ಡ್ರಿಂಕ್ & ಡ್ರೈವ with ಹೆಲ್ಮೇಟ್

ನಂಗ ಈ ಪೋಲಿಸರ ಸಂಬಂಧ ಸಾಕ ಸಾಕಾಗಿ ಬಿಟ್ಟದ. ಇವರ ಯಾವಾಗ ಹೆಲ್ಮೆಟ್ ಹಾಕ್ಕೊಂಡಿಲ್ಲಾ ಅಂತ ಹಿಡಿತಾರ ಯಾವಾಗ ಡ್ರಿಂಕ್ & ಡ್ರೈವ ಅಂತ ಹಿಡಿತಾರ ಒಂದು ಗೊತ್ತಾಗಂಗಿಲ್ಲಾ. ತಮಗ ಮನಸ ಬಂದಾಗ ಹಿಡಿತಾರ ಮನಸ ಬಂದಾಗ ಬಿಡ್ತಾರ. ಹಂಗ ಮಂಥ್ ಎಂಡಿಂಗ್ ಇದ್ದಾಗ, ಪೆನಾಲ್ಟಿ ಟಾರ್ಗೇಟ್ ಕೊಟ್ಟಾಗ ಕಂಪಲ್ಸರಿ ಹಿಡಿತಾರ ಮತ್ತ.
ಅಲ್ಲಾ, ಮೊದ್ಲs ನಮಗ ತಲಿ ಇರೋದ ಅಷ್ಟರಾಗ ಇನ್ನ ಹಂತಾದರಾಗ ಹೆಲ್ಮೇಟ್ ಹಾಕ್ಕೊಂಡ ಗಾಡಿ ಹೊಡಿ ಅಂದರ ಹೆಂಗ ಅಂತೇನಿ, ಅದರಾಗ ನಾ ಹೆಲ್ಮೇಟ್ ಹಾಕ್ಕೊಂಡರಂತು
’ನೀವು ಬೈಕನಾಗ ಹೊಂಟಾಗ ಗಾಳಿಗೆ ಹಾರಬಾರದಂತ ತಲಿ ಮ್ಯಾಲೆ ಪೇಪರ ವೇಟ್ ಇಟ್ಟಂಗ ಕಾಣ್ತದರಿ’ ಅಂತ ನನ್ನ ಹೆಂಡ್ತಿ ನನಗ ಕಾಡಸ್ತಿರ್ತಾಳ. ಅಲ್ಲಾ ಹಂಗ ಹೆಲ್ಮೇಟ್ ನಮ್ಮ ಸೇಫಟಿ ಸಂಬಂಧ ಇರೋದ ಪಾಪ ಅದರಾಗ ಪೋಲಿಸರದ ಏನ ತಪ್ಪ ಇಲ್ಲ ಖರೆ ಆದರ ಇದನ್ನ ಕಂಪಲ್ಸರಿ ಮಾಡಬಾರದಂತ ನನಗ ಅನಸ್ತದ. ತಲಿ ಇದ್ದೋರ ಹಾಕೋರಿ ಇರ್ಲಾರದವರ ಬಿಡ್ರಿ ಅಂತ ಸುಮ್ಮನ ಬಿಟ್ಟ ಬಿಡಬೇಕ ಅನಸ್ತದ. ಅಲ್ಲಾ ಈಗ ಒಂದ ಸಂಸಾರಕ್ಕ ಎರಡ ಮಕ್ಕಳ ಇರಬೇಕು ಅಂತನೂ ಕಾನೂನ ಮಾಡ್ಯಾರ ಆದರ ಮೂರನೇ ಹಡದರ ಅದಕ್ಕ ಆ ಪೇರೆಂಟ್ಸ್ ಜವಾಬ್ದಾರಿ ಹೆಂಗೋ ಹಂಗ ಹೆಲ್ಮೇಟ ಹಾಕೊ ಅಂತ ಹೇಳ್ರಿ, ಆದರ ಕಂಪಲ್ಸರಿ ಮಾಡಬ್ಯಾಡರಿ ಅನ್ನೋದ ನನ್ನ ವಿಚಾರ
ಇನ್ನ ಈ ಹೆಲ್ಮೇಟದ ಒಂದ ಕಿರಿ ಕಿರಿ ಅನ್ನೋದರಾಗ ಡ್ರಿಂಕ್ & ಡ್ರೈವದ ಒಂದ ರಾತ್ರಿ ಆದಕೂಡಲೇ ದೊಡ್ಡ ಕಿರಿ ಕಿರಿ ಶುರು ಆಗಿ ಬಿಟ್ಟದ. ನಾವ ಅಪರೂಪಕ್ಕೊಮ್ಮೆ ವಾರಕ್ಕ ಒಂದೊ ಎರಡ ಸರತೆ ಹೋಗೊರು ಹಂತಾದರಾಗ ನಾವ ಹೋದ ದಿವಸ ನಮ್ಮನ್ನ ಹಿಡದ ರಸ್ತೇದ ಮ್ಯಾಲೆ ನಿಲ್ಲಿಸಿ ’ಆ.ಆ.ಆssss…’ ಅನ್ನು ಅಂತ ಬಾಯಿ ತಗಸಿಸಿ ಚೆಕ್ ಮಾಡಿ ೨೦೦೦ ಸಾವಿರ ರೂಪಾಯಿ ದಂಡ ಹಾಕ್ತಾರ, ತಿಂದಂಗಲ್ಲಾ ಕುಡದಂಗಲ್ಲಾ ಎರಡ ಸಾವಿರ ರೂಪಾಯಿ ಕೊಡಂದರ ಹೆಂಗ ಅನಸ್ತದ ನೀವ ಹೇಳರಿ. ಅಲ್ಲಾ ಒಂದ ತಿಂಗಳದ ಬಾರ ಬಜೆಟರಿಪಾ ಅದ.
ಹಂಗ ಅತ್ತಲಾಗ ಮನಿಗೆ ಹೋಗೊ ಪುರಸತ್ತ ಇಲ್ಲದ ಹೆಂಡ್ತಿ ’ಯಾಕ ಏನೋ ವಾಸನಿ ಬರಲಿಕತ್ತದಲಾ’ ಅಂತ ಅನ್ನೋದ ನಾವ ’ಇಲ್ಲಾ’ ಅನ್ನೋದು, ಅಕಿ ’ಖರೇ ಹೇಳ್ರಿ’ ಅನ್ನೋದು, ನಾವ ’ನಿನ್ನ ಆಣೆ ಅಂದರು ಇಲ್ಲಾ’ ಅನ್ನೋದು ಎಲ್ಲಾ ಕಾಮನ.
ಆದರೂ ಈ ಹೆಂಡದರ ಹೋದ ಜನ್ಮದಾಗ ಏನ ಆಗಿದ್ದರೋ ಏನೋ ಕಡಿಕೆ ’ಎಲ್ಲೆ..ಆ.ಆ.ಆsss… ಅನ್ನರಿ’ ಅಂತ ಪೋಲಿಸರಗತೆ ನಮ್ಮ ಬಾಯಿ ತಗಿಸಿಸಿ ತಮ್ಮ ಮೂಗ ತುರುಕಿ, ’ನಂಗ ಸುಳ್ಳ ಹೇಳ್ತೇರಿ’ ಅಂತ ಹೆಂಡ್ತಿ ಕಡೆ ಬೈಸಿಗೋಳೊದು ಸಾಕ ಸಾಕಾಗಿ ಬಿಟ್ಟದ.
ಅಲ್ಲಾ,ಆದರೂ ಏನ ಅನ್ನರಿ ಕೆಲವೊಮ್ಮೆ ಪೋಲಿಸರಿಗೆ ಕುಡದ ಮ್ಯಾಲೆ ಮಾಣಿಕಚಂದ ಹಾಕ್ಕೊಂಡ ಬಿಟ್ಟರ ಗೊತ್ತಾಗಂಗಿಲ್ಲಾ ಆದರ ಈ ಹೆಂಡಂದರಿಗೆ ಹೆಂಗ ಗೊತ್ತಾಗತದೋ ಏನೋ ಅಂತೇನಿ..ನಾ ಅಂತೂ ಬೀರ ಕುಡದಾಗ ವಾಸನಿ ಬರಬಾರದ ಅಂತ ಮ್ಯಾಲೆ ಒಂದ ಸಿಕ್ಸ್ಟಿ ವೊಡ್ಕಾ ತೊಗೊಂಡ ಮಾಣಿಕಚಂದ ಹಾಕ್ಕೊಂಡಿರ್ತೇನಿ ಹಂತಾದ ಇಕಿ ನಾ ಬಾಯಿ ತಗದ ’ಆ..ಆ…’ ಅಂದರ ಸಾಕ ’ಕಿಂಗಫಿಶರ್ ಸ್ಟ್ರಾಂಗ್s ಕುಡದೀರಿ, ಗೊತ್ತಾಗಂಗಿಲ್ಲಂತ ತಿಳ್ಕೊಂಡೀರಿ’ ಅಂತ ಅಗದಿ ಕರೆಕ್ಟ ಬ್ರ್ಯಾಂಡ ಹೆಸರ ಹೇಳ್ತಾಳ. ಏನ್ಮಾಡ್ತೀರಿ?
ಅಲ್ಲಾ, ಆದರು ಪೋಲಿಸರು ಹಿಂಗ ತಮಗ ಮನಸ್ಸಿಗೆ ಬಂದಾಗ ಹಿಡಿಯೋದು- ಬಿಡೋದ ಮಾಡ ಬಾರದ ಬಿಡ್ರಿ ಅದಕ್ಕ ನಾ ಮೊನ್ನೆ ಕಮೀಶನರಗೆ ಒಂದ ಲೆಟರ್ ಬರದೇನಿ ಇನ್ನ ಮ್ಯಾಲಿಂದ ನೀವು ಹಿಂತಾ ದಿವಸ ಹೆಲ್ಮೇಟ್ ಸಂಬಂಧ ಹಿಂತಾ ದಿವಸ ಡ್ರಿಂಕ್ & ಡ್ರೈವ ಸಂಬಂಧ ಹಿಂತಿಂತಾ ರೋಡ ಮ್ಯಾಲೆ ಹಿಡಿತೇವಿ ಅಂತ ಒಂದ ದಿವಸ ಮೊದ್ಲ ಪೇಪರನಾಗ ಕೊಟ್ಟ ಬಿಡ್ರಿ ನಮಗ ಟೇನ್ಶನ್ ಇರಂಗಿಲ್ಲಾ ಅಂತ.
ಈಗ ಹೆಂಗ ಪೇಪರನಾಗ ’ಇಂದು ಈ ಕೆಳಗಿನ ವಾರ್ಡುಗಳಿಗೆ ನೀರು ಬಿಡಲಾಗುವದು, ಇಲ್ಲಾ ಇಂದು ಈ ಕೆಳಗಿನ ವಾರ್ಡಗಳಲ್ಲಿ ಕರೆಂಟ ಇರುವದಿಲ್ಲಾ ಅಂತ ಕೊಟ್ಟಿರ್ತಾರಲಾ’ ಹಂಗ ’ಇಂದು ಈ ರೋಡಗಳಲ್ಲಿ ಹಗಲು ಹೊತ್ತಿನಲ್ಲಿ ಹೆಲ್ಮೇಟ ಸಂಬಂಧ ರಾತ್ರಿ ಹೊತ್ತಿನಲ್ಲಿ ಡ್ರಿಂಕ್ & ಡ್ರೈವ ಸಂಬಂಧ್ ಹಿಡಿಯಲಾಗುವದು’ ಅಂತ ಪೇಪರನಾಗ ಕೊಟ್ಟರ ಛಲೋ ಹೌದಲ್ಲ ಮತ್ತ?
ಹಂಗ ಛಲೊ ಅನ್ನೋರ ನನ್ನ ಆರ್ಟಿಕಲ್ ಲೈಕ ಮಾಡಿ ಕಮೆಂಟ್ ಬರದ ಶೇರ ಮಾಡರಿ ಮತ್ತ. ಇದ ಬರೇ ನನ್ನ ಸಂಬಂಧ್ ಇಷ್ಟ ಅಲ್ಲಾ, ನಿಮಗೇಲ್ಲಾ ಅನಕೂಲ ಆಗ್ಲಿ ಅಂತ ನಾ ಹೇಳಿದ್ದ ಮತ್ತ.

This entry was posted on Wednesday, March 29th, 2017 at 6:27 am and is filed under ಹಾಸ್ಯ ಲೇಖನಗಳು. You can follow any responses to this entry through the RSS 2.0 feed. You can leave a response, or trackback from your own site.

Post a Comment