ಊ ಲಾ ಲಾ ಲಾ ಲೇಓ……..

ಹಂಗ ಹೆಡ್ಡಿಂಗ್ ಓದಿ ಗಾಬರಿ ಆಗಿ ಇವಂಗೇನ್ ನಿನ್ನಿದ ಇನ್ನೂ ಇಳದಿಲ್ಲೇನ ಅನ್ನಬ್ಯಾಡ್ರಿ. ಇದ ಒಂದ ವಾರದ ಹಿಂದಿಂದ.
ಒಂದ ಹತ್ತ ದಿವಸದ ಹಿಂದ ನನಗ ಅಮೇರಿಕಾದಿಂದ ನಮ್ಮ ಸಾವಜಿ ದೋಸ್ತ ಫೋನ್ ಮಾಡಿ ” ಲೇ, ನಮ್ಮ ದೇಶದಾಗ ನ್ಯಾಶನಲ್ ಬೀಯರ ಡೇ ಮಾಡೋರ ಇದ್ದಾರ, ಯಾರನರ ಶಾಣ್ಯಾರನ ಇಂಡಿಯಾದಿಂದ ಮಾತಾಡಲಿಕ್ಕೆ ಕರಸ ಅಂತ ಹೇಳ್ಯಾರ. ನೀ ಹೆಂಗ ಇದ್ದರು ಹುಬ್ಬಳ್ಳಿ ಕಮರಿಪೇಟದಾಗ ಹುಟ್ಟಿ ಬೆಳದಾಂವ, ಒಂದ ಬಿಟ್ಟ ಹತ್ತ ಬ್ರ್ಯಾಂಡ್ ಬಗ್ಗೆ ಗೊತ್ತಿದ್ದಾಂವ, ಗಾಡಿ ಖರ್ಚ ಕೊಡತೇವಿ ಬಂದ ಒಂದ ನಾಲ್ಕ ಮಾತಾಡಿ ಬೀಯರ ಹೊಡದ ಹೋಗ” ಅಂತ ಹೇಳಿದಾ.
ಹಂಗ ಹೋಗೊ ಬರೊ ಗಾಡಿ ಖರ್ಚ ಕೊಟ್ಟ ಮ್ಯಾಲೆ ಬೀಯರ್ ಕುಡಸಿದರ ನಾವು ನರಕಕ್ಕು ಹೋಗಿ ಬರೋ ಮಂದಿ ಇನ್ನ ಅಮೇರಿಕಾಕ್ಕ ಬಿಡ್ತೇವಾ ? ಆತ ತೋಗೊ ಬಂದ ಹೋಗ್ತೇನಿ ಅಂತ ಒಪ್ಪಗೊಂಡೆ.
ಹಿಂದಕ ಅಮೇರಿಕಾದಾಗ ಒಂದನೇ ವಿಶ್ವ ಯುದ್ಧ ಆದ ಮ್ಯಾಲೆ ಕಂಡ-ಕಂಡೋರ ಬೀಯರ್ ತಯಾರ್ ಮಾಡೋದನ್ನ ಸರ್ಕಾರದವರ ಬ್ಯಾನ್ ಮಾಡಿದ್ದರು. ಈಗ ನಮ್ಮ ಹುಬ್ಬಳ್ಳಿ ಕಮರೀಪೇಟ್ಯಾಗ ಬ್ಯಾನ ಮಾಡಿ ನಮ್ಮ ಹೊಟ್ಟಿ ಮ್ಯಾಲೆ ಕಾಲ ಕೊಟ್ಟಾರಲಾ ಹಂಗ. ಆದರ ಮುಂದ ೧೩ ವರ್ಷ ಆದ ಮ್ಯಾಲೆ ಅಂದರ 1933 ಎಪ್ರಿಲ್ 7ಕ್ಕ ಆ ಬ್ಯಾನ್ ವಾಪಸ ತೊಗಂಡ ಇನ್ನ ನಿಮಗ ಏಷ್ಟ ಬೇಕ ಅಷ್ಟ, ಯಾ ಬ್ರ್ಯಾಂಡ ಬೇಕ ಆ ಬ್ರ್ಯಾಂಡದ್ದ ಬೀಯರ್ ತಯಾರ ಮಾಡ್ಕೋರಿ ಅಂತ ಪರ್ಮಿಶನ್ ಕೊಟ್ಟರು. ಹಿಂಗಾಗಿ ಅಮೇರಿಕಾದಾಗ ವರ್ಷಾ ಎಪ್ರಿಲ್ 7ಕ್ಕ ನ್ಯಾಶನಲ್ ಬೀಯರ ಡೇ ಅಂತ ಸೆಲೆಬ್ರೇಟ ಮಾಡ್ತಾರ. ಅದ ಹೆಂಗ 13 ವರ್ಷ ಗಟ್ಟಲೆ ಬೀಯರ್ ಇಲ್ಲದ ಅವರ ಮಂದಿ ಜೀವನಾ ಕಳದರೋ ಆ ದೇವರಿಗೆ ಗೊತ್ತ. ನಮಗ ಶ್ರಾವಣಮಾಸದಾಗ ಒಂದ ತಿಂಗಳ ಬಿಟ್ಟಾಗ ತಡ್ಕೋಳ್ಳಿಕ್ಕೆ ಆಗಲಾರದ ಯಾವಾಗ ಶ್ರಾವಣ ಮುಗಿತದೋ ಅನಿಸಿರ್ತದ.
ಹಂಗ ಅಮೇರಿಕಾದ್ದ ಬೀಯರ ಡೇ ಬಗ್ಗೆ ಕೇಳಿದ ಮ್ಯಾಲೆ ನಾವು ಯಾಕ ನಮ್ಮ ದೇಶದಾಗ ಬೀಯರ ಡೇ ಶುರು ಮಾಡಬಾರದು ಅಂತ ಅನಸಲಿಕತ್ತ. ಅಲ್ಲಾ ನಮಗೂ ಒಂದ ಯಾವದರ ನ್ಯಾಶನಲ್ ಡ್ರಿಂಕ್ ಡೇ ಬೇಕಲಾ ಮತ್ತ?
ಆದರ ನಮ್ಮ ದೇಶದಾಗ ಈಗಾಗಲೇ ಭಾಳಷ್ಟ ನ್ಯಾಶನಲ್ ಡೇ ಅವ, ಇನ್ನ ಮತ್ತ ಯಾವದರ ಹೊಸಾ ’ಡೇ’ ಮಾಡಬೇಕಂದರ ಪಾರ್ಲಿಮೆಂಟನಾಗ ಡಿಬೇಟ್ ಆಗಬೇಕು. ಹಂಗ ಆಡಳಿತ ಪಕ್ಷದವರ ಏನರ ಬೀಯರ್ ಡೇ ಮಾಡಲಿಕ್ಕೆ ಹೊಂಟರ, ವಿರೋಧಿ ಪಕ್ಷದವರ ವೈನ್ ಡೇ ಮಾಡೋಣ ಅಂತಾರ, ಇನ್ನ ಸ್ವದೇಶಿ ಮಂದಿ ’ಶೆಂಧಿ’ಡೇ ಮಾಡೋಣ ಅಂತಾರ, ಅದರಾಗ ನಂಬದ ಡೆಮಾಕ್ರೇಸಿ ಬ್ಯಾರೆ, ಹಂಗ ಒಂದ ಬಿಟ್ಟ ಇನ್ನೊಂದ ಮಾಡಲಿಕ್ಕೂ ಬರಂಗಿಲ್ಲಾ. ಸುಳ್ಳ ಯಾಕ ಲಫಡಾ, ಸುಮ್ಮನ ನಾವು ’everyday’ಎಲ್ಲಾದರದ್ದು ’day’ ಮಾಡ್ಕೊತ ಆರಾಮ ಇರೋದ ಛಲೊ ಅನಸ್ತದ.
ನನಗ ನಮ್ಮ ದೋಸ್ತ ಹುಬ್ಬಳ್ಳಿಯಿಂದ ಬೆಂಗಳೂರಿಗೆ Kingfisher Airlinesದ ಟಿಕೇಟ್ ಮಾಡಿಸಿ ಮುಂದ ಅಲ್ಲಿಂದ ಅಮೇರಿಕಾದ್ದ ಟಿಕೇಟ ತಗಿಸಿ ಕೊಟ್ಟಿದ್ದಾ. ಹೆಂಗಿದ್ದರೂ ನಾ ಬೀಯರ ಡೇ ಕ್ಕ ಹೊಂಟೇನಿ, ಅದು Kingfisherನಾಗ ಅಂತ ಹುಬ್ಬಳ್ಳಿ ಬಿಡೋ ಮುಂಚೆ ನಮ್ಮ ಎಲ್ಲಪ್ಪಣ್ಣನ ಬಾರ್ ನಾಗ ಒಂದ ರೌಂಡ್ ಮುಗಿಸಿ ಉ ಲಾ ಲಾ ಲಾ ಲೇಓ ಅನ್ಕೋತ ಏರಪೋರ್ಟಗೆ ಹೋದೆ. ಇನ್ನೇನ check-in ಮಾಡಬೇಕು ಅನ್ನೋದರಾಗ kingfisher flight KF69 scheduled to depart from Hubli to Bangalore has been cancelled, regret the inconvenience ಅಂತ ಅನೌನ್ಸ್ ಮಾಡಿದ್ರು.
ಅದನ್ನ ಕೇಳಿದ್ದ , ನನಗ ನಾ ಕುಡದದ್ದ KF Blue ಬೀಯರ Black ಆಗಿ ಕಣ್ಣಿಗೆ ಕತ್ತಲ ಬಂದಂಗ ಆತ. ಪುಗಶೆಟ್ಟೆ ಅಮೇರಿಕಾಕ್ಕ ಹೋಗಿ ಬೀಯರ್ ಮ್ಯಾಲೆ ಭಾಷಣಾ ಮಾಡಬೇಕು ಅಂತ ಅನ್ಕೊಂಡಿದ್ದೆ ಈ Kingfisher ನವರು ಎಲ್ಲಾ ಹದಿಗೆಡಸಿ ಬಿಟ್ಟರು. flight ಯಾಕ cancell ಮಾಡಿದ್ರಿ ಅಂತ ಕೇಳಿದ್ರ ’ಪೈಲಟಗ ಮೂರ ತಿಂಗಳದಿಂದ ಪಗಾರ ಆಗಿಲ್ಲಾ, ಅಂವಾ ಪಗಾರ ಕೊಟ್ಟರ ವಾಪಸ ಬೆಂಗಳೂರಿಗೆ ಬರ್ತೇನಿ’ ಅಂತ ಹೇಳಿ plane ಸೈಡಗೆ ಹಚ್ಚಿ ಹೋಗ್ಯಾನ ಅಂದ್ರು.
ನಾ ತಲಿ ಕೆಟ್ಟ, ಅವನೌನ ಈಗ ಹೆಂಗಿದ್ರು ಗ್ಲೋಬಲೈಸೇಶನ್ ಆಗೆದ , ಹಂಗ ಯಾರ ಬೇಕಾದವರು ಎಲ್ಲೆ ಬೇಕಾದಲ್ಲೆ ಯಾ ದೇಶದ್ದ ಬೇಕ ಆ ದೇಶದ್ದ ಬೀಯರ ಡೇ ಸೆಲೆಬ್ರೇಟ್ ಮಾಡಬಹುದು ಅಂತ ಮತ್ತ ವಾಪಸ ಎಲ್ಲಪ್ಪಣ್ಣನ ಬಾರ್ ಗೆ ಹೋಗಿ ಒಬ್ಬನ ಕೂತ ಕುಡದ beer day ಸೆಲೆಬ್ರೇಟ್ ಮಾಡಿ ಉ ಲಾ ಲಾ ಲಾ ಲೇಓ ಅಂತ ಉಳ್ಯಾಡ್ಕೋತ ಮನಿಗೆ ಹೊದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ