ಕೂಸಿನ ಕೈಯಾಗ ಕಾಂಚಾಣ…

ಮೊನ್ನೆ ನಮ್ಮ ಅಂಗಡಿ ಪ್ರಭ್ಯಾನ ಎರಡನೇ ಮಗಳನ ನೋಡಲಿಕ್ಕೆ ಹೋಗಿದ್ದೆ, ಪಾಪ ಒಂದನೇದು ಮಗಳ ಇತ್ತ. ಎರಡನೇದ ಬ್ಯಾಡ ಅಂತ ಅವನ ಹೆಂಡತಿ ಎಷ್ಟ ಬಡ್ಕೊಂಡರು ಈ ಮಗಾ ’ಏ ಒಂದ ಗಂಡ ಆಗಬೇಕ, ನಾಳೆ ಕಿರಾಣಿ ಅಂಗಡ್ಯಾಗ ಕೂಡೋರ ಯಾರು?’ಅಂತ ಗಂಟ ಬಿದ್ದ ಎರಡನೇದ ಹಡದಿದ್ದಾ. ಪಾಪ ಗಂಡ ಆಗಲಿ ಅಂತ ಬಡಬಡಸಿದರ ಎರಡನೇದು ಹೆಣ್ಣ ಆಗಿತ್ತ.
ನಾ ಒಂದ ಸರತೆ ಹೋಗಿ ಅವನ್ನ ಮಾತಾಡಿಸಿದಂಗೂ ಆತ ಹಂಗ ಮಗಳನ ನೋಡಿದರಾತು ಅಂತ ಹೆಂಡತಿನ್ನ ಕರಕೊಂಡ ಹೋಗಿದ್ದೆ. ನಾವು ಕೂಸಿನ್ನ ನೋಡಿ ಬರಬೇಕಾರ ನನ್ನ ಹೆಂಡತಿ ನನ್ನ ಕಿವ್ಯಾಗ
’ರ್ರಿ, ಒಂದ ಇಪ್ಪತ್ತ ರೂಪಾಯಿ ಕೊಡ್ರಿ ಕೂಸಿನ ಕೈಯಾಗ ಕೊಡಲಿಕ್ಕೆ’ ಅಂದ್ಲು.
ನನ್ನ ಕಿಸೆದಾಗ ಇಪ್ಪತ್ತರ ನೋಟ ಇರಲಿಲ್ಲಾ, ನಾ ಅದಕ್ಕ ಮುಂದಿನ ಸಲಾ ಬಂದಾಗ ಕೊಡೋಣ ತೊಗೊ ಈಗ ನನ್ನ ಕಡೆ ಚೆಂಜ್ ಇಲ್ಲಾ ಅಂದೆ. ಅದಕ್ಕ ನನ್ನ ಹೆಂಡತಿ ಗಂಟ ಮಾರಿ ಮಾಡಿ
’ಭಾಳ ಶಾಣ್ಯಾರ ಇದ್ದೀರಿ ತೊಗೊರಿ, ಐವತ್ತರದ ಕೊಡ್ರಿ. ಕೂಸಿನ ನೋಡಲಿಕ್ಕೆ ಬರಬೇಕಾರ ಹತ್ತರದ ಇಪ್ಪತ್ತರದ ತೊಗೊಂಡ ಬರಬೇಕ ಅಂತ ತಿಳಿಯಂಗಿಲ್ಲಾ’ ಅಂತ ನಂಗ ಬೈದ ಐವತ್ತರ ನೋಟ ಕಸಗೊಂಡ ಆ ಕೂಸಿನ ಕೈಯಾಗ ಕೊಟ್ಟಳು.
ಆ ಕೂಸು ನನ್ನ ಹೆಂಡತಿ ಮಾರಿ ಒಂದ ಸರತೆ ನೋಡಿ ತನ್ನ ಮಾರಿ ಗಂಟ ಮಾಡ್ಕೊಂಡ ಅಕಿ ಕೊಟ್ಟಿದ್ದ ನೋಟ ಮುಟ್ಟಲೇ ಇಲ್ಲಾ, ’ಏ, ತೊಗೊ..ತೊಗೊ’ ಅಂತ ನನ್ನ ಹೆಂಡ್ತಿ ಆ ಕೂಸಿನ ಕೈಯಾಗ ಜಬರದಸ್ತಿ ತುರುಕಿದರು ಅದೇನ ಮುಟ್ಟಲಿಲ್ಲಾ.
ಅಷ್ಟರಾಗ ಅವರವ್ವ ’ಏ ಈಗ್ಯಾಕ ಕೊಡ್ತೀರಿ, ನಾಳೆ ಹೆಸರ ಇಡಲಿಕ್ಕೆ ಬಂದಾಗ ಕೊಟ್ಟಿರಂತ ತೊಗೊರಿ’ಅಂದ್ಲು.
’ಏ, ಒಂದನೇ ಸರತೆ ಕೂಸಿನ ನೋಡಲಿಕ್ಕೆ ಬಂದೇವಿ, ಹಂಗs ಹೋಗಬಾರದು, ಅದು ಪದ್ಧತಿ ಅಲ್ಲಾ’ ಅಂತ ಮತ್ತ ನನ್ನ ಹೆಂಡ್ತಿ ಆ ಹಳೆ ಐವತ್ತರ ನೋಟ ಕೂಸಿನ ಕೈಯಾಗ ತುರಕಲಿಕತ್ಲು. ಆ ಕೂಸ ಜುಪ್ ಅಂದರು ನೋಟ ಹಿಡಿಲಿಲ್ಲಾ. ಅಷ್ಟರಾಗ ನಮ್ಮ ಪ್ರಭ್ಯಾ
’ಲೇ..ದೋಸ್ತ ನನ್ನ ಮಗಳ ಐವತ್ತ, ಇಪ್ಪತ್ತರ ನೋಟ ಮುಟ್ಟೋಕಿ ಅಲ್ಲಾ, ಬೇಕಾರ ನೀ ನೂರರ ನೋಟ ಕೊಟ್ಟ ನೋಡ, ಅಕಿ ಬಿಟ್ಟರ ಕೇಳ’ ಅಂದಾ.
ಅಂವಾ ಹೇಳಿದಂಗ ನಾ ಕಿಸೇದಾಗಿನ ನೂರರ ನೋಟ ತಗದ ಹಿಡಿಲ್ಯೋ ಬ್ಯಾಡೋ ಅಂತ ಕೂಸಿನ ಮುಂದ ಹಿಡಿಯೋದ ತಡಾ ಅದ ನೋಟ ಜಕ್ಕೊಂಡ ಬಿಡ್ತ.
ಹೇಳಿ ಕೇಳಿ ಶೆಟ್ಟಿ ಮಗಳ, ನೂರರ ನೋಟ ಏಕದಮ್ ಗೊತ್ತ ಹಿಡಿತ.
’ಏ, ಮಗಳಿಗೆ ಸಹಿತ ಭಾರಿ ಟ್ರೇನಿಂಗ ಮಾಡಿ ಬಿಡ ಮಗನ’ ಅಂತ ನಾ ಅಂದರ ಅಂವಾ
’ಲೇ, ನನ್ನ ಮಗಳ ನೂರರದ, ಐದನೂರರದ, ಸಾವಿರದ್ದ ಇಷ್ಟ ತೊಗೊತಾಳ, ಅಕಿ ಅಳಬೇಕಾರ ಸಾವಿರರ ನೋಟ ಕೊಟ್ಟರ ಗಪ್ಪ ಆಗಿ ಬಿಡ್ತಾಳ’ ಅಂತ ಹೇಳಿದಾ.
ಅಲ್ಲಾ, ಆ ಸಣ್ಣ ಕೂಸಿಗೆ ನೂರರದ, ಐವತ್ತರದ, ಇಪ್ಪತ್ತರದ ಅಂತ ಹೆಂಗ ಗೊತ್ತಾಗ್ತದ ಏನೋ? ಏನ ಇದು ಸಹಿತ ಹುಟ್ಟ ಜೀನ್ಸನಾಗಿಂದ ಬಂದಿರತದೋ ಏನೋ ಆ ಭಗವಂತಗ ಗೊತ್ತ.
ನಾವು ಸಣ್ಣೊರಿದ್ದಾಗ ಎಂಟಣೆ, ನಾಲ್ಕಾಣೆ ಚಿಲ್ಲರಾಕ್ಕ ಅಣ್ಣಾ-ತಮ್ಮಾ, ಅಕ್ಕ- ತಂಗಿ ಹೊಡದಾಡಿ ಸಾಯಿತಿದ್ವಿ, ಈಗೀನ ಹುಡಗರ ಹತ್ತ ರೂಪಾಯಿ ಕೊಟ್ಟರ ’ ಏನ ಬರತದ ಹತ್ತ ರೂಪಾಯಿಕ್ಕ?’ ಅಂತ ನಮ್ಮ ಮಾರಿ ಮ್ಯಾಲೆ ಒಗದ ಹೋಗ್ತಾವ.
ಕಾಲ ಬದಲಾದಂಗ ಕರೆನ್ಸಿ ವ್ಯಾಲೂನೂ ಬದಲಾಗಲಿಕತ್ತದ ಅಂತ ಅನ್ಕೊಂಡ ನೂರರ ನೋಟ ಪ್ರಭ್ಯಾನ ಮಗಳಿಗೆ ಕೊಟ್ಟ ’ ಸಾಕ ಇನ್ನ ಮತ್ತ ಗಂಡ ಆಗಲಿ ಅಂತ ಮತ್ತೊಂಡ ಹಡದ ಗಿಡದಿ’ ಅಂತ ಅವಂಗ ಬುದ್ಧಿ ಹೇಳಿ ಬಂದ್ವಿ.
ಅವರ ಮನಿ ಇಂದ ವಾಪಸ ಬರಬೇಕಾರ ನನ್ನ ಹೆಂಡತಿ ಏನ ಅಂದ್ಲ ಹೇಳ್ರಿ
’ಅಲ್ಲರಿ ಆ ಕೂಸಿನ ಕೈಯಾಗ ಐವತ್ತರ ಬದ್ಲಿ ನೂರರದ ನೋಟ ಕೊಟ್ಟರಿ..ಅವರಪ್ಪನ ಕಡೆ ಐವತ್ತ ರೂಪಾಯಿ ವಾಪಸ ಇಸ್ಗೊಂಡ ಬರಬೇಕಿಲ್ಲ’ ಅಂತ ಅಂದ್ಲು.
ಏನ್ಮಾಡ್ತೀರಿ?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ