ಕೋಳಿಗೆ ‘ಮತ’…. ತತ್ತಿಗೆ ‘ಹಿತ’

ಕೋಳಿ ಮೊದಲೊ ತತ್ತಿ ಮೊದಲು ಅನ್ನೊ ಲೋಕಲ್ ಮೂಲಭೂತ ಸೃಷ್ಟಿಯ ಸಮಸ್ಯೆಗೆ ಮೊನ್ನೆ ಮೊನ್ನೆ ಅಂತರಾಷ್ಟ್ರೀಯ ವೈಜ್ಞಾನಿಕ ಪರಿಹಾರ ಸಿಕ್ಕತು ಅಂತ ಎಲ್ಲಾ ಕಡೆ ಸುದ್ದಿ ಬಂದಿತ್ತ. ಆ ಸುದ್ದಿ ನಮ್ಮ ಹುಬ್ಬಳ್ಳಿ ಕೋಳಿ ಪ್ಯಾಟಿನೂ ತಲಪತ. ಇಷ್ಟ ದಿವಸ ಕೋಳಿ ಮತ್ತ ತತ್ತಿ ನಡಕ ಹಗಲಗಲಾ ‘ನಾ ಮೊದ್ಲ ನೀ ಮೊದ್ಲ’ ಅಂತ ಜಗಳಾ ಆಗೆ ಆಗ್ತಿದ್ವು. ಹಂಗ ಈ ಜಗಳ ವಿಕೋಪಕ್ಕ ಹೋದಾಗೊಮ್ಮೆ ಇಬ್ಬರ ನಡಕ ಹೊಡದಾಟ ಆಗಿ ೧೪೪, ಕರ್ಫ್ಯೂ ಲಾಗೂ ಆಗೆ ಆಗತಿತ್ತ ಆ ಮಾತ ಬ್ಯಾರೆ.
ಆದರ ಮೊನ್ನೆ ಕೋಳಿ ಕಂಡರ ಆಗಲಾರದ ಡಾರ್ಲ ಝೆಲಿನಟಸ್ಕಿ ಅನ್ನೊ ಕೆನಡಾದ ವಿಜ್ಞಾನಿ ‘ಮೊಟ್ಟೆ’ನ ಮೊದಲ ಹುಟ್ಟಿದ್ದ ಕೋಳಿ ಅಲ್ಲಾ, ಈಗ ಇರೋ ಕೋಳಿ ಏನ ಅದ ಅಲಾ ಅದು ಕೋಳಿ ಹಂಗ ಇರೋ ಒಂದ ಹಕ್ಕಿಯ ತತ್ತಿ ಒಳಗ DNA ಪರಿವರ್ತನೆ ಆಗಿ ಹುಟ್ಟಿದ್ದ ಅಂತ ಹೇಳಿ ಬಿಟ್ಟಳು. ಏನಿಲ್ಲದ ನಮ್ಮ ಹುಬ್ಬಳ್ಳಿ ಕೋಳಿ ಪ್ಯಾಟಿ ಸೆನ್ಸಿಟಿವ್ ಏರಿಯಾ ಇನ್ನ ಹಿಂಗ ಐತಿಹಾಸಿಕ ತೀರ್ಪ ಕೋಳಿ ವಿರುದ್ಧ ಬಂದರ ಕೇಳ್ತಿರೇನ. ಇಡಿ ಕೋಳಿ ಪ್ಯಾಟಿ ಒಳಗ ವಾತಾವರಣ ಗರಮ್ ಆತ. ಪೋಲಿಸರ ಮುಂಜಾಗ್ರತ ಕ್ರಮ ಅಂತ ೧೪೪ ಹೇರಿದರು. ಅದರಾಗ ಅವತ್ತ ಹುಬ್ಬಳ್ಳ್ಯಾಗ ರಂಗ ಪಂಚಮಿ ಬ್ಯಾರೆ, ಮ್ಯಾಲೆ ಕರ್ನಾಟಕದಾಗ ಇಲೆಕ್ಷನ್ ಕಾವ ಒಂದ ಜೋರ ಇತ್ತ.
ಈ ಸುದ್ದಿ ಬರೋದ ತಡಾ ತತ್ತಿಗೊಳಿಗಂತೂ ಹಿಡದವರ ಇದ್ದಿದ್ದಿಲ್ಲಾ. ಓಕಳಿ ಒಳಗ ತತ್ತಿಗೊಳೇಲ್ಲಾ ಒಂದ ಕ್ವಾರ್ಟರ್ ಓಲ್ಡ ಮಂಕ್ ಹೊಡದ ಟೈಟ ಆಗಿ ತೂರಾಡಿದ್ದ ತೂರಾಡಿದ್ದ. ಇದನ್ನ ಕಂಡ ಕೋಳಿ ಹೆಂಗ ಸುಮ್ಮನ ಕೂಡತಾವ ? ಅವು ಒಂದ ಮಿಟಿಂಗ ಮಾಡಿ ಮೊನ್ನೆ ಬುಧವಾರ ಪ್ರೊಸೆಶನ್ ತೊಗೊಂಡ ತಹಶಿಲ್ದಾರರಿಗೆ
‘ನಮಗ ಆ ಒಟ್ಟೊವಾದ (ಕೆನಡಾದ) ವಿಜ್ಞಾನಿ ಹೇಳಿದ್ದ ಒಟ್ಟ ಮಂಜೂರ ಇಲ್ಲಾ, ಅಕಿನೂ ಒಂದ ಹೆಣ್ಣ ಆಗಿ ಹಿಂಗ ಕೋಳಿಗಳಿಗೆ ಅಪಮಾನ ಮಾಡಬಾರದಿತ್ತ ‘ ಅಂತ ಒಂದ ಮೆಮೊರೆಂಡಮ್ ಕೊಟ್ಟ ಬಂದವು.
ಇದ ಚಾನ್ಸ್ ಅಂತ ಪಾಲಿಟಿಕಲ್ ಪಾರ್ಟೀಸ್ ಆಖಾಡಾದಾಗ ಇಳದ ರಾಜಕೀಯ ಶುರು ಮಾಡೇ ಬಿಟ್ಟವು. ನಾನ್ ವೆಜ್ ಪಾರ್ಟಿ ಕೋಳಿಗೆ ಸಪೋರ್ಟ ಮಾಡಿದರ ವೆಜ್ ಪಾರ್ಟಿಗೊಳ (ಬರೇ ತತ್ತಿ ತಿನ್ನೋರ) ತತ್ತಿಗೆ ಜೈ ಅಂದವು. ನಮ್ಮ ಪಾರ್ಟಿ ಆರಿಸಿ ತಂದರ ನಾವ ಕೋಳಿನ ಮೊದ್ಲ ಹುಟ್ಟಿದ್ದ ಅಂತ ಗೆಜೆಟ್ ನೋಟಿಫಿಕೇಶನ್ ಮಾಡ್ತೇವಿ ಅಂತ ಒಂದ ಪಾರ್ಟಿ ಅಂದರ, ಇನ್ನೊಂದ ಪಾರ್ಟಿಯವರ ನಾವ ತತ್ತಿ ಸಸ್ಯಾಹಾರಿ ಅಂತ ಡಿಕ್ಲೇರ್ ಮಾಡ್ತೇವಿ ಅಂದರು. ಇನ್ನ ಒಂದಿಷ್ಟ ಪಾರ್ಟಿ ಟಿಕೇಟ ಸಿಗಲಾರದವರು ಇಂಡಿಪೆಂಡೆಂಟ್ ಇಲೆಕ್ಷನಗೆ ನಿಂತ ‘ತತ್ತಿ’, ‘ಕೋಳಿ’ನ್ನ ತಮ್ಮ ಚಿಹ್ನಾ ಮಾಡ್ಕೊಂಡ ಪಾಲಿಟಿಕಲ್ ಮೈಲೇಜ್ ತೊಗೊಳಿಕ್ಕೆ ರೆಡಿ ಆದರು. ಅದನ್ನ ನೋಡಿ ಬ್ಯಾರೆ ಪಾರ್ಟಿಯವರು ಹಿಂಗ ಕರ್ನಾಟಕದಾಗ ಇಲೇಕ್ಷನ್ ನಡದಾಗ ತತ್ತಿ ಮೊದ್ಲ ಅಂತ ಕೆನಡಾದವರ ಅನೌನ್ಸ ಮಾಡಿದ್ದ ‘ಚುನಾವಣಾ ನೀತಿ ಸಂಹಿತೆಯ’ ಉಲ್ಲಂಘನೆ, ಇದರಿಂದ ಚುನಾವಣೆ ಮ್ಯಾಲೆ ಪರಿಣಾಮ ಆಗ್ತದ ಅಂತ ಕಂಪ್ಲೇಂಟ ಕೊಟ್ಟರು.
ಇತ್ತಲಾಗ ಮೀಡಿಯಾದವರಿಗಂತೂ ಹಬ್ಬsನಾ ಹಬ್ಬ, ಇಲೇಕ್ಷನದ ಗದ್ಲ ಬ್ಯಾರೆ ಅದರಾಗ ಹಿಂತಾ chicken burning & egg boiling issue ಸಿಕ್ಕರ ಮುಗದ ಹೋತಲಾ. ಕೋಳಿ version, eggದ emotions ಎಲ್ಲಾ ಕವರೇಜ ಮಾಡಿ ಕೋಳಿಯಿಂದ ತತ್ತಿ ಬರೋದು, ತತ್ತಿ ಇಂದ ಕೋಳಿ ಬರೋದ ಎಲ್ಲಾ live telecast ಮಾಡಿ ಹುಂಜಕ್ಕ ಕರದ live debate ಶುರು ಮಾಡಿದರು. ಆದರ ಹುಂಜ ಮಾತ್ರ
‘ನಾವ ಬಂದಿದ್ದ ಅಂತು ತತ್ತಿಯಿಂದ, ಆ ತತ್ತಿ ಇಟ್ಟಿದ್ದ ಕೋಳಿ. ಹಿಂಗಾಗಿ ನಾವ್ಯಾಕ ಇವರಿಬ್ಬರ ನಡಕ ಸಿಕ್ಕೊಂಡ ಸಾಯಬೇಕು. ನಮಗ ಇಬ್ಬರು ಅಷ್ಟ’ ಅಂತ ಯಾರಿಗೂ ಸಪೋರ್ಟ ಮಾಡದ ತಟಸ್ಥ ಉಳದ ಬಿಟ್ಟವು.
ಕೆಲವೊಂದ ಪಾಲಿಟಿಸಿಯನ್ಸ್ ಬಂದ ಕೋಳಿಗೆ
“ಇಲ್ಲಾ, ಆ scientist ತನ್ನ research paper withdraw ಮಾಡ್ಕೋಳೊ ತನಕ ನೀವ ಸುಮ್ಮನ ಕೂಡಬಾರದು, ನೀವು agitation ಶುರು ಮಾಡ್ರಿ” ಅಂತ ತಮ್ಮ political gain ಸಂಬಂಧ ಏನೇನೋ ತಲ್ಯಾಗ ತುಂಬಿದರು. ಅವರ ಮಾತ ಕೇಳಿ ಒಂದಿಷ್ಟ ಕೋಳಿ ಮುಂಜಾನೆ ನಸೀಕಲೇ ಎದ್ದ ಕೂಗೋದ ಬಿಟ್ಟವು, ಮತ್ತೊಂದಿಷ್ಟ ಕೋಳಿ ತಾವ ಹಾಕಿದ್ದ ತತ್ತಿನ ತಾವ ಒಡದವು. ಕಡಿಕೆ ಈ ತತ್ತಿ ಸಂತತಿನ ಬೆಳಸಬಾರದ ತಡಿ ಅಂತ ಎಲ್ಲಾ ಕೋಳಿ ಕೂಡಿ ತತ್ತಿ ಕೊಡದನ್ನ indefinite ಆಗಿ stop ಮಾಡಿದವು. ಒಂದ ದಿವಸಾತ, ಎರಡ ದಿವಸಾತ ಮಾರ್ಕೇಟನಾಗ ತತ್ತಿ shortage ಬೀಳಲಿಕತ್ತವು. ಇದ್ದ ತತ್ತಿ ಕಿಮ್ಮತ್ತ ಉತ್ತತ್ತಿ ಮರದ ಗತೆ ಮ್ಯಾಲೆ ಏರಲಿಕತ್ತವು. ತತ್ತಿ ಬ್ಲ್ಯಾಕನಾಗ ಸೇಲ್ ಆಗಲಿಕತ್ವು. ಇವೇನ ತತ್ತಿ ಬಂಗಾರದ್ವೇನೋ ಅನ್ನೋ ಹಂಗ ಆತ.
ಅಷ್ಟರಾಗ single egg half fry ಇಲ್ಲದ ಬದುಕಲಿಕ್ಕೆ ಆಗಲಾರದವರು ಕೋಳಿಗೆ
“ಇನ್ನ ಮುಂದ ನೀವ ಬರೆ ಹುಂಜ ಆಗೋ ಹಂತಾ ತತ್ತಿ ಇಷ್ಟ ಇಡರಿ, ಹುಂಜಕ್ಕ ಅಂತೂ ತತ್ತಿ ಇಡಲಿಕ್ಕೆ ಬರಂಗಿಲ್ಲಾ ಅಂದರ ಮುಂದ ತತ್ತಿ ಸಂತತಿ ಕಡಿಮೆ ಆಗೇ ಆಗ್ತದ. ಅದನ್ನ ಬಿಟ್ಟ ನೀವು ಟೋಟಲ್ ತತ್ತಿ ಇಡೊದ ಬಿಟ್ಟರ ಹೆಂಗ ನಡಿಬೇಕು” ಅಂತ ತಮ್ಮ ಬ್ಯಾಳಿ fry ಮಾಡ್ಕೋಳಿಕ್ಕೆ ನೋಡಿದರು.
ಅಲ್ಲಾ, ಬರೇ ಹುಂಜ ಆಗೋ ತತ್ತಿ ಇಟ್ಟರ ಮುಂದ ಕೋಳಿ ಸಂತತಿನರ ಹೆಂಗ ಮುಂದವರಿತದ ಅಂತೇನಿ. ಏನ ಭೇಜಾ fryನೋ ಏನೋ?
ಆದರು ಇದ ಹಿಂಗಾದರ ಹೆಂಗ, ಸೃಷ್ಟಿಯ ಬ್ಯಾಲೆನ್ಸ್ ಬಿಗಡಾಯಿಸ್ತದ ಅಂತ ನಮ್ಮಂತಾ ಬುದ್ಧಿಜೀವಿಗಳಿಗೆ ಚಿಂತಿ ಹತ್ತಲಿಕತ್ತ. ಇತ್ತಲಾಗ ತತ್ತಿ ರೇಟ ಕೋಳಿ ರೇಟ ಒಂದ ಆದರು ಆಗಬಹುದು ಅಂತ ಮಚ್ಛಿ ಮಾರ್ಕೆಟನಾಗ ಮೀನಗೊಳ ಮಾತಾಡಕೊಳ್ಳಿಕತ್ವು. ಅದರಾಗ ಈ ಸ್ಟ್ರೈಕ ಹಿಂಗ ಮುಂದವರದರ ಕಡಿಕೆ ಕೋಳಿನೂ ಇಲ್ಲಾ ತತ್ತಿನೂ ಇಲ್ಲಾ ಅನ್ನೊಹಂಗ ಆಗಿ ಮೀನಕ್ಕ ಭಾರಿ ವ್ಯಾಲ್ಯು ಬರತದ ಅಂತ ಮೀನಗೊಳ celebrate ಮಾಡಲಿಕ್ಕೆ ಶುರು ಮಾಡಿದ್ವು. ಇನ್ನ ತತ್ತಿ ಇಲ್ಲಾಂದರ ಕೋಳಿ ಎಲ್ಲೆ, ಚಿಕನ್ ಎಲ್ಲೆ ಅಂತ ಮಟನಗೆ ಡಿಮಾಂಡ ಜಾಸ್ತಿ ಆಗಿ ಅದರ ರೇಟ ಮುಗಲ ಮುಟ್ಟಲಿಕತ್ತ, ಇತ್ತಲಾಗ ಈ ಕೋಳಿಗಳಿಗೂ ಕಿಮ್ಮತ್ತ ಇಲ್ಲದಂಗ ಆಗಿ ಚಿಕನ್ ರೇಟ ಬಿತ್ತ.
ಅಷ್ಟರಾಗ ಬಂತ ನೋಡ್ರಿ breaking news, ಜಾಡರ ಓಣ್ಯಾಗ ಹರತಾಳ ಮಾಡಲಿಕತ್ತಿದ್ದ ಹದಿನೆಂಟ ಕೋಳಿ ಒಮ್ಮಿಂದೊಮ್ಮಿಲೆ ಅಸ್ವಸ್ಥ ಆಗಿ ಅವನ್ನ ೧೦೮ರಾಗ ಹಾಕ್ಕೊಂಡ ಕೆ.ಎಮ್.ಸಿ ಗೆ ತೊಗೊಂಡ ಬಂದರಂತ. ಡಾಕ್ಟರ ಚೆಕ್ ಮಾಡಿ ನೋಡಿದ ಮ್ಯಾಲೆ ಗೊತ್ತಾತು ಆ ಕೋಳಿಗಳು ನಾವು ತತ್ತಿ ಇಡಂಗಿಲ್ಲಾ ಡೈರಕ್ಟ ಮರಿನ ಇಡತೇವಿ ಅಂತ ಹಟಾ ಮಾಡಲಿಕತ್ತದ್ದಕ್ಕ ಅವಕ್ಕೇಲ್ಲಾ constipation ಆಗಿ ತ್ರಾಸ ಆಗಿತ್ತಂತ. ಅದರಾಗ ಒಂದ ಎಂಟ ಕೋಳಿದ ಅಂತು ಸ್ಥಿತಿ ಅಗದಿ ಗಂಭೀರ ಆಗಿ, ಉಸಿರಾಡಸಲಿಕ್ಕೆ ಜಾಗ ಇಲ್ಲದಂಗ ಆಗಿ, ಕಡಿಕೆ ಡಾಕ್ಟರ ventilator ಹಚ್ಚಿ ಅಬಾರ್ಶನ್ ಮಾಡಿ ತತ್ತಿ ಹೊರಗ ತಗದರಂತ.
ಇದನ್ನೇಲ್ಲಾ ನೋಡಿ ಕಡಿಕೆ ಹುಂಜಗೊಳ ತಲಿಕೆಟ್ಟ, ಇವರಿಬ್ಬರು ಹಿಂಗ ಜಗಳಾಡಿದರ ನಮ್ಮ ಸಂತತಿನ ನಿರ್ವಂಶ ಆಗತದ ತಡಿ ಅಂತ ಎರಡು ಕಡೆದವರನ ಕರಸಿ
“ತತ್ತಿ ಮೊದ್ಲೊ ಕೋಳಿ ಮೊದ್ಲೊ ಅಂತ ನೀವ ಯಾಕ ತಲಿ ಕೆಡಸಿಗೋತಿರಿ. ನೀವು ಬಂದಿದ್ದು ತತ್ತಿ ಇಂದ ನೀವ ಇಡೋದ ತತ್ತಿನ. ಎಷ್ಟ ಅಂದರು ನೀವೇಲ್ಲಾ ಒಬ್ಬರಿಗೊಬ್ಬರು ಪೂರಕ. ನಿಮ್ಮನ್ನ ಬಿಟ್ಟ ಅವರಿಲ್ಲಾ, ಅವರನ ಬಿಟ್ಟ ನೀವಿಲ್ಲಾ. ಅದು ಸೃಷ್ಟಿ ನಿಯಮ. ನಾ ಮೊದ್ಲ ನೀ ಮೊದ್ಲ ಅನ್ನೋದ ದೇವರಿಗೆ ಬಿಟ್ಟ ವಿಷಯ. ಯಾರ ಮೊದ್ಲ ಬಂದರ ನಮಗೇನ ಆಗೋದದ, ಈ ಹುಲು ಮಾನವ ಯಾರು ತತ್ತಿನ ಮೊದ್ಲ ಅಂತ ಹೇಳಲಿಕ್ಕೆ? ಅವರೊಳಗ ಹೆಣ್ಣ ಮೊದಲೊ, ಗಂಡ ಮೊದಲೊ ಅನ್ನೋದ ಇನ್ನು ಕ್ಲಿಯರ್ ಇಲ್ಲಾ.
ಅದರಾಗ ಈ ರಾಜಕೀಯ ಮಂದಿಗೆ ಏನರ sensitive ವಿಷಯ ಸಿಕ್ಕರ ಸಾಕ, ನಮ್ಮನ್ನ ಒಂದ political ಮುದ್ದಾ ಮಾಡಿ use ತೊಗೊಂಡ ಬಕರಾ ಮಾಡ್ತಾರ. ಅವರದ policyನ ‘ಕೋಳಿಗೆ ಮತ – ತತ್ತಿಗೆ ಹಿತ’ ಇದ್ದಂಗ, ಎರಡು ಕಡೆ ಬಾಲಾ ಬಡಿತಾರ. ಅವಕಾಶ ಸಿಕ್ಕರ ತತ್ತಿನೂ ತಿಂತಾರ, ಕೋಳಿನೂ ತಿಂತಾರ” ಅಂತ ತಿಳಿಸಿ ಹೇಳಿ ತತ್ತಿಗೆ – ಕೋಳಿಗೆ ರಾಜಿ ಮಾಡಸಿದ್ವು.
ಅಲ್ಲಿಗೆ ಈ ಇಶ್ಯು ಮುಗಿತ. ಹಂಗ ಸದ್ಯೇಕ ಅಂತು ಕೋಳಿ ಪ್ಯಾಟ್ಯಾಗ ಪರಿಸ್ಥಿತಿ ನಾರ್ಮಲ ಅದ. ಕೋಳಿ ತಿನ್ನೋರು ಕೋಳಿ ತೊಗಂಡ ಹೊಂಟಾರ ತತ್ತಿ ತಿನ್ನೋರ ತತ್ತಿ ಎತಗೊಂಡ ಹೊಂಟಾರ. ಮತ್ತ ಯಾವಗ ಈ ತತ್ತಿ ಮೊದ್ಲೊ ಕೋಳಿ ಮೊದ್ಲೊ ಇಶ್ಯು ಶುರು ಆಗ್ತದೊ ಮತ್ತ ಯಾವಾಗ politicians ತಮ್ಮ ಬ್ಯಾಳಿ ಬೇಯಸಿಗೊಳ್ಳಿಕ್ಕೆ ಇಬ್ಬರ ನಡಕ ಬೆಂಕಿ ಹಚ್ಚತಾರ ಹೇಳಲಿಕ್ಕೆ ಬರಂಗಿಲ್ಲಾ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ