ಅಳಬ್ಯಾಡ ಅಳಬ್ಯಾಡ ಪಾಪಣ್ಣಿ….

“ರ್ರಿ, ನಂಗ ಖರೇನ ಸಾಕಾಗಿ ಬಿಟ್ಟದ ನಿಮ್ಮ ಮಗಳ ಸಂಬಂಧ, ಒಂದ ತಾಸ ಆತ ತೊಡಿ ಮ್ಯಾಲೆ ಹಾಕಿ ಬಡಿಲಿಕತ್ತ, ಇನ್ನು ಮಲ್ಕೊಳಿಕ್ಕೆ ತಯಾರಿಲ್ಲಾ. ನಂಗsರ ಯಾವಾಗ ಬೆನ್ನ ಹಾಸಗಿಗೆ ಹಚ್ಚೇನೋ ಅನ್ನೊ ಅಷ್ಟ ಸಾಕಾಗಿರ್ತದ, ಇದ ನೋಡಿದರ ಶನಿ ಇಷ್ಟ ಕಾಡತದಲಾ”.
ಇದ ನನ್ನ ಹೆಂಡತಿದ almost every day ಮಗಳನ ಮಲಗಸೊಬೇಕಾರ ಹಾಡೊ ರಾಗ. ಅಕಿ ಮಗಳ ಲಗೂನ ಮಲ್ಕೋಳಿ ಅಂತ ತೊಡಿ ಮ್ಯಾಲೆ ಹಾಕ್ಕೊಂಡ ಬಡಿಯೊ ಸೌಂಡ ಕೇಳಿ ಬಿಟ್ಟರ ಅಂತು ಆಜು ಬಾಜು ಮಂದಿ ಅಕಿ ಮಗಳಿಗೆ ಚಿಕ್ಕು ತಟ್ಟಲಿಕತ್ತಿಲ್ಲಾ ಗಂಡಗ ಬಡದ ಮಲಗಸಲಿಕತ್ತಾಳ ಅಂತ ತಿಳ್ಕೋಬೇಕು ಅಷ್ಟ ಛಂದ ಬಡಿತಿರ್ತಾಳ.
ಈಗಿನ್ನೂ ಬೇಕ ಒಂದ ಅರ್ಧಾ ತಾಸ ಬಡಿಸಿಗೊಂಡsರ ನನ್ನ ಮಗಳ ’ಆsss ..ಆsss’ ಅನ್ಕೋತ ಅತಗೋತ ಮಲ್ಕೊತಾಳ ಮೊದ್ಲ ಒಂದ ತಾಸ ಬಡದರು ಮಲ್ಕೋತಿದ್ದಿಲ್ಲಾ. ಆವಾಗ ಮಧ್ಯಾಹ್ನ ಮಲ್ಕೋತಿತ್ತ ಕೂಸು ಹಿಂಗಾಗಿ ರಾತ್ರಿ ಲಗೂ ಮಲ್ಕೋತಿದ್ದಿಲ್ಲಾ. ಈಗ ಒಂದ ಆರ ತಿಂಗಳದಿಂದ ನನ್ನ ಹೆಂಡತಿ ’ಮಧ್ಯಾಹ್ನ ಇಕಿ ಮಲ್ಕೊಂಡರ ರಾತ್ರಿ ಲಗೂನ ಮಲಗಂಗಿಲ್ಲ ತಡಿ’ ಅಂತ ಕೂಸಿಗೆ ಮಧ್ಯಾಹ್ನ ಮಲಗಿಸೇ ಕೊಡಂಗಿಲ್ಲಾ. ನಮ್ಮವ್ವರ “ಪಾಪ ಕೂಸಿಗೆ ಹಂಗ ಮಾಡಬಾರದ್ವಾ, ಮಲ್ಕೊಂಡಷ್ಟ ಕೂಸ ಬೆಳಿತಾವ, ಮಧ್ಯಾಹ್ನ ಒಂದ ತಾಸ ಮಲಗಲಿ ಬಿಡು” ಅಂತ ಎಷ್ಟ ದೈನಾಸ ಪಡತಾಳ ಆದರ ನನ್ನ ಹೆಂಡತಿ ಏನ ನಮ್ಮವ್ವನ್ನ ಮಾತ ಕಿವಿ ಮ್ಯಾಲೆ ಹಾಕೊಳಂಗಿಲ್ಲಾ.
ಅದರಾಗ ಅಕಿ ಆ ಪರಿ ಕೂಸಿಗೆ ಬಡಿಯೋದ ನೋಡಿ ನಮ್ಮವ್ವಗ ತಡಕೊಳಿಕ್ಕೆ ಬ್ಯಾರೆ ಆಗಂಗಿಲ್ಲಾ
“ಅಯ್ಯ ಆ ಪರಿ ಭಕ್ಕರಿ ಬಡದಂಗ ಬಡದರ ಕೂಸ ಎದಕ್ಕ ಬಂದಿತ್ತ ನಮ್ಮವ್ವಾ, ಎಲ್ಲರ ಒಂದ ಹೋಗಿ ಒಂದ ಆಗಿತ್ತ, ಛಂದಾಗಿ ಹಾಡ ಹೇಳಿ ಸಮಾಧಾನದ್ಲೆ ಮಲಗಸಬೇಕವಾ ಮಕ್ಕಳನ್ನ” ಅಂತ ನಮ್ಮವ್ವ ತನ್ನ ರೂಮಿನಾಗಿಂದ ಒದರೋಕಿ.
ಪಾಪ, ನಮ್ಮವ್ವಗ ವಯಸ್ಸಾಗೇದ ಮಣಕಾಲ ನೋವ ಬ್ಯಾರೆ, ಮೊದ್ಲಿನಂಗ ಮೈಯಾಗ ಶಕ್ತಿ ಇಲ್ಲಾ. ಕೂತರ ಏಳಲಿಕ್ಕೆ ಬರಂಗಿಲ್ಲಾ ಎದ್ದರ ಕೂಡಲಿಕ್ಕೆ ಬರಂಗಿಲ್ಲಾ, ಹಿಂಗಾಗಿ ಕೂಸಿನ್ನ ತಾನ ತೊಡಿ ಮ್ಯಾಲೆ ಹಾಕ್ಕೊಂಡ ಹಾಡಿ ಮಲಗಸಲಿಕ್ಕೆ ಆಗಂಗಿಲ್ಲಾ. ಹಂಗ ನನ್ನ ಮಗಾ ಸಣ್ಣಂವ ಇದ್ದಾಗ ನಮ್ಮವ್ವನ ತೊಡಿ ಮ್ಯಾಲೆ ಮಲ್ಕೊಂಡ ಅಕಿ ಹಾಡ ಕೇಳಲಾರದ ನಿದ್ದಿನ ಹಚ್ಚತಿದ್ದಿಲ್ಲಾ. ಅಲ್ಲಾ ಅವಂಗ ಮಲಗಲಿಕ್ಕೆ ಇಷ್ಟ ಏನ ಒಂದಕ್ಕ ಎರಡಕ್ಕ ಸಹಿತ ಅಜ್ಜಿ ತೊಡಿನ ಬೇಕಾಗ್ತಿತ್ತ ಬಿಡ್ರಿ.
ಇನ್ನ ನನ್ನ ಹೆಂಡತಿಗಂತೂ ಮೊದ್ಲಿಂದ ’ಹಾಡು’ ಅಂದರ ಒಂದ ಮಾರ ದೂರ, ಅಕಿ ಕನ್ಯಾ ತೊರಸಲಿಕ್ಕೆ ಬಂದಾಗsನ ನಂಗ ಹಾಡ ಬರಂಗಿಲ್ಲಾ ಅಂತ ಭಾಳ ಕ್ಲಿಯರ್ ಮಾಡಿನ ನಮ್ಮವ್ವಗ ನಮಸ್ಕಾರ ಮಾಡಿ ಹೋದೊಕಿ. ಅಲ್ಲಾ ಹಂಗ ಹಾಡ ಬರಂಗಿಲ್ಲಾ ಅಂದರ ಮುಂದ ಹಡದರ ಮಕ್ಕಳಿಗೆ ಲಾಲಿ ಹಾಡ ಹಾಡಲಿಕ್ಕೂ ಬರಂಗಿಲ್ಲಾ, ಶ್ರಾವಣದಾಗ ಗೌರಿಗೆ ಆರತಿ ಹಾಡ ಹಾಡಲಿಕ್ಕೂ ಬರಂಗಿಲ್ಲಾಂತ ನಮಗೇನ ಗೊತ್ತ. ಹಂಗ ಖರೇ ಹೇಳ್ಬೇಕಂದರ ನನ್ನ ಹೆಂಡತಿ ಆರತಿ ಹಾಡ ಹೇಳಿದರ ದೇವರ ಮಲ್ಕೊತಾನ ಇನ್ನ ನನ್ನ ಮಗಳ ಮಲ್ಕೊಳಂಗಿಲ್ಲ? ಆದರೂ ಅಕಿ ಏನ ನನ್ನ ಮಗಳನ್ನ ಹಾಡಿ ಮಲಗಸಂಗಿಲ್ಲಾ. ಈಗೇಲ್ಲಾ ಕಾಲ ಚೇಂಜ್ ಆಗೇದ ತೊಗೊರಿ. ತಾಯಂದರಿಗೆ ಹಾಡ ಹೇಳಲಿಕ್ಕೆ ಬರಂಗಿಲ್ಲಾ ಮಕ್ಕಳಿಗೆ ಹಾಡ ಹಾಡಿ ಮಲಗಸಲಿಕತ್ತರ disturb ಆಗಿ ಬರೋ ನಿದ್ದಿನೂ ಬರಂಗಿಲ್ಲಾ.
ನಾವು ಹಂಗ ಸಣ್ಣವರಿದ್ದಾಗ ಮಂಡ ಮಕ್ಕಳ, ಸುಮ್ಮನ ಮಲ್ಕೋಳೊರಲ್ಲಾ ಆದರೂ ನಮ್ಮವ್ವ, ನಮ್ಮಜ್ಜಿ ಎಷ್ಟ ಸಮಾಧಾನದಿಂದ ಚಿಕ್ಕು ಬಡದ ತಟ್ಟಿ ಮಲಗಿಸಿ ನಮ್ಮನ್ನ ಜೋಪಾನ ಮಾಡಿ ಬೆಳಸಿದರು ಅಂತೇನಿ. ಅದರಾಗ ನಮ್ಮಜ್ಜಿ ಅಂತು ನಾವ ಹಟಾ ಮಾಡಿ ಅಳಬೇಕಾರ ಹೆಂತಾ ಹಾಡ ಹೇಳತಿದ್ಲು……
ಯಾಕಳುವೆ ಎಲೆ ರಂಗ ಬೇಕಾದ್ದು ನಿನಗೀವೆ
ನಾಕೆಮ್ಮೆ ಕರೆದ ನೊರೆ ಹಾಲು| ಸಕ್ಕರೆ
ಸಾಕೆಂಬುವತನಕ ಸುರಿವೇನು||
ಅಂತ ನಮ್ಮಜ್ಜಿ ಕಟ್ಟಿ ಮ್ಯಾಲೆ ಕೂತ ಅನಬೇಕು, ಇತ್ತಲಾಗ ನಮ್ಮವ್ವ ನಮ್ಮನ್ನ ತೊಡಿ ಮ್ಯಾಲೆ ಹಾಕ್ಕೊಂಡ ನಾವ ಸುಮ್ಮ ಸುಮ್ಮನ ಹಟಾ ಮಾಡೋದ ನೋಡಿ
ಯಾತಕಳುತಾನೆಂದು ಎಲ್ಲಾರು ಕೇಳ್ಯಾರು
ಕಾಯದ ಹಾಲ ಕೆನೆ ಬೇಡಿ| ಕಂದಯ್ಯ
ಕಾಡಿ ಕೈಬಿಟ್ಟು ಇಳಿದಾನ||
ಅಂತ ಹಾಡೋಕಿ. ಅಷ್ಟ ಆದರೂ ನಾವೇನ ಒಮ್ಮೆ ಗಪ್ ಆಗೋರಲ್ಲಾ. ಮತ್ತ ನಮ್ಮಜ್ಜಿ ಎದ್ದ ಬಂದ ನಮ್ಮ ಗಲ್ಲಾ ಚಿವಟಿ, ತುಟಿಗೆ ತಟ್ಟಿ
ಅಳುವ ಕಂದನ ತುಟಿಯು ಹವಳದ ಕುಡಿಹಂಗೆ
ಕುಡಿಹುಬ್ಬು ಬೇವಿನೆಸಳಂಗೆ| ಕಣ್ಣೋಟ
ಶಿವನ ಕೈಯಲಗು ಹೊಳೆದಂಗ||
ಅಂತ ಹಾಡೊಕಿ. ನಾವ ಅಕಿ ಚಿವಟಿದ್ದ ಸಂಕಟಕ್ಕ ಇನ್ನು ಜಾಸ್ತಿ ಅತ್ತರ ಸಹಿತ ನಮ್ಮವ್ವ ನಕ್ಕೋತ ಅದ ಗಲ್ಲಾ ಸವರಿ
ಅತ್ತರ ಅಳಲೆವ್ವ ಈ ಮುತ್ತ ನನಗಿರಲಿ
ಕೆಟ್ಟರ ಕೆಡಲಿ ಮನಿಗೆಲಸ | ಮನೆಗೆಲಸ ಕೆಟ್ಟರೂ
ನಿನ್ನಂಥ ಮಕ್ಕಳಿರಲೆವ್ವ ಮನಿಯಾಗ||
ಅಂತ ಪ್ರೀತಿಲೇ ಮಲಗಸೋಕಿ. ಅದನ್ನೇಲ್ಲಾ ನೆನಸಿಗೊಂಡರ ಈಗ ನಂಬಲಿಕ್ಕೆ ಆಗಂಗಿಲ್ಲಾ.
ಕೆಟ್ಟರ ಕೆಡಲಿ ಮನಿಗೆಲಸ | ಮನೆಗೆಲಸ ಕೆಟ್ಟರೂ
ನಿನ್ನಂಥ ಮಕ್ಕಳಿರಲೆವ್ವ ಮನಿಯಾಗ||
ಅಂತ ನಮ್ಮವ್ವ ಅಂತಿದ್ದರ ಈಗ
“ಖೋಡಿ ಒಯ್ದಂದ ನನಗ ಕಾಡಲಿಕ್ಕೆ ಹುಟ್ಟೇದ, ಕೆಲಸ-ಬೊಗಸಿ ಬಿಟ್ಟ ಈ ಮಂಗಬೊಸಡಿನ್ನ ಕರಕೊಂಡ ಕೂತ ಬಿಡಬೇಕ, ನಿನ್ನ ಹಿಂಗ ಕರಕೊಂಡ ಕೂತರ ಮನಿ ಕೆಲಸಾ ಏನ ನಿಮ್ಮಪ್ಪ ಮಾಡ್ತಾನ ಏನ?…ಅತತ ಸರಿ ಅಂದರ ಸಾಕ ಓssss… ಅಂತ ಏನಾತೊ ಅನ್ನೋರಗತೆ ರಾಗಾ ತಗಿತಾಳ” ಅಂತ ನನ್ನ ಹೆಂಡತಿ ಅಂತಾಳ.
ಇದು ಇವತ್ತಿನ ಹಣೇಬರಹ. ಒಂದ ಜನರೇಶನ್ ಒಳಗ ಎಷ್ಟ ಕಾಲ ಬದಲಾತ ನೀವ ನೋಡ್ರಿ.
ಅಲ್ಲಾ ಹಂಗ ಆವಾಗೂ ಮಕ್ಕಳ ಸುಮ್ಮ ಸುಮ್ಮನ ಹಟಾ ಮಾಡತಿದ್ದರು ಈಗೂ ಮಾಡತಾರ, ಅವರೇನ ಬದಲಾಗಿಲ್ಲಾ, ಇವತ್ತ ಬದಲಾಗಿದ್ದ ಕಾಲ ಮತ್ತ ತಾಯಿ. ಹಂಗ ನನ್ನ ಹೆಂಡತಿ ಮಗಳಿಗೆ ಮಾತ ಮಾತಿಗೆ
“ಎಲ್ಲಾ ಅಪ್ಪನ್ನ ಹೋತಿ, ಅವರ ಕಾಡಿದಂಗ ಕಾಡತಿ” ಅಂತ ಬೈತಿರ್ತಾಳ ಆದರ ನಮ್ಮವ್ವ ನನ್ನ ಒಪ್ಪಾ ಇಟಗೊಂಡ
“ಅಯ್ಯ, ನಮ್ಮ ಪ್ರಶಾಂತ ಹಿಂಗ ಒಮ್ಮೇನೂ ಕಾಡಿಲ್ಲವಾ. ಖರೇ ಹೇಳ್ತೇನಿ, ನಿನ್ನ ಮಗಳ ನಿನ್ನ ಹೋತಾಳ” ಅಂತ ನನ್ನ ಬಗ್ಗೆ ತಾ ಹಾಡತಿದ್ದ ಹಾಡ ಹೇಳೊಕಿ
ಅತ್ತು ಕಾಡಿದವನಲ್ಲ ಮತ್ತೆ ಬೇಡಿದವನಲ್ಲ
ಮೆತ್ತನ್ನ ಎರಡು ಕೈ ಮುಟಗಿ| ಕೊಟ್ಟರೆ
ಗಪ್ಪುಚಿಪ್ಪಾಗಿ ಮಲಗೊಂವಾII
ಅತ್ತು ಕಾಡಿದವನಲ್ಲ ಮತ್ತೆ ಬೇಡಿದವನಲ್ಲ
ಎತ್ತಿಕೊಳ್ಳೆಂಬ ಹಟವಿಲ್ಲ| ಅವನಂತ
ಹತ್ತು ಮಕ್ಕಳನ ಸಾಕಬಹುದು||……….
…….ಇನ್ನ ನಮ್ಮವ್ವನ್ನ ಸುಮ್ಮನ ಬಿಟ್ಟರ ಇಕಿ ಹಿಂಗ ಎಲ್ಲರ ಮಗನ ಬಗ್ಗೆ ಹಾಡಕೋತ ಕೂತ ಬಿಡೋಕಿ ಅಂತ ನನ್ನ ಹೆಂಡತಿ ಅಡ್ಡಬಾಯಿ ಹಾಕಿ
“ಅಯ್ಯ, ಸಾಕ ಮುಗಸರಿ ನಿಮ್ಮ ಮಗನ ಪ್ರಶಂಸಾ.. ಹಿಂತಾವ ಹತ್ತ ಹಡಿತಾರಂತ ಹತ್ತ…. ಅಲ್ಲಾ ಹದಿನೈದ ವರ್ಷದಿಂದ ನಾನ ಮಲಗಸಲಿಕತ್ತೇನಿ ಗೊತ್ತಿಲ್ಲೇನ್ ನನಗ ನಿಮ್ಮ ಮಗನ ಹಣೇಬರಹ…ಮೆತ್ತನ್ನ ಎರಡ ಕೈ ಮುಟಗಿ ಕೊಟ್ಟರ ಗಪ್ಪ ಚುಪ್ಪ ಮಲಗತಾನಂತ..ಮಲಗತಾನ” ಅಂತ ಅನ್ನೋಕಿ.
ಅಲ್ಲಾ ಒಂದ ಕಾಲದಾಗ ಮಂದಿ ಹತ್ತ ಹತ್ತ ಹಡಿತಿದ್ದರು. ಈಗಿನವರ ಎರಡ ಹಡದ ಒಂದನ್ನ ಮಲಗಸಲಿಕ್ಕೆ ಇಷ್ಟ ಒದ್ಯಾಡತಾರ. ನಮ್ಮ ಮುತ್ತಜ್ಜಿ ಮನ್ಯಾಗಂತೂ ಮೂರ ವರ್ಷಕ್ಕೊಮ್ಮೆ ಹೊರಸ ಚೇಂಜ್ ಮಾಡತಿದ್ದರಂತ, ವರ್ಷಕ್ಕ ಎರಡ ಬಾಣಂತನಾ. ಅಷ್ಟ ಮನ್ಯಾಗ ಮಂದಿ ಹಡೆಯೋರು, ಅಷ್ಟ ಮಕ್ಕಳು, ಮೊಮ್ಮಕ್ಕಳು. ಕೆಲವೊಮ್ಮೆ ಅಂತೂ ಮಕ್ಕಳಕಿಂತಾ ಮೊಮ್ಮಕ್ಕಳ ದೊಡ್ಡವರ ಇರತಿದ್ದರು. ಎಲ್ಲೇ ಹೋತ ಹಂತಾ ಕಾಲ ಎಲ್ಲೆ ಹೋದರ ಆ ಹಳೇ ಮಂದಿ ಅಂತ ಕೆಲವೊಮ್ಮೆ ನೆನಸಿಗೊಂಡರ ಭಾಳ ಕೆಟ್ಟ ಅನಸ್ತದ.
ಆದ್ರೂ ಈಗೀನ ಜನರೇಶನ್ ತಾಯಂದರಿಗೆ ಮಕ್ಕಳನ ಸಾಕೋದ ಅಂದರ ಮೈಮ್ಯಾಲೆ ಬರತದ ಬಿಡ್ರಿ. ಅದರಾಗ ಒಂದ ಸ್ವಲ್ಪ ಮಕ್ಕಳು ಮಂಡ ಇದ್ದರ ಮುಗದ ಹೋತ ಅವರ ಹಣೇಬರಹ. ಇನ್ನ ನಾವೇನರ ನಡಕ ಮಾತಾಡಲಿಕ್ಕೆ ಹೋದರ “ಎಂಟ ತಾಸ ಹೊರಗ ದುಡದ ಬಂದ ದೊಡ್ಡಿಸ್ತನ ಬಡಿ ಬ್ಯಾಡರಿ, ಇರ್ರಿ ಮನ್ಯಾಗ ಮಕ್ಕಳ ಜೊಡಿ ಎರಡ ತಾಸ ಗೊತ್ತಾಗತದ” ಅಂತಾರ.
ಹಿಂಗಾಗಿ ಈಗ ಒಂದ ವಾರದಿಂದ ತಲಿಕೆಟ್ಟ ನಾನ ನನ್ನ ಮಗಳ ಮಲಗಸೋ ಜವಾಬ್ದಾರಿ ತೊಗೊಂಡೇನಿ. ನಮ್ಮವ್ವನ್ನ ಕೇಳಿ ಒಂದ ಹಾಡ ಬರಿಸಿಗೊಂಡ ಬಾಯಿಪಠ್ ಮಾಡಿ ದಿವಸಾ ಆ ಹಾಡ ಹಾಡಿ ಮಲಗಸಲಿಕತ್ತೇನಿ…ಆ ಹಾಡ ಒಂದ ಸರತೆ ಹೆಳ್ತೇನಿ ಕೇಳಿ ಬಿಡ್ರಿ please…
ಅಳಬ್ಯಾಡ ಅಳಬ್ಯಾಡ ಪಾಪಣ್ಣಿ….ಪಾಪಣ್ಣಿ
ಹಾಲ ಮಾರಿ ಬರ್ತೇನಿ, ಹಾಲಗಡಗಾ ತರ್ತೇನಿ
ಮೊಸರ ಮಾರಿ ಬರ್ತೇನಿ,ಹಸರಂಗಿ ತರ್ತೇನಿ
ಮಜ್ಜಿಗೆ ಮಾರಿ ಬರ್ತೇನಿ, ಗೆಜ್ಜಿ-ಉಡದಾರ ತರ್ತೇನಿ
ಬೆಣ್ಣಿ ಮಾರಿ ಬರ್ತೇನಿ, ಉಣ್ಣಿ ಟೊಪಗಿ ತರ್ತೇನಿ
ಅಳಬ್ಯಾಡ ಅಳಬ್ಯಾಡ ಪಾಪಣ್ಣಿ….ಪಾಪಣ್ಣಿ……
ಹೆಂಗದ ಹಾಡ?…ಅಲ್ಲಾ ಆ ಹಾಡ ಹೆಂಗರ ಇರವಲ್ತಾಕ, ನಾ ಅದನ್ನ ಇಷ್ಟ ಛಂದ ಹಾಡ್ತೇನ್ಲಾ ….ಐದ ನಿಮಿಷದಾಗ ನನ್ನ ಮಗಳ ಇಷ್ಟ ಏನ ಅವರವ್ವನು ಅದನ್ನ ಕೇಳ್ಕೋತ ಮಲ್ಕೊಂಡ ಬಿಡ್ತಾಳ…ನಾ ಮತ್ತ ಆಮ್ಯಾಲೆ ಅವರವ್ವನ ಇಷ್ಟs ಎಬಸಲಿಕ್ಕೆ ಬ್ಯಾರೆ ಹಾಡ ಹಾಡ್ತೇನಿ ಆ ಮಾತ ಬ್ಯಾರೆ….ಇರಲಿ ಮಾತ ಹೇಳಿದೆ.
ಹಂಗ ಹಿಂದಕ ನನ್ನ ಮಗಾ ಸಣ್ಣಂವ ಇದ್ದಾಗೂ ಇದ ಹಣೇಬರಹ, ಅಂವಾ ಅಂತೂ ಖರೇನ ಅವರವ್ವನ ಹೋತಂವಾ, ಮನ್ಯಾಗಿನವರದ ಯಾರದು ಒಂದ ಮಾತ ಕೇಳೊಂವಾ ಅಲ್ಲಾ, ಹೇಳಿದ್ದ ಮಾಡೊಂವ ಅಲ್ಲಾ. ಸಣ್ಣಂವ ಇದ್ದಾಗೇನೊ ನಮ್ಮವ್ವ ಹಾಡ ಹೇಳಿ ಬೆಳಸಿ ದೊಡ್ಡವನ ಮಾಡಿದ್ಲು ಆದರ ಮುಂದ ದೊಡ್ಡಂವ ಆದಂಗ ಆದಂಗ ಅಂವಾ ಭಾಳ ಮಂಡ ಆಗಲಿಕತ್ತಾ, ಮೊದ್ಲ ಹೇಳಿದ್ನೇಲ್ಲಾ ಅವರವ್ವನ ಹೋತೊಂವಾ ಅಂತ.
ಆದರ ಅಂವಾ ಸಾಲ್ಯಾಗಿನ ಟೀಚರಗೆ ಭಾಳ ಹೆದರತಿದ್ದ. ಹಿಂಗಾಗಿ ನನ್ನ ಹೆಂಡತಿ ಅಂವಾ ಏನರ ಮಾತ ಕೇಳಲಿಲ್ಲಾ ಅಂದರ ಸಾಕು
“ನೋಡ ಪ್ರಥಮ, ನೀ ಹೇಳಿದ್ದ ಮಾತ ಕೇಳಿಲ್ಲಾ ಅಂದರ ನಾ ಶಿಲ್ಪಾ ಟೀಚರಗೆ ಹೇಳ್ತಿನಿ” ಅಂತ ಹೆದರಿಸಿ ಹೆದರಿಸಿ ಅವನ ಕಂಟ್ರೋಲನಾಗ ಇಟಗೋತಿದ್ಲು.
ಊಟಾ ಮಾಡಂಗಿಲ್ಲಾ- ಶಿಲ್ಪಾ ಟೀಚರಗೆ ಹೇಳ್ತಿನಿ
ಹೊಮ್ ವರ್ಕ್ ಮಾಡಂಗಿಲ್ಲಾ- ಶಿಲ್ಪಾ ಟೀಚರಗೆ ಹೇಳ್ತಿನಿ
ಲಗೂನ ಏಳಂಗಿಲ್ಲಾ- ಶಿಲ್ಪಾ ಟೀಚರಗೆ ಹೇಳ್ತಿನಿ
ರಾತ್ರಿ ಮಲ್ಕೋಬೇಕಾರ ಉಚ್ಚಿ ಹೋಯ್ದ ಮಲ್ಕೊಳಂಗಿಲ್ಲಾ- ಶಿಲ್ಪಾ ಟೀಚರಗೆ ಹೇಳ್ತಿನಿ…
ಪ್ರತಿಯೊಂದಕ್ಕು ಶಿಲ್ಪಾ ಟೀಚರ್. ಆ ಟೀಚರ್ ಏನ್ ಹೋದ ಜನ್ಮದಾಗ ನನ್ನ ಮಗನ ಮಲತಾಯಿ ಆಗಿದ್ಲೋ ಏನೊ ಗೊತ್ತಿಲ್ಲಾ ಅಕಿ ಹೆಸರ ಹೇಳಿ ಬಿಟ್ಟರ ಅವನ ಹಡದವ್ವ ಕಲಸಿದ್ದ ಮಸರು ಅನ್ನಕ್ಕ ಉಪ್ಪ ಇದ್ದಿದ್ದಿಲ್ಲಾ ಅಂದರು ಈ ಮಗಾ ಬಾಯಿ ಮುಚಗೊಂಡ ನುಂಗತಿದ್ದಾ.
ನಂಗು ಆ ಶಿಲ್ಪಾ ಟೀಚರ್ ಹೆಸರ ಕೇಳಿ ಕೇಳಿ ಸಾಕಾಗಿತ್ತ. ಒಂದ ದಿವಸ ತಲಿಕೆಟ್ಟ ನನ್ನ ಹೆಂಡತಿಗೆ
“ಲೇ, ಪ್ರಥಮನ ಸಾಲ್ಯಾಗ ಆ ಶಿಲ್ಪಾ ಟೀಚರ್ ಇದ್ದಾರಲಾ ಅವರದ ಮದುವಿ ಆಗೇದೇನ್?” ಅಂತ ಕೇಳಿದೆ.
ನನ್ನ ಹೆಂಡತಿ
“ಯಾಕ ಅದ್ಯಾಕ ನಿಮಗ ಬೇಕ?” ಅಂದ್ಲು.
“ಅಲ್ಲಲೇ, ಮತ್ತ ಮನ್ಯಾಗ ನೀ ಎಲ್ಲಾದಕ್ಕೂ ಆ ಶಿಲ್ಪಾ ಟೀಚರ್ ಹೆಸರ ಹೇಳಿ ಮಗನ ಕಂಟ್ರೋಲನಾಗ ಇಟಗೋತಿ ಅದಕ್ಕ ಸುಮ್ಮನ ನಾನs ಆ ಶಿಲ್ಪಾ ಟೀಚರನ ತಂದ ಮನ್ಯಾಗ ಇಟಗೊಂಡರ ಹೆಂಗ ಅಂತ ವಿಚಾರ ಮಾಡಿದೆ” ಅಂದೆ.
ಅಲ್ಲಾ ಮತ್ತ ಏನ ಮಾಡ್ತೀರಿ, ಹಡದ ತಾಯಿಗೆ ಮಕ್ಕಳನ ಹೆದರಿಸಿ-ಬೆದರಿಸಿ ಸಂಭಾಳಸಲಿಕ್ಕೆ ಆಗಂಗಿಲ್ಲಾ ಅಂದರ…
ಅವತ್ತ ಲಾಸ್ಟ ಮುಂದ ನನ್ನ ಹೆಂಡತಿ ಎಂದೂ ಆ ಶಿಲ್ಪಾ ಟೀಚರಗೆ ಹೇಳ್ತಿನಿ ಅಂತ ನನ್ನ ಮಗಗ ಅನ್ನಲಿಲ್ಲಾ. ಅದರ ಬದ್ಲಿ ಒಂದ ಸರತೆ ಮುಚ್ಚು ಕಾಯಿ ಕಾಸಿ ನನ್ನ ಮಗನ ತೊಡಿಗೆ ಬರಿ ಕೊಟ್ಟ ಮುಂದ ಮಾತ ಮಾತಿಗೆ ಮಾತ ಕೇಳ್ತಿಯೋ ಇಲ್ಲಾ ಮುಚ್ಚುಕಾಯಿ ಹಚ್ಚಲೋ ಅಂತ ಮುಚ್ಚುಕಾಯಿದ ಹೆದರಿಕೆ ಇಟ್ಟ ಮಗನ ದೊಡ್ಡಂವನ ಮಾಡಿದ್ಲು. ಇನ್ನ ಅಕಿ ಎಲ್ಲರ ನನಗು ’ಮುಚ್ಚುಕಾಯಿ ಇಟಗೊತಿರೇನ?’ಅಂತ ಕೇಳಿ ಗಿಳ್ಯಾಳ ಅಂತ ನಾ ಅವತ್ತಿನಿಂದ ಶಿಲ್ಪಾ ಟೀಚರ್ ಉಸಾಬರಿನ ಬಿಟ್ಟ ಬಿಟ್ಟೆ.
ಆದರ ಇತ್ತೀಚಿಗೆ ನಮ್ಮವ್ವಗ ’ಎಲ್ಲೇರ ಇಕಿ ನಾಳೆ ಮಗಳಿಗೂ ಹಿಂಗ ಮಾಡಿ ಗಿಡ್ಯಾಳ’ ಅಂತ ಚಿಂತಿ ಹತ್ತಿ ಬಿಟ್ಟದ,
“ಎಲ್ಲರ ಆ ಕೂಸಿಗೆ ಸಿಟ್ಟಿಗೆದ್ದ ಗಲ್ಲಕ್ಕ-ಗಿಲ್ಲಕ್ಕ ಬರಿ ಕೊಟ್ಟ ಗಿಟ್ಟಿವಾ, ನಾಳೆ ಆ ಹುಡಗಿ ಲಗ್ನಾ ಮಾಡ್ಕೊಂಡ ಹೋಗೊಕಿ ಬ್ಯಾರೆ” ಅಂತ ಒಂದ ಹತ್ತ ಸರತೆ ನನ್ನ ಹೆಂಡತಿಗೆ ನೆನಪ ಮಾಡಿ ಕೊಡ್ತಾಳ……
ಪಾಪ, ನಮ್ಮವ್ವನ ಸಂಕಟಾ ಯಾರ ಕೇಳಬೇಕ
ಉಪ್ಪರಿಗೆ ಮನೆ ಬೇಕ ಕೊಪ್ಪರಿಗೆ ಹಣ ಬೇಕ
ಕೃಷ್ಣದೇವರಂತ ಮಗ ಬೇಕ |
ನಮ್ಮನಿಗೆ ರುಕ್ಮಿಣಿಯಂತ ಸೊಸೆ ಬೇಕ||
ಅಂತ ಎಷ್ಟ ಆಶಾ ಪಟ್ಟ ನನ್ನ ಲಗ್ನಾ ಮಾಡಿದ್ಲು, ನಾ ಎನೋ ಕೃಷ್ಣನಗತೆ ಇದ್ದೇನಿ ಖರೆ ಆದರ ಅಕಿ ಹಣೇಬರಹಕ್ಕ ರುಕ್ಮಿಣಿಯಂತಾ ಸೊಸಿ ಸಿಗಲಿಲ್ಲಾ. ನಾನ ನಮ್ಮವ್ವಗ
ತೋಳುದ್ದ ತಲೆದಿಂಬು ಮಾರುದ್ದ ಹಾಸಿಗೆ
ಮಾಣಿಕ್ಯದಂಥ ಮಗ ಮನ್ಯಾಗಿರಲು
ಮಾರಾಯ್ತಿ ಸೊಸಿ ಉಸಾಬರಿ ನಿನಗ್ಯಾಕ
ಅಂತ ಸಮಾಧಾನ ಮಾಡ್ತಿರ್ತೇನಿ…ಆದರೂ ಏನ ಅನ್ನರಿ ಈ ಸಣ್ಣ ಹುಡುಗರನ ಮಲಗಸೋದ ಅದ ಅಲಾ… ಅಯ್ಯಯ್ಯ ಸಾಕ ಸಾಕಾಗಿ ಹೋಗ್ತದ….ಸಾಕ ಸದ್ಯೇಕ ಇಲ್ಲಿಗೆ ಮುಗಸ್ತೇನಿ. ಮತ್ತೇಲ್ಲರ ನೀವ ಇನ್ನಷ್ಟ ಜೊಗಳದ ಹಾಡ ಕೇಳಕೊತ ಮಲ್ಕೊಂಡ-ಗಿಳ್ಕೊಂಡಿರಿ..ಏನೋ ನಿನ್ನೆ ಮಗಳನ ಮಲಗಸಬೇಕಾರ ಇಷ್ಟೇಲ್ಲಾ ನೆನಪಾತ ಅದಕ್ಕ ಹೇಳಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ