ಮೊನ್ನೆ ನಮ್ಮ ಮಾಮಾನ ಮಗನ ಮದುವಿ ಇತ್ತು, ಪಾಪ ಹೆಣ್ಣಿನವರು ಬೆಂಗಳೂರ ಕಡೆದವರ ಆದರೂ ನಮ್ಮ ಬಳಗೇಲ್ಲಾ ಇಲ್ಲೆ ಹುಬ್ಬಳ್ಳ್ಯಾಗ ಅದ ಅಂತ ಇಲ್ಲೆ ಬಂದ ಮದುವಿ ಮಾಡಿ ಕೊಟ್ಟರು. ಮರದಿವಸ ನಮ್ಮ ಮಾಮಾನ ಮನ್ಯಾಗ ಹಗಲ ಹೊತ್ತಿನಾಗ ಸತ್ಯನಾರಾಯಣ ಪೂಜಾ ರಾತ್ರಿ ಮದ್ವಿ ಆದ ಹುಡಗರದ ಪ್ರಸ್ಥದ್ದ ವ್ಯವಸ್ಥಾ ಇತ್ತ.
ಮಧ್ಯಾಹ್ನ ಸತ್ಯನಾರಾಯಣ ಪೂಜಾದ್ದ ಊಟಾ ಹೊಡದ ಎಲ್ಲಾರು ಹೊಸ್ದಾಗಿ ಲಗ್ನಾದ ಹುಡಗಾ ಹುಡಗಿನ್ನ ಹಿಡ್ಕೊಂಡ ಹರಟಿ ಹೊಡ್ಕೋತ ಕೂತಿದ್ವಿ. ಒಮ್ಮಿಂದೊಮ್ಮೆಲೆ ನಮ್ಮ ಮಾಮಿ ತಂಗಿಗೆ ಏನ ನೆನಪಾತೋ ಏನೋ ಅಕಿ ಲಗ್ನಾದ ಹುಡಗಿಗೆ
“ಏ, ನೀ ಏನ್ ಲಗ್ನಾಗಿ ಇಪ್ಪತ್ತನಾಲ್ಕ ತಾಸ ಆದರೂ ಇನ್ನೂ ಗಂಡನ ಹೆಸರ ಹೇಳಲೇ ಇಲ್ಲಲಾ, ನಿಮ್ಮವ್ವ ನಿನಗ ಒಗಟ-ಗಿಗಟ ಕಲಿಸ್ಯಾಳೊ ಇಲ್ಲೊ, ಎಲ್ಲೆ ನೋಡೋಣ ಒಗಟ ಹಚ್ಚಿ ನಿನ್ನ ಗಂಡನ್ನ ಹೆಸರ ಹೇಳ” ಅಂತ ಗಂಟ ಬಿದ್ಲು.
ಪಾಪ, ಆ ಹುಡಗಿ ನೋಡಿದ್ರ ರಾತ್ರಿ ಪ್ರಸ್ಥದ್ದ ಟೆನ್ಶನದಾಗ ಇದ್ಲು, ಹಂತಾಕಿಗೆ ಇಕಿ ಏನರ ಫಸ್ಟ ನೈಟದ ಟಿಪ್ಸ ಕೊಟ್ಟ ಧೈರ್ಯಾ ತುಂಬೋದ ಬಿಟ್ಟ ಒಗಟ-ಪಗಟ ಕೇಳಿದರ ಪಾಪ ಅಕಿ ಏನ ಹೇಳಬೇಕ. ಅದರಾಗ ಆ ಹುಡಗಿ ಅಂತೂ ಬೆಂಗಳೂರಾಗ ಹುಟ್ಟಿ ಬೆಳದದ್ದು ಅದಕ್ಕ ಒಗಟ ಹಚ್ಚಿ ಗಂಡನ ಹೆಸರ ಹೇಳೋ ಪದ್ಧತಿನ ಗೊತ್ತ ಇದ್ದಿದ್ದಿಲ್ಲಾ.
ಅಕಿ ಒಗಟ ಹಚ್ಚಿ ಹೆಸರ ಹೇಳ ಅಂದರ ಗಾಬರಿ ಆಗಿ
“ಏನ ಹಚ್ಚಿ ಹೇಳಬೇಕು,ಯಾರ ಹೆಸರ ಹೇಳ್ಬೇಕು” ಅಂತ ಒಂದ ಮೂರ ಸರತೆ ಕೇಳಿದ್ಲು.
ಕಡಿಕೆ ಅಕಿಗೆ ಒಗಟ ಅಂದರ ಏನು ಅಂತ ಹೇಳಿ ಕೊಡಲಿಕ್ಕೆ ನಮ್ಮ ಮಾಮಿ ತಂಗಿನ ತನ್ನ ಗಂಡನ್ನ ಹೆಸರ ಒಗಟ ಹಚ್ಚಿ
“ತದಿಗಿ ಬಿದಿಗಿ ಲಗ್ನ
ಕುಳ್ಳು ಕಟಗಿ ದಿಬ್ಣ
ಸಿದಿಗೆ ಮೇಲೆ ನಿಂತು ಸಲಾಂ ತಗೊತಾರ ಪ್ರದ್ಯುಮ್ನಾಚಾರ್ರು….” ಅಂತ ತನ್ನ ಗಂಡನ ಹೆಸರ ಹೇಳಿದ್ಲು.
ಅದೇನ ಆಗಿತ್ತಂದರ ಅಕಿಗೆ ಮತ್ತ ಅಕಿ ಗಂಡ ಪ್ರದ್ಯುಮ್ನಾಚಾರ್ಯರಿಗೆ ಲಗ್ನ ಟೈಮ ಒಳಗ ಒಂದ ಹೈದಿನೈದ ವರ್ಷ ಫರಕ ಇತ್ತಂತ, ಅದಕ್ಕ ಇಕಿ ’ಗಂಡ ಭಾಳ ವಯಸ್ಸಾದಂವಾ, ಇವತ್ತ ನಾಳೆ ಅನ್ನೊಹಂಗ ಇದ್ದಾನ’ ಅಂತ ಈ ಪರಿ ಒಗಟ ಕಟ್ಟಿ ಹೆಸರ ಆವಾಗ ಹೇಳತಿದ್ಲಂತ, ಇವತ್ತಿಗೂ ಯಾರರ ಗಂಡನ ಹೆಸರ ಹೇಳಂದರ ಅದ ಒಗಟ ಹೇಳ್ತಾಳ. ಹಂಗ ಇವತ್ತು ಅಕಿಗೂ ಅಕಿ ಗಂಡಗೂ ಹದಿನೈದ ವರ್ಷನ ಫರಕ ಇರೋದ, ಆದರ ಪ್ರದ್ಯುಮ್ನಾಚಾರ್ಯರು ಇನ್ನು ತಮ್ಮ ಕಾಲ ಮ್ಯಾಲೆ ತಾವ ನಿಲ್ಲತಾರ. ಆದ್ರ ಇಕಿಗೆ ಮಣಕಾಲ ಹಿಡದ ಕೂತ್ರ ಏಳಲಿಕ್ಕೆ ಬರಂಗಿಲ್ಲಾ, ಎದ್ದರ ಕೂಡಲಿಕ್ಕೆ ಬರಂಗಿಲ್ಲಾ ಅನ್ನೊಹಂಗ ಆಗೇದ.
ಇಕಿ ಒಗಟ ಹೇಳಿದ್ದ ಕೇಳಿ ಎಲ್ಲಾರು ನಗಲಿಕ್ಕೆ ಹತ್ತಿದರು. ಹಿರೇಮನಷ್ಯಾಳಾಗಿ ಹೆಂತಾ ಒಗಟ ಹೇಳ್ತೀವಾ ಅಂತ ಬಯ್ಯೋರ ಬೈದರ. ಆಮ್ಯಾಲೆ ಹಿಂಗ ಒಬ್ಬೊಬ್ಬರ ಅಗದಿ ಕಾಂಪಿಟೇಶನ್ ಮ್ಯಾಲೆ ಒಗಟ ಹೇಳಲಿಕ್ಕೆ ಶುರು ಮಾಡಿದರು.
ನಮ್ಮ ವಾಮನ ಮಾಮಾನ ಹೆಂಡ್ತಿ
“ಮುಂಜಾನೆ ಎದ್ದು ಕೂಗೂವದು ಕೋಳಿ,
ನಮ್ಮ ವಾಮನ ರಾಯರಿಂದ ಬರುವದು ಕೆಟ್ಟ ಗಾಳಿ” ಅಂತ ಒಗಟ ಹೇಳಿದ್ಲು.
ವಾಮನ ಮಾಮಾಗ ಎಲ್ಲೆ ಬೇಕ ಅಲ್ಲೇ ಭಿಡೆ ಬಿಟ್ಟ ಗಾಳಿ (ಹೂಂಸ) ಬಿಡೋ ಚಟಾ ಇತ್ತ. ಹಂಗ ಅವನ ಜೊತಿ ನಾಲ್ಕ ಮಂದಿ ಇದ್ದಾಗ ಯಾರ ಗಾಳಿ ಬಿಟ್ಟರು ನಮಗ ಅವನ ಗಾಳಿ ಬಿಟ್ಟೋಂವ ಅಂತ ಗ್ಯಾರಂಟಿ ಇರ್ತಿತ್ತ. ಹಿಂಗ ಹೆಂಡ್ತಿ ಎಲ್ಲಾರ ಮುಂದ ಅವನ ಮರ್ಯಾದಿ ಕಳದರು ಅಂವಾ ಏನ ತಪ್ಪ ತಿಳ್ಕೊಳಿಲ್ಲಾ, ಅಕಿ ಕಡೆ ಬೆನ್ನ ಮಾಡಿ ಒಂದ ರೌಂಡ ಜೋರಾಗಿ ಗಾಳಿ ಬಿಟ್ಟ ಬಿಟ್ಟಾ. ಅಂವಾ ಏನಿಲ್ಲದ ಗಾಳಿ ಬಿಡೊಂವಾ ಇನ್ನ ಮಧ್ಯಾಹ್ನ ಊಟದಾಗ ಮೂರ ಸಲಾ ಭಜಿ ಹಾಕಿಸಿಕೊಂಡ ಎರಡ ಕರಗೆಡಬ ಹೊಡದಿದ್ದಾ ಹೆಂಗ ಸುಮ್ಮನ ಕೂಡತಾನ. ಅವನ ಹೆಂಡ್ತಿ ’ಥೂ, ಮ್ಯಾನ್ನರ್ಸ್ ಇಲ್ಲಾ ಏನ ಇಲ್ಲಾ ಅಂತ’ ಸೀರಿ ಸೆರಗ ಮೂಗಿಗೆ ಹಿಡ್ಕೊಂಡ ಅಲ್ಲಿಂದ ಎದ್ದ ಹೋದ್ಲ. ಮುಂದ ವಾತವರಣ ತಿಳಿ ಆಗಲಿಕ್ಕೆ ಒಂದ ಹತ್ತ ನಿಮಿಷ ಹಿಡಿತ, ಆಮ್ಯಾಲೆ ಮತ್ತ ಒಗಟಿನ ಕಾರ್ಯಕ್ರಮ ಶುರು ಆತ.
ಅಷ್ಟರಾಗ ನನ್ನ ಹೆಂಡತಿ ಸುಮ್ಮನ ಕೂಡಬೇಕೊ ಬ್ಯಾಡೋ ತಾನು ಹಿರೇಮನಷ್ಯಾರಗತೆ ನಡಕ ಬಾಯಿ ಹಾಕಿ
“ಆಡ ಮುಟ್ಟಲಾರದ್ದ ತೊಪ್ಪಲ ಇಲ್ಲಾ,
ನನ್ನ ಗಂಡ ಪ್ರಶಾಂತ ಆಡೂರ ಮಾಡಲಾರದ್ದ ಚಟಾ ಇಲ್ಲಾ”
ಅಂತ ಅಂದ ಬಿಟ್ಳು..ತೊಗೊ ಎಲ್ಲಾರೂ ’ಏನಲೇ ಮಗನ ನಿನ್ನ ಹೆಂಡತೇನ ನಿನ್ನ ಮರ್ಯಾದಿ ಕಳಿಲಿಕ್ಕೆ ನಿಂತಾಳಲಾ’ ಅನ್ನಲಿಕತ್ತರು. ’ಲೇ, ಹೆಂಡಂದರ ಇರೋದ, ಗಂಡಂದರ ಮರ್ಯಾದಿ ಕಳಿಲಿಕ್ಕೆ ತೊಗೊ’ ಅಂತ ನಾ ಜೋರ ಮಾಡಿ, ನಾನರ ಯಾಕ ಅಕಿ ಕಡೆ ಅನಿಸಿಗೊಂಡ ಸುಮ್ಮನ ಕೂಡಬೇಕು ಅಂತ
“ಆಡು, ಆಡಿಗೆ ಎರಡ ಕೋಡ,
ನನ್ನ ಹೆಂಡತಿ ಪ್ರೇರಣಾ ಆಡೂರ ಭಾಳ ಕಾಡ” ಅಂತ ಒಗಟ ಹೇಳಿದೆ. ಜನಾ ಚಪ್ಪಾಳಿ ಹೊಡಿಲಿಕತ್ತರು.
ಮುಂದ ನಮ್ಮ ಕಸೀನನ ಹೆಂಡತಿ ತಾನು ಉಮೇದಿಲೆ
“ಎಡಕ್ಕ ಹೋದರ ಡಂಬಳ..
ಬಲಕ್ಕ ಹೋದರ ಹೊಂಬಳ
ನನ್ನ ಗಂಡ ಶೇಖರನ ಮುಗಿನ್ಯಾಗ ಯಾವಗಲು ಸುಂಬಳ” ಅಂದ್ಲು.
ನಮ್ಮ ಶೇಖರ ಡಂಬಳ ಹುಡಗಾ, ಅಂವಾ ಮಾಡ್ಕೊಂಡಿದ ಹೊಂಬಳದ್ದ ಹುಡಗಿನ್ನ, ಅದರಾಗ ಅವನ ಮೂಗ ಹನ್ನೇರಡ ತಿಂಗಳು ಹರಿತಿತ್ತ, ಹಿಂಗಾಗಿ ಅವನ ಹೆಂಡತಿ ಈ ಪರಿ ಒಗಟ ಕಟ್ಟಿ ಹೇಳಿದ್ಲು. ಇನ್ನ ಅಂವಾ ಏನರ ಅಕಿಗೆ ನನ್ನಂಗ ತಿರಗಿ ಉತ್ತರ ಕೊಡ್ತಾನೇನು ಅಂತ ನೋಡಿದ್ರ ಅಂವಾ ಸುಂಬಳಾ ತಗಿಲಿಕ್ಕೆ ಬಚ್ಚಲಕ್ಕ ಎದ್ದ ಹೋಗಿ ಬಿಟ್ಟ.
ಮುಂದ ಹಿಂಗ ಒಬ್ಬೊಬ್ಬರದ ಒಂದೊಂದ ಮಜಾ-ಮಜಾ ಒಗಟ ಹೊರಗ ಬರಲಿಕತ್ವು. ಲಗ್ನಾಗಿ ಮುವತ್ತ- ನಲವತ್ತ ವರ್ಷ ಆದೋರು ಒಗಟ ಕಟ್ಟಿ ತಮ್ಮ ತಮ್ಮ ಗಂಡಂದರದ, ಹೆಂಡಂದರದ ಹೆಸರ ಹೇಳಲಿಕತ್ತರು. ತಾವ ಹೇಳೊ ಒಗಟಿನ ಗದ್ಲದಾಗ ಆ ಹೊಸ್ದಾಗಿ ಲಗ್ನ ಆದವರನ ಮರತ ಬಿಟ್ಟಿದ್ದಿರು. ಅವರಿಬ್ಬರು ಆಜು-ಬಾಜು ಕೂತಲ್ಲೇ ಮುಟ್ಟಾಟ ಆಡಲಿಕತ್ತಿದ್ದರು, ಅದರಾಗ ಅವರದ ರಾತ್ರಿ ಫಸ್ಟ ನೈಟ ಬ್ಯಾರೆ ಇತ್ತ ಹಿಂಗಾಗಿ ನೆಟ್ ಪ್ರಾಕ್ಟೀಸ ಶುರು ಮಾಡಿದ್ದರು.
ಅಷ್ಟರಾಗ ನಮ್ಮ ಮಾಮಿನೂ ಒಂದ ಒಗಟ ಹೇಳೆ ಬಿಟ್ಟಳು. ಹೇಳಿ ಕೇಳಿ ಹಿರೇಮನಷ್ಯಾಳು, ಅದರಾಗ ಮಗನ ಮದುವಿ ಮಾಡಿ ಸೊಸಿ ಬಂದ ಒಂದ ದಿವಸದಾಗ ಮಾರಿ ಮ್ಯಾಲಿನ ಕಳೆನ ಚೆಂಜ್ ಆಗಿತ್ತ, ಇನ್ನ ಒಗಟ ಹೇಳಲಾರದ ಬಿಡ್ತಾಳ
“ಗಚ್ಚಿನ ತುಳಸಿಕಟ್ಟಿ,
ಮುತ್ತಿನ ವೃಂದಾವನ
ಬಚ್ಚ ಬಾಯಿ ಭಾಗಿರಥೀ ಹೊಟ್ಟ್ಯಾಗ ಹುಟ್ಟ್ಯಾರ ಭಾಲಚಂದ್ರ ರಾಯರು”
ಅಂತ ಹೇಳಿದ್ಲು. ಏನೊ ಅಕಿ ಪುಣ್ಯಾ ಬಚ್ಚ ಬಾಯಿ ಭಾಗಿರಥಿ ಅಂದ್ರ ಅವರತ್ತಿ ಅದನ್ನ ಕೇಳಲಿಕ್ಕೆ ಜೀವಂತಿಲ್ಲಾ ಛಲೋ ಆತ.
ಈ ಒಗಟ ಹೇಳೊ ಸಂಭ್ರಮ ಹಂಗ ಮುಂದ ವರಿತ ಲಗ್ನಾದ ಹೊಸ್ತಾಗಿ ಒಗಟ ಹೇಳಂದ್ರ ಹೇಳಲಿಕ್ಕೆ ನಾಚಗೊಂಡವರೇಲ್ಲಾ ಒಗಟ ಹೇಳಲಿಕತ್ತರು. ಮುಂದ ನಮ್ಮ ಮಾಮಿ ನಿಗೆಣ್ಣಿ ’ದುರ್ಗಾ’ಮಾಮಿ ’ಏ ನಾನೂ ಒಗಟ ಹೇಳ್ತೇನಿ’ ಅಂತ ತನ್ನ ಒಗಟ ಶುರು ಮಾಡಿದ್ಲು
“ಶ್ರೀಹರಿಯು ನರಸಿಂಹ ಅವತಾರದಲ್ಲಿ
ಸಂಹಾರ ಮಾಡಿದ್ದು ಹಿರಣ್ಯಕಶ್ಯಪನನ್ನು…
ಶ್ರೀಲಕ್ಷ್ಮೀಯು ದುರ್ಗಾವತಾರದಲ್ಲಿ
ವರಸಿ ಸಂಸಾರ ಹುಡಿದ್ದು ಈ ಕಿಟ್ಟಪ್ಪನನ್ನು..” ಅಂತ ಹೇಳಿದ್ಲು.
ನಮ್ಮ ದುರ್ಗಾ ಮಾಮಿ ಗಂಡ ಕಿಟ್ಟಪ್ಪ ಕಣ್ಣ ತಕ್ಕೊಂಡ ಅಕಿ ಹೇಳೊದನ್ನ ಕೇಳಿ ಹಣಿ-ಹಣಿ ಬಡ್ಕೊಂಡ.
“ಲೇ, ಮುದಕಿ ಆದಿ ಇನ್ನೇನ ತಲಿ ಒಗಟ ಹೇಳ್ತಿ, ಆ ಹೊಸ್ತಾಗಿ ಲಗ್ನಾದವರಿಗೆ ಒಗಟ ಹೇಳಸೋದ ಬಿಟ್ಟ, ತಾವ ಒಗಟ ಹೇಳ್ಕೊತ ಕೂತ ಬಿಟ್ಟಾರ” ಅಂತ ಬೈಲಿ ಕತ್ತರು.
ಆವಾಗ ಮತ್ತ ಎಲ್ಲಾರಿಗೂ ಹೊಸಾ ಹುಡಗಿದ ನೆನಪಾತ.
ಅಲ್ಲಿ ತನಕ ಮದುಮಗಳ ಎಲ್ಲಾರದು ಒಗಟ ಕೇಳ್ಕೋತ ಬಾಜುಕ ಗಂಡನ್ನ ಜೊತಿ ಮಜಾ ಮಾಡ್ಕೋತ ಕೂತಿದ್ಲು, ಮತ್ತ ಅಕಿ ಮ್ಯಾಲೆ ಬಂದ ಕೂಡಲೇ ತಲಿ ಕೆಟ್ಟ ಇನ್ನ ಇವರ ಒಗಟ ಹೇಳಲಿಲ್ಲಾ ಅಂದರ ಬಿಡಂಗಿಲ್ಲಾ ಅಂತ ಎದ್ದ ನಿಂತ ಭಡಾ ಭಡಾ
“ಅಮವಾಸಿ ಕತ್ಲಿ,
ಬಿಳೀ ಜ್ವಾಳಾ ಬಿತ್ಲಿ
ನನ್ನ ಗಂಡ ’ಅಮ್ಯಾ’ನ್ನ ಹೆಸರ ಕೇಳೀದವರ ಹೆಣಾ ಎತ್ಲಿ”
ಅಂದೋಕಿನ ಓಡಿ ಬೆಡ್ ರೂಮಿನಾಗ ಹೊಕ್ಕ ಬಿಟ್ಟಳು.
ಏನ ಮಾಡ್ತೀರಿ, ಗಂಡನ್ನ ಹೆಸರ ಒಗಟ ಹಚ್ಚಿ ಹೇಳ ಅಂದ್ರ ಈ ಪರಿ ಹೇಳೋದ ಎಲ್ಲೇರ, ಅದು ಲಗ್ನಾಗಿ ಮೂವತ್ತ ತಾಸಿನಾಗ….
ಅಲ್ಲಾ ಯಾ ಮನೆತನದಾಗ ಹಿರೇಮನಷ್ಯಾರs ಈ ಪರಿ ಒಗಟ ಹಚ್ಚಿ ಗಂಡನ್ನ ಹೆಸರ ಹೇಳ್ತಾರಂದ್ರ ಅಕಿ ಮತ್ತ ಈ ಮನಿ ಸೊಸಿ ಆದೋಕಿ, ಬರೋಬ್ಬರಿ ಹೇಳ್ಯಾಳೊ ತೊಗೊ ಅಂತ ಎಲ್ಲಾರೂ ಅವರ ಮನ್ಯಾಗ ಸಂಜಿ ಚಹಾ ಕುಡದ ನಮ್ಮ ಮನಿ ಹಾದಿ ಹಿಡದ್ವಿ.
ಆದ್ರೂ ಏನ ಅನ್ನರಿ ಹಿಂತಾ ಪದ್ಧತಿ ಎಲ್ಲಾ ಬರಬರತ ಮಾಯ ಆಗಲಿಕತ್ತವಾ ಅನಸ್ತದ. ನಾವ ನಮ್ಮ ಹಳೇ ಪದ್ಧತಿ, ಸಂಪ್ರದಾಯ ಮರಿಲಾರದ ಅವನ್ನ ಕಾಲಕ್ಕ ತಕ್ಕಂಗ ಒಂದ ಸ್ವಲ್ಪ ತಿದ್ದಕೊಂಡ ಅವನ್ನು ಎಂಜಾಯ ಮಾಡಬೇಕು ಅನ್ನೋದ ನನ್ನ ವಿಚಾರ.
ನೀವ ಏನಂತರಿ..ಹೌದಲ್ಲ ಮತ್ತ…ಹೌದ ಅನ್ನೋರ ನಿಮ್ಮ ಮನೆಯವರ ಹೆಸರ ಒಗಟ ಹಚ್ಚಿ ಹೇಳಿ ನನಗೊಂದ ಪತ್ರಾ ಬರೀರಿ ನೋಡೊಣ.