ಅವ್ವಾ… ನಂದ ಆತ, ನೀರ ಹಾಕ ಬಾ………

ನಾವ ಸಣ್ಣೊರ ಇದ್ದಾಗಿನ ಮಾತ, ಆವಾಗ ಇವಾಗಿನಗತೆ ಮನ್ಯಾಗ ಇರೊ ರೂಮಿನಾಗೇಲ್ಲಾ ಒಂದೊಂದ ಸಂಡಾಸ ಇರತಿದ್ದಿಲ್ಲಾ. ಅಲ್ಲಾ ಆವಾಗ ಮನಿಗೆ ಒಂದ ಸಂಡಾಸ ದೂರ ಹೋತ ನಾಲ್ಕ- ಐದ ಮನಿಗೆ, ಇಲ್ಲಾ ಇಡಿ ಚಾಳಿಗೆ ಒಂದೊ ಎರಡೊ ಸಂಡಾಸ ಇರತಿದ್ವು. ಒಂಥರಾ ಸಾರ್ವಜನಿಕ ಪಾಯಖಾನಿ ಅನ್ನರಿ. ಇದ್ದ ಒಂದರಾಗ ಎಲ್ಲಾ ಮನಿಯವರು ಪಾಳೆ ಹಚ್ಚಿ ಒಂದಕ್ಕ ಎರಡಕ್ಕ ಮಾಡಬೇಕ ಹಂತಾ ಹಣೇಬರಹ ಇತ್ತ. ಇನ್ನ ಹಂತಾ ಪರಿಸ್ಥಿತಿ ಒಳಗ ನಮ್ಮಂತಾ ಸಣ್ಣ ಹುಡಗರಿಗೆ ಅಲ್ಲೇ ಹೋಗಲಿಕ್ಕೆ ಅವಕಾಶನ ಇರಲಿಲ್ಲಾ,
“ಲೇ, ನಡಿ ಈಟ ಇದ್ದಿ ಮಗನ ಪಾಯಖಾನ್ಯಾಗ ಹೋಗ್ತಿ, ಎಲ್ಲರ ಕಾಲ ಸಿಗಸಿಕೊಂಡ-ಗಿಗಿಸಿಕೊಂಡಿ ನಡಿ” ಅಂತ ನಮ್ಮನ್ನ ಬೈದ ಓಡಿಸಿ ಬಿಡ್ತಿದ್ದರು. ನಾವ ಚಡ್ಡಿ ಬಿಚ್ಚಿ ಒಂದ ಕೈಲೆ ಹಿಡ್ಕೊಂಡ ನಮ್ಮ ಪಾಲಿಗೆ ಗಟರ್ ದಂಡಿನ ಗತಿ ಅಂತ ಓಡಿ ಹೋಗ್ತಿದ್ವಿ.
ಅಲ್ಲಾ, ಅಲ್ಲೇ ಇದ್ದ ಎರಡ ಸಂಡಾಸಿಗೆ ಮುಂಜಾನೆ ಎದ್ದ ಕೂಡಲೇನ ಆ ಚೆನ್ನಮ್ಮ ಎಕ್ಸಪ್ರೆಸ್ ಟ್ರೇನನಾಗ ಜನಾ ಯಶವಂತಪುರ ಬರೋಕಿಂತ ಮುಂಚೆ ಪಾಳೆ ಹಚ್ಚಿ ನಿಂತಿರ್ತಾರಲಾ ಹಂಗ ನಿಲ್ಲೋರು, ಅದರಾಗ ಕೆಲಸಕ್ಕ ಹೋಗೊರ ಬ್ಯಾರೆ, ಬೈಲಕಡಿ ಹತ್ತೇದ ನಂಗ ಅರ್ಜೆಂಟ ಹೋಗಬೇಕು ಅಂತ ಸುಳ್ಳ ಹೇಳೋರ ಬ್ಯಾರೆ, ನಂದ ವಯಸ್ಸ ಆಗೇದ ನಂಗ ತಡಕೊಳಿಕ್ಕೆ ಆಗಂಗಿಲ್ಲಾ ಅನ್ನೋರ ಬ್ಯಾರೆ. ಇನ್ನಾ ಹಂತಾವರ ನಡಕ ನಮ್ಮಂತಾ ಸಣ್ಣ ಹುಡಗರಿಗೆ ಎಲ್ಲೆ ಚಾನ್ಸ, ನಮಗ ಏನಿದ್ದರು ಮನಿ ಮುಂದಿನ ಗಟರ ದಂಡಿನ ಗತಿ. ಅಗದಿ ಏಕದಮ್ ಬಯಲ ಸೀರ – ಹವಾ ಸೀರ, ಹರಟಿ ಹೊಡ್ಕೊತ ಗಂಡ ಹುಡುಗರು, ಹೆಣ್ಣ ಹುಡುಗರು, ಜಾತಿ-ಪಾತಿ ಅಂತ ಭೇದ ಭಾವ ಇಲ್ಲದ ಮುಂದ ಮಣ್ಣಾಗ ಕಿರಬಟ್ಟಲೇ ಚಿತ್ರಾ ತಕ್ಕೋತ ಕೂಡೋರ. ನಮ್ಮ ಅವ್ವಂದರ ’ಆತಿಲ್ಲೋ…ಸಾಲಿಗೆ ಹೊತ್ತಾಗತದ, ಸಾಕ ಮುಗಸ ಇನ್ನ್, ಮತ್ತ ನಾಳೆ ಮಾಡಿ ಅಂತಿ’ ಅಂತ ಒಂದ ಹತ್ತ ಸರತೆ ಒದರಿದರು ನಾವೇನ ಮುಗಸೊ ಮಕ್ಕಳಲ್ಲಾ, ಕಡಿಕೆ ಕೂತ ಕೂತ ಕಾಲ ಜುಮ್ಮ್ ಅನ್ನಲಿಕತ್ತ ಮ್ಯಾಲೆ
“ಅವ್ವಾ, ಆತ… ನೀರ ಹಾಕ ಬಾ” ಅಂತ ಒದರೊರ. ಅದರಾಗ ಒಬ್ಬವಂದ ಆದರ ಎಲ್ಲಾರದು ಆಗತಿತ್ತ. ಹಿಂಗಾಗಿ ಸಾಮೂಹಿಕ ನೀರ ಹಾಕಿಸಿಕೊಂಡ ತೊಳ್ಕೊಂಡ ಏಳೊರ. ಅಲ್ಲಾ ಇದ ನಾವ ಅಗದಿ ಸಣ್ಣವರಿದ್ದಾಗಿನ ಮಾತ, ಮುಂದ ಸ್ವಲ್ಪ ದೊಡ್ಡರಾದ ಕೂಡಲೇ ನಾವs ತಂಬಗಿ ತೊಗೊಂಡ ಹೊಗ್ತಿದ್ವಿ, ಹಿಂಗಾಗಿ ನೀರ ಹಾಕಿಸಿಗೊ ಪಾಳೆ ಬರ್ತಿದ್ದಿಲ್ಲಾ ಆದರ ಗಟರ ದಂಡಿ ಏನ ತಪ್ಪತಿದ್ದಿಲ್ಲಾ. ಯಾವಾಗ ನಮಗೂ ಸಾರ್ವಜನಿಕ ಸಂಡಾಸಕ್ಕ ಹೋಗಲಿಕ್ಕೆ ಬಿಡಲಿಕತ್ತರು ಆವಾಗ ನಾವು ಖರೇನ ದೊಡ್ಡವರಾದಂಗ ಅನಸ್ತು. ಹಂಗ ನಾವೇನ ’ನಮಗ ಗಟರ ದಂಡಿ ಅಸಂಯ್ಯ ಅನಸ್ತದ ನಾವ ಅಲ್ಲೇ ಕೂಡಂಗಿಲ್ಲಾ’ ಅಂತ ಹಟಾ ಮಾಡಲಿಲ್ಲಾ, ಆದರ ಮನಿ ಮಂದಿನ ತಿಳದ ’ಇಷ್ಟ ದೊಡ್ಡ ಕತ್ತಿ ಆಗಿ, ಇನ್ನೂ ಗಟರ ದಂಡಿ ಅಂತಿ ಏನ್’ ಅಂತ ಬೈದ ತಾವ ನಮಗ ಸಂಡಾಸಕ್ಕ ಹೋಗಲಿಕ್ಕೆ ಅಪ್ಪಣೆ ಕೊಟ್ಟರು.
ಅಲ್ಲಾ ಈಗ ಎಲ್ಲಾ ಬಿಟ್ಟ ಒಮ್ಮಿಂದೊಮ್ಮಿಲೆ ಹೆಂತಾ ವಿಷಯ ತಗದಾನ ಮುಂಜ ಮುಂಜಾನೆ ಎದ್ದ ಅಂತ ಅನಬ್ಯಾಡರಿ, ಮೊನ್ನೆ ಏನಾತ ಅಂದರ ನಾ ಹುಬ್ಬಳ್ಯಾಗ ತಾಜ ಹೊಟೆಲ್ ಆಗೇದ ನೋಡೋಣ ತಡಿ ಅಂತ ಇಡಿ ಫ್ಯಾಮಿಲಿ ಕರಕೊಂಡ ೫೦೦ Rs/head buffet ಇದ್ದಾಗ ಹೋಗಿದ್ದೆ, ಹಿಂಗ ಅರ್ಧಾ ಊಟ ಆಗಿತ್ತ ಅನ್ನೊದರಾಗ ನನ್ನ ಮಗಳ ಕೆಟ್ಟ ಮಾರಿ ಮಾಡ್ಕೊಂಡ
“ಅಮ್ಮಾ, ನಂಗ…. ಬಂದದ” ಅಂದ್ಲು. ನನ್ನ ಹೆಂಡತಿಗೆ ಸಿಟ್ಟ ಬಂತ
“ನಿನ್ನ ಹೆಣಾ ಎತ್ತಲಿ, ಹೋದಲ್ಲೆ ಬಂದಲ್ಲೆ ಸಹಿತ ಇರತದ ನಿಂದ. ಹೊರಗ ಬಂದೆಲ್ಲೆನೂ ಸಮಾಧಾನದಿಂದ ಇರಲಿಕ್ಕೆ ಬಿಡಂಗಿಲ್ಲಾ” ಅಂತ ಅನ್ಕೋತ ಅಕಿನ್ನ ಜಕ್ಕೊಂಡ ಲೇಡಿಸ್ ರೂಮಿಗೆ ಹೋದ್ಲ.
ಅಲ್ಲಾ ಪಾಪ ಆ ಕೂಸಿಗೆ ಏನ ತಿಳಿತದ, nature’s callರಿಪಾ,ಸುಮ್ಮನ ಅದಕ್ಕ ಒದರಾಡಿದರ ಹೆಂಗ ಅಂತ ನಂಗ ಅನಸ್ತ, ಆದರ ನಾ ಅನ್ನಲಿಕ್ಕೆ ಹೋಗಲಿಲ್ಲಾ. ಮತ್ತ ನಾ ಏನರ ಅನ್ನಬೇಕು ’ನೀವ ಕರಕೊಂಡ ಹೋಗರಿ ನಿಮ್ಮ ಮಗಳನ ಹಂಗರ’ ಅಂತ ಅಂದ ಗಿಂದಾಳಂತ ನಾನು ನನ್ನ ಮಗಾ ಸುಮ್ಮನ ಕೂತಿದ್ವಿ. ಅದರಾಗ ನನ್ನ ಮಗಳದ ಒಂದ ಕೆಟ್ಟ ಚಟಾ ಏನಪಾ ಅಂದರ ದಿವಸಾ ಊಟಕ್ಕ ಕೂತಾಗ ಅಕಿಗೆ ಸಂಡಾಸ ಬರೋದು. ಇದು ಪ್ರತಿ ದಿವಸದ ಕಥಿನ ಮತ್ತ. ಅಕಿ ಸಾರು ಅನ್ನಾ ಉಂಡ ’ಅಮ್ಮಾ, …’ ಅನಬೇಕು, ನನ್ನ ಹೆಂಡತಿ ’ಗೊತ್ತಾತ ತೊಗೊವಾ, ಹೋಗ..ಭಾಳ ಶಾಣ್ಯಾಕಿ ಇದ್ದಿ, ಊಟಕ್ಕ ಕೂತಾಗs ಬರ್ತದ ತೊಗೊ ನಿನಗ’ ಅಂತ ಅನ್ನಬೇಕು, ಮುಂದ ಒಂದ ತಾಸ ನನ್ನ ಹೆಂಡತಿ ಆತ ಇಲ್ಲೊ, ಆತ ಇಲ್ಲೊ… ಅಂತ ಒದರಿದ ಮ್ಯಾಲೆ ಅಕಿ
“ಅಮ್ಮಾ ನಂದ ಆತ, ನೀರ ಹಾಕ ಬಾ” ಅಂತ ಒದರೋದ. ಆಮ್ಯಾಲೆ ಬಂದ ಅಕಿ ತನ್ನ ಮಸರು ಅನ್ನಾ ಕಂಟಿನ್ಯು ಮಾಡೋಕಿ. ನಮ್ಮವ್ವರ ಅದನ್ನ ನೋಡಿ ನೋಡಿ
“ದಿವಸಾ ಅದೇನ ಹೊಲಸ ಚಟಾನೊ ಏನೊ ಈ ಹುಡಗಿಗೆ” ಅಂತ ಬೈತಿದ್ಲು, ನಾ
“ಹೋಗ್ಲಿ ಬಿಡ್ವಾ, ಹೋಗಿ ಬಂದ ಉಂಡರ ಒಂದ ಎರಡ ತುತ್ತ ಊಟ ಹೆಚ್ಚಗಿನರ ಹೋಗ್ತದ” ಅಂತಿದ್ದೆ.
ಇನ್ನ ಇತ್ತಲಾಗ ಲೇಡಿಜ್ ರೂಮಿಗೆ ಮಗಳನ ಕರಕೊಂಡ ಹೋಗಿದ್ದ ನನ್ನ ಹೆಂಡತಿ ಒಂದ ಹತ್ತ ನಿಮಿಷಕ್ಕ ವಾಪಸ ಬಂದ್ಲು, ಅಕಿ ಹಿಂದ ಮಗಳ ಒಂದ ಟಿಸ್ಯು ಪೇಪರ ಬಂಡಲ ಹಿಡಕೊಂಡ ಬಂದಿದ್ಲು, ಅದನ್ನ ನನ್ನ ಹೆಂಡತಿ ನೋಡಿದ್ದಿಲ್ಲಾ ಕಾಣತದ ನಾ ಅದನ್ನ ನೋಡಿದವನ
“ಲೇ, ಹುಚ್ಚಿ..ಅದನ್ಯಾಕ ಹಿಡಕೊಂಡ ಬಂದಿ, ಥೂ ಒಗಿ ಅದನ್ನ” ಅಂತ ಒದರಿದೆ. ಹಂಗ ಅಕಿ ಅದನ್ನ ತಂದದ್ದ ಯಾರು ಹೋಟೆಲ್ಲನಾಗ ನೋಡಿದ್ದಿಲ್ಲಾ, ಆದರ ನಾ ಒದರಿದ್ದ ನೋಡಿ ಎಲ್ಲಾರೂ ನಮ್ಮನ್ನ ನೋಡಲಿಕತ್ತರು.
“ಏ, ನಂಗ ಇದ ಚಿತ್ರಾ ತಗಿಲಿಕ್ಕೆ ಬೇಕ ಪಪ್ಪಾ” ಅಂತ ನನ್ನ ಮಗಳ ಗಂಟ ಬಿದ್ಲು.
ಅಕಿಗೆ ನಾವ ಹೋಟೇಲಗೆ ಹೋದಾಗೊಮ್ಮೆ ಆ ಟೇಬಲ್ ಮ್ಯಾಲಿಂದ ಟಿಸ್ಯು ಪೇಪರ ತೊಗೊಂಡ ನನ್ನ ಕಡೆ ಪೆನ್ನ್ ಇಸಗೊಂಡ ಗಿಚಿ-ಗಿಚಿ ಛೆಲ್ಲೋದ ರೂಡಾ, ಹಿಂಗಾಗಿ ಅಕಿ ಬಾಥ ರೂಮಿಗೆ ಹೋದಾಗ ಟಿಶ್ಯು ಪೇಪರ ಅಂತ ಹೇಳಿ toilet paper ತೊಗೊಂಡ ಬಂದಿದ್ಲು, ಅಲ್ಲಾ ಪಾಪ ಅದಕ್ಕೇನ ಗೊತ್ತಾಗ ಬೇಕ ಟಿಶ್ಯು ಪೇಪರ್ ಯಾವದು toilet paper ಯಾವದು ಅಂತ. ಹಂಗ ಬರೇ ಪೇಪರ ಹಿಡದ ನೋಡಿದ್ರ ನಮಗರ ಎಲ್ಲೆ ಗೊತ್ತಾಗತದ. ಏನೊ ಅದನ್ನ ರೌಂಡ ಬಂಡಲ್ ಮಾಡಿ ಇಟ್ಟಿರತಾರ ಅಂತ ಇದು ಜಕ್ಕೊಂಡ ವರಿಶಿಗೊಳೊದು ಅದಕ್ಕ ಇದು toilet paper ಅಂತ ಅನ್ಕೋತೇವಿ, ಅಕಸ್ಮಾತ ಅದನ್ನ ಚೌಕ ಚೌಕ ಕಟ್ಟ ಮಾಡಿ ಟೇಬಲ್ ಮ್ಯಾಲೆ ಇಟ್ಟಿದ್ದರ tissue paper ಅಂತ್ ಕೈ ಬಾಯಿ ಒರಿಸೊಗೊತೇವಿ.
ಆಮ್ಯಾಲೆ ನಾನ ಪಾಪ ಆ ಕೂಸಿಗೆ ತಿಳಿಸಿ ಹೇಳಿದೆ ಈ ಪೇಪರ ಯಾವದು, ಇದನ್ನ ಯಾಕ ಉಪಯೋಗ ಮಾಡ್ತಾರ ಅಂತ. ಅಕಿ ನಾ ಹೇಳೋದ ಕೇಳಿ “ಛೀ, ಯಾ.. ಥು.” ಅಂತ ತನ್ನ ಮಾರಿ ಕೆಟ್ಟ ಮಾಡಿ ತನ್ನ ಕೈಯಾಗಿಂದ ಪೇಪರ್ ಉಂಡಿ ಚೆಲ್ಲಿದ್ಲು. ಅಲ್ಲಾ ಪೇಪರಿಗೆ ಯಾಕ ಭೇದ ಭಾವ ಮಾಡಬೇಕರಿ ಅದರಾಗ ನಾವು ನಮ್ಮ ಸಂಸ್ಕೃತಿ ಒಳಗ ಪೇಪರ ಅಂದರ ದೇವರ ಅಂತ ಮಕ್ಕಳಿಗೆ ಹೇಳಿ ಕೊಟ್ಟ ಎಲ್ಲೆರ ಕಾಲಗ ಅವು ತುಳದರ ನಮಸ್ಕಾರ ಮಾಡಸ್ತೇವಿ.
ಇದ ಯಾವದೊ ಸುಡಗಾಡ ಪಾಶ್ಚ್ಯಾತ ಸಂಸ್ಕೃತಿ, ಪೇಪರ ಎದಕ್ಕ ಉಪಯೋಗಿಸಬೇಕು ಎದಕ್ಕ ಬ್ಯಾಡಾ ಅನ್ನೋದು ತಿಳಿಯಂಗಿಲ್ಲಾ ಏನಿಲ್ಲಾ. ಇದನ್ನ ಮಾಡರ್ನ ಸಂಸ್ಕೃತಿ ಅಂತ ನಾವು ಫಾಲೊ ಮಾಡಲಿಕ್ಕೆ ಹತ್ತೇವಿ ಹುಚ್ಚರಂಗ ಇಷ್ಟ.
ಅಲ್ಲಾ ಎಷ್ಟ ಕಾಲ ಬದಲಾಗೇದ ನೋಡ್ರಿ, ಇನ್ನು ಹುಬ್ಬಳ್ಳ್ಯಾಗ ಹತ್ತ ಮನಿ ನಡಕ ಒಂದ ಸಂಡಾಸ ಇರೋಹಂತಾ ಚಾಳ ಅವ, ಅದರ ಮುಂದ ಈಗ ಸಿಮೆಂಟಿನ ಗಟರ ಅವ, ಮ್ಯಾಲೆ ನೀರಿಂದು ಏನ ಕೊರತೆ ಇಲ್ಲರಿ, ಕೆಲವೊಂದ ಕಡೆ ಅಂತೂ 24 x 7ನೀರ ಬರತದ…ಅಲ್ಲಾ…ಇಷ್ಟೇಲ್ಲಾ ಇದ್ದರು ನಮಗ್ಯಾಕರಿ ಈ ಸುಡಗಾಡ ಹಾಳಿ ಸಹವಾಸ ಅಂತೇನಿ. ಏನೋ ನನ್ನ ಮಗಳ toilet paper ಕೈಯಾಗ ಹಿಡಕೊಂಡ ಬಂದ್ಲು ಅಂತ ಗಂಡಾ ಹೆಂಡತಿ ಕೂಡಿ ತಾಜ ಹೊಟೇಲನಾಗ ಕೂತ ಹಳೇದನ್ನೇಲ್ಲಾ ನೆನಸಿಗೊಂಡ್ವಿ.
ಅದರಾಗಂತು “ಅವ್ವಾ…ನಂದ ಆತು, ನೀರ ಹಾಕ ಬಾ” ಅಂತ ನನ್ನ ಮಗಳ ದಿವಸಾ ಒಳಗಿಂದ ಒದರಿದಾಗೊಮ್ಮೆ ನನಗ ನಮ್ಮ ರಸ್ತೆದಾಗ ಕೂತ ಒದರೊ ದಿವಸ ನೆನಪಾಗಿ ಒಂಥರಾ nostalgia ಆದಂಗ ಆಗತದ, ಅದಕ್ಕ ನಿಮ್ಮ ಜೊತಿ ಹಂಚಗೊಂಡರಾತು ಅಂತ ಇಷ್ಟ ಬರಿಬೇಕಾತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ