ಒಮ್ಮೆ ನೈಮಿಷ ಅರಣ್ಯದಲ್ಲಿ ವಾಸಿಸುವ ಶೌನಕರು, ೠಷಿ-ಮುನಿಗಳು ಭರತಖಂಡದ ಪ್ರಸ್ತುತ ಬ್ರಾಹ್ಮಣ ವರಗಳ ದಯನೀಯ ಸ್ಥಿತಿಯನ್ನು ಕುರಿತು, ಪುರಾಣಗಳನ್ನು ಬಲ್ಲ ಮಹಾ ತೇಜಸ್ವಿಯೂ, ಮಹಾಕೀರ್ತಿವಂತನೂ, ಶ್ರೀಮನ್ ನಾರಾಯಣನ ಭಕ್ತನೂ ಆದ ನನ್ನನ್ನು ಕುರಿತು ಬ್ರಾಹ್ಮಣ ವರಗಳ ಹಿತಾರ್ಥವಾಗಿ ಪ್ರಶ್ನೆ ಮಾಡಿದರು.
“ಎಲೈ ಪ್ರಶಾಂತನೇ! ಈ ಮೃತ್ಯು ಲೋಕದಲ್ಲಿ ಬ್ರಾಹ್ಮಣ ವರಗಳು ಕನ್ಯೆಗಳಿಗಾಗಿ ಬಹು ದು:ಖದಿಂದ ಬಳಲುತ್ತಿದ್ದಾರೆ. ಆದಾವ ವ್ರತದಿಂದ ಇಲ್ಲವೇ ಆದಾವ ತಪಸ್ಸಿನಿಂದ ಅವರಿಗೆ ಕನ್ಯಾ ಪ್ರಾಪ್ತವಾಗುವದೆಂದು ನೀವು ದಯವಿಟ್ಟು ಶ್ರೀಮನ್ ನಾರಾಯಣನನ್ನು ಕೇಳಿ ಈ ವರಗಳ ದು:ಖವನ್ನು ಶಮನ ಮಾಡಬೇಕೆಂದು” ನನ್ನಲ್ಲಿ ಕಳಕಳಿಯಿಂದ ಕೋರಿಕೊಂಡರು.
“ಸಜ್ಜನಸ್ಯ ಹೃದಯ ನವನೀತಂ” ಬೆಣ್ಣೆಯಂತಿರುವ ನನ್ನ ಹೃದಯವು ಕರಗಿ ಕಳವಳಗೊಂಡಿತು. ‘ಪರವರಾನುಗ್ರಹ ಕಾಂಕ್ಷಯಾ’ ಪರ ವರಗಳಿಗೆ ಹಿತಮಾಡಬೇಕೆಂಬ ಬಯಕೆಯಿಂದ ( ನಾ ಸ್ವತ: ಲಗ್ನಾ ಮಾಡ್ಕೊಂಡ ಹಳ್ಳಾ ಹಿಡದಿದ್ದರು) ಶ್ರೀಮನ್ ನಾರಾಯಣನನ್ನು ಕೇಳಲು ವಿಷ್ನು ಲೋಕಕ್ಕೆ ತೆರಳಿ ವಿಷ್ಣುವನ್ನು ಕುರಿತು
” ಒಡೆಯನೆ ! ಮೃತ್ಯುಲೋಕದಲ್ಲಿ ಕನ್ಯೆಗಳು ಕಾಣೆಯಾಗಿದ್ದು, ಬ್ರಾಹ್ಮಣ ವರಗಳೆಲ್ಲಾ ಕನ್ಯಾ ಕ್ಷಾಮದಿಂದ ಬಳಲುತ್ತಿದ್ದಾರೆ. ಕನ್ಯಾ ಪಿತೃಗಳು ತಮ್ಮ-ತಮ್ಮ ಕನ್ಯೆಯರ ಹರಾಜು ಮಾಡುವ ಪರಿಸ್ಥಿತಿ ಬಂದಿದೆ. ಆ ವರಗಳ ಕನ್ಯಾ ಪೈಪೋಟಿಯೂ ದೂರಾಗುವದಕ್ಕೆ ಇಂದು ಕನ್ಯೆಗಳನ್ನು ಗಿಡದಲ್ಲಿ ಬೆಳೆಯುವ ಸಂಧರ್ಬ ಬಂದಿದೆ, ದಯಮಾಡಿ ನೀನು ಕನ್ಯೆಗಳನ್ನು ಮರದಲ್ಲಿ ಸೃಷ್ಟಿಸಿ ವರಗಳನ್ನು ಅನುಗ್ರಹಿಸು” ಎಂದು ಕೇಳಿದೆನು.
ಶ್ರೀ ವಿಷ್ಣುವು ನನ್ನ ‘ಪರ-ವರಹಿತ’ದ ಸಲುವಾಗಿ ಯಥಾರ್ಥವು, ಭಾವ್ ಪೂರ್ಣವೂ ಆದ ಸ್ತುತಿಯನ್ನು ಕೇಳಿ
“ವತ್ಸಾ! ಜೀವನದಲ್ಲಿ ಮದುವೆ ಮಾಡಿಕೊಂಡು ಪತ್ನಿ ಪೀಡಿತನಾಗಿಯೂ ಉಳಿದ ಬ್ರಾಹ್ಮಣ ವರಗಳ ಮೇಲೆ ಅನುಗ್ರಹ ಮಾಡಬೇಕೆಂಬ ಬಯಕೆ ಇಂದ ಒಳ್ಳೆಯ ಪ್ರಶ್ನೆ ಮಾಡಿದೆ. ನಾನೂ ಅವರ ಶೋಚನೀಯ ಸ್ಥಿತಿಯನ್ನು ಕೇಳಿರುವೆ. ಈ ಒಂದು ಸಮಸ್ಯೆ ಬಗೆಹರಿಯ ಬೇಕಾದರೆ ನೀ ಹೇಳಿದ ಹಾಗೆ ಮರಗಳಲ್ಲಿ ಕನ್ಯೆಯನ್ನು ಸೃಷ್ಟಿ ಮಾಡದೆ ಬೇರೆ ಉಪಾಯವಿಲ್ಲಾ. ಹೀಗಾಗಿ ಇನ್ನು ಮುಂದೆ ಹಿಮಾಲಯದ ಅರಣ್ಯದ ಮರದಲ್ಲಿ ಕನ್ಯೆಯನ್ನು ಸೃಷ್ಟಿಸುವೆ, ನೀನು ಚಿಂತಿಸಬೇಡಾ, ತಥಾಸ್ತು” ಎಂದು ಹೇಳಿ ಕಳುಹಿದನು………
ಈ ಮಾತಿಗೆ ಈಗ ಹತ್ತ ಹನ್ನೆರಡ ವರ್ಷ ಆಗಲಿಕ್ಕೆ ಬಂತ, ನಂದ ಹೆಂಗ ಇದ್ದರು ಲಗ್ನ ಆಗಿತ್ತು ಹಿಂಗಾಗಿ ನಾ ವಿಷ್ಣುನ ಮಾತ ಭಾಳ ಸಿರಿಯಸ್ ತೊಗೊಳಿಲ್ಲಾ. ಅಂವಾ ಹೇಳಿದಂಗ ಗಿಡದಾಗ ಕನ್ಯಾ ಹುಟ್ಟೋದ ಖರೇನೊ ಸುಳ್ಳು ಅಂತ ನೋಡಲಿಕ್ಕೂ ಹೋಗಲಿಲ್ಲಾ. ಹಂಗ ಯಾರಿಗರ ಕನ್ಯಾ ಬೇಕಾಗಿದ್ದರ ಹಿಮಾಲಕ್ಕ ಹೋಗರಿ ಅಲ್ಲೆ ’ನಾರಿಲತಾ’ ಅಂತ ಒಂದ ಗಿಡದಾಗ ಕನ್ಯಾ ಬೆಳಿತಾವ ಅಂತ (ಕನ್ಯಾದ್ದ ಶೇಪನಾಗ ಹೂ ಬಿಡ್ತಾವ). ಅದು ಇಪ್ಪತ್ತ ವರ್ಷಕ್ಕೊಮ್ಮೆ ಇಷ್ಟನ ಮತ್ತ…ಹೌದ ಮತ್ತ್ ಡೈರೆಕ್ಟ ಕನ್ಯಾನ ಬೇಕಂದರ ಇಪ್ಪತ್ತ ವರ್ಷ ಕಾಯಿಬೇಕಲಾ. ಈಗ ನಾಳೆ ಬರೋ ೨೦೧೫ಕ್ಕ ಈ ಗಿಡದಾಗ ಕನ್ಯಾ ಬಿಡೊ ಪಾಳೆ ಅದ ಅಂತ, ಯಾರಾರಿಗೆ ಕನ್ಯಾ ಬೇಕ ಅವರ ಹಿಮಾಲಯಕ್ಕ ಹೋಗಿ ನಾರಿಲತಾ ಗಿಡದ ಮುಂದ ಪಾಳೆ ಹಚ್ಚರಿ.
ಅದೇನೊ ಅಂತಿದ್ದರಿ ಅಲಾ, ಕನ್ಯಾ ಏನ ಗಿಡದಾಗ ಬೆಳಿತಾವನ ಅಂತ……ತೊಗೊರಿ ಈಗ ಖರೇನ ಕನ್ಯಾ ಗಿಡದಾಗ ಬೆಳಿಲಿಕತ್ತಾವ, ಹೋಗಿ ಹರಕೋರಿ…ಒಬ್ಬರಿಗೆ ಒಂದsನ ಮತ್ತ.