಾ ಬರೇ ಬದ್ನಿಕಾಯಿ ಇಡಗಾಯಿ ಪಲ್ಲ್ಯಾ ಬಿಟ್ಟ ಬಂದೇನಿ, ಇಡೀ ಬದನಿಕಾಯಿ ಏನ ಬಿಟ್ಟ ಬಂದಿಲ್ಲಾ’ ಅಂತ ಇಕಿ ವಾದಸಿದ್ದ ವಾದಸಿದ್ದ. ಹಂಗ ಬದನಿಕಾಯಿ ಪಲ್ಲ್ಯಾ, ಬದನಿಕಾಯಿ ಚಟ್ನಿ ಅಂತ ಬಿಡಲಿಕ್ಕೆ ಬರಂಗಿಲ್ಲಾ, ಬಿಟ್ಟರ ಪೂರ್ತಿ ಬದನಿಕಾಯಿನ ಬಿಡಬೇಕು ಎಷ್ಟ ಮಂದಿ ತಿಳಿಸಿ ಹೇಳಿದರು ಅಕಿ ಏನ ಕೇಳಲಿಲ್ಲಾ, ಕಡಿಕೆ ತಲಿಕೆಟ್ಟ ಆತ ತೊಗೊ ಹಂಗರ ಮುಂದಿನ ಸರತೆ ಹೋದಾಗ ಸಿರಿಯಸ್ ಆಗಿ ಬ್ಯಾರೆ ಏನರ ಬಿಟ್ಟ ಬರ್ತೇನಿ ಅಂತ ಭಡಾ ಭಡಾ ಒಪನ್ ಆಗಿ ’ಬೆಂಗನ್ ಕಾ ಭರ್ತಾ’ ತಿನ್ನಲಿಕ್ಕೆ ಶುರು ಮಾಡಿದ್ಲು.
ಈ ಎಪಿಸೋಡ್ ಅಕಿ ಪ್ರತಿ ಸರತೆ ಕಾಶಿಗೆ ಹೋಗಿ ಬಂದಾಗೊಮ್ಮೆ ಇರ್ತಿತ್ತ. ಹಂತಾದರಾಗ ನಮ್ಮವ್ವ ಸುಮ್ಮನ ಕೂಡಬೇಕೊ ಬ್ಯಾಡೋ ಒಂದ ಸರತೆ ’ಗಂಡ ಏನ ಕಾಶಿಗೆ ಹೋದಾಗ ಬಿಟ್ಟ ಬಂದಿರ್ತಾನ ಅದನ್ನ ಹೆಂಡ್ತಿನೂ ಬಿಟ್ಟ ಬಂದಂಗ ಹಿಂಗಾಗಿ ಗಂಡ ಬಿಟ್ಟ ಬಂದಿದ್ದನ್ನೂ ಹೆಂಡ್ತಿ ತಿನ್ನಬಾರದೂ,ಅಂದರಿಷ್ಟ ಪುಣ್ಯಾ ಬರ್ತದ’ ಅಂತ ಒಂದ ಬಾಂಬ್ ಹಾಕಿ ಬಿಟ್ಟಿದ್ಲು. ಅಕಿ ತಲಿ ಕೆಟ್ಟ ನಮ್ಮವ್ವಗ ಜೋರ್ ಮಾಡಿ ’ನೀ ಏನ್ ಕಾಶಿ ಕಂಡಿಲ್ಲಾ, ಏನಿಲ್ಲಾ ನಂಗ ಪದ್ಧತಿ ಹೇಳ್ತಿ ಏನ್’ ಅಂತ ಜೋರ್ ಮಾಡಿ ಕಡಿಕೆ ಗಂಡಗ ’ಮುಂದಿನ ಸರತೆ ಹೋದಾಗ ಇಬ್ಬರೂ ಒಂದ ಬಿಟ್ಟ ಬರೋಣು ಅಂತ ಕಂಡಿಶನ್ ಮಾಡಿದ್ಲು.
ನಮ್ಮ ಪೈಕಿ ಬಳಗದಾಗೇಲ್ಲಾ ಹಿಂಗಾ ಆಗಿತ್ತ ಅಂದರ ಭಾಗಿರಥಿ ಮಾಮಿ ಕಾಶಿಗೆ ಹೋಗಿ ಬಂದಾಗೊಮ್ಮೆ ಈ ಸರತೆ ಏನ ಬಿಟ್ಟ ಬಂದಿ ಅಂತ ಅಕಿಗೆ ಕಾಡಸಿದ್ದ ಕಾಡಸಿದ್ದ. ಹಂಗ ಖರೇನ ಅಕಿ ಸಿರಿಯಸ್ ಆಗಿ ಹೋದಾಗೊಮ್ಮೆ ಒಂದೊಂದ ಬಿಟಕೊಂಡ ಬಂದಿದ್ದರ ಪಾಪ ಇವತ್ತ ಉಪವಾಸ ಇರಬೇಕಾಗ್ತಿತ್ತ, ಅಷ್ಟ ಸರತೆ ಕಾಶಿಗೆ ಹೋಗಿ ಬಂದಾಳ ನಮ್ಮ ಮಾಮಿ. ಪ್ರತಿ ಸರತೆ ಅಕಿ ಕಾಶಿಗೆ ಹೋಗಬೇಕಾರ ಅಕಿಗೆ ಮಂದಿ ಕೇಳೋರ ಕೇಳೋರ ’ಈ ಸರತೆ ಏನ ಬಿಟ್ಟ ಬರತಿ ಕಾಶಿ ಒಳಗ’ ಅಂತ….
….ಪಾಪ ಮೊನ್ನೆ ಮೂರ ವರ್ಷದ ಹಿಂದ ಕಾಶಿಗೆ ಹೋದಾಗ ಭಾಗಿರಥಿ ಮಾಮಿ ತನ್ನ ಗಂಡನ್ನ ಬಿಟ್ಟ ಬಂದ ಬಿಟ್ಟಳು.
ಅದೇನ ಆತ ಅಂದರ ಇಬ್ಬರು ಛಂದಾಗಿ ಕಾಶಿ ಒಳಗ ಹಿರೇಮನಷ್ಯಾರದೇಲ್ಲಾ ಶ್ರಾದ್ಧ ಮಾಡಿ ಮುಂದ ತಂಬದು ಮಾಡ್ಕೊಂಡ ಬಿಟ್ಟಿದ್ದರು. ಯಾಕ ಅಂದರ ಅವರಿಗೆ ಗೊತ್ತ ಇತ್ತ ನಾಳೆ ಇವರ ಇಲ್ಲದ್ದ ಕಾಲಕ್ಕ ಮುಂದ ಮಕ್ಕಳೇನ ಇವರದ ಶ್ರಾದ್ಧಾ ಮಾಡೋರಲ್ಲಾ, ಈಗ ಇದ್ದಾಗ ಛಂದಾಗಿ ನೋಡೊರಲ್ಲಾ, ಇನ್ನ ಸತ್ತ ಮ್ಯಾಲೆ ಏನ ತಲಿ ಮಾಡ್ತಾವ ಅಂತ ಗ್ಯಾರಂಟೀ ಇತ್ತ. ಅಲ್ಲಿಂದ ಬರಬೇಕಾರ ಬದರಿಗೆ ಹೋದರು, ಅಲ್ಲೇ ನೆರೆ ಹಾವಳಿ ಬಂದು ಭಾಗಿರಥಿ ಬಾಯಿ ಗಂಡ ಹೋಗಿ ಬಿಟ್ಟರು. ಪಾಪ ಭಾಗಿರಥಿ ’ನಮ್ಮ ಮನಿಯವರದ ಪುಣ್ಯಾದ ಸಾವು, ಬದರಿ ನಾರಾಯಣ ಕರಕೊಂಡ’ ಅಂತ ಒಂದ ವಾಪಸ ಬಂತ. ಪ್ರತಿ ಸರತೆದ ಗತೆ ಯಾರೂ ಅಕಿಗೆ ಈ ಸರತೆ ಕಾಶಿ ಒಳಗ ಏನ ಬಿಟ್ಟ ಬಂದಿ ಅಂತ ಕೇಳದಿದ್ದರೂ ತಾನ ’ ಈ ಸರತೆ ಕಾಶಿಗೆ ಹೋಗಿ ಗಂಡಗ ಬಿಟ್ಟ ಬಂದೇ’ ಅಂತ ಪಾಪ ಹಳಹಳಸ್ತಾಳ.

This entry was posted on Monday, April 3rd, 2017 at 3:45 am and is filed under ಹಾಸ್ಯ ಲೇಖನಗಳು. You can follow any responses to this entry through the RSS 2.0 feed. You can leave a response, or trackback from your own site.

Post a Comment