ಅಕ್ಕ ನನ್ನಕಿಂತ ನಾಲ್ಕ ವರ್ಷ ದೊಡ್ಡೊಕಿ,ತಂಗಿ ನನ್ನಕಿಂತ ನಾಲ್ಕ ವರ್ಷ ಸಣ್ಣೊಕಿ. ಅಪ್ಪಗ ಅಕ್ಕನ್ನ ಕಂಡರ ಅಷ್ಟಕ್ಕಷ್ಟ ಆದರ ತಂಗಿ ಮ್ಯಾಲೆ ಭಾಳ ಜೀವ ಇದ್ದಾ. ನಾ ಹುಬ್ಬಳ್ಳಿ ಘಂಟಿಕೇರಿ ಒಳಗಿನ ನ್ಯಾಶನಲ್ ಹೈಸ್ಕೂಲಿಗೆ ಹೋಗಬೇಕಾರ ನಾ ಅಕ್ಕನ ಕೈ ಹಿಡ್ಕೊಂಡ ದಿವಸಾ ಸಾಲಿಗೆ ಹೋಗ್ತಿದ್ದೆ. ಅಕಿನೂ ನನಗ ಪುಟ್ಯಾ ಪುಟ್ಯಾ ಅಂತ ಅಗದಿ ಕಾಳಜಿಲೆ ಅವರ ತಂಗಿ ಜೊತಿ ದಿವಸಾ ಸಾಲಿಗೆ ಕರಕೊಂಡ ಹೋಗಿ ಕರಕೊಂಡ ಬರ್ತಿದ್ಲು.
ನಾ ದಿವಸಾ ಅವರ ಮನಿಗೆ ಸಾಲಿಗೆ ಹೋಗ್ಬೇಕಾರ ಹೋದಾಗೊಮ್ಮೆ ಅವರಪ್ಪ ತಂಗಿಗೆ ಹತ್ತ ಪೈಸಾ ಕೊಡಬೇಕಾರ ನಂಗೂ ಹತ್ತ ಪೈಸಾ ಕೊಟ್ಟ ಕಳಸ್ತಿದ್ದಾ. ಹಂಗ ನಮ್ಮ ಮನ್ಯಾಗ ನಾ ಎಷ್ಟ ಕಾಲ ಹೊಸ್ತ ಅತ್ತರು ಐದ ಪೈಸಾ ಕೊಡತಿದ್ದಿಲ್ಲಾ ಆದರ ಅವರಪ್ಪ ನಂಗ ದಿವಸಾ ಕೊಡತಿದ್ದಾ. ನಮ್ಮವ್ವಗ ಅದ ಗೊತ್ತಾಗಿ ಅಕಿ ನನಗ ’ಮಂದಿ ಕಡೆ ರೊಕ್ಕಾ ಇಸ್ಗೋತಿ, ನಾಚಗಿ ಬರಂಗಿಲ್ಲಾ’ ಅಂತ್ ಬೈತಿದ್ಲು, ಆದರ ಅವರಪ್ಪ ಮಾತ್ರ ನಾ ಬ್ಯಾಡ ನಮ್ಮವ್ವ ಬೈತಾಳ ಅಂದ್ರು ಕೊಡ್ತಿದ್ದಾ. ನಂಗರ ದಿವಸಾ ಒಂದಕ್ಕೂ ನಮ್ಮವ್ವನ್ನ ಕಡೆ ಬೈಸಿಗೊಂಡ ಬೈಸಿಗೊಂಡ ಸಾಕಾಗಿ ಮುಂದ ನಾ ನಮ್ಮವ್ವಗ ಅಂವಾ ರೊಕ್ಕ ಕೊಡೊದನ್ನ ಹೇಳೋದ ಬಿಟ್ಟ ಬಿಟ್ಟೆ.
ಅಲ್ಲಾ, ಪಾಪ ಅವರ ಪ್ರೀತಿಲೆ ರೊಕ್ಕಾ ಕೊಡಬೇಕಾರ ಅದ ಹೆಂಗ ಒಲ್ಲೆ ಅನ್ನಲಿಕ್ಕೆ ಬರತದ. ಅದರಾಗ ಅವರಿಗೆ ನನ್ನ ಮ್ಯಾಲೆ ವಿಶೇಷ ಪ್ರೀತಿ ಇದ್ದದ್ದಕ್ಕ ಕಾರಣನೂ ಇತ್ತ. ಅವರಿಗೆ ಎರಡು ಹೆಣ್ಣ ಹುಡಗ್ಯಾರ ಇದ್ವು. ಅವೆರಡರ ನಡಕ ನನ್ನ ವಾರಗಿದ ಒಂದ ಗಂಡ ಇತ್ತಂತ ಅದ ಒಂದನೇತ್ತಾ ಇದ್ದಾಗ ಮಲೇರಿಯಾ ಜ್ವರ ಬಂದ ಹೋಗಿ ಬಿಡ್ತಂತ. ಆಮ್ಯಾಲೆ ಅವರ ಊರ ದೇವರಿಗೆ ಎಲ್ಲಾ ಬೇಡ್ಕೊಂಡ ದೇವರ ಮ್ಯಾಲೆ ಭಾರ ಹಾಕಿ ಮೂರನೇದ ಹಡದರ ಅದ ಹೆಣ್ಣಾಗಿತ್ತ. ಹಿಂಗಾಗಿ ಅವರ ನನ್ನ ಮ್ಯಾಲೆ ಭಾಳ ಜೀವ ಇದ್ದರು. ಅದರಾಗ ಅವರ ನನಗ ಮಾತ ಮಾತಿಗೆ ನಮ್ಮ ಅಳಿಯಾ ಅಳಿಯಾ ಅಂತ ಕಾಡಸ್ತಿದ್ದರು. ನನ್ನಕಿಂತ ನಾಲ್ಕ ವರ್ಷ ಸಣ್ಣೊಕಿ ಇದ್ದ ಒಂದನೇತಾ ಹುಡಗಿ ಅವರಪ್ಪ ಹಂಗ ಅಂದಾಗೊಮ್ಮೆ ಖೋಡಿ ಒಯ್ದಂದ ನನ್ನ ಮಾರಿ ನೋಡಿ ನಗತಿತ್ತ. ಅಲ್ಲಾ, ಹಂಗ ನಂಗೂ ಅವರ ಅಂದಾಗೊಮ್ಮೆ ನಾಚಿಕೆ ಅನಸಿದರು ಅವರ ಕೊಡೊ ಹತ್ತ ಪೈಸಾ ಸಂಬಂಧ ನಾಚಿಕಿ ಬಿಟ್ಟ ಅಳಿಯಾ ಅಳಿಯಾ ಅಂತ ಅನಿಸಿಗೊತಿದ್ದೆ.
ಹಂಗ ನಾ ಮುಂದ ಮೂರ ವರ್ಷ ಆ ಅಕ್ಕನ ಕೈಹಿಡ್ಕೊಂಡ ಸಾಲಿಗೆ ಹೋಗ್ತಿದ್ದೆ. ಮುಂದ ಅಕಿ ಎಸ್.ಎಸ್. ಎಲ್.ಸಿ ಒಳಗ ಫಸ್ಟ ಕ್ಲಾಸಿನಾಗ ಪಾಸ್ ಆದ ಮ್ಯಾಲೆ ವುಮೆನ್ಸ್ ಕಾಲೇಜಿಗೆ ಹೊಂಟ್ಲು ಅಷ್ಟರಾಗ ನಾನು ದೊಡ್ಡಂವಾಗಿದ್ದೆ ಹಿಂಗಾಗಿ ಗಂಡ ಹುಡಗರ ಕೈ ಹಿಡ್ಕೊಂಡ ಹೈಸ್ಕೂಲ ಮೆಟ್ಟಲಾ ಹತ್ತಿದೆ.
ಅವು ಎರಡು ಅಕ್ಕಾ- ತಂಗಿ ಸಾಲ್ಯಾಗ ಭಾಳ ಶಾಣ್ಯಾ ಇದ್ವು, ಆದರ ಅವರಪ್ಪಗ ಅಕ್ಕಗ ಎಸ್.ಎಸ್.ಎಲ್.ಸಿ ಆದ ಮ್ಯಾಲೆ ಕಲಸೊ ವಿಚಾರ ಇರಲಿಲ್ಲಾ, ಎಲ್ಲರ ಒಂದ ವರಾ ನೋಡಿ ಅಟ್ಟಿದರ ಆತು ಅಂತ ಅಂವಾ ವಿಚಾರದಾಗ ಇದ್ದಾ ಆದರ ಅವರವ್ವನ ಒತ್ತಾಯಕ್ಕ ಆರ್ಟ್ಸ ಹಚ್ಚಿಸಿದ್ದಾ. ಪಾಪ, ಅಕ್ಕಂತು ಮನ್ಯಾಗ ಸಹಿತ ಅವರವ್ವಗ ಎಷ್ಟ ಸಾಧ್ಯ ಅದ ಅಷ್ಟ ಹೆಲ್ಪ ಮಾಡಿ ಕಾಲೇಜಿಗೆ ಹೋಗ್ತಿದ್ಲು.
ಅವರಪ್ಪ ನನಗ ಹತ್ತಾ ಪೈಸಾದಿಂದ ಶುರು ಮಾಡಿದಂವಾ ಒಂದ ರೂಪಾಯಿತನಕ ಪಾಕೇಟ ಮನಿ ಕೊಟ್ಟಾ. ಹಂಗ ಮುಂದ ಆ ಅಕ್ಕ ನನ್ನ ಕೈ ಬಿಟ್ಟ ಮ್ಯಾಲೆ ನಂದ ಅವರ ಮನಿಗೆ ಹೋಗೊದ ಕಡಿಮೆ ಆಗಲಿಕತ್ತು. ಇತ್ತಲಾಗ ತಂಗಿನು ದೊಡ್ದಾಕಿ ಆಗಲಿಕತ್ಲು. ಅಲ್ಲಾ ಹಂಗ ನಾವಿಬ್ಬರು ದೊಡ್ಡರಾದ ಮ್ಯಾಲೆ ಅಕಿನೂ ಆಗೊಕಿನ ಆ ಮಾತ ಬ್ಯಾರೆ. ಓಣ್ಯಾಗ ಭೇಟ್ಟಿ ಆದಾಗೊಮ್ಮೆ ನನ್ನ ನೋಡಿ ನಕ್ಕ ’ಮಾಮಿ, ಪ್ರತಿಮಾ (ನಮ್ಮ ತಂಗಿ) ಎಲ್ಲಾ ಆರಾಮ ಇದ್ದಾರ’ಅಂತ ಕೇಳ್ತಿದ್ಲು. ಹಂಗ ಅಕಿ ನಮ್ಮವ್ವಗ ಮಾಮಿ ಅಂದಾಗೊಮ್ಮೆ ನಾ ಅವರಪ್ಪ ನನಗ ಅಳಿಯಾ ಅಂತಿದ್ದನ್ನ ನೆನಸಿಗೊಂಡ ಮನಸ್ಸಿನಾಗ ಮಂಡಗಿ ತಿಂತಿದ್ದೆ. ಅಲ್ಲಾ ಅಷ್ಟರಾಗ ನಾನು ಹೈಸ್ಕೂಲ ಮೆಟ್ಟಲಾ ಹತ್ತಿದ್ದೆ ಅಂದ ಮ್ಯಾಲೆ ಮಂಡಗಿ ತಿನ್ನೊ ವಯಸ್ಸ ಆ ಮಾತ ಬ್ಯಾರೆ.
ಇತ್ತಲಾಗ ಅಕ್ಕ ಪಿ.ಯು.ಸಿ ೨ರಾಗ ಕಾಲೇಜಿಗೆ ಫಸ್ಟ ಬಂದ್ಲು, ಆದರ ಅಕಿ ಆರ್ಟ್ಸ ತೊಗಂಡಿದ್ದಕ್ಕ ಇಂಜೀನಿಯರ ಮಾಡಬೇಕು, ಡಾಕ್ಟರ ಮಾಡಬೇಕು ಅನ್ನೊ ಟೇನ್ಶನ್ ಅವರಪ್ಪಗ ಇದ್ದಿದ್ದಿಲ್ಲಾ. ಅಲ್ಲಾ ಅವಂಗ ತನ್ನ ಎಕಾನಾಮಿಕಲ್ ಕಂಡಿಶನ್ ಕ್ಲೀಯರ ಇದ್ದದ್ದಕ್ಕ ಅಂವಾ ಅಕಿಗೆ ಆರ್ಟ್ಸ ಹಚ್ಚಿದ್ದಾ. ಅಂವಾ ಆರ್.ಎಮ್.ಎಸ್ ಪೋಸ್ಟಲ ಡಿಪಾರ್ಟಮೆಂಟ ಒಳಗ ಕಾರ್ಕೂನ ನೌಕರಿ ಮಾಡ್ತಿದ್ದಾ ಹಿಂಗಾಗಿ ಅಂವಾ ತನ್ನ ಪರಿಸ್ಥಿತಿ ತಕ್ಕ ಮಕ್ಕಳನ್ನ ಓದಸೋಂವಾ. ಅದರಾಗ ಅಕಿ ಬಿ.ಎ. ಮೆಟ್ಟಲಾ ಹತ್ತೋದ ತಡಾ ರಾಮಭಟ್ಟರ ಕಡೆ ಅಕಿದ ಕುಂಡ್ಲಿ ತಗಿಸಿ ಒಂದ ಹತ್ತ ಮಂದಿಗೆ ಕೊಟ್ಟ ಬಿಟ್ಟಾ. ಅದಾರಗ ಅಕ್ಕಾ- ತಂಗಿ ಇಬ್ಬರು ಅಗದಿ ಆರತಿ- ಭಾರತಿ (ಪಿಕ್ಚರ ನಟಿಯರು) ಇದ್ದಂಗ ಇದ್ದರು, ಇಬ್ಬರ ಮಾರಿ ಮ್ಯಾಲೇನು ಮಚ್ಚಿ( ಗೆಳೆಯಾ) ಇದ್ದರು ಆದರ ಬ್ಯಾರೆ ಬ್ಯಾರೆ ಕಡೆ, ಸೇಮ ಆರತಿ, ಭಾರತಿಗೆ ಇದ್ದಂಗ.
ಹಂಗ ಅವರಿಬ್ಬರನೂ ರೂಪದಾಗ,ಸ್ವಭಾವದಾಗ, ಶಾಣ್ಯಾತನದಾಗ ಯಾರು ತಗಿಯೊ ಹಂಗ ಇರಲಿಲ್ಲಾ ಬಿಡ್ರಿ ಸುಳ್ಳ್ಯಾಕ ಹೇಳ್ಬೇಕು. ಆದರೂ ಅವರಪ್ಪಗ ತಂಗಿ ಮ್ಯಾಲೆ ಒಂದ ಸ್ವಲ್ಪ ಪ್ರೀತಿ ಜಾಸ್ತಿ ಇತ್ತು, ಅದರಾಗ ಲಾಸ್ಟಿನೋಕಿ, ಹತ್ತ ದೇವರಿಗೆ ಬೇಡ್ಕೊಂಡ ಹುಟ್ಟಿಸಿದ್ದು, ಗಂಡಾಗದಿದ್ದರ ಏನಾತು ಅಂತ ಒಂದ ಸ್ವಲ್ಪ ಅಚ್ಚಚ್ಛಾ ಜಾಸ್ತಿನ ಮಾಡಿ ಬೆಳಸಿದ್ದಾ.
ಇತ್ತಲಾಗ ಅಕ್ಕನ್ನ ಕುಂಡಲಿ ನಾಲ್ಕ ಮನಿ ಹೊಚ್ಚಲಾ ದಾಟತು ಅನ್ನೊದರಾಗ ಕಿಲ್ಲೆದಾಗ ಕಿರ್ಲೋಸ್ಕರದಾಗ ಕೆಲಸಾ ಮಾಡೊ ಒಂದ ವರಾ ಸಿಕ್ಕ ಬಿಡ್ತು. ಅವರಪ್ಪ ಭಡಾ ಭಡಾ ಮೂರ ತೊಲಿ ಬಂಗಾರ, ಹದಿನೈದ ಸಾವಿರ ರೂಪಾಯಿ ವರದಕ್ಷಣಿ, ತೊರವಿಗಲ್ಲಿ ರಾಯರ ಮಠದಾಗ ಲಗ್ನ ಅಂತ ಡೀಲ ಮುಗಿಸಿಬಿಟ್ಟಾ. ಇನ್ನೇನ ಲಗ್ನದ ಡೇಟ ಫಿಕ್ಸ ಆತು ಅನ್ನೋದ ತಡಾ ಅವರ ನಮ್ಮ ಜೋಳದ ಓಣಿ ಒಳಗಿನ ಮನಿ ಭಾಳ ಸಣ್ಣ ಆಗ್ತದ, ಮುಂದ ಅಳಿಯಾ ಬಂದು ಹೋಗಿ ಮಾಡೊಂವಾ ಅಂತ ಅಮಟೆಚಾಳ ಒಳಗ ಒಂದ ದೊಡ್ಡ ಮನಿ ಭಾಡಗಿ ಹಿಡದ ಹೋಗಿ ಬಿಟ್ಟರು.
ಇತ್ತಲಾಗ ತಂಗಿ ದೊಡ್ದೊಕಿ ಆದಾಗಿಂದ ಅವರಪ್ಪನು ನಂಗ ಅಳಿಯಾ ಅಳಿಯಾ ಅನ್ನೋದ ಕಡಮಿ ಮಾಡಿ ಬಿಟ್ಟಿದ್ದಾ, ಕಡಮಿ ಮಾಡಿದಾ ಏನ ಆ ಸುದ್ದಿ ತಗಿಯೋದ ಬಿಟ್ಟ ಬಿಟ್ಟಿದ್ದಾ. ಅದರಾಗ ಅವರ ನಮ್ಮ ಓಣ್ಯಾಗಿಂದ ಮನಿ ಕಿತ್ತಿದ ಮ್ಯಾಲೆ ಅಕಿ ಭೆಟ್ಟಿ ಆಗೋದ ಆವಾಗ ಇವಾಗ ಸಿ.ಬಿ.ಟಿ ಒಳಗ ಕಾಲೇಜಿಗೆ ಹೋಗಬೇಕಾರ ಇಷ್ಟ. ಹಂಗ ಭೇಟ್ಟಿ ಆದಾಗೊಮ್ಮೆ ಮತ್ತ ನಗೋಕಿ ’ ಮಾಮಿ ಆರಾಮ ಇದ್ದಾರ’ ಅಂತ ಕೇಳೊಕಿ. ಅಕಿ ನಮ್ಮವ್ವಗ ಮಾಮಿ ಅಂದಾಗೊಮ್ಮೆ ನಂಗ ಮತ್ತ ಅವರಪ್ಪ ’ಅಳಿಯಾ’ ಅನ್ನೋದ ಟ್ರಿಗ್ಗರ್ ಆಗಿ ಜೀವ ಚುಟು-ಚುಟು ಅಂತಿತ್ತ.
ಮುಂದ ಒಂದ ದಿವಸ ಅವರಕ್ಕಂದ ಲಗ್ನ ಆಗಿ ಅಕಿ ಗಂಡನ ಮನಿ ಸೇರಿದ್ಲು ನಮ್ಮ ಸಂಪರ್ಕ ಅಗದಿ ಕಡಮಿ ಆಗಿ ಬಿಟ್ಟಿತ್ತ, ಮುಂದ ಒಂದ ಎರಡ ವರ್ಷಕ್ಕ ನಂದು ಡಿಗ್ರಿ ಮುಗದ ನಂಗ ಕೆ.ಇ.ಸಿ ಒಳಗ ನೌಕರಿ ಸಿಕ್ಕ ಬಿಡ್ತು. ಮಜಾ ಅಂದರ ಆ ಅಕ್ಕನ ಗಂಡ ನನ್ನ ಡಿಪಾರ್ಟಮೆಂಟ ಒಳಗ ವರ್ಕರ ಅಂತ ಕೆಲಸಾ ಮಾಡ್ತಿದ್ದಾ, ನಾ ಆರ್ಗನೈಸೇಶನಲಿ ಸ್ಪೀಕಿಂಗ ಅವನ ಬಾಸ್ ಆಗಿದ್ದೆ. ಹಿಂಗಾಗಿ ಮತ್ತ ಅವರ ಸಂಪರ್ಕ ಬೆಳಲಿಕತ್ತು.
ಇತ್ತಲಾಗ ತಂಗಿ ಪಿ.ಯು.ಸಿ ಯೊಳಗ ಹಟಾ ಹಿಡದ ಸೈನ್ಸ ತೊಗೊಂಡ ಡಿಸ್ಟಿಂಕ್ಶನ್ ಒಳಗ ಪಾಸಾಗೋದ ತಡಾ, ನಾ ನನ್ನ ಪ್ರೀತಿ ಮಗಳನ ಇಂಜೀನಿಯರ ಮಾಡ್ತೇನಿ ಅಂತ ಸಾಲ- ಸೂಲಾ ಮಾಡಿ ಅವರಪ್ಪ ಅಕಿಗೆ ಬಿ.ವಿ.ಬಿ ಕಾಲೇಜಿನಾಗ ಬಿ.ಇ.ಗೆ ಹಚ್ಚಿಸಿದಾ. ಅವಂಗ ಅಕ್ಕನ ಗತೆ ಇಕಿಗೂ ಒಂದ ಡಿಗ್ರಿ ಮಾಡಿ ವರಾ ನೋಡಿ ಅಟ್ಟಬೇಕು ಅನ್ನೊ ವಿಚಾರ ಇರಲಿಲ್ಲಾ. ಇಕಿನ್ನ ದೊಡ್ಡ ಇಂಜೀನಿಯರ್ ಮಾಡಬೇಕು, ಗಂಡ ಹುಟ್ಟೊ ಬದ್ಲಿ ಇದ ಹುಟ್ಟೇದ ಇಕಿನ್ನ ಗಂಡ ಹುಡಗನ ಗತೆ ಕಲಿಸಿ-ಬೆಳಿಸಬೇಕು, ಮುಂದ ಇಕಿನ್ನ ನಮ್ಮನ್ನ ಸಾಯೋತನಕಾ ನೋಡ್ಕೊಳೊಕಿ ಅಂತ ಅಕಿ ಮ್ಯಾಲೆ ಇನ್ವೆಸ್ಟ ಮಾಡಲಿಕತ್ತಿದ್ದಾ.
ಅಲ್ಲಾ, ಅವರಪ್ಪ ಮೊದಲ ನನಗ ಅಳಿಯಾ ಅಳಿಯಾ ಅಂತಿದ್ದಾ ಈಗ ಹೆಂಗಿದ್ದರು ನಾನೂ ಹಿರೇ ಅಳಿಯಾನಗತೆ ಕೆ.ಇ.ಸಿ ಒಳಗ ನೌಕರಿ ಮಾಡ್ತಿದ್ದೆ, ಅದರಾಗ ನಾ ಅಂತೂ ಅಗದಿ ಅವರ ಸಣ್ಣಂವ ಇದ್ದಾಗಿಂದ ಹತ್ತತ್ತ ಪೈಸಾ ಕೊಟ್ಟ ಆಡಿಸಿ ಬೆಳಸಿದ್ದ ಹುಡಗಾ, ಹಂಗ ನಂಗ ಆವಾಗ ದಣೇಯಿನ ೨೧.೫ ವರ್ಷ ಬಿಡರಿ, ಆದರ ಅಕಿ ಹೂಂ ಅಂದರ ಒಂದ ಎರಡ ವರ್ಷ ಬಿಟ್ಟ ನಾ ದೊಡ್ಡೊಂವ ಆದ ಮ್ಯಾಲೆ ಮದುವಿ ಮಾಡಬಹುದ ಅಂತ ನನ್ನ ವಿಚಾರ ಇತ್ತ ಖರೆ ಆದರ ಅಂವಾ ಅಕಿನ್ನ ಇಂಜೀನಿಯರ ಮಾಡೋದ ನೋಡಿ ನಂಗ ಅಂವಾ ಚಿಮ್ಮಿದಂಗ ಅನಸಲಿಕತ್ತ.
ನನಗ ಬಹುಶಃ ಅವರಪ್ಪ ನಾ ಸಣ್ಣಂವ ಇದ್ದಾಗ ತಾ ಅಳಿಯಾ ಅಂತಿದ್ದಾ ಅನ್ನೋದನ್ನ ಮರತ ಬಿಟ್ಟಾನ ಅನಸಲಿಕತ್ತು. ಅದರಾಗ ನಾನು ಅವರ ಸಂಪರ್ಕ ಹಂಗ ಕಂಟಿನ್ಯೂ ಇಟಗೊಂಡಿದ್ದರ ಛಲೊ ಇತ್ತು ಅವರ ರೊಕ್ಕಾ ಕೊಡೊದ ಬಿಟ್ಟ ಕೂಡಲೆ ಅವರ ಮನಿ ಸಂಪರ್ಕನ ಬಿಟ್ಟ ತಪ್ಪ ಮಾಡಿದೆ ಅನಸಲಿಕತ್ತ.
ಅತ್ತಲಾಗ ಅಕ್ಕನ ಸಂಸಾರ ಸರಾಗ ಹೊಂಟ ಒಂದನೇ ಬಾಣಂತನಕ್ಕ ತವರಮನಿಗೆ ಬರಲಿಕ್ಕೆ ಹೊಂಚ ಹಾಕಲಿಕತ್ತಿತ್ತು. ಅಕಿ ಗಂಡ ಕೆ.ಇ.ಸಿ ಒಳಗಿನ ಎರಡ ಪಂಚ್, ಒಂದ ಲಂಚ್, ಏಳನೇ ತಾರೀಖಿಗೆ ಪಗಾರ ಇಪ್ಪತ್ತೆರಡನೇ ತಾರೀಖಿಗೆ ಇನ್ಸೆಂಟಿವ್ ಅಂತ ಭಾಳ ಖುಷ್ ಇದ್ದಾ. ಹಂಗ ನಂಗ ಅಕ್ಕಾ ಗಾಂಧಿನಗರದಾಗ ಭೆಟ್ಟಿ ಆದಾಗೊಮ್ಮೆ ’ಪುಟ್ಟ್ಯಾ ಹೆಂಗ ಇದ್ದಿ, ಮಾಮಿ ಹೆಂಗ ಇದ್ದಾರ’ ಅಂತ ಮಾತಾಡಸ್ತಿದ್ದಳು. ನಂಗ ಅಕಿ ಮಾಮಿ ಅಂದಾಗೊಮ್ಮೆ ಮತ್ತ ಹೊಟ್ಟ್ಯಾಗ ಸಂಕಟ ಆಗ್ತಿತ್ತ ಖರೇ ಆದರ ಏನ್ಮಾಡೊದು ಅವರ ತಂಗಿ ಈಗ ಭಾಳ ಬದಲಾಗಿ ಬಿಟ್ಟಿದ್ಲು. ಅಕಿ ಬಿವಿಬಿ ಕಾಲೇಜಿಗೆ ಹೊಂಟಾಗಿಂದ ಟಾಟಾ, ಬಿರ್ಲಾ, ಅಂಬಾನಿ ಸೊಸಿ ಆಗೊ ಕನಸ ಕಾಣಲಿಕತ್ತಿದ್ಲು, ಅಕಿ ಮುಂದ ನಮ್ಮಂಥಾ ಲೋಕಲ ಕಿರ್ಲೋಸ್ಕರ ಕೆಲಸದವರ ಕಾಣತಿದ್ದಿಲ್ಲಾ.
ಮುಂದ ಎರಡ ವರ್ಷಕ್ಕ ಅಕಿ ಬಿ.ಇ ಮುಗಿಯೊದಕ್ಕು ನಾ ಕೆ.ಇ.ಸಿ ನೌಕರಿ ಬಿಟ್ಟ ಮಾರವಾಡಿ ಕಂಪನಿ ಸೇರೊದಕ್ಕ ಕರೆಕ್ಟ ಆತ. ಮೊದ್ಲ ನನ್ನ ನೋಡಿದರ ’ಮಾಮಿ ಹೆಂಗಿದ್ದಾರ’ ಅಂತರ ಕೇಳತಿದ್ಲು ಈಗ ಅದನ್ನು ಬಿಟ್ಟ ಬಿಟ್ಟಳು. ಅವರ ಮನ್ಯಾಗ ಅಕಿಗೆ ವರಾ ಹುಡಕಲಿಕ್ಕೆ ಶುರು ಮಾಡಿದರು. ಅಷ್ಟರಾಗ ನಮ್ಮಂದಿ ಒಳಗಿನ ಕನ್ಯಾಕ್ಕ ಒಂದ ಹೊಸಾ ರೋಗ ಬಂದ ಬಿಟ್ಟಿತ್ತು, ಆ ರೋಗ ಈಕಿಗೂ ಬಡದ ಮಾತ ಎತ್ತಿದರ ಸಾಫ್ಟವೇರ..ಸಾಫ್ಟವೇರ ಅಂತಿದ್ಲು, ಅದರಾಗ ಅಕಿನೂ ಬಿ.ಇ. ಇನ್ ಇನ್ಸ್ಟ್ರುಮೆಂಟೇಶನ್ ಮಾಡಿದ್ಲು. ಮ್ಯಾಲೆ ನಾಳೆ ಯಾವದರ ವರಾ ಕಂಪ್ಯೂಟರ ಕಲತಿ ಏನು ಅಂತ ಕೇಳಿ ಗೀಳ್ಯಾನ ಅಂತ ಯುನಿಕ್ಸ್ ಕಲಿಲಿಕತ್ತಿದ್ಲು. ಮುಂದ ಅಕಿ ಹಿಂಗ ಯುನಿಕ್ಸ, ಸಿ, ಸಿ+ ಮುಗಸೊದಕ್ಕ ಅಕಿಗೆ ವಿಪ್ರೊದಾಗ ಕೆಲಸಾ ಮಾಡೊ ಒಂದ ಧಾರವಾಡ ಗಂಡ ಸಿಕ್ಕ ಬಿಡ್ತು. ಆತ ಅಕಿನ್ನ ಯಾರು ಹಿಡದವರ ಇದ್ದಿದ್ದಿಲ್ಲಾ, ಅದರಾಗ ವರಾ ಅಂತು ಅಕಿಗೆ ಹೇಳಿ ಮಾಡಿಸಿದಂಗ ಇದ್ದಾ. ನಾ ಆವಾಗ ದಣೇಯಿನ ಮಾರಾವಾಡಿ ಕಂಪನಿ ಒಳಗ ಸೆಟ್ಲ ಆಗಿ ಇನ್ನೇನ ಲಗ್ನಾ ಮಾಡ್ಕೋಬೇಕು ಅನ್ನಲಿಕತ್ತಿದ್ದೆ ಅಷ್ಟರಾಗ ಇಕಿ ಅವರಕ್ಕನ್ನ ಕರಕೊಂಡ ನಮ್ಮನಿಗೆ ಕಾರ್ಡ ಕೊಡಲಿಕ್ಕೆ ಬಂದ್ಲು. ನಾನ ಸಂಬಾಳಿಸಿಗೊಂಡ ಕಾರ್ಡ ಇಸ್ಗೊಂಡ ಲಾಸ್ಟಿಗೆ ಹೋಗಬೇಕಾರ ’ಕಾಕಾ, ಕಾಕು ಇಬ್ಬರು ಬರ್ರಿ’ ಅಂತ ನಮ್ಮ ಅವ್ವಾ ಅಪ್ಪಗ ಹೇಳಿ ಹೋದ್ಲು. ಏನ್ಮಾಡ್ತೀರಿ ಇಷ್ಟದಿವಸಗಟ್ಟಲೇ ನಾ ಅವರಪ್ಪನ್ನ ಮಾಮಾ ಮಾಮಾ ಅಂತ ಹಚಗೊಂಡರ ಅವರ ಮಗಳು ನಮ್ಮಪ್ಪಗ ಕಾಕಾ ಅಂದ ಕನಸಿನಾಗ ಸಹಿತ ಅಕಿ ಇನ್ನ ಮುಂದ ಬರಲಾರದಂಗ ಮಾಡಿ ಹೋಗಿ ಬಿಟ್ಟಳು. ಅಲ್ಲಿಗೆ ಅಕಿ ಫೈಲ ನಾ ಡಿಲಿಟ್ ಮಾಡಿ ಟ್ರ್ಯಾಶ್ ಬಿನ್ ಸಹಿತ ಎಂಪ್ಟಿ ಮಾಡಿ ಒಗದೆ.
ಈ ಮಾತಿಗೆ ಈಗ ಹದಿನೈದ ವರ್ಷ ಆಗಲಿಕ್ಕೆ ಬಂತ, ಈಗ ನನಗ ಎರಡ ಮಕ್ಕಳ ಅಕಿಗೆ ಒಂದ. ಹಂಗ ಅವರಕ್ಕಗ ಮೂರ, ಯಾಕಂದರ ಅಕಿ ನಮ್ಮಿಬ್ಬರಕಿಂತಾ ದೊಡ್ಡೊಕಿ ಅಲಾ.
ನಾ ಇರೋದ ಇನ್ನೂ ಇಲ್ಲೆ ಗೋಕುಲ ರೋಡನಾಗ. ಅವರಕ್ಕನೂ ಇರೋದ ನಮ್ಮ ಗಾಂಧಿನಗರ ಎಲ್.ಐ.ಜಿ ಮನಿ ಒಳಗ. ಆದರ ಅಕಿ ಇರೋದ ಝುರಿಕ್ ( ಸ್ವಿಸ್ ) ಒಳಗ. ಅವರಪ್ಪಾ ಅದ ನಂಗ ಹತ್ತ ಹತ್ತ ಪೈಸಾ ಕೊಟ್ಟ ಸಣ್ಣಂವ ಇದ್ದಾಗಿಂದ ರೊಕ್ಕದ ಚಟಾ ಹಚ್ಚಿದನಲಾ ಅವಂಗ ಮೊನ್ನೆ ಲಕ್ವಾ ಹೊಡದದ ಹಿಂಗಾಗಿ ಹಿರೇ ಮಗಳ ಮನ್ಯಾಗ ಇದ್ದಾನ. ಪಾಪ ಮೊನ್ನೆ ಮೊನ್ನೆ ತನಕಾ ಎಲ್ಲೊ ಪ್ರೈವೇಟ ಒಳಗ ನೌಕರಿ ಮಾಡ್ಕೋತ ಒಬ್ಬನ ಇರತಿದ್ದಾ. ಈಗ ಅನಾಥ ಆಗಿ ಮಗಳ ಮನಿ ಸೇರಿದಾ. ರಿಟೈರಮೆಂಟ್ ಫಂಡ ಅಂತೂ ಪೂರ್ತಿ ತಂಗಿದ್ದ ಬಿ.ಇ,ಮದುವಿ, ಬಾಣಂತನ ಇದಕ್ಕ ಹೋಗಿತ್ತು. ಇತ್ತಲಾಗ ಅವನ ಹೆಂಡತಿ ಒಂದನೇ ಮಗಳದ ಮೂರು, ಲಾಸ್ಟ ಮಗಳದ ಒಂದು ಬಾಣಂತನ ಮಾಡಿ ನನ್ನ ಜವಾಬ್ದಾರಿ ಮುಗಿತು ಅಂತ ಕೂತ ಕೂತಲ್ಲೆ ಕಣ್ಣ ಮುಚ್ಚಿ ಬಿಟ್ಟಿದ್ದಳು. ಅಕಿ ಹೋಗಿ ಎಂಟ ವರ್ಷ ಆಗಲಿಕ್ಕೆ ಬಂತ ಬಿಡ್ರಿ, ಆವಾಗಿಂದ ಅವರಪ್ಪನ ಚಾಕರಿ ಅವರ ಅಕ್ಕನ ಮಾಡಲಿಕತ್ತಾಳ, ಪಾಪ ಅಕಿ ಗಂಡ, ಅದ ಕೆ.ಇ.ಸಿ ಅಳಿಯಾ ಸೌಮ್ಯ ಸ್ವಭಾವದಂವಾ ಇದ್ದಾನ ಹಿಂಗಾಗಿ ತನ್ನ ಸಣ್ಣ ಪಗಾರದಾಗ ಸಂಸಾರದ ಜೊತಿಗೆ ಮಾವನ್ನು ಹಿಡಕೊಂಡ-ನೋಡ್ಕೊಂಡ ಹೊಂಟಾನ.
ಇಂವಾ ಯಾ ಮಗಳ ಮ್ಯಾಲೆ ಆಶಾ ಇಟ್ಟಿದ್ನೊ ಅಕಿ ಫಾರೇನ್ ಒಳಗ ಸೆಟ್ಲ್ ಆಗಿ ಅಪ್ಪನ್ನ ಮರತ ಬಿಟ್ಟಾಳ. ಅಕಿಗೆ ಅಂತೂ ಇಂಡಿಯಾಕ್ಕ ಬರಲಿಕ್ಕೆ ಪುರಸತ್ತ ಇಲ್ಲಾ. ಇನ್ನ್ ಅಕಿಗೆ ಇವನ ಸೇವಾ ಮಾಡಲಿಕ್ಕೆ ಬಾ ಅಂದರ ಹೆಂಗ ಆಗಬೇಕು. ಹಂಗ ಬಂದಾಗೊಮ್ಮೆ ಒಂದ ಸ್ವಲ್ಪ ರೊಕ್ಕಾ ಕೊಡಲಿಕ್ಕೂ ಹತ್ತ ಸಲಾ ವಿಚಾರ ಮಾಡ್ತಾಳಂತ. ಅಕಿಗೆ ಏನ ಇದ್ದರು ತಾನು, ತನ್ನ ಗಂಡ, ತನ್ನ ಮಗಾ, ಯುರೋಪ್, ಅಮೇರಿಕಾ ಅಂತ ಇತ್ತಲಾಗಿನವರನ ಮರತ ಬಿಟ್ಟಾಳ. ಅಲ್ಲಾ ಎಷ್ಟ ಅಚ್ಚಚ್ಛಾ ಮಾಡಿ ಬೆಳಸಿದ್ದ ಅಪ್ಪನ್ನ ಮರತಾಳ ಅಂದರ ಉಳದವರದ ಏನ ಬಿಡ್ರಿ. ಇನ್ನ ಹಂತಾದರಾಗ ನಂಗ ಅವರಪ್ಪ ನಾ ಸಣ್ಣಂವ ಇದ್ದಾಗ ಅಳಿಯಾ ಅಂತಿದ್ದಾ ಅನ್ನೊದನ್ನು ಮರತಿರಬೇಕು ಅನಸ್ತದ ಅಲ್ಲಾ ಆ ಮಾತ ಯಾಕ ಬಿಡ್ರಿ ಈಗ ಆದರು ಮಾತ ಹೇಳಿದೆ.
ಹಂಗ ಆವಾಗ ಇವಾಗ ಫೇಸಬುಕ್ಕಿನಾಗ ಸಿಕ್ಕಿರತಾಳ ಆದರ ಅಲ್ಲೇನೂ ನೋಡಿದರು ನೋಡಲಾರದಂಗ, ನಂದ ಪರಿಚಯನ ಇಲ್ಲಾ ಅನ್ನೋರಗತೆ ಇರ್ತಾಳ. ನಾನರ ಯಾಕ ಅಕಿ ಉಸಾಬರಿ ಅಂತ ಒಮ್ಮೊಮ್ಮೆ ಅಕಿನ್ನ ಅನಫ್ರೇಂಡ್ ಮಾಡಬೇಕ ಅನಸಿದರು ಮತ್ತೊಮ್ಮೆ ಅಕಿ ಏನ ನಡಿಸ್ಯಾಳ ಎಲ್ಲೆ ಇದ್ದಾಳ ಅನ್ನೋದರ ಹಕಿಕತ್ ಗೊತ್ತಾಗತದ ಅಂತ ಸುಮ್ಮನ ಬಿಟ್ಟೇನಿ. ಅದರಾಗ ಫೇಸಬುಕ್ಕಿನಾಗ ಅಕಿವು ಫಾರೇನ ಬೀಚನಾಗಿನ್ವು, ನಯಗರಾ ಫಾಲ್ಸ್ ನಾಗಿನ್ವು , ಅಕಿ ಮಿನಿ ಸ್ಕರ್ಟ, ಶಾರ್ಟ್ಸ್, ಸ್ಲಿವ್ ಲೆಸ್ ಟಿ-ಶರ್ಟ ಎಲ್ಲಾದರ ಫೋಟೊ ನೋಡಿ ಬಿಟ್ಟರ ಹಿಂತಾಕಿ ಹೆಸರಿಲೆ ನನಗ ಸಣ್ಣಂವ ಇದ್ದಾಗ ಕಾಡಸ್ತಿದ್ದರಲಾ ಅಂತ ಮನಸ್ಸಿನಾಗ ಖುಶಿ ಅನಸ್ತದ ಖರೆ ಆದರ ಅಷ್ಟರಾಗ ಮನ್ಯಾಗಿನ ಬಂಗಾರದಂತಾ ಒಂಬತ್ತವಾರಿ ಹೆಂಡತಿ ನೆನಪಾಗಿ ಆ ಫೋಟೊ ನೋಡಿದ್ರು ನೋಡಲಾರದಂಗ, ಆ ಫೋಟೊ ಮುಟ್ಟಿ ಲೈಕ ಸಹಿತ ಮಾಡಲಾರದ ಇರ್ತೇನಿ.
ಆದರು ಯಾಕೋ ಇವತ್ತ ಆ ಇಬ್ಬರು ಅಕ್ಕಾ – ತಂಗಿ ಭಾಳ ನೆನಪಾದರು. ಅಲ್ಲಾ, ಹಂಗ ತಂಗಿ ಪೇಸಬುಕ್ ಲಾಗಿನ್ ಆದಾಗೊಮ್ಮೆ ನೆನಪ ಆಗ್ತಾಳ ಆ ಮಾತ ಬ್ಯಾರೆ. ಆದರ ಪಾಪ ಅವರಪ್ಪ ನಂಗ ಅಳಿಯಾ- ಅಳಿಯಾ ಅಂತ ಕಾಡಸ್ತಿದ್ದ, ನಾ ಸಣ್ಣಂವ ಇದ್ದಾಗಿಂದ ರೊಕ್ಕದ ಚಟಾ ಹಚ್ಚಿಸಿ, ಮಗಳನ ಆಸ್ಯಾ ತೋರಿಸಿದ್ದಾ, ಅಲ್ಲಾ ಮುಂದ ಅಂವಾ, ಅವನ ಮಗಳು ಇಬ್ಬರು ನನಗ ಕೈಕೊಟ್ಟರ ಖರೆ ಹಂತಾವಂದ ಇವತ್ತಿನ ಪರಿಸ್ಥಿತಿ ನೋಡಿ ಕೆಟ್ಟ ಖರೇನ ಕೆಟ್ಟ ಅನಸ್ತು. ಆ ಸಣ್ಣಕಿನ್ನ ಅಚ್ಚಚ್ಛಾ ಮಾಡಲಾರದ ನನ್ನಂತಾ ಇದ್ದುರ ಅಳಿಯಾಗ ಕೊಟ್ಟಿದ್ದರ ಎಷ್ಟ ಛಲೋ ಇತ್ತ, ಕಷ್ಟದ ಕಾಲದಾಗ ಎಷ್ಟ ಅನಕೂಲ ಆಗತಿತ್ತ ಆದರ ಏನ ಮಾಡೋದ ಎಲ್ಲಾ ಅವನ ಹಣೇಬರಹ.
ಏನೋ ಅವನ ಪುಣ್ಯಾ ಒಂದನೇದಕಿ ಅಪ್ಪಾ ಅನ್ನೊ ಅಂತಃಕರಣದಿಂದ ಇಟಗೊಂಡಾಳ. ಅಲ್ಲಾ, ಇನ್ನ ಅವನರ ಎಷ್ಟ ದಿವಸ ಇರ್ತಾನ ಬಿಡ್ರಿ ಆದರೂ ಮಾತ ಹೇಳ್ತೇನಿ.
ಭಾಳ ಮಸ್ತ್ ಪುಟ್ಟ್ಯಾ👌