ಗ್ರಹಣ ಬಿಡ್ತ ಗ್ರಹಣ…

ಇದ ಇವತ್ತ ಮುಂಜಾನಿ ಮಾತ, ನನಗ ಗಡದ್ದ ನಿದ್ದಿ ಹತ್ತಿತ್ತ ಒಮ್ಮಿಂದೊಮ್ಮಿಲೆ ಯಾರೋ ಕಿವ್ಯಾಗ ’ಗ್ರಹಣ ಬಿಡ್ತ ಗ್ರಹಣ’ ಅಂತ ಒದರಿದಂಗ ಆತ. ನಂಗ ಅದ ಕನಸೋ ಇಲ್ಲಾ ನನಸೊ ಅನ್ನೋದ ಗೊತ್ತಾಗಲಿಲ್ಲಾ, ಅದರಾಗ ರಾತ್ರಿ ಬ್ಯಾರೆ ಯರಕೊಂಡ ಮಲ್ಕೊಂಡಿದ್ದೆ…ಅಲ್ಲಾ, ಅದೇನಾಗಿತ್ತಂದರ ನಿನ್ನೆ ಗ್ರಹಣ ಇತ್ತಲಾ ಹಿಂಗಾಗಿ ಗ್ರಹಣ ಹಿಡದ ಮ್ಯಾಲೆ ಒಮ್ಮೆ ಸ್ನಾನ ಮಾಡಬೇಕಂತ ನಮ್ಮವ್ವ ಜಬರದಸ್ತಿ ಸ್ನಾನ ಮಾಡಿಸಿದ್ಲು. ಹಿಂಗಾಗಿ ನಿದ್ದಿಗಣ್ಣಾಗ ’ಗ್ರಹಣ ಬಿಡ್ತ ಗ್ರಹಣ’ ಅಂದಿದ್ದ ಯಾರ ಅನ್ನೋದ ಗೊತ್ತಾಗಲಿಲ್ಲಾ.

ಅಷ್ಟರಾಗ ನಮ್ಮವ್ವ ಮತ್ತೊಮ್ಮೆ ಅಡಗಿ ಮನ್ಯಾಗಿಂದ ಗ್ರಹಣ ಬಿಟ್ಟದ ಏಳಪಾ ರಾಜಾ, ಏಂಟಾತ ಅಂತ ಒದರಿದ್ಲು.

ನಾ ನಮ್ಮವ್ವಗ

“ಯಾಕ ಪ್ರೇರಣಾ ತವರಮನಿಗೆ ಹೋದ್ಲಿನ” ಅಂದೆ.

“ಅಯ್ಯ..ಅಕ್ಯಾಕ ತವರಮನಿಗೆ ಹೋಗ್ತಾಳ..ಬರೋದ ಮೊನ್ನೆ ಬಂದಾಳ” ಅಂತ ನಮ್ಮವ್ವ ಅಂದ್ಲು.

“ಅಲ್ಲವಾ..ಗ್ರಹಣ ಬಿಡ್ತ ಅಂದೇಲಾ, ಅದಕ್ಕ ಹಂಗರ ಅಕಿ ಏನರ ಮತ್ತ ತವರ ಮನಿಗೆ ಹೋದ್ಲಿನ ಅಂತ ಕೇಳಿದೆ” ಅಂತ ಅನ್ಕೋತ ನಾ ಹಾಸಗಿ ಬಿಟ್ಟ ಬಂದೆ.

“ಏ, ಸವಕಾಶ ಮಾತಾಡ ಮಗನ, ಅಕಿ ಬಚ್ಚಲದಾಗಿದ್ದರು ಕಿವಿ ಅಡಗಿ ಮನ್ಯಾಗ ಇರ್ತಾವ, ಅಕಿಗೆ ನೀ ಏನರ ಗ್ರಹಣಾ ಅಂತ ಅಂದಿದ್ದ ಗೊತ್ತಾದರ ನೋಡ ಆಮ್ಯಾಲೆ ನಿಂಗ ಜೀವನ ಪರ್ಯಂತ ಖಗ್ರಾಸ ಚಂದ್ರ ಗ್ರಹಣಾ ಹಿಡಿಸೆ ಬಿಡ್ತಾಳ” ಅಂತ ನಮ್ಮವ್ವ ಶುರು ಮಾಡಿದ್ಲು. ಅಕಿ ಖಗ್ರಾಸ ಚಂದ್ರ ಗ್ರಹಣಾ ಅಂತ ಯಾಕ ಅಂದ್ಲು ಅಂದರ ಅದ ರಾತ್ರಿ ಇಷ್ಟ ಹಿಡಿಯೋದ.

ಅಲ್ಲಾ ಹಂಗ ನಮ್ಮವ್ವ ಹೇಳೋದ ಖರೆ ಬಿಡ್ರಿ. ನಂಗಂತೂ ಗ್ರಹಣ ಹಿಡದ ಲಗಬಗ ಹದಿನೆಂಟ ವರ್ಷ ಆತ. ಹಂಗ ಗ್ರಹಣ ಸ್ಪರ್ಷ ಸಮಯ ಅಂದರ ಕನ್ಯಾ ನೋಡಿದ್ದ ಡೇಟ ಹಿಡದರ ಇಪ್ಪತ್ತ ವರ್ಷ ಆತ ಅನ್ನರಿ. ಇನ್ನ ಈ ಗ್ರಹಣಕ್ಕ ಮೋಕ್ಷ ಅಂತೂ ಈ ಜನ್ಮದಾಗ ಸಿಗಂಗಿಲ್ಲಾ. ಈಗೇನಿದ್ದರು ’ನಗು.. ನಗುತಾ… ನಲಿ..ನಲಿ…..ಏನೇ ಆಗಲಿ…’ ಅಂತ ಸಂಸಾರ ದುಗಿಸ್ಕೋತ ಹೋಗೋದ.

ಇರಲಿ ವಾಪಸ ಸೈಂಟಿಫಿಕ್ ಗ್ರಹಣಕ್ಕ ಬರೋಣ.

ಒಂದ ವಾರದಿಂದ ನಮ್ಮವ್ವ ಮುಂದಿನ ವಾರ ಖಗ್ರಾಸ ಚಂದ್ರ ಗ್ರಹಣ ಅಂತ ಮನಿ ಮಂದಿಗೇಲ್ಲಾ ದಿವಸಾ ರಿಮೈಂಡರ ಕೊಡ್ಕೋತ ಇದ್ಲು. ರಾತ್ರಿ ಹನ್ನೊಂದು ಐವತ್ತನಾಲ್ಕಕ್ಕ ಹಿಡಿತದ, ನಸಿಕಲೇ ಮೂರು ನಲವತ್ತರೊಂಬತ್ತಕ್ಕ ಬಿಡ್ತದ, ಊಟಾ ಮಾಡೋರ ಮಧ್ಯಾಹ್ನ ಹನ್ನೇರಡು ಹದಿನೈದರೊಳಗ ಮಾಡಬೇಕು, ಆಮ್ಯಾಲೆ ವೇದ ಶುರು ಆಗ್ತದ. ಹಂಗ ಸಣ್ಣೋರು, ವಯಸ್ಸಾದವರು, ಬಸರಿದ್ದವರು ಸಂಜಿ ತನಕ ಊಟಾ ಮಾಡಬಹುದು ಅಂತ ಶ್ಲೋಕಾ ಹೇಳಿದಂಗ ಹೇಳೋಕಿ.

ನಮ್ಮಪ್ಪಂತೂ ಇಕಿದ ಕೇಳಿ ಕೇಳಿ “ಏ ಎಷ್ಟ ಸರತೆ ಹೇಳ್ತಿ ಹೇಳಿದ್ದ ಹೇಳಿದ್ದ…ಹಿಂತಾ ಗ್ರಹಣಾ ಏಷ್ಟ ನೋಡೇನಿ ಸುಮ್ಮನ ಕೂಡ” ಅಂತ ಬೈಯೊಂವಾ.

“ಏ, ನಿಮಗ ವಯಸ್ಸಾಗೇದ, ನಿಮಗ ಗ್ರಹಣ ಅಪ್ಲಿಕೇಬಲ್ ಆಗಂಗಿಲ್ಲಾ….ನೀವು ಯಾವಾಗ ಬೇಕ ಆವಾಗ ಊಟಾ ಮಾಡಬಹುದು ತೊಗೋರಿ, ಹಂಗ್ಯಾಕ ಸಿಟ್ಟಿಗೇಳ್ತೀರಿ” ಅಂತ ನಮ್ಮವ್ವ ಅನ್ನೋಕಿ.

ನನ್ನ ಮಗಾ ನಮ್ಮವ್ವ ಹೇಳೋದನ್ನ ಬಾಯಿತಗದ ಕೇಳಿ as if she is speaking french and greek, ತನಗೇನ ಸಂಬಂಧ ಇಲ್ಲಾ ಅನ್ನೋರಗತೆ ಇದ್ದಾ.
ಇನ್ನ ನಾ ವಾರದಾಗ ಮೂರ ಸರತೆ ಹೊರಗ ತಿಂದ ಉಂಡ ಬರೊಂವಾ, ಹಿಂಗಾಗಿ ನಾ ನಮ್ಮವ್ವಗ

“ಆತ ತೊಗೊ ನಂಗೇನ ಸಂಬಂದಿಲ್ಲಾ, ನಾ ಅವತ್ತ ಮನ್ಯಾಗ ಊಟಾನ ಮಾಡಂಗೇಲಾ” ಅಂದೆ. ನಮ್ಮವ್ವಗ ತಲಿ ಕೆಟ್ಟತ

“ಏ,ಖೋಡಿ….ಮನ್ಯಾಗಿಷ್ಟ ಅಲ್ಲಾ..ನೀ ಹೊರಗೊ ಏನೂ ತಿನ್ನಂಗಿಲ್ಲಾ, ಕುಡಿಯಂಗಿಲ್ಲಾ….” ಅಂತ ನಂಗ ಶುರು ಮಾಡಿದ್ಲು…ಅಷ್ಟರಾಗ ಅಕಿಗೆ ನನ್ನ ಮಗಳ ಕಂಡ್ಲು

“ಏ…..ಬೋಕಾಣಗಿತ್ತಿ ….ನೀ ದಿನಕ್ಕ ಹತ್ತ ಸರತೆ ಮೇಯ್ಕೋತ ಅಡ್ಡಾಡಂಗಿಲ್ಲಾ. ಮಧ್ಯಾಹ್ನ ಸಾಲಿ ಬಿಟ್ಟ ಬಂದ ಮ್ಯಾಲೆ ಒಮ್ಮೆ ತಿಂದರ ಮುಂದ ಮರದಿವಸತನಕಾ ಏನೂ ಮುಟ್ಟಂಗಿಲ್ಲಾ..” ಅಂತ ಪಾಪ ಆ ಕೂಸಿಗೆ ದಮ್ಮ ಕೊಟ್ಟಳು.

ಇಷ್ಟೇಲ್ಲಾ ತನ್ನ ಕಣ್ಣ ಮುಂದ ನಡದದ್ದನ್ನ ನೋಡಿನೂ ಸುಮ್ಮನ ಕೂಡಬೇಕಿಲ್ಲ ನನ್ನ ಹೆಂಡತಿ, ದೊಡ್ದಿಸ್ತನಾ ಮಾಡಿ

“ಅತ್ಯಾ..ನಾನರಿ..ನಾ ಯಾವಾಗ ಊಟಾ ಮಾಡ್ಬೇಕು?” ಅಂತ ಕೇಳಿ ಬಿಟ್ಟಳು.

ತೊಗೊ ನಮ್ಮವ್ವಗ ಬಿ.ಪಿ. ಇನ್ನೂ ಏರತ, ಅಕಿ ನನ್ನ ಮಾರಿ ನೋಡ್ಕೋತ

“ಯಾಕ ನೀ ಮತ್ತೇನರ ಬಸರಿದ್ದಿ ಏನ್? ಇಲ್ಲ ಹೌದಲ್ಲ? ಹಂಗರ ಹನ್ನೇರಡ ಗಂಟೆ ಒಳಗ ಊಟಾ ಮಾಡ..ಅದರಾಗ ಈ ಸರತೆ ಗ್ರಹಣ ನಿನ್ನ ರಾಶಿ ಮ್ಯಾಲೆ ಬಂದದ…ನಿನಗ ಅಶುಭ ಫಲಾ ಬ್ಯಾರೆ ಅದ..ನೀ ಅಂತೂ ಅಗದಿ ತಪ್ಪಲಾರದಂಗ ಗ್ರಹಣಾ ಪಾಲಸಬೇಕು” ಅಂತ ಆರ್ಡರ್ ಮಾಡಿದ್ಲು.

ಅಲ್ಲಾ, ನಮ್ಮವ್ವಾ ನನ್ನ ಹೆಂಡ್ತಿಗೆ ಬಸಿರಿದ್ದಿ ಏನ್ ಅಂತ ಕೇಳ್ತಾಳ, ಅಕಿದ ನೋಡಿದರ ಆಪರೇಶನ್ ಮಾಡಿಸಿಸಿ ಹತ್ತ ವರ್ಷ ಆತು…ಅಲ್ಲಾ ಹಂಗ ಈಗಿನ ಕಾಲದಾಗ ಯಾ ಆಪರೇಶನದ ಏನ್ ಗ್ಯಾರಂಟೀ ಬಿಡ್ರಿ, ಬೈ ಪಾಸ್ ತಡಿಯಂಗಿಲ್ಲಾ ಇನ್ನ ಇದೇಲ್ಲಿದ…ಹಿಂಗಾಗಿ ನಂಗೂ ಒಂದ ಸರತೆ ಡೌಟ ಬಂದ ನನ್ನ ಹೆಂಡ್ತಿ ಮಾರಿ ನೋಡಿ ಹುಬ್ಬ ಏರಿಸಿದೆ, ಅಕಿ …ಹೋಗ್ರಿ..ಅಂತ ಮಾರಿ ಕಿವಚಿದ್ಲು…..ಇರಲಿ…ವಳತ ಅನ್ರಿ…

ಇನ್ನ ನಂಗ ನನ್ನ ಹೆಂಡತಿಗೆ ಈ ಗ್ರಹಣದಾಗ ಅಶುಭ ಫಲಾ ಅಂದ ಕೂಡ್ಲೆ ನಂಬಲಿಕ್ಕೆ ಆಗಲಿಲ್ಲಾ. ಅಲ್ಲಾ ನಾ ಖರೆ ಬರದರು ಓದ್ತೀರಿ, ಸುಳ್ಳ ಬರದರು ಓದ್ತೀರಿ. ಆದರ ನಾ ಖರೇ ಹೇಳ್ತೇನಿ. ನಾ ನನ್ನ ಜೀವನದಾಗ ಮದುವಿ ಆದಮ್ಯಾಲೆ ಮುವತ್ತ ಮುವತ್ತೈದ ಗ್ರಹಣಾ ನೋಡೇನಿ ಹಂತಾದರಾಗ ನನ್ನ ಹೆಂಡತಿಗೆ ಅಶುಭ ಫಲಾ ಅಂತ ಬಂದಿದ್ದ ಇದ ಮೊದ್ಲನೇ ಗ್ರಹಣ. ನಾ ಮತ್ತೊಮ್ಮೆ ನಮ್ಮವ್ವನ ಬಾಯಿಲೇ ’ಪ್ರೇರಣಾಗ ಅಶುಭ ಫಲಾ’ ಅಂತ ಕೇಳಿಸ್ಕೊಂಡ ಕಿವಿ ತಂಪ ಮಾಡ್ಕೊಳೊಣ ಅಂತ

“ಅಯ್ಯ ಪಾಪ ….ಅಕಿಗೆ ಹೆಂಗ ಅಶುಭ ಫಲಾ ಬಂತ ನಮ್ಮವ್ವಾ..ನೀ ಎಲ್ಲರ ರಾಶಿ ತಪ್ಪ ನೋಡಿ ಏನ” ಅಂತ ಕೆದಕಿ ಕೇಳಿದೆ.

“ಏ, ನಂಗ ಅಷ್ಟ ತಿಳಿಯಂಗಿಲ್ಲೇನೋ? ಮಿಥುನ, ತುಲಾ, ಮಕರ, ಕುಂಭರಾಶಿಯವರಿಗೇಲ್ಲಾ ಅಶುಭ ಫಲಾ ಅದ ನೋಡಿಲ್ಲೇ” ಅಂತ ಪಂಚಾಂಗ ನನ್ನ ಮಾರಿಗೆ ಹಿಡದ್ಲು.

ನಾ ಅಷ್ಟಕ್ಕ ಸುಮ್ಮನ ಕೂಡಬೇಕಿಲ್ಲೊ, ಮತ್ತ ಕಿಡ್ಡಿ ಮಾಡಲಿಕ್ಕೆ ನನ್ನ ಹೆಂಡತಿಗೆ “ಏ ನಿಂದ ರಾಶಿ ಯಾವದ” ಅಂತ ಕೇಳಿದೆ ಅಕಿ “ತುಲಾ” ಅಂತ ಕೆಟ್ಟ ಮಾರಿ ಮಾಡ್ಕೊಂಡ ಅಂದ್ಲು. ಅಲ್ಲಾ ಹಂಗ ನಾ ಈ ರಾಶಿ,ನಕ್ಷತ್ರ ಎಲ್ಲಾ ತಲಿಗೆಡಸಿಕೊಳ್ಳೊ ಮನಷ್ಯಾನ ಅಲ್ಲಾ. ಲಗ್ನ ಆಗಬೇಕಾರ ಜೆಂಡರ್- ಗೋತ್ರ ಎರಡ ಬಿಟ್ಟರ ಸಾಕ ಅಂತ ಹೇಳಿ ಲಗ್ನಾ ಮಾಡ್ಕೊಂಡಿದ್ದೆ.

ಇನ್ನ ಅಕಿದು ತುಲಾ ರಾಶಿ, ಗ್ರಹಣದಾಗ ಅಶುಭ ಫಲಾ ಅಂತ ಕನಫರ್ಮ ಆತ.

ಮುಂದ ನನ್ನ ರಾಶಿ ಫಲಾ ಏನ ಅಂತ ನಮ್ಮವ್ವಗ ಕೇಳಿದೆ.

” ಅಯ್ಯ..ಹುಚ್ಚಾ..ಅದನ್ನೇನ ಕೇಳೊದ, ಅಷ್ಟು ತಿಳಿಯಂಗಿಲ್ಲೇನ..ಹೆಂಡ್ತಿಗೆ ಅಶುಭ ಫಲಾ ಇದ್ದ ಮ್ಯಾಲೆ ಗಂಡಗ ಶುಭ ಫಲಾ ಇದ್ದ ಇರ್ತದ…ನಿಂದ ಮೇಷ ರಾಶಿ, ಶುಭ ಫಲಾ ಅಂತ ಅಗದಿ capital lettersನಾಗ ಬರದಾರ ತೊಗೊ ಚೈನಿ ಹೊಡಿ” ಅಂದ್ಲು.

ನಂಗ ಅನಸ್ತ ನನ್ನ ಹೆಂಡ್ತಿಗೆ ಅಶುಭ ಫಲಾ ಬಂದಿದ್ದಕ್ಕ ಏಲ್ಲೋ ನಮ್ಮವ್ವಗೂ ಭಾಳ ಖುಶಿ ಆಗೇದ ಅಂತ ಆದರ ನಾ ಅಂದ ಕೆಟ್ಟಾಗಲಿಕ್ಕೆ ಹೋಗಲಿಲ್ಲಾ.

ಅಷ್ಟರಾಗ ನಮ್ಮವ್ವಾ ನನ್ನ ಹೆಂಡತಿಗೆ ಅಶುಭ ಫಲಾ ಇದ್ದೋರ ಏನೇನ ಮಾಡ್ಬೇಕು, ಯಾವ ಯಾವ ಗುಡಿಗೆ ಹೋಗಬೇಕು, ಎಷ್ಟೇಷ್ಟ ಎಣ್ಣಿ, ದಕ್ಷೀಣಿ ಹಾಕಬೇಕು ಎಲ್ಲಾ ಡಿಟೇಲ್ಸ್ ಹೇಳಲಿಕತ್ತಿದ್ಲು. ಮತ್ತ ಅದರಾಗ ನನ್ನ ನಡಕ ಜಗ್ಗಿ “ಅಲ್ಲೇ ನರಸಿಂಹದೇವರ ಗುಡ್ಯಾಗ ರವಿ ಆಚಾರ್ಯರ ರಾತ್ರಿ ಹೋಮಾ ಮಾಡೋರ ಇದ್ದಾರ ನೀವಿಬ್ಬರು ದಂಪತ್ ಹೋಗಿ ಒಂದ ಐದನೂರ ರೂಪಾಯಿ ಕೊಟ್ಟ ನಮಸ್ಕಾರ ಮಾಡಿ ಬರ್ರಿ” ಅಂದ್ಲು.

ಅಲ್ಲಾ ಹಂಗ ಪ್ರತಿ ಸರತೆ ಗ್ರಹಣದಾಗ ನನಗ ಅಶುಭ ಫಲಾ ಇದ್ದಾಗ ಪಾಪ ನನ್ನ ಹೆಂಡತಿ ಎಷ್ಟ ಸಂಕಲ್ಪ ಮಾಡಸ್ತಿದ್ಲು, ಗುಡಿ ಗುಂಡಾರ ಅಡ್ಡಾಡತಿದ್ದಳು ಇನ್ನ ನಾ ಅಕಿ ಸಂಬಂಧ ಇಷ್ಟೂ ಮಾಡಲಿಲ್ಲಾ ಅಂದರ ಹೆಂಗ ಅಂತ ನಿನ್ನೆ ರಾತ್ರಿ ಒಂದ ಗಂಟೆ ತನಕ ಹೋಮದಾಗ ಕೂತ ಬಂದೇನಿ.

ಇರಲಿ ಈಗ ಗ್ರಹಣ ಮುಗದದ, ಅದೇನ ಶುಭ ಫಲಾ ಅಂತ ಕಾಯಲಿಕತ್ತೇನಿ…ಅಲ್ಲಾ ಹಂಗ ನೀವ ಇದ ಓದಿದ್ದನ್ನ ಲೈಕ್ ಮಾಡಿ ನಾಲ್ಕ ಮಂದಿ ಜೊತಿ ಹಂಚಗೊಂಡರ ನನಗ ಅದ ಶುಭ ಫಲಾನ ಮತ್ತ.

ಇನ್ನ ನನ್ನ ಹೆಂಡತಿಗೆ ಇದ್ದ ಅಶುಭ ಫಲಾ ಏನ ಅಂಬೋದ ನಿಮಗೇಲ್ಲಾ ಗೊತ್ತಾಗಿರಬೇಕು. ಅಲ್ಲಾ, ಹಂಗ ಇರೊ ಒಬ್ಬ ಹೆಂಡತಿ ಬಗ್ಗೆ ಹಿಂಗ ಪೇಪರನಾಗ ಬರದರ ಪಾಪ ಅಕಿಗೆ ಅದ ಅಶುಭ ಫಲಾನ ಅಲಾ ಮತ್ತ.

ಒಂದ ಸರತೆ ನಿಮ್ಮ ರಾಶಿಗೇ ಇವತ್ತ ಯಾ ಫಲಾ ಅದ ಅಂತ ನೋಡಿ ಬಿಡ್ರಿ…

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ