ಎಲ್ಲಾರ ಮನ್ಯಾಗು ತಾಟನಾಗ ಕೂದಲ ಬರೋದ….

’ಎಲ್ಲಾರ ಮನ್ಯಾಗು ತಾಟನಾಗ ಕೂದಲ ಬರೋದ’ಅಂತ ಗಾದಿ ಮಾತ ಅದ. ಕೇಳಿರೇನ? ಕೇಳಿಲ್ಲ ಹೌದಲ್ಲ.
ಅಲ್ಲಾ, ಹಂಗೇನ ಸುಡಗಾಡ ಗಾದಿ ಮಾತಿಲ್ಲಾ ಮತ್ತ, ಇದ ನಮ್ಮವ್ವ ಕಟ್ಟಿದ್ದ ಗಾದಿ ಮಾತ. ನಮ್ಮ ಮನ್ಯಾಗ ಊಟದ್ದ ತಾಟ ನಾಗ ವಾರದಾಗ ಒಂದ್ಯಾರಡ ಸರತೆ ಕೂದಲ ಬರೋದ ಮೊದ್ಲಿಂದ ಬಂದ ಸಂಪ್ರದಾಯ. ಅದರಾಗ ಶುಕ್ರವಾರ ಇಲ್ಲಾ ಮಂಗಳವಾರ (ನಮ್ಮವ್ವ ಯರಕೊಂಡಾಗ ಒಮ್ಮೆ) ಅಂತೂ ಗ್ಯಾರಂಟಿ ಇರತಿತ್ತ. ಏನಿಲ್ಲದ ನಮ್ಮಪ್ಪ ಭಾರಿ ಪಿಸಿ ಮನಷ್ಯಾ, ಅವಂಗ ಊಟದಾಗ ಏನರ ಹೆಚ್ಚು ಕಡಮಿ ಆತಂದರ ಸಾಕ ಸೀದಾ ಬಚ್ಚಲಕ್ಕ ಹೋಗಿ ಬಟ್ಟ ಹಾಕ್ಕೊಂಡ ವಾಂತಿ ಮಾಡ್ಕೊಂಡ ಆಮ್ಯಾಲೆ ಕೈ ತೊಳ್ಕೊಂಡ ಬರೋ ಮನಷ್ಯಾ. ಇನ್ನ ಹಂತಾವಂಗ ಕೂದಲ ಬಂದರ ಮುಗದ ಹೋತ. ಕಲಿಸಿದ್ದ ಅನ್ನಾ ಅಷ್ಟಕ್ಕ ಬಿಟ್ಟ ಸೀದಾ ಬಚ್ಚಲಕ್ಕ ರೈಟ ಅಂದ ಬಿಡ್ತಿದ್ದಾ. ಹಂಗ ಭಾಳ ಮಂದಿ ಊಟದಾಗ ಕೂದಲ ಬಂದರ ಕೂದಲಾ ತಗದಿಟ್ಟ ಊಟಾ ಮಾಡ್ತಾರ ಅದರ ನಮ್ಮಪ್ಪ ಹಂಗ ಇದ್ದಿದ್ದಿಲ್ಲಾ.
ಮುಂದ ನಮ್ಮಪ್ಪ ಕೈ ತೊಳ್ಕೊಂಡ ಬಂದ ನಮ್ಮವ್ವಗ ಹಚ್ಚಿ ಬೈತಿದ್ದಾ. ಅದರಾಗ ಆ ಕೂದಲ ಉದ್ದ ಇರತಿತ್ತ ಹಿಂಗಾಗಿ ಅದ ನಮ್ಮವ್ವಂದ ಅಂತ ಗ್ಯಾರಂಟಿ. ಅಕಿಗೆ “ಎಷ್ಟ ಛಂದ ಅಡಿಗಿ ಮಾಡ್ತಿ, ಕಣ್ಣ ಕಾಣಂಗಿಲ್ಲೇನ? ನಿಂಗ ಹತ್ತ ಸರತೆ ಹೇಳೇನಿ ಅಡಗಿ ಮಾಡಬೇಕಾರ ಹಿಕ್ಕೋ ಬ್ಯಾಡಾ” ಅಂತ ಅಂವಾ ಅನ್ನೋದು ಅದಕ್ಕ ನಮ್ಮವ್ವಾ “ಎಲ್ಲಾರ ಮನ್ಯಾಗು ತಾಟನಾಗ ಕೂದಲ ಬರೋದ, ಅದೇನ ಮಹಾ. ಅಷ್ಟ್ಯಾಕ ಬಾಯಿ ಮಾಡತೀರಿ? ತುಟ್ಟಿ ಕಾಲದಾಗ ಹಿಂಗ ಅನ್ನಾ ಛೆಲ್ಲಿ ಎದ್ದರ ಹೆಂಗ? ಕೂದಲಾ ತಗದ ಇಟ್ಟ ಉಂಡರಾತ” ಅಂತ ಅನ್ನೋದು ಅಗದಿ ಕಾಮನ್ ಆಗಿ ಬಿಟ್ಟಿತ್ತ. ಇನ್ನೊಂದ ವಿಚಿತ್ರ ಅಂದರ ನಮ್ಮಪ್ಪ ಪಿಸಿ ಇರೋದಕ್ಕೂ ಅವಂಗs ಭಾಳ ಸರತೆ ಕೂದಲ ಬರೋದಕ್ಕು ಸಮಾ ಆಗ್ತಿತ್ತ.
ಮುಂದ ನನ್ನ ಲಗ್ನ ಆದ ಮ್ಯಾಲೇನು ತಾಟನಾಗ ಕೂದಲ ಬರೋದ ಕಂಟಿನ್ಯೂ ಇತ್ತ, ಅಲ್ಲಾ ಕಂಟಿನ್ಯೂ ಏನ ಜಾಸ್ತಿ ಆತ ಅನ್ನರಿ. ಆದರ ಆವಾಗ ನಮ್ಮವ್ವ ಕೂದಲ ಬಂದಾಗೋಮ್ಮೆ “ಈ ಕೂದ್ಲ ನಂದಲ್ಲಾ, ನಾ ಖರೇ ಹೇಳ್ತೇನಿ, ನಂದ ಇಷ್ಟ ದಪ್ಪ ಇಲ್ಲಾ, ಮ್ಯಾಲೆ ಇಷ್ಟ ಉದ್ದನೂ ಇಲ್ಲಾ” ಅಂತ ನನ್ನ ಹೆಂಡತಿ ಮಾರಿ ನೋಡೋಕಿ. ಅತ್ತಲಾಗ ನಮ್ಮಪ್ಪ ವೈಕ್ ವೈಕ್ ಅನ್ಕೋತ ಬಚ್ಚಲದಾರಿ ಹಿಡದಿರ್ತಿದ್ದಾ.
ಮುಂದ ಒಂದ ಅರ್ಧಾ ತಾಸ ನನ್ನ ಹೆಂಡತಿದು ನಮ್ಮವ್ವಂದು ಜುಗಲಬಂದಿ ಶುರು
“ಇದ ನಂದ ಕೂದಲ ಅಲ್ಲಾ, ನಿಂದ ಕೂದಲಾ” ಅಂತ ಇಬ್ಬರು ಗುದ್ದಾಡಿ ಯಾರದ ಕೂದಲಾ ಅಂತ ಪ್ರೂವ್ ಆದಮ್ಯಾಲೆ ಸಮಾಧಾನ. ನಮ್ಮ ಪುಣ್ಯಾಕ್ಕ ಇಬ್ಬರು ಕೂದ್ಲ ಹಿಡದ ’ಇದ ನಿಂದ ಕೂದ್ಲ, ನನ್ನ ಕೂದ್ಲ ಅಲ್ಲಾ’ ಅಂತ ಜಗಳಾಡತಿದ್ದಿಲ್ಲಾ. ಒಮ್ಮೊಮ್ಮೆ ಅಂತೂ ನಮ್ಮವ್ವ ಭಾಳ ತಲಿ ಕೆಟ್ಟ ಕಡಿಕೆ “ಬೇಕಾರ ಕೂದ್ಲದ್ದ dna test ಮಾಡಸ, ಇದ ಯಾರದಂತ ನೋಡೆ ಬಿಡೋಣ” ಅಂತ ನನ್ನ ಹೆಂಡತಿಗೆ ಅನ್ನೋಕಿ.
ಹಂಗ ನನ್ನ ಹೆಂಡತಿ ಕೂದ್ಲ ಲಗ್ನಾದ ಹೊಸ್ತಾಗಿ ಭಾರಿ ಛಂದ ಇದ್ದವು. ಮಂದಿ ನನಗ ’ಏನಲೇ ಅಕಿ ಕೂದ್ಲಾ ನೋಡಿ ಮದುವಿ ಮಾಡ್ಕೊಂಡಿ ಏನ’ ಅನ್ಬೇಕ ಹಂಗ ಇದ್ದವು. ಇನ್ನ ಅಕಸ್ಮಾತ ಹಂತಾ ಒಂದ ಕೂದಲ ಏನರ ಯಾರರ ಊಟದಾಗ ನುಂಗಿ ಬಿಟ್ಟರ ಅದ ಸಣ್ಣ ಕರಳ, ದೊಡ್ಡ ಕರಳ, ಜಠರ, ಪಿತ್ತಕೋಶ್ ಎಲ್ಲಾಕೂ ಗಂಟಾಗಿ ಇನ್ನು ಗಂಟ್ಲದಾಗ ಉಳಿತಿತ್ತ. ಹಿಂಗಾಗಿ ನಾವ ಆ ಉದ್ದನಿ ಕೂದಲಾ ನೋಡಿ ಇದು ಪ್ರೇರಣಾಂದು, ಬಿಳೇ ಉದ್ದನೀ ಕೂದ್ಲ ಬಂದರ ಅದ ನಮ್ಮವ್ವಂದು, ಸಣ್ಣ ಕೂದ್ಲ ದೊಳಗ ಖರ್ರಗ ಇದ್ದರ ನಂದು, ಬೆಳ್ಳಗ ಇದ್ದರ ನಮ್ಮಪ್ಪಂದು ಅಂತ ಬೈಫರ್ಕೇಟ್ ಮಾಡತಿದ್ದವಿ. ಬರಬರತ ನಂದು ನಮ್ಮಪ್ಪಂದ ಕೂದ್ಲ ತಾಟನಾಗ ಬರೋದ ಕಡಿಮೆ ಆಗಲಿಕತ್ತ. ಹಂಗ ತಾಟಿನಾಗ ಇಷ್ಟ ಏನ ಅವು ನಮ್ಮ ತಲ್ಯಾಗ ಕಡಿಮೆ ಆಗಲಿಕತ್ತಿದ್ದವು ಆ ಮಾತ ಬ್ಯಾರೆ.
ಅಲ್ಲಾ ನಮ್ಮಪ್ಪಂದ ವಯಸ್ಸಾತು ಕೂದಲ ಉದರತಾವ ಒಪಗೋಳೊ ಮಾತ ಆದರ ನಂದ ಯಾಕ ಉದರತಾವ ಅಂತ ಖರೇನ ಚಿಂತಿ ಹತ್ತಿ ಬಿಟ್ಟಿತ್ತ. ಆ ಚಿಂತಿಗೆ ಅರ್ಧಾ ಮತ್ತ ಕೂದಲ ಉದರಲಿಕತ್ತವು. ಆಮ್ಯಾಲೆ ಡಾಕ್ಟರ ಇಲ್ಲರಿ ನಿಂಬದ ಹೆರಿಡೇಟರಿ ಪ್ರಾಬ್ಲೇಮ್, ನೀವ ಏನ ಗುದ್ದಾಡಿದರು ಕೂದಲ ಉದರೋವ, ಭಾಳ ತಲಿ ಕೆಡಸಿಗೊಂಡ ಉಳದಿದ್ದ ಒಂದ ನಾಲ್ಕ ಕೂದಲಾನು ಕಳಕೋಬ್ಯಾಡರಿ ಅಂತ ಸಮಾಧಾನ ಮಾಡಿದರು.
ಈಗ ಒಂದ ವಾರದ ಹಿಂದ ಹಿಂಗ ಉಟಕ್ಕ ಕೂತಾಗ ಮತ್ತ ಕೂದ್ಲ ಬಂದ ನಮ್ಮಪ್ಪ ವೈಕ್..ವೈಕ್ ಶುರು ಮಾಡಿದಾ. ಪ್ರತಿ ಸರತೆ ಇದ ನನ್ನ ಕೂದಲ ಅಲ್ಲಾ, ನಿಂದ ಕೂದಲಾ ಅಂತ ಜಗಳಾಡೊ ಅತ್ತಿ ಸೊಸಿ ಯಾಕೊ ಸುಮ್ಮನ ಇದ್ದರು. ನಮ್ಮವ್ವ ಕೆಟ್ಟ ಕಣ್ಣಿಲೇ ನನ್ನ ಹೆಂಡತಿ ಮಾರಿ ನೋಡಲಿಕತ್ತಿದ್ಲು, ನನ್ನ ಹೆಂಡತಿ ಮಾತ್ರ ಬಾಯಿ ಮುಚಗೊಂಡ ಮಾರಿ ಕೆಟ್ಟ ಮಾಡ್ಕೊಂಡ ಕೂತಿದ್ಲು. ನಾನ ಮತ್ತ
“ಹೋಗಲಿ ಬಿಡಲೇ, ನೀ ಯಾಕ ಅಷ್ಟ ತಲಿಕೆಡಸ್ಗೋತಿ. ಇದೇನ ಮೊದ್ಲನೇ ಸಲಾ ಏನ್ ನಿನ್ನ ಕೂದಲ ತಾಟಿನಾಗ ಬಂದಿದ್ದ” ಅಂದೆ.
“ಹಂಗ ಅಲ್ಲರಿ, ನನ್ನ ಕೂದಲಾ ಇತ್ತಿತ್ತಲಾಗ ಯಾಕೋ ಭಾಳ ಉದರಲಿಕತ್ತಾವ, ಡಾಕ್ಟರಕಡೆನರ ಹೋಗಿ ಬರಬೇಕರಿ” ಅಂದ್ಲು.
“ಏ, ಇಷ್ಟ ವಯಸ್ಸಾತ ಕೂದ್ಲ ಉದರಲಾರದ ಏನ, ಅದರಾಗ ವಾರದಾಗ ಮೂರ ಮೂರ ಸರತೆ ಆ ಸುಡಗಾಡ ಟಿ.ವಿ ಅಡ್ವೈರ್ಟೈಸಮೆಂಟ ನೋಡಿ ಯಾವ್ಯಾವರ ಶ್ಯಾಂಪೂ ಹಚಗೊಂಡ ಯರಕೊಂಡರ ಉದರಲಾರದ ಏನ” ಅಂತ ನಾ ಅಂದರ
“ಅಲ್ಲರಿ, ವರ್ಜಿನ್ ಕೂದ್ಲಾ ಹಿಂಗ ಸಣ್ಣ ವಯಸ್ಸಿನಾಗ ಉದರಿದರ ಹೆಂಗರಿ” ಅಂತ ಇಕಿ ಮತ್ತ ತನ್ನ ರಾಗಾ ತಗದ್ಲು.
ನಾ ಇಕಿ ವರ್ಜಿನ್ ಕೂದ್ಲಾ ಅಂದ ಕೂಡಲೇ ಗಾಬರಿ ಆದೆ. ಅಲ್ಲಾ ಲಗ್ನಾಗಿ ಹದಿಮೂರ ವರ್ಷ ಆದರೂ ಇನ್ನೂ ವರ್ಜಿನ್ ಕೂದ್ಲ ಅಂತಾಳಲಾ ಅಂತ
“ಲೇ, ವರ್ಜಿನ್ ಕೂದಲಾ ಅಂದರೇನಲೇ, ಎರಡ ಮಕ್ಕಳನ ಹಡದಿ? ಮತ್ತೇನೇನ ವರ್ಜಿನ್ ಅವ ನಿನ್ನವು ಇನ್ನೂ?” ಅಂದೆ. ಅಕಿಗೆ ಹಂಗ ಅಂದ ಕೂಡಲೇ ಸಿಟ್ಟ ಬಂತ
“ರ್ರಿ, ನಿಮಗೇನ knowledge ಅದ. indians ಕೂದ್ಲಾ ಅಂದರ ’ವರ್ಜಿನ್ ಹೇರ್’ ಅದಕ್ಕ ’ರೆಮಿ ಹೇರ್’ಅಂತನೂ ಕರಿತಾರ. ನಮ್ಮ ಕೂದಲ ಒಂದನೇ ಸರತೆ ಅದು from roots ಉದರಿರತದಲಾ ಅದಕ್ಕ ವರ್ಜಿನ್ ಹೇರ್ ಅಂತಾರ. ಈ foreign ಮಂದಿ ಚವರಿ ಕೂದ್ಲ (hair extension) ಅಂತ ವಿಗ್ ಮಾಡ್ಕೊಂಡ ಹಾಕ್ಕೊಂಡ ಅಡ್ಡಾಡೋದೆಲ್ಲಾ ನಮ್ಮ indiansದ್ದ virgin ಕೂದ್ಲಾನ. ಇದಕ್ಕ ಬಂಗಾರದ ವ್ಯಾಲು ಅದ, ಕಪ್ಪ ಚಿನ್ನಾ ಅಂತನೂ ಇದಕ್ಕ ಕರಿತಾರ. ನಿಮಗೇನ ತಲಿ ಗೊತ್ತ” ಅಂದ್ಲು. ನಂಗ ಇನ್ನೂ ಗಾಬರಿ ಆತ. ಅಲ್ಲಾ ಇಕಿ ಯಾವಾಗಿಂದ ಇಷ್ಟ ಶಾಣ್ಯಾಕಿ ಆದ್ಲು, ಅದು ಎಲ್ಲಾ ಬಿಟ್ಟ ಕೂದ್ಲದ ಬಗ್ಗೆ ಇಷ್ಟ ಹೆಂಗ ತಿಳ್ಕೊಂಡ್ಲು ಅಂತ
“ಲೇ, ಇದನ್ನೇಲ್ಲಾ ಯಾರ ಹೇಳಿದರಲೇ, ನೀ ಏನ ಹೋದ ಜನ್ಮದಾಗ ಚವರಿ ಕೂದ್ಲಾ ಮಾರತಿದ್ಯೋ ಇಲ್ಲಾ ಉದರಿದ್ದ ಕೂದಲಾ ಆರಸಲಿಕ್ಕೆ ಮನಿ ಮನಿಗೆ ಹೋಗ್ತಿದ್ಯೋ?” ಅಂದೆ
“ರ್ರಿ, ನಿಮ್ಮ ಅವಧಿ ಒಳಗ ಯಾರೊ ಮೋಹನ ಅಂತ ಕೂದ್ಲದ ಬಗ್ಗೆ ದೊಡ್ಡ ಕಥಿನ ಬರದಿದ್ದರಲಾ ಓದಿಲ್ಲೇನ?” ಅಂದ್ಲು. ಅಲ್ಲಾ, ಹಂಗ ನಂಗೇಲ್ಲೆ ಮಂದಿ ಬರದಿದ್ದ ಓದಲಿಕ್ಕೆ ಟೈಮ ಅದ, ಅದು ನಮ್ಮ Gn.ಮೋಹನವರ ಕೂದ್ಲದ ಬಗ್ಗೆ ಬರದಿದ್ದರು ಅಂದರ ಖರೇನ ಆಶ್ಚರ್ಯ ಆತ, ಅಲ್ಲಾ ಅವರಿಗೆ ಕೂದಲಕ್ಕ ಏನ ಸಂಬಂಧ ಅಂತೇನಿ. ಪಾಪ ಅವರಿಗೆ ಇರೋದ ಒಂದ ನಾಲ್ಕ ಕೂದ್ಲ, ಆದರೂ ಕ್ಯೂರಿಯಾಸಿಟಿ ತಾಳಲಾರದ
“ಈ ವರ್ಜಿನ್ ಹೇರ ಬಗ್ಗೆ ಮತ್ತೇನೇನ ಬರದಿದ್ದರವಾ ಮೋಹನವರು?” ಅಂತ ಕೇಳಿದೆ
“fashion world ಒಳಗ ಮಿಲಿಯನ್ಸ್ ಗಟ್ಟಲೆ ಕಿಮ್ಮತ್ತ ಅದ ಅಂತ ನಮ್ಮ ಉದರಿದ್ದ ಕೂದ್ಲಕ್ಕ, ತಿರುಪತಿ, ಧರ್ಮಸ್ಥಳಾ ಎಲ್ಲಾ ಕಡೇ ಈ ಕೂದ್ಲಾ export ಮಾಡತಾರಂತ. ಇಷ್ಟ ಏನ್, ಒಂದಿಷ್ಟ ಹಳ್ಳ್ಯಾಗ ಮನಿ ಮನಿಗೆ ಕೂದಲಾ ತೊಗೊಂಡ ಹೋಗೊರ ಬಂದ ಹಣಗಿ, ಹೇರ ಕ್ಲಿಪ್ ಕೊಟ್ಟ ನಮ್ಮ ಮನ್ಯಾಗಿನ ಉದರಿದ್ದ ಕೂದಲಾ ತೊಗೊಂಡ ಹೋಗಿ ಮಾರತಾರಂತ” ಅಂತ ಅಂದ್ಲು.
ಮನಿ ಮನಿಗೆ ಬಂದ ಈ ಪ್ಲಾಸ್ಟಿಕ್ ಹಾಳಿ, ರದ್ದಿ ಪೇಪರ್, ಹಾಲಿನ ಪಾಕೇಟ ಹೆಂಗ ಒಯತಾರ ಹಂಗ ಉದರಿದ್ದ ಕೂದಲಾನೂ ಒಯತಾರ ಅಂದ ಕೂಡಲೇ ನಮ್ಮವ್ವನ್ನ ಕಿವಿ ನೆಟ್ಟಗಾದ್ವು.
“ಅಯ್ಯ ನಮ್ಮವ್ವ ಮೊದ್ಲ ಹೇಳಬಾರದೇನ, ದಿವಸಾ ಎಷ್ಟ ಕೂದಲಾ ಉದರಿ ಉದರಿ ತಾಟನಾಗ, ಕಸದಾಗ ಹೋಗ್ತಾವ, ಅವನ್ನೇಲ್ಲಾ ಕೂಡಿಸಿಟ್ಟ ನಾವು export ಮಾಡಬಹುದಿತ್ತ ನೋಡ” ಅಂದ್ಲು.
“ನೀವೇನ ಹುಚ್ಚರಂಗ ಎಲ್ಲರ ಕೂದ್ಲ ಆರಿಸಿಗೊತ ಕೂತ ಗಿತರಿ ಅಂತsನ ನಿಮಗ ಹೇಳಿಲ್ಲಾ, ಏನಿಲ್ಲದ ಮನಿ ತುಂಬ ಪ್ಲಾಸ್ಟಿಕ ಸಾಮಾನ, ರದ್ದಿ ಪೇಪರ, ವಡಕಾ ಬಾಟಲಿ ತುಂಬಿರಿ ಇನ್ನ ಅದನ್ನೊಂದ ಎಲ್ಲೆ ಇಡೋರ” ಅಂತ ನನ್ನ ಹೆಂಡತಿ ಜೋರ ಮಾಡಿದ್ಲು.
ಅದು ಖರೇನ, ನಮ್ಮವ್ವಗ ಏನಿಲ್ಲದ ಹಳೇ-ಕೆಬ್ಬಣಾ, ಮೊಡಕಾ ಡಬ್ಬಿ, ಪ್ಲಾಸ್ಟಿಕ್ ಕೊಡಾ ಆರಿಸಿ ಇಟಗೊಳೊ ಚಟಾ ಇನ್ನ ಕೂದಲಾ ಕೊಟ್ಟರ ರೊಕ್ಕ ಬರತದ ಅಂದರ್ ಉದರಿದ್ದ ಕೂದಲ ಇಷ್ಟ ಏನ ಮನಿ ಮಂದಿದ ಉಳದದ್ದ ಕೂದಲಾನೂ ಉದರಿಸಿ ಆದರು ಕೂಡಿಸಿ ಇಟಗೊಳೊಕಿ ಅಂತ ನಾ ಅಲ್ಲಿಗೆ ಸುಮ್ಮನಾದೆ.
ಆದರೂ ಏನ ಅನ್ನರಿ ಕೂದಲ ಇದ್ದರ ಒಂದ ಪ್ರಾಬ್ಲೇಮ್ ಇರದಿದ್ದರ ಒಂದ ಪ್ರಾಬ್ಲೇಮ್. ಕೂದಲ ಇದ್ದರ ಅವು ಉದರಿದ ಮ್ಯಾಲೆ ಕೂಡಿಸಿ ಇಟ್ಟ ಇಟ್ಟ export ಮಾಡಬಹುದು. ಹಂಗ ವಾರದಾಗ ಎರಡ ಸರತೆ ತಾಟನಾಗ ಬರ್ತಾವ adjust ಮಾಡ್ಕೋಬೇಕ ಇಷ್ಟ.
ಇನ್ನ ನನ್ನಂಗ, ನಮ್ಮಪ್ಪನಂಗ ಕೂದ್ಲ ಉದರಲಿಕತ್ತರ ತಲಿ ಬಾಲ್ಡ ಆಗತದ ಅನ್ನೋದ ಬಿಟ್ಟರ ಹಂಗ ಬಾಕಿ ಎಲ್ಲಾ ಆರಾಮ ಇರ್ತದ ಬಿಡ್ರಿ. ದಿವಸಾ ಯರಕೋ ಬಹುದು, ಹಂಗ ನಮಗ ತಲಿ ತಂಪಾಗಿ ನೆಗಡಿ ಆಗೋ ಚಾನ್ಸಿಸ್ ಕಡಿಮೆ ಇರ್ತದ, ತಲಿಗೆ ಶ್ಯಾಂಪೂನು ಬ್ಯಾಡಾ ಶಿಗಿಕಾಯಿನೂ ಬ್ಯಾಡಾ. ಮುಂದ ಎಣ್ಣಿನೂ ಬ್ಯಾಡ, ಹಿಕ್ಕೊಳೊ ಪಾಳೆ ಬರಂಗಿಲ್ಲಾ. ತಲಿ ಅನ್ನೊದ ಲಕಾ ಲಕಾ ಹೊಳಿತಿರತದ ಯಾವಾಗಲು. ಅದೇನೋ ಅಂತಾರ more face to wash and less hair to comb ಅಂತ ಹಂಗ ಇರ್ತದ ನಮ್ಮ ಪರಿಸ್ಥಿತಿ.
ಅಲ್ಲಾ ಎಲ್ಲಾ ಬಿಟ್ಟ ಇಗ್ಯಾಕ ಬಂತ ಕೂದಲದ ವಿಷಯ ಅಂದರ ನಾಳೆ october 14ಕ್ಕ BALD & FREE DAY ಅದ, ಇದ exclusively ಬಾಲ್ಡ ಇದ್ದವರಿಗೆ ಮತ್ತ ನನ್ನಂಗ ಬಾಲ್ಡ ಆಗಲಿಕತ್ತವರಿಗೆ ಸಂಬಂಧ ಪಟ್ಟದ್ದ ಬಿಡ್ರಿ. ಆದರು ನಿಮಗೂ ಗೊತ್ತ ಇರಲಿ ಅಂತ ಹೇಳಿದೆ ಇಷ್ಟ.
ಆದರೂ ಏನ ಅನ್ನರಿ ವಾರದಾಗ ಮೂರ ಸರತೆ ತಾಟಿನಾಗ ಮಾರನ ಉದ್ದ ಕೂದಲ ಬರೋದಕಿಂತ ಬಾಲ್ಡ ಇರೋದ ಛಲೊ ಅಂತ ನನಗ ಅನಸ್ತದ. ಅಲ್ಲಾ ಇದು ಎಲ್ಲಾರ ಮನ್ಯಾಗಿನ ಕಥಿನ ಬಿಡ್ರಿ, ನಮ್ಮವ್ವ ಹೇಳಿದಂಗ ’ಎಲ್ಲಾರ ಮನ್ಯಾಗು ತಾಟನಾಗ ಕೂದಲ ಬರೋದ.’ಹಂಗ ಮತ್ತ ತಾಟನಾಗ ಕೂದ್ಲ ಬಂದರ ಅನ್ನ ಬಿಟ್ಟ ಎದ್ದರೂ ಕೂದ್ಲ ಹೊರಗ ಒಗಿಬಾಡ್ರಿ, ಆ ಕೂದ್ಲ ಕೂಡಿಸಿ ಕೂಡಿಸಿ ಇಟ್ಟ ಅವನ್ನ export ಮಾಡರಿ.
ಆದರೂ ಏನ ಅನ್ನರಿ ನಮ್ಮ ಹಣೇಬರಹಕ್ಕ ನಮ್ಮ ವರ್ಜಿನ ಕೂದಲ ಎಲ್ಲಾ ಹೊಂಟ ಬಿಟ್ಟಾವಲಾ ಅಂತ ಕೆಟ್ಟ ಅನಸ್ತದ. ಅಲ್ಲಾ, ಹಂಗ ನಮ್ಮ ತಲಿ ಇನ್ನು ವರ್ಜಿನ ಅದ ಆ ಮಾತ ಬ್ಯಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ