ನಿಮ್ಮ ಆಗಮನವೇ ಉಡುಗೊರೆ, your presence is presents. ನಿಮ್ಮ ಆಶೀರ್ವಾದವೇ ಉಡುಗೊರೆ, presents in blessings only ಅಂತೇಲ್ಲಾ ಕಾರ್ಡ ಮ್ಯಾಲೆ ಪ್ರಿಂಟ ಮಾಡಿ ಮತ್ತು ಕಾರ್ಯಕ್ರಮದ ದಿವಸ ಎರಡು ಕೈಲೆ ಪ್ರೆಸೆಂಟ್ಸ್ ತೊಗೊಂಡ ಫೋಟೊ ಹೊಡಸಿಗೊಳೊ ಮಂದಿನ್ನ ನೀವ ನೋಡಿರಬಹುದು, ಅಲ್ಲಾ ಹಂಗ ಕೆಲವೊಬ್ಬರ strictly presents are prohibited ಅಂತ ಮಂದಿಮುಂದ ತೊಗೊಳಂಗೇಲಾ ಆ ಮಾತ ಬ್ಯಾರೆ.
ಆದರ ನಾ ಈಗ ಇಲ್ಲೇ ಹೇಳ್ತಿರೋದು ಮಂದಿ ನಮಗ ಪ್ರೆಸೆಂಟ್ಸ್ ಕೊಡೊದರ ಬಗ್ಗೆ ಅಲ್ಲಾ, ಹಂಗ ಪ್ರೀತಿಲೆ ಕೊಡ್ತೇನಿ ಅಂದಾಗ ಸೊಕ್ಕ ಮಾಡಬಾರದ, ಸುಮ್ಮನ ಇಸಗೊಬೇಕು ಹಿಂಗಾಗಿ ಮಂದಿ ಪ್ರೆಸೆಂಟ್ಸ್ ಕೊಟ್ಟಾಗ ನಾ ಯಾವಗಲೂ ಇಲ್ಲಾ ಅಂದವನ ಅಲ್ಲಾ. ನಾ ಇಲ್ಲೇ ಹೇಳ್ತಿರೋದು ನಮ್ಮ ಮನ್ಯಾಗ ಮದುವಿ-ಮುಂಜವಿ-ಮನಿ ಒಪನಿಂಗ್ ಕಾರ್ಯಕ್ರಮ ಇದ್ದಾಗ ನಾವ ಬಂದ ಮಂದಿಗೆ, ಬಂಧು-ಬಳಗದವರಿಗೆ ಉಡುಗೊರೆ (return gifts) ಕೊಡದರ ಬಗ್ಗೆ.
ಅಲ್ಲಾ, ಒಂದ ನಂಗ ಅರ್ಥ ಆಗವಲ್ತ, ನಾವs ಸಾಲಾ ಸೂಲಾ ಮಾಡಿ ಕಾರ್ಯಕ್ರಮ ಮಾಡ್ತಿರ್ತೇವಿ ಇನ್ನ ಹಂತಾದರಾಗ ಬಂದ ಮಂದಿಗೆ ಒಂದ ಹೊತ್ತ ಉಟಕ್ಕ ಹಾಕೋದ ಅಲ್ಲದ ಮತ್ತ ಗಿಫ್ಟ ಬ್ಯಾರೆ ಕೊಟ್ಟ ಕಳಸಬೇಕಂದರ ಇದ ಹೆಂತಾ ಪದ್ದತಿ ಅಂತೇನಿ. ಹಿಂಗಾಗೆ ಬ್ರಾಹ್ಮಣರಾಗ ಭಾಳ ಮಂದಿ ಇನ್ನು ಬಡ ಬ್ರಾಹ್ಮಣರಾಗೆ ಉಳದಿದ್ದ. ಅಲ್ಲಾ ಹಂಗ ಮದುವಿ ವಿಷಯದಾಗ ನಾವ ಗಂಡನೆವರ ಇದ್ದವಿ ಅಂದರ ಒಂದ ಹೊತ್ತ ಏನರ ರಿಟರ್ನ ಗಿಫ್ಟ ಕೊಡಬಹುದು ಯಾಕಂದರ ಮದುವಿ ಖರ್ಚ ನಂಬದ ಇರಂಗಿಲ್ಲಾ, ಮ್ಯಾಲೆ ವರದಕ್ಷಿಣಿ ಬ್ಯಾರೆ ತೊಗೊಂಡಿರ್ತೇವಿ ಆ ಮಾತ ಬ್ಯಾರೆ, ಆದರ ಅಕಸ್ಮಾತ ನಾವ ಹೆಣ್ಣಿನವರ ಇದ್ದರ ಏನ ಮಾಡಬೇಕ ಹೇಳ್ರಿ? ಮೊದ್ಲs ಸಾಲಾ ಮಾಡಿ ಮನ್ಯಾಗ ಮಗಳದೊ, ತಂಗಿದೋ, ಅಕ್ಕಂದೋ ಲಗ್ನಾ ಮಾಡತಿರ್ತೇವಿ ಹಂತಾದರಾಗ ಬಂದ ಮಂದಿಗೆ ಗಿಫ್ಟ ಕೊಡಬೇಕು ಅಂದರ ಹೆಂತಾ ಪದ್ದತಿ ಅಂತೇನಿ. ಅಲ್ಲಾ ಮಂದಿ ಮನ್ಯಾಗ ಫಂಕ್ಶನ್ ಇದ್ದಾಗ ಅವರು ನಮಗ ಗಿಫ್ಟ ಕೊಟ್ಟಿರತಾರ ಖರೆ ಆದರೂ ಈ ಪದ್ದತಿನs ನಂಗಂತೂ ಸರಿ ಅನಸಂಗಿಲ್ಲಾ ನೀವ ಏನ ಅನ್ನರಿ.
ಮೊನ್ನೆ ನನ್ನ ಮಗನ ಮುಂಜವಿ ಟೈಮ ಒಳಗು ಹಿಂಗ ಆತ. ನಮ್ಮವ್ವ ನಾ ಬರೆ ಮುಂಜವಿ ಮಾಡಬೇಕು ಅನ್ನೋದ ತಡಾ ಯಾರಿಗ್ಯಾರಿಗೆ ಏನೇನ ಕೊಡಬೇಕು ಅಂತ ಒಂದ ದೊಡ್ಡ ಲಿಸ್ಟ ಮಾಡಲಿಕತ್ತಳು. ನಾ ನಮ್ಮವ್ವಗ
“ನೋಡ್ವಾ, ನಾ ’ನೀವ ಮುಂಜವಿ ಮಾಡ’ ಅಂತ ಬಡ್ಕೊಂಡಿದ್ದಕ್ಕ ಮಗನ ಮುಂಜವಿ ಮಾಡಲಿಕತ್ತೇನಿ. ಅಂವಾ ಏನ ಮುಂಜವಿ ಆದ ಮ್ಯಾಲೆ ಸಂಧ್ಯಾವಂದನಿ ಮಾಡೋದು ಅಷ್ಟರಾಗ, ಸುಧಾರಸೋದು, ಶಾಣ್ಯಾ ಆಗೋದು ಅಷ್ಟರಾಗ ಅದ. ಸುಳ್ಳ ಮುಂಜವಿಗೆ ಹೂಯ್ಯಿ ಅಂತ ಖರ್ಚ ಮಾಡಸಿಸಿ ನೀ ನನ್ನ ಸಾಲಕ್ಕ ಮೂಲ ಮಾಡಬ್ಯಾಡ” ಅಂತ ಎಷ್ಟ ಬಡಕೊಂಡೆ.
ಆದರೂ ನಮ್ಮವ್ವ ಏನ ಕೇಳಲಿಲ್ಲಾ
“ಇರೋಂವಾ ಒಬ್ಬ ಮಗಾ ಇದ್ದಾನ, ಹಂಗ ಅಂದರ ಹೆಂಗ, ಯಾ ಹೊತ್ತಿಗೆ ಏನ ಆಗಬೇಕ ಅದ ಆಗಬೇಕ” ಅಂತ ಗಂಟ ಬಿದ್ದಳು.
ಖರೆ ಅಂದರ ನಾ ನನ್ನ ಮಗನ ಮುಂಜವಿ ಯಾವದರ ಮಠದಾಗ ಇಲ್ಲಾ ಗಾಯತ್ರಿ ತಪೋಭೂಮಿ ಒಳಗ ಸಾರ್ವಜನಿಕ ಮುಂಜವಿ ಒಳಗ ಮಾಡಬೇಕು ಅಂತ ಅಂದಾಗನು ಅಕಿ
‘ಇರೋಂವ ಒಬ್ಬ ಮಗಾ, ಕಲ್ಯಾಣ ಮಂಟಪ ಹಿಡದ ಇಲ್ಲಾ ಪೆಂಡಾಲ ಹಾಕಿಸಿ ಛಂದಾಗಿ ನಾಲ್ಕ ಮಂದಿ ನೋಡೊಹಂಗ ಮಾಡಲಿಕ್ಕೆ ಏನ ಧಾಡಿ ನಿನಗ’ ಅಂದಿದ್ಲು. ನಾ
’ಬೇಕಾರ ನನ್ನ ಮಗನ ಸಾರ್ವಜನಿಕ ಮುಂಜವಿ ಜೊತಿ ಇನ್ನ ಐದ ಬಡು ಹುಡುಗರದ ಮುಂಜವಿನೂ ಮಾಡಸ್ತೇನಿ ನನ್ನ ಖರ್ಚನಾಗ’ ಅಂತ ಅಂದರು ಅಕಿ ಏನ ಕೇಳಲಿಲ್ಲಾ. ನಾ ಜಾಸ್ತಿ ಮಾತಡಲಿಕತ್ತ ಕೂಡಲೇ
“ನೋಡಪಾ, ಮುಂಜವಿ ಒಂದ ನೋಡಿ ಸಾಯಬೇಕ ಅನ್ಕೊಂಡೇನಿ, ಮುಂದ ನಿನ್ನ ಮಗನ ಲಗ್ನದ ಹೊತ್ತಿಗೇನ ಇರ್ತೇನಂತ ಗ್ಯಾರಂಟೀ ಇಲ್ಲಾ” ಅಂತ ಎಮೋಶನಲ್ ಬ್ಲ್ಯಾಕ ಮೇಲ ಚಾಲು ಮಾಡಿದ್ಲು. ಅಲ್ಲಾ ಹಂಗ ಅಕಿ ನನ್ನ ಲಗ್ನ ಆದಾಗಿಂದ ಪ್ರತಿ ಕಾರ್ಯಕ್ರಮಕ್ಕೂ ಹಿಂಗ ಅನ್ನಲಿಕತ್ತಾಳ ಆ ಮಾತ ಬ್ಯಾರೆ.
ಸರಿ, ಇನ್ನ ಇಷ್ಟ ನಮ್ಮವ್ವ ತಂದ ಇದ ಲಾಸ್ಟ ಫಂಕ್ಶನ್ ಅಂತ ಗ್ಯಾರಂಟೀ ಕೊಡಲಿಕತ್ತಾಳ ಅಂದ ಮ್ಯಾಲೆ ನಾನರ ಯಾಕ ಅಕಿ ಮನಸ್ಸ ನೋಯಿಸಬೇಕ ಅಂತ ಮುಂಜವಿ ತಯಾರಿ ಶುರು ಮಾಡಿದೆ. ಇನ್ನ ಮಂದಿಗೆ ಏನ ಗಿಫ್ಟ ಕೊಡಬೇಕು ಅನ್ನೋದ ಒಂದ ದೊಡ್ಡ ಸಮಸ್ಯೆ ಆತ. ಹಂಗ ಎಲ್ಲಾರು ಒಂದ ಪ್ಯಾಂಟ – ಶರ್ಟ್ ಪೀಸ್, ಸೀರಿ ಮ್ಯಾಲೆ ಒಂದ ಜಂಪರ್ ಪೀಸ್ ಕೊಡೊದ ಕಾಮನ್, ಅದನ್ನ ಬಿಟ್ಟ ಬ್ಯಾರೆ ಏನರ ಕೊಟ್ಟರಾತು ಅಂತ ನಾ ನನ್ನ ಕ್ರೀಯೇಟಿವ್ ತಲಿ ಯುಜ್ ಮಾಡಿ ಬಾಂಬೆದಿಂದ ಏರ್ ಟೈಟ ಸ್ಟೇನಲೆಸ್ ಸ್ಟೀಲ್ ಡಬ್ಬಿ ಸೆಟ್ ಅದು ಮುರ ನಾಲ್ಕ ನಮನಿವ ಹೋಲಸೇಲನಾಗ ಫ್ಯಾಕ್ಟರಿ ಇಂದ ತರಿಸಿದೆ.
ಇನ್ನ ಈ ಸುಡಗಾಡ ಸ್ಟೀಲಿನ ಡಬ್ಬಿ ಕೊಡದರಾಗ ಹೆಂತಾ ಕ್ರೀಯೀಟಿವಿಟಿಲೇ ಅನಬ್ಯಾಡರಿ. ಸ್ಟೀಲಿನ ಡಬ್ಬಿ ಕೊಡೊದು ನಮ್ಮ ಬ್ರಾಹ್ಮರ ಪರಂಪರೆ ಒಳಗ ಮೊದ್ಲಿಂದ ಬಂದಿದ್ದ. ಏನ ಕಾರ್ಯಕ್ರಮ ಇರಲಿ ಒಂದ ಡಬ್ಬಿ ಇಲ್ಲಾ ಕೊಳಗಾ, ಪಾತೇಲಿ, ಇಲ್ಲಾ ಪ್ಲೇಟ ಕಡಿಕೆ ಒಂದ ಝಾಕಣಿ ಕೊಡೊದ ಪದ್ದತಿ. ಹಿಂಗಾಗಿ ನಾ ಆ ಪುರಾತನ ಸ್ಟೀಲಿನ ಡಬ್ಬಿನ ಮಾಡರ್ನ ಟಚ್ ಒಳಗ ಇರಲಿ ಅಂತ ಏರ್ ಟೈಟ್ ಸ್ಟೇನಲೆಸ್ ಸ್ಟೀಲ್ ಡಬ್ಬಿ ತರಿಸಿದ್ದೆ. ತರಸೋಕಿಂತಾ ಮೊದ್ಲ ನಮ್ಮವ್ವಗ ಭಾಳ ಕ್ಲೀಯರ್ ಆಗಿ ಹೇಳಿದ್ದೆ
“ನೀ, ಆಮ್ಯಾಲೆ ಮತ್ತ ಅವರಿಗೆ ಸೀರಿ ಕೊಡು, ಇವರಿಗೆ ಶರ್ಟ ಪೀಸ ಕೊಡು ಅಂತ ಅನಬ್ಯಾಡಾ, ಎಲ್ಲಾರಿಗೂ ಡಬ್ಬಿನ” ಅಂತ. ಆವಾಗ ಹೂಂ ಅಂದ್ಲು, ಆಮ್ಯಾಲೆ ಸಣ್ಣಕ ಶುರು ಮಾಡಿದ್ಲಲಾ
“ಹಂಗ ಹಿರೇ ಮನಷ್ಯಾರಿಗೆ ಸ್ಟೀಲಿನ ಡಬ್ಬಿ ಕೊಟ್ಟರ ಹೆಂಗ ನಮ್ಮವ್ವಾ, ಒಂದ ಪತ್ಲಾ ಕೊಡs ಬೇಕಾಗ್ತದ”
“ಅಲ್ಲs.. ಬೀಗರಿಗರ ಸೀರಿ ಕೊಡಬೇಕವಾ, ಅವರಿಗೆಲ್ಲಾ ಸ್ಟೀಲಿನ ಡಬ್ಬಿ ಕೊಟ್ಟರ ಹೆಂಗ ನಡಿತದ ಹೇಳು”
“ಅಜ್ಜಿಂದರಿಗೆಲ್ಲಾ ಕಾಟನ್ ಪತ್ಲಾನ ಕೊಡಬೇಕು, ಬೇಕಾರ ಆರ ವಾರಿದ ಯಾಕ ಆಗವಲ್ತಾಕ. ಹಂಗ ನೀವು ಡಬ್ಬಿ ಅವರ ಮಕ್ಕಳಿಗೆ ಕೊಡ್ರಿ ಯಾರ ಬ್ಯಾಡ ಅಂತಾರ”
ಅಂತ ಹಗರಕ ನನ್ನ ಹೆಂಡತಿ ಮುಂದ ಕೊರಿಲಿಕತ್ಲು.
ಅಲ್ಲಾ ನಾ ಸ್ಟೀಲ ಡಬ್ಬಿ ಅಂದರ ಏನ ಐವತ್ತ, ನೂರ ರೂಪಾಯಿದ್ದ ಕೊಡಲಿಕತ್ತಿದ್ದಿಲ್ಲಾ. ಮೂರ ಟೈಪ ಸೆಟ್ ಆಫ್ ಡಬ್ಬಿ, ಒಂದ ನಾಲ್ಕನೂರರ ರೆಂಜ್, ಇನ್ನೊಂದ ಎರಡುವರಿ ನೂರರ ರೇಂಜ್, ಇನ್ನೊಂದ ನೂರಾ ಐವತ್ತರ ರೇಂಜ್, ಎಲ್ಲಾ ಗೆಸ್ಟ ಲೆವೆಲ್ ಪ್ರಕಾರ. ಇದೇನ ಕಡಿಮೆ ಆತ? ನಮ್ಮವ್ವಗ ತಿಳಿಸಿ ಹೇಳಿದರು ತಿಳಿಲಿಲ್ಲಾ. ಡಬ್ಬಿ- ಡಬ್ಬಿನ ಅಂದ್ಲು. ಇನ್ನ ಏನರ ಜಾಸ್ತಿ ಹೇಳಲಿಕ್ಕೆ ಹೋದರ ಮತ್ತ ಅದ ಡೈಲಾಗ
” ಮುಂದ ನಿನ್ನ ಮಗನ ಲಗ್ನ ತನಕಾ ಎಲ್ಲೆ ಇರ್ತೇನಪಾ, ಮುಂಜವಿ ಒಂದ ಛಂದ ಮಾಡ”.
ನಾ ಖರೇ ಹೇಳ್ತೇನಿ ಹಿಂದ ಅಂದರ ಒಂದ ಹನ್ನೇರಡ ವರ್ಷದ ಹಿಂದ ನನ್ನ ಮದುವಿ ಟೈಮನಾಗೂ ಹಿಂಗ ಮಾಡಿದ್ಲು. ಆವಾಗಂತೂ ನಂದ ಫೈನಾನ್ಸಿಯಲ್ ಕಂಡಿಶನ್ ಇನ್ನೂ ಕೆಟ್ಟ ಇತ್ತ. ನಾನ ಸಾಲಾ ಮಾಡಿ, ಅರ್ಧಾ ವರದಕ್ಷಣಿ ರೊಕ್ಕಾ ಅಡ್ವಾನ್ಸ ತೊಗೊಂಡ ಮುಂದಿಂದ ಅರ್ಧಾ ಮದುವ್ಯಾಗ ಕೊಡ್ತಾರ ಅನ್ನೋ ಖಾತ್ರಿ ಮ್ಯಾಲೆ ಲಗ್ನ ಮಾಡ್ಕೋಳಿಕತ್ತಿದ್ದೆ. ಇಕಿ ಮದವಿ ಒಳಗ ಅವರಿಗೆ ಇದನ್ನ ಕೊಡಬೇಕು, ಇವರಿಗೆ ಅದನ್ನ ಕೊಡಬೇಕು ಅಂತು ಶುರು ಮಾಡಿದ್ಲು. ನಾ ಏನರ ತಿಳಿಸಿ ಹೇಳಲಿಕ್ಕೆ ಹೋದರ
” ಅಯ್ಯ, ಗಂಡಸ ಮಗನ ಮದುವಿಪಾ, ಕೊಡಲಿಲ್ಲಾಂದರ ಹೆಂಗ, ನಾಳೆ ನಿಮ್ಮ ತಂಗಿ ಲಗ್ನಕ್ಕ ಬೇಕಾರ ನೀ ಕೊಡ್ಕೊ ಇಲ್ಲಾ ಬಿಡ್ಕೊ. ಈಗಂತೂ ಕೊಡೊದ” ಅಂತ ಗಂಟ ಬಿದ್ಲು. ನಂದು ಒಂದನೇ ಮದುವಿ, ಹೊಸಾ ಹುರುಪಿನಾಗ, ಆತ ತೊಗೊ ನಂದs ಮದುವಿ, ನಮ್ಮವ್ವನ ಜೊತಿ ಜಗಳಾಡ್ಕೋತ ಕೂಡೋದರಾಗ ಅರ್ಥ ಇಲ್ಲಾ, ಸುಮ್ಮನ ನಂಗ ವರದಕ್ಷಿಣಿ ಕೊಟ್ಟಿಲ್ಲಾಂತ ತಿಳ್ಕೊಂಡರಾತು ಅಂತ ವರದಕ್ಷಿಣಿ ರೊಕ್ಕದಷ್ಟ ನಾ ಮಂದಿಗೆ ಉಡಗೊರೆ ಕೊಟ್ಟೆ.
ಮುಂದ ಮೂರ ವರ್ಷಕ್ಕ ನನ್ನ ಹೆಂಡತಿ ಕಾಲ್ಗುಣದ್ಲೆ ನಮ್ಮ ತಂಗಿ ಲಗ್ನ ಫಿಕ್ಸ ಆತ. ಆವಾಗ ಮತ್ತ ನಮ್ಮವ್ವ ರಾಗ ತಗದ್ಲು
“ಇರೊಕಿ ಒಬ್ಬಕಿ ತಂಗಿ, ನಿಂಗೇನ ಹತ್ತ ಮಂದಿ ಇದ್ದಾರೇನ, ಮುಂದ ನಾಳೆ ನಿನ್ನ ಮಗನ ಮುಂಜವಿ – ಮದುವಿಗೆ ನೀ ಬೇಕಾರ ಕೊಟ್ಕೊ ಇಲ್ಲಾ ಬಿಡ್ಕೊ, ನೋಡಲಿಕ್ಕೆ ನಾವರ ಎಲ್ಲೆ ಇರ್ತೇವಿ. ಛಂದದ ಕಾರ್ಯ ಯಾರಿಗ್ಯಾರಿಗೆ ಏನೇಕ ಕೊಡಬೇಕ ಅದನ್ನ ಕೊಟ್ಟ ಬಿಡ” ಅಂತ ಶುರು ಮಾಡಿದ್ಲು.
ಅಲ್ಲಾ, ಇರೋಕಿ ಒಬ್ಬೋಕಿ ತಂಗಿ ಅನ್ನಲಿಕ್ಕೆ ನಾ ಏನ ಇಕಿಗೆ ಹತ್ತ ಹಡಿ ಬ್ಯಾಡ ಅಂದಿದ್ನೆ? ಎರಡ ಸಾಕೋದರಾಗ ಅಕಿಗೆ ರಗಡ ಆಗಿ ಹೋಗಿತ್ತ ಹತ್ತ ಹಡಿಯೋದರ ಬಗ್ಗೆ ಮಾತಾಡ್ತಾಳ. ಇನ್ನ ಆ ಮಾತ ಮಾತಿಗೆ ಮುಂದ ನಾವೇಲ್ಲೆ ನೋಡಲಿಕ್ಕೆ ಇರ್ತೇವಿ ನೀ ಏನರ ಮಾಡ್ಕೊ ಅನ್ನೋದ ಅಂತು ಕಾಯಮ್ ಡೈಲಾಗ. ನಾ ಮೊದ್ಲ ಹೇಳಿದೆನಲಾ, ನನ್ನ ಮದುವಿ ಆದಾಗಿಂದ ಪ್ರತಿ ಕಾರ್ಯಕ್ರಮಕ್ಕು ಹಿಂಗ ಅನ್ನಲಿಕತ್ತಾಳಂತ.
ನಾ ಬೇಕಾರ ನಿಮಗ ಈಗ ಹೇಳ್ತೇನಿ ಈಗೇನ ’ಮುಂಜವಿ ಒಂದ ನೋಡಿ ಸಾಯಬೇಕ ಅನ್ಕೊಂಡೇನಿ, ಮುಂದ ಲಗ್ನದ ಹೊತ್ತಿಗೇನ ಇರ್ತೇನಿನ’ ಅಂದಾಳಲಾ ನಮ್ಮವ್ವಾ, ನಾಳೆ ನನ್ನ ಮಗನ ಲಗ್ನಕ್ಕೂ ಮತ್ತ ಹಿಂಗ ಒಂದ ಏನರ ರಾಗಾ ತಗಿತಾಳ ನೀವ ನೋಡ್ತಿರ್ರಿ. ಅಲ್ಲಾ ಅಲ್ಲಿ ಮಟಾ ಅಕಿ ಇರಲಿ ಬಿಡರಿ ಯಾರ ಏನ ಬ್ಯಾಡ ಅಂದಿಲ್ಲಾ, ಬೇಕಾರ ಕಾಯಮ ಇರಲಿ ಆದರ ಸುಮ್ಮನ ಇರಬೇಕು. ಹಿಂಗ ಪ್ರತಿ ಫಂಕ್ಶನ್ನಗೂ ಅವರಿಗೆ ಅದನ್ನ ಕೊಡು ಇವರಿಗೆ ಇದನ್ನ ಕೊಡು ಅಂದರ ತುಟ್ಟಿ ಕಾಲದಾಗ ನಾನರ ಹೆಂಗ ಮಾಡಬೇಕ ಹೇಳರಿ.
ಒಟ್ಟ ಕಡಿಕೂ ನಾ ತಲಿಕೆಟ್ಟ ನಮ್ಮವ್ವನ ಮನಸಿನಂಗ ಮಾಡಿದೆ. ಸೀರಿ ಕೊಡೊರಿಗೆ ಸೀರಿ ಕೊಟ್ಟೆ, ಜಂಪರ ತೊಡೊರಿಗೆ ಜಂಪರ್ ಪೀಸ ಕೊಟ್ಟೆ, ಗಂಡಸರಿಗೆ ಪ್ಯಾಂಟ ಶರ್ಟ ಪೀಸ ಬ್ಯಾರೆ ಮತ್ತ ನನ್ನ ವಾರ್ಗಿಯವರಿಗೆ ಮೂರ ತರಹದ್ದ ಸ್ಟೇನಲೆಸ್ ಸ್ಟೀಲ್ ಏರ್ ಟೈಟ್ ಡಬ್ಬಿ ಕೊಟ್ಟ ಈಗ ಮನ್ಯಾಗ ಖಾಲಿ ರಟ್ಟಿನ ಡಬ್ಬಿ ಡಬ್ಬ ಹಾಕ್ಕೊಂಡ ರದ್ದಿಯಂವಾ ಬರೋದನ್ನ ದಾರಿ ಕಾಯಿಲಿಕತ್ತೇನಿ.
ಇನ್ನ ಇಷ್ಟ ಕಷ್ಟ ಪಟ್ಟ ಕಾರ್ಯಕ್ರಮ ಮಾಡೇನಿ ಅಂದ ಮ್ಯಾಲೆ ನಾ ಇನ್ವೇಟೇಶನ್ ಕಾರ್ಡನಾಗ ’ನಿಮ್ಮ ಆಶೀರ್ವಾದವೇ ಉಡಗೋರೆ’ ಅಂತ ಹಾಕಸಲಿಕ್ಕೆ ನಂಗೇನ ಹುಚ್ಚ ಹಿಡದಿದ್ದಿಲ್ಲಾ? ಅಲ್ಲಾ ಅದು ನಾನs ಮೂರ-ನಾಲ್ಕ ನೂರ ರೂಪಾಯಿದ್ದ ಗಿಫ್ಟ ಕೊಟ್ಟ ಮುಂಜವಿಗೆ ಕರದ ಬರೇ ಆಶೀರ್ವಾದ ತೊಗೊಂಡರ ಹೆಂಗ? ಹಿಂಗಾಗಿ ನಾ ಕಾರ್ಡನಾಗ presents in blessings only ಅಂತ ಹಾಕಸಲಿಲ್ಲಾ.
ಆದರೂ ನೀವ ಏನ ಅನ್ನರಿ ಈ ‘ನಿಮ್ಮ ಆಶೀರ್ವಾದಕ್ಕಾಗಿ ನಮ್ಮ ಉಡಗೋರೆ’ ಪದ್ದತಿ ನಂಗೇನ ಲೈಕ ಆಗಲಿಲ್ಲಾ ಬಿಡ್ರಿ. ಅಲ್ಲಾ ಹಂಗ ನೋಡಿದರ ನನ್ನ ಮನ್ಯಾಗೇನ ಇನ್ನ ಮುಂದ ಹದಿನೈದ ಇಪ್ಪತ್ತ ವರ್ಷ ಯಾವ ಫಂಕ್ಶನ್ ಇಲ್ಲಾ, ಇನ್ನೇನ ನಾ ಯಾರಿಗೂ ಕೊಡೊದ ಬರಂಗಿಲ್ಲಾ. ಇನ್ನ ಏನಿದ್ದರು ಬರೇ ಇಸಗೋಳೊದ ಇಷ್ಟ ಖರೆ ಆದರು ಯಾವದ ತಪ್ಪ, ಅದ ತಪ್ಪ ಬಿಡ್ರಿ. ಹಂಗ ನಮ್ಮ ಮನಿ ಮುಂಜವಿಗೆ ಯಾರ ಬಂದಿಲ್ಲಾ ಅವರ ಬಂದ ಆಶೀರ್ವಾದ ಮಾಡಿ ಹೋಗರಿ ಮತ್ತ. ಅಲ್ಲಾ ಹಂಗ ಡಬ್ಬಿ ಖಾಲಿ ಆದರೂ ಶರ್ಟ ಪೀಸ, ಬ್ಲೌಸ್ ಪೀಸ ಉಳದಾವ, ಮತ್ತ ಮ್ಯಾಲೆ ಒಂದಿಷ್ಟ ಬಂದಾವ. ಆಶೀರ್ವಾದ ಮಾಡಿದ್ದಕ್ಕ ನಮ್ಮವ್ವಾ ಏನರ ಕೊಟ್ಟ ಕಳಸ್ತಾಳ. ಹಂಗ ಖಾಲಿ ಕೈಲೆ ಬರೆ ಅರಷಣ ಕುಂಕಮ ಕೊಟ್ಟ ಕಳಸೋ ಪೈಕಿ ಏನಲ್ಲ ನಮ್ಮವ್ವಾ, ನೀವೇನ ಕಾಳಜಿ ಮಾಡ ಬ್ಯಾಡರಿ.
ಮತ್ತೇಲ್ಲರ ನೀವ ಖಾಲಿ ಕೈಲೆ ಬಂದ ಗಿಂದಿರಿ ಇಷ್ಟ….