ಈ ಕೆಂಡಸಂಪಿಗೆ ಅಂದ್ರ ಏನ ಅಂತ ನನ್ನ ಹೆಂಡತಿಗೆ ನಾ ಒಂದ್ಯಾರಡ ಲೇಖನಾ ಬರೇಯೊತನಕಾ ಗೊತ್ತ ಇದ್ದಿದ್ದಿಲ್ಲಾ, ಅಲ್ಲಾ ಹಂಗ ನನಗೂ ಬರೇಯೋಕಿಂತ ಮುಂಚೆ ಗೊತ್ತಿದ್ದಿಲ್ಲಾ ಆ ಮಾತ ಬ್ಯಾರೆ. ಆದ್ರ ನಾ ಇತ್ತೀಚಿಗೆ ಕೆಂಡಸಂಪಿಗೆ ಜೊತಿ ಹೊತ್ತ ಕಳದಷ್ಟ ನನ್ನ ಹೆಂಡತಿ-ಮಕ್ಕಳ ಜೊತಿನು ಕಳೆಯಂಗಿಲ್ಲಾ ಹಿಂಗಾಗಿ ಅಕಿ ಕೆಂಡಸಂಪಿಗೆ ಕಂಡ್ರ ಉರದ ಬೀಳ್ತಾಳ. ಅಲ್ಲಾ, ಬರೆ ನಾ ಅಕಿ ಕಡೆ ಲಕ್ಷ ಕೊಡಂಗಿಲ್ಲಾ ಅಂತ ಇಷ್ಟs ಅಲ್ಲಾ, ಆದರ ನಾ ಅದರಾಗ ಅಕಿ ಬಗ್ಗೆ ಜಾಸ್ತಿ ಬರಿತೇನಲಾ ಅದಕ್ಕ.
ಮೊನ್ನೆ ನಾ ಅಕಿಗೆ “ಅಲ್ಲಾ ನಾ ಬರೇಯೋದ ಲೈಕ ಆಗಲಿಲ್ಲಾ ಅಂದ್ರ ನೀ ಅದನ್ನ ಓದಬ್ಯಾಡ ಆದರ ನೀ ಸುಳ್ಳ ಕೆಂಡಸಂಪಿಗೆಗೆ ಯಾಕ ಬೈತಿ” ಅಂದರ
“ಸುಮ್ಮನ ಬಾಯಿ ಮುಚಗೊಂಡ ಬರೀರಿ, ಅದೇನ ಖಮ್ಮಗ ಬರೀತಿರಿ ಅಂತ ನಿಮ್ಮ ಲೇಖನಾ ಅದರಾಗ ಹಾಕ್ತಾರೋ ಆ ದೇವರಿಗೆ ಗೊತ್ತ. ಆ ಸಂಪಾದಕರಿಗೆರ ತಿಳಿತದೋ ಇಲ್ಲೊ ಅಂತೇನಿ” ಅಂದ್ಲು. ಅಯ್ಯ, ಇವನೌನ ಇಕಿಗೆ ಏನ ತಲಿ ಗೊತ್ತ ನನ್ನ ಲೇಖನದ ಮಹತ್ವ ಅಂತ ನಾ
“ಲೇ, ಹುಚ್ಚಿ, ಕೆಂಡಸಂಪಿಗೆ ಒಳಗ ಇದ್ದದ್ದ ಇದ್ದಂಗ, ಯಾರದು ಭಿಡೆ ಇಲ್ಲದ, ನನ್ನ ತಲ್ಯಾಗ ತಿಳದದ್ದ ಬರೇಯೊಂವಾ ಅಂದರ ನಾ ಒಬ್ಬನ, ನಿಂಗೇನ ತಲಿ ಗೊತ್ತ. ಮಂದಿ ನನ್ನ ಲೇಖನಾ ಬರೋದನ್ನ ಕಾಯತಿರತಾರ” ಅಂದೆ.
“ಅದ ಹೇಳೊದ ನಾ, ನಿಮ್ಮ ತಲ್ಯಾಗ ಏನ ಅದ ಅಂತ ತಲ್ಯಾಗ ತಿಳದಂಗ ಬರೀತಿರಿ ತಲಿ. ನೀವ ಬರದಿದ್ದ ನಾಲ್ಕ ಮಂದಿ ಓದೊದ ನನ್ನ ಬಗ್ಗೆ ಬರೀತಿರಿ ಅಂತ. ಅದಕ್ಕ ನಾ ತಲಿಕೆಟ್ಟ ನಿಮ್ಮ ಸಂಪಾದಕರಿಗೆ ಒಂದ ಪತ್ರ ಬರದೇನಿ, ಅದನ್ನ ಇಮೇಲ್ ಮಾಡಸ್ತೇನಿ ತಡಿರಿ” ಅಂದ್ಲು.
ಇಕಿ ಇಮೇಲ್ ಮಾಡಸ್ತೇನಿ ಅಂತ ಯಾಕ ಅಂದಳು ಅಂದರ ಈ ಫಿಮೇಲಗೆ ಇಮೇಲ್, ಜಿಮೇಲ್ ಫರಕs ಗೊತ್ತಿಲ್ಲಾ, ಎಲ್ಲಾದಕ್ಕೂ ನನ್ನಂತಾ ಮೇಲ್ ಮ್ಯಾಲೆ ಡಿಪೆಂಡ್.
ಆದರೂ ಇಕಿ ಇಮೇಲ ಹಾಕ್ತಾಳ ಅಂದ ಕೂಡಲೇ ಗಾಬರಿ ಆದೆ. ಅಲ್ಲಾ, ಇಕಿ ಏನರ ಹುಚ್ಚುಚಾಕಾರ ಗಂಡಗ ಬೈದ ಬರಿಬೇಕs, ಕಡಿಕೆ ನಮ್ಮ ಸಂಪಾದಕರ ಯಾವದರ ಮೂಡ ಒಳಗ, ಲಾಸ್ಟ ಮುಮೆಂಟಗೆ ಪಾಪ ಅವರಿಗೆ ಓದಲಿಕ್ಕೆ ಬ್ಯಾರೆ ಟೈಮ ಇರಂಗಿಲ್ಲಾ, ಕಡಿಕೆ ಇದು ಒಂದ ಲೇಖನಾ ಅಂತ ತಿಳ್ಕೊಂಡ ಎಲ್ಲರ ಕೆಂಡಸಂಪಿಗೆ ಒಳಗ ಹಾಕಿ ಗೀಕಿ ನಂದ ಇದ್ದಿದ್ದ ಮೂರ ಪೈಸಾ ಮರ್ಯಾದಿನೂ ಮೂರಾಬಟ್ಟಿ ಆಗಿತ್ತ ಅಂತ ಅನಸಲಿಕತ್ತ. ಅಲ್ಲಾ, ಆದರ ನನ್ನ ಹೆಂಡತಿಗೆ ಕೆಂಡಸಂಪಿಗೆ ಸಂಪಾದಕರಿಗೆ ಪತ್ರ ಬರೇಯೊ ಅಷ್ಟ ತ್ರಾಸ ಏನಾಗೆದ ಅಂತ ನಾ ಅಕಿನ್ನ ಕೇಳಿದರ,
“ಅಲ್ರಿ ನಂಗ ಇತ್ತೀಚಿಗೆ ಎಲ್ಲರ ನಾಲ್ಕ ಮಂದಿ ಸೇರಿದ್ದ ಫಂಕ್ಶನಗೆ ಹೋದರ ‘ಕೆಂಡಸಂಪಗಿ’,’ಕೆಂಡಸಂಪಗಿ’ಅಂತ ಕಾಡಸ್ತಾರ” ಅಂದ್ಲು.
“ಅಲ್ಲಾ, ನಾ ಕೆಂಡಸಂಪಗಿ ಅಲ್ಲಾ, ಕಾಡ ಮಲ್ಲಿಗೆ ಅಂತ ಹೇಳ್ಬೇಕಿಲ್ಲ” ಅಂತ ನಾ ಅಂದರ ಅಗದಿ ಕಣಗಲ ಹೂಗತೆ ಕಣ್ಣ ತಗದ್ಲು. ನಾ ಹೆದರಿ ಕಮಲದ ಹೂ ಗತೆ ಮುಚಗೊಂಡ ಕೂತೆ.
ಅವನೌನ ನಾ ಖರೆ ಹೇಳ್ತೇನಿ ಮೊದ್ಲ ಇದ ಮಂದಿ ನಂಗ ‘ಏನಪಾ ಕೆಂಡಸಂಪಗಿ ಅಂತಿದ್ದರು’ ಈಗ ಇಕಿಗೆ ಬೆನ್ನ ಹತ್ಯಾರ, ಏನ ಮಾಡ್ತೀರಿ? ಅಲ್ಲಾ ಎಲ್ಲಾ ಬಿಟ್ಟ ಅಕಿಗೆ ಯಾಕ ಹಂಗ ಅಂತಾರ ಅಂತ ಕೇಳಿದರ
“ಮತ್ತೇನ ಮಾಡ್ತಾರ, ನೀವು ಕೆಂಡಸಂಪಿಗೆ ಒಳಗ ನನ್ನ ಬಗ್ಗೆ ಅಷ್ಟ ಛಂದ ಬರದರ, ಹೋದಲ್ಲೆ-ಬಂದಲ್ಲೆ, ಮಂದಿ ‘ಆಡೂರವರ ಕೆಂಡಸಂಪಿಗೆ ಒಳಗ ಬರಿತಾರಲಾ ತಮ್ಮ ಹೆಂಡತಿ ಬಗ್ಗೆ, ಇಕಿನ ಆ ಹೆಂಡತಿ’ ಅಂತಾರ” ಅಂದ್ಲು. ಈ ಜನಾನೂ ಹೇಳ್ತೇನಿ ಒಟ್ಟ ಸುಮ್ಮನ ಕೂಡಂಗಿಲ್ಲಾ, ಬರೇ ಕಿಡ್ಡಿ ಮಾಡ್ಕೋತ ಇರತಾರ.
ಇವರ ಮೊದ್ಲ ಎಲ್ಲರ ನನ್ನ ಹೆಂಡತಿ ಭೆಟ್ಟಿ ಆದರ “ನಿಮ್ಮ ಮನೇಯವರ ಏನರಿ ಕೆಂಡಸಂಪಿಗೆ ಒಳಗ ಭಾರಿ ಬರಿತಾರಲಾ” ಅಂತಿದ್ದರು. ಆವಾಗ ನನ್ನ ಹೆಂಡತಿ ಖುಷ್ ಇದ್ಲು. ಮುಂದ ಒಂದ ಸ್ವಲ್ಪ ದಿವಸಕ್ಕ “ನಿಮ್ಮ ಮನೇಯವರ ಏನರಿ ನಿಮ್ಮ ಬಗ್ಗೆ ಭಾರಿ ಬರಿತಾರಲಾ” ಅಂದ್ರು, ಆವಾಗ ನನ್ನ ಹೆಂಡತಿ ಇನ್ನೂ ಖುಷ್ ಆದ್ಲು. ಆದರ ಬರಬರತ ನಾ ಅಕಿ ಬಗ್ಗೆ ಬರೇಯೋದ ಜಾಸ್ತಿ ಆದಂಗ ಆದಂಗ ಮಂದಿ “ನಿಮ್ಮ ಮನೇಯವರ ಏನ್ರಿ, ನಿಮ್ಮ ಬಗ್ಗೆ ಏನಬೇಕಾದ್ದ ಬರೀತಾರಲಾ ಕೆಂಡಸಂಪಿಗೆ ಒಳಗ” ಅಂತ ಅನ್ನಲಿಕ್ಕೆ ಶುರು ಮಾಡಿದರು, ಆವಾಗಿಂದ ಇಕಿದ ಕಿರಿಕಿರಿ ಶುರು ಆತ ನೋಡ್ರಿ. ಅದನ್ನ ಬರಿಬ್ಯಾಡರಿ, ಇದನ್ನ ಬರಿಬ್ಯಾಡರಿ ಅಂತ ಒಂಥರಾ ಸೆನ್ಸರ ಬೋರ್ಡ ಮಾಡಿದಂಗ ಮಾಡಲಿಕತ್ಲು.
ಕಡಿಕೆ ಬರಬರತ ನಾ ಅಕಿಗೆ ಕೆಂಡಸಂಪಿಗೆ ಒಳಗ ಬರದದ್ದನ್ನ ಮನ್ಯಾಗ ಹೇಳೋದ ಬಿಟ್ಟ ಬಿಟ್ಟೆ. ಆದ್ರ ನಿಮ್ಮಂತಾ ಓದೊರ ಬಿಡಬೇಕಲಾ, ಇತ್ತಲಾಗ ನನಗ ಹೆಂಡತಿ ಬಗ್ಗೆ, ನಿಮ್ಮ ಮನೆ ಬಗ್ಗೇನ ಬರೀರಿ, ಭಾಳ ಛಲೋ ಬರೀತಿರಿ ಅಂತಾ ಹವಾ ಹಾಕೊರು ಅತ್ತಲಾಗ ನಮ್ಮ ಮನಿಗೆ ಫೊನ ಮಾಡಿ ಒಂದಿಷ್ಟ ಹೆಣ್ಣಮಕ್ಕಳು
“ನಿನ್ನ ಗಂಡ ಹೆಂಗ ಬರದಾನ್ವಾ ನಿನ್ನ ಬಗ್ಗೆ, ನಿನ್ನ ಜಾಗಾದಾಗ ನಾ ಏನರ ಇದ್ದಿದ್ದರ ನಾ ಅವಂಗ ಡೈವರ್ಸ ಕೊಡತಿದ್ದೆ” ಅಂತ ಒಬ್ಬಾಕಿ ಅಂದರ ಇನ್ನೊಬ್ಬಕಿ “ನನ್ನ ಗಂಡ ಏನರ ಹಂಗ ಬರದಿದ್ದರ ನಾ ಅವನ್ನ ಮುಗಿಸೆ ಬಿಡ್ತಿದ್ದೆ” ಅಂತ ಹೇಳೋಕಿ. ಅಲ್ಲಾ ಅವರಿಗೆ ಗೊತ್ತಿಲ್ಲಾ ಅವರ ಗಂಡಂದರ ಪ್ರತಿ ಸಲಾ ನನ್ನ ಲೇಖನಾ ಓದಿ ಖುಷೀಲೇ ನಮ್ಮ ಮನಸ್ಸಿನಾಗ ಇದ್ದದ್ದನ್ನ ಬರದಿ ಅಂತ ನಂಗ ಹೇಳಿ ಒಂದ ಐವತ್ತ ಮಂದಿಗೆ ಲೇಖನದ ಲಿಂಕ್ ಮೇಲ ಮಾಡ್ತಾರಂತ.
ಒಂದಿಷ್ಟ ಮಂದಿ ನನಗೂ ಕೇಳ್ತಿದ್ದರು “ಅಲ್ಲಾ, ನಿಮ್ಮ ಹೆಂಡತಿ ನೀವ ಬರದಿದ್ದ ಎಲ್ಲಾ ಓದತಾಳೇನು?” ಅಂತ. ನಾ ಓದತಾಳ ಅಂದರ
“ಮತ್ತ ನಿಮ್ಮ ಹೆಂಡತಿ ಇದನ್ನೇಲ್ಲಾ ಓದಿ ಹೆಂಗ ನಿಮ್ಮನ್ನ ಮನ್ಯಾಗ ಸುಮ್ಮನ ಬಿಟ್ಟಾಳರಿ, ನೀವ ಖರೇನ ಗಂಡಸ ಬಿಡ್ರಿ, ನಾವ ಮನಸ್ಸಿನಾಗ ಬೈಲಿಕ್ಕೂ ಹೆದರೋ ವಿಷಯ ನೀವು ಬರದ ಹೇಳ್ತಿರಿ” ಅಂತ ಅಡ್ಡ ನಮಸ್ಕಾರ ಹಾಕೋರು.
ಅಲ್ಲರಿ, ನನ್ನ ಹೆಂಡತಿ, ನಾ ಬರೇಯೊಂವಾ ಮಂದಿದೇನ ಗಂಟ ಹೋತ ಅಂತ. ಸುಮ್ಮನ ನಾ ಬರದದ್ದ ಓದಿದರ ಮುಗಿತರಿಪಾ, ನಾ ನನ್ನ ಹೆಂಡತಿ ಬಗ್ಗೇರ ಬರಿವಲ್ನ್ಯಾಕ, ನಮ್ಮವ್ವನ ಬಗ್ಗೆರ ಬರಿವಲ್ನ್ಯಾಕ. ಅಲ್ಲಾ ಹಂಗ ನಾ ಏನ ಮಂದಿ ಹೆಂಡತಿ ಬಗ್ಗೆ ಬರದೇನ? ಇಲ್ಲಾ. ಒಟ್ಟ ಈ ಜನಾ ಸುಮ್ಮನ ಓದಿ ಬಿಡೋರಲ್ಲಾ.
ಅದ ಇರಲಿ, ನನ್ನ ಹೆಂಡತಿ ಈ ಸಂಪಾದಕರಿಗೆ ಏನ ಪತ್ರ ಬರದಾಳ ಅಂತ ಅಕಿ ಪತ್ರ ತಗದ ನೋಡಿದ್ರ, ಅಕಿ ಬರದಿದ್ದ ಇಷ್ಟ,
“ಮಾನ್ಯ ಸಂಪಾದಕರೆ,
ನಿಮಗ ಇದ್ದದ್ದ ಇದ್ದಂಗ ಹೇಳಬೇಕಂದರ ನೀವು ಸಂಪಾದಕರಾಗಿ ಹಿಂಗ ಮತ್ತೊಬ್ಬರ ಹೆಂಡತಿ ಬಗ್ಗೆ ಬರದ ಲೇಖನಾ ಆ ಹೆಂಡತಿ ಪರ್ಮಿಶನ್ ಇಲ್ಲದ ಪಬ್ಲಿಶ್ ಮಾಡೊದ ನಂಗೇನ ಸರಿ ಕಾಣವಲ್ತ ಬಿಡ್ರಿ, ನೀವ ನಿಮ್ಮ ಕೆಂಡಸಂಪಿಗೆ ಪಾಪ್ಯುಲಾರಿಟಿ ಸಂಬಂಧ, ಅದನ್ನ ತುಂಬಸಲಿಕ್ಕೆ ಹಿಂಗ ನನ್ನ ಗಂಡನ ಕಡೆಯಿಂದ ನನ್ನ ಬಗ್ಗೆ ಹೆಂಗ ಬೇಕ ಹಂಗ ಬರಿಸಿ-ಬರಿಸಿ ನಮ್ಮ ಸಂಸಾರದಾಗ ಹುಳಿ ಹಿಂಡಲಿಕತ್ತೀರಿ ಅಂತ ನನಗ ಅನಸಲಿಕತ್ತದ. ಹಂಗ ನಿಮಗ ಹೆಂಡತಿ ಬಗ್ಗೆ ಬರಿಯೋ ಬ್ಯಾರೆ ಧೈರ್ಯ ಇದ್ದ ಗಂಡಸರ ಸಿಕ್ಕಿಲ್ಲಾ ಅಂತ ನನಗ ಗೊತ್ತ, ಹಿಂಗಾಗಿ ಹಂತಾ ಭಂಡ ಧೈರ್ಯ ನನ್ನ ಗಂಡನ ಕಡೆಯಿಂದ ಮಾಡಸಲಿಕತ್ತೀರಿ. ನನ್ನ ಗಂಡಗು ಬುದ್ಧಿ ಇಲ್ಲಾ ಯಾವದು ಬರೀಬೇಕು ಯಾವದ ಬಿಡಬೇಕು ಅಂತ ತಿಳಿಲಾರದ ತಾ ಏನೋ ದೊಡ್ಡ ಬರಹಗಾರ ಅನ್ನೋರಗತೆ ಕೆಂಡಸಂಪಿಗೆ ಒಳಗ ಬರೋ ಆ ಸುಡಗಾಡ ನಾಲ್ಕೈದ ಕಮೆಂಟ ಸಂಬಂಧ ಬರಕೋತ ಹೊಂಟಾನ. ಇಲ್ಲೆ ಮಗ್ಗಲದಾಗಿನ ಹೆಂಡತಿಗೆ ಹೊರಗ ಮಂದಿ ಹೆಂಗ ಕಮೆಂಟ ಮಾಡಲಿಕತ್ತಾರ ಅನ್ನೋ ಖಬರ ಸಹಿತ ಇರಲಾರದ ಖಬರಗೇಡಿ ಆಗ್ಯಾನ.
ಹೆಂಡತಿ ಅಂದರ ಗ್ರಹಣ ಅಂತ ಬರಿಲಿಕ್ಕೆ ಶುರು ಮಾಡಿದ ನನ್ನ ಗಂಡ ನನ್ನ ಬಗ್ಗೆ ಏನ ಬೇಕಾದ್ದ ಬರದಾ, ಅಲ್ಲಾ ಅವಂಗಂತೂ ಬುದ್ಧಿ ಇಲ್ಲಾ, ತಿಳಿಯಂಗಿಲ್ಲಾ, ನಿಮಗರ ತಿಳಿತದೊ ಇಲ್ಲೊ? ನನಗ ಕನ್ಯಾ ತೊರಸಲಿಕ್ಕೆ ಕರಕೊಂಡ ಹೋಗಿದ್ದರಿಂದ ಹಿಡದ ಮೊನ್ನೆ ಹನ್ನೇರಡ ವರ್ಷದ ಹಿಂದಿನ ಹನಿಮೂನ ತನಕ ಎಲ್ಲಾ ಬರಿಸಿಸಿದರಿ. ಇಂವಾ ‘ನಂದ ಡೇಟ ಅದ ನಾ ಬರೋದ ಡೌಟ’ ಲೇಖನಾ ಬರದಾಗಿಂದ ನಂಗ ಜನಾ ಹೋದಲ್ಲೆ-ಬಂದಲ್ಲೆ “ಏನವಾ ನಿಂದ ಡೇಟ ಯಾವಾಗ? ಮತ್ತ ಮುಂದಿನವಾರ ನಮ್ಮ ಮನ್ಯಾಗ ಸತ್ಯನಾರಯಣ ಪೂಜಾ ಅದ ನೀ ಒಳಗ ಇರತೀ ಹೌದಲ್ಲ” ಅಂತ ಕೇಳೊ ಹಂಗ ಆಗೇದ. ನಂಗಂತೂ ಈ ವಿಷಯದಾಗ ತಲಿಕೆಟ್ಟ ಋಷಿ ಪಂಚಮಿ ಉದ್ಯಾಪನಿ ಹಿಡಿಯೋದ ಒಂದ ಬಾಕಿ ಉಳದದ.
ಒಟ್ಟ ಒಂದ ಮಾತಿನಾಗ ಹೇಳ್ಬೇಕಂದರ ನಮ್ಮ ಮನ್ಯಾಗಿನ ರಿದ್ದಿ, ಮಡಿ, ಮೈಲಗಿ ಎಲ್ಲಾ ಕೆಂಡಸಂಪಿಗೆ ಒಳಗ ಏಕಾಕಾರ ಆದವು, ಮಂದಿ ಖರೇನ ನಾವ ಅತ್ತಿ,ಸೊಸಿ ನನ್ನ ಗಂಡಾ ಲೇಖನದಾಗ ಬರದಂಗ ಇದ್ದೇವಿ ಅಂತ ತಿಳ್ಕೊಂಡ ನಮ್ಮಿಬ್ಬರಿಗೂ ಕೌನ್ಸಿಲಿಂಗ ಮಾಡಿಸಿಗೋರಿ ಅಂತ ಕಮೆಂಟ ಬರದಾರ. ಅಲ್ಲಾ ಪಾಪ ನಮ್ಮತ್ತಿ ‘ಹತ್ತ ತಿಂಗಳ ಹೆತ್ತ ಮಗಾ’ ಅಂತ ನನ್ನ ಗಂಡ ಏನ ಬರದರು ತಮ್ಮ ಹೊಟ್ಯಾಗ ಹಾಕ್ಕೊಂಡ ಸುಮ್ಮನ ಕೂತಾರ, ಆದರ ನಾ ಯಾಕ ಸುಮ್ಮನ ಕೂಡಲಿರಿ. ಕಟಗೊಂಡ ಅನ್ನೋದ ಒಂದ ಬಿಟ್ಟರ ಬ್ಯಾರೆ ಏನ ಸಂಬಂಧದ ನಂಗ ಅವಂಗ?ಇಂವಾ ಮುಂದೂ ಹಿಂಗs ನಡಸಿದನಂದರ ಮೊದ್ಲ್ ಇವಂಗ ಕರಕೊಂಡ ಹೋಗಿ ಕೌನ್ಸಿಲಿಂಗ ಮಾಡಿಸಿಗೊಂಡ ಬರತೇನಿ ಇಷ್ಟ.
ಇನ್ನ ನಮ್ಮ ಮನಿಗೆ ಬರೋ ಮಂದಿ ಅಂತು ನಮ್ಮ ಮುಂದ ತಮ್ಮ ಮನಿ ಸುದ್ದಿ ಮಾತೋಡದ ಬಿಟ್ಟ ಬಿಟ್ಟಾರ “ಹೋಗಲಿ ಬಿಡ್ವಾ, ನಿನ್ನ ಗಂಡ ಎಲ್ಲರ ಕೆಂಡಸಂಪಿಗೆ ಒಳಗ ಬರದ ಗಿರದಾನ” ಅಂತ ಅಂತಾರ. ‘ಯಾವದರ ಸಸ್ತಾದಾಗ ಹೆಂಡ್ತಿ ಇದ್ದರ ನೋಡ’ ಅಂತ ಲೇಖನ ಬರದಾಗ ಅಂತೂ ಊರ ಮಂದಿ ಹೆಂಡಂದರ ಕಡೆ ಛಿ, ಥೂ ಅನಿಸಿಗೊಂಡಾ. ಅಲ್ಲಾ ಇವಂಗ್ಯಾಕ ಬೇಕರಿ ಹಿರೇತನ? ಸರ್ಕಾರದವರ ಹೆಂಡಂದರಿಗೆ ಪಗಾರರ ಲಾಗೂ ಮಾಡವಲ್ಲರಾಕ ದಿನಗೂಲಿನರ ಕೊಡವಲ್ಲರಾಕ ? ಎಲ್ಲಾ ಗಂಡಂದರ ಪರವಾಗಿ ಬರದ ಅವರ ಹೆಂಡಂದರ ಕಡೆ ಮಂಗಳಾರತಿ ಮಾಡಿಸಿಗೊಂಡ ಈಗ ಕೆಟ್ಟ ಆದಂವಾ ನನ್ನ ಗಂಡ ಒಬ್ಬನ ಹೌದಲ್ಲ?
ಇರಲಿ ಈಗ ಆಗಿದ್ದ ಆಗಿ ಹೋತ. ಹಂಗ ನಾ ನನ್ನ ಗಂಡನ ಬಗ್ಗೆ ಬರಕೋತ ಹೋದರ ನಿಮ್ಮ ಒಂದ ಕೆಂಡಸಂಪಿಗೆ ಸಾಲಂಗಿಲ್ಲಾ. ಇನ್ನ ಮುಂದರ ನೀವು ನನ್ನ ಗಂಡನ ಲೇಖನಾ ಪಬ್ಲಿಶ್ ಮಾಡಬೇಕಾರ ನೋಡಿ ವಿಚಾರ ಮಾಡಿ ಮಾಡರಿ. ನೀವು ಹೆಂಡ್ರು ಮಕ್ಕಳು ಇದ್ದೋರ ಇದ್ದೀರಿ, ಮತ್ತೊಬ್ಬರ ಸಂಸಾರದ ಬಗ್ಗೆನು ಸ್ವಲ್ಪ ವಿಚಾರ ಮಾಡ್ರಿ. ಹಂಗೇನರ ನಮ್ಮ ಸಂಸಾರದಾಗ ನಾಳೆ ಹೆಚ್ಚು ಕಡಿಮೆ ಆದರ ಅದಕ್ಕ ನೀವೂ ಜವಾಬ್ದಾರ ಆಗತಿರಿ ಮತ್ತ. ಮದ್ಲ ನಮ್ಮ ಮಂದ್ಯಾಗ ಒಂದನೇ ಸಂಬಂಧಕ್ಕ ಕನ್ಯಾ ಸಿಗವಲ್ವು ಮುಂದ ನನ್ನ ಗಂಡಗ ಎರಡನೇ ಸಂಬಂಧಕ್ಕ ಮೂಸ ನೋಡಲಿಕ್ಕೂ ಯಾರೂ ಸಿಗಂಗಿಲ್ಲಾ. ಹಿಂಗ ನಾ ಖಡಕ್ ಬರದಿದ್ದಕ್ಕ ತಪ್ಪ ತಿಳ್ಕೋಬ್ಯಾಡರಿ, ಅಲ್ಲಾ ಹಂಗ ನೀವು ತಪ್ಪ ತಿಳ್ಕೊಂಡರು ನಾ ಏನ ತಪ್ಪ ತಿಳ್ಕೊಳಂಗಿಲ್ಲ ಬಿಡ್ರಿ.
ಇಂತಿ ನಿಮ್ಮ ಕೆಂಡಸಂಪಿಗೆಯಿಂದ ನೊಂದಿರುವ
ಪ್ರೇರಣಾ ಆಡೂರ
( ಪ್ರಶಾಂತ ಆಡೂರವರ ಏಕಮೇವ ಮಡದಿ)”
ಹಕ್ಕ ಅವನೌನ ಇಕೇನಲೆ ನನ್ನ ಮರ್ಯಾದಿ ಕಳಿಲಿಕ್ಕೆ ನಿಂತಾಳಲಾ, ಈ ಲೇಖನಾ ಏನರ ಸಂಪಾದಕರ ಓದಿ ಬಿಟ್ಟರ ಮುಗದ ಹೋತ, ನಂಗ ಮುಂದ ಲೇಖನಾ ಬರಿಲಿಕ್ಕೆ ಕೊಡೋದ ದೂರ ಉಳಿತ ಕಮೆಂಟ ಬರಿಲಿಕ್ಕೂ ಬಿಡಂಗಿಲ್ಲಾ ಅಂತ ನಾ ಭಡಾ ಭಡಾ ಆ ಪತ್ರ ಹರದ ಹಾಕಿದೆ. ಅಲ್ಲಾ ಅದು ಈಗ ಇಕಿ ಕೆಂಡಸಂಪಿಗೆದ ಹುಟ್ಟಿದ ಹಬ್ಬದ ದಿವಸ ಹಿಂತಾದ ಬರದರ ಕೇಳ್ತಾರ.
ಇರಲಿ ಹಂಗ ಈಕಿ ಬರದಿದ್ದರಾಗ ತಪ್ಪೇನ ಇಲ್ಲ ಬಿಡರಿ, ಪಾಪ ಅಕಿ ತನ್ನ ಮನಸ್ಸಿನಾಗಿಂದ ಯಾರ ಮುಂದ ಹೇಳ್ಕೊಬೇಕು. ನಾ ಏನೊ ಲೇಖನಾ ಬರದ ನನ್ನ ಮನಸ್ಸ ಹಗರ ಮಾಡ್ಕೋತೇನಿ ಆದರ ಅಕಿಗೆ ಹಂಗ ಆಗಂಗಿಲ್ಲಲಾ, ಯಾಕಂದರ ಅಕಿಗೆ ಬರಿಲಿಕ್ಕೆ ಬರಂಗಿಲ್ಲಾ. ಏನೋ ಅಕಿ ಈ ಪತ್ರ ಬರದಿದ್ದ ದೊಡ್ಡದ.
ಇನ್ನ ಅಕಿ ನನ್ನ ಬಗ್ಗೆ ಏನ ಅನ್ನಲಿ, ಬರಿಲಿ ನಾ ತಲಿ ಕೆಡಸಿಗೊಳ್ಳಿಕ್ಕೆ ಹೋಗಂಗಿಲ್ಲಾ. ಆದರ ನನ್ನ ಕೆಲಸಾ ನಾ ಬಿಡಂಗಿಲ್ಲಾ.
ನಾ ಬರೇಯೋದ ಪ್ರೇರಣೆಗೆ, ಪ್ರೇರಣೆಯಿಂದ, ಪ್ರೇರಣೆಗಾಗಿ. ಹಂಗ ಏನರ ನಾಳೆ ಅಕಿ ಶಟಗೊಂಡ ಮನಿ ಬಿಟ್ಟ ಹೋದರ ಅದರ ಬಗ್ಗೆನೂ ಬರದ ಆಮ್ಯಾಲೆ ಬರಿಲಿಕ್ಕೆ ಹೊಸಾ ಪ್ರೇರಣಾನ ಹುಡಕತೇನಿ.
ಇರಲಿ, ಈ ನನ್ನ ಹೆಂಡತಿ ಪತ್ರದ ಗದ್ಲದಾಗ ನಿಮಗೇಲ್ಲಾ ಹೊಸ ವರ್ಷದ ಶುಭಾಷಯ ಹೇಳೋದ ಮರತಿದ್ದೆ.
ಕೆಂಡಸಂಪಿಗೆ ಒಳಗ ನನ್ನ ಲೇಖನಾ ಓದೊ ಎಲ್ಲಾರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು ಮತ್ತ ಕೆಂಡಸಂಪಿಗೆಗೆ ಆರನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು.