ಇವತ್ತ ಮುಂಜಾನೆ ಎದ್ದ ಹೊರಗ ಬರೋದಕ್ಕ ಕಾಲಾಗ ಕಸಾ ಕಸಾ ಹತ್ತಲಿಕತ್ತ, ನನ್ನ ಹೆಂಡತಿ ದಿವಸಾ ಕ್ಯಾಗಸ ಹೊಡಿಯೋಕಿ ಇವತ್ತ ಯಾಕ ಇನ್ನು ಹೊಡದಿಲ್ಲಾ ಅಂತ ನಾ ಅಕಿಗೆ
“ಏ,ಪ್ರೇರಣಾ..ಇವತ್ತ ಯಾಕ ಇನ್ನೂ ಕಸಾ ಹುಡಗಿಲ್ಲಾ” ಅಂತ ಕೇಳಿದರ ಅಕಿ
“ಕಸಾ ಆಗೇದರಿ, ಇವತ್ತ ನಿಮ್ಮವ್ವ ಅಷ್ಟ ಛಂದ ಕಸಾ ಹುಡಗ್ಯಾರ, ಕಾಲಾಗ ಕಸಾ ಹಂಗ ಅದ” ಅಂತ ನಮ್ಮವ್ವನ ಮ್ಯಾಲೆ ಹಾಕಿದ್ಲು. ಅಲ್ಲಾ ಪಾಪ, ನಮ್ಮವ್ವಗ ಮೊದ್ಲ ಕಾಲ ನೋವು, ಬಗ್ಗಿ ಕೆಲಸಾ ಮಾಡಲಿಕ್ಕೆ ಬರಂಗಿಲ್ಲಾ ಹಂತಾದರಾಗ ಅಕಿಗೆ ಕಸಾ ಹುಡಗಸಲಿಕ್ಕೆ ಹಚ್ಚಿದರ ಅಕಿನರ ಏನ ಮಾಡಬೇಕ ಅಂತೇನಿ.
ಮುಂದ ಹಿಂಗ ಅಂಗಳಕ್ಕ ಹೋದರ ಅಲ್ಲೆ ಒಂದ ದೈತ್ಯಾಕಾರದ ಕಾಲಾಗ ಸಿಕ್ಕೊಂಡ ಬೀಳೊಹಂಗ ರಂಗೋಲಿ ಹಾಕಿದ್ದರು. ಇನ್ನ ಕಸಾ ನಮ್ಮವ್ವ ಹುಡಗ್ಯಾಳ ಅಂದರ ಥಳಿ ಹೊಡದ ರಂಗೋಲಿನೂ ನಮ್ಮವ್ವನ್ನ ಹಾಕಿರ್ತಾಳ ಅಂತ
“ಏನ ರಂಗೋಲಿ ಹಾಕಿಯ ನಮ್ಮವ್ವ, ಎಲ್ಲರ ಯಾರರ ಕಾಲಾಗ ಸಿಕ್ಕೊಂಡ ಬೀಳೋಹಂಗ ಆಗೇದಲಾ” ಅಂತ ಅಂದರ ನಮ್ಮವ್ವ
“ಏ, ರಂಗೋಲಿ ನಿನ್ನ ಹೆಂಡತಿ ಹಾಕ್ಯಾಳೊ ಮಾರಾಯಾ, ಆ ಜಾಡಗೂಡ ( cobweb) ಡಿಸೈನ್ ನೋಡಿದರ ಗೊತ್ತಾಗಂಗಿಲ್ಲಾ ಅದ ಅಕಿದ ಕ್ರೀಯೇಟಿವ್ ವರ್ಕ ಅಂತ” ಅಂತ ನಂಗ ಜೋರ ಮಾಡಿದ್ಲು. ಆತ ತೊಗೊ ಇವರದ ಬ್ಲೇಮ ಗೇಮ ಶುರು ಆತ ಅಂತ ನಾ ಅಷ್ಟಕ್ಕ ಸುಮ್ಮನಾದೆ.
ನಮ್ಮ ಮನ್ಯಾಗ ದಿನಾ ಏನ ಕೆಲಸ ಕೆಟ್ಟರು ಅತ್ತಿ-ಸೊಸಿ ಒಬ್ಬರ ಮ್ಯಾಲೆ ಒಬ್ಬರ ಹಾಕೋತನ ಇರತಾರ.
ಒಂದೊಂದ ದಿವಸ
“ಇದ ಹೆಂತಾ ಮುದ್ದಿ ಉಪ್ಪಿಟ್ಟ ಮಾಡಿಲೇ, ರಾಗಿ ಮುದ್ದಿ ಆಗೇದಲಾ” ಅಂತ ನಾ ನನ್ನ ಹೆಂಡತಿಗೆ ಅನ್ನಬೇಕ ಅದಕ್ಕ ಅಕಿ
“ನಿಮ್ಮವ್ವ ಮುದ್ದಿಗತೆ ಉಪ್ಪಿಟ್ಟ ಮಾಡಿದರ ಗುಳು-ಗುಳು ನುಂಗಲಿಕ್ಕೆ ಬರತದ ಅಂತ ಅಷ್ಟ ಛಂದ ಮಾಡ್ಯಾರ’ ಅಂತ ನಮ್ಮವ್ವನ ಬ್ಲೇಮ ಮಾಡೋಕಿ.
ಊಟಕ್ಕ ಕೂತಾಗ ನಮ್ಮವ್ವಗ ’ಇದೇನ ಅನ್ನ ನಮ್ಮವ್ವ ಉದರ ಬುಕಣಿ ಅಗೇದಲಾ’ ಅಂತ ಅಂದರ,
’ಅಯ್ಯ, ಕುಕ್ಕರ ಇಟ್ಟೋಕಿ ನಿನ್ನ ಹೆಂಡತಿನೊ ಮಾರಾಯ, ಆ ಬೋಕಾಣ ಗಿತ್ತಿಗೆ ಅಕ್ಕಿಗೆ ಎಷ್ಟ ನೀರ ಹಾಕಬೇಕ ಅನ್ನೋದ ಇವತ್ತಿಗೂ ಗೊತ್ತಿಲ್ಲಾ’ ಅಂತ ಅಕಿ ನನ್ನ ಹೆಂಡತಿಗೆ ಬ್ಲೇಮ ಮಾಡೋಕಿ,
’ಹಾಲ ಯಾಕ ಉಕ್ಕಸಿದಿಲೇ?’-’ನಿಮ್ಮವ್ವ ಹಾಲ ಒಲಿ ಮ್ಯಾಲೆ ಇಟ್ಟ ಹರಟಿ ಹೊಡಿಲಿಕ್ಕೆ ಹೋಗಿದ್ದರು’
’ಮ್ಯಾಲೆ ಟಾಕಿ ತುಂಬಿ ಹರಿಲಿಕತ್ತದ, ಪಂಪ್ ಯಾರ ಚಾಲು ಮಾಡಿದ್ರಿ?’-
’ನಿನ್ನ ಹೆಂಡತಿ ಪಂಪ್ ಆನ್ ಮಾಡಿ ಟಿ.ವಿ. ಮುಂದ ಕೂತ ಬಿಡ್ತಾಳ’
ಹಿಂತಾವೇಲ್ಲಾ ಬ್ಲೇಮ ಗೇಮ ನಮ್ಮ ಮನ್ಯಾಗ ಕಾಮನ್. ಅದರಾಗ ನನ್ನ ಹೆಂಡ್ತಿ ಅಂತು ಎಲ್ಲಾನೂ ಮಂದಿ ಮ್ಯಾಲೆ ಹಾಕಿ ಕೈಬಿಡ್ತಿದ್ಲು
ಹಂಗ ಈಗ ಇನ್ನು ಬೇಕ ಈಗ ಬರೇ ನಮ್ಮವ್ವನ್ನ ಇಷ್ಟ ಬ್ಲೇಮ ಮಾಡ್ತಾಳ ಮೊದ್ಲಂತು ಎಲ್ಲಾದಕ್ಕೂ ನನ್ನ ಬ್ಲೇಮ ಮಾಡ್ತಿದ್ಲು
ಲಗ್ನಾದ ಹೊಸ್ತಾಗಿ ಅಕಿದ ಬರೇ ಕರಿಮಣಿ ಮಂಗಳಸೂತ್ರ ಇತ್ತು,ಇನ್ನು ಗಟಾಯಿಸಿದ್ದ ಮಾಡ್ಸಿದ್ದಿಲ್ಲಾ, ಹಿಂಗಾಗಿ ಅದ ತಿಂಗಳದಾಗ ಮೂರ ಸರತೆ ರಾತ್ರಿ ಕಟಗರಸ್ತಿತ್ತ, ಮುಂಜಾನೆ ಎದ್ದ ನಮ್ಮವ್ವ ಅದನ್ನ ನೋಡಿ
’ಅದ ಹೆಂಗ ಹಗಲಗಲಾ ನಿಂದ ಮಂಗಳಸೂತ್ರ ಕಟಗರಸತದ್ವಾ’ ಅಂತ ಕೇಳಿದರ ಅದಕ್ಕ
’ನಿಮ್ಮ ಮಗನ್ನ ಕೇಳ್ರಿ’ ಅಂತ ನಂಗ ಬ್ಲೇಮ ಮಾಡ್ತಿದ್ಲು. ಇನ್ನ ಯಾರರ
’ಯಾಕವಾ ಲಗ್ನಾಗಿ ಆರ ತಿಂಗಳ ಆಗಲಿಕ್ಕೆ ಬಂತು, ಇನ್ನು ಏನ ವಿಶೇಷನ ಇಲ್ಲಲಾ’ ಅಂತ ಅಂದರ ನನ್ನ ಕಡೆ ಬಟ್ಟ ಮಾಡಿ ’ನಮ್ಮ ಮನೆಯವರನ ಕೇಳ್ರಿ’ ಅಂತಿದ್ಲು.
’ಅಯ್ಯ, ಕ್ಯಾರಿಂಗ?…ಇನ್ನೊಂದ ಎರಡ ವರ್ಷ ತಡ್ಕೊಬೇಕಿಲ್ಲ, ನಿಂದೇನ ವಯಸ್ಸ ಹೋಗ್ತಿತ್ತ?’ –
’ನಮ್ಮ ಮನೆಯವರ ಗಡಬಡಿ ಮಾಡಿದ್ದ್’
ಮುಂದ ಎರಡ ವರ್ಷ ಆದಮ್ಯಾಲೆ ಯಾರರ
’ಒಂದ ಸಾಕವಾ, ಮೊದ್ಲ ತುಟ್ಟಿ ಕಾಲ, ಇನ್ನೊಂದ ಹಡಿಲಿಕ್ಕೆ ಹೋಗ ಬ್ಯಾಡ’-
’ನಮ್ಮ ಮನೆಯವರಿಗೆ ಹೇಳ್ರಿ’.
ಮತ್ತೊಬ್ಬರ ಯಾರರ
’ಹೆಣ್ಣ ಒಂದ ಆಗಿ ಬಿಡ್ಲಿವಾ, ಹೆಂಗಿದ್ದರು ಮಗಾ ದೊಡ್ಡಂವ ಆಗ್ಯಾನ’- ಅದಕ್ಕು ’ನಮ್ಮ ಮನೆಯವರಿಗೆ ಹೇಳ್ರಿ’
ಒಟ್ಟಾ ಎಲ್ಲಾದಕ್ಕೂ ನನ್ನ ಮ್ಯಾಲೆ ಬ್ಲೇಮ ಮಾಡ್ತಿದ್ದಳು. ಅಲ್ಲಾ, ಹಡಿಯೊಕಿ – ಅನಭವಸೋಕಿ ಅಕಿ ಆದರ ಬ್ಲೇಮ ಮಾಡೋದ ನಂಗ.
ನಾ ಖರೇ ಹೇಳ್ತೇನಿ ಇಷ್ಟ ವರ್ಷ ಆತ ನಾ ಅಕಿ ಕೈಯಾಗ ಸಿಕ್ಕ ಅನುಭವಸಲಿಕತ್ತು ಒಂದ ದಿವಸನರ ನನ್ನ ಇವತ್ತೀನ ಪರಿಸ್ಥಿತಿಗೆ ಒಬ್ಬರಿಗರ ಬ್ಲೇಮ ಮಾಡೇನಿ? ಮಾಡಿದ್ದುಣ್ಣು ಮಾರಾಯ ಅಂತ ಸುಮ್ಮನ ಬಾಯಿಮುಚಗೊಂಡ ಅನಭವಸಲಿಕತ್ತಿಲ್ಲಾ ?
ಹಂಗ ನನ್ನ ಹೆಂಡತಿ ಒಂದ ದಿವಸನೂ ಒಬ್ಬರಿಗೂ ಬ್ಲೇಮ ಮಾಡಲಾರದ ಇದ್ದದ್ದ ನಾ ನೋಡೆ ಇಲ್ಲ ಬಿಡ್ರಿ.
ಅಲ್ಲಾ ಹಂಗ ಆಕಸ್ಮಾತ ಅಕಿ ಏನರ ಸುಮ್ಮನಿದ್ದಾಗ ’ಯಾಕ, ಇವತ್ತ ಯಾ ವಿಷಯದಾಗು ಯಾರನು ಬ್ಲೇಮ ಮಾಡಿಲ್ಲಲಾ?’ ಅಂತ ಕೇಳಿದರ ಅದಕ್ಕು ನಮ್ಮನ್ನ ಬ್ಲೇಮ ಮಾಡೋ ಪೈಕಿ ಅಕಿ.
ಈಗ ಎಲ್ಲಾ ಬಿಟ್ಟ ಈ ಬ್ಲೇಮ ಗೇಮ ಯಾಕ ನೆನಪಾತು ಅಂದರ ಇವತ್ತ ಖರೇನ ’ಬ್ಲೇಮ ಸಮಒನ್ ಎಲ್ಸ್ ಡೇ’ಅಂತ. ಹಿಂಗಾಗಿ ಇವತ್ತ ನಾವ ಮಾಡೋ ಪ್ರತಿ ತಪ್ಪ ಕೆಲಸಕ್ಕೂ ಮತ್ತೊಬ್ಬರನ ಆಫಿಸಿಯಲ್ ಆಗಿ ಬ್ಲೇಮ ಮಾಡಬಹುದು.
ಅಲ್ಲಾ, ಜಗತ್ತಿನಾಗ ಜನಾ ಹೆಂತಿಂತಾ ಡೇ ಆಚರಸ್ತಾರ ಅಂತೇನಿ. ನಮ್ಮ ಇಂಡಿಯಾದಾಗ ಹೆಂಗ ವರ್ಷಗಟ್ಟಲೇ ಒಂದಿಲ್ಲಾ ಒಂದ ಹಬ್ಬ ಇದ್ದ ಇರತಾವಲಾ ಹಂಗ ಈ ವೆಸ್ಟರ್ನ ದೇಶದಾಗ ದಿವಸಾ ಒಂದ ಇಲ್ಲಾ ಒಂದ ಡೇ ಇದ್ದ ಇರತದ. ಹಂತಾದರಾಗ ಇದೊಂದ ’ಬ್ಲೇಮ ಸಮಒನ್ ಎಲ್ಸ್ ಡೇ’. ಅಂದರ ನಾವ ತಪ್ಪ ಮಾಡಿ ಮತ್ತೊಬ್ಬರ ಮ್ಯಾಲೆ ಹಾಕೋದು.
ಹಂಗ ವೆಸ್ಟರ್ನ ಕಂಟ್ರೀಜ್ ಇದನ್ನ ವರ್ಷಕ್ಕೊಮ್ಮೆ ಇಷ್ಟ ಮಾಡ್ತಾರ ಆದರ ನನ್ನ ಹೆಂಡತಿ ದಿವಸಾ ಮಾಡ್ತಾಳ ಇಷ್ಟ ಫರಕ ಬಿಡ್ರಿ.
ಈ ’ಬ್ಲೇಮ ಸಮಒನ್ ಎಲ್ಸ್ ಡೇ’ನ ಪ್ರತಿ ವರ್ಷ first ’friday the 13th’ ಅಂದರ ಯಾವ ಮೊದಲ್ನೇ ಶುಕ್ರವಾರ ಹದಿಮೂರನೇ ತಾರೀಖ ಬಂದಿರ್ತದ ಅವತ್ತ ಆಚರಸ್ತಾರ. ನಾ ಹೇಳಿದ್ದ ಖರೇನ ಮತ್ತ, ನೀವೇಲ್ಲರ ಈ ಮಗಾ ತನಗ ತಿಳದಿದ್ದ ಡೇ ಹುಟ್ಟಸ್ತಾನ ಅಂತ ನನ್ನ ಬ್ಲೇಮ ಮಾಡಿಗೀಡಿರಿ. ಹಂಗ ನಾ ಬರದಿದ್ದ ಸುಳ್ಳ ಇತ್ತಂದರ ನೀವು ಪಬ್ಲಿಷರಗ ಬ್ಲೇಮ ಮಾಡ್ರಿ, ನನಗಲ್ಲ ಮತ್ತ.
ಹಾಂ. ಅಕಸ್ಮಾತ ನೀವು ಈ ಆರ್ಟಿಕಲ ಓದಿ ಕಮೆಂಟ ಏನರ ಬರಿಲಿಲ್ಲಾಂದ್ರ ನಾ ಮಾತ್ರ ನಿಮಗ ಬ್ಲೇಮ ಮಾಡ್ತೇನಿ ನೆನಪಿಡ್ರಿ.