ಸಂದರ್ಭ: ಕರ್ನಾಟಕದ ಭಾಜಪಾದಲ್ಲಿ ಭಿನ್ನಮತವಿದ್ದಾಗ
ಹೋದ ಸಂಡೆ ಶಿರ್ಶಿ ಜಾತ್ರಿಗೆ ಹೋಗಿದ್ದೆ. ಯಾಕೋ ಜಾತ್ರ್ಯಾಗ ಅಷ್ಟ ಮದ್ಲಿನಂಗ ಗದ್ಲನ ಇದ್ದಿದ್ದಿಲ್ಲಾ, ನಾ ದೇವರಿಗೆ ಕಾಯಿ ಒಡಿಸಿಕೊಂಡ ಕೈಮುಗದ ಹೊರಗ ಬಂದೆ. ಜಾತ್ರಿ ತುಂಬ ನಾಟಕ ಕಂಪನಿ, ಯಕ್ಷಗಾನದವರು, ಆಟಗಿ ಸಾಮಾನ ಮಾರೋರು ಇವರ ಇದ್ದರು. ಆದರ ಅವರನ ಮಾತಾಡ್ಸೋರು ಯಾರು ಇದ್ದಿದ್ದಿಲ್ಲಾ. ಯಕ್ಷಗಾನ- ನಾಟಕ ಕಂಪನಿ ಮುಂದ ಅಂತೂ ಹಣಕಿ ಹಾಕೋರ ಇದ್ದಿದ್ದಿಲ್ಲಾ. ಪಾಪ ಆ ಯಕ್ಷಗಾನ ಪಾತ್ರದವರಂತೂ ಡ್ರೆಸ್ ಹಾಕ್ಕೊಂಡ್ ಯಾರರ ಒಳಗ ಬಂದ್ರ ಯಕ್ಷಗಾನ ಶುರು ಮಾಡೋಣ ಅಂತ ದಾರಿ ಕಾಯಲಿಕತ್ತಿದ್ದರು, ನನಗ ಅವರ ಪರಿಸ್ಥಿತಿ ನೋಡಿ ಕೆಟ್ಟ ಅನಸಿ
’ಏನಲೇ, ರವಿವಾರ ದಿವಸನೂ ಜಾತ್ರ್ಯಾಗ ಜನಾ ಇಲ್ಲಾ, ಎಲ್ಲೆ ಹೋಗ್ಯಾರ ಶಿರ್ಶಿ ಮಂದಿ?’ ಅಂತ ನಮ್ಮ ದೋಸ್ತ ನಾಡಿಗೇರಗ ಕೇಳಿದೆ. ಅಂವಾ
’ಎಂತದು ಮಾರಾಯಾ, ಇಲ್ಲಿ ಜನ ಎಲ್ಲ ನಿಮ್ಮ ಹುಬ್ಬಳ್ಳಿ ಜಾತ್ರೆಗೆ ಹೋಗಿದ್ದು , ನೀನೇನು ನಿಮ್ಮ ಊರ ಜಾತ್ರೆ ಬಿಟ್ಟು ನಮ್ಮ ಜಾತ್ರೆಗೆ ಬಂದಿದ್ದು?’ ಅಂದಾ.
’ಲೇ, ಹುಬ್ಬಳ್ಳ್ಯಾಗ ಮತ್ತ ಯಾರದ ಜಾತ್ರೆಲೇ, ಮೊನ್ನೆರ ಸಿದ್ಧಾರೂಢರ ಜಾತ್ರೆ ಮುಗಿಸೇವಿ’ ಅಂದೆ
’ಅಯ್ಯೋ, ಇವತ್ತು ಹುಬ್ಬಳ್ಳಿಯಲ್ಲಿ ಯಡೆಯೂರಪ್ಪನವರ ಜಾತ್ರೆ ಉಂಟಲ್ಲಾ ಮಾರಾಯಾ’ ಅಂದಾ.
ಓ ಹೋ, ಶಿರ್ಶಿ ಜಾತ್ರೆಗೆ ಬಂದವರನೆಲ್ಲಾ ಯಡೆಯೂರಪ್ಪನ ಮಂದಿ ಹುಬ್ಬಳ್ಳ್ಯಾಗ ಮಂದಿ ಕಡಿಮೆ ಬಿದ್ದಾರ ಅಂತ ಬಸ್ಸನಾಗ ಹಾಕ್ಕೊಂಡ ಹೋಗ್ಯಾರ ಅಂತ ಗೊತ್ತಾತು.
ಅಷ್ಟರಾಗ ಒಂದಿಬ್ಬರು ಯಕ್ಷಗಾನ ಡ್ರೆಸ್ ಹಾಕ್ಕೊಂಡವರು ಸರ್ಕಲನಾಗ ತಮ್ಮ ಜುಗಲಬಂದಿ ಶುರು ಮಾಡಿದರು. ಪಾಪ ಅವರಿಗೆ ಶಿರ್ಶಿ ಮಂದಿ ಯಕ್ಷಗಾನ ನೋಡೋದ ಬಿಟ್ಟ ಯಡೆಯೂರಪ್ಪನ ನೋಡಲಿಕ್ಕೆ ಹೋಗಿದ್ದಕ್ಕ ಭಾಳ ಸಿಟ್ಟ ಬಂದಿತ್ತು. ಜಾತ್ರಿಗೆ ಬಂದಿದ್ದ ಒಂದ ಇಪ್ಪತ್ತ ಮುವತ್ತ ಮಂದಿ ಅವರನ ಮುಕರಿದರು. ನಾನೂ ಇವರ ಏನ ಮಾಡಲಿಕತ್ತಾರ ಅಂತ ನೋಡಲಿಕ್ಕೆ ಹೋದೆ.
ತಮ್ಮ ಯಕ್ಷಗಾನ ಡ್ರೆಸ್ ಮ್ಯಾಲೆ ಒಬ್ಬಂವಾ ಈಶ್ವರಪ್ಪಾ ಅಂತ ಇನ್ನೊಬ್ಬಾಂವ ಯಡೆಯೂರಪ್ಪ ಅಂತ ಬರಕೊಂಡ ತಮ್ಮ ಬಬ್ರುವಾಹನ ನಾಟಕನಾಗಿನ ಡೈಲಾಗ್ ಶುರು ಮಾಡಿದರು.
’ಯಾರು ತಿಳಿಯರು ನಿನ್ನ ಭ್ರಷ್ಟತೆಯ ಪರಾಕ್ರಮ, ಅಧಿಕಾರದೊಳ್ ಅರ್ಜಿಸಿದ ಆ ನಿನ್ನ ಅಕ್ರಮಗಳ ಮರ್ಮ, ಅದನೆಲ್ಲ ಕೊನೆಗಾಣಿಸಿದ ಆ ’ಲೋಕಾಯುಕ್ತರು’, ಹಗಲಿರುಳು ನೆರಳ೦ತೆ ಬೆನ್ನತ್ತಿ ಜೈಲು ತ೦ದಿತ್ತ ಆ ನ್ಯಾಯ ಪಾಲಕರು, ಅವರಿಂದಲೇ ಇಂದು ನೀನು ತೃಣಕ್ಕೆ ಸಮಾನ…..’ ಅಂತ ಈಶ್ವರಪ್ಪನ ಪಾತ್ರದಂವಾ ಶುರು ಮಾಡಿದಾ.
ಅದಕ್ಕ ಯಡೆಯೂರಪ್ಪನ ಪಾತ್ರಧಾರಿ ಗಂಟ ಮಾರಿ ಹಾಕ್ಕೊಂಡ
’ಅಸಹಾಯ ಅಧ್ಯಕ್ಷ, ನಾ ಅಕ್ಷೀಣ ಬಲನೋ, ಕೈ-ದಳಗಳೊಡನೆ ಹೋರಾಡಿ ಅಧಿಕಾರವ೦ ಪಡೆದವನೋ, ವಿಧಾನಸೌಧದೊಳೆದುರಾದೋ ಅರಿಗಳ೦ ನಿಗ್ರಹಿಸೋ ವ್ಯಾಘ್ರನಿವನೋ, ಉಗ್ರಪ್ರತಾಪೀ’ ಅಂತ ಸಿಟ್ಟಲೆ ಒದರಕೊಂಡಾ.
ಅವರಿಬ್ಬರು ಅಷ್ಟ ಶುರು ಮಾಡಿದ್ದ ನೋಡಿ ನನಗೂ ತಡಕೊಳ್ಳಿಕ್ಕೆ ಆಗಲಿಲ್ಲ, ನಾನೂ ಒಮ್ಮಿಂದೊಮ್ಮಿಲೆ ಕಣದಾಗ ಜಿಗದ ಬಿಟ್ಟೆ.
’ಓಹೋಹೋ…..ಉಗ್ರಪ್ರತಾಪಿ……ವಿಧಾನಸಭೆಯೊಳಗೆ ಶಾಸಕರು ನಾರಿಯರ ಅಶ್ಲೀಲ ದೃಶ್ಯವನ್ನೋಡುವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ, ಆರೋಪಗಳ ಚಕ್ರವ್ಯೂಹವ ನುಗ್ಗಿ ಛಲದಿ೦ದ ಛೇದಿಸದೇ ಪಕ್ಷವನು ಬಲಿ ಕೊಟ್ಟ ಭ್ರಷ್ಟಾ ನೀನು, ರಾಜಕೀಯ ಚದುರಂಗ ಗೆಲ್ಲೋ ಗು೦ಡಿಗೆಯು ನಿನಗೆ ಇನ್ನೆಲ್ಲೋ, ದ೦ಡಿಸದೇ ಬಿಡದು ಈ ನಾಡಿನ ಜನತೆ, ಹೋಗೊ ಹೋಗೆಲೋ ………’ ಅಂತ ಇಮೋಶನಲ್ ಆಗಿ ಅಂದ ಬಿಟ್ಟೆ.
ಆಜು-ಬಾಜು ಸೇರಿದ್ದ ಜನಾ ಎಲ್ಲಾ ಜೋರ ಚಪ್ಪಾಳಿ ತಟ್ಟಿ ಬಿಟ್ಟರು. ಪಾಪ ಆ ಯಕ್ಷಗಾನದವರಿಗೆ ಕಡಿಕೂ ಇಷ್ಟ ಜನಾ ಸೇರಿದ್ರಲಾ ಅಂತ ಖುಶಿ ಆತ. ಆದರ ಆ ಯಡೆಯೂರಪ್ಪನ ಪಾತ್ರದವಂಗ ನನ್ನ ಮಾತ ಕೇಳಿ ಮೈಯಾಗ ಖರೇನ ಯಡೆಯೂರಪ್ಪ ಬಂದಂಗ ಆತು
’ಫಡಾ ಫಡಾ ಭ್ರಷ್ಟನೆ೦ದಡಿಗಡಿಗೆ ನುಡಿಯಬೇಡೆಲೋ ಮೂಢ, ಭ೦ಡರೆದೆ ಗು೦ಡಿಗೆಯ ಖ೦ಡಿಸುತ ರಣಚ೦ಡಿಗೌತಣವೀಯುವ ಈ ಯಡೆಯೂರಪ್ಪಾ, ಗ೦ಡುಗಲಿಗಳ ಗ೦ಡ ಉದ್ಧ೦ಡ ವಿಧಾನಮ೦ಡಲದೊಳಖ೦ಡಕೀರ್ತಿಪ್ರಚ೦ಡ’ ಅಂತ ಅಬ್ಬರಿಸಿದಾ,
ನಾನೂ ತಲಿ ಕೆಟ್ಟ ’ಚ೦ಡನೋ ಪ್ರಚ೦ಡನೋ ಪು೦ಡನೋ ನಿರ್ಧರಿಸುವುದು ನ್ಯಾಯಾಂಗ, ಹೂಡು ಚುನಾವಣೆಯ ಬಾಣ ಮಾಡುವೆ ಮಾನಭ೦ಗ’ ಅಂತ ಅಗದಿ ಅವನ್ನ ಸೋಲಿಸಲಿಕ್ಕೆ ನಂದ ಒಂದ ವೋಟ ಸಾಕ ಅನ್ನೋರಗತೆ ಅಂದೆ.
ಅಷ್ಟರಾಗ ನಮ್ಮ ಈಶ್ವರಪ್ಪನ ಪಾತ್ರದಂವಾ
’ಕಮಲದೊಳ್ ಪಕ್ಷವನ್ನ್ ಕೆಣಕಿ ಉಳಿದವರಿಲ್ಲ, ಅಬ್ಬರಿಸಿ ಬೊಬ್ಬಿರಿದಿರಿಲ್ಲಾರಿಗೂ ಭಯವಿಲ್ಲ, ಆರ್ಭಟಿಸಿ ಬಂದಿದೆ ನೋಡು ಡೆಲ್ಲಿಯಿಂದ್ ಸಂದೇಶ್, ಪಕ್ಷಾಂತಕನಿಗೆ ಅಂತಕನೂ ಈ ಈಶ್ವರಪ್ಪಾ’ ಅಂತ ತಿರುಗೇಟ ಕೊಟ್ಟಾ.
ಜನಾ ಮತ್ತೋಮ್ಮೆ ಜೋರ ಚಪ್ಪಾಳೆ ಹೊಡದರು. ಈಶ್ವರಪ್ಪ, ಯಡಿಯೂರಪ್ಪನ ಪಾತ್ರದವರು ಖುಶ ಆಗಿ ಒಂದ ಸರತೆ ನನ್ನ ಅಪಗೊಂಡ, ತಾವು ಅಪಗೊಂಡ ವಾಪಸ ಟೆಂಟಿಗೆ ಹೋದರು. ನಾನು ಬಿಸಿಲ ಭಾಳ ಆತ ಅಂತ ಹುಬ್ಬಳ್ಳಿ ಹಾದಿ ಹಿಡದೆ.