ಸೀಜರ್ಸ್ ವೈಫ್ ಮಸ್ಟ ಬಿ ಅಬೊವ್ ಸಸ್ಪಿಸಿಯನ್

ರಾಮ ವನವಾಸ ಮುಗಿಸಿಕೊಂಡ ಪಟ್ಟಾಭಿಷೇಕ ಮಾಡಿಸಿಗೊಂಡ ಸುಖವಾಗಿ ರಾಜ್ಯ ಆಳಲಿಕ್ಕೆ ದಣೇಯಿನ ಶುರು ಮಾಡಿದ್ದಾ, ಎಲ್ಲಾ ಛಲೋ ನಡದಿತ್ತು, ಅವಂಗ ಒಮ್ಮಿಂದೊಮ್ಮಿಲೆ ಏನ ಅನಸ್ತೊ ಯಾಕ ಅನಸ್ತೋ ಏನೋ ನಮ್ಮ ರಾಜ್ಯದಾಗ ಜನಾ ನನ್ನ ಆಡಳಿತದ ಬಗ್ಗೆ ಏನ ಅನ್ನಲಿಕತ್ತಾರ ಅನ್ನೋದ ತಿಳ್ಕೊಂಡರಾತು ಅಂತ ಗೂಡಚಾರರನ ಕಳಸಿದಾ. ಗೂಡಚಾರರ ದೇಶ ಏಲ್ಲಾ ಸುತ್ತಾಡಿ ಬಂದ
’ಹಂಗ ಎಲ್ಲಾರೂ ಖುಶ್ ಇದ್ದಾರ ಆದರ ಒಂದಿಷ್ಟ ಮಂದಿ ಸೀತಾನ ಬಗ್ಗೆನ ಡೌಟ್ ಮಾಡಲಿಕತ್ತಾರ, ರಾವಣ ಅಕಿನ್ನ ಎಬಸಿಗೊಂಡ ಹೋಗಿದ್ದಾ ಹಂತಾಕಿನ ರಾಮ ಅಗದಿ ಸರಳಾಗಿ ಕರಕೊಂಡ ಬಂದ ಪಟ್ಟದ ರಾಣಿ ಮಾಡಿದಾ’ ಅಂತ ಒಂದಿಬ್ಬರ ಮಾತಾಡಲಿಕತ್ತಾರ ಅಂತ ಹೇಳಿದರು.
ರಾಮಗ ಯಾಕೊ ಮನಸ್ಸಿನಾಗ ಸಂಕಟ ಆತ, ಹಂಗ ಅವಂಗ ಮಂದಿ ಹೇಳಿದ್ದು ಖರೇ ಅನಸ್ತ, ಅಂವಾ ಸೀದಾ ಸೀತಾನ್ನ ಮತ್ತ ಕಾಡಿಗೆ ಅಟ್ಟ ಬೇಕು ಅಂತ ಡಿಸೈಡ ಮಾಡಿ ಲಕ್ಷ್ಮಣನ ಕರಸಿ ಸೀತಾನ್ನ ಕಾಡಿಗೆ ಬಿಟ್ಟ ಬಾ ಅಂತ ಹೇಳಿದಾ.
ಲಕ್ಷ್ಮಣಗ ಸಿಟ್ಟ ಬಂತ
’ಇದೇನ ಮಂದಿ ಮಾತ ಕೇಳಿ ಪಾಪ ಆ ಹೆಣ್ಣಮಗಳನ್ನ, ಅದು ಗರ್ಭಿಣಿ ಹೆಣ್ಣ ಮಗಳನ್ನ ಮತ್ತ ಕಾಡಿಗೆ ಕಳಸ್ತಿ, ಮೊನ್ನೆ-ಮೊನ್ನೇನ ಹದಿನಾಲ್ಕ ವರ್ಷ ವನವಾಸ ಮುಗಿಸಿಕೊಂಡ ಬಂದಿದ್ದ ಸಾಕಾಗಿಲ್ಲಾ?ಯಾರ ಮಾತ ಕೇಳಬೇಕು ಯಾರ ಮಾತ ಬಿಡಬೇಕು ಅಂತ ಒಂದ ಸ್ವಲ್ಪರ ವಿಚಾರ ಮಾಡ್ಬೇಕ ರಾಮಾ’ ಅಂತ ಅಂದಾ, ಆದರ ರಾಮ ಅವನ ಮಾತ ಕೇಳಲಿಲ್ಲಾ
’ಲಕ್ಷ್ಮಣಾ, Caesar’s wife must be above suspicion ಅಂತ ಗಾದಿ ಮಾತ ಅದ ಕೇಳಿಯೋ ಇಲ್ಲೊ, The associates of public figures must not even be suspected of wrong doing. ನಾ ರಾಜಾ ಅಂದ ಮ್ಯಾಲೆ ನನ್ನ ಹೆಂಡ್ತಿ ಬಗ್ಗೆ ಹಿಂಗ ಜನಾ ಮಾತಾಡ್ತಾರ ಅಂದರ ನಾ ನನ್ನ ಹೆಂಡತಿ ಜೊತಿ ಹೆಂಗ ಇರಬೇಕ? ನಾ ಹೇಳಿದಷ್ಟ ಕೇಳ, ಅಕಿನ್ನ ನೀ ಸೀದಾ ಕಾಡಿಗೆ ಬಿಟ್ಟ ಬಾ’ ಅಂತ ಕಳಸಿಬಿಟ್ಟಾ. ಪಾಪ ಲಕ್ಷ್ಮಣಗ ಈ ಸೀಸರ್ ಯಾರು ಅಂತ ಕೇಳಲಿಕ್ಕು ರಾಮ ಅವಕಾಶ ಕೊಡಲಿಲ್ಲಾ.
ಈಗ ನೀವು ಕೇಳಬಹುದು
’ಲೇ ಮಗನ, ಸೀತಾ ಮೊದ್ಲೊ ಸೀಸರ್ ಮೊದ್ಲೊ, ನಿಂಗ ಹೆಂಗ ಬೇಕ ಹಂಗ ರಾಮಾಯಣ ಬರೀತಿ ಏನ?’ ಅಂತ. ಹಂಗೇನಿಲ್ಲಾ, ನಾ ರಾಮ ಸೀಸರನ್ ಕೋಟ್ ಮಾಡಿದ್ದಾ ಅಂದರ ಅದ height of secularism ಅನಿಸಿ ಒಂದಿಷ್ಟ ಮಂದಿಗೆ ಲೈಕ ಆಗಬಹುದು ಅನಸ್ತ ಅದಕ್ಕ ರಾಮ ಹಂಗ ಅಂದಾ ಅಂದೆ. ಇನ್ನ ಅಕಸ್ಮಾತ ನಾ ಏನರ ಸೀಸರ್ ತನ್ನ ಹೆಂಡತಿ ಬಿಡಬೇಕಾರ ರಾಮನ್ನ ಕೋಟ್ ಮಾಡಿ rama’s wife must be above suspicion ಅಂತ ಅಂದಿದ್ದಾ ಅಂತ ಬರದಿದ್ದರ ನಾನೂ ಸೀಸರ್ ಇಬ್ಬರು ಕಮ್ಯೂನಲ್ ಆಗ್ತಿದ್ದವಿ.
ಏನ್ಮಾಡಲಿಕ್ಕೆ ಬರಂಗಿಲ್ಲಾ ಇದ ಇವತ್ತ ನಮ್ಮ ದೇಶದ್ದ ಹಣೇಬರಹ. ಇದ್ದ ಇತಿಹಾಸ ಇದ್ದಂಗ ಹೇಳಿದರ ಕಮ್ಯೂನಲ್ ಅಂತಾರ ಅದನ್ನ ತಮ್ಮ ಅನಕೂಲಕ್ಕ ಬದಲಾಯಿಸಿ ತಮಗ ಯಾರಿಗ ಬೇಕ ಅವರಿಗೆ ಪ್ಲೀಸ್ ಮಾಡ್ಕೊಂಡ ಸೆಕ್ಯೂಲರ್ ಅನಿಸಿಗೊತಾರ.
ಅದೇನ ಇರಲಿ ರಾಮ ಸೀಸರನಕಿಂತಾ ಮೊದ್ಲ ಇದ್ದಾ, ಅಂವಾ ಆ ತ್ರೇತಾಯುಗದಾಗ ತನ್ನ ಹೆಂಡ್ತಿ ಮ್ಯಾಲೆ ಅಪವಾದ ಬಂದಾಗ ಎರಡನೇ ವಿಚಾರ ಮಾಡಲಾರದ ಸೀದಾ ಹೆಂಡ್ತಿನ್ನ ಕಾಡಿಗೆ ಅಟ್ಟಿದ್ದಾ, ಇದು ಇತಿಹಾಸ. ಈ ಸೀಸರ್ ಮೊನ್ನೆ ಮೊನ್ನೆ ಬಂದಂವಾ ಆದರೂ ಅವನೂ ಹೆಂಡ್ತಿ ಬಿಡೊದರಾಗ ರಾಮನ ವಿಚಾರದವನ ಇದ್ದಾ, ಹಿಂಗಾಗಿ ಅವನೂ ತನ್ನ ಹೆಂಡ್ತಿ ಮ್ಯಾಲೆ ಅಪವಾದ ಬಂದಾಗ ಸೀದಾ ಅಕಿನ್ನ ಬಿಟ್ಟ ಬಿಟ್ಟಾ.
ಈಗ ವಿಷಯ ಹೆಂಡ್ತಿ ಬಿಡೋದ ಅಲ್ಲಾ, ಇಲ್ಲೆ ನಾ ಹೇಳ್ತೋ ಇರೊ ವಿಷಯ ಏನಪಾ ಅಂದರ ಹೆಂಗ ರಾಮ ಆಗಲಿ ಸೀಸರ್ ಆಗಲಿ ’ರಾಜ, ರಾಣಿ ಆದೋರ ರಾಷ್ಟ್ರದೊಳಗ ಆದರ್ಶ, ನಿಷ್ಕಳಂಕ ವ್ಯಕ್ತಿಯಾಗಿರಬೇಕು, ರಾಜಾನ ಪೈಕಿ ಯಾರಿಗೂ ಅಪವಾದ ಇರಬಾರದು’ ಅಂತ ತಮ್ಮ ಹೆಂಡಂದರ ಮ್ಯಾಲೆ ಅಪವಾದ ಬಂದ ಕೂಡಲೇನ ಕಾಡಿಗೆ ಅಟ್ಟಿದರೋ ಅಂದರ ರಾಜ್ಯ ಭಾರದಿಂದ ದೂರ ಇಟ್ಟರೊ ಹಂಗ ಅಕಸ್ಮಾತ ಇವತ್ತೀನ ನಮ್ಮ ದೇಶದ ರಾಜರು ಅಂದರ ಪ್ರಧಾನಿಗಳು, ಅಧ್ಯಕ್ಷರು ಅಥವಾ ಮುಖ್ಯಮಂತ್ರಿಗಳು ತಮ್ಮ ತಮ್ಮ ಸಂಬಂಧಿಕರು, ಆಪ್ತರು, ಬಾಂಧವರು ಅಕಸ್ಮಾತ ಕಳಂಕಿತ ಇದ್ದಾರ ಅಂದರ ಅವರನ ದೂರ ಇಟ್ಟ ಆಡಳಿತ ಮಾಡ್ತಾರಾ? ಅನ್ನೋದ ನನ್ನ ಪ್ರಶ್ನೆ.
Caesar’s wife must be above suspicion ಅನ್ನೋದನ್ನ ಇವತ್ತಿನ ಆಡಳಿತಗಾರರು ಅನುಸರಸಲಿಕ್ಕೆ ಸಾಧ್ಯನಾ? ಅಲ್ಲಾ ಹಂಗ ಇವರೇನ ಶ್ರೀರಾಮಚಂದ್ರ ಅಲ್ಲಾ, ಸೀಸರನೂ ಅಲ್ಲಾ ಅಂದಮ್ಯಾಲೆ ಇದ ಅವರಿಗೆ ಅಪ್ಲಿಕೇಬಲ್ ಆಗಂಗಿಲ್ಲಾ ಅನಬ್ಯಾಡರಿ ಮತ್ತ.
ಇವತ್ತೀನ ಪ್ರಸ್ತುತ ಭಾರತದ ರಾಜಕಾರಣ ನೋಡಿದರ ನಾವ ರೋಮದ ಸೀಸರನ ಏನ, ನಮ್ಮ ಭರತ ಖಂಡದ ರಾಮನ್ನ, ಅವನ ಆದರ್ಶನ್ನ ಎಲ್ಲಾ ಮರತ ಬಿಟ್ಟೇವಿ. ಇವತ್ತ ಒಬ್ಬ ರಾಜಕಾರಣಿ ಮ್ಯಾಲೇನೂ ಅಪವಾದ ಇಲ್ಲಾ ಅನ್ನೊಹಂಗ ಇಲ್ಲಾ. ಅವನ ಮ್ಯಾಲೆ ಇಂವಾ ಅಪವಾದ ಮಾಡ್ತಾನ ಇವನ ಮ್ಯಾಲೆ ಅಂವಾ ಅಪವಾದ ಮಾಡ್ತಾನ. ಹಂಗ ಇವರೇಲ್ಲಾ ಪ್ರಾಮಾಣಿಕರಾಗಿ Caesar’s wife must be above suspicion ಅಂತ ತಮ್ಮ ಸುತ್ತ-ಮುತ್ತಲ ಇರೋ ಅಪವಾದಿತ ವ್ಯಕ್ತಿಗಳನ್ನ ದೂರ ಇಟ್ಟ ಕಾರ್ಯಭಾರ ಮಾಡಲಿಕ್ಕೆ ಹತ್ತಿದರ ನಮ್ಮ ದೇಶ ರಾಮ ರಾಜ್ಯ ಆಗೋದರಾಗ ದೂರ ಇಲ್ಲಾ.

download
ಅಲ್ಲಾ, ಹಂಗ ನಾ ರಾಮ ರಾಜ್ಯ ಅಂದರ ಅದ ಕಮ್ಯೂನಲ್ ಆಗ್ತದ ಅನಸ್ತಿದ್ದರ ಸೀಸರನ ಸಾಮ್ರಾಜ್ಯ ಅಂತ ಅನ್ಕೋಬಹುದು.
ಹೋಗಲಿ ಬಿಡ್ರಿ, ನಮ್ಮ ದೇಶದ ರಾಜಕಾರಣಿಗಳ ಬಗ್ಗೆ ಎಷ್ಟ ಬರದರು ಅಷ್ಟ. ಈಗ ನಿಮಗೇಲ್ಲಾ ರಾಮ ಯಾಕ ತನ್ನ ಹೆಂಡ್ತಿ ಬಿಟ್ಟಾ ಅನ್ನೋದ ಗೊತ್ತ ಇದ್ದದ್ದ ಅದ, ಅದರ ಬಗ್ಗೆ ಏನ ಹೇಳಂಗಿಲ್ಲಾ ಇನ್ನ ಈ Caesar’s wife must be above suspicion ಅನ್ನೋದ ಯಾಕ ರೂಡಿ ಒಳಗ ಬಂತ ಅನ್ನೋದನ್ನ ಸಂಕ್ಷಿಪ್ತ ಹೇಳ್ತೇನಿ ಕೇಳಿ ಬಿಡರಿ.
ಹಿಂದಕ ೬೨.ಬಿ.ಸಿ ಒಳಗ ರೋಮನ ರಾಜಾ ಜೂಲಿಯಸ್ ಸೀಸರಗ ಪೊಂಪಿಯಾ ಅಂತ ಹೆಂಡ್ತಿ ಇದ್ಲು, ಅಕಿ ಅವನ ಎರಡನೇ ಹೆಂಡತಿ. ಅಕಿ ಒಂದ ಸರತೆ ’ಬೋನಾ ಡಿ’ (ಒಳ್ಳೆಯ ದೇವತೆ) ಅನ್ನೋ ಒಂದ ವೃತಾ ಹಿಡದಿದ್ಲು. ಆ ವೃತದ ಪ್ರಥಾ ಪ್ರಕಾರ ಆ ಪೂಜಾ ಮಾಡಬೇಕಾರ ಪೂಜಾ ಕೋಣಿ ಒಳಗ ಯಾವ ಗಂಡಸರಿಗೂ ಅವಕಾಶ ಇರಲಿಲ್ಲಾ. ಆದರ ಪಬ್ಲಿಯಸ್ ಕ್ಲೋಡಿಯಸ್ ಅನ್ನೋ ಒಬ್ಬ ಯುವಕ ಹೆಣ್ಣಮಕ್ಕಳ ವೇಷ ಹಾಕ್ಕೊಂಡ ಆ ಪೂಜಾ ಕೋಣಿ ಒಳಗ ಹೊಕ್ಕೊಂಡಿದ್ದಾ. ಅವನ ಉದ್ದೇಶ ಪೊಂಪಿಯಾನ್ನ ಭ್ರಷ್ಟಗೊಳಿಸೋದ ಇತ್ತ ( to seduce pompeia). ಅಂವಾ ಮುಂದ ಸೀಸರನ ಕೈಯಾಗ ಸಿಕ್ಕೊಂಡ ಬಿದ್ದಾ, ಅವನ ಮ್ಯಾಲೆ ಆಪಾದನೆ ಬಂದ ಅವನ ಬಂಧಿಸಿದರು. ಆದರ ಸೀಸರ್ ಅವನ ವಿರುದ್ಧ ನ್ಯಾಯಾಧೀಶರಿಗೆ ಯಾವುದೇ ಸಾಕ್ಷಾಧಾರ ಕೊಡಲಿಲ್ಲಾ ಹಿಂಗಾಗಿ ಅವನ ಬಿಡುಗಡೆ ಆತು. ಆದರ ಅಂವಾ ಅವತ್ತ ತನ್ನ ಹೆಂಡತಿ ಪೊಂಪಿಯಾನ ಅಕಿ ಬಗ್ಗೆ ಜನಾ ಮುಂದ ಸಂಶಯ ಮಾಡಬಾರದು ಅಂತ ಬಿಟ್ಟ ಬಿಟ್ಟಾ. ಅವತ್ತಿನಿಂದ ಈ Caesar’s wife must be above suspicion ಅನ್ನೋ ಗಾದಿ ಮಾತ ಚಾಲ್ತಿ ಒಳಗ ಬಂದಿದ್ದ.
ಅಲ್ಲಾ ಆ ಕಾಲನ ಬ್ಯಾರೆ ಈ ಕಾಲನ ಬ್ಯಾರೆ ಬಿಡ್ರಿ. ಹಂಗ ನಾವು ನಮ್ಮಷ್ಟಕ್ಕ ನಾವ ಸೀಸರ ಅಂತ ಅನ್ಕೊಂಡರ ನಮಗ ಹೆಂಡ್ತಿ ಬಿಡಲಿಕ್ಕೆ ಅವನ ಅಪ್ಪನಂತಾ ಕಾರಣ ಸಿಗ್ತಾವ. ಅಲ್ಲಾ ಹಂಗಂತ ಬಿಟಗೋತ ಹೋದರ ನಾವ ಹೊಂತುಟ್ಲೇ ಹೋಗೆ ಬಿಡ್ತೇವಿ ಮತ್ತ. ನಮಗ್ಯಾರಿಗೂ ಇದ್ದ ಹೆಂಡ್ತಿನ್ನ ಬಿಡಲಿಕ್ಕೂ ದಮ್ ಇಲ್ಲಾ ಇನ್ನೊಂದ ಮಾಡ್ಕೋಳಿಕ್ಕೂ ದಮ್ ಇಲ್ಲಾ. ಇನ್ನ ನಮ್ಮ ಮಂದ್ಯಾಗಂತೂ ಕನ್ಯಾನ ಇಲ್ಲಾ.
ಇದೇನೊ ಒಂದ ಗಾದಿ ಮಾತು, ರಾಜ ಮಂದಿಗೆ ಇಷ್ಟ ಅನ್ವಯ ಆಗೋದ, ನಮ್ಮಂಥಾ ಸಾಮಾನ್ಯ ಪ್ರಜೆಗಳಿಗೇನ ಅಲ್ಲಾ, ಹಿಂಗಾಗಿ ನಾವೇನ ಭಾಳ ತಲಿಗೆಡಸಿಗೊಳ್ಳೊದ ಬ್ಯಾಡ.

This entry was posted on Wednesday, November 4th, 2015 at 11:48 am and is filed under ಹಾಸ್ಯ ಲೇಖನಗಳು. You can follow any responses to this entry through the RSS 2.0 feed. Responses are currently closed, but you can trackback from your own site.

Comments are closed.