ನಾಳೆ ನವೆಂಬರ್ ೧೪ಕ್ಕ ’ವಿಶ್ವ ಮಧುಮೇಹ ದಿವಸ’, ಅದರ ಸಂಬಂಧ ಒಂದ ವಾರದಿಂದ ನಮ್ಮ ದೋಸ್ತ ಬಂಕಾಪುರ ಡಾಕ್ಟರ್ ಡಯಾಬೀಟಿಸ್ ಕ್ಯಾಂಪ್ ಮಾಡಲಿಕತ್ತಾನ.
” ನೀವು ಗಂಡಾ ಹೆಂಡತಿ ಬಂದ ಪುಕ್ಕಟ ಚೆಕ್ ಮಾಡಿಸಕೊಂಡ ಹೋಗರಿ ” ಅಂತ ಅಂದಿದ್ದಾ. ಹಂಗ ನೋಡಿದ್ರ ನಂಬದೇನ ಶುಗರ್ ಚೆಕ್ ಮಾಡಿಸ್ಗೋಳೊ ವಯಸ್ಸೇನಲ್ಲಾ ಆದರು ಪುಕಶೆಟ್ಟೆ ಚೆಕ ಮಾಡಸೋದ ಅಂತ ಹೋದವಿ. ನೂರಾರ ಮಂದಿ ನಮ್ಮಂಗ ಬಂದ ಪಾಳಿ ಹಚ್ಚಿದ್ದರು. ಇಬ್ಬರು ರಕ್ತಾ ಸ್ಯಾಂಪಲ್ ಕೊಟ್ಟ ರಿಪೋರ್ಟಗೆ ಕಾಯಕೋತ ಕೂತವಿ. ಮುಂದ ಒಂದ ತಾಸಿಗೆ ನಮ್ಮ ಬಂಕ್ಯಾ ಗಂಟ ಮಾರಿ ಹಾಕ್ಕೊಂಡ ಬಂದ
” ಇದ ಏನಲೇ ನಿನ್ನ ಹೆಂಡತಿದು ರಕ್ತೋ, ಏನ್ ಸಕ್ಕರಿ ಪಾಕೋ ? ಸಿಹಿ ಭಾಳ ತಿಂತಾಳ ಏನ?” ಅಂದಾ.
” ಎಲ್ಲಿದಲೇ ಅಕಿ ತಿನ್ನೋದ ಗಂಡನ ಜೀವಾ ಒಂದ , ಯಾಕ ಏನಾತ ?” ಅಂದೆ.
” ಮತ್ತೇನ ಮಗನ ನಿನ್ನ ಹೆಂಡತಿ ಶುಗರ್ ೪೦೦ ದಾಟೇದ ” ಅಂದ ,
ನನಗ ಎಕದಮ್ ಗಾಬರಿ ಆತ. ಇರೋಕಿ ಒಬ್ಬಾಕಿ ಹೆಂಡತಿ ಇದ ಏನ ಆತಪಾ ಅನಸ್ತು. ಆದರೂ ಒಂದ ಸಂಶಯ ಬಂದ
” ಲೇ ಬಸರ-ಗಿಸರ ಇದ್ದಾಳ ಏನ ಚೆಕ್ ಮಾಡ ಮಗನ, ಕೆಲವೊಮ್ಮೆ ಹೆಣ್ಣ ಮಕ್ಕಳಿಗೆ ಬಸರಿದ್ದಾಗ ಶುಗರ್ ಬರತಿರತದ ಅಂತ ಕೇಳೆನಿ” ಅಂದೆ, ಅಷ್ಟರಾಗ ನನ್ನ ಹೆಂಡತಿ ಸ್ವಲ್ಪ ಸಂಭಾಳಿಸಿಗೊಂಡ
” ರ್ರೀ ನೀವ ಸುಮ್ಮನ ಇರ್ರೀ , ನಂಗ ಆಪರೇಶನ್ ಆಗಿ ಮೂರ ವರ್ಷ ಆಗೇದ ಮತ್ತ ಎಲ್ಲಿದ ವಿಶೇಷ ” ಅಂದ್ಲು,
” ಏ, ನೀ ಹುಚ್ಚಿ ಇದ್ದಿ ಈಗಿನ ಕಾಲದಾಗ ಆಪರೇಶನದ ಏನ್ ಗ್ಯಾರಂಟಿ, ಮತ್ತ ಆಗಿದ್ದರೂ ಆಗಿರಬಹುದ ತೋಗೊ. ದೇವರ ಇಚ್ಛೆ ಇದ್ದರ ಆಪರೇಶನರ ಎಷ್ಟ ದಿವಸ ತಡದೀತು ” ಅಂದೆ.
” ಲೇ ಮಗನ ಮದ್ಲ ಇದ್ದದ್ದ ಮಕ್ಕಳನ್ನ ಸಂಭಾಳಸು , ಹಂತಾದೇನೂ ವಿಶೇಷ ಇಲ್ಲಾ , ನಿನ್ನ ಹೆಂಡತಿಗೆ ಹಾಯ್ ಶುಗರ್ ಅದ, ನಾಳೆಯಿಂದ ಇನ್ಸೂಲಿನ್ ಶುರು ಮಾಡೋಣು, ನಾ ಯಲ್ಲಾ ಕಂಟ್ರೋಲ್ ಮಾಡತೇನಿ ” ಅಂದಾ, ಇಂವಾ ಏನ್ ಕಂಟ್ರೋಲ್ ಮಾಡತಾನೋ ಎನೋ, ಇನ್ನ ಆ ದೇವರ ಗತಿ ಅನಸ್ತು.
ನಮ್ಮಂಗ ಪುಕ್ಕಟೆ ಚೆಕ ಮಾಡಸಾಕ ಬಂದೋರೊಳಗ ಭಾಳ ಮಂದಿಗೆ ಶುಗರ್ ಅಂತ ರೀಪೋರ್ಟ ಬಂದಿತ್ತು. ಇವತ್ತಿನ ಒತ್ತಡದ ಜೇವನದೊಳಗ ನಾವ ಬದಕೊ ಶೈಲಿ ಬದಲಾಗೇದ. ಹಿಂಗಾಗಿ ಶುಗರ್ ಬರಬೇಕಂದರ ವಯಸ್ಸ ಆಗಿರಬೇಕು, ಸಿಹಿ ಭಾಳ ತಿಂತಿರಬೇಕು ಅಂತ ಏನ ಇಲ್ಲಾ. ನಮ್ಮೋಳಗ ಸ್ಫರ್ಧಾತ್ಮಕ ಮನೋಭಾವ ತುಂಬಿ ತುಳಕ್ಯಾಡಿ ಸ್ಟ್ರೇಸ್ , ಟೆನ್ಯನ್ ಶುರು ಆಗಿ ಸಣ್ಣ ವಯಸ್ಸನಾಗ ಶುಗರ್, ಬಿ.ಪಿ ಅಗದಿ ಸಹಜ ಬರಲಿಕತ್ತಾವ. ಅದರಾಗ ಜೀವನದಾಗ ’ಚಟಾ’ಬ್ಯಾರೆ ಚಟವಟಿಕೆಗಿಂತಾ ಜಾಸ್ತಿ ಆಗಿ ಆರೋಗ್ಯ ಹಳ್ಳಾ ಹಿಡದ ಹೋಗಲಿಕತ್ತದ,
ಇಷ್ಟ ದಿವಸ ಮಂದಿಗೆ ಆಗ್ತಿತ್ತ, ಆದರ ಇವತ್ತ ಮನಿಯಾಕಿಗೇ ಆತು. ಇಷ್ಟ ಸಣ್ಣ ವಯಸ್ಸಾನಾಗ ಇಕಿಗೆ ಶುಗರ ಬಂತು ಅದು ಲಾಸ್ಟ ಸ್ಟೇಜನಾಗ ಅದ, ಏನೋ ಇಕಿ ಜೊತಿ ಇನ್ನೊಂದ ೫-೬ ವರ್ಷ ಹೆಂಗರ ಸಹಿಸಿಗೊಂಡ ಬಾಳಬೇಕು ಅಂತಿದ್ದೆ, ಇನ್ನ ಇಕಿಗೆ ವಯಸ್ಸ ಆದ ಮ್ಯಾಲೆ ಕಿಡ್ನಿಗೆ ಹೊಡ್ತ ಆಗಬಹುದು, ಶುಗರ್ ಇದ್ದವರಿಗೆ ಹಾರ್ಟ್ ಅಟ್ಯಾಕ ಆಗಿದ್ದ ಗೊತ್ತ ಆಗಂಗಿಲ್ಲ ಅಂತ, ಡೈರಕ್ಟ ಫೇಲ್ ಆಗತದ ಅಂತ, ಹಂಗರ ಇನ್ನ ದಿವಸಾ ರಾತ್ರಿ ತಾಸ-ತಾಸಗೊಮ್ಮೆ ಅಲಾರಾಮ್ ಇಟ್ಟ ಚೆಕ್ ಮಾಡಬೇಕು, ಸಾಧ್ಯ ಆದರ ಮುಂದಿನವಾರ ಇಕಿ ಮ್ಯಾಲೆ ಒಂದ ಐದ ಲಕ್ಷ ರೂಪಾಯಿದ್ದ ಇನ್ಸುರೆನ್ಸ್ ಮಾಡಿಸಿ ಬಿಡಬೇಕು, ಹಂಗ-ಹಿಂಗ ಅಂತ ಎನೇನೋ ಕನವರಿಸಲಿಕತ್ತಿದ್ದೆ, ಯಾರೋ ಕೀವ್ಯಾಗ ಶಂಖಾ ಊದಿದಂಗ ಆತ , ಪಟಕ್ಕನ ಎಚ್ಚರ ಆತು.
” ರ್ರೀ…. ಏಳ್ರಿ, ಇವತ್ತ ಬಂಕಾಪುರ ಡಾಕ್ಟರ್ ಕಡೆ ಫ್ರೀ ಚೆಕಪ್ ಗೆ ಹೋಗೋಣ ಅಂತ ಹೇಳಿದ್ರಲಾ ಮತ್ತ, ಲಗೂನ ರೆಡಿ ಆಗರಿ ” ಅಂದ್ಲು.
ಅಯ್ಯೋ ದೇವರ….. ಇಷ್ಟೊ ತನಕ ನಾ ಕಂಡದ್ದೇಲ್ಲಾ ಕನಸಿನ, ಹೆಂತಾ ಛಲೋ ಕೆಟ್ಟ ಕನಸ ಬಿದ್ದಿತ್ತು, ಬಂದ ಎಬ್ಬಿಸಿಬಿಟ್ಟಳಲಾ ಅನಸ್ತು.
’ದೇವರ ಮುಂಜಾನೆ ನಸಿಕಲೇ ಬಿದ್ದದ್ದ ಕನಸ ಖರೇ ಆಗ್ತವಂತ, ಏನ ಮಾಡತಿ ನೋಡಪಾ’ ಅಂತ ಏಲ್ಲಾ ದೇವರ ಮ್ಯಾಲೆ ಭಾರಾ ಹಾಕಿ ಹಾಸಗಿ ಬಿಟ್ಟ ಎದ್ದೆ.
ನೋಡ್ರಿ, ನೀವು ನಾಳೆ ’ನವೆಂಬರ್ ೧೪, ವಿಶ್ವ ಮಧುಮೇಹ ದಿವಸ’ ಅದ, ಎಲ್ಲರ ಫ್ರೀ ಚೆಕಪ್ ಮಾಡಿಸಿಗೊಂಡ ಬಿಡ್ರಿ, ಯಾಕ ಸುಮ್ಮನ ರಿಸ್ಕ ತೊಗೊತಿರಿ.