ನಾಳೆ ಡಿಸೆಂಬರ್ ೧೩ಕ್ಕ ನಮ್ಮ ದೇಶದ ಸಂಸತ್ತ ಮ್ಯಾಲೆ ದಾಳಿಯಾಗಿ ಹತ್ತ ವರ್ಷ ಆತು. ನಮ್ಮ ಮಂದಿಗೆ ಪಾರ್ಲಿಮೆಂಟ ಮ್ಯಾಲೆ ಅಟ್ಯಾಕ ಆಗಿತ್ತೂ ಅದನ್ನ ತಡಿಲಿಕ್ಕೆ ಹೋಗಿ ಏಳ ಮಂದಿ ಹುತಾತ್ಮರಾಗಿದ್ದರು ಅನ್ನೋದ ನೆನಪಾಗೋದ ವರ್ಷಕ್ಕ ಒಂದ ಸಲಾ. ಏನ್ಮಾಡೋದು ನಮ್ಮ ದೇಶದಾಗ ಮ್ಯಾಲಿಂದ ಮ್ಯಾಲೆ ಸಣ್ಣ -ಪುಟ್ಟ ದಾಳಿ , ಬಾಂಬ್ ಸ್ಪೋಟ ಆಗಕೋತ ಇರತಾವ. ಒಂದ ಮರೆಯೋದರಾಗ ಇನ್ನೋಂದ ಆಗಿರತದ. ಪಾಪ, ಜನಾ ಯಾವದಂತ ನೆನಪ ಇಡಬೇಕು. ಇನ್ನ ಹಿಂತಾದರಾಗ ಪಾರ್ಲಿಮೆಂಟಗೆ ಅಟ್ಯಾಕ ಮಾಡಿದವರನ ಗಲ್ಲಿಗೆ ಏರಸಬೇಕು ಅನ್ನೊದನ್ನ ಅಂತೂ ಮರತ ಬಿಟ್ಟೇವಿ. ನಮ್ಮ ಕಾನೂನ ಈಗಾಗಲೇ ಇವರಿಗೆ ಗಲ್ಲಿಗೇರಸರಿ ಅಂತ ಶಿಕ್ಷಾ ಕೊಟ್ಟದ ಆದ್ರ ನಮ್ಮ ಸರ್ಕಾರಕ್ಕ ಯಾಕೋ ‘ಅಫ್ಜಲ್ ಗುರು’ನ್ನ ಗಲ್ಲಿಗೇರಸಲಿಕ್ಕೆ ಮನಸ ಬರವಲ್ತು.
ಒಂದ ಸರತೆ ತಿಹಾರ ಜೈಲಿಗೆ ಹೋಗಿ ಈ ‘ಅಫ್ಜಲ್ ಗುರು’ನ ಮಾತಡಿಸ್ಕೊಂಡರ ಬಂದರಾತು ಅಂತ ಮನ್ನೆ ಹೋಗಿದ್ದೆ. ಹಂಗ ನೋಡಿದ್ರ ನಾವ ಅವಂಗ ಎಂದೋ ಗಲ್ಲಿಗೇರಿಸಿ , ಅವನ ಮನ್ಯಾಗಿನವರನ್ನ ಮಾತಾಡಿಸ್ಲಿಕ್ಕೆ ಹೋಗ ಬೇಕಾಗಿತ್ತು. ಆದರ ನಮ್ಮ ನಸೀಬದಾಗ ಇನ್ನೂ ಅವನ್ನ ಮಾತಾಡಸೋದ ಬರದದ ಅಂತ ಒಳಗ ಹೋದೆ.
ಜೇಲ್ ಒಳಗ ಹೋಗಬೇಕಾರ ಒಂದ ಹತ್ತ ಕಡೆ ಚೆಕ್ಕ ಮಾಡಿದರು.
” ಅಲ್ರೀ, ಏನ ಚೆಕಿಂಗ್ ಭಾಳ ಜೋರ ನಡದದಲಾ, ಗುರುಗ ಯಾರದರ ಬೆದರಿಕೆ ಅದ ಏನ? ” ಅಂತ ಕೇಳಿದೆ.
” ಏ, ಅವಂಗ ಯಾರದ ಬೆದರಕಿರಿ? ಇತ್ತಿಚಿಗೆ ಭಾಳ ದೂಡ್ಡ – ದೊಡ್ದ ಮಂದಿ ಎಲ್ಲಾ ನಮ್ಮ ಜೇಲನಾಗ ಇರತಾರಲಾ, ಅದಕ್ಕ ಇಷ್ಟ ಚೆಕಿಂಗ್ ” ಅಂತ ಅಫ್ಜಲ್ ಗುರುನ ಸೆಲ್ ಮುಂದ ಕರಕೊಂಡ ಹೋಗಿ ನಿಲ್ಲಿಸಿದರು.
” ಏನ್ ಗುರು ಆರಾಮಾ, ಕಾಫಿ ಆಯ್ತಾ?” ಅಂದೆ
” ಕಾಫೀ, ತಿಂಡಿ ಎಲ್ಲಾ ಆತು, ಆರಾಮ ಇದ್ದೆನಿ ” ಅಂದಾ
” ನೀ ಜೇಲನಾಗ ಇದ್ದ ಒಂದ ಒಂಬತ್ತ ವರ್ಷ ಆಗಲಿಕ್ಕ ಬಂತು, ಹೇಂಗ ಅನಸ್ತದ” ಅಂತ ಕೇಳಿದೆ
“ಏ ಇದೆನ್ರೀ ಈ ಕಡೆ ಇದ್ದಂಗೂ ಅಲ್ಲಾ ಸತ್ತಂಗೂ ಅಲ್ಲಾ. ಗಲ್ಲು ಶಿಕ್ಷೆ ಕೊಟ್ಟಾರ, ಗಲ್ಲಿಗೆ ಏರಸಿಲಿಕ್ಕ ತಯಾರಿಲ್ಲಾ, ಇನ್ನೂ ಎಷ್ಟ ವರ್ಷ ಹಿಂಗ ಕಳಿಬೇಕೋ ಏನೋ? ಭೆಟ್ಟಿ ಆದವರೆಲ್ಲಾ ‘ಏನ್ ಗುರು,ಯಾವಾಗ ಗಲ್ಲು ? ‘ ಅಂತ ನನಗ ಕೇಳ್ತಾರ, ನಾನರ ಏನ ಹೇಳಲಿ? ” ಅಂದಾ.
ಅಂವಾ ಹೇಳೋದು ಖರೇನ ಅದ, ಇವತ್ತ ಇಡಿ ದೇಶಕ್ಕ ದೇಶಾನ ‘ಏನ್ ಗುರು,ಯಾವಾಗ ಗಲ್ಲು ? ‘ಅಂತ ಅವಂಗ ಕೇಳೊ ಹಂಗ ಆಗೇದ. ಯಾಕಂದರ ನಮ್ಮ ಸರ್ಕಾರದವರಂತೂ ಇವತ್ತ- ನಾಳೆ ಅಂತ ಮುಂದ ಹಾಕೋತ್ತ ಹೊಂಟಾರ.
” ಏ, ನೀ ಎನ್ ಕಾಳಜಿ ಮಾಡ ಬ್ಯಾಡಾ, ನಮ್ಮ ಪ್ರಧಾನಮಂತ್ರಿ ಕೊಂದವರಿಗೆ ಇಪ್ಪತ್ತ ವರ್ಷ ಆದರೂ ಇನ್ನೂ ಗಲ್ಲಿಗೇರಸಲಿಕ್ಕೆ ಆಗಿಲ್ಲಾ. ಇನ್ನ ನಿನ್ನ ಪಾಳೆ ಇನ್ನೂ ದೂರದ ತೊಗೊ ” ಅಂತ ಧೈರ್ಯಾ ಕೊಟ್ಟೆ.
” ಏನೋ ದೇವರ ದೂಡ್ಡಾಂವ, ನಮ್ಮ ಜನಾನೂ ನನ್ನ ಸಂಬಂಧ ಆವಾಜ ಎತ್ಯಾರ. ನಂಗ ಮಾಫ್ ಮಾಡಿದರೂ ಮಾಡಬಹುದು ” ಅಂದಾ.
” ಆ ದೇವರಕಿಂತಾನೂ ನಮ್ಮ ಸರ್ಕಾರ ದೊಡ್ಡದಪ್ಪಾ, ಸಾಕ್ಷಾತ ಯಮರಾಜ ಮನಸ ಮಾಡಿದರೂ ನಮ್ಮ ಸರ್ಕಾರ ಮನಸ್ಸ ಮಾಡೋಮಟಾ ನಿಂಗ ಗಲ್ಲಿಗೇರಸಲಿಕ್ಕೆ ಸಾಧ್ಯ ಇಲ್ಲಾ. ನೀ ಆರಾಮ ಇರು” ಅಂದೆ.
ನಮ್ಮ ದೇಶದ ಜೇಲ್ ಅಂದ್ರ ಏನ ಅಂತ ತಿಳ್ಕೋಂಡಿರಿ ಯಾರ ಬೇಕಾದವರ, ಎಷ್ಟ-ಬೇಕಷ್ಟ ದಿವಸ ಆರಾಮ ಇರಬಹುದು. ಹಿಂದಕ ರಾಜೀವ ಗಾಂಧಿ ಹತ್ಯೆ ಕೇಸನಾಗ ಶಿಕ್ಷೆ ಆಗಿದ್ದ ನಳೀನಿಗೆ ಬಾಣಂತನ ಜೇಲನಾಗ ಮಾಡಿದ್ವಿ, ಮುಂಬೈಮ್ಯಾಲೆ ದಾಳಿ ಮಾಡಿದ್ದ ಕಸಬಗ ವರ್ಷಾ ಕೋಟಿಗಟ್ಟಲೇ ಖರ್ಚ ಮಾಡಿ ಅಳೆತನಾನೂ ಇಲ್ಲೆ ಮಾಡ್ಲಿಕತ್ತೇವಿ, ಇನ್ನ ಈ ಗುರುನ ಸಂಬಂಧ ಎಷ್ಟ ಖರ್ಚ ಮಾಡ್ಲಿಕತ್ತೇವಿ ಅಂತ ಲೆಕ್ಕಾನೂ ಇಡ್ಲಿಕ್ಕೆ ಹೊಗಿಲ್ಲಾ. ಅಲ್ಲಾ ಎಷ್ಟ ಅಂದ್ರು ಅಫ್ಜಲ್ ನಮ್ಮ ದೇಶದವನ ಅಲಾ ಲೆಕ್ಕ ಇಟ್ಟರ ಏನ ಮಾಡಬೇಕು. ಇದ್ದಷ್ಟ ದಿವಸ ತಿಂದ-ಉಂಡ ಅಡ್ಯಾಡಕೋತ ಇರವಲ್ನಾಕ.
ಹಂಗ ಇನ್ನೊಂದ ಎರಡ ಪ್ರಶ್ನೆ ಕೇಳಬೇಕು ಅನ್ನೋದರಾಗ ಜೋರಾಗಿ ಸೈರನ್ ಆತ. ನಾ ಯಾರೋ ಜೇಲನಿಂದ ಓಡಿ ಹೋದರು ಇಲ್ಲಾ ಯಾರಿಗೋ ಬೇಲ್ ಸಿಕ್ಕತು ಅನ್ಕೊಂಡಿದ್ದೆ ಆದರ ” ನಿಮ್ಮ ಮುಲಾಕಾತ ಟೈಮ್ ಮುಗಿತ. ನೀವಿನ್ನ ನಡಿರಿ ” ಅಂತ ನಂಗ ಹೋರಗ ಅಟ್ಟಿದ್ರು. ಮತ್ತ ಮುಂದಿನ ವರ್ಷ ಬಂದ ಮಾತಾಡಿಸಿದ್ರಾತ ತೋಗೊ, ಇಷ್ಟ ಲಗೂನ ಅವಂಗೇನ ಗಲ್ಲಿಗೆರಸಂಗಿಲ್ಲಾ ಅಂತ ಸುಮ್ಮನ ಹೋರಗ ಬಂದೆ.