ಇವತ್ತಿಗೆ ಕರೆಕ್ಟ ನಮ್ಮ ಮಾಮಾನ ಮಗಾ ವಿನ್ಯಾಂದ ಮದುವಿ ಆಗಿ ಒಂಬತ್ತ ತಿಂಗಳ ಹದಿನೆಂಟ ದಿವಸ ಆತ,
ಹಂಗ ಇವತ್ತ ಅವನ ಮಗನ ಹೆಸರ ಇಡೊ ಕಾರ್ಯಕ್ರಮನೂ ಮುಗದಂಗ ಆತ ಅನ್ನರಿ. ಅಂವಾ ನಾಳೆನ ತನ್ನ ಹೆಂಡತಿನ್ನ ಕಟಗೊಂಡ ಹೆತ್ತಿ ಬಣ ಅಂತ ವಾಪಸ ಬೆಂಗಳೂರಿಗೆ ಹೊಂಟಾನ, ಮುಂದಿನ ಬಾಣಂತನ ಅಲ್ಲೇ ಬೆಂಗಳೂರಾಗ. ಅದು ಪಾಪ ನಮ್ಮ ಮಾಮಿನ ಮಾಡೋಕಿ.
ಊಟಕ್ಕ ಕೂತಾಗ ಎಲ್ಲಾರು ವಿನ್ಯಾಗ ಕಾಡಸೋರ ಕಾಡಸೋರ, ಅದರಾಗ ಒಂದ ಹತ್ತ ದಿವಸದ ಹಿಂದsನ ದೀಪಾವಳಿ ಮುಗದಿತ್ತ, ವಿನ್ಯಾನ ಹೆಂಡ್ತಿ ಹಂತಾದರಾಗ ಹಡದಿದ್ದಕ್ಕ ಪಾಪ ಅವಂದ ಅಳೆತನ ಬ್ಯಾರೆ ತಪ್ಪಿ ಬಿಟ್ಟಿತ್ತ.
’ಏನಲೇ ಇನ್ನು ಮದುವಿ ಆಗಿ ಹತ್ತ ತಿಂಗಳಾಗಿಲ್ಲಾ, ಹೆಂಡತಿ ಹೆತ್ತಿ ಬಣಕ್ಕ ಹೋಗಲಿಕ್ಕೆ ರೆಡಿ ಆದ್ಲಲಾ’ ಅಂತ ಒಬ್ಬರ ಅಂದರ ಇನ್ನೊಂದಿಬ್ಬರು
’ಪಾಪ, ಹಿಂಗ ಆಗಬಾರದಿತ್ತು, ಹುಡಗಂದ ಇನ್ನು ಅಳೆತನನ ಆಗಿದ್ದಿಲ್ಲಾ ಅಷ್ಟರಾಗ ಅವನ ಹೆಂಡತಿದ ಬಾಣಂತನ ಬಂದ ಬಿಡ್ತು’ ಅಂದರು.
’ಅಲ್ಲಾ, ಮೊದ್ವಿಗಿಂತಾ ಮುಂಚೆ ಇಬ್ಬರು ಬೆಂಗಳೂರಾಗ ಇದ್ದರು, ಅದರಾಗ ಎಂಗೇಜಮೆಂಟ ಆದಮ್ಯಾಲೆ ಅಂತೂ ಫೇಸಬುಕ್ಕಿನಾಗ ವಾರಕ್ಕೊಮ್ಮೆ ಇಬ್ಬರು ಕೂಡೇ ಕಾಣ್ತಿದ್ದರು, ಹಂಗ ನೋಡಿದರ ಬಾಣಂತನ ಐದ-ಆರ ತಿಂಗಳ ಲೇಟ ಆತ ಬಿಡ್ರಿ’ ಅಂತ ನಮ್ಮ ವಾರ್ಗಿ ಹುಡಗರು ಅನ್ನೋರು.
ಪಾಪ ಅವಂಗರ ಎಲ್ಲಾರ ಕಡೆ ಅನಿಸಿಗೊಂಡ ಅನಿಸಿಗೊಂಡ ಸಾಕಾಗಲಿಕತ್ತಿತ್ತ. ಅಷ್ಟರಾಗ ಆ ಹುಡಗಿ ಮೌಶಿ ಸುಮ್ಮನ ಕೂಡಬೇಕೊ ಬ್ಯಾಡೊ
“ಅಯ್ಯ…ಮದ್ವಿ ದೇವರ ಊಟದ ಮುಂಚೆ ನಮ್ಮ ಹುಡಗಿ ಡೇಟ್ ಲಗೂನ ಆಗ್ಲಿ, ಮದುವಿ-ಗೊಂದ್ಲಾ-ಪ್ರಸ್ಥ ಇರತಾವ ಆವಾಗ ಪ್ರಾಬ್ಲೇಮ ಆಗಬಾರದು ಅಂತ ಏನ ಗುಳಗಿ ತೊಗೊಂಡ ಡೇಟ ಪ್ರಿಪೋನ್ ಮಾಡ್ಕೊಂಡ್ಲ ನೋಡ್ರಿ, ಅದ ಲಾಸ್ಟ ಅಕಿದ ಡೇಟ ಆಗಿದ್ದ, ಮುಂದ ಡೈರೆಕ್ಟ ಡಿಲೇವರಿನ ಆಗಿದ್ದ” ಅಂತ ಅಂದ ಬಿಟ್ಲು. ತೊಗೊ ನಮ್ಮ ವಿನ್ಯಾನ ಮಾರಿ ನೋಡೊ ಹಂಗ ಇರಲಿಲ್ಲಾ. ನಾಚಗೊಂಡ ಅವನ ಗೂಳಿ ಬಿದ್ದ ಗಲ್ಲಾ ಕೆಂಪಗ ಬದಾಮ ಪುರಿ ಆದಂಗ ಆಗಿ ಬಿಡ್ತ.
ಅಲ್ಲಾ ಆದರೂ ಅವರ ಮೌಶಿ ಏನ ಮಾತಡತಾಳ ಏನ ತಾನ, ಪಾಪ ಎಷ್ಟ ಅಂದರೂ ವಿನ್ಯಾ ಅವರ ಮನಿ ಅಳಿಯಾ, ಹಿಂಗ ಊಟಕ್ಕ ಕೂತಾಗ ಊರ ಮಂದಿ ಮುಂದ ಈ ಪರಿ ಮಾತೋಡೊದ ಎಲ್ಲೇರ. ಹಂಗ ಅಕಿ ಹೇಳಿದ್ದ ಖರೇನ ಅದ ಆ ಮಾತ ಬ್ಯಾರೆ, ಆದ್ರೂ ಏನ ಅನ್ನರಿ ಅಳಿಯಾ ಅಳಿಯಾನರಿಪಾ, ನಾಲ್ಕ ಮಂದಿ ಮುಂದರ ಸ್ವಲ್ಪ ರಿಸ್ಪೆಕ್ಟ ಕೊಡಬೇಕ.
ಪಾಪ ನಮ್ಮ ಮಾಮಿ ಅಂದರ ವಿನ್ಯಾನ ಅವ್ವಾ ಎಷ್ಟ ಅಳೆತನದ ಆಶಾ ಇಟಗೊಂಡಿದ್ಲು, ಹಂಗ ಅಳೇತನಾ ಮಾಡಿಸಿಗೋಬೇಕು, ಹಿಂಗ ಮಾಡಿಸ್ಗೋಬೇಕು, ಹೆಂಗಿದ್ದರೂ ಇದ್ದೂರ ಬೀಗರು ಅಂತೇಲ್ಲಾ ಅನ್ಕೊಂಡಿದ್ಲು. ಆದರ ಯಾವಾಗ ಸಂಕ್ರಮಣದ ಟೈಮ ಒಳಗ ’ಎಳ್ಳು ಬೆಲ್ಲ’ ದೊಳಗ ಸೊಸಿ ಎಳ್ಳ ಬಿಟ್ಟ ಬರೇ ಬೆಲ್ಲಾ ಆರಿಸಿ ಆರಿಸಿ ತಿಂದ್ಲೊ ಆವಾಗ ಅಕಿಗೆ ಕನಫರ್ಮ್ ಆಗಿದ್ದ ಇದ ಏನೋ ಗದ್ಲ ಆಗೇದ ಅಂತ. ಮುಂದ ಯುಗಾದಿ ಅನ್ನೋದಕ್ಕ ಸೊಸಿ ’ಬೇವು-ಬೆಲ್ಲ’ದಾಗಿನ ಬರೇ ಬೇವಿನ ಹೂ ಆರಿಸಿ ಆರಿಸಿ ತಿಂದ ವಾಂತಿ ಮಾಡ್ಕೊಳಿಕ್ಕೆ ಶುರು ಮಾಡಿದ್ಲು. ಪಾಪ, ಅಕಿಗೆ ಬೇವಿನ ಎಲಿ, ಹೂ ತಿನ್ನೊ ಬಯಕಿ ಹತ್ತಿತ್ತ. ಈಗ ನೋಡ್ರಿ ನಮ್ಮ ಮಾಮಿಗೆ ದೀಪಾವಳಿ ಬೇಸನ ಉಂಡಿ, ಚಕ್ಕಲಿ,ಅನಾನಸ ಬದ್ಲಿ…ಬೀಗರ ಮನಿಯಿಂದ ಒಂದ ಸ್ಟೀಲ ಡಬ್ಬಿ ತುಂಬ ಆಳ್ವಿ ಉಂಡಿ, ಅಂಟಿನ ಉಂಡಿ ಬಂದ್ವು.
“ಹುಚ್ಚ ಖೋಡಿ ಒಯ್ದಂದ ಒಂದ ವರ್ಷ ತಡಕೊಂಡಿದ್ದರ ಏನಾಗ್ತಿತ್ತ. ಏನ ಹಂತಾಪರಿ ವಯಸ್ಸ ಹೋಗ್ತಿತ್ತ ಅನ್ನೊ ಹಂಗ ಇಲ್ಲಾ ಏನಿಲ್ಲಾ, ಇವತ್ತಿಲ್ಲಾ ನಾಳೆ ಆಗೆ ಆಗ್ತಿತ್ತ. ಈಗ ನೋಡಿದ್ರ ಅಳೆತನಕ್ಕ ಬರೋ ಸಾಮಾನು ಬರಲಿಲ್ಲಾ. ಹೆಂತಾ ಛಲೋ ಎರಡ ತೊಲಿ ಚೈನ ಬರೊದನ್ನ ಕಳ್ಕೊಂಡ ಮಗನ ಕೊಳ್ಳಾಗ ಎರಡ ಗ್ರಾಮ ಚೈನ ಇಸ್ಗೊಂಡ್ತು ಖೋಡಿ” ಅಂತ ನಮ್ಮ ಮಾಮಿ ತನ್ನ ಮಗಗ ಬೈದಿದ್ದ ಬೈದಿದ್ದ.
“ಏ, ಹೋಗಲಿ ಬಿಡ ಮಾಮಿ ಈ ವರ್ಷ ಬಾಣಂತನಾ ಮಾಡ್ತಾರ ಮುಂದಿನ ವರ್ಷ ಅಳೆತನ ಮಾಡ್ತಾರ, ಪಾಪ, ನೀ ಒಂದ ಸ್ವಲ್ಪ ಅವರದು ವಿಚಾರ ಮಾಡ. ಮಗಳದ ಲಗ್ನಾ ಮಾಡಿ ವರ್ಷ ತುಂಬೊದರಾಗ ಬಾಣಂತನ ಅಂದರ ಅವರಿಗೆಷ್ಟ ಖರ್ಚ ಹೇಳ” ಅಂತ ನಾ ಅಂದಿದ್ದ ತಪ್ಪಾತ ನೋಡ್ರಿ. ನಮ್ಮ ಮಾಮಿ ಸಿಟ್ಟಿಗೆದ್ದ
“ಅಯ್ಯ, ಮಗಳನ ಕೊಟ್ಟಾರ ಅಂದರ ಬಾಣಂತನಾನು ಮಾಡಬೇಕು ಅಳೇತನಾನು ಮಾಡಬೇಕು. ಈಗ ನಾವ ಮಾಡಲಿಲ್ಲಾ ನಮ್ಮ ಅಳಿಯಾಗ ಅಳೇತನ. ಡಬಲ್ ಡೋರ್ ಫ್ರಿಡ್ಜ, ೫೨ ಇಂಚ್ ಎಲ್.ಇ.ಡಿ, ಮ್ಯಾಲೆ ಬೀಗಿತ್ತಿಗೆ ಒಂಬತ್ತವಾರಿ ಕಂಚಿ ಸೀರಿ ಎಲ್ಲಾ ಬಡದ್ವಿ. ನಾಳೆ ಬಾಣಂತನಾ ಮಾಡೊ ಪ್ರಸಂಗ ಬಂದರ ಅದನ್ನು ಮಾಡ್ತೇವಿ.ಯಾವ ಟೈಮನಾಗ ಏನೇನ ಆಗಬೇಕ ಅದ ಆದರ ಛಂದಪಾ” ಅಂದ್ಲು.
ನಮ್ಮ ಮಾಮಿಗೆ ತಾ ಎಷ್ಟ ಛಂದ ಹತ್ತ ಹದಿನೈದ ಮಂದಿಗೆ ಕರದ ಹೋದ ವರ್ಷ ಅಳೇತನಾ ಮಾಡಿದೆ, ನನ್ನ ಹೆಣೇಬರಹದಾಗ ಹಂತಾ ಅಳೇತನ ಮಾಡಿಸ್ಗೊಳೊದ ಬರದಿಲ್ಲಲಾ ಅಂತ ಸಂಕಟ ಇತ್ತ. ಅದರಾಗ ಹಂಗ ಇನ್ನೊಂದ ಅಕಿಗೆ ತಲಿಕೆಟ್ಟಿದ್ದಂದರ ಈ ವಿನ್ಯಾಂದ ಮುಂದಿನ ವರ್ಷನೂ ಅಳೇತನ ಆಗೊ ಹಂಗ ಇದ್ದಿದ್ದಿಲ್ಲಾ. ಯಾಕಂದರ ಈ ಮಗಾ ಅಗಸ್ಟ- ಸೆಪ್ಟೆಂಬರ ಒಳಗ ಎರಡ ವರ್ಷದ ಪ್ರೊಜೆಕ್ಟ ಸಂಬಂಧ ಜರ್ಮನಿಗೆ ಹೊಂಟಾನ. ಹಿಂಗಾಗೆ ಮಗಾ ದಡಮ-ದುಡಕಿ ಪಾವಸೇರ ಅಡಿಕಿ ಅಂತ ಒಂದ ಹಡದ ಹೆಂಡ್ತಿ ಮಗನ್ನ ಇಲ್ಲೆ ಬಿಟ್ಟ ತಾ ಜಿಗದ ಬಿಡೊಂವಾ. ಪಾಪ ಹಿಂಗಾಗಿ ನಮ್ಮ ಮಾಮಿಗೆ ಅಳೆತನ ಕಳಕೊಂಡಿದ್ದ ಇಷ್ಟ ದುಃಖ ಆಗಿದ್ದ.
ಇರಲಿ ಏನೋ ಆತು, ಆಗಿದ್ದ ಆತು ಭಾಳ ಛಲೋ ಆತು ಅಂತ ಅನ್ಕೊಂಡ ಇರೊದು ಛಲೊ ಅಂತ ನಾನ ನಮ್ಮ ಮಾಮಿಗೆ ಸಮಾಧಾನ ಮಾಡಿ ಬಂದೆ.
ಆದ್ರೂ ನಾ ಅಂತು ಇದ ಫಸ್ಟ ಟೈಮ ಬಿಡರಿ ನೋಡಿದ್ದ ಅಳೇತನಕ್ಕಿಂತ ಮೊದ್ಲ ಬಾಣಂತನ ಮಾಡಿಸ್ಗೊಂಡಿದ್ದ. ಹಂಗ ನಂದೂ ಕಾರ್ತಿಕದಾಗ ಲಗ್ನ ಆಗಿತ್ತ, ಆದರ ನಾ ಎಲ್ಲೇ ಅಳೆತನ ತಪ್ಪತದೊ ಅಂತ ಒಂದ ವರ್ಷ ಬಾಣಂತನ ಪೋಸ್ಟಪೋನ ಮಾಡಿಸಿ ಆಮ್ಯಾಲೆ ಸಿಂಗಲ್ ಡೋರ್ ವೋಲ್ಟಾಸ, ೩೦ ಲಿಟರದ್ದ ಫ್ರಿಡ್ಜ ಇಸ್ಗೊಂಡ ಅಳೇತನ ಮಾಡ್ಕಿಸ್ಕೊಂಡ ಮುಂದಿನ ವರ್ಷ ಬಾಣಂತನಕ್ಕ ಕಳಸಿದ್ದೆ, ಹಂಗ ಆವಾಗಿನ್ನು ಎಲ್.ಇ.ಡಿ ಟಿ.ವಿ. ಬಂದಿರ್ಲಿಲ್ಲಾ ಇಲ್ಲಾಂದರ ನಮ್ಮ ಮಾವ ಏನ ಅದನ್ನು ಕೊಟ್ಟ ಬಿಡ್ತಿದ್ದರ ಆ ಮಾತ ಬ್ಯಾರೆ.