ನಾ ಸಣ್ಣಂವ ಇದ್ದಾಗಿನ ಮಾತ, ನಮ್ಮ ಮನ್ಯಾಗ ತಿಂಗಳದಾಗ ಮೂರ ನಾಲ್ಕ ಸರತೆ ಗೋಮೂತ್ರ ಬೇಕಾಗ್ತಿತ್ತ, ನನಗ ಇವರ ಅಷ್ಟ ಗೋಮೂತ್ರ ತೊಗಂಡ ಏನ ಯರಕೋತಾರೋ ಅನಸ್ತಿತ್ತ. ಅದರಾಗ ನಮ್ಮ ಅಜ್ಜಾ ಬ್ಯಾರೆ ಇನ್ನೂ ಇದ್ದಾ, ಅವಂದ ಒಂದ ಸ್ವಲ್ಪ ಊರ ಹಿರೇತನ ಜಾಸ್ತಿ ಹಿಂಗಾಗಿ ಯಾರ ಸತ್ತರು ಹೋಗೊವಾ ಯಾರ ಹುಟ್ಟಿದರು ಹೋಗೊಂವಾ, ಮನಿಗೆ ಬಂದ ಮ್ಯಾಲೆ ಗೋಮೂತ್ರ ಸಿಂಪಡಿಸಿಗೊಂಡ, ಮ್ಯಾಲೆ ಒಂದ ಚಮಚಾ ಪಂಚಗವ್ಯ ತೊಗೊಂಡs ಮುಂದಿನ ಕೆಲಸ.
ಹಂಗ ಗೋಮೂತ್ರ ಬೇಕಾದಾಗೊಮ್ಮೆ ನಮ್ಮಪ್ಪ ನನಗ
“ಏ, ಲಗೂನ ತೊರವಿ ಗಲ್ಲಿಗೆ ಹೋಗಿ ಗೋಮೂತ್ರ ತೊಗಂಡ ಬಾ” ಅಂತ ಕಳಸ್ತಿದ್ದಾ.
ಆವಾಗನೂ ಈಗೀನಗತೆ ತೊರವಿಗಲ್ಲಿ, ದೇಸಾಯಿ ಚಾಳ, ಕಿಲ್ಲೆದಾಗ ದನಾ ಅಗದಿ ರಾಜಾನ ಹಂಗ ರಸ್ತೆ ಮ್ಯಾಲೆ ಮಲ್ಕೊಂಡಿರತಿದ್ವು. ಅವಕ್ಕು ಗೊತ್ತಿತ್ತ ಇವೇಲ್ಲಾ ಬ್ರಾಹ್ಮರ ಓಣಿ, ದನಗೊಳಿಗೆ ಏನರ ರಿಸ್ಪೆಕ್ಟ ಸಿಕ್ಕ ಎರಡ ಹೊತ್ತ ತಂಗಳದನ್ನಾ, ಭಕ್ಕರಿ ಸಿಕ್ಕರ ಇಲ್ಲೆ ಸಿಗಬೇಕ ಅಂತ ಅಲ್ಲೇ ವಸ್ತಿ ಮಾಡತಿದ್ವು. ನಾ ನಮ್ಮಪ್ಪ ಗೋಮೂತ್ರ ತೊಗೊಂಡ ಬಾ ಅಂದ ಕೂಡಲೇ ಒಂದ ತಾಮ್ರದ ಥಾಲಿ ಹಿಡ್ಕೊಂಡ ಓಡಿ ಹೋಗ್ತಿದ್ದೆ. ಇದ್ದದ್ದರಾಗ ಹೆದರಕಿ ಬರಲಾರದಂತ ದನಾ ನೋಡಿ ಗೋಮೂತ್ರಾ ತೊಗೊಂಡ ಬರತಿದ್ದೆ. ಒಮ್ಮೊಮ್ಮೆ ದನಾ ಎಷ್ಟೊತ್ತನಕಾ ಬಾಲಾ ಎತ್ತರಿಸಿ ಮೈಮ್ಯಾಲೆ ಕೈಯಾಡಿಸಿ ಡುಬ್ಬಾ ಚಪ್ಪರಿಸಿದರೂ ಮೂತ್ರ ಕೊಡತಿದ್ದಿಲ್ಲಾ, ನಂಗರ ಸಾಕ ಸಾಕಾಗಿ ಹೋಗ್ತಿತ್ತ. ಆ ರೇಶನ್ನಿಗೆ ತಾಸ ಗಟ್ಟಲೇ ಪಾಳೆ ಹಚ್ಚಿ ನಿಂತಂಗ ಗೋಮೂತ್ರಕ್ಕ ಕಾಯತಿದ್ದೆ. ಅಲ್ಲಾ ಈ ಗೋಮೂತ್ರನೂ ಯಾಕ ತಿಂಗಳಿಗೊಮ್ಮೆ ರೇಶನ್ನಾಗ ಕೊಡಂಗಿಲ್ಲಾ ಅಂತ ಒಮ್ಮೆ ನಮ್ಮವ್ವಗ ಕೇಳಿ ಬೈಸಿಗೊಂಡಿದ್ದೆ.
ಒಮ್ಮೊಮ್ಮೆ ತಲಿಕೆಟ್ಟ ಆ ಸಣ್ಣ ಹುಡಗರಿಗೆ ಉಚ್ಚಿ ಹೋಯ್ಸಬೇಕಾರ “ಉಷ್..ಊಷ್..” ಅಂತಾರಲಾ ಹಂಗ ದನದ ಮುಂದ ನಿಂತ “ಉಷ್..ಊಷ್..” ಅಂದ ಅವ ಉಚ್ಚಿ ಹೋಯೊತನಕ ಬಿಡತಿದ್ದಿಲ್ಲಾ, ಹಂಗ “ಉಷ್..ಊಷ್..” ಅನ್ನೋದರಾಗ ನಂಗ ಒತ್ತರ ಬಂದಿರತಿತ್ತ ಆ ಮಾತ ಬ್ಯಾರೆ. ನಾವೇಲ್ಲಾ ಸಣ್ಣವರಿದ್ದಾಗ ನಮ್ಮವ್ವಾ ” ಉಷ್..ಊಷ್..” ಅಂದರಿಷ್ಟ ಉಚ್ಚಿ ಹೋಯ್ಯೊ ಮಕ್ಕಳು. ಈಗಾದರೂ ನಾ “ಉಷ್” ಅಂದರ ಸಾಕ ಹೆದರಿ ಉಚ್ಚಿ ಹೋಯ್ಕೋತೇನಿ ಆದರ ಈಗ ಉಷ್ ಅನ್ನೋದ ನಮ್ಮವ್ವ ಅಲ್ಲಾ ನನ್ನ ಹೆಂಡತಿ.
ಒಂದ ಸರತೆ ಹಿಂಗs ಗೋಮೂತ್ರಾ ತರಲಿಕ್ಕೆ ಹೋಗಿದ್ದೆ. ನಮ್ಮಪ್ಪಾ ಲಗೂನ ತೊಗೊಂಬಾ ಅಜ್ಜಾಗ ಪೂಜಾಕಿಂತ ಮೊದ್ಲ ಬೇಕ ಅಂತ ಹೇಳಿ ಕಳಸಿದ್ದಾ. ನಾ ಹಂಗ ಹೋದೊಂವಾ ಒಂದ ತಾಸ ಆದರೂ ಬರಲಿಲ್ಲಾ ಇತ್ತಲಾಗ ನಮ್ಮಜ್ಜ ಸ್ನಾನ ಮಾಡಲಿಕ್ಕೆ ರೆಡಿ ಆಗಿ ಲಂಡ ಪಂಜಿ ಒದ್ದಿ ಮಾಡಿ ಸುತಗೊಂಡ ಗೋಮೂತ್ರದ ದಾರಿ ಕಾಯಕೋತ ನಡಕ್ಕೋತ ಥಂಡ್ಯಾಗ ನಿಂತಿದ್ದಾ. ನಮ್ಮಪ್ಪ ನನ್ನ ದಾರಿ ನೋಡಿ, ನೋಡಿ ತಲಿಕೆಟ್ಟ ತೊರವಿಗಲ್ಲಿಗೆ ಬಂದ ನಾ ದನದ ಮುಂತ ನಿಂತ
“ಉಷ್..ಉಷ್” ಅನ್ನೋದನ್ನ ನೋಡಿ ಸಿಟ್ಟಲೇ ಬಲಗೈಲೆ ರಪ್ ಅಂತ ಎಡ ಕಪಾಳಕ್ಕ ಹೊಡದಾ, ಅಂವಾ ಹೊಡದದ್ದಕ್ಕ ನಾನs ಉಚ್ಚಿ ಹೋಯ್ಕೋಳದ ಒಂದ ಬಾಕಿ ಉಳದಿತ್ತ.
“ದನಾ ಉಚ್ಚಿ ಹೋಯಲಿಲ್ಲಾಂದರ ನಾ ಏನ ಮಾಡ್ಲೀಪಾ” ಅಂತ ನಾ ಅತಗೋತ ಒದರಿದೆ
“ದನಾ ಕಾಯೋನ ಆಕಳ ಯಾವದು ಎತ್ತ ಯಾವದು ಅಂತ ಗೊತ್ತಾಗಂಗಿಲ್ಲಾ ನಿನಗ, ನೀ ಹೆಂತಾ ಗಂಡಸಲೇ. ಎತ್ತಿನ ಮುಂದ ನಿಂತ ‘ಉಷ್..ಊಷ್..’ ಅನ್ನಲಿಕತ್ತಿ” ಅಂತ ತಾನ ಆಕಳಾ ಹುಡಕ್ಯಾಡಲಿಕತ್ತಾ. ಅಷ್ಟರಾಗ ಒಂದ ಆಕಳ ನಮ್ಮಪ್ಪ ಸಿಟ್ಟಲೇ ನಂಗ ಹೊಡದಿದ್ದ ನೋಡಿತ್ತ ಕಾಣತದ ಪಾಪಾ ಹೆದರಿ ’ಅಂಬಾ’ ಅಂತ ಒದರಿ ನಮ್ಮಪ್ಪನ ಕರದ ಗೋಮೂತ್ರಾ ಕೊಟ್ಟ ಕಳಸತ.
ನಮ್ಮಪ್ಪಗ ಸಿಟ್ಟ ಬಂದದ್ದ ನಂದ ಲೇಟಾಗಿದ್ದಕ್ಕ ಅಲ್ಲಾ, ಇಷ್ಟದಿವಸ ಗಟ್ಟಲೇ ನಾ ಗೋಮೂತ್ರಾ ಅಂತ ಎಲ್ಲೆ ಎತ್ತಿಂದು , ಎಮ್ಮಿದೂ ತಂದೇನೋ ಅಂತ.
ಹಂಗ ನಂಗ ಮೊದಲಿಗೆ ಯಾವದ ಆಕಳಾ, ಯಾವದ ಎತ್ತ ಅಂತ ಗೊತ್ತಾಗತಿದ್ದಿಲ್ಲಾ, ಸಣ್ಣವಿದ್ದೆ ಅಂತ ಹೇಳಿದ್ನೇಲ್ಲಾ.
ಅಲ್ಲಾ ಒಮ್ಮೆ ಆಕಳಕ್ಕ ಏನ ಇರತಾವ ಎತ್ತಿಗೆ ಏನ ಇರಂಗಿಲ್ಲಾ ಅಂತ ತಿಳಿಸಿ ಹೇಳಿದ್ದರ ಗೊತ್ತಾಗತಿತ್ತ. ಸುಳ್ಳ ನಂಗ ಹೋಡದರು ಅಂತ ಅನಸ್ತು. ನಾ ಮನಿಗೆ ಬಂದ ಸೀದಾ ನಮ್ಮವ್ವಗ
“ಅಲ್ಲವಾ ಆಕಳ ಗೋಮೂತ್ರ ಅಂತ ಹೇಳ್ಬೇಕ ಬ್ಯಾಡ, ಸುಮ್ಮ ಸುಮ್ಮನ ರಸ್ತೇದಾಗ ಊರ ಮಂದಿ ಮುಂದ ಹೊಡದಾ” ಅಂದೆ.
ಅಕಿಗೆ ಮೊದ್ಲ ನಾ ತಾಸ ಗಟ್ಟಲೇ ಹೋಗಿದ್ದ ಒಂದ ಸಿಟ್ಟ ಇತ್ತ, ಅದರಾಗ ನಮ್ಮಜ್ಜ ನನ್ನ ಸಿಟ್ಟ ಅಕಿ ಮ್ಯಾಲೆ ಹಾಕಿ ಒಂದಿಷ್ಟ ಬೈದಿದ್ದಾ ಕಾಣತದ ಎಡಗೈಲೆ ಬಲಗಡೆ ಕಪಾಳಕ್ಕ ರಪ್ಪಂತ ಹೊಡದ್ಲು.
“ದನಾ ಕಾಯೋನ ಗೋಮೂತ್ರ ಅಂದರ ಆಕಳದ್ದ ಇರತದ, ತಲ್ಯಾಗೇನ ಶಗಣಿ ಇಟಗೊಂಡಿ ಏನ” ಅಂತ ಬೈದಳು. ಅಕಿಗೆ ಇಷ್ಟ ಸಿಟ್ಟ ಬಂದಿತ್ತಲಾ, ತಾ ಮಡಿಲೇ ಇದ್ಲಿ ಒಲಿ ಮ್ಯಾಲೆ ಅಡಗಿ ಮಾಡಲಿಕತ್ತೇನಿ ಅನ್ನೋದನ್ನ ಮರತ ಬಲಗೈ ಮುಸರಿ ಇತ್ತಂತ ಎಡಗೈಲೆ ಹೊಡದಿದ್ಲು.
ಆ ಮಾತಿಗೆ ಇವತ್ತ ಏನಿಲ್ಲಾಂದ್ರು ಒಂದ ಮುವತ್ತ ವರ್ಷದ ಮ್ಯಾಲೆ ಆತ ಆದರ ನಾ ಇವತ್ತೀಗೂ ಎಲ್ಲರ ದಾರಿ ಒಳಗ ದನಾ ಕಂಡರ ಬಗ್ಗಿ ನೋಡಿ ಇದು ಎತ್ತು, ಇದು ಆಕಳಾ ಅಂತ ನನ್ನ ಮಕ್ಕಳಿಗೆ ಹೇಳಿ ಆಮ್ಯಾಲೆ ಅವಕರ ಹಣಿ ಮುಟ್ಟಿ ನಮಸ್ಕಾರ ಮಾಡಿ ಮುಂದ ಹೋಗತೇನಿ. ಏನೋ ನಮ್ಮ ಪುಣ್ಯಾಕ್ಕ ಇವತ್ತ ಅಷ್ಟ ಗೋಮೂತ್ರಕ್ಕ ಡಿಮಾಂಡ ಇಲ್ಲಾ. ಹಂಗ ನಮ್ಮ ಬ್ರಾಹ್ಮರ ತಮ್ಮ ಬ್ರಾಹ್ಮಣ್ಯ ಕಂಟಿನ್ಯೂ ಮಾಡಿದ್ದರ ಇವತ್ತ ಗೋಮೂತ್ರಕ್ಕ ಡಿಮಾಂಡ ಬಂದ ೧೦ ರೂಪಾಯಿ ನಾಣ್ಯ ಹಾಕಿದರ ಒಂದ 90ml ಗೋಮೂತ್ರದ pet ಕೊಡೊ ವೈಂಡಿಂಗ ಮಶೀನ ಬ್ರಾಹ್ಮರ ಓಣ್ಯಾಗ ಬರತಿದ್ವು ಅಂತ ಅನಸ್ತದ.
ಅಲ್ಲಾ ಹಂಗ ಇವತ್ತ ನಮಗ ಮಾರ್ಕೇಟನಾಗ ಗೋಮೂತ್ರ ಮಾರಲಿಕ್ಕೆ ಸಿಗತದ ಬಿಡ್ರಿ. ಅದರಾಗು ಮತ್ತ ಎರಡ ಮೂರ ಬ್ರ್ಯಾಂಡ ಬಂದಾವ, ಅಗದಿ ಹಳೇ ಕ್ವಾರ್ಟರ್ ಬಾಟಲಿ ಒಳಗ ಲೇಬಲ್ ಹಚ್ಚಿ ಇಟ್ಟಿರತಾರ, ಇದು ಗೋಕರ್ಣದ್ದು, ಇದು ಶಿರ್ಶಿದು ಅಂತ ಆದರ ಎಲ್ಲಾ ಪ್ಯೂರ್ ಆಕಳದ್ದ ಗೋಮೂತ್ರನ ಮತ್ತ.