The world if full of ಅಮ್ಮಗೊಳು….

ನೀವು ಜಾಕಿ ಕಾಲಿನ್ಸಂದ the world is full of divorced women ಮತ್ತ the world is full of married men ಬುಕ್ಕ ಹೆಸರ ಕೇಳಿರಬೇಕಲಾ. ಅದ context ಒಳಗ ನನ್ನ ಆರ್ಟಿಕಲ ಹೆಸರು ’the world is full of ಅಮ್ಮಗೊಳು’.
ಒಂದ ಕಾಲದಾಗ ನಮ್ಮ ಹಾನಗಲ್ಲ ತುಂಬ ಬರೇ ಅಮ್ಮಗೊಳ ಇರತಿದ್ದರಂತ.
ಅಮ್ಮಗೊಳು ಅಂದರ ಮಡಿ ಹೆಂಗಸು, ಗಂಡ ಸತ್ತೋರು, ಸೊಕೇಶಿ. ಇವರು ಗಂಡ ಸತ್ತ ಹತ್ತನೇ ದಿವಸಕ್ಕ ಒಂಥರಾ ಸನ್ಯಾಸ ಜೀವನ ಸ್ವೀಕರಿಸಿ, ಇನ್ನ ನಮಗ ಜೀವನದಾಗ ಯಾವುದೇ ವ್ಯಾಮೊಹ ಇಲ್ಲಾ ಅಂತ ಲೌಕಿಕ ಮೋಹಗಳನ್ನೇಲ್ಲಾ ತ್ಯಾಗ ಮಾಡಿ ತಲಿ ಬೋಳಿಸಿಗೊಂಡ ತಮ್ಮಷ್ಟಕ್ಕ ತಾವ ಮಡೀಲೇ ಬದಕಬೇಕು. ಹಿಂತಾವರೊಳಗ ಕೆಲವೊಬ್ಬರ ಬದುಕು ನರಕಯಾತನೆ ಆಗಿರ್ತಿತ್ತ, ಅವರ ಜೀವನದಾಗ ಕಷ್ಟಪಟ್ಟಷ್ಟ ಬಹುಶಃ ಯಾರು ಪಟ್ಟಿರಲಿಕ್ಕಿಲ್ಲಾ.
ಇನ್ನ ಇವರ ಜೀವನದ ಇನ್ನೊಂದ ಮಗ್ಗಲ ಒಳಗ ಇವರ ವಿಚಿತ್ರ ವಿಚಿತ್ರ ಸ್ವಭಾವ, ಅವರ ಜೀವನದೊಳಗ ನಡಿತಾ ಇದ್ದ ಹಾಸ್ಯ ಸಂದರ್ಭಗಳನ್ನ ಸೇರಿಸಿ ನಾ ಈ ಲೇಖನಾ ಬರದಿದ್ದು. ಇದರೋಳಗ ಯಾರ ಮನಸ್ಸಿಗೂ ಕಸಿವಿಸಿ ಮಾಡೊ ವಿಚಾರ ನಂದ ಅಲ್ಲಾ.
ಹಂಗ ನಾರ್ಮಲ್ಲಾಗಿ ಎಲ್ಲಾ ಅಮ್ಮಗೊಳು ಲೌಕಿಕ ಬಿಟ್ಟ ರಾಮ ರಾಮ ಅಂತ ಇದ್ದರ ನಮ್ಮ ಹಾನಗಲ್ ಅಮ್ಮಗೊಳ ಹಂಗ ಇರಲಿಲ್ಲಾ, ನಮ್ಮ ಹಾನಗಲ್ ’ಮಡಿ ಹೆಂಗಸರ ಪ್ರಪಂಚ’ನ ವಿಚಿತ್ರ ಇತ್ತ. ಅವರ ಮಡೀಲೇ ಒಂದ ಮೂಲ್ಯಾಗ ಇದ್ಲಿ ಒಲಿ ಮ್ಯಾಲೆ ಒಂದ ಅನ್ನಾ ತವಿ ಮಾಡ್ಕೊಂಡ ತಿಂದರು ಮನ್ಯಾಗಿದ್ದ ಉಳದ ಮಂದಿದ ಜೀವಾ ತಿನ್ನೋದ ಬಿಡ್ತಿದ್ದಿಲ್ಲಾ. ಮ್ಯಾಲೆ ಸಾಲದ್ದಕ್ಕ ಊರ ಉಸಾಬರಿ ಬ್ಯಾರೆ, ಮನ್ಯಾಗ ಊರಾಗ ಎಲ್ಲಾದರಾಗು ತಮಗ ಸಂಬಂಧ ಇರಲಿ ಬಿಡಲಿ ಒಂದ ಮೂರ ಅಕ್ಕಿ ಕಾಳ ಹಾಕೋದ ಒಟ್ಟ ಮರಿತಿದ್ದಿಲ್ಲಾ.
ಅಲ್ಲಾ, ಹಂಗ ಹಾನಗಲ್ಲ ತುಂಬ ಅಮ್ಮಗೊಳು ಅಂದರ ಈಡಿ ಹಾನಗಲ್ ತುಂಬ ಏನ ಅಲ್ಲಾ, ನಮ್ಮ ಬ್ರಾಹ್ಮರ ಏರಿಯಾ ತುಂಬ ಅಂತು ಅಮ್ಮಗೊಳ ಇರತಿದ್ದರು. ಮನಿಗೆ ಕನಿಷ್ಟ ಒಂದ ಅಮ್ಮನರ ಮಿನಿಮಮ್ ಇದ್ದ ಇರತಿದ್ದಳು. ಹಂಗ ಯಾರರ ಎರೆಡ-ಮೂರ ಕಟಗೊಂಡ ಬಿಟ್ಟ ಹೋಗಿದ್ದರ ಹಂತಾವರ ಮನ್ಯಾಗ ಎರೆಡ-ಮೂರ ಅಮ್ಮಗಳು ಇರತಿದ್ದರು ಆ ಮಾತ ಬ್ಯಾರೆ. ಇನ್ನ ಆವಾಗಿನ ಕಾಲದಾಗ ಬ್ರಾಹ್ಮರಿಗೆ ತಮ್ಮ ಓಣಿ ತಮ್ಮ ಕೇರಿನ ಅವರ world (ಜಗತ್ತ) ಹಿಂಗಾಗಿ ನಾ ಹೇಳಿದ್ದ the world is full of ಅಮ್ಮಗೊಳು ಅಂತ.
ಅದರಾಗ ಹಾನಗಲ್ಲಾಗ ಅಂತು ಬ್ರಾಹ್ಮರ ಓಣಿ ಅಂದರ ಇತರೆ ಜಾತಿ ಮಂದಿ ಹಾಯಲಿಕ್ಕೆ ಸಹಿತ ಹೆದರತಿದ್ದರಂತ, ಇನ್ನ ನಮ್ಮ ಬ್ರಾಹ್ಮರ ಬ್ಯಾರೆ ಓಣಿಗೆ ಹೋಗಿ ಬಂದರ ಮನಿ ಹೊರಗ ನಿಂತ ಒಂದ ತಂಬಗಿ ನೀರ ಕಾಲಿಗೆ ಹಾಕ್ಕೊಂಡ ಮುಂದ ಅಂಗಳದಾಗ ಕಾಲ ಇಡ್ತಿದ್ದರು. ಅಲ್ಲಾ ನಾ ಹೇಳಲಿಕತ್ತಿದ್ದ ಏನಿಲ್ಲಾಂದರು ಐವತ್ತ ಅರವತ್ತ ವರ್ಷದ ಹಿಂದಿನ ಮಾತ ಬಿಡ್ರಿ, ಹಿಂಗಾಗಿನ ಆವಾಗ ’ಹಾನಗಲ್ಲಾಗ ಹಾಯಿ ಬ್ಯಾಡರಿ, ಸವಣೂರಾಗ ಸಿಗಬ್ಯಾಡರಿ, ಹಾವೇರಿ ಒಳಗ ಸಾಯಿಬ್ಯಾಡರಿ’ ಅಂತ ಗಾದಿ ಮಾತ ಚಾಲ್ತಿ ಇತ್ತ.
ಅದ ಹಂಗ್ಯಾಕ ಅಂದರ, ಹಾನಗಲ್ ತುಂಬ ಬರೇ ಬ್ರಾಹ್ಮರ ಹಾವಳಿನ ಜಾಸ್ತಿ ಇತ್ತಂತ, ಹಿಂಗಾಗಿ ಯಾರರ ಇತರೆ ಜಾತಿ ಮಂದಿ ಬಂದರ ಸಾಕ, ’ಏ, ಮುಟ್ಟಿ..ದೂರ ಸರಿ, ಅಲ್ಲಿಂದ ಮಾತಾಡ…ಬಡಿಸಿ ಗಿಡಿಸಿ …ಖೋಡಿ ಒಯ್ದಂದ ಮಡಿ-ಮೈಲಗಿ ಗೊತ್ತಾಗಂಗಿಲ್ಲಾ’ ಅಂತ ಬೈತಿದ್ದರಂತ. ಅದರಾಗ ನಾ ಮೊದ್ಲ ಹೇಳಿದ್ನೇಲ್ಲಾ ಹಾನಗಲ್ಲ ತುಂಬ ಬರೇ ಈ ಅಮ್ಮಗೊಳ, ಹಿಂಗಾಗಿ ಜನಾ ಹಾನಗಲ ಒಳಗ ಹಾಯಲಿಕ್ಕು ವಿಚಾರ ಮಾಡತಿದ್ದರಂತ. ಇತರೆ ಜಾತಿ ಮಂದಿ ನಮ್ಮ ಬ್ರಾಹ್ಮರ ಓಣಿ ಮುಂದ ಓಡ್ಯಾಡ ಬೇಕಾರ ’ ಈ ಓಣ್ಯಾಗ ಬರೇ ಗಿಟಕನ ತುಂಬ್ಯಾವ’ ಅಂತಿದ್ದರಂತ. ಗಿಟಕ ಅಂದರ ಅವರು ನಮ್ಮ ಅಮ್ಮಗೊಳ ನುಣ್ಣಗ ಬೋಳಸಿದ್ದ ತಲಿನ್ನ ಗಿಟಕ ಕೊಬ್ಬರಿ ಬಟ್ಟಲಕ್ಕ ಹೋಲಸ್ತಿದ್ದರು. ಹಂಗ ಆವಾಗ ನಮ್ಮ ಹಾನಗಲ್ಲಾಗ ಅಷ್ಟ ಅಮ್ಮಗೊಳ ಇದ್ದರು.
ಇನ್ನ ಸವಣುರಾಗ ಸಿಗಬ್ಯಾಡ್ರಿ ಅಂದರ ಆ ಕಾಲದಾಗ ಸವಣುರ ತುಂಬ ನವಾಬರ ಪೈಕಿ ಮಂದೀನ ಜಾಸ್ತಿ ಇರತಿದ್ದರಂತ, ಹಿಂಗಾಗಿ ಹಿಂದುಗಳ ಹೆದರಿ ಹೆದರಿ ಜೀವನಾ ಮಾಡ್ತಿದ್ದರು. ಹಂಗ ಯಾರರ ಹಿಂದುಗಳ ಒಬ್ಬರ ಇಬ್ಬರ ಸವಣುರಾಗ ಸಿಕ್ಕಬಿಟ್ಟರ ಮುಗದಹೋತ ಅವರ ಗತಿ. ಅದರಾಗ ಬ್ರಾಹ್ಮರ ಅಂತು ಮೊದ್ಲ ಪುಕ್ಕ್ ಮಂದಿ, ಕಚ್ಚಿ ಒಳಗ ಜೀವಾ ಇಟಗೊಂಡ ಸವಣೂರಾಗ ಜೀವನ ನಡಸ್ತಿದ್ದರಂತ.
ಇನ್ನ ಹಾವೇರಿ ಒಳಗ ಯಾಕ ಸಾಯಬಾರದು ಅಂದರ ಅಲ್ಲೇ ಸುಡಾಗಟ್ಟಿ ಊರ ಬಿಟ್ಟ ಒಂದ ಐದ ಕಿಲೋಮಿಟರ ದೂರ ಇತ್ತಂತ. ಆವಾಗಿನ ಕಾಲದಾಗ ಈಗಿನ ಹಂಗ ಅಂಬುಲೆನ್ಸ್ ಇಲ್ಲಾ ಎ.ಸಿ.ಶವವಾಹನ ಇರಲಿಲ್ಲಾ, ಜನಾ ಹೆಗಲ ಮ್ಯಾಲೆ ಹೆಣಾ ಹೊತ್ಕೊಂಡ ಹೋಗ ಬೇಕಾಗತಿತ್ತು. ಇನ್ನ ಐದ ಕಿ.ಮಿ. ಹೆಣಾ ಹೊತ್ಕೊಂಡ ಹೋಗೊದರಾಗ ಹೆಣಾ ಹೋರೊರದ ಹೆಣಾ ಬಿಳ್ತಿತ್ತಂತ. ಹಿಂಗಾಗಿ ಹಾವೇರಿ ಒಳಗ ಸಾಯಬಾರದು ಅಂತ ಅಂತಿದ್ದರು.
ಅಲ್ಲಾ, ಹಂಗ ನಾ ಏನ ಆ ಕಾಲದ ಮನಷ್ಯಾ ಅಲ್ಲಾ, ಆಮ್ಯಾಲೆ ನಾ ಅಂತೂ ಏನ ಹಾನಗಲ್ಲಾಗ ಹುಟ್ಟಿದಂವಾ ಅಲ್ಲಾ ಬೆಳದಂವಾ ಅಲ್ಲಾ ಆದರ ನಮ್ಮ ಅಜ್ಜಾ-ಅಜ್ಜಿ,ಅವ್ವಾ-ಅಪ್ಪಾ ಎಲ್ಲಾ ಅಲ್ಲೇ ಹುಟ್ಟಿ ಬೆಳದವರು, ಅವರ ಈ ಅಮ್ಮಗೊಳ ಕಥಿ ಹೇಳೋದನ್ನ ಕೇಳೇನಿ ಇಷ್ಟ. ಹಂಗ ನಾ ತಿಳವಳಕಿ ಬಂದ ಮ್ಯಾಲೆ ನೋಡಿದ್ದ ಬರೇ ಒಂದ್ಯಾರಡ ಅಮ್ಮಗೊಳನ್ನ, ಅದು ಆ ಕಡೆದವರ ಹುಬ್ಬಳ್ಳಿ ಕಡೆ ಬಂದ ಸೆಟ್ಲ್ ಆದ ಮ್ಯಾಲೆ. ಹಂಗ ಧಾರವಾಡದಾಗ ಹಳಿಯಾಳ ರೋಡಿಗೆ ಇರೋ ಬ್ರಾಹ್ಮರ ವೃದ್ಧಾಶ್ರಮದಾಗ ಒಂದಿಬ್ಬರ ಇನ್ನು ಇದ್ದಾರ.
ಆದರ ಈ ಅಮ್ಮಗೊಳ ಕಥಿ ಮಾತ್ರ ಭಾರಿ ಭಾರಿ ವಿಚಿತ್ರ ಇದ್ದವು. ಅದರಾಗ ಒಬ್ಬೊಬ್ಬ ಅಮ್ಮಂದು ಒಂದೊಂದ ಕಥಿ. ಮನಿಗೆ ಅವರ ಹಿರೇ ಮನಷ್ಯಾರಿದ್ದರಂತೂ ಮುಗದ ಹೋತ ಆ ಮನಿ ಕಥಿ. ಈಡಿ ಮನಿ ಮಂದಿ ಅಕಿ ಸೇವಾ ಮಾಡಿ ಮಾಡಿ ಸಾಯಬೇಕು ಅಷ್ಟ ಇವರ ಉರಿತಿದ್ದರಂತ. ಅಲ್ಲಾ ಎಲ್ಲಾರೂ ಹಂಗ ಇದ್ದರು ಅಂತೇನಲ್ಲಾ ಆದರು ಅವರದ ಆಟ ಭಾಳ ನಡಿತಿತ್ತ ಮನ್ಯಾಗ. ಅದರಾಗ ಗಂಡ ಸತ್ತ ಅಮ್ಮ ಆಗಿ ಅತ್ತಿ ಮನಿ ಬಿಟ್ಟ ತವರಮನಿಗೆ ಬಂದ ಕುಕ್ಕರ ಬಡದ ಅಮ್ಮಗೊಳ ಭಾಳ. ಅವರ ಕೈಯಾಗ ಸಿಕ್ಕ ಇಡಿ ಮನಿ ಮಂದಿ ಎಲ್ಲಾ ಒದ್ಯಾಡಿ ಹೋಗ್ತಿದ್ದರಂತ.
ಹಂಗ ಈ ಅಮ್ಮಗೊಳ ಪೈಕಿ ನಮ್ಮ ಮೋನಪ್ಪ ಮಾಮಾನ ಅಜ್ಜಿ ಕುಣೆತಪ್ಪದ ಕಿಶ್ಟಕ್ಕಾ ಅಂತ ಇದ್ದಳಂತ, ನಮ್ಮಪ್ಪ, ಮೋನಪ್ಪಾ ಇಬ್ಬರು ಕ್ಲಾಸಮೇಟ ಇದ್ದರು ಹಿಂಗಾಗಿ ನಮ್ಮಪ್ಪ ದಿವಸಾ ದತ್ತಾತ್ರೇಯ ಗುಡಿ ಕಟ್ಟಿ ಸಾಲಿಗೆ ಹೋಗಬೇಕಾರ ಮೋನಪ್ಪನ ಕರಕೊಂಡ ಹೋಗ್ತಿದ್ದನಂತ. ಆ ಮೋನಪ್ಪನ ಅಜ್ಜಿ ಭಾರಿ ಜೋರ ಇದ್ದಳಂತ. ಒಂದ ಸರತೆ ತಿಂಗಳಿಗೊಮ್ಮೆ ಅಕಿ ತಲಿ ಬೋಳಸಲಿಕ್ಕೆ ಬರತಿದ್ದ ಕೆಳಗಿನ ಕೆರಿ ಓಣಿ ರಾಮ್ಯಾ ಅಕಿನ್ನ ಹಿತ್ತಲದಾಗ ಕೂಡಿಸಿ ತಲಿ ಬೋಳಿಸಿ
“ಅವ್ವಾರ ಕಾಲ ತುಟ್ಟಿ ಆಗೇತಿ, ಒಂದ ನಾಲ್ಕಾಣೆ ಜಾಸ್ತಿ ಮಾಡಿ ಸವ್ವಾರೂಪಾಯಿ ಹಾಕಿ ಕೊಡ್ರಿ” ಅಂತ ಅಂದದ್ದಕ್ಕ ಈ ಕಿಶ್ಟಕ್ಕಾ “ನಾಲ್ಕಣೇ ಜಾಸ್ತಿ ಕೊಡಲಿಕ್ಕೆ ನೀ ಏನ ನಂದ ಕ್ರಾಫ್ ತಗದಿ ಏನಲೇ ಬೋಳ್ಯಾ” ಅಂತ ಬೈದ ಕಳಸಿದ್ಲಂತ…ಏನ್ಮಾಡ್ತೀರಿ? ಹಿಂತಾ ಅಮ್ಮಗಳು. ಅಲ್ಲಾ ಹಂಗ ಇವರೇಲ್ಲಾ ಕೆಲಸ ಇಲ್ಲಾ ಬೊಗಸಿ ಇಲ್ಲಾ ಬರೇ ಮಂದಿ ಮನಿ ಹಿರೇತನಾ ಮಾಡಿ ಜೀವನಾ ಕಳದ ಹೋದರು.
ಮೊನ್ನೆ ಬೀದರ ದೇಸಾಯರ ದತ್ತ ಜಯಂತಿಗೆ ಹಾನಗಲ್ಲಿಗೆ ಬಂದಾಗ ಆ ಕಾಲದ ಅಮ್ಮಗೊಳನ್ನ ನೆನಸಿಗೊಂಡ, ಅವರ ಆವಾಗಿನ ಸ್ತಿತಿ, ಸಂಕಟಾ ಎಲ್ಲಾ ನೆನಸಿಗೊಂಡ ಭಾಳ ಮರಗಿದರು. ಹಂಗ ಈ ದೇಸಾಯರ ಅಜ್ಜಿ ಒಬ್ಬೋಕಿ ಅಮ್ಮ ಇದ್ದಳಂತ, ಬಾಳಂ ಭಟ್ಟರ ಭಾಗಕ್ಕಾ ಅಂತನ ಅಕಿ ಇಡೀ ಹಾನಗಲ್ಲಿಗೆ ಫೇಮಸ್ ಆಗಿದ್ಲು. ಅಕಿ ಅಂತು ಈ ದೇಸಾಯರಿಗೆ ಸಣ್ಣವರ ಇದ್ದಾಗ ಅಗದಿ ಪ್ರೀತಿಲೇ ಅಚ್ಛಚ್ಛಾ ಮಾಡಿ ಅವರವ್ವಗ ಗೊತ್ತಾಗಲಾರದಂಗ ಕಳುವಿಲೆ ಅವರ ಜುಬ್ಬಾದ ಕಿಸೆದಾಗ ಒಂದ ಮುಷ್ಟಿ ಅವಲಕ್ಕಿ, ಮೆಂತೆಹಿಟ್ಟು ಹಾಕಿ ಪಾಪ ಕೂಸ ಹೊಟ್ಟಿ ಹಸ್ತರ ಸಾಲ್ಯಾಗ ತಿನ್ನಲಿ ಅಂತ ಕಳಸ್ತಿದ್ದಳಂತ ಅದನ್ನ ಈ ದೇಸಾಯರ ಸಾಲಿ ಮುಟ್ಟೊ ತನಕಾ ಕಿಸೆದಾಗ ಅವಲಕ್ಕಿ ಹಚಗೊಂಡ ಒಬ್ಬೊರ ತಿನ್ಕೋತ ಬರತಿದ್ದರಂತ. ಯಾರರ ’ನಂಗು ಕೊಡ್ಲೆ ಒಂದ ಮುಕ್ಕ ಅವಲಕ್ಕಿ’ ಅಂದರ ’ನಮ್ಮಜ್ಜಿ ಯಾರಿಗೂ ಅವಲಕ್ಕಿ ಮುಟ್ಟಸ ಬ್ಯಾಡ’ ಅಂದಾಳ ಅಂತ ಈ ದೇಸಾಯರ ಒಬ್ಬರ ತಿಂತಿದ್ದರಂತ. ಮುಂದ ಅವರವ್ವಾ ಆ ಜುಬ್ಬಾ ಅಂಗಿ ಒಗಿಬೇಕಾರ ನೋಡಿದ್ರ ಕಿಸೆ ಅಂಬೊದ ಒಗ್ಗರಣಿ ಪಾತೇಲಿ ತಳದ ಗತೆ ಹಳದಿ ಆಗಿರ್ತಿತ್ತಂತ. ಹೆಂತಾ ಕರುಣಾಮಯಿ ಇದ್ಲು ಭಾಗಕ್ಕಾ ಅಂತೇನಿ. ಆವಾಗ ಅವಲಕ್ಕಿ ಚಟಾ ಹಚಗೊಂಡ ದೇಸಾಯರು ಇವತ್ತು ಅಜ್ಜಿನ್ನ ಮರತರು ಅವಲಕ್ಕಿ ಮರತಿಲ್ಲಾ.
ಹಂಗ ಈ ಅಮ್ಮಗೊಳು ಗಂಡ ಸತ್ತ ಕೂಡಲೇನ ಮಡಿ ಹೆಂಗಸ ಆಗಬೇಕಂತ ಏನ ಇಲ್ಲಾ, ಒಂದ ಸ್ವಲ್ಪ ದಿವಸ ಬಿಟ್ಟ ಆಮ್ಯಾಲೆನೂ ಮಡಿ ಹೆಂಗಸ ಆಗಬಹುದಿತ್ತ. ಹಂಗ ಒಮ್ಮೆ ಮಡಿ ಹೆಂಗಸ ಆದ ಮ್ಯಾಲೆ ಯಾವಾಗ ನಮ್ಮ ಕೈಲೆ ಮಾಡ್ಕೊಂಡ ತಿನ್ನಲಿಕ್ಕೆ ನೀಗಂಗಿಲ್ಲಾ ಅನಸ್ತದ ಆವಾಗ ಮತ್ತ ಕೂದ್ಲಾ ಬಿಟ್ಟ ಬ್ಯಾಕ ಟು ನಾರ್ಮಲ್ ಸೊಕೇಶಿ ಜೀವನಕ್ಕನು ಬರಬಹುದಿತ್ತ ಅಂತ. ಹಂಗ ನಮ್ಮ ಮಂದಿ ರೂಲ್ಸ್ ಫ್ಲೆಕ್ಸಿಬಲ್ ಇದ್ದವು ಬಿಡ್ರಿ, ಎಲ್ಲಾ ನಮ್ಮ ನಮ್ಮ ಅನಕೂಲಕ್ಕ ನಾವ ಮಾಡ್ಕೊಂಡ ವಿಚಿತ್ರ ಸಂಪ್ರದಾಯಗಳು.
ಅದರಾಗ ವೈಷ್ಣವರ ಮಡಿ ಹೆಂಗಸ ಇದ್ದರಂತು ಮುಗದ ಹೋತ, ಏನಿಲ್ಲದ ಪಿಸಿ ಮಂದಿ ಇನ್ನ ಮಡಿ ಆಗ್ಯಾರ ಅಂದರ ಮುಗದ ಹೋತಲಾ. ಆವಾಗ ನಾಗನೂರ ನಾಗಕ್ಕಾ ಅಂತ ವೈಷ್ಣವರ ಪೈಕಿ ಅಮ್ಮ ಒಬ್ಬೋಕಿ ಇದ್ದಳಂತ ಅಕಿ ಏನರ ಮಡಿಲೇ ನೀರ ತುಂಬಲಿಕ್ಕೆ ಭಾವಿಗೆ ಬಂದರ, ಅಲ್ಲೆ ನೀರ ತುಂಬಲಿಕ್ಕತ್ತವರೇಲ್ಲಾ ಭಾವಿ ಬಿಟ್ಟ ಮೂರ ಮಾರ ದೂರ ಸರದ ನಿಲ್ಲತಿದ್ದರಂತ, ಆಮ್ಯಾಲೆ ಇಕಿ ಬಂದ ತನ್ನ ಹಗ್ಗಾ ಹಾಕಿ ನೀರ ಜಗ್ಗಿ, ಮೊದ್ಲ ಈಡಿ ಭಾವಿ ಕಟ್ಟಿ ತೊಳದ ಆಮ್ಯಾಲೆ ಮಡಿ ನೀರ ತುಂಬಕೊಂಡ ಹೋಗ್ತಿದ್ಲಂತ. ಹಂಗ ಸ್ಮಾರ್ತರು ಇಕಿ ಬಂದರ ಇಕಿಗೆ ಫಸ್ಟ ಪ್ರಿಯಾರಿಟಿ ಕೊಡಬೇಕಾಗ್ತಿತ್ತ ಆ ಮಾತ ಬ್ಯಾರೆ.
ಆಮ್ಯಾಲೆ ಇನ್ನೊಂದ ಮಜಾ ಅಂದರ ಈ ಮಡಿ ಹೆಂಗಸರು ಊಟಕ್ಕ ಕೂಡಬೇಕಾರ ಒಂದ ಸರತೆ ಎಲಿ ಒಳಗ ಬಡಸಿಕೊಂಡರ ಮುಗಿತ ಅಂತ, ಮತ್ತ ಇನ್ನೊಮ್ಮೆ ಹಾಕ್ಕೊಂಡ ಹೊಟ್ಟಿತುಂಬ ಉಣ್ಣೊಹಂಗ ಇರಲಿಲ್ಲಾ, ಅದರಾಗ ಒಂದಿಷ್ಟ ಮಂದಿ ಅಂತು ದಿವಸಕ್ಕ ಒಂದ ಸರತೆ ಊಟಾ ಮಾಡೋರ, ಹಂತಾದರಾಗ ನಮ್ಮ ಗುಡಿ ಮನಿ ಗಂಗಕ್ಕ ಅಜ್ಜಿಗೆ ಕರೆಕ್ಟ ತಾಟ ತುಂಬ ಹಾಕ್ಕೊಂಡ ಎರಡ ತುತ್ತ ಉಣ್ಣೊದಕ್ಕ ಸಂಡಾಸ ಬಂದ ಬಿಡ್ತಿತ್ತಂತ ಅಕಿ
“ಅಯ್ಯ, ಗುಂಡ್ಯಾ ಬಂತಪಾ, ಬಂದ ಬಿಡ್ತು, ತಡ್ಕೊಳಿಕ್ಕೆ ಆಗಂಗಿಲ್ಲಾ” ಅಂತ ಹಿತ್ತಲಕ್ಕ ಓಡೆ ಬಿಡ್ತಿತ್ತಂತ. ಮುಂದ ಊಟ ಅಲ್ಲಿಗೆ ಮುಗಿತ, ಮರದಿವಸ ತನಕ ಬಾಯಿ ಮುಸರಿ ಮಾಡ್ಕೊಳಂಗಿಲ್ಲಾ. ಪಾಪ ಅಕಿ ಪರಿಸ್ಥಿತಿ ನೋಡಿ ಈಡಿ ಮನಿ ಮಂದಿ ಮರಗತಿದ್ದರಂತ. ಯಾವಗ ಒಂದ ಮುಂಜಾನೆ ಐದಕ್ಕ ಎದ್ದ ಗಂಗಕ್ಕಜ್ಜಿ ಇದ್ಲಿ ಒಲಿ ಮ್ಯಾಲೆ ಮನಿ ಮಂದಿಗೇಲ್ಲಾ ತಾನ ಅಡಗಿ ಮಾಡಿ ಇನ್ನೇನ ತಾ ಒಂದ ತುತ್ತ ಉಣಬೇಕು ಅನ್ನೋದರಾಗ ಹಿಂಗ ಆಗಿ ಬಿಡ್ತಿತ್ತ. ವಾರದಾಗ ಮೂರ ಸರತೆ ಹಿಂಗ ಆಗ್ತಿತ್ತ ಅಂತ. ಏನ ಮಾಡ್ತೀರಿ ಅಕಿ ಹಣೇಬರಹ.
ಇನ್ನ ನರಾಸಪುರದ ವೆಂಕಕ್ಕಗ ಬಾಯಿ ಚಟಾ ಭಾಳ ಇತ್ತಂತ, ಬಾಯಿ ಚಟಾ ಅಂದರ ಮಂದಿಗೆ ವಟಾ- ವಟಾ ಅನ್ನೋದ ಇಷ್ಟ ಅಲ್ಲಾ, ಇಕಿಗೆ ಅದರ ಜೊತಿಗೆ ಹಗಲಗಲಾ ಏನೇನರ ತಿನ್ನೊ ಚಟಾ ಇತ್ತಂತ. ಪಾಪ ಅಕಿಗೆ ಸಣ್ಣ ವಯಸ್ಸಿನಾಗ ಗಂಡ ಹೋಗಿ ಬಿಟ್ಟಿದ್ದಾ, ಮನೆತನದಾಗಿನ ಹಿರೇಮನಷ್ಯಾರ ಅಕಿನ್ನ ಹಿಡದ ಅಕಿಗೆ ಮನಸ್ಸಿಲ್ಲಾ ಅಂದರು ಅಮ್ಮನ್ನ ಮಾಡಿ ಕೈಬಿಟ್ಟಿದ್ದರು. ಹಂಗ ಗಟ್ಟಿ ಹೆಣ್ಣಮಗಳು ಮನ್ಯಾಗಿರೊ ಹನ್ನೊಂದ ಮಂದಿಗೆ ತಾನ ದಿವಸಾ ಮಡಿಲೇ ಅಡಿಗಿ ಮಾಡಿ ಹಾಕತಿದ್ದಳು. ಆದರ ಅಡಗಿ ಮಾಡ್ತ ಮಾಡ್ತ ಕೈಯಾಗ ಸಿಕ್ಕದ್ದನ್ನ ಮುಕ್ತಿದ್ದಳಂತ. ಹಂಗ ಒಂದ ಸರತೆ ಮನ್ಯಾಗ ಯಾವದೊ ಫಂಕ್ಶನ್ ಇದ್ದಾಗ ಬಿಸಿ ಬಿಸಿ ಭಜಿ ಕಳುವಿಲೆ ಬಾಯಾಗ ತುರಕೊಂಡ ನಾಲಗಿ ಸುಟಗೊಂಡಿದ್ಲಂತ. ಏನ್ಮಾಡ್ತೀರಿ, ಪಾಪ ಇನ್ನು ಉಪ್ಪು ಖಾರಾ ತಿನ್ನೊ ವಯಸ್ಸಿನಾಗ ಹಿಂಗ ಮಡಿ ಹೆಂಗಸು ಅಂತ ಕಟ್ಟಪ್ಪಣೆ ಮಾಡಿದರ ಬಾಯಿ ಎಲ್ಲೆ ಸುಮ್ಮನ ಕೂಡಬೇಕು. ಅಕಿ ಮುಂದ ಒಂದ ಐದ ವರ್ಷ ಬಿಟ್ಟ ಬಾಯಿ ಚಟಾ ತಡ್ಕೊಳಿಕ್ಕೆ ಆಗಲಾರದ ಇನ್ನ ಮುಂದ ಕೆರಿ ಓಣಿ ರಾಮ್ಯಾಗ ಬರಬ್ಯಾಡ ಅಂತ ಹೇಳು ಅಂತ ಕ್ರಾಫ ತಕ್ಕೊಂಡ ಮಡಿ-ಗಿಡಿ ಗ್ವಾಡಿಗೆ ಒಗದ ಕಂಡ ಕಂಡವರ ಮನ್ಯಾಗ ಸಂಡಗಿ ಹಪ್ಪಳ ತಿನ್ನಕೋತ ಅಡ್ಡಾಡಲಿಕತ್ತಳಂತ.
ಹಂಗ ನಮ್ಮ ಹಾನಗಲ್ಲ ಅಮ್ಮಗೊಳ ಕಥಿ ಎಷ್ಟ ಹೇಳಿದರು ಮುಗಿಯಂಗಿಲ್ಲಾ, ಹಿಂಗಾಗೆ ನಾ ಹೇಳಿದ್ದ ಆಗಿನ ಟೈಮ ಒಳಗ ಹಾನಗಲ ಮಂದಿಗೆ the world is full of ಅಮ್ಮಗೊಳು ಅನಸ್ತಿತ್ತು ಅಂತ.
ಇನ್ನ ಇಷ್ಟ ಅಮ್ಮಗೊಳ ಒಳಗ ಒಂದ ಚೂರು ಊರ ಮಂದಿ ಉಸಾಬರಿ ಮಾಡದ ತಾ ಆತು ತನ್ನ ಕೆಲಸ ಆತು ಅಂತ ಇದ್ದೋಕಿ ಅಂದರ ’ಲಕ್ಷ ಬತ್ತಿ ಅಂಬಕ್ಕಾ’ ಒಬ್ಬೊಕಿನ. ಪಾಪ ಅಕಿ ಗಂಡ ಸತ್ತ ಮ್ಯಾಲೆ ಅಮ್ಮ ಆಗಿ ತವರಮನಿಗೆ ಬಂದ ಇದ್ಲು, ಇಲ್ಲೆ ಅವರ ವೈನಿ ಇಕಿದ ಏನು ನಡಿಸಿಕೊಡತಿದ್ದಿಲ್ಲಂತ, ಅಕಿ ಅಂತೂ ಬೊಮ್ಮನಳ್ಳಿ ಹೆಣ್ಣಮಗಳು ಅಗದಿ ಖಡಕ್ ಇದ್ಲಂತ.
“ನೀವು, ರಾಮ ರಾಮ ಅಂತ ಮನಿ ಕಟ್ಟಿಗೆ ಇಲ್ಲಾ ಗುಡಿ ಕಟ್ಟಿಗೆ ಕೂತ ದೇವರ ಧ್ಯಾನ ಮಾಡ್ರಿ, ಒಂದ ಹೊತ್ತ ನಾನ ಮಡೀಲೇ ಮಾಡಿ ಹಾಕ್ತೇನಿ ಸುಮ್ಮನ ಊಂಡ ತಿಂದ ಆರಾಮ ಇರ್ರಿ” ಅಂತ ಅಕಿದ ಮನ್ಯಾಗ ಏನು ನಡಿಲಾರದಂಗ ಮಾಡಿ ಬಿಟ್ಟಿದ್ಲಂತ. ಅದರಾಗ ಅಂಬಕ್ಕನು ಮೊದ್ಲಿಂದ ಭೊಳೆ ಹೆಣ್ಣಮಗಳು ಸಣ್ಣ ವಯಸ್ಸಿನಾಗ ಗಂಡ ಆಡೂರಾಗ ಪ್ಲೇಗ ಬಂದಾಗ ತೀರಿ ಹೋಗಿದ್ದಾ ಇಕಿ ಬ್ಯಾರೆ ಗತಿ ಇಲ್ಲದ ಹಾನಗಲ್ಲಾಗಿನ ತವರಮನಿಗೆ ಬಂದ ವಕ್ಕರಿಸಿದ್ಲು, ಹಿಂಗಾಗಿ ಸುಮ್ಮನ ವೈನಿ ಹೆಂಗ ಹೇಳ್ತಾಳ ಹಂಗ ಕೆಳ್ಕೊಂಡ ರಾಮದೇವರ ಕಟ್ಟಿಗೆ ಬತ್ತಿ ಮಾಡ್ಕೋತ ಕೂಡತಿದ್ದಳಂತ. ವರ್ಷಾ ಬನಶಂಕರಿ ನವರಾತ್ರಿ ಹೊತ್ತಿಗೆ ಅಕಿ ಗುಡಿಗೆ ಏನಿಲ್ಲಾಂದರು ಲಕ್ಷ ಬತ್ತಿ ಮಾಡಿ ಕೊಡತಿದ್ದಳಂತ. ಹಿಂಗಾಗೆ ಅಕಿ ಲಕ್ಷ ಬತ್ತಿ ಅಂಬಕ್ಕ ಅಂತ ಫೇಮಸ ಆಗಿದ್ದ.
ಹಿಂಗ ನಮ್ಮ ಹಾನಗಲ್ ಅಮ್ಮಗೊಳದ್ದು ಒಬ್ಬಬ್ಬರದ ಒಂದೊಂದ ಮಜಾ- ಮಜಾ ಕಥಿ.
ಅಲ್ಲಾ, ಈಗ ಕಾಲ ಬದಲಾಗೇದ ಮ್ಯಾಲೆ ಆ ಜನರೇಶನ್ ಮಂದಿನೂ ಈಗ ಉಳದಿಲ್ಲಾ ಅದಕ್ಕ ಆ ಸುಡಗಾಡ ಪದ್ಧತಿ, ಸಂಪ್ರಾದಾಯ ಎಲ್ಲಾ ಮಾಯ ಆಗ್ಯಾವ. ಈ ಅಮ್ಮಗೊಳು ಇವತ್ತ ನಮಗ ಬರೇ ನೆನಪ ಮಾತ್ರ ಆದರು ಅವರ ಪಟ್ಟ ಸಂಕಟ, ನರಕಯಾತನೆ, ಅವರ ಮ್ಯಾಲೆ ಇದ್ದ ಸಾಮಾಜಿಕ ಕಟ್ಟಪ್ಪಣೆಗಳು ಎಲ್ಲಾ ಒಂದ ಸಲಾ ನೆನಸಿಗೊಂಡರ ಮೈ ಜುಮ್ ಅಂತದ.

This entry was posted on Wednesday, April 26th, 2017 at 4:00 am and is filed under ಹಾಸ್ಯ ಲೇಖನಗಳು. You can follow any responses to this entry through the RSS 2.0 feed. You can leave a response, or trackback from your own site.

Post a Comment