ನಾ ಮನಿಗೆ ಹೊಟ್ಟಿ ಹಸಗೊಂಡ ಬಂದ
“ಅವ್ವಾ, ಲಗೂನ ತಾಟ ಹಾಕ. ನಂಗ ಹೊಟ್ಟಿ ಭಾಳ ಹಸ್ತದ” ಅಂದರ ನಮ್ಮವ್ವ
“ಒಂದ ಹತ್ತ ನಿಮಿಷ ತಡಿ, ಅನ್ನ ಆಗೇದ ತವಿಗೊಂದ ಒಗ್ಗರಣಿ ಹಾಕಿದರ ಮುಗದ ಹೋತ” ಅನ್ನೋಕಿ.
ಇದ ದಿವಸಾ ಮಧ್ಯಾಹ್ನದ ಕಥಿ. ನಾ ಹೊಟ್ಟಿ ಹಸಗೊಂಡ ಬಂದರ ಒಂದ ದಿವಸ ಸಾರ ಮಳ್ಳಲಿಕತ್ತದ ತಡಿ ಮತ್ತೊಂದ ದಿವಸ ಹುಳಿ ಕುದಿಲಿಕ್ಕತ್ತದ ತಡಿ ಅನ್ನೋಕಿ. ಆಮ್ಯಾಲೆ ನಾ
“ಯಾಕ ನಾ ಬರೋಕಿಂತ ಮೊದ್ಲ ಮಾಡಲಿಕ್ಕೆ ಬರಂಗಿಲ್ಲೇನ” ಅಂದರ
“ಒಂದ ಹತ್ತ ನಿಮಿಷ ತಡಿಯೋ, ಕುದರಿ ಏರೆ ಬರ್ತಿ ನೋಡ. ಒಗ್ಗರಣಿ ಡಬ್ಬಿ ಮುಗಿಲಿಕ್ಕೆ ಬಂದದ ತಡಿ” ಅನ್ನೋಕಿ.
ಒಗ್ಗರಣಿ ಡಬ್ಬಿ ಮುಗಿಲಿಕ್ಕೆ ಬಂದದಂತ? ಯಾರದರ ಮನ್ಯಾಗ ಒಗ್ಗರಣಿ ಮುಗಿಯೋದ ಕೇಳಿರೇನ? ನಮ್ಮ ಮನ್ಯಾಗ ದಿವಸಾ ಮುಗಿತದ.
ಇಕಿ ಹತ್ತ ನಿಮಿಷ ತಡಿ ಅಂದಿದ್ದ ತವಿಗೆ ಒಗ್ಗರಣಿ ಹಾಕಲಿಕ್ಕೆ ಅಲ್ಲಾ. ಆ ‘ಝಿ ಕನ್ನಡಾ’ ಟಿ.ವಿ. ಒಳಗಿನ ಒಗ್ಗರಣಿ ಡಬ್ಬಿ ಧಾರವಾಹಿ ಮುಗಿಸಿ ಆಮ್ಯಾಲೆ ತವಿಗೆ ಒಗ್ಗರಣಿ ಹಾಕಲಿಕ್ಕೆ. ದಿನಂ ಪ್ರತಿ ಇದ ಹಣೇಬರಹ, ಕರೆಕ್ಟ ನಾ ಮನಿಗೆ ಮಧ್ಯಾಹ್ನ ಬರೋದಕ್ಕು ಆ ಒಗ್ಗರಣಿ ಡಬ್ಬಿ ಧಾರವಾಹಿ ಮುಗಿಲಿಕ್ಕೆ ಬಂದಿರತದ. ನಮ್ಮವ್ವ ಅದನ್ನ ಮುಗಿಸಿನ ತವಿ ಇಲ್ಲಾ ಸಾರಿಗೆ ಒಗ್ಗರಣಿ ಹಾಕಲಿಕ್ಕೆ ಡಬ್ಬಿ ತಗೆಯೋಕಿ. ಯಾರರ ಮಂದಿ ನೋಡಿದರ ಪಾಪ ನಮ್ಮವ್ವಗ ಒಗ್ಗರಣಿ ಹಾಕಲಿಕ್ಕೆ ಬರಂಗಿಲ್ಲಾ, ಟಿ.ವಿ. ಒಳಗ ನೋಡೆ ಒಗ್ಗರಣಿ ಹಾಕತಾಳ ಅನ್ಕೋಬೇಕ.
ಹಂಗ ಅಕಸ್ಮಾತ ಏನರ ನಾ ಭಾಳ ಅವಸರಾ ಮಾಡೀದೆ ಅಂದ್ರ ಒಂದನೇ ಸರತೆ ಅನ್ನಕ್ಕ ಹಾಲು ಮಸರ ಹಾಕಿ ಬಿಡ್ತಾಳ. ಇನ್ನ ಆ ‘ಒಗ್ಗರಣಿ ಡಬ್ಬಿ’ ಒಳಗ ಏನರ ಇಂಟರಿಸ್ಟಿಂಗ ಐಟೆಮ್ ಇದ್ದರ ಮುಗದಹೋತ ಅಕಿ ಮಾಡಿದ್ದ ಭಜ್ಜಿ, ಪಲ್ಯಾ ಫ್ರಿಡ್ಜನಾಗ ಹಂಗ ಇರತಾವ, ಉಟಕ್ಕ ಬಡಸೋದ ಹಾಕೋದ ಮರತ ಬಿಟ್ಟಿರತಾಳ. ವಾರದಾಗ ಮೂರ ದಿವಸ ಮಾಡಿದ್ದ ಅಡಗಿ ಒಳಗ ಒಂದ್ಯಾರಡ ಬಡಸೋದ ಈ ಸುಡಗಾಡ ಧಾರಾವಾಹಿ ನೋಡೊದರಾಗ ಅಕಿ ಮರತ ಮರಿತಾಳ.
ನಮ್ಮಪ್ಪಗಂತು ಇದರ ಸಂಬಂಧ ಸಾಕ ಸಾಕಾಗಿ ಹೋಗೇದ. ದಿವಸಾ ಸಂಜಿಗೆ ಅಕಿ ಗ್ಯಾಸ ಮ್ಯಾಲೆ ಹಾಲಿಟ್ಟ ‘ಈ ಟಿ.ವಿ.’ ಮುಂದ ಕೂತ ‘ಚರಣದಾಸಿ’ ನೋಡೋಕಿ ಆಮ್ಯಾಲೆ ನಮ್ಮಪ್ಪಗ ಒದರಿ “ರ್ರಿ, ಹಾಲ ಉಕ್ಕತೇನ ನೋಡರಿ” ಅನ್ನೋಕಿ. ಪಾಪ ನಮ್ಮಪ್ಪ, ಎಷ್ಟ ಅಂದರು ಅಕಿ ಚರಣದಾಸಿ ಅಕಿ ಕೈ ಕಾಲಾಗಿನ ಕೆಲಸ ಮಾಡಬೇಕು ಅಂತ ಅವನ ಗ್ಯಾಸ ಬಂದ ಮಾಡಬೇಕು. ಹಂಗ ನಮ್ಮಪ್ಪನೂ ಏನರ ಆವಾಗ ಮನಿ ಒಳಗ ಇರಲಿಲ್ಲಾ ಅಂದರ ಮರುದಿವಸ ಪುರಿ ಬಾಸುಂದಿ ಗ್ಯಾರಂಟೀ.
ಇವತ್ತ ಯಾಕ ಬಾಸುಂದಿ, ಯಾರದ ಹುಟ್ಟಿದ ಹಬ್ಬ ಅಂದರ “ಭಾಳ ದಿವಸ ಆಗಿತ್ತ ಸಿಹಿ ಮಾಡಿದ್ದಿಲ್ಲಾ” ಅನ್ನೋಕಿ. ಅದ ಖರೇ ಅಂದರ ಹಿಂದಿನ ದಿವಸ ಅಕಿ ಚರಣದಾಸಿ ನೋಡೊ ಗದ್ಲದಾಗ ಹಾಲ ಮಳ್ಳಿ-ಮಳ್ಳಿ ಅಟ್ಟಿಸಿರತದಲಾ ಅದನ್ನ ಬಾಸುಂದಿ ಮಾಡಿರತಾಳ.
ಇನ್ನ ನಮ್ಮವ್ವ ರಾತ್ರಿ ಕುಕ್ಕರ ಹಿಂಗ ಅಡ್ಜಸ್ಟ ಮಾಡಿ ಇಡತಾಳಲಾ ಅದ ಸಹಿತ ನಮ್ಮವ್ವಗ ಹೆದರಿ ಕರೆಕ್ಟ ಟಿ.ವಿ. ಒಳಗ ಕಮರ್ಶಿಯಲ್ ಬ್ರೇಕ್ ಬಂದಾಗ ಸಿಟಿ ಹೊಡಿತದ. ಇನ್ನ ನಾಲ್ಕ ಸಿಟಿ ಆದ ಮ್ಯಾಲೆ ಕುಕ್ಕರ ಆರಸಲಕ್ಕಿ ಮತ್ತ ನಮ್ಮಪ್ಪನ ಬರಬೇಕ, ಇಲ್ಲಾಂದರ ಮುಂದಿನ ಕಮರ್ಶಿಯಲ್ ಬ್ರೇಕ ಬರೋತನಕ ಅದ ಹಂಗ ಸೀಟಿ ಹೊಡ್ಕೋತ ಇರತದ. ಹಿಂಗಾಗಿ ಕೆಲವೊಮ್ಮೆ ಅನ್ನ ಅನ್ನೋದ ಅಂಬಲಿ ಆಗಿರತದ.
ಆ ಅನ್ನಾ ನೋಡಿ ನಮ್ಮಪ್ಪ ಏನರ “ಇದೇನಲೇ ಅನ್ನನೋ ಗಂಜಿನೋ” ಅಂದರ
“ಏನಾತ ಸುಮ್ಮನ ಗುಳು ಗುಳು ನುಂಗರಿ.ಬಿಸಿ,ಬಿಸಿ ಮೆತ್ತಗ ಮಾಡಿ ಹಾಕಿದರ ಎಷ್ಟ ಹೆಸರ ಇಡತೀರಿ” ಅಂತಾಳ.
ಮೊನ್ನೆ ಒಮ್ಮಿಂದೊಮ್ಮಿಲೆ ನನಗ
“ನಿನ್ನ ಮಗನ ಮುಂಜವಿಗೆ ಮೊನ್ನೆ ಮದುವಿ ಒಳಗ ಅಮೃತಾ ಉಟಗೊಂಡಿದ್ಲಲಾ ಹಂತಾ ಸೀರಿ ಕೊಡಸು” ಅಂದ್ಲು. ನಾ “ಯಾ ಮದುವಿ ಒಳಗ ಅಮೃತಾನ ಸೀರಿ ನೋಡಿದಿವಾ, ಹಂತಾದ ಏನ ಅದ ಅದರಾಗ” ಅಂದರ
“ಅಕಿ ಮೈದನನ ಮದುವಿ ಒಳಗ, ಜರಿ ಅಂಚಿಂದ ಇಳಕಲ್ ಸಿರಿ ಉಟ್ಟಿದ್ಲಲಾ” ಅಂದ್ಲು.
ನಾ ಅಕಿ ಮೈದನಂದ ಯಾವಾಗ ಮದುವಿ ಆತು ಅಂವಾ ನೋಡಿದರ ಒಂದ ಹತ್ತ ದಿವಸದ ಹಿಂದನ ರವಿ ಆಚಾರ್ಯ ಕಡೇ ‘ ಕುಂಡ್ಲಿ ನೋಡಿ ಏನರ ದೋಷ ಅದ ಏನ ಹೇಳರಿ, ೩೩ ವಯಸ್ಸ ಆದರು ಕನ್ಯಾ ಸಿಗವಲ್ತು’ ಅಂತ ಬಂದಿದ್ದಾ ಅಂತ ವಿಚಾರ ಮಾಡಲಿಕತ್ತೆ
“ಅವಂದೇಲ್ಲ್ ಮದುವಿ ಆಗೇದ, ಅವಂಗ ಯಾರ ಕನ್ಯಾ ಕೊಟ್ಟರು?” ಅಂದರ
“ಅಯ್ಯ ಹೋದ ವಾರ ಚಿಂತಾಮಣಿ ಕನ್ಯಾದ ಜೊತಿ ಆಗೇದ” ಅಂದ್ಲು.
ಇವನ ಮದುವಿ ಆಗಿದ್ದ ನಂಗ ಹೆಂಗ ಗೊತ್ತಾಗಲಿಲ್ಲಾ ಅಂತ ನಾ ತಲಿ ಕೆಡಸಿಗೊಂಡ ವಿಚಾರ ಮಾಡಿದ ಮ್ಯಾಲೆ ಗೊತ್ತಾತು ಇಕಿ ಹೇಳಲಿಕತ್ತಿದ್ದ ಸುವರ್ಣಾ ಟಿ.ವಿ. ಒಳಗಿನ ‘ಅಮೃತ ವರ್ಷೀಣಿ’ ಬರತದ ಅಲಾ, ಆ ಅಮೃತಾನ ಬಗ್ಗೆ ಅಂತ. ನಾ ನಮ್ಮ ಮೌಶಿ ಮಗಳ ಒಬ್ಬೋಕಿ ಅಮೃತಾ ಅಂತ ಇದ್ದಾಳ, ಅಕಿ ಅಂತ ತಿಳ್ಕೊಂಡಿದ್ದೆ. ಏನ್ಮಾಡ್ತೀರಿ ?
ಹಿಂತಾವ ನಮ್ಮ ಮನ್ಯಾಗ ಭಾಳ ನಡಿತಿರ್ತಾವ, ಏನ ಮಾಡಲಿಕ್ಕೆ ಬರಂಗಿಲ್ಲಾ ಒಂದು ಸುಮ್ಮನ ಬಾಯಿ ಮುಚಗೊಂಡ ಅನುಭವಿಸಬೇಕು ಇಲ್ಲಾ ಆ ಸುಡಗಾಡ ಟಿ.ವಿ. ಗೆ ಹಣಿ-ಹಣಿ ಬಡ್ಕೊಂಡ ಒಂದ ತಲಿನರ ಒಡ್ಕೋಬೇಕು ಇಲ್ಲಾ ಟಿ.ವಿ. ನರ ಒಡಿಬೇಕು.