ಕನ್ಯಾ ಉಳಿಸಿ……ಕನ್ಯಾ ಬೆಳಿಸಿ

ಜುಲೈ ೨, ೨೦೦೯. ನಂಗ ಇನ್ನೂ ನೆನಪದ ಅವತ್ತ ಗುರವಾರ, ನಾನು ನನ್ನ ಹೆಂಡತಿ ತೊರವಿಗಲ್ಲಿ ರಾಯರ ಮಠಕ್ಕ ಹೋಗಿ ಎರಡ ಪ್ರದಕ್ಷಿಣಿ ಹಾಕಿ ಕಲ್ಲಸಕ್ಕರಿ ಬಾಯಾಗ, ಮಂತ್ರಾಕ್ಷತಿ ತಲಿ ಮ್ಯಾಲೆ ಹಾಕ್ಕೊಂಡ ಬರೋದಕ್ಕು ಎದರಿಗೆ ಒಂದಿಷ್ಟ ಹುಡುಗರು ಅಗದಿ ಓಕಳಿ ಆಡ್ಕೋತ ಕುಣಕೋತ ಬರಲಿಕತ್ತಿದ್ದರು.

“ಲೇ, ಇಗ್ಯಾಕರಲೇ ಬಣ್ಣಾ, ಹೋಳಿ ಹುಣ್ಣಮಿ ಮುಗದ ಮೂರ ತಿಂಗಳಾತ, ಯಾರಿಗರ ಕನ್ಯಾ ಸಿಕ್ಕ ಲಗ್ನ ಫಿಕ್ಸ್ ಆತೇನ ಮತ್ತ?” ಅಂತ ನಾ ಕೇಳಿದರ
“ಇನ್ನ ಯಾಕ ಬೇಕ ಕನ್ಯಾ ಅಣ್ಣಾ?” ಅಂತ ಒಬ್ಬಂವ ಅಂದಾ, ಇನ್ನೊಬ್ಬಂವಾ
“ಏ, ನಿಂಗ ಸುದ್ದಿ ಗೊತ್ತಿಲ್ಲೇನ” ಅಂತ ನಂಗs ಕೇಳಿದಾ.

ಹಂತಾದ ಏನ ಆಗೇದರಲೇ ಛಂದಾಗಿ ಬಾಯಿ ಬಿಟ್ಟ ಹೇಳರಿ ಮಕ್ಕಳ ಅಂತ ಜೋರ ಮಾಡಿದ ಮ್ಯಾಲೆ
“ಅಣ್ಣಾ, ಇವತ್ತ ಬೆಳಿಗ್ಗೆ ದಿಲ್ಲಿ ಹೈಕೋರ್ಟನಾಗ ‘ಹೊಮೊ ಸೆಕ್ಸೂವಲಿಟಿ’ಗೆ ಜೈ ಅಂದಾರ, ಇನ್ನ ಮುಂದ ಸಲಿಂಗ ಮದುವಿ ಗೈರ ಕಾನೂನ ಅಲ್ಲಾ ಅಂತ ಡಿಸಿಜನ್ ಕೊಟ್ಟಾರ” ಅಂತ ಭಡಾ ಭಡಾ ನನ್ನ ಬಾಯಾಗ ಒಂದ ಧಾರವಾಡ ಫೇಡೆ ತುರುಕಿ ಮಠಕ್ಕ ಕಾಯಿ ಒಡಿಸಿಗೊಂಡ ಬರತೇವಿ ಅಂತ ಹೋಗೆ ಬಿಟ್ಟರು.

ನಾ ಖರೆ ಹೇಳ್ತೇನಿ ನಂಗ ಏನ ಮಾತಡಬೇಕ ತಿಳಿಲಾರದಂಗಾಗಿ ಎದಿ ತುಂಬಿ ಬಂತ. ಬಾಜುಕ ಇದ್ದ ಹೆಂಡ್ತಿ ಹೆಗಲ ಹಿಡಕೊಂಡ ಸಮಾಧಾನ ಮಾಡ್ಕೊಂಡ ಮನಸ್ಸಿನಾಗ ಟಚ್ ವುಡ್ ಅಂದ ಅಲ್ಲಿಂದ ಮನಿಗೆ ಹಾದಿ ಹಿಡದೆ.

ಅಲ್ಲಿ ಇದ್ದ ಎಲ್ಲಾ ಹುಡುಗರು ಮುವತ್ತ ದಾಟಿದವರು. ಎಲ್ಲಾ ತೊರವಿ ಗಲ್ಲಿ, ದೇಸಾಯರ ವಾಡಾ, ವಾಳ್ವೇಕರ ಚಾಳಿನ ಹುಡುಗರು. ಒಬ್ಬರದೂ ಲಗ್ನ ಆಗಿದ್ದಿಲ್ಲಾ. ಆಗಿದ್ದಿಲ್ಲಾ ಏನ್ ತಲಿ, ಒಬ್ಬರಿಗೂ ಕನ್ಯಾನs ಸಿಕ್ಕಿದ್ದಿಲ್ಲಾ. ಪಾಪ ಜೀವನದಾಗ ಭಾಳ ನೊಂದ ಬಿಟ್ಟಿದ್ವು.’ಸತ್ತ ಮ್ಯಾಲೆ ಏನೈತೆ ಬರಿ ಸೊನ್ನೆ, ಬದುಕಿದಾಗ ಸಿಗವಲ್ತ ಒಂದೂ ಕನ್ಯೆ’ಅಂತ ಫೇಸಬುಕ್ಕಿನಾಗ ಸ್ಟೇಟಸ್ ಮೆಸೆಜ ಹಾಕ್ಕೊಂಡ ಅಡ್ಯಾಡತಿದ್ವು. ಅಲ್ಲಾ ಆ ಮಾತಿಗೆ ಈಗ ಆರ-ಏಳ ವರ್ಷ ಆತ ಖರೆ ಆದರ ಇನ್ನೂ ಆ ಹುಡುಗರ ಒಳಗ ಒಬ್ಬವಂಗೂ ಒಂದs ಕನ್ಯಾನೂ ಸಿಕ್ಕಿಲ್ಲಾ.(ಅಲ್ಲಾ ಹಂಗ ಒಬ್ಬವಂಗ ಒಂದ ಕನ್ಯಾ ಆ ಮಾತ ಬ್ಯಾರೆ).

ಹೋದ ತಿಂಗಳ ಮೇ ೧೭ಕ್ಕ ಹಂತಾ ಒಂದಿಪ್ಪತ್ತ ಹುಡುಗರು ಸೇರಿ word endangered species day ಸೆಲೆಬ್ರೇಟ ಮಾಡಿದರು. ನಂಗ ಇವರ ಎಲ್ಲಾ ಬಿಟ್ಟ ಎಂಡೇಂಜರಡ್ ಸ್ಪಿಸಿಸ್ ಡೇ ಯಾಕ ಆಚರಸಲಿಕತ್ತಾರ ಗೊತ್ತಾಗಲಿಲ್ಲಾ. ಇದ ಏನ ಹಕೀಕತ್ ನೋಡಿದರಾತ ಅಂತ ಹೋದೆ.

ಅಲ್ಲೇ ನೋಡಿದರ ಹೊರಗ welcome to endangered species day ಅಂತ ಬೋರ್ಡ್ ಹಾಕಿದ್ದರು ಒಳಗ ನೋಡಿದರ ಯಾ ಸ್ಪಿಸಿಜದ್ದ ಫೋಟೊನೂ ಇರಲಿಲ್ಲಾ. ಮಾರಿ ಮ್ಯಾಲೆ ಮಾರ ಉದ್ದ ನೀರಗಿ ಬಿದ್ದ ಗಂಡ ಹುಡುಗರು ಮತ್ತ ಅವರನ ನೂರಾ ಎಂಟ ವೃತಾ ಮಾಡಿ ಹಡದ ಪೇರೆಂಟ್ಸ್ ಒಂದ ಕಡೆ ಜಮಖಾನಿ, ಚಾಪಿ ಮ್ಯಾಲೆ ಮ್ಯಾಲೆ ಕುತಿದ್ದರ ಅವರ ಹಿಂದ ಚೇರ ಮ್ಯಾಲೆ ಕನ್ಯಾ ಹಡದ ಪುಣ್ಯವಂತರು ತಮ್ಮ ತಮ್ಮ ಕನ್ಯಾ ಬಗಲಾಗ ಕರಕೊಂಡ ಕುತಿದ್ದರು. ಯಾರಿಗೆ ನೋಡಿದರು ಅಗದಿ ಸಹಜ ಗೊತ್ತಾಗತಿತ್ತ ಬ್ರಾಹ್ಮರ ಒಳಗ ಗಂಡ ಹಡದವರಿಗೆ ಹೆಣ್ಣ ಹಡದವರಿಗೆ ಎಷ್ಟ ರೇಸಿಯಲ್ ಡಿಫರೆನ್ಸ್ ಅದ ಅಂತ. ಅಲ್ಲಾ ಹಂಗ ಅದ ನಡದ ಭಾಳ ದಿವಸಾತ ಬಿಡ್ರಿ, ಎಲ್ಲಾ ಮಾಡಿದ್ದ ಉಣ್ಣೊ ಮಾರಾಯಾ ಅಂತರಲಾ ಹಂಗ ಮೊದ್ಲ ಬರೇ ಗಂಡ ಬೇಕ ಗಂಡ ಅಂತ ಹಡದವರ ಇವತ್ತ ಅನಭವಸಲಿಕತ್ತಾರ.

ಎದರಿಗೆ ಒಂದ ಸ್ಟೇಜ ಮ್ಯಾಲೆ ನಾಲ್ಕ ಕಬ್ಬಣದ ಚೇರ ಹಾಕಿ ಹಿಂದ ಒಂದ ಪ್ಲೆಕ್ಸ್ ಮ್ಯಾಲೆ ‘ಕನ್ಯಾ ಉಳಿಸಿ- ಕನ್ಯಾ ಬೆಳಿಸಿ’ ಅಂತ ಬರದ ಅದರ ಕೆಳಗ endangered species day ಅಂತ ಬರದಿದ್ದರು. ಇದ ಏನ ಒಂದಕ್ಕ ಒಂದ ಸಂಬಂಧ ಅಂತ ನಂಗ ತಿಳಿಲಿಲ್ಲಾ. ಅಷ್ಟರಾಗ ಒಬ್ಬಂವಾ ಎದ್ದ
“ಇವತ್ತ ನಿಮಗೇಲ್ಲಾ ನಾವು ಎಂಡೇಂಜರಡ್ ಸ್ಪಿಸಿಸ್ ಡೇ ಅಂತ ಕರದ ಇಲ್ಲೆ ಕನ್ಯಾ ಉಳಿಸಿ – ಕನ್ಯಾ ಬೆಳಸಿ ಅಂತ ಕಾರ್ಯಕ್ರಮ ಮಾಡ್ತಾ ಇರೋದ ನೋಡಿ ಆಶ್ಚರ್ಯ ಆಗತಿರಬಹುದು, ಆದರ ಒಂದ ಮಾತ ನೆನಪ ಇಡ್ರಿ ಇವತ್ತ ಬ್ರಾಹ್ಮರ ಒಳಗ ಕನ್ಯಾದ್ದ ಇಷ್ಟs ಅಭಾವ ಅದ ಅಲಾ ಇನ್ನೊಂದ ಸ್ವಲ್ಪ ದಿವಸಕ್ಕ IUCN ( Internation union for conservation of nature and natural resources) ದವರು ಬ್ರಾಹ್ಮರ ಕನ್ಯಾನ್ನ endangered species list ಒಳಗ ಸೇರಸಿದರ ಆಶ್ಚರ್ಯ ಪಡೊಹಂಗಿಲ್ಲಾ. ಈಗಾಗಲೇ ಈ ಕನ್ಯಾಗೊಳನ್ನ threatened species list ಒಳಗ ಸೇರಿಸಿದ್ದ ನಿಮಗೇಲ್ಲಾ ಗೊತ್ತದ” ಅಂತ ಭಾಷಣ ಶುರು ಮಾಡೇ ಬಿಟ್ಟಾ.

ಹಕ್ಕ, ಏನಿದ ಬ್ರಾಹ್ಮರ ಕನ್ಯಾಕ್ಕ ಸೀದಾ ಎಂಡೇಂಜರಡ ಸ್ಪಿಸೀಜಗೆ ಹೋಲಿಸಿದನಲಾ ಅಂತ ನಂಗ ಆಶ್ಚರ್ಯ ಮತ್ತ ದುಃಖ ಎರಡು ಆತ. ಅಲ್ಲಾ ಬ್ರಾಹ್ಮರಾಗ ಕನ್ಯಾ ಖಾಲಿ ಆಗ್ಯಾವ, ಇದ್ದ ಬಿದ್ದ ಕನ್ಯಾನು IT/BT ವರಾನ ಬೇಕ ಅನ್ನಲಿಕತ್ತಾರ ಖರೆ ಆದರೂ ಹಿಂಗ ನಮ್ಮ ಕನ್ಯಾಕ್ಕ ಎಂಡೇಂಜರಡ ಸ್ಪಿಸೀಸ ಅಂದರ ನಂಗ ಹೆಂಗ ಅನಸಬಾರದ? ಅದರಾಗ ನಾನು ಒಂದ ಕನ್ಯಾಮಣಿ ಹಡದೇನಿ.

ಅತ್ತಲಾಗ ಅಂವಾ ಮಾತಾಡ್ಕೋತ
“ನಾವ ಇಷ್ಟ ದಿವಸ ಗೋತ್ರ ಬಿಟ್ಟರ ಆತು ವೈಷ್ಣವರದು,ಸ್ಮಾರ್ತರದು,ಗೌಡ ಸಾರಸ್ವತರದು, ಚಿತ್ಪಾವನರದು, ಕರಾಡೆವರದು, ಹವೈಕರದು, ಹೆಗಡೆಯವರದು, ಇವರದು, ಅವರದು, ಬಾಜು ಮನಿಯವರದು, ಹಿಂದಿನ ಮನಿಯವರದು ಅಂತ ನೋಡದ ಒಟ್ಟ ಲಿಂಗ ಬಿಟ್ಟರ ಸಾಕು ಲಗ್ನಾ ಮಾಡ್ಕೊಂಡ ಬಿಡ್ತೇವಿ ಅಂತ ಹೇಳಿದ್ವಿ, ಆದರ ಈಗ ಅವು ಸಿಗವಲ್ವು. ಹಿಂಗಾದರ ಮುಂದ ಹೆಂಗ ಅಂತ ವಿಚಾರ ಮಾಡಲಿಕ್ಕೆ ಇವತ್ತ ನಾವೇಲ್ಲಾ ಸೇರಿವಿ. ಇವತ್ತ ಕನ್ಯಾ ಉಳಸೋದು, ಬೇಳಸೋದ ಎಲ್ಲಾ ನಿಮ್ಮ ಕೈಯಾಗ ಅದ. ಇಲ್ಲಾಂದರ ಮುಂದ ನಮ್ಮ ದಾರಿ ನಾವ ನೋಡ್ಕೋತೇವಿ. ಹೆಂಗಿದ್ದರು homosexuality is not illegal” ಅಂತ ಸೀದಾ ಧಮಕಿ ಕೊಟ್ಟ ಬಿಟ್ಟಾ.

ಅಲ್ಲಾ ಮೊದ್ಲ ಕನ್ಯಾ ಹಡದರ ಅಲಾ ಈ ‘ಕನ್ಯಾ ಉಳಸೋದು ಕನ್ಯಾ ಬೆಳಸೋದು’.
ಹೆಂಗ green revolution ಸಂಬಂಧ ನಾವೇಲ್ಲಾ ಕಂಡ ಕಂಡಲ್ಲೆ plantation ಮಾಡತೇವಿ ಹಂಗ ಈ ಕನ್ಯಾಕ್ಕು ಏನರ ಮಾಡs ಬೇಕ ಅಂತ ನನ್ನ creative mind ಹೇಳಲಿಕತ್ತು.

ಅಲ್ಲಾ, ಇವತ್ತೀನ ನಮ್ಮ ಜನರೇಶನ ಹುಡುಗರು ಗಂಡಾಗಲಿ, ಹೆಣ್ಣಾಗಲಿ ಒಬ್ಬಕಿಗೆ ಒಂದ ಇರಲಿ ಅಂತ ಒಂದೊಂದ ಹಡಕೋತ ಹೊಂಟರ ಖರೇನ ಬ್ರಾಹ್ಮರ ಕನ್ಯಾ endangerd species ಆಗೋದ ಗ್ಯಾರಂಟಿ ಬಿಡ್ರಿ. ಇನ್ನ ಮುಂದಿನ ಜನರೇಶನಗೆ ಈ ಪ್ರಾಬ್ಲೆಮ ಕಂಟಿನ್ಯೂ ಆಗಬಾರದಂದ್ರ ನಮ್ಮಂತಾವರ ಇನ್ನೊಂದ ಎರಡ ಹೆಣ್ಣ ಮಿನಿಮಮ್ ಹಡಿಲೇ ಬೇಕು.

ಆದ್ರು ಬ್ರಾಹ್ಮರ ಕನ್ಯಾಕ್ಕ endangered species ಗೆ ಹೋಲಿಸಿದರಲಾ ನಮ್ಮ ವರಗಳು ಅವರ ಮನಸ್ಸಿಗೆ ಎಷ್ಟ ಬೇಜಾರ ಆಗಿರಬೇಕ ಅನಸ್ತ. ಇದ ಹಿಂಗ ಮುಂದವರಿತಂದರ ಎಲ್ಲೆ ಖರೇನ ನಮ್ಮ ಹುಡುಗರು ಲಿಂಗ ಬಿಡಲಿರ ಇಲ್ಲಾ, ಹೆಂಗಿದ್ದರು ‘ಹೊಮೊ ಸೆಕ್ಸೂವಲಿಟಿ’ ಲಿಗಲ್ ಆಗೇದ ತೊಗೊ ಅಂತಾರೊ ಅಂತ ನಂಗ ಚಿಂತಿ ಹತ್ತಿ ಬಿಟ್ಟದ. ಯಾಕಂದರ ನಾ ಒಂದ ವರಾ ಬ್ಯಾರೆ ಹಡದೇನಲಾ ಅದಕ್ಕ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ