ಒಂದ ಎಂಟ ದಿವಸ ಹಿಂದ ಹಿಂಗs ಫಾಲತು ಬ್ರೌಸಿಂಗ ಮಾಡಬೇಕಾರ ಒಂದ ಇಂಟರೆಸ್ಟಿಂಗ ಟೈಟಲ್ ಕಾಣ್ತ. ’Royal baby worth $376 Million to the British Economy’ ಅಂತ ಇತ್ತ. ಅಲ್ಲಾ ಬರೇ Royal baby worth $376 Million ಅಂತ ಇದ್ದರ ನಂಗು ಅರ್ಥ ಆಗತಿತ್ತ, ಹೇಳಿ ಕೇಳಿ ರಾಜಕುಮಾರ – ರಾಜಕುಮಾರಿ ಕೂಸು, ಅದರಾಗ ಇಂಗ್ಲೆಂಡ ರಾಣಿಮನೆತನದ ಸಿಕ್ಕಾ ಪಟ್ಟೆ ಆಸ್ತಿ ಅದ ಹಿಂಗಾಗಿ ಹುಟ್ಟೊ ಕೂಸಿನ ಹೆಸರಿಗೆ ಇಷ್ಟ ಆಸ್ತಿ ಬರಬಹುದು ಅಂತ ಅನ್ಕೊಂಡ ಸುಮ್ಮನಾಗತಿದ್ದೆ. ಅಲ್ಲಾ ನಂಬದ ಅಗದಿ ಟಿಪಿಕಲ್ ಇಂಡಿಯನ್ ಮೆಂಟಾಲಿಟಿ, ಕೂಸ ಹುಟ್ಟೊ ಪುರಸತ್ತ ಇಲ್ಲದ ಅದರ ಸಂಬಂಧ ಆಸ್ತಿ ಮಾಡಲಿಕ್ಕೆ ಬಡದಾಡೋದು. ಇಲ್ಲಾ ಇದ್ದ ಆಸ್ತಿ ಒಳಗ ಅದಕ್ಕು ಒಂದ ಪಾಲ ಈಗಿಂದ ತಗದ ಇಡೋದ, ಇವೇಲ್ಲಾ ನಮಗ ಅಗದಿ ಕಾಮನ್ ಹಿಂಗಾಗಿ ನಾ ಹಂಗ ಅನ್ಕೊಂಡಿದ್ದೆ.
ಆದರ ಮುಂದ baby worth $376 Million to the British Economy ಅಂತ ಓದಿ ಆಶ್ಚರ್ಯ ಆತ. ಅಲ್ಲಾ ಆ ಪ್ರಿನ್ಸ್ ವಿಲಿಯಮ್ಸ್ ಮತ್ತ ಕೇಟ್ ಮಿಡ್ಲಟನ (ಡಚಿಸ್ ಆಫ್ ಕ್ಯಾಂಬ್ರಿಡ್ಜ್) ಹಡಿಯೋದರಿಂದ ಬ್ರಿಟಿಷ್ ಎಕಾನಮಿಗೆ ಹೆಂಗ ಫಾಯದೆ ಅಂತ ನಾ ತಲಿ ಕೆಡಸಿಗೊಳ್ಳಿಕತ್ತೆ. ನಮ್ಮ ದೇಶದಾಗ ನೋಡಿದ್ರ ನಾವ ಜನಾ ಸಿಕ್ಕಾ ಪಟ್ಟೆ ಹಡದ ಜನಸಂಖ್ಯೆ ಜಾಸ್ತಿ ಆಗಿದ್ದಕ್ಕ ಇವತ್ತ ದೇಶದ್ದ economy ಹಳ್ಳಾ ಹಿಡದದ ಅಂತ ಒದ್ದಾಡಲಿಕತ್ತೇವಿ, ಆದರ ಅಲ್ಲೆ ಆ ಕೂಸ ಹುಟ್ಟೋದರಿಂದ ಇಡೀ ಬ್ರಿಟನ್ನ economyಗೆ ಹೆಂಗ ಫಾಯದೇ ಅಂತ ನಂಗ ಅವರ ಕಥಿ ಓದಿದ ಮ್ಯಾಲೆ ಗೊತ್ತಾತು.
ಅದೇನ ಆಗಿತ್ತಂದರ, ಬ್ರಿಟನದಾಗ ಮಂದಿ royal baby ಹೆಸರಿಲಿ ಅದ ಹುಟ್ಟೋಕಿಂತಾ ಮೊದ್ಲ ಹ್ಯಾಂಡ ಮೇಡ ಬೇಬಿ ಶೂಸ್, ಸಾಕ್ಸ್, ಜೊಲ್ಲ ಪಟ್ಟಿ, ಆಟಗಿ ಸಾಮಾನ, ಬಸರ ಹೆಂಗಸಿನ ಗಾರ್ಮೆಂಟ, ಕುಂಚಗಿ, ಧುಬಟಿ ( ಉಚ್ಚಿ ಅರಬಿ) ಎಲ್ಲಾ ಮಾರಿ ರೊಕ್ಕಾ ಮಾಡಿದರಂತ. ಇಷ್ಟ ಅಲ್ಲಾ ದೊಡ್ಡ ದೊಡ್ಡ ಹೊಟೇಲನಾಗ ಸಾರ್ವಜನಿಕ baby shower ಅಂದರ ಕುಬಸಾ-ಸೀಮಂತಾ (ಬಸರಿದ್ದವರಿಗೆ ಇಷ್ಟ ಮತ್ತ) ಅದು ರಾಯಲ್ ಸ್ಟೈಲನಾಗ ಮಾಡಿ ರೊಕ್ಕಾ ಗಳಸಿದರಂತ. ಕೂಸ ಹುಟ್ಟೊಕಿಂತಾ ಮುಂಚೆ ಕುಲಾವಿ ಹೊಲಿತಾರ ಅಂತಾರಲಾ ಹಂಗ ಅಲ್ಲೆ ಕೂಸು ಹುಟ್ಟೋಕಿಂತ ಮೊದ್ಲ್ ಅದರ ಹೆಸರಲೇ ಮಂದಿ ಕಾಸ ಗಳಸಿದರು. ಒಂದ ನೂರ ಮಿಲಿಯನ್ ಆಟಗಿ ಸಾಮಾನ ಮಾರಿ ಗಳಸಿದರ ಒಂದ ನೂರ ಮಿಲಿಯನ್ ಬರೇ alcohol ಮಾರಿ ಗಳಸಿದರಂತ. ಹೊಸ ರಾಜಕುಮಾರ ಇಲ್ಲಾ ರಾಜಕುಮಾರಿ ಬರ್ತಾಳ ಅಂತ ಇಂಗ್ಲೆಂಡನಾಗ ಜನಾ ಅಷ್ಟ ಕುಡದ ಕುಪ್ಪಳಿಸಿದರು. ಹಂಗ ಮೊನ್ನೆ ರಾಜಕುಮಾರ ಹುಟ್ಟಿದ ಮ್ಯಾಲೆ ಕುಡದಿದ್ದ ಬ್ಯಾರೆ ಮತ್ತ.
ನಾ ಖರೇ ಹೇಳ್ತೇನಿ ನಮ್ಮವ್ವ ಏನರ ಆ ಇಂಗ್ಲೆಂಡನಾಗ ಇದ್ದಿದ್ದರ ಮಸ್ತ ಗಳಸ್ತಿದ್ಲು. ಅಕಿಗೆ ಏನಿಲ್ಲದ ಸಂಬಂಧ ಇರಲಿ ಬಿಡಲಿ ಯಾರರ ನಮಗ ಗೊರ್ತ ಇದ್ದೊರ ಬಸರ ಇದ್ದಾರ ಅಂತ ಗೊತ್ತ ಆದರ ಸಾಕ ಅವರ ಹಡಿಯೋಕಿಂತಾ ಆರ ತಿಂಗಳ ಮೊದ್ಲ ತನ್ನ ಹಳೆ ಸಿರಿ ಹರದ ಕುಂಚಗಿ, ಧುಬಟಿ ಹೋಲಿಯೋ ಚಟಾ ಇನ್ನ ಹಂಗ ಇಂಗ್ಲೆಂಡ ರಾಜಕುಮಾರಿ ಹಡಿತಾಳ ಅಂದರ ಬಿಡತಿದ್ಲಾ? ಅಗದಿ ನೀರಿಗೆ ಹಾಕಲಾರದ್ದ ಹೊಸಾ ಸೀರಿನ ಹರದ ಹೊಲಿತಿದ್ಲು.
“ಅಲ್ಲಾ, ನಾವು ರಾಯಲ್ ಕುಂಚಗಿ, ರಾಯಲ್ ಧುಬಟಿ, ಇಷ್ಟs ಏನ ಅಂಟಿನ ಉಂಡಿ , ಕೇರ ಅಡಿಕೆ ಎಲ್ಲಾ ಮಾಡಿ ಮಾರಿ ಒಂದ ಸ್ವಲ್ಪ ರೊಕ್ಕಾನರ ಮಾಡಬಹುದಿತ್ತ ಬಿಡೊ ಪ್ರಶಾಂತಾ” ಅಂತ ಒಂದ ಹತ್ತ ಸರತೆ ನನ್ನ ಮುಂದ ಹೇಳಿ ಹೇಳಿ ಪಾಪ ಭಾಳ ಹಳಾಳಿಸಿದ್ಲು.
ಇನ್ನ ಹಿಂಗ ಇಡಿ ದೇಶದಾಗ ಸಂಬಂಧಿಲ್ಲಾ ಸಾಟಿ ಇಲ್ಲದ ಮಂದೆಲ್ಲಾ royal baby ಹೆಸರಿನಾಗ ಬೇಕಾ ಬಿಟ್ಟಿಗಳಸೋದನ್ನ ನೋಡಿ ಮನಿ ಮಂದಿ ಸುಮ್ಮನ ಕುಡತಾರ? ರಾಜಕುಮಾರಿ (kate middleton) ಪೇರಂಟ್ಸ ಸಹಿತ ತಮ್ಮ ಕಂಪನಿ ಒಳಗ “baby arrival” ಅಂತ ಸ್ಪೇಶಲ್ ರೇಂಜ ಆಫ್ ಪ್ರೊಡಕ್ಟ್ಸ ಮಾಡಿ ಮಾರಲಿಕತ್ತರು. ಏನ್ಮಾಡ್ತೀರಿ? ಇದನ್ನ ನೋಡಿ ಇಂಗ್ಲೆಂಡದಾಗ ಮಿಡಿಯಾದವರು ’Middletons are exploiting their grandchildren bloodline’ ಅಂತ ಪೇಪರ ತುಂಬ ಬರದರು ಅವರೇನ ಅದರ ಬಗ್ಗೆ ತಲಿ ಕೆಡಸಿಗೊಳ್ಳಿಲ್ಲಾ ಆ ಮಾತ ಬ್ಯಾರೆ.
royal baby ಕಥಿ ಇಷ್ಟಕ್ಕ ಮುಗಿಲಿಲ್ಲ. ಇಂಗ್ಲೆಂಡದಾಗ ಈ ಬೇಬಿ ಮ್ಯಾಲೆ ಜೋರ ಬೆಟ್ಟಿಂಗ ಬ್ಯಾರೆ ನಡದಿತ್ತಂತ. ಏನ ಹುಟ್ಟತದ, ಏನ ಹೆಸರ ಇಡತಾರ, ಕೂದ್ಲ ಯಾ ಬಣ್ಣದ್ದ ಇರತದ, ಅಪ್ಪನಂಗ ಇರತದೋ ಇಲ್ಲಾ ಅವ್ವನಂಗ ಇರತದೊ, ಅದರ zodiac sign ಯಾವದ ಬರತದ, ತೂಕ ಎಷ್ಟ ಪೌಂಡ ಮ್ಯಾಲೆ ಇರ್ತದ ಅಂತೇಲ್ಲಾ ಬೆಟ್ಟಿಂಗ್ ಶುರು ಆಗಿತ್ತ. ಅಲ್ಲಾ, ಹಂಗ ಅಲ್ಲೆ ಬೆಟ್ಟಿಂಗ ಏನ ಬ್ಯಾನ ಇಲ್ಲಾ ಖರೇ ಆದರ ಮೊದ್ಲs ಇಷ್ಟ ಬೆಟ್ಟಿಂಗ ನಡಿತದ ಅಂತ ಗೊತ್ತಿದ್ದರ ನಮ್ಮ Indian ಬುಕಿ ಯಾರರ fixingರ ಮಾಡತಿದ್ದರೋ ಏನೊ?
ಇನ್ನೊಂದ ಮಜಾ ಅಂದರ ತನ್ನ ಮ್ಯಾಲೆ ದೇಶದ್ದ economyನ ನಿಂತದ, ಜನಾ ನನ್ನ ಹೆಸರಲಿ ಮಸ್ತ ದುಡಕೊಳಿಕತ್ತಾರ ಅನ್ನೋದ ಆ royal babyಗೂ ಗೊತ್ತಾಗಿತ್ತ ಕಾಣತದ ಅದು ಸಹಿತ ಇವರ ಎಷ್ಟ ದುಡಕೋತಾರ ದುಡಕೋಳಿ ತಡಿ ಅಂತ ಒಂದ ಹತ್ತ ದಿವಸ ಲೇಟಾಗಿ ಹತ್ತರಾಗ ಹೊರಗ ಬಂತ. ಇದಕ್ಕೇನಂತೀರಿ?
ಅಲ್ಲಾ, ಅದೇನ ಇರಲಿ ಈ ಮಂದಿಗೆ ಯಾಕ ಇಷ್ಟ royal baby ಬಗ್ಗೆ ಕ್ರೇಜ್ ಅಂತ ಗೊತ್ತಾಗಲಿಲ್ಲಾ. ಯಾರೋ ಹಡೆಯೋರು ಯಾರೋ ಬಾಣಂತನ ಮಾಡೋರು ಜನಾ ಯಾಕ ಇದನ್ನ ಇಷ್ಟ ದೊಡ್ಡ ಇಶ್ಯು ಮಾಡ್ತಾರ ಒಂದು ಗೊತ್ತಾಗಲಿಲ್ಲಾ. ಅಲ್ಲಾ ಈಗ ನನ್ನ ನೋಡ್ರಿ, ನನ್ನ ಹೆಂಡ್ತಿ ತಮ್ಮನ ಹೆಂಡ್ತಿ ಹಡದದ್ದ ನನಗ ಗೊತ್ತಾಗಿದ್ದ ಅವರ ನಮಗ ಹೆಸರ ಇಡಲಿಕ್ಕೆ ಕರದಾಗ. ಅಲ್ಲಿ ತನಕ ನನಗ ಅಕಿ ಬಸರ ಇದ್ದಿದ್ದ ಸಹಿತ ಗೊತ್ತ ಇದ್ದಿದ್ದಿಲ್ಲಾ. ಹಂತಾವ ಇವತ್ತ ಅಲ್ಲೆ ಇಂಗ್ಲೆಂಡ ರಾಜಕುಮಾರಿ ಹಡದದ್ದರ ಬಗ್ಗೆ ಇಲ್ಲೆ ಲೇಖನಾ ಬರದೇನಿ ಅಂದ್ರ ಏನ ಹೇಳಬೇಕ? ಅಕಿ ಏನ ನನ್ನ ಹೆಂಡತಿ ತಂಗೀನ? ಅಕಿ ಬಗ್ಗೆ ಬರದಿದ್ದನ ಓದಲಿಕ್ಕೆ ಅಕಿ ಏನ ನಿಮಗ ಸಂಬಂಧ? ಹಂಗ ರಾಜಕುಮಾರಿ ಹಡದದ್ದಕ್ಕ ಏನ ನಮಗ್ಯಾರಿಗೂ ಹತ್ತ ದಿವಸ ರಿದ್ದಿ ಇಲ್ಲಾ ಅವರೇನ ನಮಗ ತೊಟ್ಲಾ ಹಾಕಲಿಕ್ಕೆ ಕರಿಯಂಗಿಲ್ಲಾ, ಇನ್ನ ಅವರ ನಮ್ಮ ಮನಿಗೇ ಅಂಟಿನ ಉಂಡಿ ಕೊಟ್ಟ ಕಳಸೋದು, ನಾವ ಕೂಸಿನ ನೋಡಲಿಕ್ಕೆ ಹೋಗಿ ಕೂಸಿನ ಕೈಯಾಗ ಇಪ್ಪತ್ತ ರೂಪಾಯಿ ಕೊಟ್ಟ ಬರೋದು ಎಲ್ಲಾ ಆಗಲಾರದ ಮಾತು. ಆದ್ರು ಇಷ್ಟ ಯಾಕ ತಲಿಕೆಡಿಸ್ಗೋತೇವಿ ಗೊತ್ತಿಲ್ಲಾ.
ಇನ್ನ International ಮೀಡಿಯಾ ಅಂತೂ ಹೇಳೊ ಹಂಗ ಇಲ್ಲಾ. breaking news ಅಂತ ಅಕಿ ಹಡದಿದ್ದನ್ನ ಹೇಳಿದ್ದ ಹೇಳಿದ್ದ. ಯಾವಾಗ ಅಕಿಗೆ ಒಂಬತ್ತ ದಾಟತ ಆವಾಗಿಂದ ಅಕಿ ಹಡೆಯೋ ತನಕ live telecast ಅಂತ ಮಿಡಿಯಾದವರ ದಾವಾಖಾನಿ ಮುಂದ ಒಂದ ಪೌಂಡ ಬ್ರೆಡ್ ಹಿಡಕೊಂಡ ನಿಂತ ಬಿಟ್ಟಿದ್ದರ ಬಿಡ್ರಿ.
ಇನ್ನ ನಮ್ಮ Indian mediaದವರ ಬಿಡತಾರ ಇವರು live from Buckingham Palace ಅಂತ ತೊರಿಸಿದ್ದ ತೊರಿಸಿದ್ದ. ಹಂಗ ನಮ್ಮ ರಾಹುಲ baby ಹಡದಿದ್ದರ ಮಾತ ಬ್ಯಾರೆ ಇತ್ತ. ಹೌದಪಾ ಇವತ್ತೀಲ್ಲಾ ನಾಳೆ ಆ ಕೂಸ (rahul’s royal baby) ನಮ್ಮ ದೇಶದ್ದ ಪ್ರಧಾನ ಮಂತ್ರಿ ಆಗೋದ ಅಂತ ನಾವು ನಮ್ಮ ರೊಕ್ಕದಲೇ ಒಂದ ಕೆ.ಜಿ ಧಾರವಾಡ ಪೇಡೆ ಇಲ್ಲಾ ಮಿಶ್ರಾ ಜಿಲೇಬಿ ತಂದ ಹಂಚ ಬಹುದಿತ್ತ. ಆವಾಗ ಮೀಡಿಯಾದವರು ಭಾವಿ ಪ್ರಧಾನಿ ಅಂತ breaking ಮ್ಯಾಲೆ breaking news ಕೊಡಬಹುದಿತ್ತ. ಹೌದಲ್ಲ ಮತ್ತ?
ಅಲ್ಲಾ ಹಂಗ ನಮ್ಮ ರಾಹುಲ ಹಡದರ ನಮ್ಮ ದೇಶದ್ದ economyನೂ improve ಆಗೋಹಂಗ ಇತ್ತಂದರ ಒಂದ ಯಾಕ ಹತ್ತ ಹಡಿಲಿ ಬಿಡ್ರಿ ಯಾರ ಬ್ಯಾಡ ಅಂದಾರ. ಅಲ್ಲಾ ಒಂದ ಸರತೆ ಖರೇನ ಇದರ ಬಗ್ಗೆ ರಾಹುಲ ಸಿರಿಯಸ್ ಆಗಿ ವಿಚಾರ ಮಾಡಬೇಕ ಅನಸ್ತದ.
ಆದರು ಯಾರರ ಇಂಗ್ಲೆಂಡ ರಾಜಕುಮಾರಿ ಹಡದದ್ದ ನಮಗ ಗೊತ್ತಿದ್ದಿದ್ದಿಲ್ಲಾ. facebookನಾಗ ಅಕಿ status message ಕಾಣಲೇ ಇಲ್ಲಾ ಈಗ ನಿಮ್ಮ ಲೇಖನಾ ಓದಿದ ಮ್ಯಾಲೆ ಗೊತ್ತಾತು ಅನ್ನೋರಿದ್ದರ ಲಗೂನ ಇಂಗ್ಲೆಂಡ ರಾಜಕುಮಾರಿಗೆ congrats ಹೇಳಿ ಬಿಡ್ರಿ ಮತ್ತ. ಅದs ಹೇಳಿದ್ನೆಲ್ಲಾ ಮುನ್ನೂರ ಮಿಲಿಯನ್ ಕೂಸ ಅದು, third in line to the throne. 2014ರಾಗ ನಮ್ಮ ದೇಶದ್ದ ಪ್ರಧಾನಿ ಯಾರ ಆಗ್ತಾರೊ ಏನೋ ಗೊತ್ತಿಲ್ಲಾ ಆದರ ಈ ಕೂಸ ಮಾತ್ರ ಇವತ್ತಿಲ್ಲಾ ನಾಳೆ ಇಂಗ್ಲೆಂಡದ ರಾಜಾ ಆಗೋದ ಗ್ಯಾರಂಟೀ.
ಅನ್ನಂಗ ನಮ್ಮವ್ವ ಆ ರಾಯಲ್ ಕೂಸಿಂದ ಇಷ್ಟೇಲ್ಲಾ ಕಥಿ ಕೇಳಿ ಆ ಕೂಸ ಆಡಸಲಿಕ್ಕೆ ಒಂದ ಹಾಡ ಬರದ facebookನಾಗ ಹಾಕ ಅಂತ ಕೊಟ್ಟಾಳ ಒಂದ ಸರತೆ ನೀವು ಕೇಳಿ ಬಿಡ್ರಿ please…
ಕೂಸ ಬಂತ ಕೂಸ..ಮುನ್ನೂರ ಮಿಲಿಯನ್ ಕೂಸು
ಯಾರ ಮನಿ ಕೂಸ..ರಾಣಿ ಮನಿ ಕೂಸು
ಯಾ ಊರ ರಾಣಿ..ಇಂಗ್ಲೆಂಡ ರಾಣಿ
ಇಲ್ಲಿಗ್ಯಾಕ ಬಂತು..ಹಾದಿ ತಪ್ಪಿ ಬಂತು
ಹಾದಿಗೊಂದ ದುಡ್ಡು..ಬೀದಿಗೊಂದ ದುಡ್ಡು
ಅದ ದುಡ್ಡ ಕೊಟ್ಟ..ರಾಯಲ್ ಪಿಜ್ಜಾ ತಂದು
ಪರಾ ಪರಾ ಹರದು…ಎಲ್ಲಾರಿಗು ಕೊಟ್ಟು
ಕೂಸಿನ ಬಾಯಾಗ ಬಟ್ಟು…