ನಾವ ಸಣ್ಣವರ ಇದ್ದಾಗಿನ ಮಾತ, ಆಗ ಮಳೆಗಾಲದಾಗ ಮಳೆ ಆಗಲಾರದ ಬರಗಾಲ ಬಂದ್ರ ಊರ ಹಿರಿಯಾರ ಕೂಡಿ ಕತ್ತೆ ಲಗ್ನ ಮಾಡಿ ಊರತುಂಬ ಮೆರವಣಗಿ ಮಾಡ್ತಿದ್ದರು. ಆ ಜೋಡ ಕತ್ತೆ ಹಿಂದ ನಮ್ಮಂತಾ ಒಂದ ಹತ್ತ ಹನ್ಯಾರಡ ಕತ್ತೆ ಕಾಯೋ ಹುಡ್ಗುರು ಓಡ್ಕೋತ ಹೋಗತಿದ್ವಿ. ಯಾರಿಗರ ದೊಡ್ಡವರಿಗೆ
“ಕತ್ತಿ ಲಗ್ನಾ ಮಾಡಿದರ ಮಳಿ ಹೆಂಗ ಬರತದ, ಕತ್ತಿ ಲಗ್ನಕ್ಕೂ ಮಳಿಗೂ ಏನ ಸಂಬಂಧ” ಅಂತ ಕೇಳಿದರ
“ಲೇ, ಹಂಗ ಕತ್ತಿ ಲಗ್ನಾ ಮಾಡಿದರ ಮಳಿ ಆಗ್ತದ ಅಂತ ಮೊದ್ಲಿಂದ ಪ್ರಥಾ ಅದ, ಅದಕ್ಕ ಮಾಡ್ತಾರ” ಅಂತ ಹೇಳಿ ನಮ್ಮ ಬಾಯಿ ಮುಚ್ಚಸ್ತಿದ್ದರು.
ಅಲ್ಲಾ, ಇಗ್ಯಾಕ ಈ ಕತ್ತೆ ಲಗ್ನದ ಬಗ್ಗೆ ನೆನಪಾತು ಅಂತ ಅಂದ್ರ ಮೊನ್ನೆ ಯುನೈಟೆಡ ಕಿಂಗಡಮ್ ಒಳಗ ಫ್ಲಡ್ ಬಂದಿತ್ತಲಾ ಆವಾಗ ಯುನೈಟೆಡ ಕಿಂಗಡಮ್ ಇಂಡಿಪೆಂಡೆಂಟ್ ಪಾರ್ಟಿ ಕೌನ್ಸೆಲ್ಲರ್ ಒಬ್ಬೊಂವಾ
’ ಗೆ ಮ್ಯಾರೇಜ್ ಮಾಡಿದ್ರ ಫ್ಲಡ್ (ಪ್ರವಾಹ) ಬರತದ…ಇವತ್ತ ನಮ್ಮ ಯು.ಕೆ ಒಳಗ ಪ್ಲಡ್ ಬರಲಿಕ್ಕೆ ’ಗೆ ಮ್ಯಾರೇಜ್’ (ಸಲಿಂಗ ಲಗ್ನ) ಕಾರಣ, ಹಿಂಗಾಗಿ ಈ “ಲಿಗಲೈಸೇಶನ್ ಆಫ್ ಗೆ ಮ್ಯಾರೇಜ ಇಜ್ ಇಲ್ಲಿಗಲ್”’ ಅಂತ ಸ್ಟೇಟಮೆಂಟ್ ಕೊಟ್ಟು ಎಲ್ಲಾರ ಕಡೆ ಛಿ..ಥೂ ಅನಿಸಿಕೊಂಡನಂತ.
ಏನ್ಮಾಡ್ತೀರಿ ನಮ್ಮ ಪೂರ್ವಜರ ಮಳೆ ಆಗಲಿ ಅಂತ ಕತ್ತೆ ಮದುವಿ ಮಾಡಿದರ ಯು.ಕೆ ಒಳಗ ’ಗೆ ಮ್ಯಾರೇಜ್’ ಮಾಡಿದ್ದಕ್ಕ ಬರೆ ಮಳಿ ಏನ ನೆರೆನ ಬಂತ ಅಂತ.
ಅಲ್ಲಾ ಹಂಗ ಆ ಕೌನ್ಸಿಲ್ಲರಗೆ ’ಗೆ ಮ್ಯಾರೇಜ’ಗೆ, ’ಹೊಮೊಸೆಕ್ಸೂವಾಲಿಟಿ’ಗೆ ವಿರೋಧ ಇರೋದ ಇರಬಹುದು ಅದಕ್ಕ ಅಂವಾ ’ಗೆ ಮ್ಯಾರೇಜ’ ಆದರ ಫ್ಲಡ್ ಬರತದ ಅಂತ ಅಂದಿರಬಹುದು. ಆದ್ರ ಅದನ್ನ ಕೇಳಿ ’ಗೆ’ ಜನಾ ಸುಮ್ಮನ ಇರ್ತಾರ? ಕಡಿಕೆ ಯು.ಕೆ ದಾಗ ಅದೊಂದ ದೊಡ್ಡ ಇಶ್ಯು ಆಗಿ ಅವನ್ನ ಪಾರ್ಟಿ ಇಂದ ಗೆಟ್ ಔಟ ಮಾಡಿದರಂತ.
ಆದರ ಇತ್ತಲಾಗ ವಿಜ್ಞಾನಿಗಳು ’ಗೆ ಮ್ಯಾರೇಜ’ಗೂ ಫ್ಲಡಗೂ ಏನರ ಸಂಬಂಧ ಅದನೋ ಏನೋ ನೋಡೊಣ ತಡಿ ಅಂತ ರಿಸರ್ಚ ಮಾಡಲಿಕತ್ತರು.
ಮಜಾ ಕೇಳ್ರಿ ಇಲ್ಲೆ… ಈ ಸೈಂಟಿಸ್ಟಗೊಳ ರಿಸರ್ಚ ಮಾಡಿದಂಗ ಮಾಡಿದಂಗ ’ಗೆ ಮ್ಯಾರೇಜ’ಗು ಈ ಫ್ಲಡಗೂ (ಪ್ರವಾಹಕ್ಕೂ) ಸಂಬಂಧ ಇದ್ದರು ಇರಬಹುದು ಅಂತ ಡೌಟ ಬರಲಿಕತ್ತು.
ಈಗ ನಾರ್ಮಲಿ ಫ್ಲಡ ಬರೋದ ನದಿ ತುಂಬಿ ಹರದಾಗ, ಇಲ್ಲಾ ಸಮುದ್ರ ಉಕ್ಕಿ ಹರದಾಗ, ಇನ್ನ ಹಂಗ ಆಗೋದ ಸಿಕ್ಕಾ ಪಟ್ಟೆ ಮಳೆ ಬಂದಾಗ. ಇನ್ನ ಈ ಮಳೆ ಅಂದರ ವಿಜ್ಞಾನದ ಪ್ರಕಾರ
’ವಾತಾವರಣದಲ್ಲಿರುವ ನೀರಾವಿಯು ತಂಪು ಪಡೆದುಕೊಂಡು ಮತ್ತೆ ದ್ರವರೂಪಕ್ಕೆ ಬಂದು ಭೂಮಿಯ ಮೇಲೆ ಬೀಳುವದು ಮಳೆ.’ ಇನ್ನ ಈ ಮಳೆ ಹುಟ್ಟೋದು
’ಸಮುದ್ರ, ಮಹಾಸಾಗರಗಳ ನೀರು ಆವಿಯಾಗಿ ಆಕಾಶ ತಲುಪಿ ಅಲ್ಲಿ ಮೋಡಗಳ ರೂಪದಲ್ಲಿ ಸಂಗ್ರಹವಾಗಿ. ಮುಂದ ಆ ಮೋಡಗಳ ಸಾಂದ್ರತೆ ಹೆಚ್ಚಿ ಮತ್ತ ಅಲ್ಲಿನ ವಾತಾವರಣ ತಂಪಾದಾಗ ಮೋಡಗಳ ತೇವಾಂಶ ಹನಿಗೂಡಿ ಮಳಿ ಆಗೋದ.’ ಇದನ್ನ ನಾವು ನೀವು ಎಲ್ಲಾ ಸಾಲ್ಯಾಗ ಕಲತ ಕಲತೇವಿ.
ಇನ್ನ ಈ ಮಳಿಗೂ ’ಗೆ ಮ್ಯಾರೇಜ’ಗು ಹೆಂಗ ಸಂಬಂಧ ಅನ್ನೋದನ್ನ ನೋಡ್ರಿ…
ಈಗ ಏನಿಲ್ಲದ ಮದುವಿ ಸೀಜನ ಒಳಗ ಗಂಡು-ಹೆಣ್ಣಿನ್ವು ಸಿಕ್ಕಾ ಪಟ್ಟೆ ಮದುವಿ ಆಗ್ತಾವ. ಇನ್ನ ಹಂತಾದರಾಗ ’ಗೆ ಮ್ಯಾರೇಜ’ ಲಿಗಲ್ ಅದ ಅಂದ್ರ ಮದ್ವಿ ಸಂಖ್ಯೆ ಇನ್ನು ಜಾಸ್ತಿ ಆಗ್ತಾವ. ಅದರಾಗ ಮತ್ತ ಸರ್ಕಾರಿ, ಸಾಮೂಹಿಕ ಮದ್ವಿ ಬ್ಯಾರೆ ಇರ್ತಾವ.
ಇನ್ನ ಮದ್ವಿ ಜಾಸ್ತಿ ಆದಂಗ ಜನಾ ಬರೋದು ಹೋಗೊದು, ಒಂದ ಕಡೆ ಸೇರೋದು ಜಾಸ್ತಿ ಆಗ್ತದ. ಇನ್ನ ಹೆಂಗ ಜನಾ ಸೇರತಾರ ಹಂಗ ಬಾಡಿ ಹೀಟ ಜಾಸ್ತಿ ಆಗಿ ವಾತಾವರಣ ವಾರ್ಮಿಂಗ ಆಗ್ತದ. ನಾ ಹೇಳಿದ್ದ ಜನಾ ಸೇರಿದಾಗ ಆಗೋ ವಾರ್ಮಿಂಗ ಮತ್ತ ಹಂಗ ಮದವಿ ಆಗೋರದ ಬಾಡಿ ಹೀಟ್ ಬ್ಯಾರೆ. ಇನ್ನ ಹಿಂಗ ಡೆವಲಪ್ ಆಗಿದ್ದ ಹೀಟ್ ವಾತಾವರಣದೊಳಗ ಹೋಗಿ ವಾಯುಮಾನದ ತಾಪಮಾನ ಜಾಸ್ತಿ ಮಾಡಿ ವಾರ್ಮ ಫ್ರಂಟ್ಸ್ ಕ್ರೀಯೇಟ್ ಮಾಡಿ, ಮೋಡದ ಸಾಂಧ್ರತೆ ಹೆಚ್ಚಿಸಿ ಮುಂದ ಮಳಿ ಬರಸ್ತಾವ.
ಆಮ್ಯಾಲೆ ಪ್ರತಿ ಮದ್ವಿ ಒಳಗ ಅಳೊದು- ಕರೇಯೋದು ಅಂತು ಇದ್ದ ಇರತದ. ಅದರಾಗ ’ಗೆ ಮ್ಯಾರೇಜ’ನಾಗ ಒಂದ ಸ್ವಲ್ಪ ಜಾಸ್ತಿನ ಅಳೊದ ಇರತದ, ಯಾಕಂದರ ನನ್ನ ಮಗಾ ’ಗೆ ಮ್ಯಾರೇಜ’ ಮಾಡ್ಕೊಂಡಾ ಅಂತ ಸಂಕಟಾ ಪಟ್ಟ ಒಂದ ಸ್ವಲ್ಪ ಜಾಸ್ತಿ ಅಳೋರು ಇರ್ತಾರ. ಇನ್ನ ಹಿಂಗ ಅತ್ತಾಗ ಜಾಸ್ತಿ ಕಣ್ಣಿರ ಬಂದ ಅವು ಎವಾಪರೇಟ್ ಆಗಿ ವಾತಾವರಣದಾಗ ನೀರಿನ ಅಂಶ ಜಾಸ್ತಿ ಮಾಡ್ತಾವ. ಅದು ಸಹಿತ ಮುಂದ ಮಳಿ ಆಗಿ ಮತ್ತ ಭೂಮಿಗೆ ವಾಪಸ ಬರ್ತದ.
ಇಷ್ಟ ಅಲ್ಲದ ಸಮಾಜದಾಗ ಹೊಮೊಸೆಕ್ಸೂವಾಲಿಟಿ ಕಂಡ್ರ ಆಗಲಾರದವರು ’ಗೆ ಮ್ಯಾರೇಜ್ ಗೆ ಧಿಕ್ಕಾರ’ ಅಂತ ಧರಣಿ ಮಾಡ್ತಾರ, ಇನ್ನ ’ಗೆ’ ಬೇಕಂದವರು ’ಗೆ ಮ್ಯಾರೇಜಗೆ ಜೈ’ ಅಂತ ಧರಣಿ ಮಾಡ್ತಾರ, ಹಿಂಗ ಹೂಯ್ಯಿ ಅಂತ ಮತ್ತ ಮಂದಿ ಸೇರಿ ವಾತಾವರಣ ಬಿಸಿ ಮಾಡಿ ಮಾಡಿ ಜಾಸ್ತಿ ಮಳಿ ಬರೋಹಂಗ ಮಾಡ್ತಾರ.
ಇನ್ನ ಹಿಂಗ ಮಳಿ ಜಾಸ್ತಿ ಆದರ ಫ್ಲಡ ಬರಲಾರದ ಏನ….ಬಂದ ಬರತದ..ಸಿಂಪಲ್!!!
ಈಗ ಹೇಳ್ರಿ ಪಾಪ ಆ ಕೌನ್ಸಿಲ್ಲರ್ ’ಗೆ ಮ್ಯಾರೇಜ’ ಆದರ ಫ್ಲಡ ಬರತದ ಅಂತ ಹೇಳಿದ್ದ ತಪ್ಪೊ ಖರೇನೋ?
ಈ ಲಾಜಿಕ್ ನಂದ ಅಲ್ಲಾ ಮತ್ತ, ವಿಜ್ಞಾನಿಗಳ ಕಂಡ ಹಿಡದದ್ದ.
ಅಲ್ಲಾ ನನಗ ’ಕತ್ತೆಗೆ ಮದ್ವಿ ಮಾಡಿದ್ರೆ ಮಳಿ ಬರತ್ತೆ’ ಅನ್ನೋದರ ಹಿಂದನೂ ಹಿಂತಾದ ಏನರ ಲಾಜಿಕ್, ಸೈನ್ಸ ಇರಬೇಕು ಅಂತ ಈಗ ಡೌಟ ಬರಲಿಕತ್ತದ. ನಾವ ಕತ್ತಿ ಮದ್ವಿ ಮಾಡಿದಾಗೂ ಊರ ಮಂದಿ ಸೇರಿ ಮೆರವಣಗಿ ಮಾಡ್ತೇವಿ, ಹಿಂಗಾಗಿ ಆವಾಗ ನಮ್ಮ ಬಾಡಿ ಹೀಟ ಜಾಸ್ತಿ ಆಗಿ ವಾತಾವರಣ ಬಿಸಿ ಆಗಿ ಮೋಡದ ಸಾಂದ್ರತೆ ಜಾಸ್ತಿ ಆಗಿ ಮಳಿ ಬಂದರು ಬರತದ ಕಾಣ್ತದ.
ಅಲ್ಲಾ, ಬರೇ ಮಳಿ ಬಂದರ ಸಾಕ್ರಿಪಾ, ಈ ಫ್ಲಡ್ ಬರೋದ ಏನಬ್ಯಾಡ. ಒಟ್ಟಾರೆ ಇದನ್ನೇಲ್ಲಾ ನೋಡಿದರ
’ಕತ್ತೆಗೆ ಮದ್ವಿ ಮಾಡಿದ್ರ ಮಳೆ ಬರತದ, ಗೆ ಮ್ಯಾರೇಜ್ ಮಾಡಿದ್ರ ಫ್ಲಡ್ ಬರತದ’ ಅಂತ ಅನಸ್ತದ.