ರ್ರಿ..ಶನಿ ಗ್ರಹಕ್ಕ ಯಾವಾಗ ಕರಕೊಂಡ ಹೋಗ್ತಾರ

ಮೊನ್ನೆ ಶನಿವಾರದ ದಿವಸ ಮುಂಜ ಮುಂಜಾನೆ ಎದ್ದೋಕಿನ ನನ್ನ ಹೆಂಡ್ತಿ ’ರ್ರೀ ಶನಿ ಗ್ರಹಕ್ಕ ಯಾವಾಗ ಕರಕೊಂಡ ಹೋಗ್ತಾರ?’ಅಂತ ಕೇಳಿದ್ಲು. ನಂಗ ಒಮ್ಮಿಕ್ಕಲೇ ಗಾಬರಿ ಆತು, ಅಲ್ಲಾ ರಾತ್ರಿ ಮಲ್ಕೋಬೇಕಾರ ಹೆಂತಾ ಛಲೊ ’ಗುಡ್ ನೈಟ್, ಸ್ವೀಟ್ ಡ್ರೀಮ್ಸ್’ ಅಂತ ಪಪ್ಪಿ ಕೊಟ್ಟ ಮಲ್ಕೊಂಡಿದ್ಲು ಈಗ ಮುಂಜಾನೆ ಏಳೊದರಾಗ ಏನಾತ ಇಕಿಗೆ ಅನಸ್ತು. ನಾ ಅಕಿ ಮಾರಿ ಒಂದ ಸರೆತೆ ನೋಡಿ
’ಲೇ ಮೊದಲ ಶನಿ ಶಿಂಗಾನಪುರಕ್ಕ ಹೋಗಿ ಬರೋಣಂತ ಆಮ್ಯಾಲೆ ಶನಿ ಗ್ರಹಕ್ಕ ನೀ ಹೋಗಿ ಅಂತಿ. ಅದೇನ ನಿನ್ನ ತವರ ಮನಿ ಅಲ್ಲಾ ಯಾವಾಗ ಬೇಕ ಆವಾಗ ಹೋಗಲಿಕ್ಕೆ’ ಅಂತ ಬೈದ ಸುಮ್ಮನಾಗಿಸಿದೆ.
ಅಲ್ಲಾ, ಇಲ್ಲೇ ನಂಗ ನೋಡಿದರ ಅವ್ವಾ ಅಪ್ಪಗ ಕಾಶಿ- ರಾಮೇಶ್ವರದ ಯಾತ್ರಾ ಮಾಡಸಲಿಕ್ಕೆ ಆಗಲಾರದ ಇಂಟರ್ನೆಟನಾಗ ದರ್ಶನಾ ಮಾಡಿಸಿಸಿ ಕೈಮುಗಿಸಿಸೇನಿ ಹಂತಾದರಾಗ ಇಕಿಗೆ ಶನಿ ಗ್ರಹಕ್ಕ ಕರಕೊಂಡ ಹೋಗಬೇಕಂತ.
ಅಲ್ಲಾ, ಪಾಪ ಹಂಗ ಅಕಿ ಕೇಳಿದ್ದರಾಗೂ ತಪ್ಪೇನಿಲ್ಲಾ ಅನ್ನರಿ, ಹೋದ ಸರತೆ ಮಂಗಳ ಗ್ರಹಕ್ಕ ಹೋಗಲಿಕ್ಕೆ ರಿಜಿಸ್ಟ್ರೇಶನ್ ಮಾಡಸರಿ ಅಂತ ಗಂಟ ಬಿದ್ದಾಗ ನಾನ ಈಗ ಬ್ಯಾಡಾ ಮುಂದ ಶನಿ ಗ್ರಹಕ್ಕ ಕರಕೊಂಡ ಹೋದರ ಆವಾಗ ಕಳಸ್ತೇನಿ, ನಿಂಗ ಶನಿ ಗ್ರಹಕ್ಕ ಕನ್ಸಿಶನ್ ಸಿಕ್ಕರೂ ಸಿಗಬಹುದು ಅಂತ ಸಮಾಧಾನ ಮಾಡಿದ್ದೆ, ಪಾಪ ಅಕಿಗೆ ಈಗ ಅದ ಒಮ್ಮಿಂದೊಮ್ಮಿಲೆ ನೆನಪಾಗಿರಬೇಕ ಅದಕ್ಕ ಎದ್ದ ಕೂಡಲೇನ ಶನಿ ಗ್ರಹಕ್ಕ ಯಾವಾಗ ಕರಕೊಂಡ ಹೋಗ್ತಾರ ಅಂತ ಕೇಳಿದ್ಲು.
ಅಲ್ಲಾ ಹೋದ ಸರತೆ ಮಂಗಳ ಗ್ರಹಕ್ಕ ಹೋಗ್ತೇನಿ ಅಂತ ಹಟಾ ಹಿಡದಾಗ ನಾ ಅಕಿಗೆ ನಿಂದ ರೇಶನ್ ಕಾರ್ಡನಾಗ ಹೆಸರಿಲ್ಲಾ, ನಿಂಗ ಆಧಾರ ಕಾರ್ಡ ಇಲ್ಲಾ, ಬರೇ ಇಲೇಕ್ಷನ್ ಕಾರ್ಡ ಮ್ಯಾಲೆ ಮಂಗಳ ಗ್ರಹಕ್ಕ ಕರಕೊಂಡ ಹೋಗಂಗಿಲ್ಲಾ ಅಂತ ತಿಳಿಸಿ ಹೇಳಿದ್ದೆ. ಹಂಗ ನಾ ಮದುವಿ ಆದಮ್ಯಾಲೆ ಒಂದ್ಯಾರಡ ವರ್ಷ ಇಕಿನ್ನ ನೋಡಿ ರೇಶನ್ ಕಾರ್ಡನಾಗ ಹೆಸರ ಹಾಕಿಸಿದರ ಆತು ಅಂತ ಬಿಟ್ಟಿದ್ದ ಬಿಟ್ಟ ಹೋಗಿತ್ತ, ಆಮ್ಯಾಲೆ ಆ ಆಧಾರ ಕಾರ್ಡ ಮಾಡಸಬೇಕಾರ ಸದ್ಯೇಕ ನಂದ ಒಬ್ಬೊಂದ ಇರಲಿ ಬಿಡ ಅಂತ ಅಕಿದ ಮಾಡಸಿದ್ದೇಲಾ. ಹಿಂಗಾಗಿ ಪಾಪ ನಾ ಅಕಿಗೆ ನಿಂದ ಆಧಾರ ಕಾರ್ಡ ಇಲ್ಲಾ, ರೇಶನ್ ಕಾರ್ಡ ಇಲ್ಲಾ ಅಂತ ಮಂಗಳಗ್ರಹಕ್ಕ ಹೋಗೊ ಪ್ಲ್ಯಾನ್ ಠುಸ್ಸ್ ಮಾಡಿದ್ದೆ.
ನಾ ಹಿಂಗ ಮಾತ ಮಾತಿಗೆ ’ನಿನ್ನ ಕಡೆ ಆಧಾರ ಕಾರ್ಡ ಇಲ್ಲಾ, ರೇಶನ್ ಕಾರ್ಡ ಇಲ್ಲಾ’ ಅನ್ನೊದ ಕೇಳಿ ಕೇಳಿ ತಲಿಕೆಟ್ಟ ಮೊನ್ನೆ ಮೊನ್ನೆ ಭಡಾ ಭಡಾ ಹುಡಗರ ಸಾಲಿ ಸೂಟಿ ಆಗೋದ ತಡಾ ಟೌನ ಹಾಲಿಗೆ ಹೋಗಿ ಎರಡನೂರ ರೂಪಾಯಿ ಎಜೆಂಟಗ ರೊಕ್ಕಾ ಬಡದ ಆಧಾರ ಕಾರ್ಡ ಮಾಡಿಸ್ಗೊಂಡ ಬಂದಾಳ ಮ್ಯಾಲೆ ಹೊಸಾ ರೇಶನ್ ಕಾರ್ಡ್ ಫಾರ್ಮ ತೊಗೊಂಡ ಬಂದಾಳ. ಹಿಂಗಾಗಿ ಈಗ ’ ರ್ರಿ ಶನಿ ಗ್ರಹಕ್ಕ ಯಾವಾಗ ಕರಕೊಂಡ ಹೋಗ್ತಾರ’ ಅಂತ ನಂಗ ಗಂಟ ಬಿದ್ದಾಳ. ಏನ್ಮಾಡ್ತೀರಿ?
ಖರೇ ಹೇಳ್ತೇನಿ ಕೆಲವೊಮ್ಮೆ ನಂಗ ಶನಿಗ್ರಹನ್ನ ಕಟಗೊಂಡ ಸಂಸಾರ ಮಾಡಲಿಕತ್ತೇನಿ ಅನಸೊಹಂಗ ಮಾಡಿ ಬಿಡ್ತಾಳ. ಎಲ್ಲಾ ಅವರವರ ಗ್ರಹಗತಿ ಬಿಡ್ರಿ, ನೀವರ ಏನ ಮಾಡ್ತೀರಿ. ನಾ ಬರದಿದ್ದ ಓದಿ ಮಜಾ ತೊಗೊತೀರಿ ಇಷ್ಟ.
ಅನ್ನಂಗ ಆ ಮಂಗಳ ಗ್ರಹಕ್ಕ ಕರಕೊಂಡ ಹೋಗ್ತೇನಿ ಅಂತ ಜಗತ್ತಿನಾಗ ಎಲ್ಲಾ ಕಡೆ ಮಂದಿನ ಸೆಲೆಕ್ಟ ಮಾಡಿ ರೊಕ್ಕಾ ಇಸ್ಗೊಂಡ ದೊಡ್ಡ ಸುದ್ದಿ ಮಾಡಿದ್ರಲ್ಲಾ ಮಾರ್ಸ್ ಒನ್ ನವರು. ಈಗ ಎಲ್ಲೆ ಭಾಳ ಥಂಡಿ ಅದ, ಹಂಗ ಅದ ಹಿಂಗ ಅದ ಇಷ್ಟ ಲಗೂ ಆಗಂಗಿಲ್ಲಾ ಅಂತ ಏನೇನರ ನೆವಾ ತಗದಾರಂತ.
ಕಡಿಕೆ ನಮ್ಮ ಇಂಡಿಯಾದವರ ಒಂದಿಷ್ಟ ಮಂದಿ ಸೆಲೆಕ್ಟ ಆಗಿದ್ದರಲಾ ಅವರ ತಲಿ ಕೆಟ್ಟ ’ನಮಗ ಅದ ರೊಕ್ಕದಾಗ ಕಾಶಿ ಯಾತ್ರಾನರ ಮಾಡಸ ಸದ್ಯೇಕ ಅಂತ ಗಂಟ ಬಿದ್ದಾರಂತ’ ಏನ್ಮಾಡ್ತೀರಿ. ಅಲ್ಲಾ ಅದೇನ ಆಟ ಮಂಗಳ ಗ್ರಹಕ್ಕ ಕರಕೊಂಡ ಹೋಗೊದು ಅಂದರ?
ಇನ್ನೊಂದ ಮಜಾ ಕೇಳ್ರಿ ಇಲ್ಲೆ ಮ್ಯಾಗಿ ಅನ್ನೊ ಬ್ರಿಟನ್ ಹುಡಗಿ ಏನೊ ಮಂಗಳ ಗ್ರಹಕ್ಕ ಹೋಗಿ ಹಡಿಯೋಕಿ ಅಂತ, ಈಗಾಗಲೇ ಅಕಿ ಮಂಗಳ ಗ್ರಹಕ್ಕ ಹೋಗಲಿಕ್ಕೆ ಸೆಲೆಕ್ಟ ಆಗ್ಯಾಳ ಹಿಂಗಾಗಿ ಅಲ್ಲೆ ಹೋಗಿ ತಾನ್ ಫಸ್ಟ ಹಡಿಯೋಕಿ, ಏನ್ಮಾಡ್ತೀರಿ ಹಿಂತಾ ಹೆಣ್ಮಕ್ಕಳಿಗೆ.ಹಂಗ ನನ್ನ ಹೆಂಡತಿಗೆ ಈ ವಿಷಯ ಗೊತ್ತಿಲ್ಲಾ ಇಲ್ಲಾಂದರ ನಾ ಅಕಿದ ಬಾಣಂತನ ಮಾಡಲಿಕ್ಕೆರ ಹೋಗ್ತೇನಿ ಅಂತ ಗಂಟ ಬಿಳ್ತಿದ್ಲು. ಏನೊ ಪುಣ್ಯಾಕ್ಕ ನನ್ನ ಹೆಂಡತಿದ ಆಪರೇಶನ್ ಆಗೇದ ಛಲೊ ಇಲ್ಲಾಂದರ ಆ ಮ್ಯಾಗಿ ಮಂಗಳಗ್ರಹದಾಗ ಹಡದರ ಇಕಿ ಶನಿಗ್ರಹಕ್ಕ ಹಡಿಲಿಕ್ಕೆ ಹೋದರು ಹೋಗ್ತಿದ್ಲು.
ಏನ ಜನಾನೋ ಏನೋ ಒಟ್ಟ ನನ್ನ ಹೆಂಡತಿ ಅಂತು ಅಕಿನ್ನ ಯಾವದರ ಗ್ರಹಕ್ಕ ನಾ ಅಟ್ಟೋತನಕ ನನಗ ನವಗ್ರಹಗಳ ಬೆನ್ನಹತ್ತಿದಂಗ ಬೆನ್ನ್ ಹತ್ತತಾಳ ಅದ ಅಂತೂ ಗ್ಯಾರಂಟಿ.

This entry was posted on Wednesday, March 29th, 2017 at 6:26 am and is filed under ಹಾಸ್ಯ ಲೇಖನಗಳು. You can follow any responses to this entry through the RSS 2.0 feed. You can leave a response, or trackback from your own site.

Post a Comment