ಹಂಗ ನಾ ಕನ್ಯಾ ಫಿಕ್ಸ್ ಮಾಡ್ಕೋಳೊಕಿಂತ ಮೊದಲ ಭಾಳ ತಲಿ ಕೆಡಸಿಗೊಂಡ ವಿಚಾರ ಮಾಡಿದ್ದರ ಪೈಕಿ ಇಂಪಾರ್ಟೆಂಟ್ ವಿಚಾರ ಅಂದರ ’ಈ ಹುಡಗಿ ನನ್ನ ಜೊತಿ ಹೊಂದ್ಕೊಂಡ ಹೋಗಲಿಲ್ಲಾ ಅಂದ್ರು ಎಷ್ಟ ಹೋತು, ನಮ್ಮ ಮನಿಗೆ ಹೊಂದ್ಕೊಂಡ ಹೋಗ್ತಾಳೊ ಇಲ್ಲೊ? ಇಕಿ ನಮ್ಮ ಅವ್ವಾ ಅಪ್ಪನ್ನ ಇಷ್ಟ ಅಲ್ಲದ ನಮ್ಮ ತಂಗಿನ್ನೂ ಸಂಬಾಳಸ್ತಾಳೊ ಇಲ್ಲೊ?’ ಅನ್ನೊ ವಿಚಾರ. ಹಂಗ ಏನs ಹೊಸಾ ಕೆಲಸಾ ಮಾಡಬೇಕಾರು ಹತ್ತ ಸಲಾ ವಿಚಾರ ಮಾಡಿ ಮಾಡಬೇಕು ಅಂತಾರ ಇನ್ನ ಮದುವಿ ಮಾಡ್ಕೋಬೇಕಾರ ಅಂತೂ ಒಂದ ನೂರ ಸಲಾ ವಿಚಾರ ಮಾಡ್ಬೇಕ ಬಿಡ್ರಿ. ನನಗ ನಮ್ಮ ಅವ್ವಾ-ಅಪ್ಪನ ಬಗ್ಗೆ, ಅವರ ಸ್ವಭಾವದ ಬಗ್ಗೆ ಭಾಳ ಪ್ರಾಬ್ಲೆಮ್ ಇರಲಿಲ್ಲ. ಪಾಪ ಅವರಿಬ್ಬರು ಆಕಳ ಹಂತಾ ಮನಷ್ಯಾರು ಆದರ ನಮ್ಮ ತಂಗಿ ಇದ್ಲು ನೋಡ್ರಿ,(ಅಲ್ಲಾ ಇನ್ನು ಇದ್ದಾಳ ಆದರ ಈಗ ಗಂಡನ ಮನ್ಯಾಗ ಇದ್ದಾಳ) ಅಕಿ ಭಾರಿ ಖತರನಾಕ್, ಹೇಳಿ ಕೇಳಿ ಲಿಬ್ರನ್, ನಿಮಗೊತ್ತಲಾ ಲಿಬ್ರನ್ ವುಮೆನ್ ಹೆಂಗ ಇರ್ತಾರಂತ, ಅಗದಿ ಶಾಣ್ಯಾಕಿ, ನೋಡಲಿಕ್ಕೆ ಛಂದ, ಆದರ ದಿಮಾಕ,ಸೊಕ್ಕಿಗೆ ಏನ ಕಡಿಮೆ ಇರಲಿಲ್ಲಾ ಅದರಾಗ ನಮ್ಮಪ್ಪನ ಅಚ್ಚಚ್ಛಾದ ಮಗಳ ಬ್ಯಾರೆ ಹಿಂಗಾಗಿ ಮನ್ಯಾಗ ಎಲ್ಲಾ ತಂದ ನಡಸತಿದ್ದಳು. ಶಾರ್ಟ ಆಗಿ ಇಂಗ್ಲೀಷನಾಗ ಹೇಳಬೇಕಂದರ she is a spoiled brat.
ನಂಗ ಖರೇ ಚಿಂತಿ ಹತ್ತಿದ್ದ ನಮ್ಮ ತಂಗಿ ಬಗ್ಗೆ, ನಾಳೆ ನನ್ನ ಹೆಂಡತಿ ಏನರ ಇಕಿ ಜೊತಿ, sorry ಇಕಿ ಏನರ ನನ್ನ ಹೆಂಡತಿ ಜೊತಿ ಹೊಂದಕೊಳಿಲ್ಲಾ ಅಂದರ ಮನ್ಯಾಗ ಮಹಾಭಾರತ ಆಗೋದ ಗ್ಯಾರಂಟೀ ಅಂತ ಗೊತ್ತಿತ್ತ. ನಮ್ಮ ಅವ್ವಾ-ಅಪ್ಪಾ ಸುಮ್ಮನ ಇದ್ದರು ಇಕಿ ಬಿಡೋಕಿ ಅಲ್ಲಾ, ಖಿಡ್ಡಿ ಮಾಡೋ ಚಾನ್ಸಿಸ್ ಭಾಳ ಇರ್ತಿತ್ತ, ಹಿಂದಾಗಡೆ ಇಕಿ ನಮ್ಮವ್ವನ ತಲ್ಯಾಗ ಏನರ ತುಂಬಿ ಕೊಡಬೇಕು ಕಡಿಕೆ ಅವರ ಲಫಡಾದಾಗ ನಾನು ಇನ್ವಾಲ್ವ್ ಆಗಿ ನಮ್ಮವ್ವಾ, ನಮ್ಮ ತಂಗಿ ಪರವಾಗಿ ನಿಂತ ಜಗಳಾಡಿ, ಹೊಡದಾಡಿ, ಕಡಿಕೆ ಬೀಗರ ನಮ್ಮ ಮ್ಯಾಲೆ ಕಂಪ್ಲೇಂಟ ಕೊಟ್ಟ ನಮ್ಮವ್ವ, ನಾನು ನನ್ನ ತಂಗಿ ರಾಜನಗರ ಸಬ ಜೇಲನಾಗ ದಿವಸಾ ಕಳೆಯೋ ಪ್ರಸಂಗ ಬರೋದ ಬ್ಯಾಡ ಅಂತ ನಾ ಕನ್ಯಾ ಫಿಕ್ಸ ಮಾಡೊಕಿಂತ ಮೊದ್ಲ ನನ್ನ ತಂಗಿಗೆ
“ಪುಟ್ಟಿ, ಈ ಹುಡಗಿ ಹೆಂಗ ಅನಸ್ತಾಳ, ನಿಂಗ ಲೈಕ್ ಆದ್ಲೊ ಇಲ್ಲೊ, ನೀ ಹೂಂ ಅಂದರ ಇಷ್ಟ ನಾ ಮುಂದ ವಿಚಾರ ಮಾಡ್ತೇನಿ” ಅಂತ ಏನ ತಂಗಿ ಅಂದರ ಸರ್ವಸ್ವ ಅನ್ನೋರ ಗತೆ ಡೈಲಾಗ ಹೊಡದ ಅಕಿ ಕಡೆ ಹೂಂ ಅನಿಸಿಕೊಂಡ ಫಿಕ್ಸ ಮಾಡ್ಕೊಂಡಿದ್ದೆ. ಅದರಾಗ ಒಂದ ಮಜಾ ಅಂದರ ನಾ ಫಿಕ್ಸ್ ಮಾಡ್ಕೊಂಡ ಹುಡಗಿನು ಲಿಬ್ರನ್, ಅಕಿ ಹುಟ್ಟಿದ್ದು, ನಮ್ಮ ತಂಗಿ ಹುಟ್ಟಿದ್ದು ಇಬ್ಬರು ಒಂದ ದಿವಸ. ಅಕ್ಟೋಬರ್ ೪, ೧೯೭೯. ಬರೇ ಎಂಟ ತಾಸಿಗೆ ನನ್ನ ಹೆಂಡತಿ ದೊಡ್ಡೊಕಿ ಇದ್ಲು. ಆದರ ಸ್ವಭಾವದಾಗ ಮಾತ್ರ ನಾ ಹೇಳ್ತೇನಿ,ಅಲ್ಲಾ ನೀವೇನ ನಾ ಖರೇ ಬರದರು ಓದತೀರಿ ಸುಳ್ಳ ಬರದರು ಓದತಿರಿ, ಬಟ್ ನಾ ಖರೇ ಹೇಳ್ತೇನಿ, ಟೊಟಲ್ ಲಿಬ್ರನ್ ಕ್ಯಾರೆಕ್ಟರಗೆ ಅಪವಾದ ಅನ್ನೋಹಂಗ ಇದ್ದಳು, totally exceptional to libran girls. ಹಂಗ ನೋಡಲಿಕ್ಕೆ ಒಂದ ಬೆಳ್ಳಗ, ಛಂದ ಇದ್ದಳು ಅನ್ನೊದ ಒಂದ ಬಿಟ್ಟರ ಬಾಕಿ ಯಾ ಲಿಬ್ರನ್ ಕ್ವಾಲಿಟಿನೂ ಅಕಿ ಕಡೆ ಇಲ್ಲಾ. ಅಕಿ ಅಷ್ಟ understanding ಸ್ವಭಾವ, ಎಲ್ಲಾರನು ಸಂಭಾಳಿಸಿಗೊಂಡ ಸಂಸಾರ ತೂಗಿಸಿಕೊಂಡ ಹೋಗೊ capacity, ಖರೇನ ಮೆಚ್ಚೊ ಹಂಗ ಅದ ಬಿಡ್ರಿ. ಅಲ್ಲಾ ನಾ ನನ್ನ ಹೆಂಡ್ತಿ ಅಂತ ಹೇಳಲಿಕ್ಕತ್ತಿಲ್ಲಾ ಮತ್ತ, ಇದ್ದ ಹಕಿಕತ್ ಹೇಳಲಿಕತ್ತೇನಿ.
ಮುಂದ ನಂದ ಲಗ್ನಾ ಮಾಡ್ಕೊಂಡ ಸಂಸಾರ ಶುರು ಆತ, ನನ್ನ ಹೆಂಡತಿ ನನ್ನ ತಂಗಿ ಅಗದಿ ಇಬ್ಬರು ಫಾಸ್ಟ ಫ್ರೇಂಡ್ಸ್ ಅನ್ನೊರಗತೆ ಇರತಿದ್ದರು, ಅದರಾಗ ನಮ್ಮ ತಂಗಿ ಹುಟ್ಟಾ ಮುಗ್ಗಲಗೇಡಿ, ಮನ್ಯಾಗ ಮೊದ್ಲ ಮಾಡತಿದ್ದಿದ್ದ ನಾಲ್ಕ ಕೆಲಸ ಅವನ್ನು ನನ್ನ ಹೆಂಡತಿ ಬಂದ ಮ್ಯಾಲೆ ಅಕಿಗೆ ಹೇಳಿ “ಭಾಭಿ, ಪ್ಲೀಸ ಇದೊಂದ ಮಾಡಿ ಬಿಡ,…. ನನಗ ಸಾರಿಗೆ ಒಗ್ಗರಣಿ ಹಾಕಲಿಕ್ಕೆ ಬರಂಗಿಲ್ಲಾ, ನನಗ ಭಕ್ಕರಿ ಬಡಿಲಿಕ್ಕೆ ಬರಂಗಿಲ್ಲಾ…ನೀ ಮಾಡಿ ಬಿಡ ಭಾಭಿ” ಅಂತ ನನ್ನ ಹೆಂಡತಿಗೆ ಮಸ್ಕಾ ಹೊಡದ ಹೊಡದ ಕೆಲಸಾ ತೊಗೊತಿದ್ಲು. ಮೊದ್ಲ ಹೇಳಿ ಕೇಳಿ ನನ್ನ ಹೆಂಡತಿ ಭೋಳೆ ಹೆಣ್ಣಮಗಳು ಪಾಪ ಹೋಗಲಿ ಬಿಡ ಇಕಿನರ ಇನ್ನ ಎಷ್ಟ ದಿವಸ ತವರಮನಿ ಒಳಗ ಇರೋಕಿ, ಇವತ್ತಿಲ್ಲಾ ನಾಳೆ ಗಂಡನ ಮನಿಗೆ ಲಗ್ನಾ ಮಾಡ್ಕೊಂಡ ಹೋಗೊಕಿ ಅಂತ ಸುಮ್ಮನಿದ್ಲು.
ಹಂಗ ಯಾವಾಗರ ಒಮ್ಮೆ ರಾತ್ರಿ ಎಲ್ಲಾ ಭಾಂಡೆ ತಿಕ್ಕಿ, ಗಲಬರಿಸಿ ಡಬ್ಬ ಹಾಕಿ, ಗ್ಯಾಸ ಕಟ್ಟಿ ಒರಿಸಿ ಹನ್ನೊಂದಕ್ಕ ಮಲ್ಕೊಂಡ ಮುಂಜಾನೆ ನನ್ನ ಹೆಂಡತಿದ ಏನರ ಏಳೊದರಾಗ ಒಂದ ಸ್ವಲ್ಪ ತಡಾ ಆತ ಅಂದರ ನನ್ನ ತಂಗಿ ಚಹಾ ವಾಟಗ ಹಿಡ್ಕೊಂಡ ಅಗದಿ ನಮ್ಮ ಬೆಡರೂಮ್ ಬಾಗಲದ ಕಡೆ ಓಡ್ಯಾಡಕೋತ ನನ್ನ ಪರವಾಗಿ ನನಗ ತಿವದ ತಿವದ
’ಎದ್ದೇಳು ಚಿನ್ನ ಮೂಡಲ ಹರಿತು ಮಾಡೇಳ ಮನೆಯ ಕೆಲಸ
ಮುಂಜಾನೆ ಎದ್ದು ಇಡಬಾರದ ಒಳಗ ನಿನ್ನಿಯ ಹಾಳ ಹೊಲಸ’ ಅಂತ ಜಾನಪದ ಹಾಡ ಹೇಳೊಕಿ.
ಅದೇನ ಆಗಿರ್ತಿತ್ತ ಅಂದರ ನಮ್ಮವ್ವ ನನ್ನ ತಂಗಿಗೆ ಎದ್ದಾಗಿಂದ ಕ್ಯಾಗಸ ತಗಿ ಅಂತ ಹತ್ತ ಸರತೆ ಒದರಿದು ಅಕಿ ಏನ ಕಸಬರಗಿ ಮುಟ್ಟೋಕಿ ಅಲ್ಲಾ, ಅಕಿಗೆ ಗೊತ್ತ ಒಮ್ಮೆ ನನ್ನ ಹೆಂಡತಿ ಎದ್ದಳಂದರ ಅಕಿ ಮನಿ ಕಸಾ ಏನ ಇಡಿ ಓಣಿ ಕಸಾ ತಗದ ತಗಿತಾಳಂತ ಹಿಂಗಾಗಿ ಟೈಮ್ ಪಾಸ್ ಮಾಡ್ಕೋತ ಅಡ್ಡಾಡತಿದ್ದಳು.
ಹಿಂಗ ಒಂದ್ಯಾರಡ ಸರತೆ ನನ್ನ ತಂಗಿ ಹಾಡೊದನ್ನ ನನ್ನ ಹೆಂಡತಿ ಕೇಳಿದ್ಲು, ಒಂದ ದಿವಸ ಇಕಿ ಹಿಂಗ ಅನ್ನೋದಕ್ಕ ನನ್ನ ಹೆಂಡತಿ ತಲಿ ಕೆಟ್ಟ
’ಮೂಡಲ ಹರಿದರ ಮಾಡಲಿ ಏನು, ಮೈಯಾಗ ಇಲ್ಲ ಪಾಡ
ಈ ಹಾಳು ಕೆಲಸ ಸಾಯುವ ತನಕ ಆಗ್ಯಾವ ನನಗ ಜೋಡ’ ಅಂತ ಆ ಹಾಡಿನ ಎರಡನೇ ಪ್ಯಾರಾಗ್ರಾಫ್ ಅಲ್ಲೇ ಒಳಗ ಬೆಡರೂಮಿನಾಗಿಂದ ಹಾಡಿದ್ಲು. ತೊಗೊ ಅದ ನನ್ನ ತಂಗಿಗೆ ಕೇಳಿಸಿ ಬಿಡ್ತು, ಇನ್ನ ಅಕಿ ಸುಮ್ಮನ ಕೂಡೋಕಿ ಅಂತು ಅಲ್ಲಾ, ಹೇಳಿ ಕೇಳಿ ಲಿಬ್ರನ್, ಮ್ಯಾಲೆ ನನ್ನ ತಂಗಿ ಬ್ಯಾರೆ, ಅಕಿ
’ನನಗೊತ್ತ, ನನಗೆಲ್ಲ ಗೊತ್ತ, ಹೇಳಬೇಡ ನನ್ನ ಮುಂದ
ಒಮ್ಮೆ ಬೇಸಿ, ಇನ್ನೊಮ್ಮೆ ವಾಸಿ, ಹಗಲೆಲ್ಲ ಏನು ಛಂದ’ ಅಂತ ಅಗದಿ ನಮ್ಮವನ ಧಾಟಿ ಒಳಗ ಮುಂದಿಂದ ಹಾಡಿದ್ಲು. ನನ್ನ ಹೆಂಡತಿ ಎದ್ದ ಹೊರಗ ಬಂದ ಅಲ್ಲೆ ತಲಿ ತಗ್ಗಿಸಿಕೊಂಡ ನಿಂತಿದ್ದ ನನ್ನ ಮಾರಿ ನೋಡಿ
’ಅಯ್ಯಯ ಶಿವನ ನನಗೇನ ಬಂತ, ನಿನಗ್ಯಾಕ ಇಲ್ಲ ಕಳ್ಳ
ಹೆಣ್ಣಾಗಿ ನಾನು ಹುಟ್ಟಿದೇನಿ ಯಾಕ ಬಡಿಲೇದರ ಜೀವಕ ಮುಳ್ಳ’ ಅಂತ ಭಾಳ ಎಮೋಶನಲ್ ಆಗಿ ಕೇಳಿದ್ಲು.
ನನ್ನ ಕಡೆ ಅದಕ್ಕೇನ ಉತ್ತರಿಲ್ಲಾ, ಮಾಡಿದ್ದ ಉಣ್ಣೊ ಮಾರಾಯಾ. ನಂಗ ದಿನಾ ಒಂದಕ್ಕು ಇದನ್ನ ನೋಡಿ ನೋಡಿ ಸಾಕಾಗಿತ್ತ, ಇವರಿಬ್ಬರ ಕೈಯಾಗ ಸಿಕ್ಕ ಖರೇ ಹೇಳ್ಬೇಕಂದರ ನಾ ಸಾಯಲಿಕತ್ತಿದ್ದೆ. ಇತ್ತಲಾಗ ತಂಗಿಗಂತು ಏನ ಅನ್ನೊಹಂಗ ಇದ್ದಿದ್ದಿಲ್ಲಾ, ಇನ್ನ ಹೆಂಡ್ತಿ ಅಂತೂ ಹೆಂಡ್ತಿ ಅಕಿಗೇನ ಅಂತೀರಿ. ಒಂದ ದಿವಸ ತಲಿ ಕೆಟ್ಟ ಧೈರ್ಯಾ ಮಾಡಿ ನನ್ನ ಹೆಂಡ್ತಿಗನ
’ಬಡ ಬಡಿಸಬೇಡ ತಡಾ ಯಾಕ ನೀ ನಡಿ ಹೋಗು ತವರಮನೆಗೆ
ಸಾವಿರ ಮಂದಿ ಮಾಡ್ತಾರ ನನಗೆ ರತಿಯಂಥ ಹುಡಗಿ ಕೊಟ್ಟ’ ಅಂತ ಅಂದ ಬಿಟ್ಟೆ, ತೊಗೊ ಮನ್ಯಾಗ ದೊಡ್ಡ ರಾಮಾಯಣನ ಶುರು ಆಗಿ ಬಿಡ್ತು. ಇನ್ನೇನ ಕುರುಕ್ಷೇತ್ರ ಶುರು ಆಗೊದ ಬಾಕಿ ಇತ್ತ ಮತ್ತ ನಾನ ನನ್ನ ಹೆಂಡತಿಗೆ ರಮಿಸಿ ಸಂಭಾಳಿಸಿದೆ.
ಅಲ್ಲಾ ಇದ ಒಂದ ಹತ್ತ ಹನ್ನೇರಡ ವರ್ಷದ ಹಿಂದಿನ ಮಾತ, ಈಗ ಆವಾಗಿನಂಗ ನಮ್ಮ ಮನ್ಯಾಗ ತಂಗಿ ಇಲ್ಲಾ, ನನ್ನ ಕಡೆ ಹಿಂಡ್ತಿಗೆ ತವರಮನಿಗೆ ಹೋಗ ಅಂತ ಹೇಳಲಿಕ್ಕೆ ದಮ್ಮ ಇಲ್ಲಾ, ಆದರೂ ಇಗೇನರ ಮನ್ಯಾಗ ಮನಿತುಂಬ ಕೆಲಸ ಇದ್ದಾಗ ನನ್ನ ಹೆಂಡತಿ ಎಂಟ ಹೊಡದರು ಹಾಸಿಗ್ಯಾಗ ಬಿದ್ದಿದ್ದರ ನಾ ಅಗದಿ ಪ್ರೀತಿಲೆ, ಅಕಿ ಕಾಲ ಒತ್ತಗೋತ
’ಎದ್ದೇಳು ಚಿನ್ನ ಮೂಡಲ ಹರಿತು ಮಾಡೇಳ ಮನೆಯ ಕೆಲಸ
ಮುಂಜಾನೆ ಎದ್ದು ಇಡಬಾರದ ಒಳಗ ನಿನ್ನಿಯ ಹಾಳ ಹೊಲಸ’ ಅಂತ ಹಾಡತಿರ್ತೇನಿ. ಹಂಗ ಅಕಿ ಏನರ ಬಾಯಿ ತಪ್ಪಿ
’ಮೂಡಲ ಹರಿದರ ಮಾಡಲಿ ಏನು, ಮೈಯಾಗ ಇಲ್ಲ ಪಾಡ
ಈ ಹಾಳು ಕೆಲಸ ಸಾಯುವ ತನಕ ಆಗ್ಯಾವ ನನಗ ಜೋಡ’ ಅಂತ ಅಕಿ ಅಂದರ ನಂಗ ಖರೇನ ಅಕಿ ಕೆಲಸಕ್ಕ ಹಾಳ ಕೆಲಸ ಅಂದ್ಲೊ ಇಲ್ಲಾ ಗಂಡಗ ಹಂಗ ಅಂದ್ಲೊ ಅಂತ ಕನಫ್ಯುಸ್ ಆದರೂ
“ಯಾಕ, ಏನಾತ, ಡಾಕ್ಟರನ ಕರಸಲಿ, ಆತ ತೊಗೊ ನೀ ಆರಾಮ ತೊಗೊ, ನಾ ಎಲ್ಲಾ ಕೆಲಸಾ ಮಾಡ್ತೇನಿ” ಅಂತ ನನ್ನ ದಿನಚರಿ ಶುರು ಮಾಡ್ತೇನಿ.
ಅಲ್ಲಾ ಸಂಭಾಳಿಸಿಗೊಂಡ ಹೋಗೊದ ನೋಡ್ರಿ ಸಂಸಾರ ಅಂದರ, ಹಂಗ ಪಾಪ ಅಕಿ ಹೆಂಡ್ತಿ ಆದರೂ ಮನಷ್ಯಾಳ ಹೌದಲ್ಲ..ಅಕಿಗೂ ಆಸರಕಿ ಬ್ಯಾಸರಕಿ ಇರತದ ನೋಡ್ರಿ. ಹಿಂಗಾಗಿ ನಾ ತುಟಿ ಪಿಟ್ಟ ಅನದ ಎಲ್ಲಾ ಕೆಲಸ ಬಗಿಹರಿಸಿಕೊಂಡ ಹೋಗ್ತೇನಿ.