ನಿನ್ನ ಹೆಂಡ್ತಿನ್ನ ಹೆಸರ ಇಡ್ಲಿಕ್ಕೆ ಕಳಸ…..

ಲಗ್ನಾಗಿ ಹನಿಮೂನ ಮುಗದ ಹಿಂಗ ನನ್ನ ಹೆಂಡ್ತಿ ಗಂಡಗ, ಮನಿಗೆ ಹೊಂದಕೊಂಡ್ಲು ಅಂತ ಅನ್ನೋದರಾಗ ಹಗರಕ ಒಂದೊಂದ ಅಕಿವು ಕಿರಿ ಕಿರಿ ಶುರು ಆದ್ವು. ಅಕಿ ಒಂಥರಾ ಎಲ್ಲಾದರಾಗೂ ಪರ್ಟಿಕ್ಯುಲರ್ ಇದ್ದಳು, ಆರ ಗಂಟೇಕ್ಕ ಏಳ ಬೇಕಂದರ ಏಳ ಬೇಕು, ಒಂಬತ್ತುವರಿಗೆ ಮಲ್ಕೋಬೇಕ ಅಂದರ ಮಲ್ಕೋಬೇಕು ಅದ ಬೇಕಾರ ನಿದ್ದಿ ಬಂದಿರ್ಲಿ ಬಿಟ್ಟಿರ್ಲಿ, ಅಲ್ಲಾ ಹಂಗ ಲಗ್ನ ಆದ ಹೊಸ್ತಾಗಿ ಯಾ ಮಗಾ ಒಂಬತ್ತುವರಿಗೆ ಮಲ್ಕೊತಾನ ಆ ಮಾತ ಬ್ಯಾರೆ ಆದರು ಮಾತ ಹೇಳ್ತೇನಿ. ಹಿಂಗ ಇಕಿ ಪ್ರತಿಯೊಂದಕ್ಕೂ ವರಿ ಹಚ್ಚೊಕಿ ನಾವ ನಮ್ಮ ಮನ್ಯಾಗ ನೋಡಿದರ ರಾಜಾನ ಮಕ್ಕಳ ಹಂಗ ಭಾಳ ತಲಿಕೆಡಸಿಗೊಳ್ಳಲಾರದ ತಿಂದ ಉಂಡ ಬೆಳದ ಮಂದಿ. ಇಕಿ ಮಾತ ಮಾತಿಗೆ ನಂಗ ನೀವು ಎಂಟಾದರೂ ಏಳಂಗಿಲ್ಲಾ, ಕ್ಯಾಮಾರಿಲೇ ಚಹಾ ಕುಡಿತಿರಿ ಹಂಗ ಹಿಂಗ ಅಂತ ಒಟ್ಟ ನಾ ಏನ ಮಾಡಿದರು ಹೆಸರ ಇಡಲಿಕ್ಕೆ ಶುರು ಮಾಡಿದ್ಲು. ಅಲ್ಲಾ ಹುಟ್ಟಿ ೨೭ ವರ್ಷದಿಂದ ಹಿಂಗ ಬದಕ್ಕೋತ ಬಂದೊಂಗ ಹೆಂಡ್ತಿ ಬಂದ ಎರಡ ತಿಂಗಳದಾಗ ಚೇಂಜ್ ಆಗ ಅಂದರ ಹೆಂಗ ಅಂತೇನಿ ಅದಕ್ಕೂ ಟೈಮ ಬೇಕಲಾ, ಅದರಾಗ ನಾ ಅಂತೂ ಮಂದಿ ’ಮಗಾ ಹೆಂಡ್ತಿ ಬಂದ ಮ್ಯಾಲೆ ಚೆಂಜ್ ಆಗ್ಯಾನ ನೋಡ’ ಅಂದ ಗಿಂದಾರ ಅಂತ ಲಗ್ನ ಆಗೋಕಿಂತಾ ಮುಂಚೇನ ’ನಾ ಮದುವಿ ಆದ ಮ್ಯಾಲೆ ಚೇಂಜ್ ಆಗಬಾರದು’ ಅಂತ ಡಿಸೈಡ್ ಮಾಡಿ ಬಿಟ್ಟಿದ್ದೆ. ಹಿಂಗಾಗಿ ಅಕಿ ಏನ ಅಂದರು ನಾ ಮುದ್ದಾಂ ಅದರ ವಿರುದ್ಧ ಮಾಡ್ತಿದ್ದೆ. ಪಾಪ ಹಂಗ ಅಕಿ ಹೇಳಿದ್ದರಾಗ ನನ್ನ ಹಿತಾ ಇದ್ದರೂ ಹೆಂಡ್ತಿ ಹೇಳ್ಯಾಳ ಅನ್ನೋ ಒಂದ ಕಾರಣಕ್ಕ ಅಕಿ ಹೇಳಿದಂಗ ಮಾಡ್ತಿದ್ದಿಲ್ಲಾ.
ನಮ್ಮ ಸಂಸಾರ ಹಿಂಗ ನಡಿಲಿಕ್ಕೆ ಶುರು ಆತು ನನ್ನ ಹೆಂಡ್ತಿದ ಮನ್ಯಾಗ ಎಲ್ಲಾದಕ್ಕೂ ಹೆಸರ ಇಡೊದ ಕಂಟಿನ್ಯೂ ಇತ್ತ. ಹಂಗ ಬರಬರತ ಅಕಿ ಹೆಸರ ಇಡೋದ ವೈಡ ಆಗಿ ಮನಿ ಮಂದಿಗೆಲ್ಲಾ ಸ್ಪ್ರೆಡ್ ಆಗಲಿಕತ್ತ. ಅಕಿ ನಂಗ ಅಲ್ಲದ ನಮ್ಮ ಮನಿ ಮಂದಿದ ತಪ್ಪ ಹುಡಕಿ ಹುಡಕಿ ಹೆಸರ ಇಡಲಿಕ್ಕೆ ಶುರು ಮಾಡಿದ್ಲು. ಅಲ್ಲಾ ಹೊಸ್ತಾಗಿ ಮನಿಗೆ ಬಂದೋಕಿ ಎಲ್ಲಾರದು ಸ್ವಭಾವ ತಿಳ್ಕೊಂಡ ಹೊಂದಕೊಂಡ ಹೋಗಲಿಕ್ಕೆ ಸ್ವಲ್ಪ ಟೈಮ ಹಿಡಿತದ ಅಂತ ನಾನು ನಮ್ಮವ್ವ ಸುಮ್ಮನ ಇದ್ವಿ ಆದರ ಇಕಿದೇನ ಹೆಸರ ಇಡೋ ಚಾಳಿ ಹೋಗೊಹಂಗ ಕಾಣಲಿಲ್ಲಾ.
’ನಿಮ್ಮವ್ವ ಹಿಂಗ ಮಾಡ್ತಾರ, ನಿಮ್ಮವ್ವ ಹಂಗ ಮಾಡ್ತಾರ, ನಿಮ್ಮ ತಂಗಿಗೆ ಇಷ್ಟ ದೊಡ್ಡೊಕಿ ಆದರು ಬುದ್ಧಿ ಇಲ್ಲಾ ಮನ್ಯಾಗಿನ ಒಂದ ಕೆಲಸಾ ಮಾಡಂಗಿಲ್ಲಾ, ನಿಮ್ಮಪ್ಪಾ ವಯಸ್ಸಾತು ರಾಮ ರಾಮ ಅಂತ ಟಿ.ವಿ ಮುಂದ ಕೂಡೋದ ಬಿಟ್ಟ ಎಲ್ಲಾದರೂ ತಲಿ ಹಾಕ್ತಾರ’ ಹಂಗ – ಹಿಂಗ ಅಂತ ಎಲ್ಲಾದಕ್ಕೂ ಹೆಸರ ಇಡಲಿಕತ್ಲು. ಅಲ್ಲಾ ಮನಿ ಮಂದಿಗೆ ಬಿಡ್ರಿ ಮನ್ಯಾಗಿನ ಸಾಮಾನಕ್ಕೂ ಹೆಸರ ಇಡತಿದ್ಲು. ನಿಮ್ಮ ಕುಕ್ಕರ ಸೀಟಿ ಜೋರ ಹೊಡಿತದ, ನಿಮ್ಮ ಮನ್ಯಾಗ ಕರೆಂಟ್ ಗೀಸರ್ ಇಲ್ಲಾ, ನೀವು ರೆಕ್ಸೋನಾ ಯಾಕ ಹಚಗೋತಿರಿ, ನಿಮ್ಮ ಮನ್ಯಾಗ ಏರಿಯಲ್ ತರಂಗಿಲ್ಲಾ, ನಿಮ್ಮ ಮನಿ ಇಳಗಿ ಕುಂಟ್ಯಾಡತದ, ಗ್ರೈಂಡರ ಬ್ಲೇಡ್ ಚೂಪ್ ಇಲ್ಲಾ, ನಿಮ್ಮವ್ವ ಸಾರಿಗೆ ಬೆಲ್ಲಾ ಹಾಕ್ತಾರ, ಭಕ್ಕರಿ ನೆಲದ ಮ್ಯಾಲೆ ಬಡಿತಾರ…ಅಯ್ಯಯ್ಯ ಒಂದ ಎರಡ ಅಕಿ ಹೆಸರ ಇಡೋದ, ಹಿಂತಾದಕ್ಕ ಅಕಿ ಅತ್ತಿ ಮನ್ಯಾಗ ಹೆಸರ ಇಟ್ಟಿಲ್ಲಾ ಅನ್ನೊಹಂಗ ಇಲ್ಲಾ ಮತ್ತ. ಆದರ ಎಲ್ಲಾ ಪೊಸಿಟಿವ್ ಆಗಿ ಅಂತಿದ್ಲು. ಹಂಗ ಅದನ್ನ ಒಂದ ಇಶ್ಯು ಮಾಡಿ ನಾ ತಲಿಕೆಟ್ಟ ಅವ್ವಾ ಅಪ್ಪನ ಬಿಟ್ಟ ಬ್ಯಾರೆ ಮನಿ ಮಾಡೊ ಲೆವಲಗೆ ಏನ ಇರತಿದ್ದಿಲ್ಲಾ. ಒಟ್ಟ ಒಂದ ಮಾತನಾಗ ಹೇಳ್ಬೇಕಂದರ ಅಕಿಗೆ ಎಲ್ಲಾದಕ್ಕೂ ಹೆಸರ ಇಡೊ ಚಟಾ ಇತ್ತ.
ಇನ್ನ ಮನಿ ಮಂದಿ, ಮನ್ಯಾನ ಸಾಮಾನಿಗೆ ಬಿಟ್ಟಿಲ್ಲಾ ಅಂದರ ನಮ್ಮ ಬಳದವರಿಗೆ ಏನ ಬಿಡ್ತಿದ್ದಳ, ನಮ್ಮ ಪೈಕಿ ಮಂದಿಗೆ ಎಲ್ಲಾ ಹೆಸರ ಇಡತಿದ್ದಳು…ನಿಮ್ಮ ಮೌಶಿ ಹಿಂಗ ನಿಮ್ಮ ಅಜ್ಜಿ ಹಂಗ…ನಿಮ್ಮ ಕಾಕಾ ಏನ ಮಾತಾಡ್ತಾರ, ನಿಮ್ಮ ಮಾಮಾ ತಂಬಾಕ ತಿಂತಾರ…ಅಲ್ಲಾ ಇಕಿ ಹಿಂಗ ಎಲ್ಲಾದಕ್ಕೂ ಹೆಸರ ಇಡೋದ ಲಗಭಗ ನಮ್ಮ ಬಳಗದವರಿಗೆ ಎಲ್ಲಾ ಗೊತ್ತಾಗಿ ಬಿಟ್ಟಿತ್ತ. ಮಾಡಿದ್ದ ಒಂದ ಅಡಗಿಯಿಂದ ಹಿಡದ ಭಾಂಡಿ ತಿಕ್ಕೊಕಿ ತನಕ ಎಲ್ಲಾದಕ್ಕೂ ಹೆಸರ ಇಡೋಕಿ.
ಹಂಗ ಮುಂದ ವರ್ಷ ತುಂಬೊದರಾಗ ಒಂದ ಚೂರ ಇಕಿದ ಹೆಸರ ಇಡೊದ ಕಡಮಿ ಆದರೂ ನಮ್ಮ ಬಳಗದಾಗೇಲ್ಲಾ ಪ್ರಶಾಂತನ ಹೆಂಡ್ತಿ ಎಲ್ಲಾದಕ್ಕೂ ಭಾರಿ ಚಂದ ಹೆಸರ ಇಡ್ತಾಳ ಅಂತ ಫೇಮಸ್ ಆಗಿ ಬಿಟ್ಟಿದ್ಲು. ಅದರಾಗ ಇನ್ನೊಂದ ಮಜಾ ಅಂದರ ನಮ್ಮ ಲೋಕಲ್ ಕಜೀನ್ಸ್ ಎಲ್ಲಾ ಗಂಡ ಹುಡುಗರ ಇದ್ದರು ಹಂಗ ಒಂದ ಸ್ವಲ್ಪ ನಮ್ಮ ಬಳಗದಾಗ ಹೆಣ್ಣ ಸಂತಾನ ಕಡಮಿ ಅಂದರು ಅಡ್ಡಿಯಿಲ್ಲಾ ಹಿಂಗಾಗಿ ನಾವು ಮನಿಗೆ ಬಂದ ಸೊಸೆಂದರ ಭಾಳ ಪ್ರೀತಿಲೆ ನೋಡ್ಕೊಳೊ ಖಾಂದನದವರು. ಒಂದ ಸರತೆ ನಮ್ಮ ಅತ್ಯಾನ ಮಗಾ ಒಬ್ಬೊಂವ ಹಡದಾ ಅಂದರ ಅವನ ಹೆಂಡತಿ ಹಡದಿದ್ಲು, ಅವಂಗ ಇಬ್ಬರು ತಮ್ಮಂದರು ಅಕ್ಕ ತಂಗೆಂದರ ಯಾರು ಇದ್ದಿದ್ದಿಲ್ಲಾ ಹಿಂಗಾಗಿ ಅವನ ಕೂಸಿಗೆ ಹೆಸರ ಇಡಲಿಕ್ಕೆ ಒಬ್ಬರ ಬೇಕಾಗಿದ್ದರು. ಆವಾಗ ನಮ್ಮ ಅತ್ಯಾ ಸುಮ್ಮನ ಕೂಡಬೇಕೊ ಬ್ಯಾಡೋ ’ಏ, ಪ್ರಶಾಂತನ ಹೆಂಡ್ತಿನ್ನ ಕರಸರ ಅಕಿ ಹೆಂಗಿದ್ದರು ಎಲ್ಲಾದಕ್ಕೂ ಹೆಸರ ಇಡಲಿಕ್ಕೆ ಶಾಣ್ಯಾಕಿದ್ದಾಳ’ ಅಂತ ಹೇಳಿ ಬಿಟ್ಲು. ಆತ ಮುಂದ ಅಂವಾ ನಮ್ಮ ಮನಿಗೆ ಬಂದ ನಮ್ಮ ಮನ್ಯಾಗ ಯಾರು ಹೆಣ್ಣಮಕ್ಕಳ ಇಲ್ವಾ ನೀನ ನಮ್ಮ ಅಕ್ಕ ಇದ್ದಂಗ ಬಂದ ನನ್ನ ಮಗಗ ಹೆಸರ ಇಟ್ಟ ಹೋಗೊ ಹೆಂಗಿದ್ದರು ಫಂಕ್ಶನ್ ಲೋಕಲ್ ಅದ ಅಂತ ಹೇಳಿ ಹೋದಾ.
ನನ್ನ ಹೆಂಡ್ತಿ ಮೊದ್ಲ ಹಂಗ ನಕರಾ ಮಾಡಿದ್ಲು ಆದರ ಆಮ್ಯಾಲೆ ಎರೆಡು ಕಡೆ ಬೀಗರು ಹೆಸರ ಇಟ್ಟರ ಸೀರಿ ಕೊಡ್ತಾರ ಅಂತ ನಮ್ಮವ್ವಾ ಆಶಾ ತೋರಿಸಿದ ಮ್ಯಾಲೆ ರೆಡಿ ಆದ್ಲು. ಕಡಿಕೆ ಸಂಡೆ ದಿವಸ ಹೋಗಿ ಕೂಸಿಗೆ ಹೆಸರ ಇಟ್ಟ ಸೀರಿ ಇಸ್ಗೊಂಡ ಬಂದ ಆ ಬಂದ ಸೀರಿಗೆ ನೂರಾ ಎಂಟ ಹೆಸರ ಇಟ್ಟಳು.
’ಅಲ್ಲಲೇ…ನೀ ಅವರ ಮನಿ ಕೂಸಿಗೆ ಹೆಸರ ಇಟ್ಟ ಬಂದಿ, ಮತ್ತ ಇನ್ನ ಅವರ ಸೀರಿಗೇನ ತಲಿ ಹೆಸರ ಇಡ್ತಿ, ದಾನಕ್ಕ ಕೊಟ್ಟದ್ದ ಆಕಳದ್ದ ಹಲ್ಲ ಎಣಸ ಬಾರದು ಅಂತಾರ ಹಂಗ ಸುಮ್ಮನ ಪಾಲಿಗೆ ಬಂದದ್ದ ಪಂಚಾಮೃತ ಅಂತ ಇಟಗೊಂಡ ಕೂಡ’ ಅಂತ ನಾ ಜೋರ ಮಾಡಿದ ಮ್ಯಾಲೆ ಸುಮ್ಮನಾದ್ಲು. ಅವತ್ತಿನಿಂದ ಇವತ್ತಿನ ತನಕ ನಮ್ಮ ಪೈಕಿ ಯಾರ ಅಕ್ಕ ತಂಗ್ಯಾರ ಇಲ್ಲದವರ ಹಡದರ ಅಂದರ ಅವರ ಮಕ್ಕಳಿಗೆ ಹೆಸರ ಇಡ್ಲಿಕ್ಕೆ ನನ್ನ ಹೆಂಡ್ತಿ ಕಾಯಮ್ ಸೊದರತ್ತಿ. ಸೀರಿ ಸೋದರತ್ತಿ ಅಂದರೂ ಅಡ್ಡಿಯಿಲ್ಲಾ, ಒಂದ ಸೀರಿ ಕೊಡ್ತೇನಿ ಅಂದರ ಸಾಕ ಹೆಸರ ಇಡ್ಲಿಕ್ಕೆ ಅವರ ನಮಗ ಸಂಬಂಧ ಇರಲಿ ಬಿಡಲಿ ರೆಡಿನ ಇರ್ತಾಳ. ಹಂಗ ಪ್ರತಿ ಸರತೆ ಮನಿಗೆ ಬಂದ ಮ್ಯಾಲೆ ಮತ್ತ ಆ ಸೀರಿಗೆ ಹೆಸರ ಇಡ್ತಾಳ ಆ ಮಾತ ಬ್ಯಾರೆ.
ನೋಡ್ರಿ ಹಂಗ ನಿಮಗ್ಯಾರಿಗರ ಹೆಸರ ಇಡ್ಲಿಕ್ಕೆ ಸೋದರತ್ತಿ ಬೇಕಿತ್ತ ಅಂದರ ಕರೀರಿ ನನ್ನ ಹೆಂಡ್ತಿನ್ನ, ಒಂದ ಸೀರಿ ಕೊಟ್ಟ ಮ್ಯಾಲೆ ಗಾಡಿ ಖರ್ಚ ಕೊಟ್ಟರ ಆತ. ಹಂಗ ಮತ್ತ ನಿಮ್ಮ ಕೂಸಿಗೇನ ತನಗ ಬೇಕಾದ್ದ ಹೆಸರ ಇಡಂಗಿಲ್ಲ ಮತ್ತ, ನೀವ ಹೇಳಿದ್ದ ಹೆಸರ ಇಡ್ತಾಳ ಗಾಬರಿ ಆಗ ಬ್ಯಾಡರಿ.

This entry was posted on Monday, April 3rd, 2017 at 3:47 am and is filed under ಹಾಸ್ಯ ಲೇಖನಗಳು. You can follow any responses to this entry through the RSS 2.0 feed. You can leave a response, or trackback from your own site.

2 Comments

 1. Name says:

  hahaha…..different subject …nice

  ... on July April 3rd, 2017
 2. Name says:

  hahaha….different subjet…nice

  priya dixit

  ... on July April 3rd, 2017

Post a Comment