ಬ್ರಾಹ್ಮಣರಾಗ ಕನ್ಯಾನ ತೀರಿ ಹೋಗ್ಯಾವ ಅಂತ – ಭಾಗ 1

ಬ್ರಾಹ್ಮಣರಾಗ ಕನ್ಯಾ ತೀರಿ ಹೋಗ್ಯಾವ ಅಂದರ ಎಲ್ಲಾ ತೀರಕೊಂಡಾವ ಅಂತಲ್ಲಾ, ಖಾಲಿ ಆಗ್ಯಾವ ಅಂದರ ಮುಗದಾವ ಅಂತ ಅರ್ಥ. ಮುಗದಾವ ಅಂದರ ಎನ ಎಲ್ಲಾ ಪೂರ್ತಿಖಾಲಿನೂ ಆಗಿಲ್ಲಾ ಆದರ ತಳಕ್ಕ ಅಂತೂ ಹತ್ಯಾವ. ಆ ಉಳದ ತಳದಾಗಿನ ಕನ್ಯಾಗಳಿಗೆ ಈಗ ಎಲ್ಲಿಲ್ಲದ “ಡಿಮಾಂಡ-ಡಿಮಾಂಡ್”.

ನಮ್ಮ ಪೈಕಿ ಎನಿಲ್ಲಾಂದರು ಒಂದ ೮-೧೦ ವರಾ ಅವ. ಒಂದಿಷ್ಟ ಅಗದೀ ಎಳೇವ ಅದಾವ ಒಂದಿಷ್ಟ ಇಗಾಗಲೇ ಬಲತ ಬಿಟ್ಟಾವ. ಪಾಪ ಅವಕ್ಕ ಒಂದು ಸರಿಯಾದ ಕನ್ಯಾ ಸಿಗವಲ್ವು. ತಿಂಗಳಿಗೆ ೧೫ ಸಾವಿರ ಪಗಾರದಿಂದ ಹಿಡದ ೬೦ ಸಾವಿರ ಗಳಸೋ ವರಾ ಇದರಾಗ್ ಇದ್ದಾರ ಆದರೂ ಇವರನ್ ಮೂಸ ನೋಡರಿಲ್ಲದಂಗ ಆಗೈದ. ಅವರ ಅವ್ವಾ-ಅಪ್ಪಾ ಅಂತೂ ಏನ ಬಂತಪಾ ಹಣೇಬರಹ ಅಂತ ಹಣಿ ಹಣಿ ಬಡಕೋಳೊಹಂಗ ಆಗೆದ. ಜೀವನದಾಗ್ ‘ಸೊಸಿ ಕೈಲೆ ಒಂದ ತುತ್ತ್ ತವಿ ಅನ್ನಾ ಮಾಡಿಸಿಕೊಂಡ ಉಣ್ಣೋದು ದೂರ ಉಳಿತು, ತಿವಿಸಿಗೊಳ್ಳೊ ನಸೀಬನು ಇಲ್ಲಲಾ’ ಅಂತ ಕೊರಗಲಿಕ್ಕ ಹತ್ತಾರ. ವೈಷ್ಣವರು ಸ್ಮಾರ್ತರದ ನಡಿತದ ಅಂತಾರ, ಸ್ಮಾರ್ತರು ಹವೈಕ ಇದ್ದರು ಸೈ ಅಂತಾರ, ಚಿತ್ಪಾವನರು ಕರಾಡೆ ಇದ್ದರು ಜೈ ಅಂತಾರ. ಲಗ್ನಾ ಮಾಡ್ಕೊಳು ಹುಡಗರು ಅಂತು ಒಟ್ಟ ಫ್ರೆಶ್ ಹುಡಗಿ ಇದ್ದರ ಸಾಕು ಅನ್ನೋ ಪರಿಸ್ಥಿತಿ ಬಂದ ಬಿಟ್ಟದ.

ಹಿಂಗ ಯಾಕ ಆಗೆದ ಅಂದರ ಎಲ್ಲಾರಿಗೂ ತಮ್ಮ ಅಳಿಯಾ ಕಂಪ್ಯುಟರ ಇಂಜೀನಿಯರ್ ಬೇಕ್ರಿಪಾ, ಫಾರೇನ್ನಾಗ್ ಇರಬೇಕು, ಮುಂದ ಹೆಂಡತಿನ್ನೂ ಕರಕೊಂಡ್ ಹೋಗಬೇಕು, ಒಂದನೇ ಬಾಣಂತನಕ ಇವರೂ ಫಾರೆನಗೆ ಹೋಗೊರು. ಒಂದ ಕಾರು, ಬೆಂಗಳೂರ ಅಥವಾ ಪೂಣೆ ಒಳಗ ಒಂದ ಅಪಾರ್ಟಮೆಂಟ ಅಂತೂ ಸೈ ನ ಸೈ ( ಅಂದರ ಇದ್ದ ಇರತದ ಅಂತ ಇವರಿಗೆ ಖಾತ್ರಿ). ಇವರ ಬೀಗತನ ಏನಿದ್ರು ನಾರಯಣಮೂರ್ತಿ(ಇನ್ಫೊಸಿಸ್), ಅಜಿಮ್ ಪ್ರೇಮಜಿ(ವಿಪ್ರೊ) ಅಥವಾ ರತನ ಟಾಟಾ( ಟಿ.ಸಿ.ಎಸ್) ಅಂಥಾವರ್ ಜೋತಿನ. ನಿಮ್ಮ ಮಗ ಅಲ್ಲೆ ಕೆಲಸಕ್ಕ ಇದ್ರ ನಿಮ್ಮನ್ನ ಮಾತಡಸ್ತಾರ್, ಅದು ನೀವು ನಾಂದಿ ಇಟಗೊಳ್ಳಿಕ್ಕೆ ಬೇಕು ಅಂತ ಹೇಳಿ. ಇತ್ತಿಚಿಗಂತೂ ಇವರಿಗೆ ಇನ್ಫೊಸಿಸ್, ವಿಪ್ರೊ, ಟಿ.ಸಿ.ಎಸ್ ಇವೆಲ್ಲಾ ಗೋತ್ರದಕ್ಕಿಂತಾ ಇಂಪಾರ್ಟೆಂಟ ಅಗೇದ. ಅದರಾಗ ಬ್ಯಾರೆ ಹುಡಗಿನೂ ಏನರ ಜರ ಕರತಾ ಐ.ಟಿ ಇಂಡಸ್ಟ್ರಿ ಒಳಗ ಇದ್ದರ ಮುಗದ ಹೋತ, ಆವಾಗ ಸ್ವ-ಗೋತ್ರ ನ ಬೇಕ. ( ಐ.ಟಿ ಅನ್ನೊ ಗೋತ್ರ). ಇನ್ನೊಂದ ಸ್ವಲ್ಪ ದಿವಸ ತಡಿರಿ ಬರಬರತ ಈ ಐ.ಟಿ ಕಂಪನಿ ಎಚ್.ಆರ್. ಡಿಪಾರ್ಟಮೆಂಟನವರು ವರ್ಷಕ್ಕ ಎರಡ-ಮೂರ ಸಲ ವಧು-ವರರ ಸಮಾವೇಷ ಮಾಡತಾರ. ’ಇನ್ಫೊಸಿಸ್ ವಧು-ವರರ ಸಮಾವೇಷ’ ‘ವಿಪ್ರೊ ವಿವಾಹ ಕೇಂದ್ರ’ ಅಂತೇಲ್ಲಾ ಹುಟ್ಟಲಿಲ್ಲಾ ಅಂದರ ಹೇಳ್ರಿ ನಂಗ. ಬ್ರಾಹ್ಮಣರಿಗೆ ‘ರೆಸ್ಯೂಮ್’ ಜೊತಿ ‘ಕುಂಡ್ಲಿ’ಅಟ್ಯಾಚ ಮಾಡ್ರಿ ಅಂತ ಹೇಳ್ತಾರ.

ಇರೋ ಒಂದ ಕನ್ಯಾದ ಕುಂಡ್ಲಿನ ಹತ್ತ ಮಂದಿಗೆ ಕೊಡ್ತಾರ,ಕುಂಡ್ಲಿ ಕೂಡಿ ಬಂದ ನಾಲ್ಕು ವರಗಳ ಪೈಕಿ ಆಮೇಲೆ ಕೂತ ಒಂದ ಆರಸ್ತಾರ
‘ಅಂವಾ ಇಲ್ಲೆ ಬೆಂಗಳೂರಾಗ ಕೋರಮಂಗಲ ಅಂತ, ಅಬ್ರಾಡ್ ಚಾನ್ಸ ಭಾಳ ಕಡಿಮಿ ಅಂತ’

‘ ಇಂವಾ ನ್ಯೂ ಜೆರ್ಸಿ ಒಳಗ ಇದ್ದಾನಂತ, ಅಲ್ಲೆ ಭಾಳ ಥಂಡಿ ಬ್ಯಾರೆ ಇರತದ ಅಂತ, ಮೊದಲ ನನಗ ಅಸ್ಥಮಾ ಅದ ,ಇದ ಬ್ಯಾಡ ಬಿಡ್’ “ಈ ವರಾ ನೋಡ್ರಿ,ವರ್ಷದಾಗ ಆರ ತಿಂಗಳಾ ಲಂಡನ್ನಾಗ ಆರ ತಿಂಗಳ ಇಂಡಿಯಾದಾಗ , ವರ್ಷಾ ಬ್ಯಾರೆ ಬ್ಯಾರೆ ದೇಶಕ್ಕ ಕಳಸ್ತಾರಂತ,ಪ್ರೊಜೆಕ್ಟ ಮ್ಯಾನೇಜರ ಬ್ಯಾರೆ, ಇಂವಾ ಅಡ್ಡಿಯಿಲ್ಲಾ ಅನಸ್ತದ, ಯಾಕರಿ ?” ಅಂತ ಹುಡಗಿ ಅವ್ವಾ ಹುಡಗರನ್ನ ಅಕ್ಕಿ ಒಳಗಿನ ಬೆಂಚಳ್ಳ ಆರಿಸಿದಂಗ ಆರಸಾತಳ.

ಹಿಂತಾ ಪರಿಸ್ಥಿತಿ ಬಂದರ ಮುಂದ ಹೆಂಗ ಅಂತೇನಿ. ಎಲ್ಲಾರಿಗೂ ಸಾಫ್ಟ್ ವೇರ ಅಳಿಯಾನ ಬೇಕಂದ್ರ ಬ್ಯಾರೇ ಹಾರ್ಡವೇರ ಮಂದಿ ಎಲ್ಲೆ ಹೋಗ್ಬೇಕು? ಏನ ಮಾಡ್ಬೇಕು?

ಅದರಾಗ ಈ ಬ್ರಾಹ್ಮಣರ ವಧು-ವರರ ಮಾಹಿತಿ ಕೇಂದ್ರದಾಗ ಅಂತೂ ಯಾವಗಲು ಜನ ತುಂಬಿ ತುಳಕ್ಯಾಡತಿರತಾರ್. ಒಂದ ಕನ್ಯಾದ್ದ ಹತ್ತ-ಹತ್ತ ಮಂದಿ ಒಮ್ಮೆ ಅಡ್ರೆಸ್ ಒಯ್ತಾರ್. ಈಗ ಎನಿದ್ದರು ಒಪನ್ ಕಾಂಪಿಟೇಷನ್.

“ನೀವ ನೋಡಿ ಪಸಂದ ಆಗಲಾರದ ಕನ್ಯಾ ಯಾವರ ಅವ ಎನ್ರಿ ?”

” ಆ ದಿಕ್ಷೀತವರ ಕನ್ಯಾ ಮುರಕೊಂಡ್ರೆಂತ, ಭಾಳ ಛಲೋ ಆತ ತಗೊರಿ, ನಮ್ಮ ಹುಡಗ್ ಕುಂಡ್ಲಿ ಕೇಳೆವಿ”

ಅಂತ ಬಾಯಿ ಬಿಟ್ಟ ಕೇಳ್ತಾರ/ ಹೇಳ್ತಾರ ಅಂದರ ಯಾ ಮಟ್ಟಕ್ಕ ಕನ್ಯಾದ ಬರಾ ಬಂದದ ನಮ್ಮಂದ್ಯಾಗ ನೀವ ವಿಚಾರ ಮಾಡ್ರಿ.

ನಮ್ಮ ಹುಬ್ಬಳ್ಳ್ಯಾಗೂ ಒಂದ ಇಂಥಾ ಕೇಂದ್ರ ಅದ. ‘ಸುಯೋಗ ವಧು-ವರರ ಸಹಾಯಕ ಕೇಂದ್ರ’ ಅಂತ ಅದರ ಹೆಸರು. ಅದನ್ನ ನಡೆಸೋರ ಹೆಸರನು ‘ಆಡೂರ’ ಅಂತನ ಅದ. ಹಿಂಗಾಗಿ ವಾರದಾಗ್ ಆವಾಗ-ಇವಾಗ ನಮ್ಮ ಮನಿಗೆ ಒಂದ ಮೂರ -ನಾಲ್ಕ್ ಫೊನ್ ತಪ್ಪಿ ಬರತಾವ. ನಮ್ಮನಿ ಫೊನ ನನಗ ಎತ್ತಲಿಕ್ಕೆ ಬ್ಯಾಸರ ಆಗಿರ್ತದ ಅದರಾಗ ಫೊನ ಎತ್ತಿದ ಮ್ಯಾಲೆ ಇದು ‘ಸುಯೋಗ ವಧು-ವರರ ಕೇಂದ್ರ ಏನ್ರೀ? ಯಾವರ ಕನ್ಯಾ ಅವ ಎನ್ರಿ?’ ಅಂತ ಕೇಳಿದಾಗ ನನಗ ಸಿಟ್ಟ ಭಾಳ ಬರತದ.

ಒಂದ ಸಂಡೆ ಮಧ್ಯಾಹ್ನ ಅದ ಇನ ಉಟಾ ಮಾಡಿ ಹಿಂಗ ಅಡ್ಡಾಗಿದ್ದೆ. ಫೊನ್ ಹೊಡ್ಕೊಳ್ಳಿಕ್ಕೆ ಹತ್ತು. ಯಾರರ ಎತ್ತಾರ ಬಿಡು ಅಂತ ಸುಮ್ಮನಿದ್ದೆ ಯಾರು ಎತ್ತಲಿಲ್ಲ. ಉಳದವರೆಲ್ಲಾ ಊಟಕ್ಕ ಕೂತಿದ್ರು ಹಿಂಗಾಗಿ ನಾನ ಫೊನ್ ಎತ್ತಬೇಕಾತು. ಫೊನ್ ಮಾಡಿದವರು ಎತ್ತಿದ ತಕ್ಷಣ ಸೀದಾ ವಿಷಯಕ್ಕ ಬಂದ್ರು “ಯಾವದರ ಕನ್ಯಾ ಅವ ಏನ್ರಿ?” ಅವರು ಇದು ವಧು-ವರರ ಕೇಂದ್ರ ಹೌದೊ ಅಲ್ಲೊ ಅಂತನು ಕೇಳಲಿಲ್ಲ. ನಾನೂ ತಲಿಕೆಟ್ಟ
‘ಕನ್ಯಾ ಅದ’ ಅಂದೆ

“ಹೌದಾ, ಭಾಳ ಛಲೋ ಆತು, ಯಾ ಗೋತ್ರ” ಅಂದರು. ನಾ ಸ್ವಲ್ಪ ನೆನಪ ಮಾಡ್ಕೊಂಡು ‘ಕಶ್ಯಪ’ ಅಂದೆ.

“ಹೌದಾ, ಭಾಳ ಛಲೋ ಆತು, ನಂಬದ ಜಮದಗ್ನಿ. ಗೋತ್ರ ಬಿಡತದ. ಅನ್ನಂಗ ನಿಂಬದು ರಾಯರ ಮಠಾನೊ? ಉತ್ತರಾಧಿ ಮಠಾನೊ?”

ನಂಬದು ‘ಸಿಧ್ಧಾರೂಢ ಮಠ’ ಅನ್ನೊವಿದ್ದೆ. ಬ್ಯಾಡ ಬಿಡ ಅಂತ ‘ಶಂಕರ ಮಠಾ’ ಅಂದೆ.

“ಹೌದಾ, ಭಾಳ ಛಲೋ ಆತು, ನಮಗ ಸ್ಮಾರ್ತರದ್ದ ಇದ್ದರು ನಡಿತದ, ಅನ್ನಂಗ ಹುಡಗಿ ಎನ ಮಾಡತಾಳ ಅಂದರಿ?”

ನಾ ಬಗ್ಗಿ ಅಡಗಿ ಮನ್ಯಾಗ ನೋಡಿದೆ ನನ್ನ ಮಗಳ ಎನ ಮಾಡ್ಲಿಕ್ಕತ್ತಾಳ ಅಂತ. ಅವರವ್ವ ಅಕಿಗೆ ಊಟಾ ಮಾಡೋದನ್ನ ಕಲಸಲಿಕ್ಕತ್ತಿದಳು.
“ಈಗ ಇನ್ನೂ ಕಲಿಕತಾಳ” ಅಂದೆ. ಮುಂದ ಇನ್ನು ಹೇಳೊದರಾಗ

“ಹೌದಾ, ಭಾಳ ಛಲೋ ಆತು, ಎನ ಲಗ್ನಾದ ಮ್ಯಾಲೇನು ಗ್ರ್ಯಾಜುವೇಷನ ಮುಗಸ ಬಹುದು ತೊಗಳ್ರಿ, ಅನ್ನಂಗ ಹುಡಗಿಗೆ ಎಷ್ಟ ವಯಸ್ಸು ಅಂದರಿ?”
“ಈಗ ಎರಡ ಮುಗದ ಮೂರರಾಗ ನಡಿಲಿಕ್ಕತ್ತದ. ಈ ಸಲ ನರ್ಸರಿಗೆ ಹಚ್ಚೇವಿ” ಅಂತ ಒತ್ತಿ ಹೇಳಿದೆ. ಬಹುಶಃ ಈಗ ಅವರಿಗೆ ತಿಳಿತ ಕಾಣಸ್ತದ
“ಮದ್ಲ ಹೇಳಬಾರದ ಏನ್ರಿ, ರಾಂಗ ನಂಬರ ಅಂತ” ಅಂತ ಹೇಳಿ ಫೊನ್ ಕುಕ್ಕರಿಸಿದರು.

ಮತ್ತೊಂದ ಸಲಾನು ಹಿಂಗ ಆಗಿತ್ತ. ಒಮ್ಮೆ ಸಂಜಿ ಮುಂದ ಫೊನ್ ಬಂತು “ಲೇ, ಫೊನ್ ಎತ್ತ” ಅಂತ ನನ್ನ ಹೆಂಡತಿಗೆ ಒದರಿದೆ. ಅಕಿ ಫೊನ್ ಎತ್ತಿ ಮತ್ತ ನನಗ ಕರದ್ಲು “ರ್ರಿ, ನಿಂಬದ ಫೊನ್” ಅಂದ್ಲು. ಯಾರದು ಅಂದೆ ಯಾರೋ ‘ಆಡೂರವರಿಗೆ ಕರಿರಿ’ ಅನ್ಲಿಕತ್ತಾರ ಅಂದ್ಲು. ಯಾರದಪಾ ಫೊನ್ ಮುರಸಂಜಿ ಹೊತ್ತನಾಗ ಅಂತ ತೊಗೊಂಡೆ. ಫೊನ್ ಮಾಡಿದವರು “ಇದು ಸುಯೋಗ ಆಡೂರ ಅವರ ನಂಬರ್ ಎನ್ರಿ?” ಅಂದರು. ಈ ಸಲಾ ಅಲ್ಲಾ, ರಾಂಗ್ ನಂಬರ ಅಂದೆ.

“ಇಲ್ಲಾ, ಪರವಾಗಿಲ್ಲ ಬಿಡಿ, ನೀವು ಜನಿವಾರದವರ ಏನು?” ಅಂತ ಸವಕಾಶ ಕೇಳಿದರು. ಇಲ್ಲಾ ‘ನಾವು ಉಡದಾರದವರು’ಅನ್ನೋವ ಇದ್ದೆ ಆದರ ಯಾಕ ಸುಮ್ಮನ ಅಂತ ಎದಿಮ್ಯಾಲೆ ಕೈ ಆಡಿಸಿಕೊಂಡ, ಮುಟ್ಟಿ ನೋಡ್ಕೊಂಡ ‘ಹೌದು’ಅಂದೆ.
“ನಿಮ್ಮ ಮನ್ಯಾಗ ಯಾರಾದರು ಕನ್ಯಾ ಇದಾರಾ?” ಅಂದರು. ನಾ ಯಾವುದು ಇಲ್ಲಾ ಅಂದೆ.
” ಅಲ್ಲಾ, ಮತ್ತ, ಈಗ ಯಾರೋ ಹುಡಗಿ ಫೊನ ಎತ್ತಿದ್ರಲಾ?”
“ಅಕಿ ನನ್ನ ಹೆಂಡತಿ , ಅಕಿದ ಲಗ್ನ ಆಗೇದ”ಅಂದೆ.
“ಹೌದಾ ! ಹುಡುಗಿ ಧ್ವನಿ ಅನಸ್ತು ಅದಕ್ಕ ಕೇಳಿದೆ”
“ನಾ ಮದುವಿ ಆಗಿದ್ದ ಹುಡಗಿನ್ನ, ಮುದಕಿನ್ನಲ್ಲಾ” ಅಂತ ಈ ಸಲಾ ನಾ ಫೊನ್ ಕುಕ್ಕರಿಸಿದೆ.

ಒಂದ ಸಲಾ ಇದಕ್ಕೆಲ್ಲಾ ಕಾರಣ ಏನು? ಅಂತ ವಿಚಾರ ಮಾಡಿದಾಗ ತಪ್ಪು ನಮ್ಮಪ್ಪನ ಜನರೇಶನ ಮಂದಿದ ಅಂತ ಭಾಳ ಕ್ಲಿಯರ ಅದ. ಆವಾಗ ನಮಗ ‘ಆರತಿಗೊಬ್ಬ ಮಗಳು-ಕೀರ್ತಿಗೊಬ್ಬ ಮಗಾ ಸಾಕ’ ಅಂತ ಒಂದೊಂದ, ಎರಡೆರಡ ಹಡಕೋತ ಹೋದರು. ಕೆಲವರಂತು ‘ನೀರ ಬಿಡಲಿಕ್ಕೆ ಒಬ್ಬ ಮಗಾ ಸಾಕು’ ಅಂತ ಬರೆ ಒಂದ ಗಂಡ ಹಡದ ಕೈ ಬಿಟ್ಟರು.ಇನ್ನೊಂದಿಷ್ಟ ಮಂದಿ ಆರಿಸಿ-ಆರಿಸಿ ( ಅಂದರ ಹೆಣ್ಣ ಬಾಜು ಸರಿಸಿ-ಸರಿಸಿ) ಬರೇ ಗಂಡ ಹಡದ್ರು. ಎನ ಇವರಪ್ಪಂದ ಒಂದ ಎಪ್ಪತ್ತ ಎಕರೆ ಹೊಲಾ ಇದ್ದವರಗತೆ ಇವರಿಗೆ ಬರೆ ಗಂಡಸ ಮಕ್ಕಳ ಬೇಕಾಗಿತ್ತು. ಮುಂದ ಆ ಗಂಡಸ ಮಕ್ಕಳಿಗೆ ಹೆಣ್ಣ ಯಾವ ಹೊಲದಾಗ ಹುಟ್ಟತಾವ ಅಂತ ವಿಚಾರನೂ ಮಾಡಲಿಲ್ಲ. ಆದನ್ನ ಈಗ ನಮ್ಮ ಜನರೇಶನ ಹುಡುಗುರು ‘ನಿಮ್ಮಪ್ಪ ಮಾಡಿದ್ದನ್ನ ಉಣ್ಣೊ ಮಗನ’ ಅಂದಂಗ ಅನುಭವಿಸೊ ಹಂಗ ಆಗೇದ.

ಅದೇನ ಪುಣ್ಯಾನೋ ಏನೋ, ನಂದಂತು ಲಗ್ನ ಆತು. ಆ ಮಾತಿಗೆ ಈಗ ೧೧ ವರ್ಷ್ ಮುಗಿಲಿಕ್ಕು ಬಂತು. ಇನ್ನೊಂದ ವರ್ಷ ಮುಗದರ ಒಂದ ರೌಂಡ ವನವಾಸನು ಮುಗದಂಗ ಆಗತದ. ನೋಡಿದ್ದ ಒಂದ ಕನ್ಯಾ, ಅಕಿನ್ನ ಗಂಟ ಹಾಕ್ಕೊಂಡ ಬಿಟ್ಟೆ. ಅಕಸ್ಮಾತ ನಾನು ಎನರ ಕನ್ಯಾ ಆರಿಶಗೋತ ಕುತಿದ್ರ ನಂದ ಲಗ್ನನ ಆಗತಿದ್ದಿಲ್ಲಾ ಅಂತ ಈಗ ಅನಸಲಿಕ್ಕತ್ತದ. ಹಿಂತಾ ಐ.ಟಿ.,ಬಿ.ಟಿ ಮಂದಿ ಜೊತಿ ನನಗ ಕಾಂಪಿಟೇಷನ ಮಾಡ್ಲಿಕ್ಕೆ ಆಗತಿದ್ದಿಲ್ಲಾ, ನಾ ಮಾಮೂಲಿ ಒಂದ ಮಾರ್ವಾಡಿ ಕಂಪನ್ಯಾಗ ಕೆಲಸಾ ಮಾಡೋವಾ, ಏನೋ ನಮ್ಮ ಅವ್ವಾ-ಅಪ್ಪನ ಹಣೇಬರಹದಾಗ ‘ಸೊಸಿಗೆ ಕೂಡಿಸಿ ಮಾಡಿ ಹಾಕೋದ’ ಬರದಿತ್ತ ಅಂತ ನಂದ ಲಗ್ನ ಆತು.

ಒಂದಂತು ಖರೆ, ಇದ ಇದೇ ರೀತಿ ಮುಂದವರದರ ಭವಿಷ್ಯದೊಳಗ ಹೆಣ್ಣು ಹಡದವರು ತಮ್ಮ ಮಗಳನ ಕೊಡಬೇಕಾರ ಟೆಂಡರ ಕರಿತಾರ ಇಲ್ಲಾ ಐ.ಪಿ.ಎಲ್. ಗತೆ ಹರಾಜ ಮಾಡತಾರ. ಒಂಥರಾ ಸ್ವಯಂವರ ಪದ್ಧತಿ ಶುರು ಆಗ್ತದ. ದ್ವಾಪರ ಯುಗದ ಪಾಂಡವರಗತೆ ಒಬ್ಬಕ್ಕಿನ ಐದ-ಐದ ಮಂದಿ ಮಾಡ್ಕೊಳೊ ಪ್ರಸಂಗ ಬಂದರು ಬರಬಹುದು, ದ್ರೌಪದಿಯರ ಪುನರ ಜನ್ಮ ನಿಶ್ಚಿತ ಅಂತ ಅನಸಲಿಕ್ಕತ್ತದ. ಗಂಡ ಹಡದವರು ‘ಕನ್ಯಾದ ಗೋತ್ರ ಬಿಟ್ಟರ ಸಾಕು ಎಲ್ಲಿ ಜಾತಕ’ ಅಂದರ ಅವರ ಮಗಾ ‘ಲಿಂಗ ಬಿಟ್ಟರ ಸಾಕು ಯಾ ಜಾತಿ ಇದ್ದರ್ ಎನು’ ಅನ್ನೋ ಕಾಲ ಬಂದಬಿಟ್ಟದ.

ಈ ವಿಷಯ ಎಷ್ಟ ಬರದರು ಕಡಿಮಿನ ಅನ್ರಿ. ನಾ ಅಂತೂ ನಮ್ಮ ಪೈಕಿ ಇರೋ ಅಷ್ಟು ವರಕ್ಕು ಕನ್ಯಾ ಸಿಗೋಮಟಾ ಹೆಣ್ಣ ಹಡದವರ ಬಗ್ಗೆ ಬರದ ಬರದ ಜೀವಾ ತಿನ್ನೋದ ಬಿಡಂಗಿಲ್ಲಾ. ಈಗ ನೀವ ಹೇಳ್ರಿ ಬ್ರಹ್ಮಣರಾಗ ಕನ್ಯಾ ತೀರಿ ಹೋಗ್ಯಾವೊ, ಇಲ್ಲಾ. . . . ತೀರಕೊಂಡಾವೊ? ಅಲ್ಲಾ ಇದ್ದದ ಯಾವ ಕನ್ಯಾನೂ ನಮ್ಮ ಸಾಮಾನ್ಯ ಹಾರ್ಡವೇರ ವರಕ್ಕ ಉಪಯೋಗನ ಇಲ್ಲಾ ಅಂದ ಮ್ಯಾಲೆ ಅವು ‘ಇದ್ದರೇನು. . .ಬಿಟ್ಟರೇನು’

ಅನ್ನಂಗ ಮುಖ್ಯ ವಿಷಯಾನ ಮರತ ಬಿಟ್ಟೆ, ನಿಮ್ಮ ಪೈಕಿ ಯಾವದರ ಕನ್ಯಾ ಇದ್ದರ ಹೇಳ್ರಿ. ಯಾ ಗೋತ್ರ ಇದ್ದರು ಸರಿ. ನಮ್ಮ ಪೈಕಿ ೮-೧೦ ವರ ಅವ. ನಿಮ್ಮ ಕಮೆಂಟ ಜೊತಿ ಗೋತ್ರಾ ಬರ್ಯೋದನ್ನ ಮರಿಬ್ಯಾಡ್ರಿ ಮತ್ತ. ಮುಂದ ಗೋತ್ರ ಬಿಟ್ಟರ ಕುಂಡ್ಲಿ ಕೂಡಿಸಿ ನೋಡೋಣಂತ.

|| ಇತಿ ಶ್ರೀ ವಿಪ್ರವಿವಾಹ ಪುರಾಣೆ ಕನ್ಯಾನ್ವೇಷಣೇ ವಿವಾದೇ ಪ್ರಥಮೋಧ್ಯಾಯಹ ||

Leave a Reply

Your email address will not be published.

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ